ಶ್ರೀ ಜಯಚಾಮರಾಜೇಂದ್ರ ಒಡೆಯರವರ ಪಟ್ಟಾಭಿಷೇಕೋತ್ಸವದ ವರದಿ- ಆಯ್ದ ಭಾಗ
( ಈ ಕೆಳಗಿನ ಬರಹವು 'ಅಧ್ಯಯನ' - ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಅದರ ಕೆಲ ಭಾಗವನ್ನು ಇಲ್ಲಿ ಆಸಕ್ತರಿಗಾಗಿ ಕುಟ್ಟಿದ್ದೇನೆ)
( ಈ ಭಾಗವನ್ನು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರವರ ಚರಿತ್ರೆ (೧೯೦೩) ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಎಂ. ಶಿಂಗ್ರಯ್ಯ ಎಂಬುವರು ಬರೆದ ಈ ಕೃತಿ ಮೈಸೂರಿನ ವಸಂತ ಸಾಹಿತ್ಯ ಮಾಲೆಯಿಂದ ಪ್ರಕಟವಾಯಿತು. ಇದು ಮೂಲತಃ ಒಬ್ಬ ದೊರೆಯ ಜೀವನ ಚರಿತ್ರೆಯಾದರೂ ಈ ಕೃತಿ ೧೯ನೇ ಶತಮಾನದ ಕೊನೆಯ ಭಾಗದ ಮೈಸೂರು ರಾಜ್ಯಕ್ಕೆ ಸಂಬಂಧಿಸಿದ ಅನೇಕ ಕುತೂಹಲಕರ ಸಂಗತಿಗಳನ್ನು ಹೇಳುತ್ತದೆ. 'ಸತ್ಯಸಂಧರಾದ' ಬ್ರಿಟಿಷರನ್ನು ಮತ್ತು ಸಭ್ಯರಾದ ಮೈಸೂರು ಒಡೆಯರನ್ನು ಕೀರ್ತಿಸುವ ಉದ್ದೇಶವುಳ್ಳ ಈ ಕೃತಿ ತನಗೇ ಅರಿಯದಂತೆ ಅನೇಕ ಚಾರಿತ್ರಿಕ ಸತ್ಯಗಳನ್ನು ಪ್ರಕಟಿಸಿದೆ. ಇಲ್ಲಿ ಯಾವ ವಿಷಯ ಹೇಳಿದರೆ ತನ್ನ ಕೃತಿಯ ನಾಯಕನ ಕೀರ್ತಿಗೆ ಕುಂದುಂಟಾಗುತ್ತದೆ ಎಂದೂ ಅರಿಯದ ಮುಗ್ಧತೆ ಕೂಡ ಇಲ್ಲಿ ಕೆಲಸ ಮಾಡಿದೆ. ... ಬ್ರಿಟಿಷರ ವಿರುದ್ಧ ಹೋರಾಡಿ ಮಡಿದರೂ ಟಿಪ್ಪುವಿನ ಬಗೆಗೆ ಅಸಹನೆ, ಭಾರತವನ್ನು ದಾಸ್ಯದಲ್ಲಿಟ್ಟಿದ್ದರೂ ಒಡೆಯರಿಗೆ ಮರಳಿ ರಾಜ್ಯಾಧಿಕಾರ ಕೊಟ್ಟರೆಂಬ ಕಾರಣಕ್ಕೆ ಬ್ರಿಟಿಷರ ಬಗೆಗೆ ಇರುವ ಆರಾಧನೆ ಈ ಕೃತಿಯ ವಿಶೇಷ ಇಲ್ಲಿ ಕೊಡಲಾಗಿರುವ ಪಟ್ಟಾಭಿಷೇಕದ ವರ್ಣನೆಯಲ್ಲಿ ರಾಜ್ಯಾಧಿಕಾರ ಪಡೆಯುವ ಸಂಭ್ರಮದ ಜತೆಜತೆಯಲ್ಲಿಯೇ ಕೈಕಾಲನ್ನು ಕಟ್ಟಿಹಾಕುವ ಹೀನಾಯವಾದ ತಹನಾಮೆಯಿದೆ...- ಸಂ)
ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರವರು ಜೀವಿಸಿದ್ದ ಕಾಲದಲ್ಲಿಯೇ ಇಂಡಿಯಾ ಸ್ಟೇಟ್ ಸೆಕ್ರೆಟರಿಗಳಾದ ನಾರ್ತ್ಕೋಟ್ ರವರು ಬರೆದು ಕಳುಹಿಸಿದ ನಿರೂಪದಲ್ಲಿ ಮುಂದೆ ಶ್ರೀ ಮನ್ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರವರು ರಾಜಯೋಗ್ಯವಾದ ವಿದ್ಯಾಭ್ಯಾಸವನ್ನು ಮಾಡಿ ರಾಜ್ಯಭಾರವನ್ನು ವಹಿಸುವುದಕ್ಕೆ ತಕ್ಕ ಅರ್ಹತೆಯನ್ನು ಪಡೆದು ಪ್ರಾಪ್ತ ವಯಸ್ಕರಾದ ಕೂಡಲೇ ಸಂಪ್ರದಾಯಾನುಸಾರವಾಗಿ ಬಂದ ಯಾದವಕುಲದ ಸಿಂಹಾಸನಾಧಿಪತ್ಯವನ್ನು ಪುನಃ ಅವರ ವಶಕ್ಕೆ ಒಪ್ಪಿಸಿಬಿಡುವುದಾಗಿ ವಾಗ್ದಾನ ಮಾಡಿದ್ದರಷ್ಟೆ. ಈಗ ಸಮರ್ಥರಾದ ವಿದ್ಯಾಗುರುಗಳ ಬಳಿಯಲ್ಲಿ ವಿದ್ಯಾಭ್ಯಾಸವನ್ನು ಪೂರಯಿಸಿಕೊಂಡು ಉಪನಯನ ವಿವಾಹ ನಿಷೇಕಾದಿ ಸಂಸ್ಕಾರಗಳನ್ನು ಪಡೆದು ಪ್ರಾಪ್ತವಯಸ್ಕರಾಗಿಯೂ ರಾಜತೇಜೋವಿರಾಜಮಾನರಾಗಿಯೂ ಇರುವ ಶ್ರೀ ಜಯಚಾಮರಾಜೇಂದ್ರ ಒಡೆಯರವರಿಗೆ ಮೈಸೂರು ರಾಜ್ಯಲಕ್ಷ್ಮಿಯ ಹಸ್ತಗ್ರಹಣವನ್ನು ಮಾಡುವುದಕ್ಕೆ ತಕ್ಕ ಕಾಲವು ಒದಗಿತು. ಇದನ್ನು ಕಂಡ ಸತ್ಯಸಂಧರಾದ ಬ್ರಿಟಿಷ್ ಸರಕಾರದವರು ಆಡಿದ ಭಾಷೆಗೆ ನ್ಯೂನತೆ ಬಾರದಂತೆ ೧೮೮೧ನೇ ಇಸವಿ ಮಾರ್ಚ್ ೧ರಲ್ಲಿ ಒಂದು ಹೊಸ ತಹನಾಮೆಯನ್ನು ಹುಟ್ಟಿಸಿದರು.
ತಹನಾಮೆ: ಬ್ರಿಟಿಷ್ ಸರಕಾರದವರು ಮೈಸೂರು ಸಂಸ್ಥಾನವನ್ನು ಬಹುಕಾಲದವರೆಗೆ ತಮ್ಮ ಅಧೀನದಲ್ಲಿಟ್ಟುಕೊಂಡು ಇಲ್ಲಿನ ರಾಜ್ಯಭಾರದಲ್ಲಿ ಸರ್ವೋತ್ತಮವಾದ ಕ್ರಮವನ್ನು ನೆಲೆಗೊಳಿಸಿರುವರು. ಮುಮ್ಮಡಿ ಕೃಷ್ಣರಾಜ ಒಡೆಯರವರು ಗತಿಸಿದ ಕಾಲದಲ್ಲಿ ಬ್ರಿಟಿಷ್ ಸರಕಾರದವರು ಹಾಗೆ ತಾವು ನೆಲೆಗೊಳಿಸಿರುವ ರಾಜ್ಯಭಾರಕ್ರಮಕ್ಕೆ ಸ್ವಲ್ಪವೂ ನ್ಯೂನತೆ ಬಾರದಂತೆ ಕಾಪಾಡಿಕೊಂಡು ಬರುವುದಕ್ಕೆ ಅವಶ್ಯಕವಾದ ನಿಬಂಧನೆಗಳಿಗೂ ಒಡಂಬಡಿಕೆಗಳಿಗೂ ಅನುಸಾರವಾಗಿ ಈ ದೇಶದ ರಾಜರು ಸಂಸ್ಥಾನವನ್ನು ಆಳಬೇಕೆಂಬ ಉದಾರೇಚ್ಛೆಯುಳ್ಳವರಾಗಿರುವುದರಿಂದ ಗತಿಸಿದ ಮಹಾರಾಜರ ಸ್ವೀಕೃತ ಪುತ್ರರಾದ ಶ್ರೀ ಜಯಚಾಮರಾಜೇಂದ್ರ ಒಡೆಯರವರು ಈ ಸಂಸ್ಥಾನವನ್ನು ಪರಿಪಾಲಿಸುವ ರಾಜರಾಗಿರುವುದಕ್ಕೆ ಅರ್ಹತೆಯನ್ನು ಪಡೆದಿರುವರೆಂದು ತಿಳಿದುಬಂದ ಪಕ್ಷದಲ್ಲಿ ಇನ್ನು ಮುಂದೆ ನಿರ್ಧರಿಸಲ್ಪಡುವ ನಿಬಂಧನೆಗಳಿಗೂ ಒಡಂಬಡಿಕೆಗಳಿಗೂ ಅನುಸಾರವಾಗಿ ಆಳತಕ್ಕುದೆಂದು ಗೊತ್ತುಮಾಡಿ ಈ ಸಂಸ್ಥಾನಾಧಿಪತ್ಯವನ್ನು ಅವರ ವಶಕ್ಕೆ ಒಪ್ಪಿಸತಕ್ಕುದೆಂದು ನಿರ್ಣಯ ಮಾಡಿದರು . ಈಗ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಹದಿನೆಂಟು ವರುಷ ವಯಸ್ಸನ್ನು ಪಡೆದು ರಾಜತ್ವಕ್ಕೆ ಅರ್ಹರಾಗಿರುವರೆಂದು ಬ್ರಿಟಿಷ್ ಸರಕಾರದವರಿಗೇ ಕಂಡುಬಂದು ಹಿಂದೆ ಸೂಚಿಸಿರುವ ಪ್ರಕಾರ ಮೇಲ್ಕಂಡ ಸಂಸ್ಥಾನದ ರಾಜ್ಯಭಾರವನ್ನು ಈಗ ಒಪ್ಪಿಸಬೇಕಾಗಿರುವುದರಿಂದ ಯಾವ ಒಡಂಬಡಿಕೆಗಳಿಗೆ ಅನುಸಾರವಾಗಿ ಅವರಿಗೆ ರಾಜ್ಯವನ್ನು ಒಪ್ಪಿಸಬೇಕೋ ಅಂತಹ ಒಡಂಬಡಿಕೆಗಳನ್ನು ನಿರ್ಧಾರ ಮಾಡಿ ಲೇಖನದ ಮೂಲಕ ಒಂದು ತಹನಾಮೆಯನ್ನು ಹುಟ್ಟಿಸಿ ಆ ಮಹಾರಾಜರಿಗೆ ಒಪ್ಪಿಸತಕ್ಕುದು ಯುಕ್ತವಾಗಿದೆ. ಆ ತಹನಾಮೆ ಏನೆಂದರೆ-
೧. ಮಹಾರಾಜ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರಿಗೆ ೧೮೮೧ನೆಯ ಇಸವಿ ಮಾರ್ಚಿ ೨೫ನೆಯ ತಾರೀಖಿನ ದಿವಸ ಮೈಸೂರು ರಾಜ್ಯದ ಆಡಳಿತವನ್ನು ಒಪ್ಪಿಸಿ ರಾಜ್ಯಾಭಿಷೇಕೋತ್ಸವವನ್ನು ನೆರವೇರಿಸತಕ್ಕುದು.
೨. ಮೇಲೆ ಹೇಳಿದ ಮಹಾರಾರವರೂ ಮತ್ತು ಅವರ ಉತ್ತರಾಧಿಕಾರಿಗಳೂ ಮುಂದೆ ಹೇಳುವ ಕರಾರುಗಳಂತೆ ನಡೆದುಕೊಂಡು ಬರುವವರೆಗೂ ಮೇಲೆ ಹೇಳಿದ ರಾಜ್ಯ ಸ್ವಾದೀನಕ್ಕೆ ಅರ್ಹತೆಯನ್ನು ಪಡೆದಿರತಕ್ಕುದು.
೩. ಮೇಲೆ ಕಂಡ ರಾಜ್ಯಕ್ಕೆ ಜಯಚಾಮರಾಜೇಂದ್ರ ಒಡೆಯರವವರ ಸಂತತಿಯವರು-ಎಂದರೆ ಔರಸಪುತ್ರರಾಗಲಿ ಅವರ ಕುಲಾಚಾರದಂತೆ ಸ್ವೀಕೃತಪುತ್ರರಾಗಲಿ ಹಕ್ಕುದಾರರಾಗಿರುತ್ತಾರೆ. ಆದರೆ ಆಳುವುದಕ್ಕೆ ಶುದ್ಧಾಂಗವಾಗಿ ಯೋಗ್ಯತೆಯಿಲ್ಲದಿದ್ದರೆ ಅಂತಹವರಿಗೆ ಹಕ್ಕು ಇರುವುದಿಲ್ಲ. ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರು ಒಪ್ಪಿದ ಹೊರತು ಯಾರ ಹಕ್ಕೂ ನಿರ್ಣಯವಾಗುವದಿಲ್ಲ . ಮೇಲ್ಕಂಡ ಚಾಮರಾಜೇಂದ್ರ ಒಡೆಯರವರಿಗೆ ಔರಸಪುತ್ರರಾಗಲಿ ಸ್ವೀಕೃತಪುತ್ರರಾಗಲಿ ಇಲ್ಲದ ಪಕ್ಷಕ್ಕೆ ಅವರಿಗೆ ಸೇರಿದ ಶಾಖಾಸಂತತಿಯಿಂದ ಹಕ್ಕುದಾರರನ್ನು ಗೊತ್ತುಮಾಡತಕ್ಕುದು ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರ ಅಧಿಕಾರದಲ್ಲಿರುತ್ತದೆ.
೪. ಮಹಾರಾಜ ಜಯಚಾಮರಾಜೇಂದ್ರ ಒಡೆಯರವರೂ ಮತ್ತು ಅವರ ಉತ್ತರಾಧಿಕಾರಿಗಳೂ ಸಹ ಇನ್ನ್ನು ಮುಂದೆ ಮೈಸೂರು ಮಹಾರಾಜರೆಂದು ಕರೆಯಲ್ಪಡತಕ್ಕುದು. ಇವರುಗಳು ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ರಾಜ್ಯಗಳಿಗೆ ರಾಣಿಯವರಾಗಿಯೂ ಹಿಂದೂಸ್ಥಾನದ ಚಕ್ರವರ್ತಿನಿಯರಾಗಿಯೂ ಇರುವ ಮಹಾರಾಜ್ಞಿಯವರಿಗೂ ಅವರ ಹಕ್ಕುದಾರರಿಗೂ ಸಹ ಯಾವಾಗಲೂ ವಿಧೇಯರಾಗಿಯೂ ನಂಬಿಕೆಗೆ ಪಾತ್ರರಾಗಿಯೂ ಇರತಕ್ಕುದು. ಮತ್ತು ಅಂತಹ ವಿಧೇಯತೆಯ ಸಂಬಂಧದಿಂದ ಅವರು ಕೇಳಿದ ಸಹಾಯವನೆಲ್ಲಾ ಮಾಡುತ್ತಿರಬೇಕು.
೫. ಬ್ರಿಟಿಷ್ ಸರಕಾರದವರು ಮೇಲೆ ಹೇಳಿದ ರಾಜ್ಯಕ್ಕೆ ಹೊರಗಿನಿಂದ ಶತ್ರುಬಾಧೆಯಿಲ್ಲದಿರುವಂತೆ ಕಾಪಾಡುವದಕ್ಕೂ ಸಮಯ ಬಂದಾಗ ಇಂಗ್ಲೀಷ್ ಸೈನ್ಯಕ್ಕೆ ಸಹಾಯ ಮಾಡುವುದಕ್ಕಾಗಿ ಸೈನ್ಯಗಳನ್ನು ಇಟ್ಟುಕೊಳ್ಳಬೇಕಾದ ತೊಂದರೆಯನ್ನು ಮೈಸೂರು ಮಹಾರಾಜರಿಗೆ ತಪ್ಪಿಸುವುದಕ್ಕೂ ಒಪ್ಪಿಕೊಂಡಿರುತ್ತ್ತಾರೆ. ಇದಕ್ಕಾಗಿ ೧೮೮೧ನೆಯ ಸಂವತ್ಸರದ ಮಾರ್ಚಿ ತಾರೀಖು ೨೫ರ ಮೊದಲುಗೊಂಡು ಮೇಲೆ ಹೇಳಿದ ರಾಜ್ಯ ಉತ್ಪತ್ತಿಯಿಂದ ಬ್ರಿಟಿಷ್ ಸರಕಾರಕ್ಕೆ ವರುಷವೊಂದಕ್ಕೆ ಎರಡು ಕಂತುಗಳಾಗಿ ಮೂವತ್ತೈದು ಲಕ್ಷ ಗವರ್ನಮೆಂಟ್ ರೂಪಾಯಿಗಳನ್ನು ಕೊಡಬೇಕು.
೬. ಮಹಾರಾಜರು ಮೈಸೂರು ದೇಶವನ್ನು ಸ್ವಾದೀನಕ್ಕೆ ತೆಗೆದುಕೊಂಡು ತಾರೀಖು ಮೊದಲುಗೊಂಡು ಶ್ರೀರಂಗಪಟ್ಟಣದಲ್ಲಿ ಬ್ರಿಟಿಷ್ ಅಧಿಕಾರವು ಖೈದಾಗತಕ್ಕದು. ಮತ್ತು ಮಹಾರಾಜರು ಇತರ ಭಾಗಗಳನ್ನು ಯಾವ ಕರಾರುಗಳಿಗೆ ಒಳಪಟ್ಟು ಪಡೆದಿರುವರೋ ಅದೇ ಕರಾರಿನಿಂದ ಆ ದ್ವೀಪವನ್ನೂ ಆಳತಕ್ಕುದು.
೭. ಮೈಸೂರು ಮಹಾರಾಜರು ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರ ಮಂಜೂರಾತಿಯಿಲ್ಲದೆ ಹೊಸದಾಗಿ ಕೋಟೆ ಮುಂತಾದವನ್ನು ಕಟ್ಟಕೂಡದು. ತಮ್ಮ ರಾಜ್ಯದಲ್ಲಿರುವ ಹಳೇಕೋಟೆ ಕೊತ್ತಳಗಳನ್ನು ರಿಪೇರಿ ಮಾಡಿಸಲೂಕೂಡದು.
೮. ಮೈಸೂರು ಮಹಾರಾಜರು ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರ ಸಮ್ಮತಿಯಿಲ್ಲದೆ ತಮ್ಮ ರಾಜ್ಯದೊಳಕ್ಕೆ ಆಯುಧಗಳನ್ನಾಗಲಿ ಮದ್ದುಗುಂಡುಗಳನ್ನಾಗಲಿ ಸೈನ್ಯಕ್ಕೆ ಬೇಕಾದ ಸಾಮಗ್ರಿಗಳನ್ನಾಗಲಿ ತರಿಸಕೂಡದು. ತರಿಸತಕ್ಕವರಿಗೆ ಅಪ್ಪಣೆಯನ್ನು ಕೊಡಲೂಕೂಡದು.
೯. ತಮ್ಮ ರಾಜ್ಯದಲ್ಲಿ ಯಾವ ಸ್ಥಳದಲ್ಲಾಗಲಿ ಇಂಗ್ಲಿಷ್ ಕಂಟೋನ್ಮೆಂಟುಗಳನ್ನ್ನು ಇಡುವುದು ಅಗತ್ಯವೆಂದು ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರಿಗೆ ತೋರಿದಾಗ ಕಂಟೋನ್ಮೆಂಟುಗಳನ್ನ್ನು ಕಟ್ಟುವುದಕ್ಕೆ ಮೈಸೂರು ಮಹಾರಾಜರು ಆಕ್ಷೇಪಣೆ ಮಾಡಬಾರದು. ಮತ್ತು ಹಾಗೆ ಕಂಟೋನ್ಮೆಂಟಿಗಾಗಿ ಬೇಕಾಗುವ ಸ್ಥಳವನ್ನು ಖರೀದಿಯಿಲ್ಲದೆ ಬರೆದುಕೊಡಬೇಕಲ್ಲದೆ ಆ ಸ್ಥಳದಲ್ಲಿ ತಮ್ಮ ಆಡಳಿತವನ್ನು ನಿಲ್ಲಿಸಬೆಕು. ಅಂತಹ ಕಂಟೋನ್ಮೆಂಟಿಗೆ ಸೇರಿರುವ ತಮ್ಮ ಸ್ಥಳದಲ್ಲಿ ತಮ್ಮ ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರು ಅಗತ್ಯವೆಂದು ಹೇಳುವ ಆರೋಗ್ಯಕರವಾದ ನಿಬಂಧನೆಗಳನ್ನು ಜಾರಿಗೆ ತರಬೇಕು. ಅಂತಹ ಕಂಟೋನ್ಮೆಂಟಿನಲ್ಲಿ ಸೈನ್ಯಕ್ಕಾಗಿ ಬೇಕಾಗುವ ಎಲ್ಲಾ ಸಾಮಾನುಗಳ ವಿಷಯದಲ್ಲಿ ಎಲ್ಲಾ ಅನುಕೂಲವನ್ನು ಮಾಡಿಕೊಡಬೇಕು. ಮತ್ತು ಆ ಉದ್ದೇಶದಿಂದ ತರಿಸತಕ್ಕಂಥ ಅಥವಾ ಕೊಂಡುಕೊಂಡ ಸಾಮಾನುಗಳ ಮೇಲೆ ಬ್ರಿಟಿಷ್ ಸರಕಾರದ ಸಮ್ಮತಿಯಿಲ್ಲದೆ ಯಾವ ವಿಧವಾದ ತೆರಿಗೆಯನ್ನು ಅಥವಾ ಕಂದಾಯವನ್ನು ಹಾಕಕೂಡದು.
೧೦. ಮೈಸೂರು ಸಂಸ್ಥಾನದಲ್ಲಿ ರಾಜ್ಯವನ್ನು ತಹಬಂದಿಯಲ್ಲಿಟ್ಟುಕೊಂಡಿರುವುದಕ್ಕೂ, ಮಹಾರಾಜರ ಮರ್ಯಾದಾರ್ಥವಾಗಿಯೂ ಮತ್ತು ಗವರ್ನರ್ ಜನರಲ್ ಇನ್ ಕೌನ್ಸಿಲ್ ಅವರು ಸಮ್ಮತಿಸುವ ಇತರ ಉಪಯೋಗಕ್ಕಾಗಿಯೂ ಇಡುವ ಮಿಲಿಟರಿ ಸೈನ್ಯವು ಗವರ್ನರ್ ಜನರಲ್ ಇನ್ ಕೌನ್ಸಿಲ್ ಅವರು ಗೊತ್ತು ಮಾಡುವುದಕ್ಕಿಂತಲೂ ಹೆಚ್ಚಾಗಿರಕೂಡದು. ಸೈನ್ಯದ ಜಮಾವಣೆ ಹೆಚ್ಚಿಸುವುದು, ಕವಾಯತು ಮುಂತಾದವುಗಳ ವಿಷಯದಲ್ಲಿ ಗವರ್ನರ್ ಜನರಲ್ ಇನ್ ಕೌನ್ಸಿಲ್ ಅವರು ಹೇಳುವ ರೀತಿಯಲ್ಲಿ ನಡೆಯಿಸತಕ್ಕುದು.
೧೧. ಮೈಸೂರು ಮಹಾರಾಜರವರು ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರ ಅನುಮತಿಯಿಂದ ಅವರ ಮೂಲಕವಾಗಿ ಹೊರತು ರಾಜ್ಯದ ಇತರ ಆಡಳಿತದ ವಿಷಯದಲ್ಲಿ ಪ್ರವರ್ತಿಸಕೂಡದು. ಅಥವಾ ಇತರ ರಾಜ್ಯದ ರಾಜರೊಡನೆಯಾಗಲಿ ಅಥವಾ ಅಧಿಕಾರಿಗಳೊಡನೆಯಾಗಲಿ ಕಾಗದಪತ್ರಗಳನ್ನು ನಡೆಯಿಸಕೂಡದು.
೧೨. ಮೈಸೂರು ಮಹಾರಾಜರವರು ಗವರ್ನರ್ ಜನರಲ್ ಇನ್ ಕೌನ್ಸಿಲ್ ರವರ ಅನುಮತಿಯಿಲ್ಲದೆ ಇಂಡಿಯಾದೇಶದವನಲ್ಲದ ಯಾವ ಮನುಷ್ಯನನ್ನೂ ತಮ್ಮ ನೌಕರಿಯಲ್ಲಿಟ್ಟುಕೊಳ್ಳಕೂಡದು. ಮತ್ತು ಹಾಗೆ ನೌಕರಿಯಲ್ಲಿರುವ ಯಾವ ಮನುಷ್ಯನನ್ನಾದರೂ ಅವರು ಹೇಳಿದ ಪಕ್ಷದಲ್ಲಿ ಕೆಲ್ಸದಿಂದ ನಿವೃತ್ತಿ ಮಾಡಬೇಕು.
೧೩. ಬ್ರಿಟಿಷ್ ಇಂಡಿಯಾ ಗವರ್ನಮೆಂಟಿನ ನಾಣ್ಯವು ಚಲಾವಣೆಯಲ್ಲಿರುವವರೆಗೂ ಮೈಸೂರು ದೇಶದಲ್ಲಿಯೂ ಅದೇ ನಾಣ್ಯವು ಚಲಾವಣೆಯಲ್ಲಿರತಕ್ಕುದು. ಬ್ರಿಟಿಷ್ ಇಂಡಿಯಾದ ನಾಣ್ಯದ ಕಾಯದೆ ಕಾನೂನುಗಳೆಲ್ಲ ಮೆಲೆ ಹೇಳಿದ ದೇಶದಲ್ಲಿಯೂ ಜಾರಿಯಲ್ಲಿರತಕ್ಕುದು. ಮತ್ತು ಬಹುಕಾಲದಿಂದ ನಿಲ್ಲಿಸಲ್ಪಟ್ಟಿರುವ ಮೈಸೂರು ದೇಶದ ನಾಣ್ಯವನ್ನು ಪುನಃ ಜಾರಿಯಲ್ಲಿ ತರಕೂಡದು.
......................( ಇತ್ಯಾದಿ )
( ಸಂಗ್ರಹ)
Comments
ಉ: ಶ್ರೀ ಜಯಚಾಮರಾಜೇಂದ್ರ ಒಡೆಯರವರ ಪಟ್ಟಾಭಿಷೇಕೋತ್ಸವದ ವರದಿ- ಆಯ್ದ ಭಾಗ