ಸಮಯದ ಬೆಲೆ(ಪ್ರೇರಕ ಪ್ರಸಂಗಗಳು)
ಪ್ರಸಿದ್ಧ ವಿಜ್ಞಾನಿ ಬೆಂಜಾಮಿನ್ ಫ್ರೆಂಕ್ಲಿನರದು ಪುಸ್ತಕ ಅಂಗಡಿ ಇತ್ತು.
ಒಮ್ಮೆ ಒಬ್ಬ ವ್ಯಕ್ತಿ ತನಗೆ ಬೇಕಾದ ಪುಸ್ತಕ ಆಯ್ಕೆ ಮಾಡಿಕೊಂಡನು.ಅದನ್ನು ತೋರಿಸುತ್ತ-
"ಇದರ ಬೆಲೆ ಎಷ್ಟು?" ಎಂದ.
"ಒಂದು ಡಾಲರ್" ಗುಮಾಸ್ತ ಹೇಳಿದ.
"ಒಂದು ಡಾಲರ್ ಗಿಂತ ಕಡಿಮೆಯಾಗುವುದಿಲ್ಲವೆ?"
"ಇಲ್ಲ!" ಎಂದ ಗುಮಾಸ್ತ.
"ಮಿಸ್ಟರ್ ಫ್ರೆಂಕ್ಲಿನರು ಇದ್ದಾರೆಯೇ?ನಾನು ಅವರನ್ನು ಕಾಣಬಯಸುವೆ" ಎಂದ ಗಿರಾಕಿ.
"ಇದ್ದಾರೆ,ಅವರು ಒಳಗೆ ಕೆಲಸದಲ್ಲಿದ್ದಾರೆ."ಎನ್ನುತ್ತ ಒಳಗೆ ಹೋಗಿ ಫ್ರೆಂಕ್ಲಿನರನ್ನು ಕರೆದುಕೊಂಡು ಬಂದನು.
"ನಮಸ್ಕಾರ! ಫ್ರೆಂಕ್ಲಿನ್ ಸಾಹೇಬರೇ,ಈ ಪುಸ್ತಕ ಬೇಕಾಗಿದೆ.ಕಡಿಮೆ ಎಂದರೆ ಎಷ್ಟಕ್ಕೆ ಕೊಡುವಿರಿ?"
ಪುಸ್ತಕ ತಿರುವಿ ನೋಡುತ್ತ,'ಒಂದೂ ಕಾಲು ಡಾಲರ್!" ಎಂದರು ಫ್ರೆಂಕ್ಲಿನ್.
"ಒಂದೂ ಕಾಲು ಡಾಲರ್! ಇದೀಗ ನಿಮ್ಮ ಗುಮಾಸ್ತ ಒಂದು ಡಾಲರ್ ಎಂದಿದ್ದ."
"ಸರಿ,ಆಗಲೆ ತೆಗೆದುಕೊಳ್ಳಬೇಕಿತ್ತು.ನಾನು ನನ್ನ ಕೆಲಸ ಬಿಟ್ಟು ಸಮಯ ಹಾಳು ಮಾಡಿಕೊಂಡು ಬಂದಿದ್ದರ ಬೆಲೆ ಬೇಡವೆ?"
ಎಂದರು ಫ್ರೆಂಕ್ಲಿನ್.
ಗಿರಾಕಿ ಅಚ್ಚರಿಗೊಂಡು-"ಹೋಗಲಿ ಬಿಡಿ.ನಿಜವಾಗಿ ಹೇಳಿರಿ ನಾನು ತೆಗೆದುಕೊಳ್ಳುವೆ.ಕಡಿಮೆ ಎಂದರೆ ಎಷ್ಟು ಕೊಡಬೇಕು?"
"ಒಂದೂವರೆ ಡಾಲರ್!"
"ಒಂದೂವರೆ ಡಾಲರ್!ಇದೀಗ ತಾವೇ ಒಂದೂ ಕಾಲು ಡಾಲರ್ ಎಂದಿದ್ದಿರಿ."
"ಹೌದು,ಆ ಸಮಯದಲ್ಲಿ ಅಷ್ಟು ಹೇಳಿದ್ದೆ.ನೀವು ಎಷ್ಟು ತಡ ಮಾಡುವಿರೋ ಹಾಗೆ ಪುಸ್ತಕದ ಬೆಲೆ ಹೆಚ್ಚುತ್ತ ಹೋಗುವುದು"
ಎಂದರು.
ಗಿರಾಕಿ ನಿರುಪಾಯವಾಗಿ ಅಷ್ಟೇ ಹಣ ಕೊಟ್ಟು ಪುಸ್ತಕ ಕೊಂಡು ಪಾಠ ಕಲಿತ.
ಜಗತ್ತಿನಲ್ಲಿ ಯಾರು ಮಹಾವ್ಯಕ್ತಿಗಳಾಗಿದ್ದಾರೋ ಅವರೆಲ್ಲ ಸಮಯದ ಬೆಲೆ ಅರಿತಿದ್ದಾರೆ.ಅದರ ಸದುಪಯೋಗ
ಮಾಡಿಕೊಂಡು ಜಗತ್ತಿಗೆ ಒಳಿತನ್ನು ಮಾಡಿದ್ದಾರೆ.
'ಪ್ರತಿಯೊಂದು ನಿಮಿಷ ಸ್ನೇಹಿತನ ರೂಪದಲ್ಲಿ ನಿಮ್ಮೆದುರಿಗೆ ಬರುತ್ತದೆ.ಒಂದು ಉಪಹಾರ ಕೊಡುತ್ತದೆ.ಅದರ ಉಪಯೋಗ
ಮಾಡಿಕೊಳ್ಳದಿದ್ದರೆ ಸ್ನೇಹಿತ ಸುಮ್ಮನೆ ಹಿಂದಿರುಗಿ ಹೋಗುತ್ತಾನೆ.'
ಅದಕ್ಕೇ ಹಿರಿಯರು ಹೇಳಿದ್ದಾರೆ-ಕಳೆದುಕೊಂಡ ಸಂಪತ್ತನ್ನು ಉದ್ಯೋಗ ಮಾಡಿ ಹಾಗು ಕಡಿಮೆ ಖರ್ಚು ಮಾಡಿ ತಿರುಗಿ ಗಳಿಸಬಹುದು,ಉಳಿಸಬಹುದು.ಮರೆತ ವಿದ್ಯೆಯನ್ನು ಪಾಠಮಾಡಿ ಇಲ್ಲವೆ ಕೇಳಿ ಪುನಃ ನೆನಪಿಸಿಕೊಳ್ಳಬಹುದು.ಕಳೆದ
ಆರೋಗ್ಯವನ್ನು ಔಷಧದಿಂದ ಹಾಗು ಸಂಯಮದಿಂದ ಪುನಃ ಪಡೆದುಕೊಳ್ಳಬಹುದು.ಆದರೆ ಕಳೆದು ಹೋದ ಸಮಯವನ್ನು
ತಿರುಗಿ ಪಡೆಯಲು ಬರುವದಿಲ್ಲ.ಆ ಸಮಯ ನೆನಪಿನ ವಸ್ತುವಾಗಿ ಉಳಿಯುವುದು.