ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ. ಯಾವುದೇ ರೀತಿಯಲ್ಲಿಯೂ ಮಹಿಳೆ ಶೋಷಣೆಗೊಳಗಾದರೆ, ಅದರಲ್ಲೂ ದೈಹಿಕ ಶೋಷಣೆಗೊಳಗಾದರೆ ಸಮಾಜವು ಅವಳ ಜೊತೆ ಹೇಗೆ ವರ್ತಿಸುತ್ತದೆ ಎಂಬುದು ಇಲ್ಲಿ ಪ್ರಧಾನವಾದುದು. ಹೆಣ್ಣಿನ ದೈಹಿಕ ಸುಖ ಬಯಸುವ ಪುರುಷ ವರ್ಗ ಯಾವ ಸಂದರ್ಭದಲ್ಲೂ ಬೇಕಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಬಹುದು. ಹಾಡಹಗಲೇ ಅದೆಷ್ಟೋ ಹೆಣ್ಣು ಮಕ್ಕಳು ಕಾಮದ ಬಲೆಗೆ ಬಿದ್ದು ನರಳುತ್ತಿರುವಾಗ ಇನ್ನು ರಾತ್ರಿ ಕಾಲದ ಬಗ್ಗೆ ಹೇಳುವುದೇನಿದೆ? ಹೆಣ್ಣು ಒಂಟಿ ಎಂದು ಅನಿಸಿದಾಕ್ಷಣ ಕಾಮಣ್ಣರ ಕಣ್ಣಿಗೆ ಗುರಿಯಾಗ ತೊಡಗುವ ಮಹಿಳೆಗೆ ಒಂದೆಡೆಯಾದರೆ, ಪುರುಷ ಜೊತೆಗಿದ್ದರೂ ಕೆಲವೊಮ್ಮೆ ಇಂತಹ ದುರಂತಗಳಿಗೆ ಎಡೆಯಾಗುವ ಪರಿಸ್ಥಿತಿ ಬಂದಿದೆ. ಉದಾಹರಣೆಗೆ ಪ್ರಸ್ತುತ ಹೊಸ ವರ್ಷ ದಿನಾಚರಣೆ ವೇಳೆ ಮುಂಬೈಯಲ್ಲಿ ನಡೆದ ಘಟನೆಯನ್ನೇ ನೆನಪಿಸಿಕೊಳ್ಳಿ. ಹೆಣ್ಣು ಎಷ್ಟು ಸುರಕ್ಷಿತಳು ಎಂದು ಇದರಿಂದ ತಿಳಿಯುತ್ತದೆ. ಬರೀ ಪ್ರಾಯಕ್ಕೆ ಬಂದ ಹೆಣ್ಣು ಮಾತ್ರವಲ್ಲ ದಿನೇ ದಿನೇ ಹೆಣ್ಣು ಹಸುಗೂಸಿನಿಂದ ಹಿಡಿದು ವೃದ್ಧೆಯರ ವರೆಗೆ ಇಂದು ಮಾನಭಂಗಗಳು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವವರು ಯಾರು? ಅತ್ಯಾಚಾರಕ್ಕೊಳಗಾದ ಮಹಿಳೆಗೆ ಪರಿಹಾರ ಧನ ದೊರೆತರೆ ಹೋದ ಮಾನ ಹಿಂತಿರುಗಿ ಬರುವುದೇ? ಶೋಷಣೆಗೊಳಗಾದ ಮಹಿಳೆಯ ಮೇಲೆ ಅಯ್ಯೋ ! ಪಾಪ ಎಂದು ಕನಿಕರ ತೋರಿಸುವ ಸಮಾಜವು, ಇದಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದೆಯೇ??

ಒಂದೆಡೆ ದೇಶದಲ್ಲಿ ವೇಶ್ಯಾವಾಟಿಕೆ ದಿನೇ ದಿನೇ ಹೆಚ್ಚುತ್ತಾ ಬರುತ್ತಿರುವುದನ್ನು ನಾವು ಕಾಣಬಹುದು. ಇದಕ್ಕೆ ಪ್ರಧಾನ ಕಾರಣವೇನೆಂದು ನಾವು ಚಿಂತಿಸಿದ್ದೇವೆಯೇ ? ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಮನೆಯ ಸಂಪಾದನೆ, ಮಕ್ಕಳ ಆರೈಕೆಗಾಗಿ ಮಾನ ಮಾರಬೇಕಾಗಿ ಬಂದ ಅದೆಷ್ಟೋ ಹೆಂಗಸರಿದ್ದಾರೆ. ಮನೆಯಲ್ಲಿನ ಕಷ್ಟಗಳನ್ನು ಪರಿಹರಿಸಲು ಮಗಳನ್ನು ಮಾರಿದ ಕಥೆಗಳನ್ನು ನಾವು ಕೇಳಿದ್ದೇವೆ, ಆಧುನಿಕತೆಯ ನಾಗಾಲೋಟದಲ್ಲಿ ಹಣ ಸಂಪಾದನೆಗಾಗಿ ಟಿವಿ, ಸಿನೆಮಾ, ಫ್ಯಾಷನ್ ಜಗತ್ತಿಗೆ ಕಾಲಿಡಲು ಬಯಸಿ ಮೋಸ ಹೋದ ಎಷ್ಟೋ ಹೆಣ್ಣು ಮಕ್ಕಳು ನಮ್ಮಡೆಯಲ್ಲಿಲ್ಲ?. ಪ್ರೇಮದ ನಾಟಕವಾಡಿ ಮೋಸದ ಬಲೆಗೆ ಬೀಳುವ ಅಬಲೆಯರು ಎಷ್ಟಿಲ್ಲ? ಕೆಲವೊಮ್ಮೆ ಸಂದೇಹಗಳ ಬಲೆಗೆ ಬಿದ್ದು ಸಾಮಾನ್ಯ ಹೆಂಗಸು ಕೂಡಾ ವೇಶ್ಯೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಲ್ಪಡುತ್ತಾಳೆ. ಹಣ ಸಂಪಾದನೆಗಾಗಿ ದುಡಿಯಲು ಹೋದರೆ ಶಾರೀರಕವಾಗಿ ಶೋಷಣೆಗೊಳಪಟ್ಟು ಆತ್ಮಹತ್ಯೆ ಮಾಡಿದ ಮಹಿಳೆಯರ ಬಗ್ಗೆ ನಮಗೆ ತಿಳಿದಿದೆ. ಅಂತೂ ಒಟ್ಟಿನಲ್ಲಿ ಶಾರೀರಿಕವಾಗಿ ಶೋಷಣೆಗೊಳಗಾದಂತಹ ಮಹಿಳೆಗೆ ಸಮಾಜದಲ್ಲಿರುವ ಸ್ಥಾನ ಮಾನವೇನೆಂಬುದು ಇಲ್ಲಿ ಮುಖ್ಯ.

ಉದಾಹರಣೆಗೆ ಓರ್ವ ಹೆಣ್ಣು ಪ್ರೇಮದ ಬಲೆಯಲ್ಲಿ ಮೋಸ ಹೋದಳೆಂದೆನಿಸಿಕೊಳ್ಳಿ. ಇದರಲ್ಲಿ ಹೆಣ್ಣು ಮಾತ್ರ ತಪ್ಪುಗಾರಳೆಂದು ದೂಷಿಸಲಾಗುತ್ತದೆ. ಅಬಲೆಯಾದ ಹೆಣ್ಣು ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುವಾಗ ಪುರುಷ ತಲೆಯೆತ್ತಿ ನಡೆಯುತ್ತಿರುತ್ತಾನೆ. ಕಾನೂನು ಮೆಟ್ಟಲು ಹತ್ತಿದರೆ ಮಾನ ಹರಾಜಾಗುತ್ತದೆ ಎಂದು ಹೇಳುವ ಕುಟುಂಬ ಒಂದೆಡೆಯಾದರೆ ಕಾನೂನು ಬಾಗಿಲು ತಟ್ಟಿಯೂ ಕೊನೆಗೆ ಪ್ರತಿಫಲ ಸಿಗುವುದಾದರೂ ಏನು? ಅತ್ಯಾಚಾರ ಮಾಡಿದವನೊಂದಿಗೆ ಜೀವನ ನಡೆಸುವುದು ಎಂದು ತೀರ್ಮಾನ ಜ್ಯಾರಿಯಾದರೆ ಇಲ್ಲಿ ಆರೋಪಿಯ ತಪ್ಪು ಮನ್ನಿಸಲ್ಪಡುತ್ತದೆ. ತದನಂತರ ಅವರ ದಾಂಪತ್ಯದಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿಗೆ ಎಲ್ಲವೂ ಮುಗಿದಂತೆ! ಕೆಲವೊಮ್ಮೆ ಅಪರಾಧಿಯ ವಿರುದ್ದ ಕ್ರಮ ಕೈಗೊಂಡರೂ ಸಮಾಜವು ಅವಳನ್ನು ನಾಯಿ ಮಟ್ಟಿದ ಮಡಿಕೆಯಂತೆ ದೂರವಿರಿಸುವುದಿಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ದೈಹಿಕ ಶೋಷಣೆಯೊಂದಿಗೆ ಮಾನಸಿಕ ಶೋಷಣೆಯನ್ನು ಅನುಭವಿಸಬೇಕಾದ ಸ್ಥಿತಿ ಅವಳಿಗೆ ಬರುತ್ತದೆ. ಇಂತಹ ಸಂಕಟ ತಾಳಲಾರದೆ ಆತ್ಮಹತ್ಯೆಗೆ ಮೊರೆಹೋಗುವವರು ಅನೇಕ ಮಂದಿ ಇದ್ದಾರೆ. ಇಲ್ಲಿಗೆ ಕತೆ ಮುಗಿಯುವುದಿಲ್ಲ. ಆತ್ಮಹತ್ಯೆಯ ನಂತರವೂ ನಾನಾ ವಿಧದ ದೋಷಾರೋಪಗಳ ಪಟ್ಟಿಯೂ ಆಕೆಯನ್ನು ಅವಳ ಕುಟುಂಬವನ್ನೂ ಬೆನ್ನಟ್ಟುತ್ತದೆ. ಅಂತೂ ಶೋಷಣೆಯ ಕತೆ ಮೆಗಾ ಧಾರವಾಹಿಯಂತೆ ಮುಂದುವರಿಯುತ್ತದೆ.

ಈ ಮೊದಲೇ ಉಲ್ಲೇಖಿಸಿದಂತೆ ಸಮಾಜದಲ್ಲಿ ವೇಶ್ಯೆಯರ ಸಂಖ್ಯೆ ದಿನೇ ದಿನೇ ವರ್ಧಿಸುತ್ತಾ ಬರುತ್ತಿದ್ದು, ಇಂದು ದೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಹಿಳೆಯರು ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂಬ ಉದ್ದೇಶದಿಂದ ಕೆಲವರು ವೇಶ್ಯಾವಾಟಿಕೆ ದಂಧೆಗೆ ಇಳಿದರೆ, ಅಬಲೆಯಾದ ಸ್ತ್ರೀಯ ಮೇಲೆ ದೌರ್ಜನ್ಯವೆಸಗಿ, ತದನಂತರ ಸಮೂಹದಿಂದ ಅವಳನ್ನು ದೂರವಿಟ್ಟಾಗ ದಾರಿ ಕಾಣದೆ ಮೈ ಮಾರಬೇಕಾಗಿ ಬಂದ ಹೆಂಗಸರು, ತನ್ನ ಗಂಡನಿಂದಲೇ ಇತರರಿಗೆ ಹಾದರ ಹಂಚಲು ಪ್ರೇರಿತರಾದ ಮಹಿಳೆಯರು, ಬುದ್ದಿ ಬೆಳೆಯುವ ಮುನ್ನ ಗೋಮುಖ ವ್ಯಾಘ್ರನಂತಿರುವ ಗಂಡಸರ ಬಲೆಗೆ ಬಿದ್ದು ಮಾನ ಕಳೆದು ಕೊಂಡವರು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಮಹಿಳೆ ಇಂತಹ ದಂಧೆಗೆ ಇಳಿಯಬೇಕಾಗಿ ಬರುತ್ತದೆ. ಇವುಗಳಿಗೆಲ್ಲಾ ಕಾರಣಕರ್ತರು ಯಾರು ? ವೇಶ್ಯೆಯಾಗಿ ಪರಿವರ್ತನೆಯಾಗಲು ಅವಳಿಗೆ ಕಾರಣವಾದವುಗಳಾವುವು ಎಂಬುದನ್ನು ನಾವು ಗಮನಿಸಿದ್ದೇವೆಯೇ ? ವೇಶ್ಯೆಯನ್ನು ಕಂಡು ಮೂಗು ಮುರಿಯುವ ಜನರೇ ಒಂದು ವೇಳೆ ಸಮೂಹದಲ್ಲಿ ವೇಶ್ಯೆಯರೇ ಇಲ್ಲ ಅಂದು ತಿಳಿದುಕೊಳ್ಳಿ. ಕಾಮತೃಷೆ ಮಿತಿ ಮೀರಿದ ಪುರುಷರು ಸಿಕ್ಕ ಸಿಕ್ಕ ಸ್ತ್ರೀಗಳ ಮೇಲೆ ಅತ್ಯಾಚಾರ ಮಾಡಲು ಮುಂದಾಗಲಿಕ್ಕಿಲ್ಲವೇ? ಆದುದರಿಂದ ಸಮಾಜದ ಸಮತೋಲನವನ್ನು ಕಾಪಾಡಲು ವೇಶ್ಯೆಯರು ಸಹಾಯವಾಗುವುದಿಲ್ಲವೇ?

ಬಹಳ ಹಿಂದಿನ ಕಾಲದಿಂದಲೇ ವೇಶ್ಯೆಯರು ಕಂಡು ಬರುತ್ತಿದ್ದರು, ಆದರೆ ಇದೀಗ ಅವರ ಸಂಖ್ಯೆಯಲ್ಲಿ ವರ್ಧನೆ ಕಂಡು ಬಂದಿರುವುದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ನಾವು ಚಿಂತಿಸಲು ಮುಂದಾಗುತ್ತೇವೆಯೇ? ಬರೀ ವೇಶ್ಯೆಯರನ್ನು ಮಾತ್ರವಲ್ಲ ಅವರ ಮಕ್ಕಳನ್ನೂ ನಾವು ಕೆಟ್ಟ ದೃಷ್ಟಿಯಿಂದಲೇ ನೋಡುವುದಿಲ್ಲವೇ? ಸಂತ ಕವಿ ಕಬೀರ್ ದಾಸ್ ಮಾತಿನಂತೆ ಮದ್ಯ(ಶೇಂದಿ) ಮಾರುವ ಹೆಣ್ಣಿನ ಕೈಯಲ್ಲಿ ಹಾಲು ಕಂಡರೂ ಅದು ಶೇಂದಿಯೆಂದೇ ಎಂದೇ ಸಮಾಜವು ತಿಳಿದು ಕೊಳ್ಳುತ್ತದೆ. ಅಂತೆಯೇ ವೇಶ್ಯೆಯು ಮುಂದೆ ವೇಶ್ಯಾ ವೃತ್ತಿಗೆ ವಿದಾಯ ಹೇಳಲು ಬಯಸಿದರೂ ಸಮಾಜವು ಅವರ ಪೂರ್ವ ಜೀವನವನ್ನೇ ಬೊಟ್ಟು ಮಾಡಿ ತೋರಿಸುತ್ತದೆ. ಅವರನ್ನು ಅದೇ ದೃಷ್ಟಿಯಿಂದ ನೋಡಿಕೊಂಡು ಮೇಲೇಳದಂತೆ ಮಾಡುವ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕಾದರೆ ಅವರು ಪಡುವ ಪಾಡುಗಳು ಅಷ್ಟಿಷ್ಟಲ್ಲ. ವೇಶ್ಯೆ ಎಂದರೆ ಮೂಗು ತೂರಿಸಿಕೊಳ್ಳುವ ಸಮಾಜದಲ್ಲಿ ಇವರಿಗೆ ಜೀವನ ನಡೆಸುವ ಹಕ್ಕಿಲ್ಲವೇ ? ಒಂದು ವೇಳೆ ಅವರ ಬದುಕಿನ ಬಂಡಿ ಸಾಗಿಸಿ ತಮ್ಮಷ್ಟಕ್ಕೆ ಜೀವನ ನಡೆಸುವ ವೇಶ್ಯೆಯರ ಮೇಲೆ ನಡೆಯುತ್ತಿರುವ ಶಾರೀರಿಕ, ಮಾನಸಿಕ ಪೀಡನೆಗಳಿಂದ ಮುಕ್ತಿ ನೀಡಲು ಸಮಾಜಕ್ಕೆ ಸಾಧ್ಯವೇ ????

by: ರಶ್ಮಿ.ಪೈ

Rating
No votes yet

Comments