ಸಣ್ಣ ಕಥೆ - ಜೇಡಗಳು
ಜೇಡಗಳು
ಜೇನುನೊಣಗಳಿಗೆ ಜೇಡಗಳನ್ನು ಕಂಡರೆ ತುಂಬ ಅಸೂಯೆ. ತಾವು ಅಹೋರಾತ್ರಿ ಶ್ರಮಿಸಿ, ಕೋಟ್ಯಂತರ ಹೂಗಳ ಎದೆ ಬಗೆದು ಜೇನು ಸಂಗ್ರಹಿಸಬೇಕು ! ಅದನ್ನು ಕೂಡ ಯಾರು ಯಾರೋ ದುರುಳರು ದೋಚಿಬಿಡುತ್ತಾರೆ. ಉಳಿದದ್ದಕ್ಕೆ ಮೃಗೀಯ ಸರಕಾರ ಬೆಂಬಲ ಬೆಲೆ ಘೋಷಿಸಿದರೂ, ಅದೂ ಕೂಡ ಮಧ್ಯವರ್ತಿಗಳ ಪಾಲಾಗುತ್ತದೆ. ಈ ಜೇಡಗಳ ಸುಕೃತ ನೋಡಿ ! ಕೊಂಚವೇ ಶ್ರಮವಹಿಸಿ ಒಂದು ಚಂದದ ಬಲೆ ಹೆಣೆದು, ತಪಸ್ಸಿಗೆ ಕುಳಿತಂತೆ ಒಂದು ಮೂಲೆಯಲ್ಲಿ ಕುಳಿತುಬಿಟ್ಟರೆ ಸಾಕು. ಕೀಟಗಳು ತಾವಾಗಿಯೇ ಬಂದು ಆಹಾರವಾಗುತ್ತವೆ ! ನಾವು ಮಾತ್ರ ಏಕೆ ಅನ್ಯರ ಸಲುವಾಗಿ ದುಡಿಯಬೇಕು ? ನಾವೂ ಈ ಬಲೆ ಹೆಣೆಯುವ ಕಲೆ ಕಲಿತು ನೆಮ್ಮದಿಯಾಗಿ ಬಾಳಬಾರದೇಕೆ ಎಂದು ಯೋಚಿಸಿದವು ಜೇನುನೊಣಗಳು !
ಈ ಆಲೋಚನೆಗಳ ಪರಿಕ್ರಮವೇ ವಿಶಿಷ್ಟ. ಶರಭ ಸಂಹಿತೆಯ ಪ್ರಕಾರ, ಜಗತ್ತಿನಲ್ಲಿ ಒಂದೇ ತೆರನಾದ ಆಲೋಚನೆಗಳು ಏಕಕಾಲದಲ್ಲಿ ಹಲವರ ಮಿದುಳಿನಲ್ಲಿ ಮೂಡುತ್ತವೆ. ನ್ಯೂಟನ್ ಮತ್ತು ಲೈಬ್ನಿಟ್ಸರಿಗೆ ಕ್ಯಾಲ್ಕ್ಯುಲಸ್ಸಿನ ತತ್ತ್ವಗಳು ಸಮಾನಕಾಲದಲ್ಲಿ ಸ್ಫುರಿಸಿದ ಹಾಗೆ. ಅಳಿವು ಉಳಿವಿನ ಪ್ರಶ್ನೆ ಎದುರಾದಾಗಲಂತೂ ಈ ಸಾರ್ವತ್ರಿಕ ಏಕಾಲೋಚನೆಯ ಪ್ರಮಾಣ ಬಹಳ ಹೆಚ್ಚಾಗುತ್ತದೆ. ಸಾಂಕ್ರಾಮಿಕ ಆಕಳಿಕೆಯ ಹಾಗೆ !
ಹಾಗಾಗಿ ಜಗತ್ತಿನ ನಾನಾ ಜಾತಿಯ ಕೀಟಗಳಿಗೂ ಇಂತಹುದೇ ಸ್ಫುರಣೆ ಏಕಕಾಲದಲ್ಲಿ ಉಂಟಾಗಿರಲಿಕ್ಕೆ ಸಾಕು !
ಇದೇ ಹೊತ್ತಿಗೆ ಜಾಗತೀಕರಣದ ಪ್ರಭಾವದಿಂದಲೋ ಅಥವಾ ಬಲೆ ಹೆಣೆವ ಕೌಶಲ ರೂಢಿಸಿಕೊಂಡ ಅನ್ಯಜಾತಿಯ ಕೀಟಗಳ ಪೈಪೋಟಿಯಿಂದಲೋ, ನಿಜವಾದ ಜೇಡಗಳು ಜಾಲಸಂರಚನೆಯ ಸೂಕ್ಷ್ಮಗಳನ್ನೇ ಮರೆಯುತ್ತ ಬಂದವು ! ಸಂಸ್ಕಾರ ವಶಾತ್ ಎಲ್ಲೋ ಕೆಲವು ಜೇಡಗಳು ಜಾಲರಚನೆಯ ಮೂಲತತ್ತ್ವಗಳನ್ನು ಉಳಿಸಿಕೊಂಡು, ಸಮೃದ್ಧವಲ್ಲದಿದ್ದರೂ ಆಗೀಗ ದೊರೆಯುವ ಅಲ್ಪಾಹಾರದಲ್ಲೇ ಸಂತೃಪ್ತವಾಗಿ ಜೀವಿಸತೊಡಗಿದವು. ಇನ್ನು ಕೆಲವು ಜೇಡಗಳು, ಪ್ರಾದೇಶಿಕ ಸಂಕುಚಿತತೆಗಳನ್ನು ತ್ಯಜಿಸಿ, ವಿಶ್ವವ್ಯಾಪೀಜಾಲ ( www ವರ್ಲ್ಡ್ ವೈಡ್ ವೆಬ್) ನೊಡನೆ ಮಿಳಿತಗೊಂಡು ಗಳಿಸುವ ಬದಲಾವಣೆಗೆ ಒಗ್ಗಿಕೊಂಡು ಸಮೃದ್ಧವಾಗಿ ಜೀವಿಸತೊಡಗಿದವು.
ಜೇಡಗಳನ್ನು ಟೀಕಿಸುತ್ತಲೇ, ಅವುಗಳ ಬಲೆ ಹೆಣೆವ ಕೌಶಲವನ್ನು ರೂಢಿಸಿಕೊಂಡ ಅನ್ಯಜಾತಿಯ ಕೀಟಗಳು, ಜೇಡಗಳಂತೆಯೇ ಬದುಕತೊಡಗಿದರೂ, ನೂತನ ಮೃಗೀಯಸಂವಿಧಾನದ ಪ್ರಕಾರ ತಂತಮ್ಮ ಜಾತಿಗೆ ಲಭ್ಯವಾಗುವ ಮೀಸಲುಗಳನ್ನು ಕೂಡ ಉಪಯೋಗಿಸಿಕೊಂಡು ಬಹುಧಾ ಲಾಭದಿಂದ ಕೊಬ್ಬಿದವು. ಏತನ್ಮಧ್ಯೆ ಕಿಸ್ಕಾನ್ ಎಂಬ ಏಜೆನ್ಸಿಯೊಂದು ಎಲ್ಲಾ ಜಾತಿಯ ಕೀಟಗಳಿಗೂ ಮೂರೆಳೆ ಹಾಕಿ ಅಧಿಕೃತವಾಗಿಯೇ ಜೇಡದೀಕ್ಷೆ ನೀಡತೊಡಗಿತು. ಆದರೂ ಇಂತಹ ಪರಿವರ್ತಿತ ಜೇಡಗಳು ಎಷ್ಟೇ ಸಮರ್ಥವಾಗಿ ಜಾಲರಚನೆಯ ಕೌಶಲಗಳನ್ನು ರೂಢಿಸಿಕೊಂಡರೂ, ಯಥೋರ್ಣನಾಭಿಃ ಸೃಜತೇ ಗೃಹ್ಣತೇ ಚ ಎಂಬ ಆರ್ಷವಾಕ್ಯದ ಗ್ರಹಣ ಕೌಶಲವನ್ನು ಕಲಿಯಲಾರದೇ ಹೋದವು. ಅದರ ನಿಜವಾದ ಕಾರಣವೆಂದರೆ, ಕಾಲಮಹಿಮೆಯಿಂದ ನೈಜ ಜೇಡಗಳು ಕೂಡ ಈ ಗ್ರಹಣ ಕೌಶಲವನ್ನು ಮರೆತುಬಿಟ್ಟದ್ದೇ ಆಗಿತ್ತು !
ಏನೇ ಆದರೂ, ಎಲ್ಲರೂ ಜಾಲ ಬೀಸುವವರೇ ಆಗಿ ಬಿಟ್ಟರೆ, ಬಲೆಗೆ ಬೀಳಲು ಮಿಗುವ ಮಿಕಗಳಾದರೂ ಯಾರು ? ಹೀಗಾಗಿ ಕೊನೆಗೆ, ಜೀವನ ಜಾಲ ಕೌಶಲ ಅರಿಯಲು ಅಸಮರ್ಥವಾದ ಜೇಡಗಳೇ ನೈಜ ಜೇಡಗಳ ಹಾಗೂ ಪರಿವರ್ತಿತ ಜೇಡಗಳ ಬಲೆಗೆ ಬೀಳತೊಡಗಿದವು. ಅಲ್ಲಿಗೆ ಡಾರ್ವಿನ್ನನ ವಾದಕ್ಕೆ ಮತ್ತೊಂದು ಸಮರ್ಥ ಪುರಾವೆ ಲಭ್ಯವಾಯಿತು!
ಕೀಟಪ್ರಪಂಚದ ಈ ಬದಲಾವಣೆಗಳನ್ನು ಕುತೂಹಲದಿಂದ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳ ತಂಡವೊಂದು ತಮ್ಮ ಥೀಸಿಸಿನ ಕೊನೆಗೆ ಬರೆದ ಭರತವಾಕ್ಯವೊಂದು ಹೀಗಿತ್ತು...
"ಈ ಬದಲಾದ ಜೇಡಗಳ ಜೀವಿತ ಕ್ರಮವು, ಭೂಸುರರು ತಾವು ತೋಡಿದ ಮೌಢ್ಯ ಹಾಗೂ ಕಂದಾಚಾರಗಳ ಕಂದಕದಲ್ಲಿ ತಾವೇ ಬೀಳುವ ಚೋದ್ಯದಂತಿದೆ !"
*****
01-05-2012 - ಎಸ್ ಎನ್ ಸಿಂಹ, ಮೇಲುಕೋಟೆ.
Comments
In reply to ಉ: ಸಣ್ಣ ಕಥೆ - ಜೇಡಗಳು by suchupachu
ಉ: ಸಣ್ಣ ಕಥೆ - ಜೇಡಗಳು
ಉ: ಸಣ್ಣ ಕಥೆ - ಜೇಡಗಳು
ಉ: ಸಣ್ಣ ಕಥೆ - ಜೇಡಗಳು
ಉ: ಸಣ್ಣ ಕಥೆ - ಜೇಡಗಳು
In reply to ಉ: ಸಣ್ಣ ಕಥೆ - ಜೇಡಗಳು by Shreekar
ಉ: ಸಣ್ಣ ಕಥೆ - ಜೇಡಗಳು