ಶ್ರೀ ಚೆನ್ನ ಕೇಶವ ಶೃಂಗಾರ ಭಾವ
ಮುನ್ನ ವೇಲಾಪುರದಿ ನಿಂತಿಹ
ಚೆನ್ನಿಗನ ಚೆಲುವೆಂತು ಬಣ್ಣಿಪೆ
ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? |
ಚೆನ್ನಕೇಶವನೆಂಬ ಹೆಸರವ
-ನನ್ನೆ ನೆಚ್ಚಿದ ಮದನಿಕಾ ಮನ
ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧||
ತನ್ನ ಭಕುತರ ಸಕಲ ದುಃಖದ
ಬಿನ್ನಪವ ಕೇಳುತ್ತಲೆಲ್ಲರ-
ವುನ್ನತಿಗೆ ತಾ ಮಿಗಿಲು ಕಾರಣ ಮಾರ ಚೆನ್ನಿಗನ |
ಸನ್ನಿಧಾನವು ಸಕಲ ಜನಪದ
ಕನ್ನಡದ ನೆಲಕೆಲ್ಲ ಒಬ್ಬನೆ
ಚನ್ನಕೇಶವ ರಾಯನೆಂಬುದು ನಿತ್ಯ ನಿಚ್ಚಳವು ||೨||
ವಿಜಯ ಪಡೆದಿರೆ ಧೀರ ಬಿಟ್ಟಿಗ
ಸುಜನಪತಿ ಪೂರಯಿಸೆ ಹರಕೆಯ
ವಿಜಯ ನಾರಾಯಣನ ಮೂರುತಿಯನ್ನು ಕೆತ್ತಿಸಿದ |
ನಿಜದಿ ಭಾಗ್ಯವುದವನ ಸನ್ನಿಧಿ
ಭಜಿಸುವಂತಹ ದಶೆಯು ದೊರೆವುದು!
ಋಜುತನದಿ ಚೆನ್ನಿಗನ ಮೀರುವ ದೇವನೆಲ್ಲಿಹನು? ||೩||
ತಾವರೆಯ ಮೊಗದಲ್ಲಿ ಕಂಗಳ
ತಾವರೆಯೆರಡು ನಕ್ಕು ಅರಳಿರೆ
ಕಾವದೇವನ ಮೀರುವಂತಹ ಚೆಲುವು ಕಂಡಿರಲು |
ದೇವಿ ಶಾಂತಲೆಯಂದು ಮಾಡಿದೆ
ಹಾವ ಭಾವದ ನೃತ್ತ ಗಾನವು
ನೇವುರದ ಕಿಂಕಿಣಿಯ ನಾದವದಿಲ್ಲಿ ಕೇಳುತಿದೆ ||೪||
-ಹಂಸಾನಂದಿ
ಕೊ: ಡಿವಿಜಿ ಯವರು, ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಇರುವ ಮದನಿಕಾ ವಿಗ್ರಹ (ಶಿಲಾಬಾಲಿಕೆ)ಗಳ ಬಗ್ಗೆ ಬರೆದಿರುವ ಅಂತಃಪುರಗೀತೆಗಳಲ್ಲಿ ಮೊದಲದ್ದು , ಚೆನ್ನಕೇಶವನ ಮೇಲೇ. ಚೆನ್ನಕೇಶವನ ಸೊಬಗನ್ನು ವರ್ಣಿಸುವ ಈ ನನ್ನ ಪದ್ಯಗಳಿಗೆ ಆ ಅಂತಃಪುರ ಗೀತೆಯು ಮೊದಲಾಗುವ "ಶ್ರೀ ಚೆನ್ನಕೇಶವ ಶೃಂಗಾರಭಾವ" ಎಂಬ ತಲೆಬರಹವೇ ಸೂಕ್ತವಾಗಿ ಕಂಡದ್ದರಿಂದ ಹಾಗೇ ಬಳಸಿದ್ದೇನೆ.
ಕೊ.ಕೊ: ನಾಲ್ಕೂ ಪದ್ಯಗಳು ಭಾಮಿನಿ ಷಟ್ಪದಿಯಲ್ಲಿವೆ. ಈ ದೇವಾಲಯವನ್ನು ಕೆತ್ತಿಸಿದ, ಹೊಯ್ಸಳ ರಾಜ ಬಿಟ್ಟಿಗ ( ವಿಷ್ಣುವರ್ಧನ) ಮತ್ತು ಅವನ ರಾಣಿ ಶಾಂತಲೆಯ ಪ್ರಸತಾಪ ೩ ಹಾಗೂ ೪ನೇ ಪದ್ಯದಲ್ಲಿ ಬಂದಿದೆ. ವಿಜಯನಾರಾಯಣ ನೆಂಬ ಹೆಸರಿನ ಇಲ್ಲಿನ ಮೂರ್ತಿ, ಚೆನ್ನಕೇಶವನೆಂಬ ಹೆಸರಲ್ಲೇ ಹೆಚ್ಚು ಪ್ರಖ್ಯಾತ.
ಕೊ.ಕೊ.ಕೊ: "ಕಮಲೇ ಕಮಲೋತ್ಪತ್ತಿಃ" ಎಂಬ ಒಂದು ಸಮಸ್ಯಾಪದ್ಯವನ್ನು ಕಾಳಿದಾಸ ಬಿಡಿಸಿದನೆಂದು ದಂತಕತೆ. ಅದರ ಭಾವವನ್ನೇ ಇಲ್ಲಿ ನನ್ನ "ತಾವರೆಯ ಮೊಗದಲ್ಲಿ ಕಂಗಳ ತಾವರೆಯೆರಡು ನಕ್ಕು ಅರಳಿರೆ" ಎಂಬ ಸಾಲಿನಲ್ಲಿ ತರುವ ಯತ್ನ ಮಾಡಿದ್ದೇನೆ.
ಚಿತ್ರ ಕೃಪೆ: ಮಿತ್ರ ನಂದಕುಮಾರ್ ಅವರ ಕ್ಯಾಮರಾ ಕೈಚಳಕ - ಬೇಲೂರಿನ ದೇವಸ್ಥಾನದ ಪ್ರಾಕಾರದ ಪನೋರಮಾ ನೋಟ.
Comments
ಉ: ಶ್ರೀ ಚೆನ್ನ ಕೇಶವ ಶೃಂಗಾರ ಭಾವ
ಭಾಮಿನಿ ಶ್ಹಟ್ಪದಿಯಲ್ಲಿ ಬರೆಯುವ ನಿಮ್ಮ ಪ್ರಯತ್ನ ಯಷಸ್ವಿಯಾಗಿದೆ.ಪದ್ಯಗಳ ಭಾವ, ಭಾಷೆ ಎರಡೂ ಸೊಗಸಾಗಿವೆ. 'ಎಲ್ಲಾದರು ಇರು, ಎ0ತಾದರೂ ಇರು ಎ0ದೆ0ದಿಗು ನೀ ಕನ್ನಡವಾಗಿರು' ಎ0ಬ ಕವಿಯ ಆಸೆಯನ್ನು ನಿಮ್ಮ0ಥವರು ನನಸಾಗಿಸುತ್ತಿರುವುದು ನಮಗೆಲ್ಲಾ ಸ0ತೋಶ್ಹದ ಸ0ಗತಿ.
In reply to ಉ: ಶ್ರೀ ಚೆನ್ನ ಕೇಶವ ಶೃಂಗಾರ ಭಾವ by DR.S P Padmaprasad
ಉ: ಶ್ರೀ ಚೆನ್ನ ಕೇಶವ ಶೃಂಗಾರ ಭಾವ
ನಿಮ್ಮ ಒಳ್ಳೆಯ ಮಾತುಗಳಿಗೆ ನಾನು ಆಭಾರೊ, ಡಾ.ಪದ್ಮಪ್ರಸಾದ್ ಅವರೆ!
In reply to ಉ: ಶ್ರೀ ಚೆನ್ನ ಕೇಶವ ಶೃಂಗಾರ ಭಾವ by DR.S P Padmaprasad
ಉ: ಶ್ರೀ ಚೆನ್ನ ಕೇಶವ ಶೃಂಗಾರ ಭಾವ
ನಿಮ್ಮ ಒಳ್ಳೆಯ ಮಾತುಗಳಿಗೆ ನಾನು ಆಭಾರಿ, ಡಾ.ಪದ್ಮಪ್ರಸಾದ್ ಅವರೆ!
ಉ: ಶ್ರೀ ಚೆನ್ನ ಕೇಶವ ಶೃಂಗಾರ ಭಾವ
ಶೀರ್ಷಿಕೆ ನೋಡಿದ ತಕ್ಷಣ ಅದೇ ಗೀತೆ ನೆನಪಿಗೆ ಬಂದು ಮನಸ್ಸು ಪ್ರಫುಲ್ಲವಾಯಿತು. ನಿಮ್ಮ ರಚನೆಯೂ ಮುದ ನೀಡುವಂತಹದು. ಅಭಿನಂದನೆಗಳು.