ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ
ನಾಳೆ ಗೋಕುಲಾಷ್ಟಮಿ..ಎಷ್ಟೋ ಮನೆಗಳಲಿ ಬಾಲಕೃಷ್ಣ ಹೆಜ್ಜೆಯ ಗುರುತಾಗಿ ಈಗಾಗಲೆ ಮೂಡಲು ಆರಂಭಿಸಿರಬೇಕು - ಬಣ್ಣ ಬಣ್ಣದ ರಂಗೋಲಿಯ ಸಮೇತ. ನಾನು ನೋಡಿದ ಗೆಳೆಯರ ಮನೆಗಳಲ್ಲಿ ಆಚರಣೆಯ ಶ್ರದ್ದೆ, ಸಂಭ್ರಮ, ಭಕ್ತಿ ನೋಡಿ ಸೋಜಿಗವಾಗುತ್ತಿತ್ತು - ಹೇಗೆ ಸಂಪ್ರದಾಯದ ಜೀವಂತಿಕೆಯನ್ನು ಈ ಹಬ್ಬಗಳ ರೂಪಿನಲ್ಲಿ ಹಿಡಿದಿಟ್ಟಿದೆ ಜನಪದ ಸಂಸ್ಕೃತಿ ಎಂದು.
ಕೃಷ್ಣನ ಆರಾಧಕರಿಗೆ ಇಲ್ಲೊಂದು ಪುಟ್ಟ ಗೀತೆ, ಶ್ರೀ ಕೃಷ್ಣನ ಮೇಲೆ, ಬಾಲ ಲೀಲೆಗಳ ಸುತ್ತ ಹೆಣೆದದ್ದು - ಈಗಾಗಲೆ ಇರಬಹುದಾದ ಅಖಂಡ ಸಂಖ್ಯೆಯ ಗೀತೆಗಳ ಸಾಲಿಗೆ ಮತ್ತೊಂದು ಸರಳ ಗೀತೆ ಸೇರ್ಪಡೆ :-)
ಶ್ರೀ ಕೃಷ್ಣ ಜನ್ಮಾಷ್ಟಮಿ , ಗೋಕುಲಾಷ್ಟಮಿ
__________________________________
ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ
ನಮ್ಮನಗಳಲಿ ಮಾನವಮಿ, ಕಳ್ಳ ಕೃಷ್ಣನಾ ದನಿ!
ಕೊರಳಲ್ಲುಲಿದಾ ನಾದ, ಬಾಲ್ಯದಾ ದನಿ
ಗೋವುಗಳೆಲ್ಲವ ಸೆಳೆದವ, ಗೋಪಿಕೆಗೂ ಇನಿದನಿ!
ಮುರುಳಿ ಗಾನ ತಲ್ಲೀನ, ಪಶು ಪಕ್ಷಿ ಸಜ್ಜನ
ಉಟ್ಟುಡುಗೆ ತಲೆದೂಗಿ ನೀರೆ, ಮರೆಸಿ ಬಿಟ್ಟ ಮಜ್ಜನ!
ಕೆಳೆ ಕೂಟದಲಿ ಸಂಗೀತ, ರಾಗ ಮೋಹನ
ಹಿರಿ ಕಿರಿತನ ನಿರ್ಭೇಧ ಜನ, ಸಂಗಿತದಲೆ ನಮನ!
ಕಿರು ಬೆರಳ ಗೋವರ್ಧನ, ಧರಣಿ ಚಾಮರ
ವರುಣಾವೃತ ಇಂದ್ರ ತಾಪ, ಮಣಿಸಿ ಹಮ್ಮ ಸಮರ!
ಪೂತನಿ ಧೇನುಕ ಶಕಟ, ಕಂದಗೆ ಅಕಟಕಟ
ಚೆಲ್ಲಾಡುತಲೆ ಸವರಿದ ದಿಟ, ನವಿಲುಗರಿಯಷ್ಟೆ ಮುಕುಟ!
ನರ್ತನ ರಾಧಾ ಮಾಧವ, ಸಖಿಗೀತ ಸತತ
ಮರ್ದನ ಕಾಳಿಂಗ ನರ್ತನ, ಕಾಳಿಂದಿಯನು ಬೆಚ್ಚಿಸೊ ಗತ್ತ!
ಕದಿಯಲೆಷ್ಟು ಆಮೋದ, ಬೆಣ್ಣೆ ಕದ್ದ ವಿನೋದ
ಗೋಪಿಕೆ ವಸ್ತ್ರಾಪಹರಣ, ಚಿತ್ತ ಚೋರತನದ ಪ್ರೇಮಸುಧಾ!
ಬಿಟ್ಟು ವ್ಯಾಮೋಹ ಶರೀರ, ಆತ್ಮದಾ ವಿಚಾರ
ಬೆತ್ತಲೆಯಾದರು ತನು ಪೂರ, ಬಡಿದೆಬ್ಬಿಸಿ ಒಳಗಿನ ಸಾರ!
ಅವನ್ಹುಟ್ಟೆ ಭಗವದ್ಗೀತೆ, ಬದುಕೆಲ್ಲ ಹಾಡಿ ಸುನೀತ
ಕರ್ಮಫಲ ಬೀಜವ ಬಿತ್ತಿ, ಮುಕ್ತಿಗೆ ದಾರಿ ತೆರೆದ ಭಗವಂತ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು