ಸಣ್ಣಕತೆ : ದೇವರಹಸ್ಯ (ಭಾಗ 2)
ಮೊದಲ ಭಾಗಕ್ಕಾಗಿ ಓದಿ : < ದೇವರಹಸ್ಯ ಬಾಗ-೧ >
ಇಲ್ಲಿಯವರೆಗು..
ನಾನು ಮಹಾಬಲಿಪುರಂನ ಸಮುದ್ರದದ ದಂಡೆಯಲ್ಲಿದ್ದ ಗುಡ್ಡದಂತಹ ಸ್ಥಳವನ್ನು ಹತ್ತುತ್ತ , ಆ ಮನೆಯನ್ನು ಒಳಹೊಕ್ಕಿದ್ದ ನೆನಪು ಸ್ವಷ್ಟವಾಗಿತ್ತು. ಆದರೆ ಈಗ ನಾನು ಸಮುದ್ರದ ಎದುರಿನಲ್ಲಿ ಇರಲಿಲ್ಲ. ನಡುನೆತ್ತಿಯಲ್ಲಿ ಹೊಳೆಯುತ್ತಿದ್ದ ಚಂದ್ರನ ಬೆಳಕಿನಲ್ಲಿ ಎದುರಿಗೆ ಪರ್ವತಗಳ ಸಾಲು ಸಾಲು ಹಬ್ಬಿದ್ದು, ಹಿಮದಿಂದ ಮುಚ್ಚಿದ್ದ ಬೆಟ್ಟ ಗುಡ್ಡಗಳೆಲ್ಲ ಚಂದ್ರನ ಬೆಳಕಲ್ಲಿ ಬೆಳ್ಳಿಯ ಕವಚದಂತೆ ಹೊಳೆಯುತ್ತಿದ್ದವು. ನಾನು ಈ ದೃಷ್ಯವನ್ನು ನನ್ನ ನೆನಪಿನ ಜೊತೆ ಹೋಲಿಸಿನೋಡಿದೆ. ಎಲ್ಲೊ ನೋಡಿದಂತೆ ಅನ್ನಿಸುವದಲ್ಲ. ಹೌದು , ಎದುರಿಗಿರುವದೆಲ್ಲ, ಹಿಮಾಲಯದ ಸಾಲು ಸಾಲು ಪರ್ವತಗಳನ್ನು ಹೋಲುತ್ತಿವೆ. ಅಂದರೆ ನಾನೀಗ ಹಿಮಾಲಯದ ತಪ್ಪಲಿನಲ್ಲಿ ಇರುವೆನೆ? . ಹೇಗೆ ಸಾದ್ಯ. ನಾನು ಇದ್ದದ್ದು ದಕ್ಷಿಣದ ತಮಿಳುನಾಡಿನ ಮಹಾಬಲಿಪುರಂ ಸಮುದ್ರ ತೀರವಲ್ಲವೆ. ಅಷ್ಟೆ ಬೇಗ ನಡೆಯುತ್ತ ಹಿಮಾಲಯದ ಯಾವುದೊ ತಪ್ಪಲನ್ನು ತಲುಪಲು ಹೇಗೆ ಸಾದ್ಯ. ಎದುರಿಗಿದ್ದ ಸಮುದ್ರ ಏನಾಯಿತು.
.........................................................
ಮುಂದೆ ಓದಿ..
ನನಗೆ ಗೊತ್ತಾಯಿತು. ನನ್ನ ಮನ ಇವರು ಮಾಡಿರುವ ಇಂದ್ರಜಾಲವೊ ಅಥವ ಮನದ ವಶೀಕರಣಕ್ಕೊ (ಹಿಪ್ನಾಟಿಸಂ) ಒಳಗಾಗಿದೆ. ಇಲ್ಲದಿದ್ದರೆ ಹೀಗೆ ಸಾದ್ಯವಿಲ್ಲ. ನಾನು ಕಣ್ಣು ಮುಚ್ಚಿ ನಿಂತೆ. ನನ್ನ ಮನವನ್ನು ನನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತ. ಇದೆಲ್ಲ ಮೋಸ ನಂಬಬೇಡ. ಮತ್ತೊಮ್ಮೆ ನೋಡು ಎಲ್ಲವು ಸರಿಯಾಗಿದೆ. ನಾನು ಮಹಾಬಲಿಪುರಂ ಎಂಬ ಸಮುದ್ರದಡದಲ್ಲಿರುವ ಸ್ಥಳದಲ್ಲಿಯೆ ಇರುವೆನು. ಅಂದುಕೊಳ್ಳುತ್ತಿದ್ದೆ. ಎಷ್ಟೊ ಹೊತ್ತಾದ ನಂತರ ಮತ್ತೆ ಕಣ್ಣುಬಿಟ್ಟು ನೋಡಿದೆ. ಊಹೂ ಪ್ರಯೋಜನವಿಲ್ಲ. ಎಲ್ಲವು ಹಾಗೆಯೆ ಇದೆ, ನಾನು ನಿಜಕ್ಕು ಹಿಮಾಲಯದ ತಪ್ಪಲಿನ ಯಾವುದೊ ಪ್ರದೇಶದಲ್ಲಿರುವೆ ಅನ್ನುವುದು ನಿಜ. ಸುತ್ತಲು ಗಮನಿಸಿದರೆ, ನಾನು ಹೊರಬಂದ ಮನೆಯನ್ನು ಹೊರತುಪಡಿಸಿ, ಮತ್ತ್ಯಾವುದೆ ವಾಸಸ್ಥಳವಿರುವಂತಿಲ್ಲ. ಏನು ಮಾಡಬೇಕೆಂದು ಹೊಳೆಯಲಿಲ್ಲ.
ಸ್ವಲ್ಪ ಸಮಯ ಹಾಗೆ ನಿಂತಿದ್ದು ಮತ್ತೆ ನಿಧಾನವಾಗಿ ಒಳಬಂದೆ. ಅವನು ಅಂದರೆ ಕಾಯಸ್ಥ ಈಗ ತನ್ನ ಎದುರಿನಲ್ಲಿರುವ ಪುಸ್ತಕದಲ್ಲಿ , ಏನನ್ನೊ ಬರೆಯುತ್ತಿದ್ದ. ನಾನು ಹತ್ತಿರ ಹೋಗಿ ನೋಡಿದೆ ಅದರಲ್ಲಿ ಏನು ಬರೆಯುತ್ತಿರಬಹುದು ಎಂದು. ಅವನು ತೆರೆದ ಪುಟದಲ್ಲಿ ಏನು ಇರಲಿಲ್ಲ ಬರಿ ಚುಕ್ಕಿಗಳು. ಆಗಲು ಅವನು ಒಂದು ಕಪ್ಪು ಚುಕ್ಕಿಯನ್ನು ಇಡುತ್ತಿದ್ದ ಅವನ ಬಳಿ ಇರುವ ನವಿಲುಗರಿ ಆಕಾರದ ವಿಚಿತ್ರ ಪೆನ್ನಿನಿಂದ. ನನಗೆ ಹುಚ್ಚು ಹಿಡಿಯುವುದು ಬಾಕಿ. ನನ್ನತ್ತ ತಲೆ ಎತ್ತಿ ನೋಡಿ ನಗುತ್ತ
"ಕುಳಿತುಕೊಳ್ಳಿ ಒಂದೊಂದೆ ವಿಶಯವನ್ನು ನೀವು ಅರಿಯುತ್ತ ಹೋದರೆ, ನಿಮ್ಮ ಮನಸಿನ ಆತಂಕ ಕಡಿಮೆಯಾಗುತ್ತದೆ. ನಿಮಗೆ ವಿವರವಾಗಿ ಎಲ್ಲವನ್ನು ಹೇಳುವೆ , ನಿಮಗೆ ಎಷ್ಟು ಅರ್ಥವಾಗುತ್ತದೆಯೊ ಅಷ್ಟನ್ನು ಅರ್ಥಮಾಡಿಕೊಳ್ಳಿ, ನಿಧಾನವಾಗಿ ತಿಳಿಯುತ್ತದೆ. ಈಗ ಇದನ್ನು ಸ್ವೀಕರಿಸಿ"
ಒಳಗಿದ್ದ ಹೂಜಿಯಾಕಾರದ ಪಾತ್ರೆ ಒಂದರಿಂದ , ಚಿಕ್ಕ ಲೋಟದಂತಿದ್ದ ಪಾತ್ರೆಗೆ ಏನನ್ನು ಸುರಿದು ಕೊಟ್ಟ. ನನಗೆ ಆತಂಕವಾಯಿತು ಏನು ಕೊಡುತ್ತಿದ್ದಾನೊ
"ಇದು ಬರಿ ಜಲ, ಪರಿಶುದ್ದ ಜಲ. ಇದರಲ್ಲಿ ಏನು ಇಲ್ಲ. ನಿಮ್ಮ ದೇಹಕ್ಕೆ ಉತ್ಸಾಹ ಮನಸಿಗೆ ಉಲ್ಲಾಸ ಕೊಟ್ಟು ಆತಂಕ ಕಳೆಯಲು ಕೊಡುತ್ತಿರುವೆ ಅಷ್ಟೆ" ಎಂದ.
ನಾನು ನನ್ನ ಭಯಕ್ಕೆ ನಾಚಿಕೆಪಡುತ್ತ ಅವನಿಂದ ಲೋಟ ಪಡೆದು ದ್ರವವನ್ನು ಒಂದು ಗುಟುಕು ಕುಡಿದೆ. ನಿಜ ಅದು ಸ್ವಚ್ಚವಾದ ನೀರು. ಯಾವುದೆ ವಾಸನೆ ಇಲ್ಲದ ರುಚಿ ಇಲ್ಲದ ಏನು ಬೆರೆತಿರದ ಬಣ್ಣವು ಇಲ್ಲದ ಪರಿಶುದ್ದ ನೀರು. ಅವನು ಹೇಳಿದ್ದು ನಿಜವಿತ್ತು. ನೀರು ಕುಡಿದಂತೆ. ದೇಹ ಹಗುರವಾಗಿ ಮನಸ್ಸು ಪ್ರಫುಲ್ಲವಾಯಿತು. ಅವನು ನುಡಿದ.
"ಬಹುಷಃ ಸ್ವಲ್ಪ ದಿನಗಳ ಕಾಲ ಇದೆ ನಿಮಗೆ ಅಹಾರವಾಗಬಹುದು. ಆಗ ನಿಮ್ಮ ದೇಹ ಶುದ್ದವಾಗಿ ನಮ್ಮಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತದೆ"
ಅಲ್ಲಿಗೆ ಇವನಿಗೆ ನನ್ನನ್ನು ತಕ್ಷಣ ಕಳಿಸುವ ಯೋಚನೆ ಇಲ್ಲ ಎಂದು ಅರ್ಥವಾಯಿತು. ಆದರೆ ಹೋಟೆಲಿನಲ್ಲಿ ನನ್ನ ಬಗ್ಗೆ ಕಾಯುತ್ತಿರುವ ಸ್ನೇಹಿತರು , ಆತಂಕದಿಂದ ಏನು ಮಾಡಿದ್ದಾರೊ ಅನ್ನುವ ಕಸಿವಿಸಿ ಆಯಿತು. ಅವರೊಡನೆ ನಾನು ತೆಪ್ಪಗೆ ರೂಮಿನಲ್ಲಿರದೆ ಈ ರೀತಿ ಘಟನೆಯನ್ನು ಮೈಮೇಲೆ ಎಳೆದುಕೊಂಡಿದ್ದೆ.
ಅವನು ಮತ್ತೆ ಮಾತು ಪ್ರಾರಂಬಿಸಿದ
"ನಿಮಗೆ ಮೊದಲಿನಿಂದ ತಿಳಿಸುತ್ತ ಹೋದರೆ ಗೊಂದಲವೆಲ್ಲ ಪರಿಹಾರವಾಗಬಹುದೆಂದು ಅನ್ನಿಸುತ್ತದೆ. ಕೇಳುತ್ತ ಹೋಗಿ ಎಷ್ಟೋ ವರ್ಷಗಳ ಹಿಂದೆಯೆ ಭೂಮಿಯಲ್ಲಿ ಜೀವಿಗಳ ಉಧ್ಬವವಾಯಿತು. ಅವರ ನಾಗರೀಕತೆ ತಂತ್ರಜ್ಞಾನ ಎಲ್ಲವು ಬೆಳೆಯುತ್ತ ಹೋಯಿತು. ಎಷ್ಟೆ ವಿಜ್ಞಾನ ಪ್ರಗತಿ ಹೊಂದಿದರು ಅವರಲ್ಲಿ ಕೆಲವು ಅನುಮಾನಗಳು ಉಳಿದೆ ಇದ್ದವು. ಆಗ ಮುಖ್ಯಸ್ಥರೆಲ್ಲ ಸೇರಿ ಒಂದು ಹೊಸ ಪ್ರಯೋಗಕ್ಕೆ ಮುನ್ನುಡಿ ಹಾಡಿದರು. ಸಮಾಜದಲ್ಲಿ ಅ ಪ್ರಯೋಗಕ್ಕೆ ಕೆಲವರು ವಿರೋದವು ಇತ್ತು ಅಂದುಕೊಳ್ಳಿ. ಪ್ರಕೃತಿಯಲ್ಲಿ ಸಿಗುವ ಮೂಲವಸ್ತುಗಳನ್ನೆ ಬಳಿಸಿ ಹೊಸ ಜೀವಕೋಶಗಳನ್ನು ಸೃಷ್ಟಿಸಿ ನೋಡುವ ಪ್ರಯೋಗವದು. ಹಲವು ನೈಸರ್ಗಿಕ ರಸಾಯನ ವಸ್ತುಗಳನ್ನು ಸಂಯೋಜಿಸಿ ಸೂರ್ಯನ ಕಿರಣವನ್ನೆ ಶಕ್ತಿಯನ್ನಾಗಿ ಬಳಸಿ ಅವುಗಳನ್ನು ಅಭ್ಯಸಿಸಲಾಯಿತು.
ನೋಡ ನೋಡುತ್ತಿರುವಂತೆ ಅವುಗಳು ಸಹಜವಾಗಿ ಜೀವಿಗಳ ಜೀವಕೋಶಗಳಂತೆಯೆ ವಿಕಾಸಹೊಂದಲು ತೊಡಗಿದವು. ಮೊದಲಿಗೆ ಅವುಗಳು ಸಮುದ್ರದಲ್ಲಿ ಬೆಳವಣಿಗೆ ಹೊಂದಿದವು. ಮೊದಲಿಗೆ ಕೇವಲ ಸಸ್ಯಜೀವಕೋಶಗಳಾಗಿದ್ದವುಗಳು ಕೆಲವು ಬದಲಾವಣೆಗಳೊಡನೆ ಏಕಜೀವ ಕೋಶಗಳು ಬೆಳೆದಾಗ ನಾವೆಲ್ಲ ಸಂತಸಬಿದ್ದೆವು. ನೋಡು ನೋಡುತ್ತಲೆ ಅವು ಬೆಳವಣಿಗೆ ಹೊಂದುತ್ತ ಸಣ್ಣ ಜೀವಿಗಳ ಸೃಷ್ಟಿಯಾದವು. ನಂತರ ನಮ್ಮ ಅಗತ್ಯವೆ ಇಲ್ಲದಂತೆ ಅವುಗಳ ಸೃಷಿಕ್ರಿಯೆ ನಡೆಯುತ್ತ ಹೋಗಿ ಹಲವು ತಳಿಗಳು ವಿಭಾಗಗಳಾಗಿ ಬೆಳವಣಿಗೆ ಹೊಂದುತ್ತ ಹೋದವು. ನಮಗೆ ಕುತೂಹಲ ಹುಟ್ಟಿಸುವಂತೆ ನಮ್ಮೆದುರು ನಮ್ಮ ಸೃಷ್ಟಿ ಕೆಲವೆ ಕಾಲದಲ್ಲಿ ಅಧ್ಬುತ ರೂಪತಾಳಿ ಭೂಮಿಯನ್ನೆಲ್ಲ ಆವರಿಸುತ್ತ ಹೋಯಿತು.
ದೈತ್ಯ ಜೀವಿಗಳ ಉಗಮವಾಯಿತು. ಆದರೆ ಕೆಲವೊಮ್ಮೆ ನೈಸರ್ಗಿಕವಾಗಿಯೆ ಅವುಗಳ ನಾಶವಾಗುತ್ತಿತ್ತು. ನಾವು ಅವುಗಳನ್ನೆಲ್ಲ ದಾಖಲಿಸುತ್ತ ಸಾಗಿದೆವು. ನಮಗೆ ಅಚ್ಚರಿ ತರುವಂತೆ ಸೃಷ್ಟಿಯ ಅದ್ಬುತ ಅಥವ ಉತ್ತುಂಗ ಎನ್ನುವಂತೆ ಮನಷ್ಯರು ಅಂದರೆ ನೀವು ಜನ್ಮ ತಾಳಿದಿರಿ. ನಂತರ ಮನುಷ್ಯ ಜೀವಿಗಳ ಮನಸಿನ ಶಕ್ತಿ ಅಪಾರವಾಗಿ ಬೆಳೆಯುತ್ತ ಸಾಗಿತು. ಸೃಷ್ಟಿಯಲ್ಲಿ ಅತಿ ಬುದ್ದಿವಂತ ಪ್ರಾಣಿಯಾಗಿ ಅವನು ಬೆಳವಣಿಗೆ ಹೊಂದಿದ. ಅವನ ಜ್ಞಾನ ನೆನಪು ಕೌಶಲ್ಯ ಎಲ್ಲವು ನಮಗೆ ಅಚ್ಚರಿ ಕೆಲವೊಮ್ಮೆ ಭಯ ತರುತ್ತಿತ್ತು.
ಸೃಷ್ಟಿಯ ಪ್ರತಿ ವಸ್ತುವಿನಲ್ಲು ಮನುಷ್ಯನಿಗೆ ಇರುವ ಕುತೂಹಲ ಮತ್ತು ಕಲ್ಪನೆಗಳೆ ಅವನ ಅವಿಷ್ಕಾರಗಳಿಗೆ ಮೂಲಕಾರಣವಾಯಿತು. ಯಾವ ಜೀವಿಗು ಇರದಿದ್ದ ಮಾತನಾಡುವ ಶಕ್ತಿ ತರ್ಕಬದ್ದವಾಗಿ ಯೋಚಿಸುವಶಕ್ತಿ ಸೃಷ್ಟಿಯಲ್ಲಿ ಅವನನ್ನು ಉನ್ನತ ಸ್ಥಾನಕ್ಕೇರಿಸಿತು.
ನಿಜ ಹೇಳಬೇಕೆಂದರೆ ನಾವು ಮನುಷ್ಯನ ಸೃಷ್ಟಿಗೆ ಕಾರಣಕರ್ತರಾಗಿದ್ದರು ಸಹ ನಮಗೆ ಕೆಲವೊಂದು ಉತ್ತರ ಸಿಗದ ಪ್ರಶ್ನೆಗಳಿದ್ದವು . ಅದೆಂದರೆ ನಮ್ಮ ಸೃಷ್ಟಿ ಹೇಗೆ ಆಯಿತು ಎಂಬುದು. ಮನುಷ್ಯ ತನ್ನ ಬುದ್ದಿಶಕ್ತಿಯಿಂದ ಅಂತಹ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಸಾಗಿದ. ಅವನ ಇತಿಹಾಸ ನಮಗೆ ಪಾಠದಂತೆ ಇತ್ತು. ಅವನ ಅವಿಷ್ಕಾರಗಳಾದ ಯಂತ್ರಗಳು ನಿಸಂಶಯವಾಗಿ ಅವನ ಉನ್ನತಿಯನ್ನು ಸಾರುತ್ತಿದ್ದವು.
ನಾವು ನೋಡು ನೋಡುತ್ತಿರುವಂತೆ ಅವನು ಪ್ರತಿ ಸೃಷ್ಟಿಗೆ ಪ್ರಯತ್ನದಲ್ಲಿ ತೊಡಗಿದ. ಇದೆಂತಹ ಕೌತುಕ. ನಮ್ಮನ್ನು ಯಾರು ಸೃಷ್ಟಿಸಿದರೆಂಬ ಅರಿವು ನಮಗಿಲ್ಲ ಅದನ್ನು ನಮ್ಮ ಸೃಷ್ಟಿಯಾದ ಮನುಷ್ಯ ಬೇಧಿಸ ತೊಡಗಿದ , ಆದರೆ ಅವನು ಸಹ ನಮ್ಮಂತೆಯೆ ಮತ್ತೊಂದು ಸೃಷ್ಟಿಗೆ ಪ್ರಯತ್ನಿಸಲು ತೊಡಗಿದ. ಅಂದರೆ ಇದೊಂದು ನಿರಂತರ ಚಕ್ರವೆ ಎಂಬ ಪ್ರಶ್ನೆ ನಮ್ಮನ್ನು ಕಾಡಿದೆ. ನಮ್ಮನ್ನು ಯಾರೊ ಸೃಷ್ಟಿಸುವುದು , ನಂತರ ನಾವು ನಮ್ಮದೆ ಸೃಷ್ಟಿಯಲ್ಲಿ ತೊಡಗುವುದು ನಂತರ ನಮ್ಮ ಸೃಷ್ಟಿ ಪುನಃ ಪ್ರತಿ ಸೃಷ್ಟಿಯಲ್ಲಿ ತೊಡಗುವುದು ಇದು ಹೀಗೆಯೆ ಸಾಗುತ್ತದೆಯೆ ಗೊತ್ತಿಲ್ಲ.
ನಮಗೆ ಪ್ರಕೃತಿಯಲ್ಲಿ ಸಿಗದ ಅನೇಕ ಪ್ರಶ್ನೆಗಳಿಗೆ ಮನುಷ್ಯ ಉತ್ತರಗಳನ್ನು ಹುಡುಕಲು ಪ್ರಯತ್ನಿಸಿದ್ದ . ಅವುಗಳಲ್ಲಿ ಮುಖ್ಯ ವೆಂದರೆ ಸೃಷ್ಟಿಯ ಕಲ್ಪನೆ, ದೇವರು ಎನ್ನುವ ವಸ್ತು. ವಿಜ್ಞಾನ ಬೆಳೆದಂತೆ ಅವನು ಹೊರಗಿನ ಗ್ರಹಗಳತ್ತ ಸಾಗಲು ತೊಡಗಿದ.
ಆದರೆ ಪ್ರಕೃತಿಯಲ್ಲು ವಿಕೃತಿ ಎನ್ನುವಂತೆ ಅವನು ತಾನು ನಿಂತ ಮರದ ಕೊಂಬೆಯನ್ನೆ ಕಡಿಯಲು ತೊಡಗಿದಾಗ ನಮಗೆ ಗಾಭರಿ ಪ್ರಾರಂಬವಾಯಿತು. ನಿಜ ಹೇಳಬೇಕೆಂದರೆ , ನಮ್ಮಲ್ಲಿ ಮನುಷ್ಯನ ಅವಿಷ್ಕಾರಕ್ಕಿಂತ ಮುಂಚೆ ಕೆಲವು ಭಾವವಿರಬಹುದೆಂಬ ಕಲ್ಪನೆಯೆ ಇರಲಿಲ್ಲ. ಅದೆಂದರೆ ದ್ವೇಷ, ರೋಷ, ಯಾರನ್ನೊ ಕೊಲ್ಲುವುದು, ಕ್ರೌರ್ಯ, ಯುದ್ದ, ಅಣುವಿನ ಆಯುದ. ಅಸ್ತ್ರಗಳು ಇವುಗಳು ನಮ್ಮನ್ನೆಲ್ಲ ಬೆಚ್ಚಿ ಬೀಳಿಸಿದವು. ನಮಗೆ ಆಶ್ಚರ್ಯವಾಗಲು ತೊಡಗಿತು,. ಇದು ಏಕಾಯಿತು. ಒಂದು ವೇಳೆ ಇದು ಸೃಷ್ಟಿಯ ವಿಕೃತಿಯ ಎಂದು. ಅದು ನಿಜವಾದರೆ ಅದಕ್ಕೆ ಕಾರಣವೇನು. ನಮ್ಮ ಸೃಷ್ಟಿಯ ಪ್ರಯೋಗದಲ್ಲಿ ಯಾವ ತಪ್ಪು ಇತ್ತು ನಾವು ಎಲ್ಲಿ ತಪ್ಪಿದೆವು. ನಮಗೆ ತಿಳಿಯುತ್ತಿಲ್ಲ. ಹಾಗಾಗಿ ಕೆಲವು ಮನುಷ್ಯರನ್ನು ಕರೆತಂದು ನಾವು ಅಭ್ಯಸಿಸತೊಡಗಿದೆವು. ವಿಚಿತ್ರವೆಂದರೆ ಈಗಲು ಮನುಷ್ಯನ ಸೃಷ್ಟಿಯಲ್ಲಿ ಯಾವುದೆ ದೋಷವಿಲ್ಲ. ಅಂದರೆ ಅವನು ಹುಟ್ಟು ಅದಾಗ ಸಹಜವಾಗಿಯೆ ಇರುತ್ತಾನೆ ಆದರೆ ಬೆಳವಣಿಗೆ ಹೊಂದಿದಂತೆ , ಅವನಲ್ಲಿ ಕೆಲವು ಬದಲಾವಣೆ ಕಾಣಿಸುತ್ತದೆ ಒಬ್ಬೊಬ್ಬ ಮನುಷ್ಯನು ಒಂದೊಂದು ರೀತಿ ಬೆಳೆಯುತ್ತ ವಿಕಾರಗಳಿಗೆ ಕಾರಣವಾಗುತ್ತಿದ್ದಾನೆ. ತಾನು ನಿಂತಿರುವ ನೆಲವನ್ನೆ ಪ್ರಕೃತಿಯನ್ನು ನಾಶಮಾಡಲು ಸನ್ನದನಾಗಿದ್ದಾನೆ. ಇದಕ್ಕೆ ಹೊರಗಿನ ಕಾರಣ ಅಥವ ಪ್ರಭಾವ ಕಾರಣವಿರಬಹುದೆಂದು ಅನ್ನಿಸುತ್ತದೆ.
ಈಗ ನಮ್ಮವರೆಲ್ಲ ಯೋಚಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಯಾವುದಾದರು ಮಾರ್ಗವಿದೆಯೆ ಎಂದು. ಇಲ್ಲವೆ ಈ ಪ್ರಯೋಗವನ್ನು ಇಲ್ಲಿಗೆ ಸ್ಥಗಿತಗೊಳಿಸಬೇಕೆ ಎಂಬ ಗೊಂದಲ. ನಮಗನ್ನಿಸುವಂತೆ ಹಲವು ಪ್ರಶ್ನೆಗಳಿಗೆ ಸಶಕ್ತವಾಗಿ ಉತ್ತರಗಳನ್ನು ಹುಡುಕಿರುವ ಮನುಷ್ಯ ಈ ಸಮಸ್ಯೆಗೆ ಉತ್ತರ ಹುಡುಕಿಕೊಳ್ಳನೆ ಎನ್ನುವ ದೈರ್ಯವು ನಮಗಿದೆ"
ಅವನು ಮಾತು ನಿಲ್ಲಿಸಿದಾಗ ನನಗೆ ಎಂತದೊ ವಿಭ್ರಮೆ ಕಾಡಿತು. ಅಂದರೆ ಏನು ನಾವು ಇಲ್ಲಿಯವರೆಗು ಭಾವಿಸಿರುವಂತೆ ಮನುಷ್ಯನ ಸೃಷಿಗೆ ದೇವರು ಕಾರಣವೆಂಬ ನಮ್ಮ ನಂಬಿಕೆ ಸುಳ್ಳಾಯಿತ. ಅಥವ ಅದನ್ನು ಹೀಗೂ ಹೇಳಬಹುದ,
ನಮ್ಮ ಸೃಷಿಗೆ ಕಾರಣವಾಗಿರುವ ಇವರು ನಮ್ಮ ಪಾಲಿಗೆ ದೇವತೆಗಳೆ ಅಲ್ಲವೆ.
ಆದರೆ ಅವನು ಹೇಳಿದ್ದರಲ್ಲಿ ನನಗೆ ಅರ್ಥವಾಗದ ಸಾಕಷ್ಟು ವಿಷಯಗಳಿದ್ದವು. ಮೊದಲನೆಯದಾಗಿ ಭೂಮಿಯ ಮೇಲಿನ ಸೃಷ್ಟಿ ಚಕ್ರದ ಕತೆ ನಡೆದಿರುವುದು ಸುಮಾರು ಐದು ಸಾವಿರ ವರ್ಷಗಳಷ್ಟು ದೀರ್ಘಕಾಲ ಅಥವ ಸ್ವಲ್ಪ ಹೆಚ್ಚೆ ಇರಬಹುದು. ಆದರೆ ಇವನಾದರು ಇದನ್ನೊ ಅದೇನೊ ಮೂರುಗಂಟೆಯ ಸಿನಿಮಾದಂತೆ ಹೇಳುತ್ತಿದ್ದಾನೆ. ಇವನ ಕಾಲಮಾನದಲ್ಲಿ ಅಂದುಕೊಂಡರು. ಸೃಷ್ಟಿಕ್ರಿಯೆ ಪ್ರಾರಂಬವಾಗಿ ಕೇವಲ ಐವತ್ತು ಅರವತ್ತು ವರುಷಗಾಗಿದೆಯ ಅದು ಅಸಂಭವ ಅನ್ನಿಸಿತು. ಅಂದರೆ ಇವನು ಪುಸ್ತಕದಲ್ಲಿ ಬರೆಯುತ್ತ ಕುಳಿತಿರುವುದು ಅವರ ಪರಿಕ್ಷೆಯ ದಾಖಲೆಗಳೆ. ನನಗೆ ಅರ್ಥವಾಗಲಿಲ್ಲ.
"ನೋಡಿ ಇವರೆ ನೀವು ನಿಮ್ಮ ಹೆಸರು ಕಾಯಸ್ಥನೆಂದು ಹೇಳಿದಿರಿ ನಾನು ಹಾಗೆ ಕರೆಯುವೆ, ಕಾಯಸ್ಥರೆ, ನಿಮ್ಮ ಕತೆಯ ಪ್ರಯೋಗದ ಕಾಲಮಾನ ನಲವತ್ತು ಐವತ್ತು ವರುಷಗಳಲ್ಲಿ ಸಂಬವಿಸಿರಬಹುದು, ಆದರೆ ಮನುಷ್ಯನ ಹಾಗು ಭೂಮಿಯ ಮೇಲಿನ ಜೀವಿಗಳ ಇತಿಹಾಸ ಐದುಸಾವಿರ ವರ್ಷಕ್ಕು ಮೀರಿದೆ, ಅದನ್ನು ಹೇಗೆ ವಿವರಿಸುವಿರಿ" ಕೇಳಿದೆ.
ಅದಕ್ಕವನು
"ಯಾವುದೆ ಜೀವಿಗೆ ಆಗಲಿ , ಅದರ ಬುದ್ದಿಶಕ್ತಿಗೆ, ಅಥವ ಯೋಚನ ಶಕ್ತಿಗೆ ಕೆಲವು ಮಿತಿಗಳಿರುತ್ತವೆ, ಅದನ್ನು ಮೀರಿದಾಗ ಆ ಜೀವಿಗಳಿಗೆ ಅದನ್ನು ನಾವು ವಿವರಿಸಿದರು ಅರ್ಥ ಮಾಡಿಸಲು ಕಷ್ಟ. ನಿಮಗೆ ಒಂದು ಉದಾಹರಣೆ ಕೊಡುವೆ ನೋಡಿ, ನಿಮ್ಮಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿರುವ ಚಿಕ್ಕಮಗುವನ್ನು ಕಲ್ಪಿಸಿಕೊಳ್ಳಿ, ನೀವು ಒಮ್ಮೆಲೆ ಅವನಿಗೆ ಮಾಸ್ಟರ್ ಡಿಗ್ರಿಯಲ್ಲಿ ಬರುವ ಒಂದು ಗಣಿತದ ಸಮಸ್ಯೆಯನ್ನು ಬಿಡಿಸಲು ಕೊಟ್ಟರೆ ಏನಾಗುವುದು, ಅಥವ ನೀವು ಅವನಿಗೆ ಬಲವಂತವಾಗಿ ಅದನ್ನು ಬೋದಿಸಿದರೆ ಏನಾಗುತ್ತದೆ"
ಎಂದು ಕೇಳಿದ.
ನಾನು ಉತ್ತರಿಸುತ್ತ
"ಸಾದ್ಯವಿಲ್ಲ ಅರೀತಿ ಮಾಡಿದರೆ ಸಹಜವಾಗಿಯೆ ಆ ಮಗುವಿಗೆ ಗಣಿತದ ಸಮಸ್ಯೆಯ ಪ್ರಾಮುಖ್ಯತೆ ಅರಿವಾಗುವದಿಲ್ಲ. ಬಲವಂತದಿಂದಲು ಯಾವುದೆ ಪ್ರಯೋಜನವಿಲ್ಲ ಏಕೆಂದರೆ ಆ ಮಗುವಿನ ಮೆದುಳಿನ ಶಕ್ತಿ ಸೀಮಿತವಾಗಿರುತ್ತದೆ ಅಲ್ಲವೆ"
ಎಂದೆ
ಅವನು ನಗುತ್ತ "ನೋಡಿ ಎಲ್ಲ ವಿಷಯಗಳು ಸಹ ಹಾಗೆ, ದೊಡ್ಡವರಾದ ಮಾತ್ರಕ್ಕೆ ಮನುಷ್ಯನ ಮೆದುಳು ಎಲ್ಲವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇದೆ ಅಂದುಕೊಳ್ಳಬೇಡಿ, ಈಗ ನಿಮ್ಮ ಪ್ರಶ್ನೆಗೆ ಬರುವದಾದರೆ. ಅವಕಾಶದಲ್ಲಿ ಹೇಗೆ ಬೇರೆಬೇರೆ ಆಯಾಮಗಳಿರುತ್ತವೊ ಹಾಗೆಯೆ ಸಮಯದಲ್ಲಿ (Time) ಬೇರೆ ಬೇರೆ ಅಯಾಮಗಳು (Dimension) ಇರುತ್ತದೆ. ಅಂದರೆ ನಮಗೆ ಐವತ್ತು ವರುಷಗಳಗಿರುವ ಸಮಯ ನಿಮಗೆ ಐದುಸಾವಿರ ವರುಷಗಳಾಗುವ ಸಾದ್ಯತೆ ಇದೆ ಅಲ್ಲವೆ" ಎಂದ
ನನ್ನ ಬುದ್ದಿಗೆ ಮಂಕು ಕವಿಯಿತು. ಅಂದರೆ ನಮ್ಮ ಪುರಾಣಗಳಲ್ಲಿ ಹೇಳುತ್ತಿದ್ದ ಕತೆಗಳಿದ್ದವಲ್ಲ , ಮನುಷ್ಯನಿಗೆ ಒಂದು ವರ್ಷವೆಂದರೆ ಪಿತೃದೇವತೆಗಳಿಗೆ ಒಂದು ದಿನವೆಂದು, ಹಾಗೆ ಪಿತೃಗಳ ಒಂದು ವರ್ಷವು ಬ್ರಹ್ಮನಿಗೆ ಒಂದು ಹಗಲೆಂದು. ಬ್ರಹ್ಮನ ಒಂದು ವರ್ಷವು ವಿಷ್ಣುವಿಗೆ ಒಂದು ದಿನವೆಂದೆ, ಇವೆಲ್ಲ ಕಲ್ಪನೆಗಳು ನಿಜವಾಗಿರಲು ಸಾದ್ಯವೆ ಅನ್ನಿಸಿತು. ನಮ್ಮ ಪುರಾಣದ ಕತೆಗಳನ್ನು ಇವನು ಹೇಳುತ್ತಿರುವದನ್ನು ಸಮನ್ವಯಗೊಳಿಸಿದರೆ , ಈತನು ಮತ್ತು ಇವನ ಜನಾಂಗವು ನಮ್ಮ ಪಾಲಿಗೆ ದೇವತೆಗಳು ಆದರೆ ಇವರು ಇರುವದಾದರು ಎಲ್ಲಿ. ನಾನೀಗ ದೇವಮೂಲವನ್ನು ಹುಡುಕುವ ದಾರಿಯಲ್ಲಿರುವೆ ಎಂಬ ಭಾವ ನನ್ನನ್ನು ತುಂಬಿತು.
ನನ್ನ ಮನದಲ್ಲಿ ದೊಡ್ಡ ಆಂದೋಲನವೊಂದು ನಡೆದಿತ್ತು. ನಾನು ಬಹುತೇಕ ಮನಸಿನ ಸಮತೋಲನ ಕಳೆದುಕೊಂಡಿದ್ದೆ . ಹಾಗಾಗಿ ನಾನು ಬಹಳಷ್ಟು ಅರ್ಥಹೀನ ಪ್ರಶ್ನೆಗಳನ್ನು ಕೇಳ ತೊಡಗಿದೆ.
"ನಾನೀಗ ಸತ್ತಿರುವೆನೆ?" ಎಂದೆ
"ಇಲ್ಲ ನೀವು ಸತ್ತಿಲ್ಲ , ನೀವಿಲ್ಲಿಗೆ ಬಂದಿರುವುದು ಸಜೀವರಾಗಿ, ನಿಮ್ಮದೆ ದೇಹದ ಸಮೇತ"
ನನಗೆ ಸ್ವಲ್ಪ ಸಮಾದಾನವಾಯಿತು. ಮತ್ತೆ ಕೇಳಿದೆ.
"ಈಗ ನನ್ನನ್ನು ಕರೆತಂದಿರುವ ಕಾರಣವೇನಿದೆ, ನನ್ನ ಮೇಲೆ ನಿಮ್ಮ ವಿಜ್ಞಾನಿಗಳು ತಮ್ಮ ಪ್ರಯೋಗ ನಡೆಸುತ್ತಾರೆಯೆ" ಎಂದು ಕೇಳಿದೆ ಭಯದಿಂದ.
"ಇಲ್ಲ ಖಂಡೀತ ಇಲ್ಲ ಅನ್ನಿಸುತ್ತೆ. ನಿಮ್ಮನ್ನು ಕೇವಲ ಪರೀಕ್ಷೆಗೆ , ಪ್ರಯೋಗಕ್ಕೆ ಕರೆತಂದಿದ್ದರೆ , ನನ್ನ ಬಳಿ ನಿಮ್ಮನ್ನು ಕಳಿಸಲು ಕಾರಣವಿರಲಿಲ್ಲ. ನಿಮ್ಮನ್ನು ನನ್ನ ಬಳಿ ಕಳಿಸಿ ನಿಮಗೆ ಅಗತ್ಯ ಮಾಹಿತಿಯನ್ನೆಲ್ಲ ಕೊಟ್ಟು ನಂತರ ಪ್ರಮುಖರತ್ತ ಕರೆದೊಯ್ಯಲಾಗುತ್ತೆ ಅನ್ನಿಸುತ್ತೆ" ಎಂದ.
ನನಗೀಗ ಆಶ್ಚರ್ಯವಾಯಿತು.
" ಅಂದರೆ ನನ್ನನ್ನು ಯಾವ ಕಾರಣಕ್ಕೆ ಇಲ್ಲಿಗೆ ಕರೆತಂದಿದೆ ಎಂದು ನಿಮಗು ತಿಳಿದಿಲ್ಲವೊ ಅಥವ ನೀವು ನನಗೆ ಹೇಳುತ್ತಿಲ್ಲವೊ" ಎಂದೆ
"ಇಲ್ಲ ನಿಮ್ಮನ್ನು ಯಾವ ಕಾರಣಕ್ಕಾಗಿ ಮುಖ್ಯಸ್ಥರಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ. ಇದು ನನಗು ತಿಳಿಯದ ರಹಸ್ಯ. ನಾನು ನಿಮ್ಮಿಂದ ಮುಚ್ಚಿಡುವ ಅಗತ್ಯವೇನು ನನಗಿಲ್ಲ" ಎಂದ.
ಇದೊಳ್ಳೆ ಆಶ್ಚರ್ಯವಾಗಿದೆಯಲ್ಲ. ನನ್ನನ್ನು ಯಾವ ಕಾರಣಕ್ಕೆ ಕರೆತರಲಾಗಿದೆ ಎನ್ನುವುದು ಇಲ್ಲಿ ಮುಖ್ಯಸ್ಥನಂತಿರುವ ಇವನಿಗೆ ತಿಳಿದಿಲ್ಲ. ಅಲ್ಲಿಗೆ ನನ್ನನ್ನು ಯಾವುದೊ ಗುರುತರವಾದ ಕಾರಣಕ್ಕೆ ಕರೆತರಲಾಗಿದೆ ಅನ್ನುವುದು ಸತ್ಯ. ಏನಿರಬಹುದು ಎನ್ನುವ ಕುತೂಹಲ ನನ್ನ ಮನಸನ್ನು ತುಂಬಿತು.
ನಾನು ಸುಮ್ಮನೆ ತಮಾಷಿಗೆ "ಅಂದರೆ ಅದು ದೇವ ರಹಸ್ಯ ಎನ್ನಿ" ಎಂದೆ
ಅವನು ನಗುತ್ತ ನುಡಿದ "ನಿಜ ನಿಜ ಅದು ಖಂಡೀತ ಒಂದು ದೇವ ರಹಸ್ಯವೆ"
ಅವನು ಮತ್ತೆ ತನ್ನ ಎದುರಿಗಿದ್ದ ಪುಸ್ತಕದಲ್ಲಿ ಅವನ ಕೈಯಲ್ಲಿದ್ದ ನವಿಲುಗರಿಯಂತ ಲೇಖಣಿಯಿಂದ ಏನನ್ನೊ ಗುರುತು ಮಾಡಿದ. ನಾನು ಆಶ್ಚರ್ಯ ಪಡುತ್ತ ಕೇಳಿದೆ
"ನೀವು ಮಾಡುತ್ತಿರುವ ಕೆಲಸವಾದರು ಏನು ನನಗೆ ಅರ್ಥವಾಗುತ್ತಿಲ್ಲ. ಇದೇನು ಹೀಗೆ ಪುಸ್ತಕದಲ್ಲಿ ಗುರುತು ಮಾಡುತ್ತಿರುವಿರಿ.ನಿಮ್ಮ ಕೆಲಸವಾದರು ಏನು" ಎಂದೆ
ಅವನು ಹೇಳಿದ "ಏನಿಲ್ಲ ನಮ್ಮ ಪ್ರಯೋಗದ ಎಲ್ಲ ವಿವರಗಳು, ಇದರಲ್ಲಿ ದಾಖಲಾಗುತ್ತಿದೆ, ಅಂದರೆ ಭೂಮಿಯಲ್ಲಿನ ಪ್ರತಿ ಜೀವಿಯಲ್ಲಿನ್ನ ಜೀವಮಾನಕಾಲದ ಮುಖ್ಯಚಟುವಟಿಕೆಗಳು. ಅವುಗಳ ಸ್ವಭಾವ , ಅವರು ಮಾಡಿದ ಸಾಮಾಜಿಕ, ಅಥವ ಇತರೆ ಕೆಲಸಗಳು. ಒಂದು ಮಾತಿನಲ್ಲಿ ಹೇಳುವದಾದರೆ, ನಿಮ್ಮ ಮಾನವರ ಮಾತಿನಲ್ಲಿ ಬರುವ ಪಾಪ ಪುಣ್ಯಗಳ ಲೆಕ್ಕ" ಎನ್ನುತ್ತ ಜೋರಾಗಿ ನಕ್ಕ.
ನನಗೆ ಶಾಕ್ ಆದಂತಾಯಿತು. ಅಂದರೆ ಮನುಜರ ಹಲವಾರು ಕಲ್ಪನೆಗಳು ಪೂರ್ತಿ ಸುಳ್ಳಲ್ಲ. ಅವರಿಗೆ ಅಂತ ಕಲ್ಪನೆಗಳು ಹೇಗೆ ಬಂದವು ಎಂದು ಆಶ್ಚರ್ಯವಾಯಿತು. ಮತ್ತೆ ಕೇಳಿದೆ
"ಅಂದರೆ ನೀವು ನಮ್ಮವರು ಹೇಳುವ ಯಮಲೋಕದಲ್ಲಿನ ಚಿತ್ರಗುಪ್ತ ಎನ್ನುವರೆ. ಭೂಮಿಯಲ್ಲಿ ಪ್ರತಿ ನಿಮಿಷವು ಹುಟ್ಟು ಸಾವು ಸಂಬವಿಸುತ್ತಲೆ ಇರುತ್ತದೆ. ಆದರೆ ನೀವಾದರೊ ಆಗೊಮ್ಮೆ ಈಗೊಮ್ಮೆ , ಪುಸ್ತಕದಲ್ಲಿ ಒಂದು ಗುರುತು ಮಾಡುತ್ತಿರುವಿರಿ. ಅದರ ಅರ್ಥವೇನು ಹಾಗು ಅದನ್ನು ಓದುವದು ಹೇಗೆ?"
ಅವನು ನಗುತ್ತ ನುಡಿದ
"ನಿಮ್ಮ ಕುತೂಹಲ ನನಗೆ ಸಂತಸ ತರುತ್ತಿದೆ. ನೀವು ಹೇಳುವುದು ನಿಜ ನನ್ನ ಕಾರ್ಯ ಸ್ವಲ್ಪ ಹೆಚ್ಚು ಕಡಿಮೆ ನೀವು ಹೇಳುವ ಚಿತ್ರಗುಪ್ತನಂತೆ ಇದೆ. ಆದರೆ ನಿಮ್ಮ ಕಲ್ಪನೆಯ ಆ ಚಿತ್ರಗುಪ್ತ ಪ್ರತಿಯೊಬ್ಬರ ಜೀವನವನ್ನು ಬರೆದಿಡುತ್ತಾನೆ. ಇಲ್ಲಿ ಹಾಗಲ್ಲ ನನ್ನ ಜೊತೆಯಲ್ಲಿ ಒಂದು ದೊಡ್ಡ ಬಳಗವೆ ಇದೆ, ಅವರು ಭೂಮಿಯ ಇತಿಹಾಸ, ಪ್ರಾಣಿ ಮನುಷ್ಯರ ಚಟುವಟಿಕೆ , ಕೆಲವೊಮ್ಮೆ ಅವರ ಮನಸಿನ ಭಾವನೆ ಎಲ್ಲವನ್ನು ಒಂದಡೆ ಕ್ರೂಡಿಕರಿಸುತ್ತ ಇದ್ದಾರೆ. ನಮ್ಮವರು ಮಾಡುವ ಎಲ್ಲ ದಾಖಲೆಗಳು ಒಂದಡೆ ಶೇಖರ ವಾದರೆ ನಾನು ಅವುಗಳನ್ನೆ ಒಟ್ಟು ಮಾಡಿ. ಚಿಕ್ಕ ಗಾತ್ರಕ್ಕೆ ಕುಗ್ಗಿಸಿ (ZIP) ನಂತರ ನಿಯಮಿತ ಅವದಿಯಲ್ಲಿ ಅವುಗಳನ್ನು , ಮ್ಯಾಗ್ನೆಟಿಕ್ ಹಾಳೆಗಳ ರೂಪದಲ್ಲಿರು ಈ ಪುಸ್ತಕದಲ್ಲಿ ಶೇಖರಿಸುತ್ತೇನೆ. ಮುಂದೆ ನಮಗೆ ಬೇಕಾದಾಗ ಅವುಗಳನ್ನು ಪುನಃ ಬಳಕೆ ಮಾಡಿಕೊಳ್ಳ ಬಹುದು" ಎಂದ . ನನಗೆ ಆಶ್ಚರ್ಯವಾಯಿತು.
"ನಿಮ್ಮ ಒಂದು ಚುಕ್ಕೆಯ ಗುರುತು. ಸರಿ ಸುಮಾರು ಎಷ್ಟು ಡೇಟಾವನ್ನು ಸಂಗ್ರಹಿಸಬಲ್ಲದು, ಅಂದರೆ ಸರಿ ಸುಮಾರು , ಒಂದು ದಿನಕ್ಕೆ ಸಮವ, ಅವುಗಳನ್ನು ಪುನ: ಓದಬೇಕೆಂದರೆ ಹೇಗೆ" ಎಂದೆ.
"ಇಲ್ಲ ಇಲ್ಲ, ಒಂದು ಚುಕ್ಕೆಯ ಗುರುತು ಮನುಷ್ಯನ ಕಾಲಮಾನದ ಸರಿ ಸುಮಾರು ಹತ್ತು ವರ್ಷದ ಚಟುವಟಿಕೆಗಳನ್ನು ಒಳಗೊಳ್ಳಬಹುದು ಅನ್ನಿಸುತ್ತೆ. ಆ ಲೆಕ್ಕದಲ್ಲಿ ಒಂದು ಪುಟ ಸುಮಾರು ನೂರುವರ್ಷಗಳನ್ನು, ಒಂದು ಪುಸ್ತಕ ಸುಮಾರು ಸಾವಿರ ಮನುಷ್ಯ ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ಇದನ್ನು ಓದಲು ಬೇರೆಯೆ ಸಾದನವಿದೆ, ಮ್ಯಾಗ್ನಟಿಕ್ ರೀಡರ್ ಎಂದುಕೊಳ್ಳಿ " ಎಂದ ಅವನು.
ನನಗೆ ದಿಗ್ಬ್ಱಮೆಯಾಯಿತು. ಇವನು ಹೇಳುವುದು ಅಸಂಭವ ಒಂದು ಚುಕ್ಕೆಯಲ್ಲಿ ಸಂಪೂರ್ಣ ಭೂಮಿಯ ಹತ್ತುವರ್ಷದ ಚಟುವಟಿಕೆ ಸಂಗ್ರಹಿಸಲು ಹೇಗೆ ಸಾದ್ಯ. ದತ್ತಾಂಶವನ್ನು ಅಷ್ಟು ಮಟ್ಟಿಗೆ ಕುಗ್ಗಿಸಲು ಸಾದ್ಯವೆ ಇಲ್ಲ. ಇವನು ನನಗೇನೊ ಸುಳ್ಳು ಹೇಳುತ್ತಿದ್ದಾನೆ ಅನ್ನಿಸಿ ಕೇಳಿದೆ
"ಒಂದು ಚುಕ್ಕೆಗೆ ಹತ್ತು ವರ್ಷದ ಡೇಟಾವೆ ಅದು ಹೇಗೆ ಸಾದ್ಯ ಅಸಂಭವ"
ಅವನು ಹೇಳಿದ " ನೋಡಿ ನಿಮ್ಮಲ್ಲಿ ಮೊದಲಿಗೆ ಗ್ರಾಮಫೋನ್ ರೆಕಾರ್ಡ ಬಂದಾಗ , ಒಂದು ತಟ್ಟೆಯಲ್ಲಿ ಒಂದೆರಡು ಹಾಡಿಗಿಂತ ಹೆಚ್ಚು ಹಿಡಿಸಲು ಸಾದ್ಯವಿರಲಿಲ್ಲ. ಮೊದಲ ಕಂಪ್ಯೂಟರ್ ನೀವು ಮಾಡಿದಾಗ ಅದು ಸಂಪೂರ್ಣ ಕೋಣೆಯನ್ನೆ ಹಿಡಿಯುವಷ್ಟೆ ದೊಡ್ಡದಿತ್ತು ಅಲ್ಲವೆ. ಮುಂದೆ ಟೇಪ್ ರೆಕಾರ್ಡಾರ್ ಬಂದಾಗ, ಸಣ್ಣದೊಂದು ಟೇಪ್ ನಲ್ಲಿ ಹತ್ತಾರು ಹಾಡುಗಳನ್ನು ಕೇಳಿದಿರಿ . ನಂತರ ಸಿ.ಡಿ. ಗಳು ಬಂದ ನಂತರ ನಿಮಗೆ ತಿಳಿದಿದೆ. ಹಾಗೆ mp3 mp4 DVD pendrive ಗಳು ಬಂದಹಾಗೆಲ್ಲ ಸಂಗ್ರಹ ಶಕ್ತಿ ಹೆಚ್ಚುತ್ತ ಹೋಯಿತು, ಈಗಂತು ನಿಮ್ಮಲ್ಲಿ ಅದ್ಭುತ ಪ್ರಗತಿ ಸಾದಿಸಿದೆ. ಈ ಹಿನ್ನಲೆಯಲ್ಲಿ ಯೋಚಿಸಿ ಹೇಳಿ, ಮುಂದೆ ಎಂದೊ ಒಂದು ದಿನ ಇದು ನಿಮಗು ಸಾದ್ಯವಾಗಬಹುದು ಅಲ್ಲವೆ. ನೋಡಿ ನೀವು ಇಷ್ಟ ಪಟ್ಟರೆ ಪರೀಕ್ಷೆಮಾಡಿ ನೋಡಬಹುದು. ಆದರೆ ಸದ್ಯಕ್ಕೆ ನೀವು ನಿಮಗೆ ಸಂಬಂದಿಸಿದ ಚಟುವಟಿಕೆ ಮಾತ್ರ ಗಮನಿಸಬಹುದು , ಬೇರೆ ಬೇರೆಯವರ ವಿವರ ನಿಮಗೆ ತಿಳಿಯಲು ಆಗಲ್ಲ" ಎಂದ.
ಇವನು ಹೇಳುತ್ತಿರುವುದು ನಿಜ. ವಿಜ್ಞಾನ ಪ್ರಗತಿ ಹೊಂದುತ್ತ ಏನು ಬೇಕಾದರು ಸಾದ್ಯವಾಗಬಹುದು ಅನ್ನಿಸಿತು. ಅಲ್ಲದೆ ಅವನು ಪರೀಕ್ಷೆ ಮಾಡಿ ಎಂಬ ಮಾತಿಗೆ ಉತ್ಸಾಹದಿಂದ ಸಿದ್ದನಾದೆ. ಅವನು ಒಳಗಿನಿಂದ ಬಳೆಯಂತಹ ಒಂದು ವಸ್ತುವನ್ನು ಹೊರತೆಗೆದ. ಅದನ್ನು ನನ್ನ ಬಲಕೈಗೆ ತೊಡಸಿದ, ಅದರಿಂದ ಹೊರಬಂದ ಸಣ್ಣದೊಂದು ವೈರ್ ಪೆನ್ನಿನಂತ ವಸ್ತು ಒಂದಕ್ಕೆ ತಗಲಿಸಲಾಗಿತ್ತು.
"ನೀವು ಈ ಪುಟದ ಕಡೆಯಲ್ಲಿರುವ ಐದು ಚುಕ್ಕಿಗಳ ಮೇಲೆ ಈ ಸಾದನವನ್ನು ಇಡುತ್ತ ಪರೀಕ್ಷಿಸಿ, ನಿಮಗ ಸಂಬಂದಿಸಿದ ಯಾವುದೆ ದೃಷ್ಯ ಮಾತುಗಳು ಕೇಳಬಹುದು " ಎಂದ ನಗುತ್ತ ಒಂದು ಪುಟವನ್ನು ತೋರಿಸಿ.
ನಾನು ಕಡೆಯ ಐದು ಚುಕ್ಕಿಗಳಲ್ಲಿ ಮೊದಲಿನದರ ಮೇಲೆ ನನ್ನ ಕೈಲಿದ್ದ ಸಾದನವನ್ನು ಮುಟ್ಟಿಸಿದೆ.
ನನ್ನ ಕಣ್ಣೆದುರು ಯಾವುದೊ ದೃಷ್ಯ ಕಾಣುತ್ತಿತ್ತು.
ಸುಮಾರು ಎಂಟುವರ್ಷಗಳ ಹುಡುಗ , ಹೆಗಲಲ್ಲಿ ಚೀಲ ನೇತು ಹಾಕಿ, ಕೈಯಲ್ಲೊಂದು ಸ್ಲೇಟ್ ಹಿಡಿದು ಶಾಲೆಗೆ ಹೊರಟಿದ್ದ. ರಸ್ತೆಯಲ್ಲಿ ವಿರಳ ಜನಸಂಚಾರ. ನೋಡುತ್ತಿರುವಂತೆ ಎದುರಿನ ಸಂದಿಯಿಂದ ಮತ್ತೊಬ್ಬ ಹುಡುಗ ಬಂದು ಕೂಡಿಕೊಂಡ. ಓಹೊ ತಿಳಿಯಿತು ಅವನು ನನ್ನ ಪ್ರೇಮರಿ ಶಾಲೆಯ ಗೆಳೆಯ, ಹೆಸರು ಸುರೇಶಬಾಬು ಎಂದು ಶೆಟ್ಟರ ಹುಡುಗ. ಅವರ ಅಪ್ಪ ಒಂದು ದಿನಸಿ ಅಂಗಡಿ ಇಟ್ಟಿದರು. ಶನಿವಾರ ಬಂದರೆ ಬೆಳಗಿನ ತರಗತಿ ಅವನು ಹೇಗೊ ಅವರ ಅಪ್ಪನ ಕಣ್ಣು ತಪ್ಪಿಸಿ, ಅವನ ನಿಕ್ಕರಿನ ಎರಡು ಜೋಬಿನ ತುಂಬ ಹುರಿಗಡಲೆ ಕೊಬ್ಬರಿ ಚೂರು ಬೆಲ್ಲ ತರುತ್ತಿದ್ದ. ಅಲ್ಲಿಗೆ ಆ ಶೆಟ್ಟರ ಹುಡುಗನ ಜೊತೆ ಇರುವನು ನಾನೆ , ಮುಂದೆ ಅವರಿಬ್ಬರು ಏನು ಮಾಡುತ್ತಾರೆ ಅನ್ನುವುದು ನನಗೆ ತಿಳಿದಿತ್ತು.
ನಗುತ್ತ ಆ ಚುಕ್ಕಿಯಿಂದ ಕೈ ಎತ್ತಿದೆ.
ನಂತರ ಮುಂದಿನ ಚುಕ್ಕಿಯಮೇಲೆ ಪೆನ್ನನ್ನು ಒತ್ತಿದೆ. ಮತ್ತೊಂದು ದೃಷ್ಯ ಬಿಚ್ಚಿಕೊಂಡಿತು.
ಎಲ್ಲರು ಸುತ್ತಲು ಅಳುತ್ತಿದ್ದರು. ನಡುಮನೆಯಲ್ಲಿ ಚಾಪೆಯ ಮೇಲೆ ಒಬ್ಬರನ್ನು ಮಲಗಿಸಲಾಗಿತ್ತು. ನೋಡಿದೆ ನಿಜ ನಮ್ಮ ತಂದೆಯವರ ಶವ. ಪಕ್ಕದಲ್ಲಿ ನಾನು ನಿಂತಿರುವುದು ಕಾಣಿಸುತ್ತಿತ್ತು. ನನಗಾಗ ಹದಿನೆಂಟು ವರ್ಷವಿರಬಹುದೇನೊ . ನಿದಾನಕ್ಕೆ ಹೊರಬಂದು ಪಕ್ಕದಲ್ಲಿದ್ದ ಮೆಟ್ಟಿಲುಗಳನ್ನು ಹತ್ತುತ್ತ ಮನೆಯ ಮೇಲಕ್ಕೆ ಹೊರಟೆ. ಅದೇಕೊ ಸ್ವಲ್ಪ ಹೊತ್ತು ಒಬ್ಬನೆ ಕುಳಿತುಕೊಳ್ಳಬೇಕೆಂಬ ಬಯಕೆಯಾಗುತ್ತಿತ್ತು. ಮೇಲೆ ಹತ್ತಿ ಹೋದರೆ ಅಲ್ಲೊಂದು ದೃಷ್ಯ ಕಾಣಿಸಿತು. ಪ್ಯಾರಫಿಟ್ ಗೋಡೆಯ ಮೇಲೆ ಒರಗಿ ನನ್ನ ಕಡೆಯ ತಮ್ಮ ಸುಮಾರು ಹತ್ತು ವರುಷವಿರಬಹುದು ಒಬ್ಬನೆ ಅಳುತ್ತ ಕುಳಿತಿದ್ದಾನೆ. ನನಗೆ ಕರುಳು ಚುರ್ ಎಂದಿತು, ಸಣ್ಣವರ ದುಃಖವು ಸಹ ದುಃಖವೆ ಅಲ್ಲವೆ? ನಾನು ಹತ್ತಿರ ಹೋಗಿ ಸಮಾದಾನ ಪಡಿಸಿದೆ. ಅಳಬೇಡ ಸುಮ್ಮನಿರು ಏನು ಮಾಡಲಿಕ್ಕಾಗುವದಿಲ್ಲ ಎಂದು. ಅವನು ಅಳುತ್ತಲೆ ನುಡಿದ.
"ಅದಕ್ಕಲ್ಲ ತುಂಬ ಹಸಿವು ಅದಕ್ಕೆ " ಎನ್ನುತ್ತ ಮತ್ತೆ ಜೋರಾಗಿ ಅತ್ತ.
ನನಗೆ ಕರುಳಿನಲ್ಲಿ ಎಂತದೊ ಚುರ್ ಎಂದಿತು. ನಿಜ ತಂದೆಯವರು ಹೋದ ದುಃಖದಲ್ಲಿ ಎಲ್ಲರು ಇದ್ದಾರೆ. ನಿನ್ನೆ ರಾತ್ರಿಯಿಂದ ಇವನಿಗೆ ಯಾರು ಏನನ್ನು ಕೊಟ್ಟಿಲ್ಲ.
ಹಸಿವು ಎಂಬ ರಕ್ಕಸ ಎದುರಿಗೆ ನಿಂತು ನಗುತ್ತ ಮುಂದಿನ ದಿನಗಳ ಬಗ್ಗೆ ನನ್ನ ಎದೆಯಲ್ಲಿ ನಡುಕ ಹುಟ್ಟಿಸಿದ....
ಪಟ್ ಎಂದು ಚುಕ್ಕೆಯಿಂದ ಕೈ ಮೇಲೆ ಎತ್ತಿದೆ.
ಏಕೊ ಎಲ್ಲ ಚುಕ್ಕೆಗಳನ್ನು ಪರೀಕ್ಷಿಸುವ ಉತ್ಸಾಹ ಹೊರಟು ಹೋಯಿತು. ಅಷ್ಟಕ್ಕು ನನ್ನ ಗತವೆಲ್ಲ ನನಗೆ ತಿಳಿದಿರುವುದೆ ಅದನ್ನೆ ಪುನಃ ನೋಡುವದರಲ್ಲಿ ಯಾವ ಆನಂದವಿದೆ.
ನನ್ನ ಎದುರಿಗಿದ್ದ ಅವನು ಕೊಟ್ಟಿದ್ದ ನೀರನ್ನು ಪುನಃ ಕುಡಿದೆ. ಮನಸಿಗೆ ನೆಮ್ಮದಿ ಅನ್ನಿಸಿತು.
ಎದುರಿಗೆ ಅದೆ ಕಾಯಸ್ಥ ಅಂದರೆ ಚಿತ್ರಗುಪ್ತ ನಗುತ್ತಿದ್ದ.
"ಏಕೆ ಪೂರ್ಣ ನೋಡುವದಿಲ್ಲವೆ ಸಾಕೆ?" ಎಂದ.
ನನಗೆ ಎಲ್ಲ ಪ್ರಶ್ನೆಗಳು ಮುಗಿದಿದ್ದವು. ಅಲ್ಲದೆ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕುಳಿತರೆ ಅದಕ್ಕೆ ಕೊನೆಯೆ ಇಲ್ಲ. ಎದುರಿಗಿದ್ದ ಅವನನ್ನು ನೋಡಿದೆ ಅವನ ಮುಖ ಗಂಭೀರವಾಗಿತ್ತು.
ನಾನು ಹೇಳಿದೆ
"ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದರೆ ಅದಕ್ಕೆ ಕೊನೆಯಿಲ್ಲ ಅನ್ನಿಸುತ್ತಿದೆ. ನೀವು ಹೇಳಿದಂತೆ ಆಗಲಿ ನನ್ನನ್ನು ಯಾವ ಕಾರಣಕ್ಕೆ ಕರೆಸಿದ್ದಾರೆ ಆ ಕಾರ್ಯ ನನಗೆ ಮಾಡಲು ಸಾದ್ಯವಾದಲ್ಲಿ ಮುಗಿಸಿ, ನಂತರ ಹಿಂದೆ ಹೋಗುವೆ. ನನ್ನ ಸ್ನೇಹಿತರು ಸ್ವಲ್ಪ ಕಾಲ ಕಾಯಬಹುದು ಬಿಡಿ"
ಒಂದೆರಡು ಗಳಿಗೆಗಳ ಮೌನ. ಸಾಕಷ್ಟು ದೀರ್ಘ ಅನ್ನಿಸಿತು. ಅವನು ನುಡಿದ.
"ಪರಿಸ್ಥಿಥಿ ಇನ್ನು ನಿಮಗೆ ಪೂರ್ಣವಾಗಿ ಮನವರಿಕೆ ಆಗುತ್ತಿಲ್ಲ. ನೀವು ನಿಮ್ಮ ಸ್ನೇಹಿತರು ನಿರೀಕ್ಷೆ ಮಾಡುತ್ತಿರುವರು, ಊರಿನಲ್ಲಿ ಹೆಂಡತಿ ಮಕ್ಕಳು ಕಾಯುತ್ತಿದ್ದಾರೆ ಎನ್ನುವ ಮನಸ್ಥಿಥಿಯಲ್ಲಿಯೆ ಇದ್ದೀರಿ. ನೀವು ಇಲ್ಲಿಗೆ ಬಂದು ತುಂಬಾ ಕಾಲ ಕಳೆಯಿತು. ಅಲ್ಲಿ ಮಹಾಬಲಿಪುರಂ ನಲ್ಲಿ ನಿಮ್ಮನ್ನು ಯಾರು ಕಾಯುತ್ತಿಲ್ಲ. ನಿಮ್ಮ ಸ್ನೇಹಿತರ ಹಾಗು ಮನೆಯವರಿಗೆ ನೀವು ಸಮುದ್ರದಡದಲ್ಲಿ ಕಾಣೆಯಾದವರ ಸಾಲಿಗೆ ಸೇರಿದ್ದೀರಿ , ಅದು ಶಾಶ್ವತವಾಗಿ . ನಿಮ್ಮ ಸ್ನೇಹಿತರೆಲ್ಲ ಅಲ್ಲಿಂದ ಹೊರಟು
ಬಹಳ ಕಾಲವಾಗಿವೆ ಅಂದರೆ ವರ್ಷಗಳು ,. ಅಷ್ಟೆ ಅಲ್ಲ ನಿಮ್ಮ ಮನೆಯಲ್ಲು ಅಷ್ಟೆ ನಿಮ್ಮನ್ನು ಯಾರು ಕಾಯುತ್ತಿಲ್ಲ.
ನಿಮ್ಮಿಂದ ಮೂರನೆ ತಲೆಮಾರಿನ ಜನ ಈಗ ನಿಮ್ಮ ವಂಶದಲ್ಲಿ ಇದ್ದಾರೆ. ಭೂಮಿಯಲ್ಲಿ ನಿಮ್ಮ ಪರಿಚಯ ಇರುವವರು ಈಗ ಯಾರು ಇಲ್ಲ. ನೀವು ಮತ್ತೆಂದು ನಿಮ್ಮ ಕಾಲಕ್ಕೆ ಹಿಂದೆ ಹೋಗಲು ಸಾದ್ಯವಿಲ್ಲ. ಅದನ್ನು ನೀವು ಅರ್ಥ ಮಾಡಿಕೊಳ್ಳಿ. ನೀವು ಈಗ ನಮ್ಮವರಲ್ಲಿ ಒಬ್ಬರು "
ನಾನು ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತೆ. ಪರಿಸ್ಥಿತಿಯ ಗಂಭೀರತೆ ಈಗ ನನ್ನ ಮನಸನ್ನು ತುಂಬಿಕೊಂಡಿತು. ಕಣ್ಣು ಬಿಟ್ಟು ಎದುರಿಗಿದ್ದ ಅವನನ್ನು ನೋಡಿ ನಕ್ಕೆ. ಅವನು ನಸುನಕ್ಕ.
ನಾನು ಹೇಳಿದೆ "ಸರಿ ನಾನೀಗ ಹಿಂದೆ ಹೋಗಲು ಸಾದ್ಯವಿಲ್ಲ ನನಗೆ ಮನವರಿಕೆಯಾಗಿದೆ. ನಾನು ನಿಮ್ಮವರೊಡನೆ ಹೊರಡಲು ಸಿದ್ದನಿದ್ದೇನೆ"
ನಾನು ಅಲ್ಲಿಂದ ಹೊರಡಲು ಸಿದ್ದನಾಗಿ ಕುಳಿತೆ, ನನ್ನನ್ನು ಕರೆದೊಯ್ಯಲು ಬರುತ್ತಿರುವ ಅಲ್ಲಿನ ವ್ಯಕ್ತಿಗಾಗಿ. ಸ್ವಲ್ಪ ಕಾಲದಲ್ಲಿಯೆ ನಾನು ಕುಳಿತ ಕೋಣೆಯಲ್ಲಿನ ಬೆಳಕಿನಲ್ಲಿ ಎಂತದೊ ವ್ಯತ್ಯಾಸ ಕಾಣಿಸಿತು. ಅಲ್ಲಿನ ಪ್ರಭೆ ಜಾಸ್ತಿಯಾಯಿತು ಅನ್ನಿಸುತ್ತಿರುವಾಗಲೆ, ನನ್ನ ಎದುರಿಗೆ ವೃತ್ತಕಾರದ ಬೆಳಕಿನ ಬಿಂಬವೊಂದು ಗೋಚರಿಸಿ ಅದು ಪ್ರಖರವಾಗುತ್ತ ಹೋಯಿತು. ಅದರ ಪ್ರಖರತೆ ನನ್ನ ಕಣ್ಣುಗಳು ತುಸು ಮುಚ್ಚಿದವು.
-- ಮುಗಿಯಿತು
Rating
Comments
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by nanjunda
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by kamath_kumble
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by makara
ಉ: ಸಣ್ಣಕತೆ : ದೇವರಹಸ್ಯ (ಭಾಗ 2) @ಶ್ರೀಧರ್ ಬಂಡ್ರಿ & ನಂಜುಂಡರವರಿಗೆ
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) @ಶ್ರೀಧರ್ ಬಂಡ್ರಿ & ನಂಜುಂಡರವರಿಗೆ by partha1059
ಉ: ಸಣ್ಣಕತೆ : ದೇವರಹಸ್ಯ (ಭಾಗ 2) @ಶ್ರೀಧರ್ ಬಂಡ್ರಿ & ನಂಜುಂಡರವರಿಗೆ
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) @ಶ್ರೀಧರ್ ಬಂಡ್ರಿ & ನಂಜುಂಡರವರಿಗೆ by nanjunda
ಉ: ಸಣ್ಣಕತೆ : ದೇವರಹಸ್ಯ (ಭಾಗ 2) @ ನಂಜುಂಡರವರಿಗೆ
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by Chikku123
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by ksraghavendranavada
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by swara kamath
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
ಉ: ಸಣ್ಣಕತೆ : ದೇವರಹಸ್ಯ (ಭಾಗ 2)
In reply to ಉ: ಸಣ್ಣಕತೆ : ದೇವರಹಸ್ಯ (ಭಾಗ 2) by Jayanth Ramachar
ಉ: ಸಣ್ಣಕತೆ : ದೇವರಹಸ್ಯ (ಭಾಗ 2)