ಸಂಸ್ಕಾರ ಮತ್ತು ವಂಶವೃಕ್ಷ

ಸಂಸ್ಕಾರ ಮತ್ತು ವಂಶವೃಕ್ಷ

ಉದ್ಧಾಲಕ ಮತ್ತು ಶ್ವೇತಕೇತುವಿನ ಕತೆ ಹೇಳಿದ್ದಕ್ಕೆ ಕಾರಣವಿದೆ. ಸರಿ ಸುಮಾರು ೧೯೬೫ರಲ್ಲಿ ಕನ್ನಡದ ಎರಡು ಮಹತ್ವದ ಕಾದಂಬರಿಗಳು ಪ್ರಕಟವಾದವು. ಒಂದು ಯು.ಆರ್. ಅನಂತಮೂರ್ತಿಯವರ ಸಂಸ್ಕಾರ. ಇನ್ನೊಂದು ಎಸ್ ಎಲ್ ಭೈರಪ್ಪನವರ ವಂಶವೃಕ್ಷ. ಎರಡೂ ಕಾದಂಬರಿಗಳು ಸಿನಿಮಾ ಆಗಿರುವುದರಿಂದ ಮತ್ತು ಸಾಕಷ್ಟು ಚರ್ಚೆಗೂ ಒಳಗಾಗಿರುವುದರಿಂದ ಸಾಹಿತ್ಯದ ಓದುಗರಲ್ಲದವರಿಗೂ ಈ ಕಾದಂಬರಿಗಳ ಬಗ್ಗೆ ಗೊತ್ತು.

ಪ್ರಾಣೇಶಾಚಾರ್ಯರ ಧರ್ಮಸಂಕಟಗಳಿಗೆ ಸಂವಾದಿಯಾಗಿ ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಗಳಿವೆ. ನಾರಣಪ್ಪ ಒಡ್ಡುವ ಸವಾಲುಗಳಷ್ಟು ಗಾಢವಾಗಿಯಲ್ಲದಿದ್ದರೂ ಕಾತ್ಯಾಯಿನಿ ಮತ್ತು ರಾಜನ ಸಂಬಂಧ ಒಡ್ಡುವ ಸವಾಲುಗಳು ಈ ಇಬ್ಬರು ಸನಾತನಿಗಳ ಧರ್ಮಸಂಕಟದ ಎದುರು ನಿಲ್ಲುವುದು ಎರಡೂ ಕಾದಂಬರಿಗಳ ಮಹತ್ವದ ಘಟ್ಟ. ತಮಾಷೆಯೆಂದರೆ ಅನಂತಮೂರ್ತಿಯವರ ನಾರಣಪ್ಪ ಸತ್ತೂ ಜೀವಂತ ಸವಾಲಾಗಿ ಉಳಿದರೆ ಕಾತ್ಯಾಯಿನಿಯ ಸಾವು ಶ್ರೀನಿವಾಸ ಶ್ರೋತ್ರಿಗಳ ಧರ್ಮಸಂಕಟಕ್ಕೆ ತೆರೆಯೆಳೆಯುತ್ತದೆ. ಆ ಹೊತ್ತಿಗೆ ಅವರಿಗೆ ತಮ್ಮದೇ ಜನ್ಮರಹಸ್ಯ ಕೂಡ ತಿಳಿದಿರುತ್ತದೆ. ಕಾತ್ಯಾಯಿನಿ ಮತ್ತು ರಾಜ ಒಡ್ಡುವ ಸವಾಲು ಇವತ್ತಿನ ಸಂದರ್ಭದಲ್ಲಿ ಮಹತ್ವದ್ದಾಗಿ ಉಳಿದಿಲ್ಲ ಎಂಬುದೂ ನಿಜ. ತುಂಬ ಸುಶಿಕ್ಷಿತ ಮಾದರಿಯ ಆದರ್ಶದ ಬಣ್ಣಹೊತ್ತ ಸವಾಲದು. ಹಾಗಾಗಿಯೇ ಪ್ರಶ್ನೆಗಳು ಕಾದಂಬರಿಯ ಆಚೆ ಬೆಳೆಯದೆ ಕಾತ್ಯಾಯಿನಿಯ, ಪ್ರೊಫೆಸರ್ ಸದಾಶಿವರಾಯರ ಸಾವು ಮತ್ತು ಶ್ರೋತ್ರಿಗಳ ವಾನಪ್ರಸ್ಥದಲ್ಲಿಯೇ ಉತ್ತರ ಕಂಡುಕೊಂಡಂತೆ ಮುಗಿದು ಬಿಡುತ್ತವೆ.

ಕಾತ್ಯಾಯಿನಿ ಮತ್ತು ರಾಜನ ಮದುವೆ ಮತ್ತು ಸಂತಾನದ ವಾರಸುದಾರಿಕೆಯ ಸಮಸ್ಯೆಗೆ ಹೋಲಿಸಿದರೆ ಅನಂತಮೂರ್ತಿಯವರು ಎತ್ತಿದ ಪ್ರಾಣೇಶಾಚಾರ್ಯರ ಸಮಸ್ಯೆ ಹೆಚ್ಚು ಸಾಮಾಜಿಕವಾದದ್ದು, ಇಂದಿಗೂ ಹೆಚ್ಚು ಕಡಿಮೆ ಅಂದಿನಷ್ಟೇ ಪ್ರಸ್ತುತವಾಗಿರುವಂಥದ್ದು. ನಾರಣಪ್ಪ ಒಡ್ಡುವ ಸವಾಲಾದರೋ ಕೇವಲ ವಿಧವಾ ವಿವಾಹ ಅಥವಾ ಸಂತಾನದ ವಾರಸುದಾರಿಕೆಯಂಥ ಕೌಟುಂಬಿಕ ನೆಲೆಯ ಸವಾಲಲ್ಲ. ಅದು ಬದುಕುವ ಮನುಷ್ಯನ ಜೀವಂತಿಕೆಯ ಕುರಿತಾದ, ಬದುಕಿದರೆ ಇಲ್ಲಿ ಸಲ್ಲುವ ಹಾಗೆ ಬದುಕಬೇಕೆನ್ನುವ ಚಾರ್ವಾಕ ಸಿದ್ಧಾಂತದ ಸವಾಲು. ಆಂತರಿಕವಾಗಿ ಕಾಡುತ್ತಲೇ ಇರುವಂಥದು. ಮನುಷ್ಯನ ಆಳದ ದ್ವಂದ್ವಗಳಿಗೆ, ಇಹ ಪರಗಳೆರಡರ ನಡುವೆ ತುಯ್ಯುತ್ತಿರುವ ಅವನ ದೇಹ ಮನಸ್ಸುಗಳಿಗೆ ಸಂಬಂಧಿಸಿದ್ದು. ರಾಜ ಮತ್ತು ಕಾತ್ಯಾಯಿನಿಯ ಮದುವೆಗೆ ಭೈರಪ್ಪನವರೇ ಕೊಡುವ ಅವನ ಅಣ್ಣ ಪ್ರೊಫೆಸರ್ ಸದಾಶಿವರಾವ್ ಮತ್ತು ಕರುಣಾರತ್ನೆ ನಡುವಿನ ವಿವಾಹೇತರ ಸಂಬಂಧದ ಪರಿಪ್ರೇಕ್ಷ್ಯ ಕೂಡ ಹೊಸತೇನನ್ನೂ ಕೂಡಿಸುವುದಿಲ್ಲ. ಅಲ್ಲೂ ಸಂತಾನದ ಅಭೀಪ್ಸೆ ಮತ್ತು ಸಮಸ್ಯೆಯ ಪರಿಹಾರಾರ್ಥ ಪ್ರೊಫೆಸರ್ ಸಾವು!

ಸಂಸಾರದ ಒಂದು ಪರಿಕಲ್ಪನೆಯನ್ನು ಈ ಕಾದಂಬರಿಗಳು ತಡಕುವ ರೀತಿಯಲ್ಲೇ ಧರ್ಮದ ಪ್ರಶ್ನೆಗಳಿವೆ. ಹಾಗೆ ನೋಡಿದರೆ ಧರ್ಮ, ರಾಜಕೀಯ, ಕಲೆ, ಸಾಹಿತ್ಯ, ವಿಜ್ಞಾನ ಯಾವುದೂ ನಮ್ಮ ಬದುಕಿಗೆ ಹೊರಗಿನದ್ದಲ್ಲ. ಇವು ಒಂದನ್ನು ಬಿಟ್ಟು ಇನ್ನೊಂದಿಲ್ಲ ಮತ್ತು ಇವನ್ನು ಬಿಟ್ಟು ನಮ್ಮ ಬದುಕಿಲ್ಲ. ಹಾಗಿರುತ್ತ ಸಂಸ್ಕಾರ ಮತ್ತು ವಂಶವೃಕ್ಷ ಪ್ರತಿಪಾದಿಸುವ ವಿಭಿನ್ನವಾದ ನಿಲುವುಗಳು ನಮ್ಮ ನಿಮ್ಮ ಸಂಸಾರದಲ್ಲಿನ ಒಳಹೊರಗನ್ನು ಧರ್ಮದ ನೆಲೆಯಲ್ಲಿ ತಡಕುವಾಗ ನಮ್ಮ ಪ್ರತಿಕ್ರಿಯೆ ಏನು?

ಶ್ರೀನಿವಾಸ ಶ್ರೋತ್ರಿಗಳ ನಿಲುವು ಕಾದಂಬರಿಯ ಉದ್ದಕ್ಕೂ ಅನೇಕ ರೀತಿಗಳಲ್ಲಿ ಸ್ಪಷ್ಟವಾಗುತ್ತದೆ. ಕಾತ್ಯಾಯಿನಿಯ ಬಗ್ಗೆ ಅವರಿಗೆ ಮಾನವೀಯ ನೆಲೆಯ ಸಹಾನುಭೂತಿ ಏನಿದ್ದರೂ ಅದು ಧರ್ಮದ ಲಕ್ಷ್ಮಣರೇಖೆಗಳನ್ನು ದಾಟುವಷ್ಟರ ಮಟ್ಟಿಗೆ ಪರಿಪಕ್ವವಿಲ್ಲ. ಹೆಚ್ಚೂ ಕಡಿಮೆ ಉದ್ಧಾಲಕನ ನಿಲುವೇ ಅವರದ್ದೂ! ಆದರೆ ನಾರಣಪ್ಪನ ರೋಮಾಂಚನದ ಜಗತ್ತನ್ನು ಸ್ಪರ್ಶಿಸುವ ಪ್ರಾಣೇಶಾಚಾರ್ಯರು ವಾನಪ್ರಸ್ಥಕ್ಕೆ ಹೋಗದೆ, ದಿಢೀರ್ ಸಾಯದೆ ನಾರಣಪ್ಪನ ನಿಲುವುಗಳ ಪುನರಾವಲೋಕನಕ್ಕೆ ಮಾನಸಿಕವಾಗಿ ಸಿದ್ಧರಾಗುವ ಲಕ್ಷಣಗಳನ್ನು ತೋರುತ್ತಾರೆ. ಇಲ್ಲಿ ವೈರುಧ್ಯಗಳತ್ತ ಬೆನ್ನು ಹಾಕಿ ಪಲಾಯನ ಮಾಡುವ, ಮಾಡಿ ಸಮಸ್ಯೆಯಿಂದ ಪಾರಾಗುವ ತಂತ್ರವಿಲ್ಲ. ಬದಲಿಗೆ ಮುಖಾಮುಖಿ ಇದೆ.

ಕೃತಿಕಾರ, ಕೃತಿ ಮತ್ತು ಕೃತಿಯೊಳಗಿನ ಪಾತ್ರಗಳು ಬೇರೆ ಬೇರೆ ಎನ್ನುವ ನಿಲುವು ತೆಗೆದುಕೊಂಡು ನೋಡಿದರೆ ಭೈರಪ್ಪನವರ ನಿಲುವು ಭೈರಪ್ಪನವರಿಗೆ, ಅನಂತಮೂರ್ತಿಯವರದ್ದು ಅನಂತಮೂರ್ತಿಯವರಿಗೆ ಎಂದು ಸಮಾಧಾನಪಟ್ಟುಕೊಳ್ಳಬಹುದು. ಆದರೆ ಸೃಜನಶೀಲ ಕೃತಿಯೊಂದು ಅಷ್ಟು ವೈಯಕ್ತಿಕವಲ್ಲ. ಯಾಕೆಂದರೆ ಅದು ಮನೆಮನೆಯ ನಡುಮನೆಯ ಚರ್ಚೆಗೆ ತುತ್ತಾಗಲು ತಯಾರಾಗಿಯೇ ಅಚ್ಚಿನಮನೆಯಿಂದ ಹೊರಟಿರುತ್ತದೆ, ಅಲ್ಲವೆ?

Rating
No votes yet

Comments