ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ
ಆತ್ಮೀಯರೆ,
ಸಂಪದದಲ್ಲಿ ಕೊಕ್ ಸಣ್ಣ ಕಥೆಗೆ ಎರಡೆರಡು ಸಾಲು ಜೋಡಿಸಲು ವಿನಂತಿಸಿಕೊಂಡಾಗ ಸಹೃದಯ ಸಂಪದಿಗರಾದ ಶ್ರೀಕಾಂತರವರು,ಸುರೇಶ ನಾಡಿಗರವರು,ಚೇತನ್ ರವರು , ರಘುರವರು, ರಾಮಚಂದ್ರರವರು, ರವಿಯವರು, ಆಸು ಹೆಗ್ಡೆಯವರು,ಕೋಮಲ್ ರವರು, ಮಂಜುನಾಥರವರು, ಈ ಕಥೆಗೆ ರೂಪ ಕೊಟ್ಟು ಕಥೆಯನ್ನು ಬೆಳೆಸಿದ್ದಾರೆ. ಕಥೆಯಿನ್ನು ಪೂರ್ಣಗೊಂಡಿಲ್ಲ.ಈ ಕಥೆಗೆ ಪೂರ್ಣತೆಯನ್ನು ಕೊಡಲು ತಮ್ಮಿಂದ 5 ಸಾಲುಗಳ ನೆರವು ನೀಡಲು ವಿನಂತಿಸುವೆ. ಈ ಕಥೆಗೆ ಒಂದು ಮುಕ್ತಾಯ ನೀಡೋಣ.ಈಗಾಗಲೇ ನೆರವು ನೀಡಿದವರು ಇನ್ನೊಮ್ಮೆ ನೆರವು ನೀಡಿ ಕಥೆ ಮುಂದುವರಿಸ ಬಹುದು.
ತಮ್ಮ ಕಥಾ ಸಾಲುಗಳ ನೆರವಿನ ನಿರೀಕ್ಷೆಯೊಂದಿಗೆ
-ಭಾಗ್ವತ
ಸಂಪದಿಗರು ಹೆಣೆದ ಕಥೆ
ಬಾಳೆಹಳ್ಳಿ - ದಟ್ಟಕಾನನದ ಮಧ್ಯೆ ಇರುವ ಆಧುನಿಕ ಸೌಲಭ್ಯಗಳಿಂದ ವಂಚಿತ ಹಳ್ಳಿ. ಸೋಮಪ್ಪನೆಂಬ ರೈತ ತನ್ನ 4 ಜನ ಮಕ್ಕಳೊಂದಿಗೆ ಗೇಣಿ ಪಡೆದ ಹೊಲದಲ್ಲಿ ಉಳುಮೆ ಮಾಡುತ್ತ ಬದುಕು ಕಟ್ಟಿಕೊಂಡಿದ್ದ.
ಮಕ್ಕಳಲ್ಲಿ ಮೊದಲನೆಯವ ನಿಂಗಪ್ಪ ,ಎರಡನೆಯವ ಸಂಗಪ್ಪ ಮೂರು ಮತ್ತು ನಾಲ್ಕನೆಯವರ ಹೆಸರು ಕ್ರಮವಾಗಿ ಭೀಮಣ್ಣ,ಕೃಷ್ಣಪ್ಪ ಎಂದು.ಒಬ್ಬೊಬ್ಬರ ನಡುವೆ ಎರಡೆರಡು ವರುಷಗಳ ಅಂತರ.ಇವರೆಲ್ಲರೂ ಅಪ್ಪನಿಗೆ ಸಹಕಾರ ನೀಡುತ್ತಿದ್ದರು. ಒಟ್ಟಾಗಿ ರಟ್ಟೆ ಮುರಿದು ದುಡಿದು, ತಮ್ಮದೇ ಆದ ಜೀವನವನ್ನು ನಡೆಸುತ್ತಿದ್ದರು. ಸುಖೀ ರೈತ ಸಂಸಾರ. ಯಾವಾಗ ಇವರೆಲ್ಲರಿಗೂ ಮದುವೆಯಾಯಿತೋ ನೋಡಿ.ಮನೆಗೆ ಬಂದ ಸೊಸೆಯಂದಿರು ಸ್ವಲ್ಪ ದಿನ ಹೊಂದಿಕೊಂಡು ಇದ್ದರು. ಒಂದು ದಿನ ನಿಂಗಪ್ಪನ ಹೆಂಡತಿ ನೀವೊಬ್ಬರೇ ದನ ದುಡಿದ ಹಾಗೆ ದುಡೀತೀರಾ, ನಿಮ್ಮ ತಮ್ಮಂದಿರು ಸ್ವಲ್ಪ ಕೆಲಸ ಮಾಡಿ ಆರಾಮಾಗಿ ಇರ್ತಾರೆ, ಹಿರೀ ಸೊಸೆ ಅಂತ ನನಗೆ ಯಾವುದೇ ಗೌರವ ಇಲ್ಲ, ನಂಗೂ ಅಡಿಗೆ ಮನೇಲಿ ಇಷ್ಟೊಂದು ಜನಿಗೆ ಅಡಿಗೆ ಮಾಡಿ ಸಾಕಾಗಿದೆ , ಮನೆ ಮಗಳು ದೊಡ್ಡ ಕಾಯಿಲೆಯಿಂದ ನರಳ್ತಿದ್ದಾಳೆ. ಈ ನರಕದಲ್ಲಿ ಯಾಕೆ ಇರೋದು, ಆಸ್ತಿಲಿ ಪಾಲು ಕೇಳಿ ಬೇರೆ ಮನೆ ಮಾಡ್ಕೊಂಡು ಆರ್ಮಾಗಿ ಇರೋಣ.ಆದರೆ ನಿಂಗಪ್ಪನಿಗೆ, ಆಸ್ತಿ ಪಾಲಾಗುವುದು ಇಷ್ಟವಿರಲಿಲ್ಲ, ತುಂಬು ಕುಟುಂಬದ ಕನಸು ಕಂಡವನು ನಿಂಗಪ್ಪ.ಕೂಡಿಬಾಳಿದರೆ ಸ್ವರ್ಗ ಸುಖ ಎ೦ದು ನ೦ಬಿದ್ದ ಅತ, ಇ೦ದಲ್ಲ ನಾಳೆ ಬದುಕಿನಲ್ಲಿ ಸುಧಾರಣೆಯಾಗಿ ಒಳ್ಳೆಯ ದಿನಗಳು ಬ೦ದಾವೆ೦ದು ಹೆ೦ಡತಿಗೆ ಸಾ೦ತ್ವನ ಹೇಳಿದ.ಆದರೆ ಮಕ್ಕಳು ಹಾಗೂ ಸೊಸೆಯಂದಿರ ನಡುವೆ ಈ ಸಮಸ್ಯೆ ಮನಸ್ತಾಪ ದಿನೇ ದಿನೇ ಹೆಚ್ಚಾಗುತ್ತಿರಲು ಈ ಎಲ್ಲಾ ಜಗಳ, ರಗಳೆಗಳು ಬೇಡವೇ ಬೇಡವೆಂದು ನಿರ್ಧರಿಸಿ ಭಾರವಾದ ಮನಸ್ಸಿನಿಂದ ತಾನು ಕಷ್ಟಪಟ್ಟು ಮಾಡಿಕೊಂಡ ಆಸ್ತಿಯನ್ನು ನಾಲ್ಕು ಜನ ಮಕ್ಕಳಿಗೆ ಸಮನಾಗಿ ಪಾಲು ಮಾಡುವುದೆಂದು ಸೋಮಪ್ಪ ನಿಶ್ಚಯಿಸಿದ, ಇದಕ್ಕೆ ಆತನ ಪತ್ನಿಯೂ ಅನ್ಯ ಮಾರ್ಗವಿಲ್ಲದೆ ಸಮ್ಮತಿ ಸೂಚಿಸಿದಳು, ಈ ಸುದ್ದಿ ಕೆಲವೇ ಕೆಲವು ಮನೆಗಳಿದ್ದ ಆ ಊರಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತು.ಆಸ್ತಿ ಪಾಲಿಗೆ ಕೂತಾಗ , ಮನಸಿಲ್ಲದ ಮನಸ್ಸಿನಿಂದ ಬಂದು ಕೂರುತ್ತಾನೆ, ಮಾತುಗಳು ಶುರುವಾದದ್ದೇ ತಡ , ಒಬ್ಬರಿಗೊಬ್ಬರು ದೋಷರೋಪನೆಯಲ್ಲೇ ತೊಡಗಿದರು , ಇದರಿಂದ ಬೇಸರವಾದ ನಿಂಗಪ್ಪ , ತಮ್ಮಂದಿರೆಲ್ಲ ತಗೊಂಡು ಬಿಟ್ಟಿದ್ದನ್ನು ನನಗೆ ಕೊಡಿ ಎಂದು ಹೇಳಿ ಮನೆಯಿಂದ ಹೊರನೆಡೆದು ತನ್ನ ಹಿರಿತನವನ್ನು ಮೆರೆಯುತ್ತಾನೆ, ಆದರೆ ಅವನ ಹೆಂಡತಿ ಇದಕ್ಕೆ ಸುತರಾಂ ಒಪ್ಪುವುದಿಲ್ಲ. ಅವರಿಗೆ ಬೇಡವಾಗಿದ್ದರೇನಂತೆ, ನನಗೆ ಮತ್ತು ನಾಳೆ ಹುಟ್ಟಲಿರುವ ನಮ್ಮ ಮಕ್ಕಳಿಗೆ ಬೇಕು. ಏನಿದ್ದರೂ ಸಮಪಾಲೇ ಆಗಲಿ. ಮಾವನವರು ಹೇಗೆ ಪಾಲು ಮಾಡಿಕೊಡ್ತಾರೋ ಹಾಗೇಯೇ ಆಗಲಿ ಅಂತಾಳೆ.ಇದಕ್ಕೆ ತಮ್ಮಂದಿರು ಒಪ್ಪುವುದಿಲ್ಲ. ಕಾರಣ ಹಿರಿಯ ಸೊಸೆಗೆ ಈಗಾಗಲೆ ಸಾಕಷ್ಟು ಒಡವೆಗಳನ್ನು ಮಾಡಿಸಲಾಗಿದೆ. ಅಲ್ಲದೆ ಅಣ್ಣನಿಗೆ ಪಟ್ಟಣದಲ್ಲೊಂದು ಸೈಟ್ ನೀಡಲಾಗಿದೆ. ಹಾಗಾಗಿ ಆಸ್ಥಿಯಲ್ಲಿ ತಮಗಿಂತ ಅಣ್ಣನಿಗೆ ಕಡಿಮೆ ನೀಡಬೇಕು ಎನ್ನುವುದು ತಮ್ಮಂದಿರ ಹಾಗೂ ಅವರ ಹೆಂಡತಿಯರ ಒಕ್ಕೊರಲಿನ ಮಾತು. ಇದಕ್ಕೆ ಸುತಾರಾಂ ಒಪ್ಪದ ಸಂಗಪ್ಪ, ಹಾಗಿದ್ದರೆ ನಾವು ಬದುಕಿರುವ ತನಕ ಪಾಲೇ ಬೇಡ ಎಂದು ಎದ್ದೇಳುತ್ತಾನೆ..ಮಾವನವರೇ ಮಾಡಲಿ ಎಂಬ ಹಿರಿ ಸೊಸೆಯ ಮಾತುಗಳು ಇತರ ಮೂರು ಸೊಸೆಯರು ಹಾಗೂ ಅವರ ಗಂಡನ್ದರಿಗೂ ಸರಿ ಎನಿಸುತ್ತದೆಸೋಮಪ್ಪನಿಗೂ ಈ ಮಾತುಗಳಿಂದ ಬಲು ಖುಷಿ.ಕಷ್ಟಪಟ್ಟು ಗಳಿಸಿದ ಆಸ್ತಿ ಚೂರಾಗಬಾರದು,ಏನಾದರೂ ಉಪಾಯ ಮಾಡಿ ಇವರು ಕೂಡಿ ಬಾಳುವ ಹಾಗೇ ಮಾಡಬೇಕು ಎಂದು ಆಲೋಚಿಸ ತೊಡಗುತ್ತಾನೆ.ಆಗ ಅಲ್ಲಿಗೆ ಸರಿಯಾಗಿ ಹಿರಿಯರಾದ ಚಾಮಯ್ಯ ಮೇಷ್ಟ್ರು ಬರುತ್ತಾರೆ.ಮೇಷ್ಟ್ರೊಂದಿಗೆ ಒಬ್ಬ ಸೋಮಪ್ಪನವರ ದೊಡ್ಡ ಮಗನಷ್ಟೇ ಪ್ರಾಯದ, ಸೋಮಪ್ಪನವರ ಮುಖಭಾವವನ್ನೇ ಹೋಲುವ, ನಡುವಯಸ್ಸಿನ ಯುವಕ, ಜೊತೆಗೆ ಒಬ್ಬ ಸುಮಾರು ಅರುವತ್ತೈದರ ಆಸುಪಾಸಿನ ಅಜ್ಜಿಯೂ ಬರುತ್ತಾರೆ! ಆ ಮುದುಕಿಯ ಮುಖ ನೋಡಿದ ಕೂಡಲೇ ಸೋಮಪ್ಪನ ಮುಖ ಬಿಳಿಚಿಕೊಳ್ಳಲು ಪ್ರಾರಂಭಿಸುತ್ತದೆ, ಆ ಮುದುಕಿ ಉಲಿಯುತ್ತಾಳೆ, "ನೋಡ್ರಪ್ಪಾ ಈ ವಯ್ಯ ಮದ್ವೆ ಆಗೋಕಿಂತ ಮುಂಚೆ ನನ್ನ ಮದ್ವೆ ಆಗ್ತೀನಿ ಅಂತ ನಂಬ್ಸಿ ಏನೆಲ್ಲ ಮಾಡ್ಬಿಟ್ಟ, ಅದ್ರಲ್ಲಿ ಹುಟ್ಟಿರೋ ಮಗೂನೇ ಇವನು, 'ವಿನೋದಪ್ಪ' ಅಂತ ಹೆಸರು, ಆದ್ರಿಂದ ನಂಗೂ ಈ ಆಸ್ತೀಲಿ ಸಮವಾದ ಪಾಲು ಬೇಕು" ಅಂತ ತನ್ನ ವಾದ ಮಂಡಿಸ್ತಾಳೆ!.ಧಿಡೀರನೆ ತನ್ನ ಮಗನೊ೦ದಿಗೆ ಬ೦ದು ಆಸ್ತಿಯಲ್ಲಿ ಪಾಲು ಕೇಳತೊಡಗಿದ ಅವಳ ಧಾರ್ಷ್ಟ್ಯಕ್ಕೆ ಬೆಚ್ಚಿ ಬಿದ್ದ ಸೋಮಪ್ಪ, ಎದೆ ಹಿಡಿದುಕೊ೦ಡು ಧಡಾರನೆ ಕುಸಿದು ಬೀಳುತ್ತಾನೆ. ಅಪ್ಪ ಬಿದ್ದದ್ದು ಕ೦ಡ ಗ೦ಡು ಮಕ್ಕಳೆಲ್ಲ ಒಟ್ಟಿಗೆ ಸೇರಿ ಆ ಮುದುಕಿಯನ್ನೂ, ವಿನೋದಪ್ಪನನ್ನೂ ಹಿಗ್ಗಾ ಮುಗ್ಗಾ ಥಳಿಸಲು ಸುರು ಮಾಡುತ್ತಾರೆ.ಅಷ್ಟೊತ್ತಿಗಾಗಲೇ ಊರಿನ ಹಲವಾರು ಮಂದಿ ಅಲ್ಲಿಗೆ ಜಮಾಯಿಸಿದ್ದರು. ಜಗಳ ಬಿಡಿಸಿ, ಪಂಚಾಯ್ತಿಯಲ್ಲಿ ಇದನ್ನು ತೀರ್ಮಾನ ಮಾಡೋಣವೆಂದು ನಿರ್ಧಾರ ಮಾಡಿದ್ರು..................................
Comments
ಉ: ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ
In reply to ಉ: ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ by gopinatha
ಉ: ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ
In reply to ಉ: ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ by gopinatha
ಉ: ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ
ಉ: ಸಂಪದಿಗರು ಹೆಣೆದ ಕಥೆಗೊಂದು.....ಮುಕ್ತಾಯ ಕೊಡಿ