ಸಂಪದದಲ್ಲಿ ಮೂರು ವರುಷ
ನಾನು ಸಂಪದಕ್ಕೆ ಕಾಲಿಟ್ಟು ಫೆಬ್ರವರಿ ೪ಕ್ಕೆ ಮೂರು ವರುಷ. ಅಂತರಜಾಲದಲ್ಲಿ ಅಲೆಯುತ್ತಿದ್ದಾಗ ಅಕಸ್ಮಾತ್ತಾಗಿ ಕಾಲಿಗೆ ತೊಡರಿದ್ದು ಸಂಪದ. ಆಗ ನಾನು ಕನ್ನಡ ವಿಕಿಪೀಡಿಯಾದಲ್ಲಿ ಸಕ್ರಿಯನಾಗಿದ್ದೆ. ಅನೇಕ ಇಂಗ್ಲೀಷ್ ಲೇಖನಗಳನ್ನು ಭಾಷಾಂತರ ಮಾಡಿ ಕನ್ನಡಕ್ಕೆ ಸೇರಿಸುತ್ತಿದ್ದೆ. (google translator ಉಪಯೋಗಿಸಿ ಅಲ್ಲ. ಹಳೆಯ ಕಾಲದ manual ಭಾಷಾಂತರ!). ಆಗ Sysadmin ಆಗಿದ್ದ ನಾಡಿಗರ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಸಂಪದ. ಆಗ ಹತ್ತಿದ ’ಹುಚ್ಚು’ ಇನ್ನೂ ಬಿಟ್ಟಿಲ್ಲ !
ನನ್ನನ್ನು ಸಂಪದದಲ್ಲಿ ಆಕರ್ಷಿಸಿದ್ದು ಇಲ್ಲಿ ವಿವಿಧ ವಿಷಯಗಳ ನಡುವೆ ನಡೆಯುತ್ತಿದ್ದ ಆಸಕ್ತಿಯುತ ಚರ್ಚೆ. ಕರ್ನಾಟಕದ ಹೊರಗೆ ವಾಸಿಸುತ್ತಿರುವ ನನಗೆ , ಕರ್ನಾಟಕದ , ಕನ್ನಡದ ಬಗ್ಯೆ ಓದುವಾಗ, ಕನ್ನಡ ಭಾಷೆ ಕಡಿಮೆಯಾಗುತ್ತಿದೆ, ನಮ್ಮ ಮಕ್ಕಳಿಗೆ ಕನ್ನಡ ಬೇಡವಾಗಿದೆ, English Medium ಕನ್ನಡಕ್ಕೆ ಕುತ್ತಾಗಿದೆ ಇತ್ಯಾದಿ ನಿರಾಶೆಯ ಮಾತುಗಳೇ ಓದಲು ಸಿಗುತ್ತಿದ್ದ ನನಗೆ ಸಂಪದ ತದ್ವಿರುದ್ಧವಾದ ಅನುಭವವನ್ನು ನೀಡಿತು. ಇಲ್ಲಿ ಕೇಶಿರಾಜನ ಬಗ್ಯೆ, ಹಳೆಗನ್ನಡದ ಬಗ್ಯೆ, ಕನ್ನಡ ಭಾಷಾ ವ್ಯಾಕರಣದ ಬಗ್ಯೆ ಸ್ವಾರಸ್ಯಕರ ಚರ್ಚೆ ನಡೆಯುತ್ತಿತ್ತು. ಚರ್ಚೆ ನಡೆಸುತ್ತಿದ್ದವರು ಗಡ್ಡ ನೆರೆತ ಹಿರಿಯ ವಿದ್ವಾಂಸರಲ್ಲ, ಚಿಗುರುಮೀಸೆಯ ಕನ್ನಡ ತರುಣರು. ಕನ್ನಡ ಭಾಷೆಯ ಬಗ್ಯೆ, ನಡೆಯುತ್ತಿದ್ದ ಪ್ರಯೋಗಗಳು, ಚರ್ಚೆಗಳು , ವಾದ ವಿವಾದಗಳು, ಇವೆಲ್ಲವೂ ಬರೀ ರಂಜಕವಲ್ಲದೇ ಚಿಂತಿಸಲು ಹತ್ತಿಸುವಂತಹವೂ ಆಗಿದ್ದವು. ಈ ಚರ್ಚೆಗಳು ಅನೇಕ ಬಾರಿ ವಿಷಯಾಂತರ, ವೈಯಕ್ತಿಕ ನಿಂದೆ, ಹೀಯಾಳಿಕೆ, ಪರಸ್ಪರ ದೂಷಣೆ ಇತ್ಯಾದಿಗಳಲ್ಲಿ ಕೊನೆಗೊಂಡದ್ದೂ ಉಂಟು.
ಡಿ.ಎನ್. ’ಸಂಕರಬಟ್ಟ’, ಕೊಳಂಬೆ ಪುಟ್ಟಣ್ಣ ಗೌಡ ಇತ್ಯಾದಿ ಭಾಷಾ ಕೋವಿದರ ಬಗ್ಯೆ ನಾನು ಮೊದಲು ಓದಿದ್ದು ಇಲ್ಲಿಯೇ. ಅನೇಕ ಹೊಸ ವಿಷಯಗಳು ಈ ಬ್ಲಾಗಿಗರಿಂದ ತಿಳಿದವು. ಬರಿಯ ಭಾಷಾ ಶಾಸ್ತ್ರವಲ್ಲ, ಕನ್ನಡ ಸಾಹಿತ್ಯ, ಸಂಗೀತ, ಧರ್ಮ, ಜಾತಿ, ಆಸ್ತಿಕ/ ನಾಸ್ತಿಕ, ಫೋಟೋಗ್ರಫಿ, ತಂತ್ರ ಜ್ಞಾನ, ಚಿತ್ರಕಲೆ, ವಿಜ್ಞಾನ, ಪ್ರವಾಸ, ಕನ್ನಡ vs. ಸಂಸ್ಕ್ರುತ ಒಂದೇ ಎರಡೇ , ಕೊನೆಗೆ ಏನಿಲ್ಲವೆಂದರೂ ಸ್ವಾರಸ್ಯಕರ ಕಾಡುಹರಟೆಗಳು, ಲೇಖನಕ್ಕಿಂತ ಚೆನ್ನಾಗಿದ್ದ ಕಾಮೆಂಟುಗಳು, ಎಲ್ಲಿಂದ ಎಲ್ಲಿಗೋ ಹೋಗಿ ಮುಟ್ಟುತ್ತಿದ್ದ ವಾದವಿವಾದಗಳು. ಒಟ್ಟಿನಲ್ಲಿ ಹೇಳಬೇಕಾದರೆ “There was never a dull moment!”. ನನ್ನ ಬರಹಗಳಿಗೆ ಸಿಗುತ್ತಿದ್ದ ವಸ್ತುನಿಷ್ಟ ಪ್ರತಿಕ್ರಿಯೆಗಳೂ ಕೂಡ ಸಂಪದಕ್ಕೆ ಮತ್ತೆ ಮತ್ತೆ ಬರುವಂತೆ ಮಾಡಿದವು.
ಆದರೆ ನೋಡುನೋಡುತ್ತಿದ್ದಂತೆ, ಇವರಲ್ಲಿ ಅನೇಕರು ಸಂಪದದಲ್ಲಿ ಸಕ್ರಿಯರಾಗಿ ಕಾಣುತ್ತಿಲ್ಲ. ಅನೇಕ ಹೊಸಬರು ಸೇರ್ಪಡೆಯಾಗಿದ್ದಾರೆ. ಹೀಗೆ ಸಂಪದ ನಿಂತ
ಆದರೂ ಈಚೆಗೆ ಬರಬರುತ್ತಾ ಸಂಪದ ನೀರಸವಾಗುತ್ತಿದೆ ಅನ್ನುವುದನ್ನೂ ಹೇಳಲೇಬೇಕು ಅನ್ನಿಸುತ್ತಿದೆ. ಮೊದಲು ಕಂಡು ಬರುತ್ತಿದ್ದ ವೈವಿಧ್ಯತೆ, ಅಧ್ಯಯನಶೀಲತೆ ಈಗ ಕಡಿಮೆಯಾದಂತೆ ತೋರುತ್ತದೆ. ಹೆಚ್ಚು ಆಳವಿಲ್ಲದ ಬರಹಗಳು, ಏಕತಾನದ ಕಾಮೆಂಟುಗಳು ಇವೇ ಹೆಚ್ಚು ಕಾಣುತ್ತಿವೆ.
ಆದರೂ ನನಗನಿಸುತ್ತದೆ, ನಿರಾಶೆಗೆ ಕಾರಣವಿಲ್ಲ. ಇದೂ ಒಂದು Passing phase. ಸಂಪದ ಮುಂದುವರಿದಂತೆ ಇದೂ ಬದಲಾಗುತ್ತದೆ.
ಸಂಪದದಂತಹಾ ಮಾಧ್ಯಮದ ಸಾಧ್ಯತೆಗಳು ಅಪಾರ. ಇದು ಆಸಕ್ತರನ್ನು ಒಟ್ಟಿಗೆ ತಂದು ಅವರ ನಡುವೆ ಬಾಂಧವ್ಯದ ಭಾವನೆಯನ್ನು ಹುಟ್ಟುಹಾಕುತ್ತದೆ. ಸಂಪದದ ಮೂಲಕವೇ ಪರಿಚಿತರಾದ ಅನೇಕರು ಇಂದು ಗೆಳೆಯರಾಗಿರುವ ಸಾಧ್ಯತೆಗಳಿವೆ. ಸಂಪದ ಸಮ್ಮಿಲನಗಳಂಥಾ ಸಮಾರಂಭಗಳು ಕೂಡ ಈ ಗೆಳೆತನವನ್ನು ಬಲಪಡಿಸುತ್ತವೆ. ಹೀಗೆ ಕನ್ನಡಿಗರ ಸಮುದಾಯವೊಂದನ್ನು ಕಟ್ಟುವ, ಬೆಳೆಸುವ ಕಾರ್ಯ ಸಂಪದ ತನ್ನದೇ ಆದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿದೆ.
ಇದರೊಂದಿಗೇ ಆಸಕ್ತರ ಇಷ್ಟದ ವಿಷಯಗಳ ಮಂಡನೆ, ಚರ್ಚೆಗೆ ಅನುವುಮಾಡಿಕೊಟ್ಟು ಅವರ ಅರಿವಿನ ಪರಿಧಿಯನ್ನು ವಿಸ್ತರಿಸುವ ಕೆಲಸವನ್ನು ಕೂಡಾ ಸಂಪದದಂಥಾ ಮಾಧ್ಯಮ ಮಾಡಬಲ್ಲುದು .
ಅಷ್ಟೆ ಅಲ್ಲ ಇನ್ನೂ ಮುಂದುವರಿದು ತನ್ನದೇ ಮಿತಿಯಲ್ಲಿ ಸಮಾಜದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದಕ್ಕೆ ಕೂಡಾ ಸಂಪದ ಒಂದು catalyst ಆಗಿ ಕೆಲಸ ಮಾಡಬಹುದು. ಮಾಲುಗಳಲ್ಲಿ ಕನ್ನಡ ಏಕಿಲ್ಲ, VRLನವರ ರಶೀತಿ ಇಂಗ್ಲೀಷಿನಲ್ಲಿ ಏಕೆ, ’ಮೆದು ವಡಾ’ ಯಾಕೆ? ಉದ್ದಿನ ವಡೆ ಅಂತಾ ಯಾಕೆ ಹೋಟೆಲಿನಲ್ಲಿ ಬರೆಯುವುದಿಲ್ಲ? ಇತ್ಯಾದಿ ಸಣ್ಣ ಅನ್ನಿಸಬಹುದಾದ ಆದರೆ ಭಾಷೆಯ ಉಳಿವಿನ ಬಗೆಗಿನ ಜಾಗ್ರತೆಗೆ ಸಂಬಂಧಿಸಿದಂತೆ ಮಹತ್ವದ ಅನೇಕ ವಿಷಯಗಳು ಇಲ್ಲಿ ಮಂಡಿತವಾಗಿವೆ, ಚರ್ಚೆಗೊಳಗಾಗಿವೆ, ಕೆಲವೊಮ್ಮೆ ಇದರಿಂದ ಹುಟ್ಟಿದ activism ನಿಂದ ಸಮಸ್ಯೆ ಪರಿಹಾರವಾದ ನಿದರ್ಶನಗಳನ್ನೂ ಸಂಪದದಲ್ಲಿ ಓದಿದ್ದೇನೆ.
ಸಂಪದ ಭವಿಷ್ಯದಲ್ಲಿ ಇನ್ನೂ ಏನೇನನ್ನು ಸಾಧ್ಯಮಾಡೀತು ಅಂತ ಕುತೂಹಲದಿಂದ ಎದುರು ನೋಡುತ್ತಿದ್ದೇನೆ.
Comments
ಉ: ಸಂಪದದಲ್ಲಿ ಮೂರು ವರುಷ
In reply to ಉ: ಸಂಪದದಲ್ಲಿ ಮೂರು ವರುಷ by vani shetty
ಉ: ಸಂಪದದಲ್ಲಿ ಮೂರು ವರುಷ
ಉ: ಸಂಪದದಲ್ಲಿ ಮೂರು ವರುಷ