ಸಂಭ್ರಮಿಸುತ್ತೇವೆ ಹಿಂದಿನಂತೆಯೇ!

ಸಂಭ್ರಮಿಸುತ್ತೇವೆ ಹಿಂದಿನಂತೆಯೇ!

ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆ
ಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ 
ನಮ್ಮ ಜೊತೆ ಜೊತೆಗೆ ಸಾಗುತ್ತ ಇರುತ್ತಾರೆ
ಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆ

ಅವರಿಂದಾಗಿ ನಮ್ಮಲ್ಲಿ ಹಿರಿತನ ಮೈಗೂಡುತ್ತದೆ
ಬಾಲ್ಯ ಮರೆಯಾಗಿ ಯೌವನ ವೃದ್ಧಾಪ್ಯ ಕಾಲಿಡುತ್ತದೆ
ಅವರ ಅಸ್ಥಿತ್ವ ನಮ್ಮ ಬಾಳಿನ ಅಂಗವಾಗಿ ಉಳಿಯುತ್ತದೆ
ಅವರಿಂದಾಗಿಯೇ ನಮ್ಮ ಬಾಳಿಗೊಂದು ಅಳತೆ ದೊರೆಯುತ್ತದೆ

ಅಂತೆಯೇ ಸಿಗುತ್ತಾರೆ ಈ ಪಯಣದಲ್ಲಿ ಸಹ ಪಯಣಿಗರು
ಕೆಲವರು ಕೆಲವೇ ಘಂಟೆಗಳಷ್ಟು ನಮಗೆ ಜೊತೆ ನೀಡುವವರು
ಕೆಲವರು ದಿನ ತಿಂಗಳು ವರುಷಗಳ ಕಾಲ ನಮ್ಮ ಜೊತೆ ಕಳೆಯುವವರು
ಎಲ್ಲರೂ ಒಂದೊಂದು ತೆರನಾದ ನೆನಪನ್ನು ಮನದ ಪರದೆಯ ಮೇಲಿರಿಸುವವರು

ನಮ್ಮ ಜೀವನಕ್ಕೆ ಅಳತೆ ನೀಡಿ ಮರೆಯಾಗುವವು ವರುಷಗಳು 
ನಮ್ಮ ಪಯಣದಲ್ಲಿ ಸಹಪಯಣಿಗರಾಗಿದ್ದು ಮರೆಯಾದವರ ನೆನಪುಗಳು
ಇವರೆಲ್ಲರಿಗೂ ತಮ್ಮ ತಮ್ಮ ಸ್ಥಾನದಲ್ಲಿ ಇಹುದು ತಮ್ಮದೇ ಗೌರವಾದರಗಳು 
ನೆನಪಲ್ಲುಳಿಯುವ ಮರೆಯಾದ ಆತ್ಮೀಯರಂತೆಯೇ ಮರೆಯಲಾಗದ ಈ ವರುಷಗಳು

ಇನ್ನು ಎರಡು ದಿನಗಳಲ್ಲಿ ಮರೆಯಾಗಲಿಹುದು ಈ ವರುಷವೂ ಉಳಿದವಂತೆಯೇ
ಮೌನ ಸಂಗಾತಿಯಾಗಿ ಇದ್ದು ಇದೀಗ ತಾನು ಕಣ್ಮರೆಯಾಗುವುದು ಮೌನವಾಗಿಯೇ
ಹೋಗುತಿಹುದರ ಅಗಲಿಕೆಯ ಕೊರಗಿನಲ್ಲಿ ನಾವು ಯಾರೂ ಇರುವುದಿಲ್ಲ ಎಂದಿನಂತೆಯೇ
ಹೊಸ ವರುಷದ ಆಗಮನದ ಖುಷಿಯನ್ನು ಹಂಚಿಕೊಂಡು ಸಂಭ್ರಮಿಸುತ್ತೇವೆ ಹಿಂದಿನಂತೆಯೇ

Rating
No votes yet

Comments