ಸಂಬಂಧಗಳ ಸುಳಿಯಲ್ಲಿ.........

ಸಂಬಂಧಗಳ ಸುಳಿಯಲ್ಲಿ.........

ನಾನು ಮೊದಲು ಬರೆದ ಬರಹದಲ್ಲಿ ಸಂಬಂಧಗಳು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುವುದೆಂದಿದ್ದೆ... ಅವೆಲ್ಲ ಪ್ರಾಕೃತಿಕವಾಗಿ, ಸೃಷ್ಟಿಯ ರಹಸ್ಯದಲ್ಲಿ ತಾನೇ ತಾನಾಗಿ ಕೊಂಡಿಯಾಗುವ ಸಂಬಂಧಗಳು........ ಆದರೆ ನಾನು ಒಬ್ಬ ವ್ಯಕ್ತಿಯಾಗಿ ಬೆಳೆದಂತೆಲ್ಲಾ.. ನಮ್ಮತನ, ನಮ್ಮದೇ ಛಾಪು, ನಮ್ಮದೇ ವ್ಯಕ್ತಿತ್ವ ರೂಪುಗೊಳ್ಳುತ್ತಾ ಹೋಗುತ್ತದೆ..... ಈ ಸಂಬಂಧಗಳಲ್ಲೇ ಅತ್ಯಂತ ಭಾವುಕವಾದ, ನವಿರಾದ, ಅತಿ ಮುಖ್ಯವಾದ ಸಂಬಂಧವೆಂದರೆ ನನ್ನ ಜೊತೆಗಿನ, ನನ್ನ ಅಂತರಂಗದ ಜೊತೆಗಿನ, ನನ್ನದೇ ಸಂಬಂಧ.... ಅಂದರೆ ಈ "ನಾನು" ಯಾರು ? ನಾ ಏನನ್ನು ಯೋಚಿಸುತ್ತೇನೆ ? ಹಾಗೇಕೆ ಯೋಚಿಸುತ್ತೇನೆ ? ಹೀಗೇಕೆ ಕೋಪ ಮಾಡಿಕೊಳ್ಳುತ್ತೇನೆ ? ಹೀಗೇಕೆ ಭಾವುಕಳಾಗುತ್ತೇನೆ ? ಇದೆಲ್ಲಾ ನಾವು ತಿಳಿಯುವ ಪ್ರಯತ್ನ ಮಾಡುತ್ತಾ ಬಂದಲ್ಲಿ, ನಮಗೇ ಅರಿವಾಗದಂತೆ ನಮ್ಮೊಳಗಿರುವ "ನಮ್ಮತನ"ದ ಜೊತೆ ನಮಗೊಂದು ನವಿರಾದ ಸಂಬಂಧ ಏರ್ಪಟ್ಟಿರುತ್ತದೆ...... ಈ ಸಂಬಂಧ ನಮ್ಮ ಆತ್ಮದ ಜೊತೆಗಿನದಾಗಿರುತ್ತದೆ..... ನಾನು ನನ್ನ ಜೊತೆಯೇ ಮಾತನಾಡಿಕೊಳ್ಳುತ್ತಾ, ನನ್ನ ಮನಸ್ಸನ್ನೇ ಪ್ರಶ್ನಿಸುತ್ತಾ, ಆತ್ಮ ಕೇಳಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ ನಮ್ಮ ಆತ್ಮದ ಸಂಬಂಧ ಬೆಸೆಯ ತೊಡಗುತ್ತದೆ.....  ಯಾವಾಗ ನಾವು ನಮ್ಮ ಆತ್ಮದ ಜೊತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳ ತೊಡಗುತ್ತೇವೋ ಆಗ, ನಮ್ಮ ಸಂಬಂಧ ಪರಮಾತ್ಮನ ಜೊತೆ ಸೇರ ತೊಡಗುತ್ತದೆ......  ಈ ಒಂದೇ ಒಂದು ಸಂಬಂಧ ನಮಗೆ ಪ್ರಪಂಚದ ಎಲ್ಲಾ ಸುಖ ಸಂತೋಷಗಳನ್ನೂ ಕೊಡುತ್ತದೆ..... ಬೇರೆ ಯಾವುದೇ ರೀತಿಯ ಸಂಬಂಧವೂ ಕೊಡಲಾರದಂಥಹ ಸುಖ, ಶಾಂತಿ, ನೆಮ್ಮದಿಯನ್ನು ನಮಗೆ ಈ ನಮ್ಮ ಆತ್ಮದ ಜೊತೆಗಿನ ಸಂಬಂಧ ಕೊಡುತ್ತದೆ.......

ಈ ಆತ್ಮದ ಅಥವಾ ನನ್ನತನದ ಜೊತೆಗಿನ ಸಂಬಂಧವನ್ನು ನಾವು ಬಹುಶ: ಹಸಿವು ಮತ್ತು ಆಹಾರಕ್ಕೆ ಹೋಲಿಸಬಹುದೇನೋ..... ಹಸಿವಾದರೆ ಊಟ ಮಾಡುತ್ತೇವೆ.... ಹಾಗೇ ಜ್ಞಾನ ಹೆಚ್ಚಿಸಲು ಓದ ತೊಡಗುತ್ತೇವೆ... ಅದೇ ರೀತಿ ನಮ್ಮ ಆತ್ಮದ ಹಸಿವು ತಣಿಸಲು ನಮಗೆ ಆಧ್ಯಾತ್ಮಿಕ ಜ್ಞಾನ, ದೇವರ ಜೊತೆಗಿನ ಸಂವಾದ ಅವಶ್ಯಕವಾಗುತ್ತದೆ.  ಇದನ್ನು ನಾವು "ಧ್ಯಾನ"ದ ಮೂಲಕ ಕಂಡುಕೊಳ್ಳಬಹುದು......

ನನ್ನತನ ಎಂದರೆ ಬರಿಯ ನಾನೆಂಬ ಅರಿವು ಮಾತ್ರ ಅರಿಯಬೇಕು..... ಅಹಂಕಾರ ಅಥವಾ ಅಹಂ ಬೆಳೆಸಿಕೊಳ್ಳುವುದಲ್ಲ..... ಅಹಂ ತ್ಯಜಿಸಿದಾಗಷ್ಟೇ ನಮ್ಮನ್ನು ನಾವು ಅರಿಯಬಹುದು ಮತ್ತು ಪರಮಾತ್ಮನಿಗೂ ಹತ್ತಿರವಾಗಬಹುದು.......

Rating
No votes yet