ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು!

ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!!

..

..

..

..

..

(ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!)

ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈಲಜಾ,ಶಂಕರಿ,ಕಾಳಿ, ದುರ್ಗಾ,ಗೌರಿ ಮೀನಾಕ್ಷಿ,ವಿಶಾಲಾಕ್ಷಿ ಇಂತಹವೆಲ್ಲ ಒಂದೋ ದೇವಿಯು ಪರ್ವತರಾಜನ ಮಗಳು, ಶಿವನ ಹೆಂಡತಿ ಎನ್ನುವುದನ್ನೋ, ಅಥವಾ ಅವಳ ಬಣ್ಣವನ್ನೋ, ಕಣ್ಣನ್ನೋ ವರ್ಣಿಸುತ್ತವೆ. ಆದರೆ ಅವಳ ಎಲ್ಲ ಗುಣಗಳನ್ನೂ ಒಟ್ಟುಸೇರಿಸುವಂತಹ ಒಂದು ಹೆಸರಿದ್ದರೆ, ಅದು ಲಲಿತಾ ಎಂಬ ಹೆಸರೇ ಆಗಿರಬೇಕು.

ಲಲಿತೆ ಎಂದರೆ ಚೆಲುವೆ. ಲಲಿತೆ ಎಂದರೆ ಇಂಪಾದ ದನಿಯವಳು. ಲಲಿತೆ ಎಂದರೆ ಕೋಮಲೆ. ಲಲಿತೆ ಎಂದರೆ ಮನಸ್ಸಿಗೆ ಆಕರ್ಷಣೆ ತರುವವಳು. ಲಲಿತೆ ಎಂದರೆ ಒಳ್ಳೇ ನಡಿಗೆಯವಳು. ಲಲಿತೆ ಎಂದರೆ ವಿನೋದ, ಸರಸ ಸ್ವಭಾವದವಳು -  ಹೀಗೆ ಲಲಿತಾ ಎಂಬ ಪದದ ಅರ್ಥ ಇವೆಲ್ಲವನ್ನೂ ಒಳಗೊಂಡು ಒಂದು ಪೂರ್ಣ ರೂಪವನ್ನು ಕಣ್ಣುಮುಂದೆ ತರುವಂತೆ ಇನ್ನಾವ ಪದವೂ ತರಲಾರದು. ಇದೇ ಕಾರಣಕ್ಕೇ ಇರಬೇಕು - ದೇವಿಯ ಸಾವಿರ ಹೆಸರುಗಳಿಗೆ ’ಲಲಿತಾ ಸಹಸ್ರನಾಮ’ ಎನ್ನುವರೇ ಹೊರತು ಪಾರ್ವತಿ ಸಹಸ್ರನಾಮ ಅಥವಾ ಗೌರಿ ಸಹಸ್ರನಾಮ ಎನ್ನರು!

ಇಷ್ಟೆಲ್ಲರ ಜೊತೆಗೆ ಲಲಿತಾ ಎನ್ನುವುದು ಒಂದು ರಾಗದ ಹೆಸರೂ ಕೂಡ. ಹಾಗಿದ್ದಮೇಲೆ ನವರಾತ್ರಿಯ ನಾಲ್ಕನೇ ದಿನ, ನಾನು ಲಲಿತಾ ರಾಗದಲ್ಲಿ, ಲಲಿತೆಯ ಬಗ್ಗೆ ಇರುವ ಒಂದು ರಚನೆಯನ್ನು ಕೇಳಿಸುವುದರಲ್ಲಿ ಆಶ್ಚರ್ಯವೇನಿದೆ, ಅಲ್ಲವೆ?

ಅಂದ ಹಾಗೆ, ಆ ರಚನೆಯ ತಿಳಿವು ಚೆನ್ನಾಗಿ ಆಗಲೆಂದು ಕನ್ನಡಕ್ಕೆ ಹೀಗೆ ಅನುವಾದಿಸಿರುವೆ:

ಪಲ್ಲವಿ:


ಎನ್ನ ಕಾಯೇ ಲಲಿತೇ ತಡಮಾಡದೆ
ನಿನ್ನ ನೆರೆನಂಬಿಹನು ನಾನಲ್ಲವೇನೇ ?
ಮುನ್ನ ಅಣುಗರಾಸೆ ತೀರ್ಪ ಬಿಳಲೆ||ನ್ನ ಕಾಯೇ ಲಲಿತೇ||

ಅನುಪಲ್ಲವಿ:

ನಿನ್ನನುಳಿದಾಸರೆ ಎನಗಾರು ತಾಯೆ ಅತಿ ವೇಗದಿ ಬಂದೆ||ನ್ನ ಕಾಯೇ ಲಲಿತೇ||

ಚರಣ:

ಸುಮೇರು ಗಿರಿಯಲಿ ನೆಲೆಸಿಹಳೇ
ಶಾಮಕೃಷ್ಣ**ನೊಡ ಹುಟ್ಟಿದವಳೇ
ಉಮೆಯೆ ಮೀನ್ಗಣ್ಣಿ ಲೇಸು ತರುವವಳೇ
ಓ ಮಹಾರಾಣಿ! ಕಾವ ಸಮಯವಿದೆ||ನ್ನ ಕಾಯೇ ಲಲಿತೇ||

** - ಶಾಮಕೃಷ್ಣ ಎನ್ನುವುದು ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಶಾಮಾಶಾಸ್ತ್ರಿಗಳ ಅಂಕಿತ(signature). ಮತ್ತೆ, ಲೋಕ-ಕಲ್ಯಾಣಕ್ಕಾಗಿ ವಿಷ್ಣುವೂ, ಪಾರ್ವತಿಯೂ ಭೂಮಿಯಲ್ಲಿ ಮನುಷ್ಯನ ಜನ್ಮವೆತ್ತಿದವರು ಎನ್ನುವ ನಂಬಿಕೆ ಇರುವುದರಿಂದ ಅವರಿಬ್ಬರೂ ಅಣ್ಣ ತಂಗಿಯರು ಎನ್ನುವ ಭಾವನೆ ಇದೆ.

ಇದನ್ನು ಈಗ ಕೆಳಗಿನ ಕೊಂಡಿಯಲ್ಲಿ ಕೇಳಿ.ಆರಂಭದಲ್ಲಿ ಬರುವ ಲಲಿತಾ ಸಹಸ್ರನಾಮದಿಂದ ಆಯ್ದ  ಶ್ಲೋಕವನ್ನೂ ಗಮನಿಸಿ

ನನ್ನು ಬ್ರೋವು ಲಲಿತಾ -  ಹಾಡುತ್ತಿರುವುದು ಅರುಣಾ ಸಾಯಿರಾಮ್ - ಕೃಪೆ ಸಂಗೀತಪ್ರಿಯ

ಆಸಕ್ತರಿಗೆ ಈ ರಚನೆಯ ಮೂಲ ತೆಲುಗು ಸಾಹಿತ್ಯ ಹೀಗಿದೆ:

ಪಲ್ಲವಿ:
ನನ್ನು ಬ್ರೋವು ಲಲಿತಾ ವೇಗಮೇ ತ್ಸಾಲ ನಿನ್ನು ನೆರ
ನಮ್ಮಿಯುನ್ನ ವಾಡುಗದಾ ಭಕ್ತ ಕಲ್ಪಕಲತಾ || ನನ್ನು ಬ್ರೋವು ಲಲಿತಾ ||

ಅನುಪಲ್ಲವಿ:
ನಿನ್ನುವಿನಾ ಎವರುನ್ನಾರು ಗತಿ ಜನನಿ ಅತಿ ವೇಗಮೇ ವಚ್ಚಿ ||ನನ್ನು ಬ್ರೋವು ಲಲಿತಾ ||

ಚರಣ:
ಸುಮೇರು ಮಧ್ಯ ನಿಲಯೇ ಶ್ಯಾಮಕೃಷ್ಣುನಿ ಸೋದರಿ ಕೌಮಾರಿ
ಉಮಾ ಮೀನಾಕ್ಷಮ್ಮ ಶಂಕರಿ ಓ ಮಹಾರಾಜ್ಞಿ ರಕ್ಷಿಂಪ ಸಮಯಮಿದಿ || ನನ್ನು ಬ್ರೋವು ಲಲಿತಾ||

ಲಲಿತೆಯ ಸ್ಮರಣೆ ಎಲ್ಲರಿಗೂ ಹದುಳವನ್ನು ತರಲೆಂಬ ಹಾರೈಕೆಯಲ್ಲಿ,

-ಹಂಸಾನಂದಿ

Rating
No votes yet

Comments