ಸಸ್ಯಾಹಾರಕ್ಕೂ ಮಾಂಸಾಹಾರಕ್ಕೂ ವ್ಯತ್ಯಾಸ ತುರ್ತುಸ್ಠಿತಿಃ ಗಾದೆಗೊಂದು ಗುದ್ದು - ೭೬

ಸಸ್ಯಾಹಾರಕ್ಕೂ ಮಾಂಸಾಹಾರಕ್ಕೂ ವ್ಯತ್ಯಾಸ ತುರ್ತುಸ್ಠಿತಿಃ ಗಾದೆಗೊಂದು ಗುದ್ದು - ೭೬

 (೩೮೬) ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವುದನ್ನು ಯಶಸ್ವೀ ವ್ಯಾಪಾರವೆನ್ನುತ್ತೇವೆ. ವಿಫಲ ವ್ಯಾಪಾರವೆಂದರೆ ಯಾರಿಗೋ ಸಮಾಧಾನವಾಗುವಂತೆ ಅವರಿಗೇ ಮೋಸ ಬಗೆವ ಕೆಲಸವನ್ನು ಮತ್ಯಾರೋ ನಿಮಗಿಂತಲೂ ಮುನ್ನ ಮಾಡಿಬಿಟ್ಟಿದ್ದಾರೆಂದು ಅರ್ಥ. 

(೩೮೭) ನಿದ್ರೆಗೆ ಜಾರುವವರೆಗೂ ಚಿಂತಾಕ್ರಾಂತರಾಗಿರಿ ಅಥವ ಚಿಂತೆಗೆ ಜಾರುವವರೆಗೂ ನಿದ್ರಿಸುತ್ತಿರಿ. ಅವೆರೆಡೂ ಪರಸ್ಪರದ ಔಷದಿಗಳು!

(೩೮೮) ರಸ್ತೆಗಳು ಎಂದೂ ಯಾರನ್ನೂ ಒಂದರಿಂದ ಮತ್ತೊಂದು ಸ್ಥಳಕ್ಕೆ ಒಯ್ಯುವುದಿಲ್ಲ. ಅದು ನಿಮ್ಮನ್ನು ಭೂತದಿಂದ ಭವಿಷ್ಯಕ್ಕೆ, ವರ್ತಮಾನದ ಮುಖಾಂತರ ಒಯ್ಯುತ್ತದೆ. ಭವಿಷ್ಯವು ಸೂಕ್ತವಾಗಿ, ಸುಸೂತ್ರವಾಗಿ ಭೂತವಾದಾಗ ಪಯಣವು ಕೊನೆಗೊಂಡಿತು ಎಂದರ್ಥ. ಭವಿಷ್ಯದಿಂದ ಭೂತಕ್ಕೆ ಪಯಣಿಸುವುದನ್ನು ’ಹೆನ್ನೆನಪು’ ಎನ್ನುತ್ತೇವೆ. ಪಯಣಕ್ಕೆ ವ್ಯತಿರಿಕ್ತವಾದುದೇ ಹಿನ್ನೆನಪು. ಭವಿಷ್ಯದಿಂದ ಭೂತಕ್ಕೆ, ಅಂದರೆ ಹಿನ್ನೆನಪನ್ನು ಅನುಮತಿಸುವ ಪಯಣದ ಪ್ರದೇಶವನ್ನು ವಿಹಾರಸ್ಥಳವೆನ್ನುತ್ತೇವೆ. ಇಂತಹ ಪ್ರತಿಕ್ರಿಯೆಯನ್ನು ನಿಷೇಧಿಸುವ ಸ್ಥಳವನ್ನೇ ’ಮನೆ’ ಎನ್ನುವುದು!

(೩೮೯) ನಿಮಗೂ ನಿಮ್ಮ ಆತ್ಮೀಯರಿಗೂ ಇರುವ ವ್ಯತ್ಯಾಸವೆಂದರೆ, ನೀವು ನೋವನ್ನು ಅನುಭವಿಸಿದಾಗ ಕಣ್ಣೀರು ಸುರಿಸುತ್ತೀರಿ. ಮತ್ತು ಅವರು ಕಣ್ಣೀರು ಸುರಿಸುವಾಗ ನೀವು ನೋವಿನಲ್ಲಿರುತ್ತೀರಿ!

(೩೯೦) ಸಸ್ಯಾಹಾರವು ಉಳ್ಳವರ ಆಯ್ಕೆಯಾದರೆ ಮಾಂಸಾಹಾರವು  ತುರ್ತುಸ್ಥಿತಿ ಕಾಲದ ಮೂಲಭೂತ ಅವಶ್ಯಕತೆ. 

 

 

 

 

 

 

Rating
No votes yet

Comments