ಸಹಬಾಳ್ವೆ
ನಾನು ಎಂದೂ ಸೋತವನಲ್ಲ. ಜೀವನದ ಪ್ರತೀ ಘಟ್ಟದಲ್ಲೂ ಗೆಲುವು ನನ್ನದಾಗಿತ್ತು.ನಾನು ಬಯಸಿದ ಪ್ರತಿಯೊಂದು ವಸ್ತುವೂ ನನಗೆ ದೊರಕಿದೆ.ಆದರೆ ನೆಮ್ಮದಿ ಮಾತ್ರ ದೊರಕಿಲ್ಲ.ನಾನು
ಎಲ್ಲಿ ಎಡವಿದ್ದೇನೆಂಬುದೇ ತಿಳಿಯುತ್ತಿಲ್ಲ. ಲಾಲ್ಭಾಗ್ನಲ್ಲಿ ಕುಳಿತು ಯೋಚಿಸುತ್ತಿದ್ದ ರಾಹುಲ್ಗೆ ತಾನುಎಲ್ಲಿ ಸೋತೆ ಎಂಬುದೇ ಅರ್ಥವಾಗಿರಲಿಲ್ಲ.
ರಾಹುಲ್ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಬೆಳೆದವನು. ಆತನದು ಬಡ ಕುಟುಂಬ. ಚಿಕ್ಕಂದಿನಿಂದಲೂ ವಿದ್ಯಾಭ್ಯಾಸದಲ್ಲಿ ಆತನೇ ವೊದಲಿಗ. ಆತನಿಗೆ ತಿಳುವಳಿಕೆ ಬಂದಂತೆಲ್ಲಾ ಆತನ ಮಹತ್ವಾಕಾಂಕ್ಷೆ ಬೆಳೆದು ಹೆಮ್ಮರವಾಗಿತ್ತು. ಹಣ ಆಸ್ತಿಗಳಿಸುವ ಬಯಕೆ ಅಧಿಕವಾಗಿತ್ತು. ಆತ ತನ್ನ ಇಂಜಿನೀಯರಿಂಗ್ ಮುಗಿಸುವ ವೇಳೆಗೆ ನೂರಾರು ಪ್ರಶಸ್ತಿ ಫಲಕಗಳು ಆತನ ಕೋಣೆಯನ್ನಲಂಕರಿಸಿದ್ದವು.
ಮೊದಲಿನಿ೦ದಲೂ ಅವನಿಗೆ ಹಳ್ಳಿಯೆಂದರೆ ತಿರಸ್ಕಾರ. ಅಲ್ಲಿನ ಆಚರಣೆ ಸಂಪ್ರದಾಯ,ಜನರ ನಡುವಳಿಕೆಗಳೆಲ್ಲಾ ಅನಾಗರೀಕತೆ ಎಂಬ ಅಭಿಪ್ರಾಯ ಬೇರೂರಿತ್ತು. ತನ್ನ ತಂದೆ, ತಾಯಿ, ಕುಟುಂಬದ ಬಗೆಗೂ ಒಂದು ರೀತಿಯ ಕೀಳರಿಮೆ ಉಂಟಾಗಿತ್ತು.ಅದನ್ನು ಆತ ತೋರಿಸಿಕೊದಿದ್ದರೂ,ತನ್ನ ಕುಟುಂಬದಿಂದ ಆದಷ್ಟು ದೂರವೇ ಇದ್ದ. ಮಲೆನಾಡಿನ ಬೆಟ್ಟ ಗುಡ್ಡಗಳು,ನದಿ ತೊರೆಗಳ ಸೌಂದರ್ಯಕ್ಕಿಂತ ನಗರದ ವಿಲಾಸೀ ಜೀವನಕ್ಕೇ ಆತ ಮರು ಹೋಗಿದ್ದ.
ವಿಧ್ಯಾಭ್ಯಾಸದ ನಂತರ ಆತ, ತನ್ನದೇ ಆದ ಕಂಪೆನಿಯೊಂದನ್ನು ತೆರೆದ. ಅದರಲ್ಲೂ ಯಶಸ್ಸು ಆತನನ್ನರಸಿ ಬಂದಿತು. ಕೆಲವೇ ದಿನಗಳಲ್ಲಿ ಕೋಟ್ಯಾಧಿಪತಿಯೂ ಆದ. ತನಗೆ ಇಷ್ಟವಾದವಳನ್ನು ಪ್ರೀತಿಸಿ, ಮನೆಯವರ ವಿರೋಧವನ್ನೂ ಲೆಕ್ಕಿಸದೆ ಮದುವೆಯಾದ. ಇದರಿಂದಾಗಿ ಮನೆಯವರಿಗೂ ಅವನಿಗೂ ಬಳಕೆ ಅಷ್ಟಕ್ಕಷ್ಟೆ. ಆತ ತನ್ನ ಊರಿಗೆ ಹೋಗುವುದು ವರ್ಷಕ್ಕೆ ಒಂದೇ ಒಂದು ದಿನ. ದೀಪಾವಳಿಯ ಆ ದಿನದಂದು ಆತ ಅವನ ಅವಿಭಕ್ತ ಕುಟುಂಬವನ್ನು ಕಂಡು ಬರುತ್ತಾನೆ. ಅಲ್ಲಿಗೆ ಹೋದರೂ ಆತ ಹೋಗುವುದು ಓರ್ವ ದೂರದ ಬಂಧುವಿನಂತೆ, ಮನೆಯವನಂತಲ್ಲ. ಆತ ಉಡುಗೊರೆಯನ್ನು ತೆಗೆದುಕೊಂಡು ಹೋಗುವುದು ತನ್ನ ಶ್ರೀಮಂತಿಕೆಯ ಪ್ರದರ್ಶನಕ್ಕೇ ಹೊರತು ಮನೆಯವರ ಮೇಲಿನ ಪ್ರೀತಿಯಿಂದಲ್ಲ. ಆತ ಕೋಟ್ಯಾಧಿಪತಿಯಾದರೂ ಆತನ ಬಡಕುಟುಂಬದ ಸ್ಥಿತಿ ವೊದಲಿನಂತೆಯೇ ಇದೆ. ಸ್ವಾಭಿಮಾನಿಗಳಾದ ಅವರು ಎಂದಿಗೂ ಆತನಲ್ಲಿ ಹಣವನ್ನು ಕೇಳಲೊಲ್ಲರು.ಈತನಿಗೂ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸಿಲ್ಲ.
ಮದುವೆಯಗಿ ಒಂದೆರಡು ವರ್ಷ ದಾಂಪತ್ಯ ಜೀವನ ಸುಖಕರವಾಗಿ ನಡೆಯಿತು. ಆ ವೇಳೆಯಲ್ಲಿ ಆತನಿಗೆ ಒಂದು ಹೆಣ್ಣುಮಗುವೂ ಆಯಿತು. ನಂತರದ ದಿನಗಳಲ್ಕಿ ಅವನ ಜೀವನದಲ್ಲಿ ಸಂತಸಕ್ಕಿಂತಲೂ ವಿರಸವೇ ಹೆಚ್ಚಾಯಿತು. ಯಾವಾಗಲೂ ಆಫೀಸ್, ಕೆಲಸ ಎಂದು ತಿರುಗಾಡುವ ಗಂಡ ತನ್ನ ಮತ್ತು ಮಗಳ ಮೇಲೆ ಹೆಚ್ಚಿನ ಗಮನ ಕೊಡುವುದಿಲ್ಲ ಎಂಬ ಕೊರಗು ಅವನ ಹೆಂಡತಿಯನ್ನು ಕಾಡುತ್ತಿತ್ತು. ಇದೇ ಅವರ ನಡುವಿನ ವೈಮನಸ್ಯಕ್ಕೆ ಕಾರಣವಾಗಿತ್ತು. ಮನೆಯಲ್ಲಿ ಚಿಕ್ಕ-ಪುಟ್ಟ ವಿಷಯಗಳಿಗೂ ಮನಸ್ತಾಪ ಪ್ರಾರಂಭವಾಯಿತು.ಹಗಲು ಪೂರ್ತಿ ದುಡಿದರಾಹುಲ್ ಸುಸ್ತಾಗಿ ಮನೆಗೆ ಬಂದರೆ ಅಲ್ಲೂ ನೆಮ್ಮದಿ ಮರೀಚಿಕೆಯಾಯಿತು. ಈಗ ಆತ ಶಾಂತಿಯನ್ನರಸುತ್ತಿದ್ದಾನೆ.ಆದ್ದರಿಂದಲೇ ಆಫೀಸ್ ಮುಗಿದಕೂಡಲೇ ಮನೆಗೆ ಹೋಗದೆ ಇಲ್ಲಿ ಬಂದು ಕುಳಿತಿದ್ದಾನೆ.
ಈಗಾಗಲೇ ಸೂರ್ಯ ತನ್ನ ಕರ್ತವ್ಯವನ್ನು ಮುಗಿಸಿ ಹೊರಟು ನಿಂತಿದ್ದಾನೆ. ಆದರೆ ರಾಹುಲ್ನಿಗೆ ಮಾತ್ರ ಮನೆಗೆ ಹೋಗುವ ಮನಸ್ಸಾಗುತ್ತಿಲ್ಲ. ಆತನ ಮನಸ್ಸು ಏಗಾಂಗಿತನವನ್ನು ಬಯಸುತ್ತಿದೆ. ಸೂರ್ಯಾಸ್ತದಿಂದ ಆವರಿಸುತ್ತಿರುವ ಕತ್ತಲಿನಂತೆ ಆತನ ಮನಸ್ಸಿನಲ್ಲೂ ಕತ್ತಲಾವರಿಸುತ್ತಿದೆ. ಆತ ಏನನ್ನೋ ಯೋಚಿಸುತ್ತಾ ಕುಳಿತಿರುವಾಗ ವೊಬೈಲ್ ಆಗುತ್ತದೆ. ತನ್ನ ಹೆಂಡತಿ ಕರೆ ಮಾಡಿರುವುದು ಎಂದು ತಿಳಿದಾಗ, ಮಾತನಾಡಲು ಇಷ್ಟವಿಲ್ಲದಿದ್ದರೂ "ಹಲೋ" ಅನ್ನುತ್ತಾನೆ.
ಆ ಕಡೆಯಿಂದ "ಎಲ್ಲಿದ್ದೀರಿ?" ಎಂದು ಗಾಬರಿಯಿಂದ ಕೇಳುತ್ತಾಳೆ. ಎಲ್ಲಿದ್ದೇನೆ ಎಂದು ಹೇಳುವ ಮನಸ್ಸಾಗದೇ " ಏನು ?" ಕೆಳುತ್ತಾನೆ.
"ಪುಟ್ಟಿಗೆ ಆಕ್ಸಿಡೆಂಟ್ ಆಗಿದೆ ಬೇಗನೆ ಕಿಮ್ಸ್ ಹಾಸ್ಪಿಟಲ್ಗೆ ಬನ್ನಿ. ನನಗೆ ತುಂಬಾ ಭಯವಾಗಿದೆ" ಎಂದು ಹೇಳುತ್ತಾಳೆ.
ಭಾವರಹಿತನಾಗಿ ಆತ ಹೊರಡುತ್ತಾನೆ. ದಾರಿಯಲ್ಲಿ ಒಬ್ಬ ಕೈಯಲ್ಲಿ ಮಗುವೊಂದನ್ನು ಹಿದಿದುಕೊಂಡು ಕಾರಿಗೆ ಅಡ್ಡ ಬರುತ್ತಾನೆ. ವೇಗವಾಗಿ ಹೋಗುತ್ತಿದ್ದ ಕಾರನ್ನು ಬ್ರೇಕ್ಹಾಕಿ ನಿಲ್ಲಿಸಿ "ಏನ್ರೀ ನಿಮಗೆ ಬುಧ್ಧಿ ಇಲ್ವಾ? ಸಾಯೋದಕ್ಕೆ ನನ್ನ ಕಾರೇ ಬೇಕಾಗಿತ್ತಾ?" ಎಂದು ರೇಗುತ್ತಾನೆ. ಆಗ ಆತ "ಸಾರ್ ನನ್ನ ಮಗುವಿಗೆ ತುಂಬಾ ಜ್ವರ ಬಂದಿದೆ, ಕಿಮ್ಸ್ ಹಾಸ್ಪಿಟಲ್ಗೆ ಹೋಗಬೇಕು ದಯವಿಟ್ಟು ಕರೆದುಕೊಂಡು ಹೋಗುತ್ತೀರಾ" ಎಂದು ಕೇಳುತ್ತಾನೆ. ಆಗುವುದಿಲ್ಲ ಎಂದು ಹೇಳಬೇಕೆಂದಿದ್ದ ರಾಹುಲ್ ಆತನ ಕೈಯಲ್ಲಿದ್ದ ಮಗುವನ್ನು ನೋಡಿ , ತನ್ನ ಮಗುವಿನ ನೆನಪಾಗಿ " ಸರಿ ಸರಿ ಕಾರು ಹತ್ತು, ನಾನೂ ಅಲ್ಲಿಗೇ ಹೊರಟಿದ್ದೇನೆ" ಎಂದು ಕಾರಿನ ಹಿಂದಿನ ಬಾಗಿಲನ್ನು ತೆರೆದನು. ಎಂದೂ ಯಾರನ್ನೂ ಕಾರಿನಲ್ಲಿ ಕೂರಿಸಿಕೊಳ್ಳದ ರಾಹುಲ್ ಇಂದು ಯಾವ ಕರುಣೆಯಿಂದ ಕೂರಿಸಿಕೊಂಡ ಎಂಬುದು ಅವನಿಗೆ ಮಾತ್ರ ಗೊತ್ತು.
ಆ ಯುವಕನ ಹಾವ-ಭಾವ ವೇಷ ಭೂಷಣ, ಮಾತು, ಎಲ್ಲವನ್ನೂ ಗಮನಿಸಿದಾಗ ಅವನು ಅನಕ್ಷರಸ್ತ, ಬಡವ ಎಂದು ತಿಳಿಯುತ್ತಿತ್ತು. ಅದರಲ್ಲೂ ಈಗಿನ ಪರಿಸ್ಥಿತಿಯಲ್ಲಿ ಆತ ನಿಸ್ತೇಜನಾಗಿದ್ದ. ಕಾರು ಆಸ್ಪತ್ರೆಯನ್ನು ತಲುಪಿತು. ಆ ಬಡ ಯುವಕ ಕಾರನ್ನು ಇಳಿದವನೇ ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು " ನಿಮ್ಮಿಂದ ತುಂಬಾ ಉಪಕಾರವಾಯಿತು" ಎಂದು ಮತ್ತೊಂದು ಕೈಯಲ್ಲೇ ನಮಸ್ಕರಿಸಿದ. ಆತನ ಕಣ್ಣಿಂದ ಬಂದ ಕಣ್ನೀರಿನ ಎರಡು ಹನಿ ರಾಹುಲ್ನ ಪಾದದಮೇಲೆ ಬಿತ್ತು.ತಾನು ಹೋಗುತ್ತೇನೆ ಎಂದು ಹೇಳಿ ಆತ ಒಳನುಗ್ಗಿದ. ರಾಹುಲ್ಗೆ ಆತನ ಹಾವ ಭಾವ , ಕಣ್ಣೀರು ವಿಚಿತ್ರವೆನಿಸಿತು. ತಾನೂ ಮಗಳಿಗೇನಾಗಿದೆ ಎಂದು ನೋಡಲು ಒಳಗೆ ಹೊರಟ.
ರಾಹುಲ್ ಡಾಕ್ಟರರ ಬಳಿ ಹೋದಾಗ, ಅವರು "ತುಂಬಾ ರಕ್ತಸ್ರಾವವಾಗಿದೆ.ರಕ್ತವನ್ನು ನೀಡಿದ್ದೇವೆ. ಕೈಯ ಮೂಳೆ ಮುರಿದಿದೆ. ಜೀವಕ್ಕೇನೂ ಅಪಾಯವಿಲ್ಲ" ಎಂದು ಹೇಳುತ್ತಾರೆ. ಅಷ್ಟೇ ಹೊತ್ತಿಗೆ ಅದೇ ಯುವಕ ಡಾಕ್ಟರರ ಬಳಿ ಬಂದು "ಡಾಕ್ಟರ್ ಡಾಕ್ಟರ್ ನನ್ನ ಮಗುವಿಗೆ ತುಂಬಾ ಜ್ವರ ಬಂದಿದೆ. ಒಮ್ಮೆ ಬಂದು ನೋಡಿ" ಎಂದು ಗೋಗರೆಯುತ್ತಾನೆ. ಆಗ ಅವರು ಬರುತೇನೆ ಎಂದರೂ ಕೇಳದೆ ಅವರ ಕೈ ಹಿಡಿದು ಎಳೆಯುತ್ತಾನೆ. ಆಗ ಅವರು "ಈಗ ಬರುತ್ತೇನೆ ಕುಳಿತಿರಿ" ಎಂದು ಹೇಳಿ ಆತನ ಹಿಂದೆ ಹೊರಡುತ್ತಾರೆ.
ಹತ್ತು ನಿಮಿಷದಲ್ಲಿ ಡಾಕ್ಟರ್ ಹಿಂದಿರುಗುತ್ತಾರೆ."ಏನು ಡಾಕ್ಟರ್ ಇಷ್ಟು ಬೇಗ ಬಂದಿರಿ!" ಎಂದು ರಾಹುಲ್ ಕೇಳುತ್ತಾನೆ.
"ಮಗುವಿಗೆ ಸ್ವಲ್ಪ ಜಾಸ್ತಿಯಾಗೇ ಜ್ವರ ಬಂದಿತ್ತು. ಅದಕ್ಕೆ ಮಾತ್ರೆಯನ್ನು ಬರೆದುಕೊಟ್ಟು ಬಂದೆ" ಎಂದು ಹೇಳುತ್ತಾರೆ.
ಅಷ್ಟರಲ್ಲಿ ಅದೇ ಯುವಕ ಕೈಯಲ್ಲಿ ಕೆಲ ಮಾತ್ರೆಗಳನ್ನು ಹಿಡಿದುಕೊಂಡು ವೈದ್ಯರ ಬಳಿ ಬಂದು ಎಲ್ಲ ಸರಿಯಾಗಿದೆಯೇ ಎಂದು ಕೇಳುತ್ತಾನೆ. ಆಗ ಅವರು ಆ ಮಾತ್ರೆಗಳನ್ನೆಲ್ಲಾ ನೋಡಿ ಸರಿಯಾಗಿದೆ ಎಂದು ಹೇಳುತ್ತಾರೆ. ಆತ ವೈದ್ಯರಿಗೆ ವಂದನೆಯನ್ನು ಸಲ್ಲಿಸಿ ಹೊರಡುತ್ತಾನೆ.
ಆತ ಹೋದ ನಂತರ ರಾಹುಲ್ "ಈತನನ್ನು ನೋಡಿದರೆ ವಿಚಿತ್ರವೆನಿಸುತ್ತದೆ. ನಾನೇ ಈತನನ್ನು ಕಾರಿನಲ್ಲಿ ಕರೆದುಕೊಂಡು ಬಂದೆ. ಆತನ ಆ ಅಳು ಭಯ ಎಲ್ಲಾ ತುಂಬಾ ವಿಚಿತ್ರವಾಗಿದೆ.ನನ್ನ ಮಗುವಿಗೆ ಅಪಘಾತವಾದರೂ ನಾನು ಇಷ್ಟು ಹೆದರಿರಲಿಲ್ಲ.ನನಗೆ ಕಣ್ನೀರು ಬಂದೇ ಇಲ್ಲ.ಆದರೆ ಈತ ಕೇವಲ ಜ್ವರ ಬಂದಿದ್ದಕ್ಕೆ ಅಳುತ್ತಿದ್ದಾನೆ" ಎಂದು ಡಾಕ್ಟರ್ಬಳಿ ಹೇಳುತ್ತಾನೆ.
ಆಗ ಡಾಕ್ಟರ್ ನಗುತ್ತಾ" ಹೌದು ಅದನ್ನೇ ನಿಜವಾದ ಪ್ರೀತಿ ಎನ್ನುವುದು. ಆತ ಬಡವನಿರಬಹುದು, ವಿದ್ಯಾವಂತನಲ್ಲದಿರಬಹುದು, ಆದರೆ ಆತ ಒಬ್ಬ ಹೃದಯವಂತ ತಂದೆ. ಆತ ತನ್ನವರನ್ನು ತುಂಬಾ ಪ್ರೀತಿಸುತ್ತಾನೆ. ಅವರಿಗೆ ಸ್ವಲ್ಪ ನೋವಾದರೂ ಅವನಿಗೆ ಅದರ ನೂರರಷ್ಟು ನೋವಾಗುತ್ತದೆ. ಆದರೆ ನಾವು ವಿದ್ಯಾವಂತರೆಂಬ ಹಣೆಪಟ್ಟಿ ಹೊತ್ತು ಸಂಭಂಧಗಳಿಗೆಲ್ಲಾ ತಿಲಾಂಜಲಿಯಿತ್ತಿದ್ದೇವೆ. ಹಣದ ದಾಸರಾಗಿ ಅದರ ಹಿಂದೆ ಹೊರಟಿದ್ದೇವೆ. ನಾವು ಅತ್ತರೆ ಅಕ್ಕ-ಪಕ್ಕದವರು ಏನಾದರೂ ತಿಳಿದುಕೊಂಡರೆ ಎಂಬ ಭಯ. ಒಟ್ಟಿನಲ್ಲಿ ನಾವು ಆಧುನೀಕತೆಗೆ ನಮ್ಮನ್ನು ಒಡ್ಡಿಕೊಂಡಂತೆಲ್ಲಾ, ನಮ್ಮ ಸಂಸ್ಕøತಿ, ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ" ಎಂದು ಹೇಳಿದರು.
ನಗುನಗುತ್ತಾ ಹೇಳಿದರೂ ಅವರ ಮಾತು ಚಾಟಿ ಏಟಿನಂತೆ ರಾಹುಲ್ನ ಮೇಲೆರಗಿತು. ಹೌದು...ನಾನು
ಕೇವಲ ಹಣದಿಂದ ಪ್ರತಿಯೊಂದನ್ನೂ ಕೊಂಡುಕೊಳ್ಳಬಹುದೆಂದಿದ್ದೆ. ಜೀವನದಲ್ಲಿ ಅದಕ್ಕಿಂತಲೂ ಉತ್ತಮವಾದ ವಸ್ತುಗಳಿವೆ. ಆತ ಬಡವನಾಗಿರಬಹುದು ಆದರೆ ಆತ ನನಗಿಂತ ನೆಮ್ಮದಿಯಿಂದಿದ್ದಾನೆ.ಅವನು ತನ್ನವರನ್ನು ತುಂಬಾ ಪ್ರೀತಿಸುತ್ತಾನೆ ಆದರೆ ನಾನು.....?
ಎಂದಿನಂತೆ ಅಂದು ಸಂಜೆ ರಾಹುಲ್, ಲಾಲ್ಭಾಗ್ಗೆ ಹೋಗಿಲ್ಲ. ಆತ ತನ್ನ ಊರಿನೆಡೆಗೆ ಹೋಗುತ್ತಿದ್ದಾನೆ.ಇಂದು ದೀಪಾವಳಿಯಲ್ಲ, ಯಾರಿಗೂ ಉಡುಗೊರೆಯನ್ನೂ ಕೊಂಡಿಲ್ಲ. ಎಲ್ಲರೊಂದಿಗೆ ಒಟ್ಟಾಗಿ ಬಾಳಲು ಹೊರಟಿದ್ದಾನೆ. ಸಹಬಾಳ್ವೆಯ ಸುಖವನ್ನನುಭವಿಸಲು ಹೊರಟಿದ್ದಾನೆ.
Rating
Comments
ಉ: ಸಹಬಾಳ್ವೆ
In reply to ಉ: ಸಹಬಾಳ್ವೆ by makara
ಉ: ಸಹಬಾಳ್ವೆ