ಶ್ರೀ ವೆಂಕಟಪ್ಪ ಕಲಾ ಮಂದಿರದಲ್ಲಿ, ಒಂದಷ್ಟು ಹೊತ್ತು

ಶ್ರೀ ವೆಂಕಟಪ್ಪ ಕಲಾ ಮಂದಿರದಲ್ಲಿ, ಒಂದಷ್ಟು ಹೊತ್ತು

ಯೂತ್ ಫೋಟೋಗ್ರಫಿಕ್‌ ಸೊಸೈಟಿ - ೩೧ನೇ ರಾಷ್ಟ್ರೀಯ ಸಲೋನ್ ಛಾಯಾಗ್ರಹಣ ಪ್ರದರ್ಶನ ೫ನೇ ಫೆಬ್ರವರಿಯಿಂದ ಆರಂಭವಾಗಿ ೮ನೇ ಫೆಬ್ರವರಿಗೆ ಮುಕ್ತಾಯವಾಗುತ್ತದೆ ಎಂದು ಮಿತ್ರ ಕೆ.ಶಿವೂ (ಛಾಯಾಕನ್ನಡಿ ಬ್ಲಾಗ್‌) ಅವರ ವಿ-ಅಂಚೆಯಿಂದ ತಿಳಿದೆನು. ಇದನ್ನು ಮಾತ್ರ ತಪ್ಪಿಸಿಕೊಳ್ಳಬಾರದು ಎನಿಸಿತು.  ಅದಕ್ಕೆಂದೇ ಕಾದಿದ್ದು ಭಾನುವಾರ, ೭.೨.೨೦೦೯ ರಂದು ಹೋಗಿದ್ದೆ. ಇದು ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಇತ್ತು.

ವೈಪಿಎಸ್‌ ನವರ ಕಾರ್ಯವೈಖರಿಯು ಛಾಯಾಚಿತ್ರಗಳ ಪ್ರದರ್ಶನ ತುಂಬಾ ಅಚ್ಚುಕಟ್ಟಾಗಿ ಮಾಡಿಸಿತ್ತು.  ನನಗೊಂದು ಆಲೋಚನೆ ಬಂತು. ಇಲ್ಲಿ ಎಷ್ಟು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿರಬಹುದು? ಎಂದು.  ಮತ್ತೊಂದು ಸುತ್ತು ಚಿತ್ರಗಳನ್ನು ಬರಿದೇ ಎಣಿಸುತ್ತಾ ಹೋದೆ. ಅಲ್ಲಿದ್ದದ್ದು ೩೧೯. ಇಷ್ಟೂ ಚಿತ್ರಗಳನ್ನು ಸುಂದರವಾಗಿ, ಪ್ರಮಾಣ ಬದ್ಧವಾಗಿ ಪ್ರದರ್ಶನಕ್ಕೆ ಅಣಿಮಾಡಿದ್ದರು.  ಕಪ್ಪು-ಬಿಳುಪು, ಬಣ್ಣ, ಪ್ರವಾಸೀ ಹಾಗೂ ವನ್ಯಜೀವಿಗಳು ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಿ ಚಿತ್ರಗಳನ್ನು ಪ್ರದರ್ಶಿಸಿದ್ದರು.

ಕೆ.ಶಿವೂ ಅವರೂ ಸಿಕ್ಕಿದ್ದರು.  ಇದರ ಜೊತೆಗೆ ನಮ್ಮ ಸಂಸ್ಥೆಯ ಮೊದಲ ರಿಜಿಸ್ಟ್ರಾರ್‌ ಅವರ ಸ್ನೇಹಿತರೂ ಸಹ ಭೇಟಿಯಾಗಿದ್ದು ಒಂದು ವಿಶೇಷ ಎನ್ನಬಹುದು.  ಕಸ್ತೂರಿ ಚಾನಲ್ಲಿನವರು, ಹಾಗೆಯೇ ಶಿವುರವರ ಮುಂಬೈ ಮಿತ್ರರೂ ಬಂದಿದ್ದರು. ಸಂಜೆಯ ವೇಳೆಗೆ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು.  ನಾನು ಮನೆಗೆ ಹೋಗಲೇ ಬೇಕಿದ್ದರಿಂದ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಿಡಬೇಕಾಯಿತು.  

 ನನ್ನ ಸಹೋದ್ಯೋಗಿಗಳೂ ಸಹ ಸುಮಾರು ೪.೦೦ರ ವೇಳೆಗೆ ಬಂದರು. ಇದೇ ಸಮಯಕ್ಕೆ ಶ್ರೀಲಂಕಾದ ಛಾಯಾಗ್ರಾಹಕರ ಒಂದು ತಂಡವೂ ಬಂದಿತ್ತು ಎಂದು ತಿಳಿದುಬಂದಿತು (ಆಗ ನಾನು ನನ್ನ ಸಹೋದ್ಯೋಗಿ ಮಿತ್ರರ ಬರುವಿಕೆಗಾಗಿ ಹೊರಹೋಗಿದ್ದೆ).  ಹಲವಾರು ವಿದೇಶೀ ಪ್ರವಾಸಿಗರೂ ಸಹ ಇಲ್ಲಿಗೆ ಭೇಟಿಕೊಟ್ಟು ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ತಮ್ಮ ದೇಶದ ಚಿತ್ರಗಳು, ವಿಶೇಷತೆಗಳೇನಾದರೂ ಇರಬಹುದೇ? ಎಂದೂ ಹುಡುಕುತ್ತಿದ್ದರು.

ಅಲ್ಲಿದ್ದ ಅಭಿಪ್ರಾಯ ಪುಸ್ತಕದಲ್ಲಿ ಅನೇಕ ವೀಕ್ಷಕರು ತಮಗನಿಸಿದ್ದನ್ನು (ಚಿತ್ರಗಳನ್ನು ನೋಡಿ) ಬರಹ ರೂಪಕ್ಕಿಳಿಸಿದ್ದರು.  ನಾನೂ ಸಹ  ನನ್ನ ಅನಿಸಿಕೆಗಳನ್ನು ಆ ಪುಸ್ತಕದಲ್ಲಿ ಬರೆದೆನು.  ಒಟ್ಟಿನಲ್ಲಿ ಪ್ರಕೃತಿಯಲ್ಲಿನ ವೈಶಿಷ್ಟ್ಯಗಳು, ಮಕ್ಕಳ ಹಿರಿಯರ ಭಾವನೆಗಳು, ದೂರದೇಶಗಳ ಬಗ್ಗೆ ಇವನ್ನೆಲ್ಲ ನೋಡುವ, ತಿಳಿಯುವ ಒಂದು ಉತ್ತಮ ಅವಕಾಶವಾಗಿತ್ತು.

ಇಲ್ಲಿ ೧೫-೨೦ ರ ವಯೋಮಾನದೊಳಗಿನ ಹುಡುಗ ತೆಗೆದಿರುವ ನಾಗರಹಾವಿನ ಚಿತ್ರ ಸೂಪರ್‌!!!.  ಹಲವಾರು ಚಿತ್ರಗಳು ನಮ್ಮ ಮನಸ್ಸೆಂಬ ಕ್ಯಾಮೆರಾದಲ್ಲಿ ಖಂಡಿತ ದಾಖಲಾಗಿವೆ ಎಂದರೆ ಅಚ್ಚರಿಯೇನಿಲ್ಲ!

ನಿಮಗಾಗಿ ಇಲ್ಲೊಂದಿಷ್ಟು ಫೋಟೋಗಳಿವೆ. ಇಲ್ಲಿರುವ ಚಿತ್ರಗಳಿಗೆ ಶೀರ್ಷಿಕೆಯನ್ನು ನಾನು ಕೊಟ್ಟಿರುವುದಿಲ್ಲ.  ಏಕೆಂದರೆ, ಚಿತ್ರಗಳೇ ಸಂಭಾಷಿಸುತ್ತವೆ ನೋಡುಗರೊಡನೆ! 

[ಚಿತ್ರಗಳನ್ನು 'ಸಂಪದ' ದಲ್ಲಿ ನನಗೆ ಪೋಸ್ಟ ಮಾಡಲು ಬರುತ್ತಿಲ್ಲ.  ಅದಕ್ಕಾಗಿ ನನ್ನ ವೈಯಕ್ತಿಕ ಬ್ಲಾಗನ್ನು ವೀಕ್ಷಿಸಿ. http://kshanachintane.blogspot.com]

ಇಲ್ಲಿ ಪ್ರದರ್ಶನಕ್ಕಿರುವ ಫೋಟೋಗಳನ್ನು ಸೆರೆಹಿಡಿಯಬಹುದೇ ಎಂದು ಅಲ್ಲಿದ್ದ ಸಂಚಾಲಕರನ್ನು ಕೇಳಿದೆ. ಅವರು ಧಾರಾಳವಾಗಿ ಎಂದರು. ಹಾಗಾಗಿ ಇಲ್ಲೊಂದಿಷ್ಟು ಚಿತ್ರಗಳು ನಿಮಗಾಗಿ...

ಚಿತ್ರಕೃಪೆ: ವೈಪಿಎಸ್ 

ಲೇಖನ: ಚಂದ್ರಶೇಖರ ಬಿ.ಎಚ್.
೯.೨.೨೦೧೦

Rating
No votes yet