ಸಂವಾದ ಸಂಸ್ಕೃತಿ

ಸಂವಾದ ಸಂಸ್ಕೃತಿ

ಅವನತಿಗೊಳ್ಳುತ್ತಿರುವ ಸಂವಾದ ಸಂಸ್ಕೃತಿ...

'ಆವರಣ' ಕೃತಿಯ ಬಗ್ಗೆ ಲೇಖನ ಬರೆಯುವ ನೆಪದಲ್ಲಿ ಹಲವರು ಅನಂತಮೂರ್ತಿ ಮೇಲೆ ವೈಯುಕ್ತಿಕ ದಾಳಿ ನಡೆಸುವ ಯತ್ನ ಮಾಡಿದ್ದಾರೆ. ಇದು ಮತ್ತೆ 'ಆವರಣ' ಕೃತಿಯ ಹಿಂದಿರುವ ರಾಜಕೀಯ ಕಾರ್ಯಕ್ರಮದ ಮುಂದುವರೆದ ಭಾಗವೇ ಆಗಿದೆ. ಅನಂತಮೂರ್ತಿ ಟೀಕಾತೀತರೇನಲ್ಲ. ಅನೇಕ ಬಾರಿ ಅಧಿಕಾರಸ್ಥರ ದಾಕ್ಷಿಣ್ಯಕ್ಕೋ, ಸುಲಭ ಜನಪ್ರಿಯತೆಗಾಗಿಯೋ ವಿರೋಧಾಭಾಸಗಳ ಹೇಳಿಕೆಗಳನ್ನು ನೀಡಿ ಅವರ ಗೆಳೆಯರಿಂದಲೂ, ವಿರೋಧಿಗಳಿಂದಲೂ ಟೀಕೆಗೊಳಗಾಗಿದ್ದಾರೆ. ಆದರೆ, 'ಆವರಣ' ಕುರಿತ ಚರ್ಚೆಯ ಸಂದರ್ಭದಲ್ಲಿ ಸಾಹಿತ್ಯ ವಿಮರ್ಶೆಯ ಪರಿಧಿ ದಾಟದೆ ಭೈರಪ್ಪನವರ ಬಗ್ಗೆ ಅವರು ಮಾಡಿದ ಟೀಕೆ, ಸಾಹಿತ್ಯ ವಿಮರ್ಶೆಯ ಚೌಕಟ್ಟಿನಲ್ಲಿ ನಡೆಯದೆ, ಅನಂತಮೂರ್ತಿಯವರ ಮೇಲಿನ ಯಾವುದೋ ಹಳೆಯ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ನಡೆಯುತ್ತಿರುವುದು ವಿಷಾದಕರ. ಇದಕ್ಕೊಂದು ಒರಟಾದ ಉದಾಹರಣೆಯೆಂದರೆ, ಈಚೆಗೆ 'ವಿಕ್ರಾಂತ ಕನಾಟಕ' ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ(ಇದು ಅಂತರ್ಜಾಲದಲ್ಲೂ ಲಭ್ಯವಿದೆಯಂತೆ) 'ಸನಾತನಿ' ಅಥವಾ 'ಜೆಹಾದಿ' ಶಬ್ದಗಳನ್ನು ಉಡಾಫೆಯಿಂದ ಬಳಸಿದ್ದ ಶೀರ್ಷಿಕೆಯಡಿ ಪ್ರಕಟವಾದ ಪ್ರೇಮ ಶೇಖರ ಎಂಬುವವರ ಲೇಖನ.
ಸಂಪಾದಕರಿಂದ 'ಜಿಜ್ಞಾಸೆ'ಯೆಂಬ ಅವಸರದ ಅಭಿದಾನ ಪಡೆದಿರುವ ಈ ಬರಹ; ಅಸಭ್ಯ ಭಾಷೆಯಿಂದಲೂ, ಅದಕ್ಕೆ ಕಾರಣವಾದ ಒರಟೊರಟಾದ ವಾದ ಸರಣಿಯಿಂದಲೂ ಕೂಡಿ, ಓದಿದವರ ಬಾಯಲ್ಲಿ ಕೆಟ್ಟ ವಾಸನೆಯನ್ನಷ್ಟೇ ಬಿಟ್ಟುಹೋಗುತ್ತದೆ. ಅನಂತಮೂತಿ ಬುದ್ಧಿಜೀವಿ ಅಲ್ಲ, ಅವರು ಜ್ಞಾನಪೀಠಕ್ಕೆ ಅರ್ಹರಲ್ಲ; ಭೈರಪ್ಪ ಸತ್ಯವನ್ನೇ ಬರೆದಿದ್ದಾರೆ, ಇಸ್ಲಾಂನ್ನು ಅವರು ಅದಿರುವ ಹಾಗೆಯೇ ಚಿತ್ರಿಸಿದ್ದಾರೆ ಎಂದು ಯಾರಿಗಾದರೂ ಅನ್ನಿಸಿದ್ದರೆ, ಅದನ್ನು ಹೇಳುವುದರಲ್ಲಿ ತಪ್ಪೇನಿಲ್ಲ. ಅದು ಒಳ್ಳೆಯ ಚರ್ಚೆಗೆ ಆಹ್ವಾನವೂ ಆಗುತ್ತದೆ. ಆದರೆ, ಚರ್ಚೆಯ ಸಂದರ್ಭಕ್ಕೆ ಸಲ್ಲದ ಹಾಗೂ ಚರ್ಚೆಯ ಚೌಕಟ್ಟಿನಲ್ಲಿ ಸಮರ್ಥನೆಯೇ ಇಲ್ಲದಂತಹ ವೈಯುಕ್ತಿಕ ಅಭಿಪ್ರಾಯಗಳನ್ನು ತಮ್ಮ ವಾದ ಮಂಡಿಸಲು ಬಳಸಿಕೊಂಡು, ಅಂತಿಮ ತೀರ್ಪು ನೀಡುವ ಸರ್ವಜ್ಞ ಗರ್ವದ ಶೈಲಿಯಲ್ಲಿ ಬರೆಯುವುದು, ಈಗಾಗಲೇ ಕಲುಷಿತಗೊಂಡಿರುವ ಸಾಂಸ್ಕೃತಿಕ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸಬಲ್ಲುದು ಮಾತ್ರ.
ಇಂದು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಚರ್ಚೆಯಾಗುತ್ತಿರುವುದು 'ಆವರಣ' ಕಾದಂಬರಿಯೋ ಅಲ್ಲವೋ ಎಂಬುದರ ಬಗ್ಗೆ. ಹಾಗೇ, ಭೈರಪ್ಪ ಕಾದಂಬರಿಕಾರರೇ ಅಲ್ಲವೆಂದು ಅನಂತಮೂರ್ತಿ ಹೇಳಿದ್ದಾರೆಂದು ವರದಿಯಾಗಿರುವ ಮಾತಿನ ಬಗ್ಗೆ. ಅನಂತ ಮೂರ್ತಿಯವರಿಗೆ ಭೈರಪ್ಪ ಕಾದಂಬರಿಕಾರ ಅಲ್ಲವೇ ಅಲ್ಲ ಎನ್ನಿಸಿದ್ದರೆ, ಅದನ್ನು ಅವರು ಯಾಕೆ ಹೇಳಬಾರದು? ತಮಗೆ ಏಕೆ ಹಾಗೆ ಅನ್ನಿಸಿದೆ ಎನ್ನ್ನುವುದನ್ನು ಅವರು 'ಗೃಹಭಂಗ'ವನ್ನು ಮೆಚ್ಚುತ್ತಲೇ ವಿವರಿಸಿರುವುದನ್ನು ಹಲವಾರು ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾಗಿರುವ ಅವರ ಭಾಷಣದ ಪೂರ್ಣ ಪಾಠವನ್ನು ಓದಿ ತಿಳಿಯಬಹುದು. ಜೊತೆಗೆ 'ಆವರಣ' ಕುರಿತು ಅನಂತಮೂರ್ತಿ ಮಾತಾಡುವ ಬಹುಮುನ್ನವೇ ಬಂದಿರುವ ಎಲ್ಲ ಪತ್ರಿಕಾ ವಿಮರ್ಶೆಗಳು(ಇವರೆಲ್ಲರೂ ಭೈರಪ್ಪ ವಿರೋಧಿಗಳೇನೂ ಅಲ್ಲ) ಹಾಗೂ ಅವಕ್ಕೆ ಬಂದಿರುವ ಪ್ರತಿಕ್ರಿಯೆಗಳು, ಈ ಕೃತಿ ಕಾದಂಬರಿಯಾಗಿರುವ ಬಗ್ಗೆ ತಮ್ಮದೇ ರೀತಿಯಲ್ಲಿ ಅನುಮಾನಗಳನ್ನು ವ್ಯಕ್ತಪಡಿಸಿರುವುದನ್ನೂ ನಾವು ಗಮನಿಸಬಹುದು.
ಇಷ್ಟಾದರೂ, ಅದನ್ನು ಕಾದಂಬರಿಯೆಂದು ಸಮರ್ಥಿಸುವ ಹಾಗೂ ಅನಂತಮೂರ್ತಿಯವರ ವಾದವನ್ನು ಅಲ್ಲಗೆಳೆಯುವ ಸಾಹಿತ್ಯಿಕ ಪ್ರಯತ್ನಗಳನ್ನು ಯಾರಾದರೂ ಮಾಡಿದರೆ, ಅದನ್ನು ಪರಿಶೀಲಿಸಲೇ ಬೇಕಾಗುತ್ತದೆ, ಆದರೆ ಅಂತಹ ಪ್ರಯತ್ನಗಳನ್ನು, ಅನಂತಮೂರ್ತಿ ಬುದ್ಧಿಜೀವಿಯಲ್ಲ, ಮತ್ತೆಂತಹುದೋ ಎಂದು ಬೀದಿ ಬದಿಯ ಹೊಲಸು ಭಾಷೆಯಲ್ಲಿ ತೆಗಳುತ್ತಾ; ಅನ್ಯಮತಗಳ ಧಾರ್ಮಿಕ ಪರಿಕಲ್ಪನೆಗಳನ್ನು ಅಸಹ್ಯ ಬರುವಂತೆ ನಿರೂಪಿಸುತ್ತಾ(ಇದನ್ನು ಇನ್ನಷ್ಟು ಅಸಹ್ಯವಾಗಿ ನಮ್ಮ ವಾಲ್ಮೀಕಿ ರಾಮಾಯಣದ ಹಾಗೂ ಗರುಡ ಪುರಾಣಗಳಂತಹ ಅನೇಕ ಪುರಾಣಗಳ ಅನೇಕ ಪ್ರಸಂಗಗಳಿಗೆ ಸಂಬಂಧಿಸಿದಂತೆಯೂ ಮಾಡಬಹುದು); ಹಿಂದೂ ಧರ್ಮವನ್ನು ವಿಮರ್ಶಿಸುವವರನ್ನು, ಅವರು ಅನ್ಯಮತಗಳನ್ನು ವಿಮರ್ಶಿಸುವುದಿಲ್ಲ ಎಂಬ ಸುಳ್ಳು ಮತ್ತು ಈಗಾಗಲೇ ತುಕ್ಕು ಹಿಡಿದಿರುವ ಕಾರಣ ಕೊಟ್ಟು 'ಖೋಟಾ ಸೆಕ್ಯುಲರಿಸ್ಟರು' ಎಂದು ಹೀಯಾಳಿಸುತ್ತಾ ಒರೊಟೊರಟಾಗಿ ಮಾಡುವುದರಿಂದ ನಮ್ಮ ಯಾವುದೋ ವೈಯುಕ್ತಿಕ ತೆವಲುಗಳನ್ನು ತೀರಿಸಿಕೊಳ್ಳಬಹುದೇ ಹೊರತು, ಅನಂತಮೂರ್ತಿ ಮಾಡಿರಬಹುದಾದ ತಪ್ಪುಗಳನ್ನು ಸರಿಯಾದ ಅರ್ಥದಲ್ಲಿ ವಿಮರ್ಶಿಸಲೂ ಆಗುವುದಿಲ್ಲ ಮತ್ತು ನಮ್ಮ ವಾದವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲೂ ಸಾಧ್ಯವಾಗುವುದಿಲ್ಲ.
ಹಾಗೆ ನೋಡಿದರೆ, ಅನಂತಮೂರ್ತಿ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಲೋಕದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸದಾ ಟೀಕೆಗೊಳಗಾಗುತ್ತಾ ಬಂದಿದ್ದಾರೆ. ಆ ಟೀಕೆಗಳೆಲ್ಲ ಅವರ ಸಾಹಿತ್ಯ ಕೃತಿಗಳ ವಿಮರ್ಶೆಯ ಭಾಗವಾಗಿ ಮತ್ತು ಅವರ ಕೆಲವು ಸಾಂಸ್ಕೃತಿಕ ನಿಲವುಗಳು ಸೃಷ್ಟಿಸಿದ ವಿವಾದ-ಚರ್ಚೆಯ ಭಾಗವಾಗಿ ವ್ಯಕ್ತವಾಗಿ, ಸಾಹಿತ್ಯ ವಿಮರ್ಶೆಯ ಪರಿಧಿಯನ್ನು ವಿಸ್ತರಿಸುವಲ್ಲಿ ಹಾಗೂ ಸಾಂಸ್ಕೃತಿಕ ಗೊಂದಲಗಳನ್ನು ನಿವಾರಿಸಿಕೊಳ್ಳುವಲ್ಲಿ ಸಹಾಯಕವಾಗಿರುವಂತಿದ್ದವೇ ಹೊರತು; ಅವೆಂದೂ ಈಗಾಗುತ್ತಿರುವಂತೆ, ವೈಯುಕ್ತಿಕ ನೆಲೆಯ ದಾಳಿಯ ರೂಪದಲ್ಲಿ ವ್ಯಕ್ತವಾಗಿ ಸಾಮಾಜಿಕ ವಾತಾವರಣವನ್ನು ಬಿಗುವುಗೊಳಿಸುವ ವಿಚ್ಛಿದ್ರಕಾರಿ ಪ್ರಯತ್ನಗಳಾಗಿರುತ್ತಿರಲಿಲ್ಲ.
ಅನಂತಮೂರ್ತಿ ಮಹಾತ್ವಾಕಾಂಕ್ಷಿ ಯಾಕಾಗಿರಬಾರದು? ಅವರು ಪಡೆದ ಸ್ಥಾನಮಾನಗಳೆಲ್ಲ ಅವರ ಸಾಹಿತ್ಯದಿಂದ ದೊರೆತ ಪ್ರಯೋಜನಗಳಾದರೆ, ಭೈರಪ್ಪನವರೂ ಅಂತಹ ಪ್ರಯೋಜನಗಳನ್ನು ಪಡೆಯಲು ಯಾರು ತಡೆದಿದ್ದರು? ಅಥವಾ ಅವರು ಪಡೆದೇ ಇಲ್ಲ ಎಂದು ಹೇಗೆ ಹೇಳುವುದು? ಅಥವಾ ಅವರ ಸಾಹಿತ್ಯ ಅಂತಹ ಪ್ರಯೋಜನಗಳನ್ನು ಪಡೆಯುವುದಕ್ಕೆ ಅರ್ಹವಾಗಿರಲಿಲ್ಲವೋ? ಅನಂತಮೂರ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆಗೆ ಸ್ಪರ್ಧಿಸುವುದು ಸಾಹಿತ್ಯ ಕೃಷಿಯ ದುರುಪಯೋಗ ಎನ್ನುವ ಬಾಲಿಶ ವಾದವನ್ನು ಒಪ್ಪಿಕೊಂಡು ಮುಂದುವರೆಯುವುದಾರೆ, ಅವರನ್ನು ಸೋಲಿಸಲು ಭಾರತದಾದ್ಯಂತ ಸಂಚರಿಸಿ ಅವರ ವಿರುದ್ಧ ಪ್ರಚಾರ ಮಾಡಿದ ಭೈರಪ್ಪನವರ ವಿಫಲ ಪ್ರಯತ್ನಗಳನ್ನು ಏನೆಂದು ಕರೆಯೋಣ? ಜ್ಞಾನಪೀಠ ಸಿಗಬೇಕಾಗಿದ್ದದ್ದು ಭೈರಪ್ಪನವರಿಗೇ ಹೊರತು ಅನಂತಮೂರ್ತಿಯವರಿಗಲ್ಲ್ಲ ಎಂದು ಹೇಳುವ ಇವರಿಗೆ, ಈಗಾಗಲೇ ಅನಂತಮೂರ್ತಿಯವರಂತಹ 'ಅನರ್ಹ'ರಿಗೆ ಸಿಕ್ಕಿ ಬೆಲೆ ಕಳೆದುಕೊಂಡಿರುವ ಜ್ಞಾನಪೀಠದ ಬಗ್ಗೆ ಇನ್ನೂ ಇಷ್ಟೊಂದು ಹಪಾಹಪಿಯಾಕೋ ತಿಳಿಯದಾಗಿದೆ!
ಭೈರಪ್ಪನವರನ್ನು ಕನ್ನಡದ ಸರ್ವಶ್ರೇಷ್ಠ ಸಾಹಿತಿಯೆಂದು ಆರಾಧಿಸುತ್ತ, ಅವರನ್ನು ತಮ್ಮ ವೈಯುಕ್ತಿಕ ಸಾಹಿತ್ಯಿಕ ಸಲಹಾಗಾರರನ್ನಾಗಿ ಮಾಡಿಕೊಂಡಿದ್ದ ಡಾ|| ಹಾ.ಮಾ. ನಾಯಕರೆಂಬ ಸಾಹಿತ್ಯ ಆಡಳಿತಗಾರರು ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಆಯಕಟ್ಟಿನ ಸ್ಥಾನಗಳಲ್ಲಿರುವವರೆಗೆ, ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರಿಂದ ಹಿಡಿದು ದೇವನೂರು ಮಹದೇವ, ಕೃಷ್ಣ ಆಲನಹಳ್ಳಿಯವರವರೆಗೆ, ಆ ಕಾಲದ ಯಾವ ಪ್ರತಿಭಾಶಾಲಿಗೂ ಆ ಅಕಾಡೆಮಿಗಳ ಯಾವ ತೆರನ ಮಾನ್ಯತೆಯೂ ದೊರಕದಂತೆ ನೋಡಿಕೊಂಡ ಸಾಹಿತ್ಯ ರಾಜಕಾರಣದ ಹಿಂದಿದ್ದ ಶಕ್ತಿಗಳಾದರೂ ಯಾವುವು? ಇಂತಹ ನಮಗೆ ಗೊತ್ತಿರುವ ಹಾಗೂ ಗೊತ್ತಿಲ್ಲದ ಅನೇಕ ಪ್ರಶ್ನೆಗಳಿವೆ. ಪರಿಸ್ಥಿತಿ ಹೀಗಿರುವಾಗ, ಗಲಾಟೆಯಾದಾಗ ಗುಂಪಿನಲ್ಲಿ ಸೇರಿಕೊಂಡು ಯಾವುದ್ಯಾವುದೋ ಹಳೆಯ ಕಾರಣಗಳಿಗಾಗಿ ಆಗದವನ ಮೇಲೆ ಕಲ್ಲೆಸೆಯವ ರೀತಿಯ ವಾದ ಮಾಡುತ್ತಾ ಹೋಗುವುದು ಈಗಾಗಲೇ ಕುಗ್ಗುತ್ತಿರುವ ಪ್ರಜಾಪ್ರಭುತ್ವವಾದಿ ಅವಕಾಶವನ್ನು ಇನ್ನಷ್ಟು ಕುಗ್ಗಿಸುತ್ತದಷ್ಟೆ. ಅಷ್ಟೇ ಅಲ್ಲ, ಸಮಾಜದ ಸಂವಾದ ಸಂಸ್ಕೃತಿಯನ್ನು ನಾಶ ಮಾಡಿ, ಪುಂಡು-ಪೋಕರಿಗಳೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈಗಾಗಲೇ ನಡೆಸುತ್ತಿರುವ ಪ್ರಯತ್ನಗಳನ್ನು ಬೆಂಬಲಿಸಿದಂತಾಗುತ್ತದಷ್ಟೆ.
ರಾಜಸ್ಥಾನದಲ್ಲಿ ಗುಜ್ಜರರು ಇತ್ತೀಚೆಗೆ ಒಂದು ವಾರ ಎಗ್ಗಿಲ್ಲದೆ ನಡೆಸಿದ ದಾಂಧಲೆಯನ್ನೇ ಗಮನಿಸಿ. ಅಲ್ಲಿ ಒಂದು ವಾರ ಪ್ರಜಾಪ್ರಭುತ್ವವೇ ಕುಸಿದು ಬಿದ್ದಿತ್ತು. ಪುಂಡು ಪೋಕರಿಗಳದೇ ರಾಜ್ಯಭಾರ. ಗುಜ್ಜರರಿಗೆ 2003ರ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವುದಾಗಿ ಮೂಗಿಗೆ ತುಪ್ಪ ಹಚ್ಚಿ ಬಿಟ್ಟಿದ್ದ ಸಂಘ ಪರಿವಾರ, ಅಧಿಕಾರಕ್ಕೆ ಬಂದ ಮೇಲೆ ಯಾವ ಜಾತಿ ರಾಜಕೀಯ ಕಾರಣಗಳಿಗಾಗಿ ಈ ಆಶ್ವಾಸನೆ ನೀಡಿತ್ತೋ, ಅದೇ ಜಾತಿ ರಾಜಕೀಯ ಕಾರಣಗಳಿಗಾಗಿ(ಇವರಿಗೆ ಆ ಸ್ಥಾನಮಾನ ಕೊಟ್ಟರೆ, ಇನ್ನೊಂದು ಜಾತಿಯವರು ಸಿಡಿದೇಳುತ್ತಾರೆ!) ಆ ಆಶ್ವಾಸನೆಯನ್ನು ಈಡೇರಿಸಲಾಗದ ಪರಿಸ್ಥಿತಿಗೆ ಸಿಕ್ಕು ಜನ ಪ್ರತಿಭಟನೆಗಿಳಿದಾಗ ದಿಙ್ಮೂಢವಾಗಿ ಕೂತಿತು! ಕೈಗೆ ಸಿಕ್ಕ ಆಯುಧಗಳೊಂದಿಗೆ ಬೀದಿಗಿಳಿದ ಜನಸಮೂಹ, ನಾಯಕತ್ವದ ದಿಕ್ಕು ದೆಸೆಯಿಲ್ಲದೆ ವ್ಯಾಪಕ ಹಿಂಸಾಚಾರಕ್ಕಿಳಿದು ಜನರಿದ್ದ ರೈಲು-ಕಾರು-ಬಸ್ಸು-ಕಟ್ಟಡ ಎನ್ನದೆ, ಕೋಟ್ಯಾಂತರ ರೂಪಾಯಿಗಳ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶ ಮಾಡುತ್ತಾ ಹೋಯಿತು.
ಸರ್ಕಾರ ಎಚ್ಚೆತ್ತುಕೊಳ್ಳುವ ವೇಳೆಗೆ ಗುಜ್ಜರರಿದ್ದ ಪಕ್ಕದ ದೆಹಲಿ, ಹರ್ಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಿಗೂ ಈ ಹಿಂಸಾಚಾರ ಜಾತಿ ದ್ವೇಷದ ಜ್ವಾಲೆಯಾಗಿ ಹಬ್ಬಿ, ಪೋಲೀಸರೂ ಸೇರಿದಂತೆ ಹತ್ತಾರು ಜನರ ಪ್ರಾಣವನ್ನೂ ಬಲಿತೆಗೆದುಕೊಂಡಿತ್ತು. ಇದರಿಂದಾಗಿ ದೆಹಲಿ ಸೇರಿದಂತೆ ಹಲವಾರು ನಗರ-ಪಟ್ಟಣಗಳ ಜನಜೀವನ ಅಸ್ತವ್ಯಸ್ತಗೊಂಡಾಗ, ಜನರ ನೆರವಿಗೆ ಬಂದದ್ದು ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯ. ಏನು ನಡೆಯುತ್ತಿದೆ ಈ ದೇಶದಲ್ಲಿ-ಯಾರೂ ಹೇಳುವವರು ಕೇಳುವವರಿಲ್ಲವೇ ಎಂದು ಅದು ಸಂಬಂಧಪಟ್ಟ ಸರ್ಕಾರಗಳಿಗೆ ಛೀಮಾರಿ ಹಾಕಿ ಕಾನೂನು ಮತ್ತು ಶಿಸ್ತು ಪಾಲನೆಯ ವರದಿ ಕೇಳಿದಾಗಲೇ, ಸರ್ಕಾರಗಳೆಂಬುವು ಎಚ್ಚೆತ್ತುಕೊಂಡು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಾರ್ಯಾಚರಣೆ ಮತ್ತು ಸಂಬಂಧಪಟ್ಟ ಜಾತಿ ಮುಖಂಡರೊಂದಿಗೆ ಮಾತುಕತೆ ಆರಂಭಿಸಿದ್ದು! ಇದು ನಮ್ಮ ಪ್ರಜಾಪ್ರಭುತ್ವ!
ಶಾಸಕಾಂಗ ಮತ್ತು ಕಾರ್ಯಾಂಗಗಳೆರಡೂ ತಂತಮ್ಮ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಗಳ ಸುಖಗಳಲ್ಲಿ ಮುಳುಗಿಹೋಗಿ ಪ್ರಜಾಪ್ರಭುತ್ವವನ್ನು ಕೈಬಿಟ್ಟಂತಿವೆ. ಹಾಗಾಗಿ, ಜನರೀಗ ಅಂತಿಮ ಆಶ್ರಯವೆಂದು ನ್ಯಾಯಾಂಗದತ್ತ ನೋಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನ್ಯಾಯಾಂಗ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಟ್ಟು ಅಂತಿಮವಾಗಿ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನೇ ನಾಶ ಮಾಡುವ ಅಪಾಯವನ್ನೊಳಗೊಂಡಿದೆ. ಆದರೆ, ಈ ಅಪಾಯ ಉಂಟಾಗದಂತೆ ಪ್ರಜಾಪ್ರಭುತ್ವದ ಕಾವಲು ನಾಯಿಗಳಂತಿರಬೇಕಾದ ನಮ್ಮ ಬುದ್ಧಿಜೀವಿಗಳು ಸರ್ಕಾರದಿಂದ ದೊರೆಯುವ ಸವಲತ್ತುಗಳಿಗಾಗಿ ಕ್ಯೂ ನಿಂತು ತಮ್ಮ ಜವಾಬ್ದಾರಿಗಳನ್ನೇ ಮರೆತರೆ?
ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ|| ಸಿದ್ದಲಿಂಗಯ್ಯನವರನ್ನೇ ನೋಡಿ. ತಮ್ಮ ಇತ್ತೀಚಿನ ಪುಸ್ತಕವನ್ನು ತಮ್ಮ ಇತ್ತೀಚಿನ ನಾಯಕರಾದ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಅರ್ಪಿಸಿರುವ ಈ ಮಾಜಿ ಕ್ರಾಂತಿ ಕವಿ, 'ಭೈರಪ್ಪನವರು ಶ್ರೇಷ್ಠ ಕಾದಂಬರಿಕಾರರು, ನಮ್ಮ ಮಾರ್ಗದರ್ಶಿಗಳು. ಅವರ ಇತ್ತೀಚಿನ ಕಾದಂಬರಿಯಲ್ಲಿ ನಮ್ಮ ಸಮಾಜಕ್ಕೆ ಪೂರಕವಲ್ಲದ ಕೆಲವು ವಿಷಯಗಳಿರುವುದು ಸರಿಯಲ್ಲವಷ್ಟೆ..,' ಎಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕೃತ ಟಿಪ್ಪಣಿಗಳ ಪರಿಭಾಷೆಯಲ್ಲಿ ನಾಜೂಕಾದ ಮಾತುಗಳನ್ನಾಡುವ ಮೂಲಕ, ಸರ್ಕಸ್ ಕಂಪನಿಯಲ್ಲಿ ತಂತಿಯ ಮೇಲೆ ವಿಚಿತ್ರವಾಗಿ ತೂಗಾಡುತ್ತಾ ಜನರನ್ನು ನಗಿಸಿ ನಡೆಯುವ ವಿದೂಷಕನಂತೆ ತೋರುತ್ತಿದ್ದಾರೆ. ಇಂತಹವರು ಏನನ್ನು ತಾನೆ ರಕ್ಷಿಸಬಲ್ಲರು? ಪ್ರಜಾಪ್ರಭುತ್ವದ ಭಾಷೆಯಾಗಿ ಕನ್ನಡವನ್ನಿರಲಿ, ಅದರ ಪ್ರತಿಮೆಗಳಂತಿರಬೇಕಾದ ಬೀದಿ ಬದಿಯ ಕನ್ನಡ ಬೋರ್ಡುಗಳನ್ನು ಸಹ ರಕ್ಷಿಸಲಾರರು.
ಇಂತಹ ಪರಿಸ್ಥಿತಿ ಉಂಟಾಗಿರುವುದರಿಂದಲೇ, ಗಂಭೀರ ಸಾಮಾಜಿಕ-ಸಾಂಸ್ಕೃತಿಕ ಚರ್ಚೆಗೆ ಅನುವು ಮಾಡಿಕೊಡಬೇಕಾದ 'ಆನುದೇವ ಹೊರಗಣವನು...' ಪುಸ್ತಕ, ಚರ್ಚೆಗಳಿಗೆ ಬದಲಾಗಿ ನಿಷೇಧದ ಆತಂಕವನ್ನು ಎದುರಿಸಬೇಕಾಗಿ ಬಂದಿರುವುದು. ಕಾವಿ-ಖಾಕಿ ಉಡುಪಿನಲ್ಲಿರುವ ಜಾತಿವಾದಿ ಪುಂಡರು ಬೆಂಕಿ ಹಚ್ಚುವ, ರಕ್ತ ಹರಿಸುವ ಬೆದರಿಕೆಗಳನ್ನು ಹಾಕುತ್ತಾ, ಸರ್ಕಾರವನ್ನು ಮಣಿಸುವ ಹವಣಿಕೆಯಲ್ಲಿರುವುದು. ವಿಚಾರ ನಡೆಯಬೇಕಾದ ಕಡೆ ಗಲಭೆಕೋರರ ಗುಂಪು ನುಗ್ಗಿಸಿ ಸಂವಾದ ಸಂಸ್ಕೃತಿಯನ್ನು ನಾಶ ಮಾಡತೊಡಗಿರುವುದು. ಇಷ್ಟೆಲ್ಲ ಆಗುತ್ತಿದ್ದರೂ, ನಮ್ಮ ರಾಷ್ಟ್ರಕವಿಗಳು ಮಾತ್ರ ತಮ್ಮ ಈ ಇಳಿವಯಸ್ಸಿನಲ್ಲೂ ರಾಜ್ಯಾದ್ಯಂತ ಸಂಚಾರ ಮಾಡುತ್ತಾ ಶಿಕ್ಷಣ, ಜಾತಿ ಮತ್ತು ಧರ್ಮಗಳ ಹೊಟೆಲ್ಲುಗಳನ್ನಿಟ್ಟುಕೊಂಡು ಭರ್ಜರಿ ಸಮಾಜಸೇವೆ ಮಾಡುತ್ತಿರುವ ಧರ್ಮಾತ್ಮರಿಂದ ಪೇಟ, ಕಿರೀಟ ಇತ್ಯಾದಿಗಳ ಸನ್ಮಾನ ಸ್ವೀಕರಿಸುವ ಸಂಭ್ರಮದಲ್ಲಿದ್ದಾರೆ. 'ಆವರಣ' ಮತ್ತು 'ಆನುದೇವ...' ಕೃತಿಗಳ ಸುತ್ತ ಸೃಷ್ಟಿಯಾಗಿರುವ ಸಾಂಸ್ಕೃತಿಕ ಬಿಕ್ಕಟ್ಟಿನ ಬಗ್ಗೆ ಇನ್ನೂ ಒಂದು ಮಾತನ್ನು ಆಡದಿರುವ ಜಿ.ಎಸ್.ಶಿವರುದ್ರಪ್ಪನವರು, 'ರಾಷ್ಟ್ರಕವಿ' ಎನ್ನುವುದು ಸರ್ಕಾರಿ ಮರ್ಯಾದೆಗಿಂತ ಹೆಚ್ಚಾಗಿ ಕರ್ನಾಟಕದ ಜನತೆಯ ಪರವಾಗಿ ನಿರ್ವಹಿಸಬೇಕಾದ ಒಂದು ಸಾರ್ವಜನಿಕ ಜವಾಬ್ದಾರಿ ಎನ್ನುವುದನ್ನೇ ಮರೆತಿರುವಂತೆ ಕಾಣುತ್ತದೆ.
ಅಂದ ಹಾಗೆ: ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಸರ್ಕಾರದ ನಿರ್ಧಾರ ಕನ್ನಡಕ್ಕೆ ಗಂಡಾಂತರ ತಂದೊಡ್ಡಿದೆ ಎಂದು ಚಿ. ಶ್ರೀನಿವಾಸರಾಜು ತಮ್ಮ ಅಭಿನಂದನಾ ಸಮಾರಂಭದಲ್ಲಿ ಹೇಳಿದರೆಂದು ವರದಿಯಾಗಿದೆ. ಈ ವಿಷಯದಲ್ಲಿ ಕಲೆದ ಒಂದು ವರ್ಷದಲ್ಲಿ ಅಷ್ಟೆಲ್ಲಾ ಸಂವಾದ-ಚರ್ಚೆ-ಪ್ರತಿಭಟನೆಗಳು ನಡೆದಾಗಲೂ ಬಾಯಿ ಬಿಡದಿದ್ದ ಇವರು ಈಗ ಸರ್ಕಾರಿ ಆಜ್ಞೆ ಹೊರಟ ನಂತರ ಬಾಯಿಬಿಟ್ಟಿರುವುದನ್ನು ಗಮನಿಸಿಯೇ ಇವರ ಗುರುಗಳಾದ ರಾಷ್ಟ್ರಕವಿಗಳು ಇವರನ್ನು ಇದೇ ಸಮಾರಂಭದಲ್ಲಿ 'ಮೌನ ಕ್ರಾಂತಿಯ ಹರಿಕಾರ' ಎಂದು ಕರೆದಿರಬಹುದು!

Rating
No votes yet