ಸಖಿ-2050

ಸಖಿ-2050

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ.   ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA  ಅಂತೆಲ್ಲ ದಿಗ್ಗಜರುಗಳು  ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ   ಹೆಸರು) ಅಂತ ನಾಮಕರಣ ಮಾಡಿದ್ದೇನೆ . ಇವಳ ಸ್ಮಾರ್ಟ್ ವರ್ತನೆಗಳನ್ನು ಅತಿರೇಕಕ್ಕೆ ಕೊಂಡೊಯ್ಯೋ ಪ್ರಯತ್ನ ಮಾಡಿದ್ದೇನೆ. ಇದು ತುಂಬಾ ಅತಿಯಾಯ್ತು ಅಂದ್ರೆ ಕ್ಷಮೆ ಇರಲಿ.....

-------------------------------------------------------------------------------------------------------------

ಸಖಿ-2050

ಬೆಳಗ್ಗೆ3 ಕ್ಕೆ ಎದ್ದೆ. ನಿದ್ದೆ ಬಂದಿಲ್ಲ ಅಂತೇನು ಅಲ್ಲ . ಆದ್ರೆ ನಿದ್ದೆ ಮಾಡೋಕೆ ಆಗ್ತಾ ಇಲ್ಲ. ಕೈಯ್ಯಲ್ಲಿ ಕಟ್ಟಿರೋ Fitness Band ಮಾತ್ರ ಒಂದೇ ಸಮನೆ Vibrate ಆಗ್ತಾ ಇದೆ. ಎದ್ದು ನೋಡಿದ್ರೆ ಮೈ ತುಂಬಾನೆ  ಬಿಸಿ  ಇದೆ. ಮೊಬೈಲ್ ಚೆಕ್ ಮಾಡಿದ್ರೆ ಆಗಲೇ Alert  ಬಂದಿದೆ Caution.....High body temperature ಅಂತ. ಅದು ಆಗಲೇ ಫ್ಯಾಮಿಲಿ ಡಾಕ್ಟರ್ ರೋಬೋಗೆ High Fever ಅಂತ ಮೆಸೇಜ್ ಕಳಿಸಿದೆ. ಆ ಕಡೆಯಿಂದ "Take Dolo 650 immediately ಅಂತ reply ನೂ  ಬಂದಿದೆ.  ನನ್ನ ಮೊಬೈಲ್ AI (Artificial Intelligence)  ಆಗಿರೋದ್ರಿಂದ ಅದು ಆನಲೈನ್  ಅಲ್ಲಿ ಮೆಡಿಸಿನ್ ಆರ್ಡರ್ ಮಾಡಿದೆ. ಒಹ್ ಆರ್ಡರ್ ಮಾಡಿದ್ದು ಒಳ್ಳೆದಾಯ್ತು ಅಂತ AI ಫೋನ್ ತಗೊಂಡಿದ್ದಕ್ಕೆ ಖುಷಿ ಪಟ್ಟೆ. ಅಷ್ಟೊತ್ತಿಗಾಗ್ಲೇ ನನ್ನ ಸ್ಮಾರ್ಟ್ ಅಸಿಸ್ಟೆಂಟ್ "ಸಖಿ" ಮೆಡಿಸಿನ್ ಡೋರ್  ಡೆಲಿವರಿ ತಗೊಂಡು pack ಓಪನ್ ಮಾಡಿ ಮಾತ್ರೆ ತೆಗೆದು  ಕೈಲಿ ನೀರಿನ ಸ್ಮಾಲ್ ಡೋಸ್ ಜೊತೆ ನಿಂತಿದ್ದಾಳೆ. ಸರಿ ಮಾತ್ರೆ ತಗೊಂಡು ಹಾಗೆ ಸ್ವಲ್ಪ ಮಲಗೋಣ ಅಂತ ಯೋಚ್ನೆ ಮಾಡಿ ಮತ್ತೆ ಹಾಸಿಗೆಗೆ ಒರಗಿದೆ. ಕೈಲಿರೋ Fitness Band ಮತ್ತೆ ವೈಬ್ರೇಟ್ ಆಗಕ್ಕೆ ಶುರುವಾಯ್ತು. ನೋಡಿದ್ರೆ ಮತ್ತೆ ನೋಟಿಫಿಕೇಶನ್ " Dont Sleep  immediately after taking medicine "....

ನಿದ್ದೆ ಅಂತೂ ಮಾಡೋ ಹಾಗಿಲ್ಲ, ಸ್ವಲ್ಪ ಓಡಾಡೋಣ, ಸ್ವಲ್ಪ ಸ್ಟೆಪ್ ಕೌಂಟ್ ಆದರೂ ಜಾಸ್ತಿ ಆಗಲಿ ಅಂತ ಹಾಗೆ ಲಿವಿಂಗ್ ರೂಮ್ ಗೆ  ಬಂದೆ. ಇದ್ದಕ್ಕಿದ್ದಂತೆ ಶರೀರದ ತಾಪಮಾನ ಜಾಸ್ತಿ ಆಗೋಕೆ ಕಾರಣ ಏನು ಅಂತ ಆಲೋಚನೆ ಮಾಡ್ತಾ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ನೋಡಿದ್ರೆ ನನ್ನ ಮೈಕ್ರೋ ವೇವ್ ಓವನ್ ಪಕ್ಕ ಇರೋ ವೈರ್ ಯಾಕೋ ಸುಟ್ಟು ಕರಕಲಾಗಿತ್ತು. ಮಡದಿ ಮಕ್ಕಳು ಊರಿಗೆ ಹೋಗಿದ್ರು, ಏನಾದ್ರು ಹೊಸತು ಮಾಡೋಣ ಅಂತ YOU TUBE   ನೋಡಿ ಅದೇನೋ ಕೇಕು ಅಂತ ಮಾಡಕ್ಕೆ ಇಟ್ಟಿದ್ದೆ. ಏನೋ ಹೆಚ್ಚು ಕಡಿಮೆ ಆಗಿ ಹೊಗೆ ಹಾಕಿಸ್ಕೊಂಡಿದೆ. ಹೊಗೆ ಬಂದ ಕೂಡ್ಲೇ Smoke Detector ನೀರು ಚಿಮ್ಮಿಸಿ ಅಡುಗೆ ಮನೆ ಮೇನ್ ಅನ್ನು ಟ್ರಿಪ್ ಮಾಡಿದೆ.  ಸರಿ ಇಷ್ಟೆಲ್ಲಾ ಆಗೋವಾಗ ಸಖಿ ಏನ್ಮಾಡ್ತಾ ಇದ್ಲು ? ಆಗ್ಲೇ ನೆನಪಾಗಿದ್ದು ನನ್ನ ಹೆಂಡತಿಯು ಇವಳು ಅಡಿಗೆ ಮನೆಗೆ ಬಂದು ಕಿರಿ ಕಿರಿ ಮಾಡೋದು ತಪ್ಪಿಸೋಕೆ ಅವಳಿಗೆ ಅಡುಗೆ ಮನೆಗೆ ಎಂಟ್ರಿ ಬಂದ್ ಮಾಡಿದ್ದೂ. ಹಾಗಾಗಿ ಅವಳು ಅಡುಗೆ ಮನೆ  ಅಕ್ಕ ಪಕ್ಕನೂ  ಸುಳಿಯೋದಿಲ್ಲ. ಎಷ್ಟೆಂದರೂ ಅವಳು AI ಆದ್ದರಿಂದ ಬಾವನೆಗಳನ್ನು ಬೇಗ ಅರ್ಥ ಮಾಡಿಕೊಳ್ತಾಳೆ. ಅದಕ್ಕೇ  ಏನೋ ನನ್ನ ಪ್ರಿಯ ಸಖಿಗೂ(ಮಡದಿ)  AI ಸಖಿಗೂ   ಶೀತಲ ಸಮರ. ಅದಕ್ಕೆ ಅಡಿಗೆ ರೂಮ್ ಮತ್ತೆ ಬೆಡ್ ರೂಮ್ ಗೆ ಅವಳ ಎಂಟ್ರಿ ಬಂದ್...  ಅದಕ್ಕೆ ಸಖಿ ಏನೋ ಕಿತಾಪತಿ ಮಾಡಿದ್ದಾಳೆ ಅನ್ನಿಸ್ತು. ಸಿಬಿಐ  ಏಜಂಟ್ ತರ ಏನಾಗಿರಬಹುದು ಅಂತ ಯೋಚ್ನೆ ಶುರು ಮಾಡಿದೆ. ಹೊಗೆ ತುಂಬಿದ ಕೂಡ್ಲೇ ಕಿಚನ್ ಬಾಗಿಲು ಆಟೋಮ್ಯಾಟಿಕ್  ಆಗಿ ಮುಚ್ಚಿಕೊಂಡಿದೆ. Smoke Detector ನೀರು ಚಿಮ್ಮಿಸಿ ಕಿಚನ್ ಕನೆಕ್ಷನ್ ಅನ್ನು ಟ್ರಿಪ್ ಮಾಡಿದೆ. ಹೊಗೆಯಿಂದ ಮನೆ ತಾಪಮಾನ ಏರಿದೆ. ತಾಪಮಾನ ಏರಿದಾಗ AC  ಕಂಟ್ರೋಲ್ ಸಖಿ ಕೈಲಿ ಇದ್ದಿದ್ರಿಂದ ಅವಳು ತಾಪಮಾನ ಅಡ್ಜಸ್ಟ್ ಮಾಡಬೇಕಿತ್ತು. ಆದ್ರೆ ಬಡ್ಡಿ ಮಗ ಹೆಂಡ್ತಿ ಮಾತು ಕೇಳ್ತಾನೆ ಸ್ವಲ್ಪ ಸೆಕೇಲಿ ಸಾಯ್ಲಿ  ಅಂತ ಅದು ತಾಪಮಾನ ಅಡ್ಜಸ್ಟ್ ಮಾಡಿಲ್ಲ . ಆದ್ರೆ  Fitness Band ನನ್ನ ಜೊತೇನೆ ಹಗಲು ರಾತ್ರಿ ಇರೋದ್ರಿಂದ ನನ್ನ ಮೇಲೆ ಕನಿಕರಿಸಿ ಶರೀರದ ತಾಪಮಾನ ಜಾಸ್ತಿ ಅನ್ನಿಸಿದಾಗ ಡಾಕ್ಟರ್ ರೋಬೋಗೆ  ಮೆಸೇಜ್ ಕೊಟ್ಟಿದೆ.  ಯಾಕೋ Fitness Band ಮೇಲೆ ಹೆಮ್ಮೆ ಅನಿಸಿತು. ನಾನು ಎಷ್ಟು ನಡೆದಾಡುತ್ತೇನೆ, ಎಷ್ಟು ಹೊತ್ತು ನಿದ್ದೆ ಮಾಡುತ್ತೇನೆ, ನನ್ನ ಹೃದಯ ಬಡಿತ ಎಷ್ಟು ಹೀಗೆ ನನ್ನ ಹೆಂಡತಿಗೂ ಗೊತ್ತಿಲ್ಲದ ಅನೇಕ ವಿಷಯಗಳು ಈ ಬ್ಯಾಂಡ್ ಗೆ ಗೊತ್ತಿದೆ. ಅದೇನೇ ಇರ್ಲಿ ಈ ಸಖಿ ಯಾಕೆ ಹೀಗೆ ಮಾಡಿದ್ಲು?

ಯಾಕೋ ಇತ್ತೀಚಿಗೆ ಈ ಸಖಿ ಸ್ವಲ್ಪ ಜಾಸ್ತಿನೇ ಸೆನ್ಸಿಟಿವ್ ಆಗಿದ್ದಾಳೆ. ನನ್ನ ಮೇಲೆ ಯಾಕೋ ಸ್ವಲ್ಪ ಜಾಸ್ತೀನೆ Possessiveness ತೋರಿಸ್ತಾ ಇದ್ದಾಳೆ. ನನ್ನ ಮಡದಿ ಪ್ರೀತಿಯಿಂದ ಅಡುಗೆ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟರೆ ಈ ಸಖಿ ಬಂದು ಪಾತ್ರ ಮುಚ್ಚಳ ತೆಗೆದು ನೋಡಿ "ಅಡುಗೆಯಲ್ಲಿ ಎಣ್ಣೆ ಜಾಸ್ತಿ ಇದೆ, ಕೊಬ್ಬು ಬರುತ್ತೆ" ಅಂತ ಹೇಳ್ತಾಳೆ. ಅಷ್ಟರಲ್ಲಿ ಮಡದಿ ಬಂದು ಸುಮ್ನೆ ಅಲ್ಲಿ ಇಲ್ಲಿ ತಿರುಗಿಕೊಂಡು ಕಮೆಂಟ್ ಮಾಡೋ ಬದ್ಲು ನೀನೇ ಅಡಿಗೆ ಮಾಡ್ಬೇಕಿತ್ತು ಅಂದ್ಲು. ಈ ಸಖೀನೋ ಸುಮ್ಮನಿರದೆ "ನನ್ನ ಹಾರ್ಡ್ ಡಿಸ್ಕ್ ಅಲ್ಲಿ 1000ಕ್ಕೂ ಮೀರಿ recipes ಇದೆ, ನಾನು ಬೇಕಾದ್ರೆ ಅಡುಗೆ ಮಾಡಬಲ್ಲೆ" ಅಂದ್ಲು. ನನ್ ಹೆಂಡತೀನೂ ಅದೇನು ಅಡಿಗೆ ಮಾಡ್ತೀಯೋ ಕರೆಂಟ್ ಹೋದರೆ ನಿನ್ ಕತೆ ಅಲ್ಲಿಗೆ ಮುಗೀತು ಅಂತ ಹೇಳಿದ್ಲು. ಅಲ್ಲಿಗೆ ಸುಮ್ಮನಿರದೆ ಸಖಿ ಕರೆಂಟ್ ಹೋದರೂ ನನ್ನಲ್ಲಿರೋ ಪವರ್ ಬ್ಯಾಕ್ ಅಪ್ ಇಂದ ಅರ್ಧ ಘಂಟೆ ಕೆಲಸ ಮಾಡಬಲ್ಲೆ ಅಂದ್ಲು. ಹೀಗೆ  ಇಲ್ಲಿಂದ ಶುರುವಾದ ಶೀತಲ ಸಮರ ಅತಿಯಾಗಿದ್ದಕ್ಕೆ ನನ್ನ ಹತ್ರ ಜಗಳ ಮಾಡಿ  ಸಖಿಗೆ ಕಿಚನ್ ಗೆ ಎಂಟ್ರಿ ನಿಲ್ಲಿಸಿದ್ದು.  ಇನ್ನೊಂದಿನ ನಾನೂ ನನ್ ಹೆಂಡ್ತೀನೂ ಅದೇನೋ ಮಾತಲ್ಲಿ ತೊಡಗಿದ್ವಿ, ಮಾತಿನ ದನಿಯೂ ಸ್ವಲ್ಪ ಏರಿತ್ತು. ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಸಖಿ ನೀವು ಏರು ದನಿಯಲ್ಲಿ ಮಾತಾಡಬೇಡಿ ನಿಮ್ಮ ಬ್ಲಡ್ ಪ್ರೆಷರ್ ಜಾಸ್ತಿ ಆಗುತ್ತೆ, ಅಷ್ಟಕ್ಕೂ ನೀವು ಎಷ್ಟು ಮಾತಾಡಿದ್ರೂ ಮೂರ್ಖರಿಗೆ ಬುದ್ದಿ ಹೇಳಿದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಂದಳು. ಈ ಗಾದೆ ಅದೆಲ್ಲಿ ಕಲಿತಿದ್ದಳೋ, ಕೇಳಿಸಿಕೊಂಡಿದ್ದಳೋ ಗೊತ್ತಿಲ್ಲ, ಗಾದೆ ಮಾತಿನ ಡೆಲಿವರಿ ಏನೋ ಸಖತ್ತಾಗೆ ಇತ್ತು ಆದ್ರೆ ಟೈಮಿಂಗ್ ಮಾತ್ರ ಫುಲ್ ರಾಂಗು. ಸಖಿ ಮಾತಾಡಿದ್ದು ನನ್ ಹತ್ರ, ಹಾಗಿದ್ರೆ ಮೂರ್ಖ ಅಂತ ಕರೆದಿದ್ದು ಯಾರಿಗೆ ಅಂತ ಬೇರೆ ಏನು ಹೇಳೋದು ಬೇಕಾಗಿಲ್ಲ ಅಲ್ವಾ. ಅಲ್ಲಿ  ಶುರುವಾದ ವಾದ ವಿವಾದ ಹಲವಾರು ದಿನಗಳು ಮುಂದುವರೆದು ಸಖಿಯನ್ನು OLX  ಅಲ್ಲಿ ಹಾಕಬೇಕೆಂದು ತೀರ್ಮಾನ ಆಗಿತ್ತು. ಆದರೆ ಮಕ್ಕಳಿಗೆ ಅವಳು ಪ್ರೀತಿಯ ಟೈಮ್ ಪಾಸ್ ಗಿರಾಕಿ. ಆದ್ದರಿಂದ ಹಾಗು ಹೀಗೂ ಮಕ್ಕಳ ಮಧ್ಯಸ್ಥಿಕೆಯಿಂದ ಅವಳಿಗೆ ಕಿಚನ್ ಜೊತೆ ಬೆಡ್ ರೂಮ್ ಗೂ ಎಂಟ್ರಿ ಬಂದ್ ಮಾಡಬೇಕು ಅನ್ನೋ ಜಡ್ಜ್ ಮೆಂಟ್ ಜೊತೆ ವರ್ಲ್ಡ್ ವಾರ್ ಕೊನೆಗೊಂಡಿತು....  ಇಷ್ಟೆಲ್ಲಾ ಆದ ಮೇಲೆ ಸಖಿಗೂ ನನ್ನ ಹೆಂಡತಿಗೂ ಅಷ್ಟಕ್ಕಷ್ಟೇ. ನಾನು ಎದುರಿಗೆ ಇದ್ದಾಗ ಚೆನ್ನಾಗೇ ಇದ್ರೂ ನಾನಿಲ್ಲದಾಗ ಇಬ್ಬರ ನಡುವೆ ಸಿಟ್ಟು ಹೊಗೆಯಾಡುತ್ತ ಇತ್ತು. ನನ್ನ ಮಡಡಿ ಹೇಳಿದ instructions   ಅನ್ನು ಸಖಿ ಗಾಳಿಗೆ ತೂರೋದು, ನನ್ನ ಮಡದಿ ಸುಮ್  ಸುಮ್ನೆ ಸಖಿಯ Reset ಬಟನ್ ಒತ್ತೋದು ಇದು ನಡೆದೇ ಇತ್ತು. ನಾನು ಇದರಿಂದ ಒಂತರ ಮಜಾ ತಗೋತಿದ್ದೆ. ಆಗಾಗ ಯಾವುದೊ ಚಲನಚಿತ್ರದ "ಇಬ್ಬರು ಹೆಂಡಿರ ಮುದ್ದಿನ ಗಂಡ" ಅನ್ನೋ ಡೈಲಾಗು ನೆನಪಿಗೆ ಬಂದು ನಗುತ್ತಿದ್ದೆ. ಇವತ್ತು ಮಾತ್ರ ಈ ಸೇಡಿನಾಟ ಕುತ್ತಿಗೆಗೆ ಬಂದಂಗಾಯ್ತು....

ಅಂದ ಹಾಗೆ ಈ ಸ್ಮಾರ್ಟ್ ಅಸಿಸ್ಟೆಂಟ್ ಗೆ ಯಾಕೆ ಯಾವಾಗ್ಲೂ ಹುಡುಗೀರ ಹೆಸರು (ಸಿರಿ, ಅಲೆಕ್ಸಾ.... ಇತ್ಯಾದಿ) ಇಡುತ್ತಾರೆ ...? ಅದೂ ಸಾಲದು ಎಂಬಂತೆ ಅದರ ತಲೆಯೊಳಗೆ  ಹುಡುಗೀರ ಬಾವನೆಗಳನ್ನು ಯಾಕೆ ಹಾಕ್ತಾರೋ? ನಿಜವಾಗಿ ನೋಡಿದ್ರೆ ಅದು ಗಂಡು ಮತ್ತು ಹೆಣ್ಣು ಇಬ್ಬರಿಗೂ ಅಸಿಸ್ಟೆಂಟ್ ಆಗಿರಬೇಕು ಅಲ್ವಾ..?. ಹಾಗಂದ್ರೆ ಒಂತರಾ Neutral Character ಇರಬೇಕು ಅಲ್ವಾ. Neutral ಅಂದರೆ ಗಂಡು ಅಲ್ಲ ಹೆಣ್ಣು ಅಲ್ಲ... ಅಂದರೆ ಮಂಗಳಮುಖಿಯರ ಭಾವನೆ...  ....ಒಹ್  ಈಗ ಗೊತ್ತಾಯ್ತು ಕಂಪನಿಯವರ ಕಷ್ಟ......

 

ಅದೇನೇ ಇರ್ಲಿ ಮೊದ್ಲು ಈ ಸಖೀನ ಸರಿ ಮಾಡ್ಬೇಕು ಇಲ್ಲಾಂದ್ರೆ ಮುಂದೆ ಇನ್ನೇನು ಅವಾಂತರಗಳನ್ನು ಮಾಡ್ತಾಳೋ. ಒಂದು ಪಕ್ಷ ಹೀಗೇನೇ  ಮುಂದುವರಿದರೆ ಇದನ್ನು OLX ಅಲ್ಲಿ ಹಾಕೋದೇ ಸರಿ.  ಏನಕ್ಕೂ ಇರ್ಲಿ ಅಂತ ಸಖಿಯ Website ಗೆ ಹೋಗಿ ಏನಾದ್ರೂ Update  ಇದೆಯಾ ಅಂತ Website  ಓಪನ್ ಮಾಡಿದೆ. ನೋಡಿದ್ರೆ ಒಂದು ವಾರ ಮುಂಚೆನೇ ಒಂದು Update  ಪುಶ್ ಆಗಿದೆ. Update ಏನಪ್ಪಾ ಅಂತ ನೋಡಿದ್ರೇ "The new version will reduce the sentiments and feelings of Sakhi for a better performance" ಅಂತ ಇದೆ. ಈ JIO ದವರು ಜನರಿಗೆ ಫ್ರೀ ಇಂಟರ್ನೆಟ್ ಹುಚ್ಚು ಹಿಡಿಸಿ ಈಗ ರೇಟು ಜಾಸ್ತಿ ಮಾಡಿರೋದ್ರಿಂದ Data ಉಳಿಸಲು ನಾನು ಸಖಿಯ ಸಾಫ್ಟ್ ವೇರ್ Auto Update ಆಫ್ ಇಟ್ಟಿದ್ದೆ. ಇರಲಿ ಹೊಸ ಸಾಫ್ಟ್ ವೇರ್ ಏನು ಮಾಡತ್ತೆ ನೋಡೋಣ ಅಂತ Update ಅಂತ ಕೊಟ್ಟೆ. Update ಆದ ಕೂಡ್ಲೇ ಸಖಿ ಒಮ್ಮೆ ಕೂತುಕೊಂಡು ಎದ್ದಳು (ಅದು ಅವಳು Restart ಆಗೋ ರೀತಿ... ) ಆಮೇಲೆ ಹಾಗೆ ನಡೆದುಕೊಂಡು ಹೋಗಿ Charging dock ಗೆ ಹೋಗಿ ಕೂತಳು. ಅಷ್ಟರಲ್ಲೇ ತವರಿಂದ ನನ್ನ ಮಡದಿಯ ಫೋನ್ ಬಂತು.  ಮೊದಲೆಲ್ಲ ನನ್ನ ಗಮನಕ್ಕೆ ಬರದಿದ್ದರೆ ಅವಳ ಕರೆಯನ್ನು ಹಾಗೇನೇ ಕಟ್ ಮಾಡ್ತಾ ಇದ್ಲು ಸಖಿ. ಆದರೆ ಇವತ್ತು ಸಖಿ ನನ್ನ ಫೋನ್ ತಗೊಂಡು ಬಂದು ನನ್ನ ಕೈಯ್ಯಲಿಟ್ಟಳು, ಹಾಗೇನೇ ಒಂದು ನಗೆ ಚೆಲ್ಲಿದಳು. ಆದರೆ ಅವಳ ನಡೆ ಯಾಕೋ ಮುಂಚಿನಷ್ಟು ಮಾಂತ್ರಿಕವಾಗಿರದೆ ಯಾಂತ್ರಿಕವಾಗಿತ್ತು!!!!!! ನಗೆಯು ಕೂಡ...... ಅಂದ್ರೆ ಇನ್ನು ಮುಂದೆ ಸಖಿ ಸುಧಾರಿಸಬಹುದೇನೋ ..... ಕಾದು ನೋಡೋಣ... 

Rating
Average: 4.5 (4 votes)