ಸಂಗೀತದಿಂದ ಸಮಾಧಿಯೆಡೆಗೆ......

ಸಂಗೀತದಿಂದ ಸಮಾಧಿಯೆಡೆಗೆ......

ಸಂಪದದಲ್ಲಿ ಬರೆದು ಬಹಳ ದಿನಗಳಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ, ಸಂಪದದಲ್ಲಿ ಮತ್ತೊಮ್ಮೆ ಬರೆಯುವ ಸಂದರ್ಭ ಒದಗಿ ಬಂದಿದೆ. ಈಗ್ಗೆ ಕಳೆದ ತಿಂಗಳಿನಲ್ಲಿ ನಡೆದ, Fireflies ಸಂಗೀತೋತ್ಸವದಲ್ಲಿ ನಾನೂ ಭಾಗಿಯಾಗಿದ್ದೆ. ಆ ಮಧುರ ಕ್ಷಣಗಳ ಮೆಲುಕು ಈ ಬರಹ. ಈ ಸಂಗೀತೋತ್ಸವದ ವಿಶೇಷ ಎಂದರೆ, ಇದು ಅಹೋರಾತ್ರಿ ಸಂಗೀತೋತ್ಸವ. ಅಂದರೆ, ಫೆಬ್ರವರಿ ೨೦ರ ಸಂಜೆ ೬:೩೦ ರಿಂದ ಫೆಬ್ರವರಿ೨೧ ರ ಬೆಳಗ್ಗೆ ೭:೩೦ ರ ವರೆಗೆ ನಡೆದ ಅಪರೂಪದ ಸಂಗೀತೋತ್ಸವ. ನಾನು, ನನ್ನ ತಂಗಿ ಹಾಗೂ ನನ್ನ ಇನ್ನೊಬ್ಬ ಕಸಿನ್ ನೊಂದಿಗೆ ಈ ಸಂಗೀತೋತ್ಸವಕ್ಕೆ ಹೊರಟೆ. ಎಂದಿನಂತೆ, ನಾವು ಸ್ಥಳವನ್ನು ತಲುಪಿದಾಗ, ಸುಮಾರು ೮ ಗಂಟೆಯಾಗಿದ್ದಿತು. ಆಗ ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದಿತು. ಮೊದಲಿಗೆ ನಾವು ತಲುಪಿದಾಗ, "ಭಕ್ತಿಯಾನ" ಕಾರ್ಯಕ್ರಮವು ನಡೆಯುತ್ತಿತ್ತು. ಮೈಸೂರಿನಿಂದ ಬಂದಿದ್ದ ಶ್ರೀಮತಿ ಮೀರಾ ರಾಜಾರಾಂ ಪ್ರಾಣೇಶ್ ರ ವೃಂದವು ಬಹಳ ಅಚ್ಚುಕಟ್ಟಾಗಿ ಕೃತಿಗಳನ್ನು ಹಾಡಿದ್ದರೆಂದು, ನಮಗಿಂತ ಮೊದಲೇ ತಲುಪಿದ್ದ ನಮ್ಮ ಗೆಳೆಯರಿಂದ ತಿಳಿಯಿತು. ನಾವು ಸ್ಥಳವನ್ನು ತಲುಪಿದಾಗ, ವಾದಿರಾಜ ಯತಿಗಳ ಒಂದು ಕೃತಿಯನ್ನು ಹಾಡುತ್ತಿದ್ದರು. ಅದರ ನಂತರ ಮಂಗಳದೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮುಗಿಯಿತು.
 
   ಮುಂದಿನ ಕೆಲವು ಕ್ಷಣಗಳಲ್ಲಿ ದೆಹಲಿಯಿಂದ ಬಂದಿದ್ದ HFT ಎನ್ನುವ Jazz ಬ್ಯಾಂಡ್ ನ ಸಂಗೀತ ಬಹಳ ಚೆನ್ನಾಗಿತ್ತು. ಅದರಲ್ಲೂ ಆ ಬ್ಯಾಂಡ್ ನ lead guitarist ನ ಹಾಡುಗಾರಿಕೆ ಕೂಡ ಚೆನ್ನಾಗಿತ್ತು. ಇದು ಕೇವಲ ೩೦ ನಿಮಿಷಗಳ ಕಾಲ ಇದ್ದ ಕಾರ್ಯಕ್ರಮ. ನಂತರ, ಶ್ರೀಮತಿ ಗೀತ ನವಲೆ  ಮತ್ತು ಅವರ ವೃಂದದವರು ನಡೆಸಿದ Esperanto - Soul fusion ನಿಜಕ್ಕೂ ಅದ್ಭುತವಾಗಿತ್ತು. ಏಕೆಂದರೆ ಆ fusion ಸಂಗೀತದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ, ಪಾಶ್ಚಿಮಾತ್ಯ ಸಂಗೀತದ fusion ಆಗಿದ್ದಿತು. ಅದರಲ್ಲೂ, ಶ್ರೀಯುತ ರಂಜನ್ ಬರುವಾ ಅವರ ಪಿಟೀಲುವಾದನ, ನೆರೆದಿದ್ದ ಎಲ್ಲ ಶೋತ್ರುಗಳನ್ನೂ ಮಂತ್ರ ಮುಗ್ಧರನ್ನಾಗಿಸಿತು. ಅವರ ಪಿಟೀಲಿನಿಂದ ಶಾಸ್ತ್ರೀಯ ಸಂಗೀತದೊಂದಿಗೆ ಹೊಮ್ಮಿದ Irish ಸಂಗೀತ, ನಮ್ಮನ್ನೆಲ್ಲ ನಿಜಕ್ಕೂ ಬೇರೆಯದೇ ಲೋಕಕ್ಕೆ ಕೊಂಡೊಯ್ದಿತ್ತು.
 
ಕಳೆದ ಕೆಲವು ವರ್ಷಗಳಿಂದ ಈ ಸಂಗೀತೋತ್ಸವವು ನಡೆಯುತ್ತಿದೆ. ನಂಗೆ ಈ ಸಾರಿ ಹೊಸ ಅನುಭವ. ಏಕೆಂದರೆ ಎಲ್ಲಾ ರೀತಿಯ ಸಂಗೀತವನ್ನು ಒಂದೇ ಸೂರಿನಡಿಯಲ್ಲಿ, ಅಂದರೆ ಒಂದೇ ಆಕಾಶದಡಿಯಲ್ಲಿ ಪಡೆಯುವ ಭಾಗ್ಯ ಬಹಳಷ್ಟು ಸಾರಿ ಸಿಗಲಾರದು. ಅದೊಂದು ಸಣ್ಣ ಆಶ್ರಮ, ಅಲ್ಲಿಯ ಆಲದ ಮರವೇ ವೇದಿಕೆ, ಅಲ್ಲೇ ಮೆಟ್ಟಿಲುಗಳ ಮೇಲೆ ನಮ್ಮ ಆಸನಗಳು. ಎಲ್ಲರೂ ದಿಂಬು ಹೊದಿಕೆಗಳೊಂದಿಗೆ ಆ ಸ್ಥಳದಲ್ಲಿ ಹಾಜರಿರುತ್ತಾರೆ. Esperanto ನಂತರ ಬಂದ , ಶ್ರೀ ಶಬ್ನಂ ವೀರ್ಮಾನಿ ಯವರ ಕಬೀರರ ಸಂಗೀತ ಎಲ್ಲರ ಅಚ್ಚುಮೆಚ್ಚು. ನನಗೂ ಬಹಳಷ್ಟು ಹಿಡಿಸಿತು. ಅವರು ಆ ಕಬೀರರ ವಚನಗಳನ್ನು ಹಾಡುವ ಮುಂಚೆ ಅದರ ಅರ್ಥವನ್ನು ಹೇಳಿ, ನಂತರ ಆ ವಚನಗಳನ್ನು ಹೇಳುವ ಪರಿ ನಿಜಕ್ಕೂ ಎಲ್ಲರನ್ನೂ ತಮ್ಮ ಅಂತರಾತ್ಮದೆಡೆಗೆ ಹರಿಸುತ್ತದೆ.
 
ಆ ಅದ್ಭುತ ಸಂಗೀತದ ನಂತರ ಬಂದ ದಕ್ಷಿಣ ಕನ್ನಡದ "ಹುಲಿ ವೇಷ" ತಂಡ, ಎಲ್ಲರನ್ನೂ ತಮ್ಮ ಹುಲಿ ಕುಣಿತದಿಂದ ಕುಣಿಸಿದರು. ನಂತರ ಬಂದ ಹಲವಾರು ಸಂಗೀತ ತಂಡಗಳಲ್ಲಿ ಹೆಚ್ಚಾಗಿ ಗಮನ ಸೆಳೆದವು, ಪ್ರಕಾಶ್ ಸೊಂಟಕ್ಕೆಯವರ Fusion ಸಂಗೀತ ತಂಡ, ಕೇರಳದ, ಜಾನಪದ ಸಂಗೀತವನ್ನು ಪ್ರತಿನಿಧಿಸಿದ, ವಯಾಲಿ ತಂಡ ಹಾಗೂ ಪಾಂಡಿಚೆರಿಯ, ಹಿಂದುಸ್ತಾನಿ/Jazz  fusion ಬ್ಯಾಂಡ್  . ಬೆಳಗಿನ ಜಾವದ ೩ ಗಂಟೆಗೆ ಎದ್ದು ಎಲ್ಲರನ್ನೂ ಕುಣಿಯುವಂತೆ ಮಾಡಿದ "ಭರತ್ ಸರಗಮ್" ಮತ್ತು ತಂಡ ದವರ ಕವ್ವಾಲಿ ಒಂದು ಅದ್ಭುತ ಅನುಭವವನ್ನು ನೀಡಿತು. ಅದರ ನಂತರ ಹಿಪ್ ಹಾಪ್ ಸಂಗೀತ ಪ್ರೇಮಿಗಳಿಗಾಗಿ ಕೆಲವು ತಂಡಗಳು ಪ್ರದರ್ಶನ ನೀಡಿದವು.
 
ಮಾರನೆಯ ದಿನ ಎಲ್ಲರೂ ಸಂಗೀತ ಗಂಗೆಯಲ್ಲಿ ಮಿಂದು ಪುಳಕಿತರಾದ ಅನುಭವದೊಂದಿಗೆ. ಭಾರವಾದ ಹೆಜ್ಜೆ ಹಾಕುತ್ತ ಮನೆಗಳತ್ತ ತೆರಳಿದರು. ಅಂತೂ ಒಂದು ಅದ್ಭುತ ಅನುಭವವನ್ನು ಅನುಭವಿಸಿದ ಒಂದು ಸಂತೃಪ್ತ ಭಾವ ನನ್ನ ಮನಸಿನಲ್ಲಿ ಮನೆ ಮಾಡಿತ್ತು.ಸಂಗೀತದಿಂದ ಪರಮಾತ್ಮದೆಡೆಗಿನ ಆ ಪ್ರಯಾಣ ನಿಜಕ್ಕೂ ಅನುಭವಿಸಿಯೇ ತೀರಬೇಕು.
 
Rating
No votes yet

Comments