ಸರಸ್ವತಿಗೊಂದು ಸ್ತುತಿ
ಈ ದಿನ ಮಹಾನವಮಿ - ಸರಸ್ವತಿಯ ಪೂಜೆಯ ದಿನ. ಹಾಗೆಂದೇ ಈ ಹಿಂದೆಯೇ ಮಾಡಿದ್ದ ಒಂದು ಅನುವಾದವನ್ನು ಸ್ವಲ್ಪ ತಿದ್ದಿ ಹೊಸ ಅನುವಾದವನ್ನು ಹಾಕುತ್ತಿದ್ದೇನೆ. ಮೊದಲು ಮಾಡಿದ ಅನುವಾದವು ಯಾವುದೇ ಛಂದಸ್ಸಿಗೆ ಒಳಪಡುತ್ತಿರಲಿಲ್ಲ. ಈ ಬಾರಿಯ ಅನುವಾದವು ಮತ್ತಕೋಕಿಲ/ಮಲ್ಲಿಕಾಮಾಲೆಯ ಧಾಟಿಯಲ್ಲಿದೆಯಾದರೂ, ಪ್ರಾಸವನ್ನು ಒಳಗೊಂಡಿಲ್ಲ.
ಮಂಜು ಚಂದಿರ ಮಲ್ಲಿಗೆಯವೋಲ್ ಬೆಳ್ಪು ಬಣ್ಣದ ಸರಸತಿ
ಶುಭ್ರವಸ್ತ್ರವನುಟ್ಟು ಪೊಳೆಯುವ ವೀಣೆದಂಡಿಯ ಪಿಡಿದೆಯೆ |
ಬೊಮ್ಮ ಹರಿಹರರಿಂದ ಪೂಜೆಯಗೊಳುತ ಬೆಳ್ದಾವರೆಯೊಳು
ಕುಳಿತ ದೇವಿಯೆ! ಕಾಯಬೇಕೌ ಉಳಿಸದೆನ್ನಯ ಅಲಸಿಕೆ ||
ಸಂಸ್ಕೃತ ಮೂಲ:
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ
या कुन्देन्दुतुषारहारधवला या शुभ्रवस्त्रावृता
या वीणावरदण्डमण्डितकरा या श्वेतपद्मासना |
या ब्रह्माच्च्य्तशङ्करप्रभृतिभिर्देवैः सदा पूजिता
सा मां पातु सरस्वती भगवती निश्शेषजाड्यापहा ||
ಮೂಲದಲ್ಲಿ "ಸರಸ್ವತಿಯು ನನ್ನನ್ನು ಕಾಪಾಡಲಿ" ಎಂದಿದೆ. ಅನುವಾದದಲ್ಲಿ ನಾನು ಅದನ್ನು"ಸರಸ್ವತೀ, ನೀನು ನನ್ನನ್ನು ಕಾಪಾಡು" ಎಂದು ಸ್ತುತಿಸುವ ರೀತಿಯಲ್ಲಿ ಬದಲಾಯಿಸಿದ್ದೇನಾದರೂ ಅದರಿಂದ ಪದ್ಯದ ಅರ್ಥಕ್ಕೇನೂ ತೊಂದರೆಯಾಗದು ಎಂದು ಎಣಿಸುವೆ.
ನವರಾತ್ರಿಯ ಈ ದಿನ ನಮ್ಮ ಮನೆಯ ಬೊಂಬೆ ಹಬ್ಬದ ಕೆಲವು ಚಿತ್ರಗಳನ್ನೂ ಇಲ್ಲಿ ಹಂಚಿಕೊಳ್ಳುತ್ತಿರುವೆ.
<iframe width="560" height="315" src="//www.youtube.com/embed/R67iNBOuNcQ" frameborder="0" allowfullscreen></iframe>
ಎಲ್ಲರಿಗೂ ಮಹಾನವಮಿ ಮತ್ತೆ ವಿಜಯದಶಮಿಯ ಶುಭಾಶಯಗಳು
-ಹಂಸಾನಂದಿ
ಚಿತ್ರಕೃಪೆ: ನನ್ನ ಮಡದಿ ಪೂರ್ಣಿಮಾಳ ಕೈಚಳಕ. ವಿಡಿಯೋ ನಲ್ಲಿ ಕೊಳಲು ನುಡಿಸುತ್ತಿರುವುದು ವಿಜಯ್ ಕಣ್ಣನ್.
Comments
ಉ: ಸರಸ್ವತಿಗೊಂದು ಸ್ತುತಿ
ಹಂಸಾನಂದಿಯವರೆ, ನಿಮ್ಮ ಮನೆಯ ಬೊಂಬೆ ಹಬ್ಬದ ವಿಡಿಯೊ ಮತ್ತು ಹಿನ್ನಲೆಯ ಕೊಳಲು ವಾದನ ಮನಮೋಹಕವಾಗಿದೆ.
ಬೆಳ್ದಾವರೆಯೊಳು ಕುಳಿತ, ಮಲ್ಲಿಗೆಯವೋಲ್ ಬೆಳ್ಪು ಬಣ್ಣದ ಸರಸತಿ ಎನ್ನಯ ಅಲಸಿಕೆಯನ್ನೂ ಉಳಿಸದೇ ಕಾಯಲಿ.
ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು.
In reply to ಉ: ಸರಸ್ವತಿಗೊಂದು ಸ್ತುತಿ by ಗಣೇಶ
ಉ: ಸರಸ್ವತಿಗೊಂದು ಸ್ತುತಿ
ಧನ್ಯವಾದಗಳು, ಗಣೇಶ ಅವರೆ.