ಸಂಪಿಗೆಯೊ? ಮಲ್ಲಿಗೆಯೊ?

ಸಂಪಿಗೆಯೊ? ಮಲ್ಲಿಗೆಯೊ?

ರೈಲು ಬೆಳಿಗ್ಗೆ 8 ಗಂಟೆಗೆ ಊರಿಗೆ ಬಂದು ಸೇರಲಿತ್ತು. ಊರಿನ ಖ್ಯಾತ ನಾಯಕ ಮೋಹನದಾಸ್ ಅವರು ರಾಜಧಾನಿಯಿಂದ ವಾಪಸ್ಸು ಬರಲಿದ್ದರು. ಎಲ್ಲರಿಗೂ ಕುತೂಹಲ! ಇಂದು ಅವರ ಕೊರಳಿನಲ್ಲಿ ಯಾವ ಹೂವಿನ ಹಾರ ಇರುತ್ತದೆ? ಸಂಪಿಗೆಯೇ? ಮಲ್ಲಿಗೆಯೇ? ಗೋಪಾಲದಾಸರು ತಾವು ರೈಲಿನಿಂದ ಇಳಿಯುವಾಗ ತಮ್ಮ ಇತ್ತೀಚಿನ ಪಕ್ಷದ ಹೂವಿನ ಹಾರವನ್ನು ಹಾಕಿಕೊಂಡಿರುತ್ತೇನೆ ಎಂದು ಪೋನ್ ಮಾಡಿದ್ದರು

ನಮ್ಮ ರಾಜ್ಯದಲ್ಲಿ ಎರಡು ರಾಜಕೀಯ ಪಕ್ಷಗಳು – ಸಂಪಿಗೆ ಮತ್ತು ಮಲ್ಲಿಗೆ – ಇರುವುದು ನಿಮಗೆ ಗೊತ್ತು. ಹಳೆಯವರನ್ನು ಕೇಳಿದರೆ ಹಿಂದೆ ಒಂದು ಕಾಲದಲ್ಲಿ ಸಂಪಿಗೆ ಪಕ್ಷ ಮಾತ್ರ ಇದ್ದು ಕೆಲ ಸಮಯದ ನಂತರ ಒಂದಿಬ್ಬರು ಕಾರ್ಲ್ ಮಾರ್ಕ್ಸ್ ಓದಲು ಶುರುಮಾಡಿದಾಗ ಮನಸ್ತಾಪಗಳು ಹುಟ್ಟಿಕೊಂಡು ಕೆಲವರು ಬೇರೆ ಹೋಗಿ ಮಲ್ಲಿಗೆ ಪಕ್ಷ ಹುಟ್ಟಿತಂತೆ. ಎರಡು ಗುಂಪುಗಳ ಆದರ್ಶಗಳಲ್ಲಿ ಮತ್ತು ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳು ಕಂಡುಬಂದರೂ  ಆಚರಣೆಯಲ್ಲಿ ಅಷ್ಟೇನೂ ಬೇರೆ ಇರಲಿಲ್ಲ. ಚುನಾವಣೆಗಳಲ್ಲಿ ಕೆಲವು ಬಾರಿ ಸಂಪಿಗೆ, ಕೆಲವು ಬಾರಿ ಮಲ್ಲಿಗೆ ಗೆಲ್ಲುತ್ತಿತ್ತು  . ಯಾವ ಚುನಾವಣೆಯಲ್ಲೂ ಯಾವ ಪಕ್ಷ  ಖಚಿತವಾಗಿ ಬರುತ್ತದೆ ಎಂದು ಯಾರಿಗೂ ಹೇಳಲು ಬರುತ್ತಿರಲಿಲ್ಲ .

ಮೋಹನದಾಸರು ದೊಡ್ಡ ನಾಯಕರು. ಬಹಳ ಹೆಸರು ಮಾಡಿದವರು. ಕೆಲವೊಮ್ಮೆ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಆದರೆ ಈ ಕಾಲದಲ್ಲಿ ಅಂತವರೂ ನಿಶ್ಚಿಂತೆಯಿಂದ ಇರಲು ಸಾಧ್ಯವಿಲ್ಲ. ಕೇಂದ್ರದ ನೇತಾರ ಜತೆ ಸಾಮರಸ್ಯದಿಂದ ಇರುವುದಲ್ಲದೆ ರಾಜ್ಯದ ರಾಜಕೀಯವನ್ನು ಹುಷಾರಾಗಿ ಗಮನಿಸುತ್ತಿರಬೇಕಾಗುತ್ತದೆ. ದೆಹಲಿಗೆ ಹೋಗಿ ಅಲ್ಲಿಯ ಹೈ ಕಮಾಂಡ್ ಅನ್ನು ಕಂಡುಬರುತ್ತಲೇ ಇರಬೇಕು. ತಿಂಗಳಿಗೆ ಒಂದು ಬಾರಿಯಂತೂ ದೆಹಲಿ ಪ್ರಯಾಣ ಮಾಡಬೇಕು. ಹೈ ಕಮಾಂಡು ನಮ್ಮ ಆಂಜನೇಯ ದೇವರ ತರಹ. ಹೂವು ಯಾವ ಕಡೆ ಬೀಳುತ್ತದೋ ಹೇಳಲಾರದು. ಗೋಪಾಲದಾಸರಿಗೆ  ದೇಶಸೇವೆ ಮುಖ್ಯವಾಗಿದ್ದಿತು. ಆದ್ದರಿಂದಾಗಿ ಒಂದು ಪಕ್ಷ ಅವರನ್ನು ಕಡೆಗಣಿಸಿದಾಗ ಅದನ್ನು ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗುತ್ತಿದ್ದರು. ಮತ್ತೆ ವಾಪಸ್ಸು ಬರುತ್ತಿದ್ದರು. ಅವರ ಧ್ಯೇಯವನ್ನು ತಿಳಿಯದೆ ಜನರು ಮತ್ತು ಮಾಧ್ಯಮದವರು ಅವರನ್ನು ದೂಷಿಸುತ್ತಿದ್ದರು. ಆದರೆ ದೇಶಸೇವೆಯೇ ಮುಖ್ಯವಾದ ಗೋಪಾಲದಾಸರು  ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ದಪ್ಪ ಚರ್ಮದವನು ಎಂದು ಬಯ್ಯುವುವರು ಬಹಳ ಜನರು ಇದ್ದರೂ, ಊರಿನವರು ಅವರನ್ನು ಗೆಲ್ಲಿಸುತ್ತಿದ್ದರು. ಈ ಬಾರಿ ಚುನಾವಣೆಗೆ ಗೋಪಾಲದಾಸರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಸ್ವತ: ಅವರಿಗೇ ತಿಳಿಯದ ವಿಷಯ. ಈಗೇನೋ ಸಂಪಿಗೆ ಪಕ್ಷದಲ್ಲಿ ಇದ್ದರೂ, ಅವರಿಗೆ ಟಿಕೆಟ್ ಸಿಕ್ಕದಿದ್ದರೆ ಮಲ್ಲಿಗೆಗೆ ಹಾರುತ್ತಾರೆ ಎಂದು ಎಲ್ಲರಿಗೂ ಗೊತ್ತು. ಒಟ್ಟಿನಲ್ಲಿ ಸಾರ್ವಜನಿಕರಿಗೆ ಕುತೂಹಲ, ತಮಾಷೆ ಕೂಡ.

ಗೋಪಾಲದಾಸರಿಗಾಗಿ ಮೂರು ಗುಂಪುಗಳು ರೈಲ್ವೆ ನಿಲ್ದಾಣದಲ್ಲಿ ಕಾದಿದ್ದವು. ಒಂದು ಸಂಪಿಗೆ ಪಕ್ಷದವರು, ಇನ್ನೊಂದು ಮಲ್ಲಿಗೆ ಗುಂಪಿನವರು. ಗೋಪಾಲದಾಸರು ಮಲ್ಲಿಗೆ ಗುಂಪಿಗೆ ಸೇರಿದ್ದಾರೆ ಎಂದು ತಿಳಿದರೆ ಸಂಪಿಗೆ ಪಕ್ಷದವರು ಹೊರಗೆ ಹೋಗುವರಿದ್ದರು. ಹಾಗೇ ಮಲ್ಲಿಗೆ ಪಕ್ಷದವರು ಕೂಡ. ಮತ್ತೊಂದು ಗುಂಪು ಕೂಡ ಇದ್ದಿತು. ಇದು ಗೋಪಾಲದಾಸರ  ಸ್ವಂತ ಗುಂಪು; ನಗರ ಸಭೆಯ ಚುನಾವಣೆಗೆ ನಿಲ್ಲುತ್ತಿದ್ದ ಸಮಯದಿಂದ ಅವರ ಜೊತೆ ಇರುತ್ತಿದ್ದವರು. ಪ್ರತಿ ರಾಜಕಾರಣಿಗೂ ಕುಟುಂಬದ ತರಹ ಅವರದ್ದೇ ಎನ್ನುವ ಗುಂಪು ಒಂದು ಇದ್ದೇ ಇರುತ್ತದೆ. ಅವರವರ ಪಕ್ಷಗಳ ಬಳಿ ಅವರವರ ಬಾವುಟಗಳಿದ್ದವು. ಆದರೆ ಮೂರನೆಯ ಗುಂಪಿನಲ್ಲಿ ಎರಡೂ ಪಕ್ಷದ ಬಾವುಟಗಳಿದ್ದವು. ಏನಾಗುತ್ತದೆ ಎನ್ನುವ  ಪ್ರಕಾರ ಕ್ಷಣಮಾತ್ರದಲ್ಲಿ ಯಾವ ಬಾವುಟವನ್ನು ಬೇಕಾದರೂ ಮೇಲೆ ತರುತ್ತಿದ್ದರು.  

ರೈಲು ಬಂದಿತು. ಮೋಹನದಾಸರು 2 ನೆಯ ದರ್ಜೆಯ ಡಬ್ಬದ ಬಾಗಿಲ್ಲಿ ನಿಂತಿದ್ದರು (ಹಿಂದಿನ ನಿಲ್ದಾಣದ ತನಕ ಮೊದಲನೆಯ ದರ್ಜೆಯ ಡಬ್ಬದಲ್ಲಿದ್ದು ನಂತರ ಎರಡನೆಯ ದರ್ಜೆಯ ಡಬ್ಬಕ್ಕೆ ಹತ್ತುವುದನ್ನು ಎಲ್ಲ ರಾಜಕಾರಣಿಗಳೂ ಮಾಡುತ್ತಿದ್ದರು). ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರು. ಅವರ  ಕೊರಳು ಬರಿದಾಗಿತ್ತು. ಯಾವ ಹೂವಿನ ಹಾರವೂ  ಇರಲಿಲ್ಲ. ಜನರಿಗೆ ತಬ್ಬಿಬ್ಬಾಯಿತು. ಅವರು ಇಳಿದು ’ನಾನು ಇಂದಿನಿಂದ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ’ ಎಂದು ಘೋಷಿಸಿದರು. ಇದನ್ನು ಕೇಳಿದ ತಕ್ಷಣವೇ ಸಂಪಿಗೆ ಮತ್ತು ಮಲ್ಲಿಗೆ ಗುಂಪಿನ ವರೆಲ್ಲಾ ಹೊರಟು ಹೋದರು. ನಿಟ್ಟುಸಿರು ಬಿಡುತ್ತಾ ಗೋಪಾಲದಾಸನವರು ತಮ್ಮದೇ ಗುಂಪಿನ ಕಡೆ ನಡೆದರು. ಆದರೆ ಆ ಗುಂಪೂ ಚದುರತೊಡಗಿತ್ತು . ಕಡೆಗೆ ಗೋಪಾಲದಾಸರು ಒಬ್ಬರೇ ಆದರು.

Rating
Average: 4.3 (3 votes)