ಸಣ್ಣ ಕಥೆ - ಸಿಮ್ ಕಾರ್ಡ್
ಸಿಮ್ ಕಾರ್ಡ್
ಅವಳ ಸ್ವಭಾವವನ್ನು ವರ್ಣಿಸುವುದಕ್ಕೆ ಆ ವಾಕ್ಯ ತುಂಬ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಅಚ್ಚರಿಯೆಂದರೆ ಆ ವಾಕ್ಯದಲ್ಲಿನ ಉಪಮಾನ-ಉಪಮೇಯಗಳನ್ನು ಬದಲಾಯಿಸಿ ಕೂಡ ಪ್ರಯೋಗಿಸಬಹುದಿತ್ತು! ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಹೀಗೆಂದರೆ ನಿಮಗೆ ಗೊಂದಲವಾಗಬಹುದು! ತಾಳ್ಮೆಗೆಡಬೇಡಿ. ಆ ವಾಕ್ಯವನ್ನೇ ಹೇಳಿಬಿಟ್ಟರೆ ನಿಮ್ಮ ಗೊಂದಲವೆಲ್ಲ ಪರಿಹಾರವಾಗುವುದು.
ಅವಳು ಬಾಯ್ಫ್ರೆಂಡ್ಗಳನ್ನು ಬದಲಾಯಿಸುವ ಹಾಗೆ ಸಿಮ್ಕಾರ್ಡ್ಗಳನ್ನು ಬದಲಾಯಿಸುತ್ತಿದ್ದಳು ಅಥವಾ ಸಿಮ್ಕಾರ್ಡ್ಗಳನ್ನು ಬದಲಾಯಿಸುವ ಹಾಗೆ ಬಾಯ್ಫ್ರೆಂಡ್ಗಳನ್ನು ಬದಲಾಯಿಸುತ್ತಿದ್ದಳು.
ಓದುಗ ಮಹಾಶಯರೇ! ಈಗ ಬೇಕಾದರೆ ನೀವು ಮೊದಲ ಪ್ಯಾರಾವನ್ನು ಪೂರ್ತಿಯಾಗಿ ಹರಿದುಹಾಕಿಬಿಡಬಹುದು.
*
ಅಲಂಕಾರ ಶಾಸ್ತ್ರದ ಪರಿಭಾಷೆಗಳೇನೇ ಇರಲಿ, ಅವಳು ಸುಂದರವಾಗಿದ್ದಳು..!
ಅದೊಮ್ಮೆ, ಅದೆಷ್ಟನೆಯದೋ ಸಿಮ್ಕಾರ್ಡನ್ನು ಅವಳು ಬದಲಾಯಿಸಿದಾಗ, ಅವನು ತಾಳ್ಮೆ ಕಳೆದುಕೊಂಡು ಗೊಣಗಿದ್ದ. ಪದೇ ಪದೇ ಮೊಬೈಲು ನಂಬರು ಬದಲಿಸುವುದು ವ್ಯಭಿಚಾರದ ಹಾಗೆ ಅಂತ ನಿನಗೆ ಅನ್ನಿಸೋಲ್ಲವಾ?
ಅದಕ್ಕೇನೂ ಉತ್ತರಿಸಲಿಲ್ಲ ಅವಳು. ಆದರೆ ಅದುವರೆಗೂ (ಅದು ಹೇಗೋ..!) ಅವಳ ಮೈ ಕಾಂಟ್ಯಾಕ್ಟ್ಸ್ ನಲ್ಲಿ ಉಳಿದುಕೊಂಡಿದ್ದ ಅವನು, ಮರುಕ್ಷಣದಿಂದಲೇ ಡಿಲಿಟ್ ಆಗಿಬಿಟ್ಟಿದ್ದ!
ಪಾಪ! ಚೆಂದದ ಹುಡುಗಿಯರ ಸಂಕಷ್ಟಗಳು ಈ ನಿರ್ಭಾವುಕ ಗಂಡಸರಿಗೆ ಹೇಗೆ ತಾನೇ ಅರ್ಥವಾದಾವು?
ಅಷ್ಟೇ ಅಲ್ಲ. ಅವನು ಮಾಡಿದ ತಪ್ಪು ಕೂಡ ತುಂಬ ದಿನಗಳವರೆಗೆ ಅವನಿಗೆ ಅರ್ಥವಾಗಿರಲಿಲ್ಲ.
ಸಂಗತಿಗಳು ಎಷ್ಟೇ ಸತ್ಯವಾದರೂ, ಅವುಗಳನ್ನು ಅಂತಹ ಕ್ರೂರ ಶಬ್ದಗಳಲ್ಲಿ ವ್ಯಕ್ತಪಡಿಸತಕ್ಕದ್ದಲ್ಲ.
ಪ್ರಾಥಮಿಕ ಪಾಠಗಳು ಮೈಗೂಡದಿದ್ದರೆ, ಪಶ್ಚಾತ್ತಾಪವೂ ವ್ಯರ್ಥವೇ!
*
ತನ್ನ ಸಂಪರ್ಕ ಕಳೆದುಕೊಂಡು ತಳಮಳಿಸಿ ಹುಚ್ಚರಾಗುವ ಎಷ್ಟೋ ಮಿಕಗಳನ್ನು ಅವಳು ಕಂಡಿದ್ದಳು. ಅವುಗಳ ಸ್ಥಿತಿಯನ್ನು ಅರಿತು ತೃಪ್ತಿ ಪಡಲು ಅವಳಿಗೆ ಆರ್ಕುಟ್, ಫೇಸ್ಬುಕ್ಗಳಂತಹ ಜಾಲತಾಣಗಳಿದ್ದವು.
ಕೆಲವೊಮ್ಮೆ ತರ್ಕಕುಶಲಿಗಳ ನಿರೀಕ್ಷೆಗಳು ಕೂಡ ತಪ್ಪಾಗುವುದುಂಟು...
ನಿರೀಕ್ಷೆಗಳು ಹುಸಿಯಾದಾಗ ಕ್ರಿಮಿನಲ್ ಬುದ್ಧಿಯ ವಕೀಲರಂಥವರು ಕೂಡ ಹತಾಶರಾಗುವುದುಂಟು...
ಹತಾಶರಾದವರು ಅಧ್ಯಾತ್ಮದತ್ತ ವಾಲುವುದೂ ಉಂಟು....!
*
ತನ್ನ ಬ್ಲಾಗಿನಲ್ಲಿ ಬರೆದುಕೊಂಡಿದ್ದಳು ಅವಳು.
ಮನೋನಿಗ್ರಹಕ್ಕಾಗಿ ಅರ್ಗಳಸ್ತೋತ್ರವನ್ನು ಅನುಸಂಧಾನ ಮಾಡುತ್ತಿದ್ದೇನೆ ಎಂದು.
ಮನಸ್ಸಿನ ಹೆಬ್ಬಾಗಿಲಿಗೆ ಅಗುಳಿ ಹಾಕಿದ್ದಾಳೆ..! ಆದರೆ ದಿಡ್ಡಿ ಬಾಗಿಲುಗಳಿಗೆ..?
ಅವಳ ಬ್ಲಾಗಿನ ತುಂಬ ಸ್ಪಿರಿಚ್ಯುವಲ್ ಕಮ್ಯುನಿಟಿಗಳದೇ ಲಿಂಕು!
ಒಂದಲ್ಲ ಎರಡಲ್ಲ. ಹತ್ತು ಹಲವು..!
ಜೀವನದ ಸಿಮ್ಕಾರ್ಡ್ ಸಿಕ್ಕಿಬಿಟ್ಟಿದೆಯಾ ಅವಳಿಗೆ!
*
ಅವಳ ಬ್ಲಾಗಿಗೆ ಒಂದು ಕಾಮೆಂಟ್ ಪೋಸ್ಟ್ ಮಾಡಿದ.
ಏಕನಿಷ್ಠೆಯಿಲ್ಲದಿದ್ದರೆ ಅಧ್ಯಾತ್ಮವೂ ಮರೀಚಿಕೆಯೇ...!
ಈ ವಾಕ್ಯದಲ್ಲಿ ಪ್ರಯೋಗಿಸಲ್ಪಟ್ಟ ಶಬ್ದಗಳು ತುಂಬ ಸಾಧುವಾದವು.
*****
21-12-2010 - ಎಸ್ ಎನ್ ಸಿಂಹ, ಮೇಲುಕೋಟೆ
Rating
Comments
ಉ: ಒಂದು ಸಣ್ಣ ಕಥೆ
In reply to ಉ: ಒಂದು ಸಣ್ಣ ಕಥೆ by ಹೇಮ ಪವಾರ್
ಉ: ಒಂದು ಸಣ್ಣ ಕಥೆ
ಉ: ಒಂದು ಸಣ್ಣ ಕಥೆ...ಸಿಮ್ ಕಾರ್ಡ್
In reply to ಉ: ಒಂದು ಸಣ್ಣ ಕಥೆ...ಸಿಮ್ ಕಾರ್ಡ್ by shivaram_shastri
ಉ: ಒಂದು ಸಣ್ಣ ಕಥೆ...ಸಿಮ್ ಕಾರ್ಡ್
ಉ: ಒಂದು ಸಣ್ಣ ಕಥೆ...ಸಿಮ್ ಕಾರ್ಡ್
ಉ: ಒಂದು ಸಣ್ಣ ಕಥೆ...ಸಿಮ್ ಕಾರ್ಡ್
ಉ: ಒಂದು ಸಣ್ಣ ಕಥೆ...ಸಿಮ್ ಕಾರ್ಡ್