ಶ್ರೀಶ್ರೀಧರಾನುಗ್ರಹಮ್ ವೃತ್ತಾಷ್ಟಕ
ಶ್ರೀಶ್ರೀಧರಾನುಗ್ರಹಮ್ ವೃತ್ತಾಷ್ಟಕ
ರಾಮಾರಾಮವಿರಾಮ ನಾಮ ಬಲದಿಂ ಸಾದ್ಯಂತ ರೋಮಾಂಚನಂ |
ರಮ್ಯಾಧಿಕ್ಯ ವಿಶಾಲ ಭಾವ ವಲಯಂ ಸಾದೃಶ್ಯರಾಕಾಶಕಂ |
ನಾಮಂ ಶ್ರೀಧರ ಭಕ್ತರಂ ಪೆÇರೆಯುವಲ್ ಸಂಜೀವಿನೀ ಮಂತ್ರದೊಲ್ |
ಪ್ರೇಮಾಸಕ್ತಿಗಳಿಂದ ನಂಬಿ ಜಪಿಸಲ್ ಶ್ರೀಶ್ರೀಧರಾನುಗ್ರಹಮ್ ||1||
ದತ್ತಾಲಂಬನ ನಿತ್ಯವೂ ನಿರತದೊಳ್ ತಾ ಶ್ರೀಧರಸ್ವಾಮಿಯಂ |
ಸತ್ಯಾನಂದದೊಳಾಗಿ ನೆಚ್ಚಿ ನಡೆಯಲ್ ವಿಶ್ವಾಸದಿಂ ಗೆಲ್ದಪರ್ |
ಮಿಥ್ಯಾವಾದವಿದೆಂದು ನಕ್ಕು ನುಡಿಯಲ್ ಪಾಠಂಗಳಂತಪ್ಪುದು |
ಚ್ಯುತ್ಯಾಬಾಧಿತವಾಗಿ ಗೆಲ್ವ ಹದನಂ ಶ್ರೀಶ್ರೀಧರಾನುಗ್ರಹಮ್ ||2||
ತೀರ್ಥಸ್ನಾನದ ಪುಣ್ಯವೀ ವರದಹಳ್ಳೀ ಶ್ರೀಧರಸ್ವಾಮಿಯಿಂ |
ಸಾರ್ಥಕ್ಯಂ ದೊರೆತಂತೆ ಮತ್ತೆ ಬದುಕೊಳ್ ಗೆಲ್ವಾಸೆಯಂ ಕಾಣುತಂ |
ಕರ್ತವ್ಯಂಗಳ ತೋರಿ ಮುಂದೆ ನಡೆಸಲ್ ಶಾಂತತ್ವದೊಳ್ ಬೋಧೆಯಿಂ |
ಸತ್ಯಾತ್ಮಂಗಳ ಮೋಡಿ ಮಾಟವಡಗಲ್ ಶ್ರೀಶ್ರೀಧರಾನುಗ್ರಹಮ್ ||3||
ಸೋಪಾನಂಗಳನೇರಿ ಮೇಲೆ ನಡೆವಾಗಲ್ಲೆಲ್ಲ ಶುದ್ಧಾತ್ಮದಿಂ |
ಕೋಪಾಟೋಪಗಳನ್ನು ಮೆಟ್ಟಿತೆನುವಾಗಾನಂದವಾಂತರ್ಯದೊಳ್ |
ಪಾಪಾಶಾಂತಿಯು ನಷ್ಟವಾಗಿ ಗುರುವಿಂ ಧನ್ಯಾತ್ಮಭಾವಂಗಳಿಂ |
ಕಾಪಾಡೆನ್ನುತಲೀ ಸಮಾಧಿಗೆರಗಲ್ ಶ್ರೀಶ್ರೀಧರಾನುಗ್ರಹಮ್ ||4||
- ಶಾರ್ದೂಲವಿಕ್ರೀಡಿತ ವೃತ್ತ
ಗುರುವಂ ಶ್ರೀಧರ ಪಾದುಕಾ ದರುಶನಂ ಸದ್ಭಕ್ತಿ ಮಾರ್ಗಂಗಳಿಂ |
ಕರವಂ ಜೋಡಿಸಿ ಬಾಗಿ ತನ್ನ ತನವಂ ದತ್ತಾರ್ಪಣಂ ಸೇವೆಗೆಂ |
ದರಿತಾಚಾರದೊಳೆಲ್ಲ ಶುದ್ಧನಿಜದಿಂ ವಿಶ್ವಾಸವಿಟ್ಟಿರ್ದೊಡಂ |
ತ್ವರೆಯಿಂದಾಪುದು ರಾಮದಾಸ ಕೃಪೆಯಿಂ ಶ್ರೀಶ್ರೀಧರಾನುಗ್ರಹಮ್ ||5||
ಜಗವಂ ಪಾಲಿಪ ನಿತ್ಯಸದ್ಗುರುವರಂ ಕಾರುಣ್ಯದಿಂದೆಲ್ಲರಂ |
ನಗೆಯಂ ಬೀರುತ ಶಾಂತರೂಪ ತಳೆದು ಪ್ರತ್ಯಕ್ಷನಾದಂದದೊಲ್ |
ಮಿಗೆ ಸಂದರ್ಶನ ಭಾಗ್ಯ ಸಂಭವಿಸಿ ಪಾಪಾತ್ಮಂಗಳಂ ಮೋಕ್ಷವಂ |
ಸಿಗಲೆಂಬಾಸೆಗೆ ಪಾದುಕಾ ಕೊಡುಗೆಯಿಂ ಶ್ರೀಶ್ರೀಧರಾನುಗ್ರಹಮ್ ||6||
ಶರಣೆಂದೆನ್ನುವ ಭಕ್ತಿಯಿಂ ಭಜನೆಯಿಂ ವದ್ದಳ್ಳಿಯೊಳ್ ಮಿಂದರೆ |
ಜ್ವರವೆಂದೆನ್ನುವ ಭೀತಿ ತೀರ್ಥ ಚಿಮುಕಲ್ ಮೈಯಿಂದ ಜಾರುತ್ತಲೇ |
ಸ್ಮರಣೆ ಶ್ರೀಧರ ನಾಮವಂ ಬಿಡದಲೇ ನೆಚ್ಚಿರ್ದರಲ್ಲಾಗಲೇ |
ಭರದೊಳ್ ಸಂಕಟ ನಾಶವಂ ಕರುಣಿಸಲ್ ಶ್ರೀಶ್ರೀಧರಾನುಗ್ರಹಮ್ ||7||
ನಡೆದಲ್ಲೆಲ್ಲ ಸಮಸ್ತ ಶೋಕಶಮನಂ ಮಾತಾಡೆ ಸಂತೋಷವಂ |
ಬಿಡದಂತೆಲ್ಲರ ನೋವ ಗೋಳುಗಳ ತಾಂ ಕಂಡಲ್ಲಿ0iÉುೀ ತೀರ್ಥದೊಳ್ |
ಸುಡುತಾಗಂತವರನ್ನು ಮತ್ತೆ ದಯದಿಂ ಮೇಲೆತ್ತಿ ಸಂಪ್ರೀತಿಯಿಂ |
ತಡೆಯಂ ನೀಗಿಸಿ ದಾರಿ ತೋರಿ ನಡೆಸಲ್ ಶ್ರೀಶ್ರೀಧರಾನುಗ್ರಹಮ್ ||8||
- ಮತ್ತೇಭವಿಕ್ರೀಡಿತ ವೃತ್ತ
- ಸದಾನಂದ