ಸಾಂಸ್ಕೃತಿಕ ನಾಯಕತ್ವ ಕಳೆದುಕೊಂಡಿರುವ ಕರ್ನಾಟಕ
ಸಾಂಸ್ಕೃತಿಕ ನಾಯಕತ್ವ ಕಳೆದುಕೊಂಡಿರುವ ಕರ್ನಾಟಕ
ಅಂತೂ 'ಆನುದೇವಾ...' ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ತನ್ನ ನಿರ್ಧಾರವನ್ನು ಹೇಳಿದ ಹಿಂದಿನ ಎರಡು - ಮೂರು ದಿನಗಳ ಕಾಲ ಜಾತಿವಾದಿ ಲಿಂಗಾಯತರ ನೇತೃತ್ವದಲ್ಲಿ ನಡೆದ ಅನಾಗರಿಕ ಶೈಲಿಯ ಪ್ರತಿಭಟನೆಗಳನ್ನು (ಅವರು ಹಿಡಿದಿದ್ದ ಭಿತ್ತಿಪತ್ರಗಳ ಭಾಷೆಯನ್ನು ಗಮನಿಸಬೇಕಿತ್ತು) ಹಾಗೂ ಸರ್ಕಾರ ಮತ್ತು ಶಾಸನ ಸಭೆಗಳೊಳಗೇ ಇದ್ದ ಜಾತಿವಾದಿ ಹಾಗೂ ಅಪ್ಪಟ ರಾಜಕೀಯ ಲೆಕ್ಕಾಚಾರವನ್ನೇ ರಾಜಕಾರಣದ ಪರಮ ಗಂತವ್ಯವನ್ನಾಗಿಸಿಕೊಂಡಿರುವ ಜನಪ್ರತಿನಿಧಿಗಳ ಪ್ರತಿಕ್ರಿಯೆಗಳನ್ನು ಗಮನಿಸಿದ ಯಾರಿಗೂ ಸರ್ಕಾರ ಕೈಗೊಳ್ಳಬಹುದಾದ ನಿರ್ಧಾರದ ಬಗ್ಗೆ ಸಂಶಯವಿರಲಿಲ್ಲ. ಪುಸ್ತಕ ಕುರಿತು ವರದಿ ಸಲ್ಲಿಸಲು ತರಾತುರಿಯಲ್ಲಿ ಸಾಹಿತಿಗಳ ಸಮಿತಿಯೊಂದನ್ನು ರಚಿಸಿದ್ದೂ, ಆದರೆ ಅದರ ಸದಸ್ಯರ ವರದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದ್ದೂ; ಕರ್ನಾಟಕದ ರಾಜಕಾರಣ ತನ್ನೆಲ್ಲಾ ಸಾಂಸ್ಕೃತಿಕ ಬಂಡವಾಳವನ್ನು ಕಳೆದುಕೊಂಡು ದಟ್ಟ ದರಿದ್ರ ಸ್ಥಿತಿ ತಲುಪಿರುವುದನ್ನಷ್ಟೇ ಸೂಚಿಸುತ್ತದೆ.
ಸರ್ಕಾರದ ನಿರ್ಧಾರವೇನೋ ನಿರೀಕ್ಷಿತವೇ. ಆದರೆ ಬಂಜಗೆರೆಯವರ ಪುಸ್ತಕ ವಾಪಸಾತಿಯ ನಿರ್ಧಾರ ಮಾತ್ರ ಸಂಪೂರ್ಣ ಅನಿರೀಕ್ಷಿತ. ಪುಸ್ತಕದ ಮುಟ್ಟುಗೋಲು ಬಹುಪಾಲು ಖಚಿತವೆನ್ನಿಸಿದ ಕೊನೇ ನಿಮಿಷದಲ್ಲಿ- ಸರ್ಕಾರದ ನಿರ್ಧಾರ ಪ್ರಕಟವಾಗುವ ಹಿಂದಿನ ರಾತ್ರಿ - ಅವರು ತಾವು ಪುಸ್ತಕವನ್ನು, ಅದೂ ತಾತ್ಕಾಲಿಕವಾಗಿ ಹಿಂದೆ ತೆಗೆದುಕೊಂಡಿರುವುದಾಗಿ ಪ್ರಕಟಿಸಿದ್ದು ನಿಜವಾಗಿಯೂ ಅರ್ಥವಾಗದ ವಿಷಯವಾಗಿದೆ. ತಮ್ಮ ಪುಸ್ತಕ ಸಾಮಾಜಿಕ ಅಶಾಂತಿಗೆ ಕಾರಣವಾಗಿದ್ದು, ಒಬ್ಬ ಲೇಖಕನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮತ್ತು ಮುಂದಿನ ದಿನಗಳಲ್ಲಿ ಪುಸ್ತಕವನ್ನು ತಿದ್ದಿ - ಪರಿಷ್ಕರಿಸಿ ಪ್ರಕಟಿಸುವುದಕ್ಕಾಗಿ ಪುಸ್ತಕವನ್ನು ಹಿಂತೆಗೆದುಕೊಂಡಿದ್ದಾಗಿ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಬದಲಾಗಿ ಅವರು ತಾನು ಈ ಪುಸ್ತಕವನ್ನು ಹೀಗೆ ಅವಸರದಲ್ಲಿ ಬರೆಯಬಾರದಿತ್ತು; ಬರೆದು ತಪ್ಪು ಮಾಡಿದ್ದೇನೆ ಎಂದು ಕ್ಷಮೆ ಕೇಳಿದ್ದರೆ, ಅದು ಕೆಲವರಿಗಾದರೂ ಹೆಚ್ಚು ಪ್ರಾಮಾಣಿಕ ನಿರ್ಧಾರ ಎನಿಸುತ್ತಿತ್ತೇನೋ! ಏಕೆಂದರೆ ಲೇಖಕರಿಗೆ ತಮ್ಮ ಪುಸ್ತಕದ ವಿರುದ್ಧದ ಪ್ರತಿಭಟನೆ ಸಾಮಾಜಿಕ ಅಶಾಂತಿಯಾಗಿ ಕಂಡದ್ದು, ಲೇಖಕನ ಸಾಮಾಜಿಕ ಜವಾಬ್ದಾರಿಯ ನೆನಪೂ ಆಗಿದ್ದು ಹಾಗೂ ಪುಸ್ತಕವನ್ನು ಪರಿಷ್ಕರಿಸಿ ಪ್ರಕಟಿಸುವ ಅಗತ್ಯವೂ ಮನವರಿಕೆಯಾಗಿದ್ದ್ಲೂ, ಸರ್ಕಾರದ ನಿರ್ಧಾರ ಪ್ರಕಟಣೆಯ ಹಿಂದಿನ ರಾತ್ರಿಯ ವೇಳೆಗಷ್ಟೇ ಎಂದರೆ ಯಾರಾದರೂ ಹೇಗೆ ನಂಬುವುದು?
ಮುಟ್ಟುಗೋಲನ್ನು ತಪ್ಪಿಸಿಕೊಳ್ಳಬಹುದು ಎಂದೋ ಅಥವಾ ಈ ಸಂಬಂಧ ಸರ್ಕಾರದ ಪರವಾಗಿ ಯಾರಾದರೂ ನೀಡಿದ ಆಶ್ವಾಸನೆಗೆ ಪ್ರತಿಯಾಗಿಯೋ ಈ ಕೊನೇ ನಿಮಿಷದ ನಿರ್ಧಾರವನ್ನೇನಾದರೂ ಬಂಜಗೆರೆ ಪ್ರಕಟಿಸಿದ್ದರೆ, ಅವರ ಈವರೆಗಿನ ಬೌದ್ಧಿಕ ಹಾಗೂ ಹೋರಾಟದ ಜೀವನ ಅನುಮಾನಾಸ್ಪದವೇ ಆಗುತ್ತದೆ. ಅಲ್ಲಾ ಜಯಪ್ರಕಾಶ್, ಸಲ್ಲದ ಕಾರಣದ ಮೇಲೆ ಯಾರಾದರೂ ಸಾಮಾಜಿಕ ಅಶಾಂತಿ ಉಂಟು ಮಾಡಿದರೆ, ಅವರನ್ನು ನಿರ್ವಹಿಸುವ ಜವಾಬ್ದಾರಿ ಸರ್ಕಾರದ್ದು. ಅದನ್ನೇಕೆ ನೀವು ಹೊರಲು ಹೋದಿರಿ? ಅಥವಾ ನಿಮ್ಮ ನಿರ್ಧಾರದಿಂದ ಆ ಉಗ್ರ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಿಬಿಡುತ್ತಾರೆಂದು ನಂಬುವಷ್ಟು ನೀವು ಹುಂಬರೋ? ಹಾಗೇನೂ ಅನ್ನಿಸುವುದಿಲ್ಲವಲ್ಲವಲ್ಲ? ಪುಸ್ತಕದಲ್ಲಿ ಅಸಮ್ಮತಾರ್ಹವಾದ್ದು ಇರಬಹುದಾದರೂ, ಆಕ್ಷೇಪಾರ್ಹವಾದದ್ದು ಏನೂ ಇಲ್ಲದಿದ್ದಾಗ ತಾತ್ಕಾಲಿಕ ವಾಪಸಾತಿಯಾದರೂ ಏಕೆ? ಈ ನಿರ್ಧಾರದ ಮೂಲಕ ಜಾತಿವಾದಿ ಗುಂಪುಗಳು ನಡೆಸಿದ ಪ್ರತಿಭಟನೆಗೆ ಈಗ ನೀವೇ ಪರೋಕ್ಷ ಸಮರ್ಥನೆ ಒದಗಿಸಿದ್ದೀರಿ ಹಾಗೂ ಪುಸ್ತಕ ಓದದ ಅಪಾರ ಜನರ ಕಣ್ಣಲ್ಲಿ ಅನುಮಾನಾಸ್ಪದರಾಗುವ ಅವಕಾಶವನ್ನು ನೀವೇ ಕಲ್ಪಿಸಿಕೊಂಡಿದ್ದೀರಿ. ಅಷ್ಟೇ ಅಲ್ಲ, ಮುಂದೆ ನ್ಯಾಯಾಲಯದಲ್ಲಿ ಈ ಸಂಬಂಧ ನೀವು ಹೂಡಬಹುದಾದ (ಹಾಗೆಂದು ಭಾವಿಸಿದ್ದೇನೆ) ಮೊಕದ್ದಮೆಯಲ್ಲಿ ಅನಗತ್ಯ ಕಸಿವಿಸಿಯನ್ನು ಅನುಭವಿಸುವ ಪರಿಸ್ಥಿತಿಯನ್ನು ನೀವೇ ತಂದುಕೊಂಡಿದ್ದೀರಿ.
ಹಾಗೆ ನೋಡಿದರೆ, ಇಂದಿನ ರಾಜಕೀಯ ವಾತಾವರಣವೇ ಇಂತಹ ತಿಕ್ಕಲುತನಗಳಿಗೆ ಪ್ರೇರಣೆ ನೀಡುವಂತಿದೆ. ಬುದ್ಧಿಜೀವಿಗಳಿಗೆ, ಹೋರಾಟಗಾರರಿಗೆ ಪ್ರಭುತ್ವದಿಂದ ಹಾಗೂ ಅದರ ದಲ್ಲಾಳಿ ಸಂಸ್ಥೆಗಳಿಂದ ಎಷ್ಟೊಂದು ಆಮಿಷಗಳು, ಆಕರ್ಷಣೆಗಳು! ಮತ್ತು ಆ ಸಂಬಂಧದ ಆತಂಗಳು... ಸ್ವದೇಶದ್ದೋ ವಿದೇಶದ್ದೋ ಹಣದ ಹೊಳೆ ಹರಿಸುವ ಅನೇಕ ಯೋಜನೆಗಳು, ಕಾರ್ಯಕ್ರಮಗಳು, ಸ್ವಯಂಸೇವಾ ಸಂಸ್ಥೆಗಳು, ಟ್ರಸ್ಟ್ಗಳು, ಅಧಿಕಾರ ಸ್ಥಾನಗಳು, ಪ್ರಶಸ್ತಿಗಳು! ಇವಕ್ಕೆ ಬಲಿಯಾಗದವರೇ ಪಾಪಿಗಳೆನಿಸಿಕೊಳ್ಳುವ ಪರಿಸ್ಥಿತಿ ಈಗ... ನಮ್ಮ ಹಾಲಿ ಹಾಗೂ ಭಾವಿ ರಾಷ್ಟ್ರ ಕವಿಗಳನ್ನೇ ನೋಡಿದರೆ ಸಾಕು ಪರಿಸ್ಥಿತಿಯ ಅರಿವಾದೀತು! ಇಂತಹ ನಿರಾಶದಾಯಕ ಪರಿಸ್ಥಿತಿಯಲ್ಲೂ ಜನ ಸಿನಿಕರಾಗದೆ ಸಮಾನತೆಯ ಆಶಯಗಳಿಗೆ ಅಥವಾ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆ ಒದಗಿದಾಗಲೆಲ್ಲಾ ಧ್ವನಿ ಎತ್ತುವ ಶಕ್ತಿ ಇನ್ನೂ ಉಳಿಸಿಕೊಂಡಿದ್ದಾರೆ ಎಂದರೆ, ಬಂಜಗೆರೆಯವರಂತಹ ಹೊಸ ತಲೆಮಾರಿನ ಯುವ ಚಿಂತಕರಿಗೆ ಹಾಗೂ ಹೋರಾಟಗಾರರಿಗೆ ಎಷ್ಟೆಲ್ಲಾ ಜವಾಬ್ದಾರಿ ಇರಬೇಡ! ಇಂತಹ ಜವಾಬ್ದಾರಿ ಬಂಜಗೆರೆಯವರಿಂದ, ಅವರ ಜೊತೆ ನಿಂತವರಿಗಾಗಿ ಕನಿಷ್ಠ ಒಂದು ಪ್ರಾಮಾಣಿಕ ಹಾಗೂ ಸಮಂಜಸ ವಿವರಣೆಯನ್ನು ಬೇಡುತ್ತದೆ.
ಬಂಜಗೆರೆಯವರು ತಮ್ಮ ಈ ಅಸಂಗತ, ಅಸಮರ್ಥನೀಯ ಹಾಗೂ ಕೆಟ್ಟ ಸಂಪ್ರದಾಯದ ನಿರ್ಧಾರದಿಂದ ಯಾವ ಅಪಾಯದಿಂದ ರಕ್ಷಣೆ ಪಡೆದಿದ್ದಾರೋ ಅಥವಾ ಯಾರನ್ನು ರಕ್ಷಿಸಲು ಸಾಧ್ಯವಾಗಿದೆಯೋ ತಿಳಿಯದಾಗಿದೆ. ಆದರೆ 'ಆನುದೇವಾ...' ಪ್ರಕಟವಾದಾಗಿನಿಂದ ಪ್ರತಿಕೂಲ ವಾತಾವರಣದ ನಡುವೆಯೂ ತಾತ್ವಿಕ ಸಹಾನುಭೂತಿಯೊಂದಿಗೆ ಆ ಪುಸ್ತಕದ ಆಶಯದ ಪರ ನಿಂತ ಕರ್ನಾಟಕದ ಒಂದು ದೊಡ್ಡ ಜನಪರ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳ ಗುಂಪಿಗೆ ಅವರು ಆಘಾತ ಉಂಟು ಮಾಡಿದ್ದಾರೆ. ಆ ಮೂಲಕ ದಿನೇ ದಿನೇ ಕುಂದುತ್ತಿರುವ ಜನಪರ ಹೋರಾಟಗಳ ನೈತಿಕ ಸ್ಥೈರ್ಯವನ್ನು ಮತ್ತಷ್ಟು ಕುಂದಿಸಿದ್ದಾರೆ. ಇಂದು ಸರ್ಕಾರದ ಕ್ರಮದ ವಿರುದ್ಧ ಒಂದಷ್ಟು ಜನ ಪ್ರತಿಭಟನೆ ಮಾಡುತ್ತಿದ್ದರೆ, ಅವರು ತಮ್ಮನ್ನು ಉದಾರವಾಗಿ ಕ್ಷಮಿಸಿದ್ದಾರೆ ಅಥವಾ ತಮ್ಮ ನಿರ್ಧಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಒಂದು ತಾತ್ವಿಕತೆಯನ್ನು ಎತ್ತಿ ಹಿಡಿಯಲು ಮುಂದಾಗಿದ್ದಾರಷ್ಟೆ ಎಂಬುದನ್ನು ಜಯಪ್ರಕಾಶ್ ತಿಳಿದರೆ ಒಳ್ಳೆಯದು. ಹಾಗೇ, ಒಮ್ಮೆ ಒಂದು ಅಧ್ಯಯನವನ್ನು ಸಾರ್ವಜನಿಕರ ಅವಗಾಹನೆಗೆ ಒಪ್ಪಿಸಿದ ಮೇಲೆ ಅದರ ಮೇಲಿನ ಹಕ್ಕು ಲೇಖಕನ ಜೊತೆಗೇ ಸಾರ್ವಜನಿಕರಿಗೂ ಸೇರುತ್ತದೆ. ಹೀಗಾಗಿ ಲೇಖಕನೇ ಏಕಪಕ್ಷೀಯವಾಗಿ ಪುಸ್ತಕವನ್ನು ವಾಪಸ್ ಪಡೆಯುವುದೆಂದರೆ, ಅದು ಸಾರ್ವಜನಿಕರ ಪಾಲಿನ ಹಕ್ಕಿಗೆ ಚ್ಯುತಿ ತಂದಂತೆ ಎಂಬುದನ್ನು ಅವರು ಅರಿಯಬೇಕಿದೆ.
ಅದೇನೇ ಇರಲಿ, ಇಷ್ಟೆಲ್ಲ ವಾದ ವಿವಾದ, ಪ್ರತಿಭಟನೆ, ಗೂಂಡಾಗಿರಿ ಹಾಗೂ ಸರ್ಕಾರದ ಅಪ್ರಜಾಸತ್ತಾತ್ಮಕ ಕ್ರಮಗಳು ಜರುಗುತ್ತಿದ್ದರೂ, ನಮ್ಮ ಬೌದ್ಧಿಕ ವಲಯದ ಒಂದು ವರ್ಗದ ಮೌನವನ್ನು ಗಮನಿಸುತ್ತೀದ್ದೀರಾ? ಪುಸ್ತಕವೊಂದನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರಬಲವಾದ ಜಾತಿ ಗುಂಪೊಂದು ರಾಜ್ಯಾದ್ಯಂತ ಕಿಚ್ಚು ಹತ್ತಿಸಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಬೆದರಿಕೆ ಒಡ್ಡುತ್ತಿದ್ದಾಗ, ಅದನ್ನು ಸಂಘಟಿತವಾಗಿ ವಿರೋಧಿಸಿ ಸಾರಸ್ವತ ಲೋಕದ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯ ಮೇಲಿನ ಅನುಚಿತ ಹಲ್ಲೆಯನ್ನು ನಾವು ಸುಮ್ಮನೆ ನೋಡುತ್ತಾ ಕೂರುವುದಿಲ್ಲ ಎಂಬ ಸಂದೇಶವೊಂದನ್ನು ಸರ್ಕಾರಕ್ಕೆ ಮುಟ್ಟಿಸುವುದು ತಮ್ಮ ತುರ್ತು ಕರ್ತವ್ಯವೆಂದು ಈ ವರ್ಗಕ್ಕೆ ಅನ್ನಿಸಲೇ ಇಲ್ಲ! ಇದರರ್ಥ, ಇಂದು ಕರ್ನಾಟಕಕ್ಕೆ ಒಂದು ವಿಶ್ವಾಸಾರ್ಹ ಬೌದ್ಧಿಕ ಅಥವಾ ಸಾಂಸ್ಕೃತಿಕ ನಾಯಕತ್ವವೇ ಇಲ್ಲವಾಗಿದೆ. ಇದು ದುರಂತ.
ನಮ್ಮ ಕಂಬಾರರನ್ನೇ ನೋಡಿ. ಸದ್ಯಕ್ಕೆ ತಮ್ಮ ಸ್ವಜಾತಿ ಬಂಧುಗಳಿಗೆ ಪರಿಶಿಷ್ಟ ವರ್ಗದ ಮಾನ್ಯತೆ ದೊರಕಿಸಿಕೊಡಲು ವಿಧಾನ ಪರಿಷತ್ತಿನ ಮೂಲಕ ನಡೆಸಿರುವ ಹೋರಾಟದ ಏಕಾಗ್ರತೆಯಲ್ಲಿ ಅವರಿಗೆ ಮಿಕ್ಕಾವ ವಿಷಯಗಳೂ ಮುಖ್ಯವೇ ಅನಿಸಿಲ್ಲ! ಇವರು ಪರಿಷತ್ತಿನ ಸದಸ್ಯರಾಗಿರುವುದು ಕೇವಲ ಜಾತಿ ಪ್ರತಿನಿಧಿಯಾಗಿಯೋ ಅಥವಾ ವಿಶಾಲ ಸಾರಸ್ವತ ಲೋಕದ ಪ್ರತಿನಿಧಿಯಾಗಿಯೋ? ಕಂಬಾರರು, ಇಂದು ನಮ್ಮ ಲೇಖಕ - ಕಲಾವಿದ ವರ್ಗ ಸರ್ಕಾರ ಕೊಡಮಾಡುತ್ತಿರುವ ಸವಲತ್ತುಗಳ ದಾಕ್ಷಿಣ್ಯಕ್ಕೆ ಸಿಕ್ಕಿ ತಮ್ಮ ಧ್ವನಿಯನ್ನೇ ಕಳೆದುಕೊಳ್ಳುವಂತಾಗಿರುವ ದುರಂತಕ್ಕೆ ಎಂತಹ ಪ್ರತಿಭಾವಂತರೂ ಬಲಿಯಾಗಬಲ್ಲರು ಎಂಬುದಕ್ಕೆ ಸಾಕ್ಷಿಯಂತಿದ್ದಾರೆ. ಒಂದನೇ ತರಗತಿಯಿಂದ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಸರ್ಕಾರದ ನಿರ್ಧಾರ ಸರಿಯಲ್ಲವೆಂಬ ತಮ್ಮ ಮೂಲ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಕಳೆದ ವರ್ಷದ 'ಆಳ್ವಾಸ್ ನುಡಿಸಿರಿ'ಯ ಅಧ್ಯಕ್ಷತೆ ವಹಿಸಿ ಘೋಷಿಸಿದ್ದ ಕಂಬಾರರು, ಸಂಬಂಧಪಟ್ಟ ಆಜ್ಞೆ ಹೊರಬಿದ್ದ ಮೇಲೂ ಪರಿಷತ್ತಿನಲ್ಲಿ ಈ ಬಗ್ಗೆ ಒಂದೂ ಮಾತಾಡಿದ ದಾಖಲೆಯಿಲ್ಲ! ಈಗ ಸದುದ್ದೇಶದ ವಿಚಾರಶೀಲ ಪುಸ್ತಕವೊಂದನ್ನು ಮುಟ್ಟುಗೋಲು ಹಾಕಿಕೊಂಡಾಗಲೂ, ವಿರೋಧ ಬೇಡ; ತಮ್ಮ ವೈಯುಕ್ತಿಕ ಅನ್ನಿಸಿಕೆಯನ್ನೂ ಪ್ರಕಟಿಸದಷ್ಟು ಎಚ್ಚರಿಕೆ ವಹಿಸಿದ್ದಾರೆಂದರೆ, ಇವರನ್ನು ಸಾರಸ್ವತ ಲೋಕದ ಶಾಸಕ ಪ್ರತಿನಿಧಿಯೆಂದು ಹೇಗೆ ಮಾನ್ಯ ಮಾಡುವುದು? ಕಂಬಾರರೇ ಹೇಳಬೇಕು...
ನಮ್ಮ ಈ ವಿಧಾನ ಪರಿಷತ್ತಿಗೆ ಈಗ ನೂರು ವರ್ಷಗಳ ಸಂಭ್ರಮವಂತೆ. ವಿವಿಧ ಕ್ಷೇತ್ರಗಳ ತಜ್ಞರ, ಪ್ರಾಜ್ಞರ, ಅನುಭವಿಗಳ, ಹಿರಿಯರ ಹಾಗೂ ಬುದ್ಧಿಜೀವಿಗಳ ಸಭೆಯಾಗಿ ಪರಿಕಲ್ಪಿತವಾದ ಇದು ಇಂದು ವಿವಿಧ ಕ್ಷೇತ್ರಗಳ ದಲ್ಲಾಳಿಗಳ, ಅವರ ಚೇಲಾಗಳ ಹಾಗೂ ಜನರ ವಿಶ್ವಾಸ ಕಳೆದುಕೊಂಡ ಧುರೀಣರ ರಾಜಕೀಯ ಪುನರ್ವಸತಿ ಕೇಂದ್ರವಾಗಿ ಹೋಗಿದೆ! ತಮ್ಮ ವಿಶೇಷ ಪ್ರತಿಭೆಗಳ ಕಾರಣದಿಂದಾಗಿ ಈ ಮನೆಯ ಸದಸ್ಯರು ಕೆಳ ಮನೆಯ ಸದಸ್ಯರಿಗಿಂತ ಜನರಿಗೆ ಹೆಚ್ಚು ಪರಿಚಯವಿರಬೇಕು. ಆದರೆ ವಾಸ್ತವವೆಂದರೆ ಇವರಲ್ಲಿ ಬಹುಪಾಲು ಜನರು ಸಾರ್ವಜನಿಕರಿಗೆ ಅಪರಿಚಿತರಾಗಿಯೇ ಉಳಿದಿದ್ದಾರೆ! ಮೇಲ್ಮನೆ ಎನಿಸಿಕೊಂಡಿರುವ ಈ ಮನೆಯ ಯಾವುದೇ ಚರ್ಚೆ ಕೆಳಮನೆಯಲ್ಲಿ ನಡೆಯುವ ಚರ್ಚೆಗಿಂತ ಗುಣಮಟ್ಟದಲ್ಲಿ ಭಿನ್ನವಾಗಿ ಕಂಡಿದೆಯೇ? ಕೆಳಮನೆಗೆ ಮಾರ್ಗದರ್ಶಕವಾಗಿ ಹಾಗೂ ಮಾದರಿಯಾಗಿ ಅಲ್ಲಿನ ಸದಸ್ಯರ ಗೌರವಕ್ಕೆ ಪಾತ್ರವಾಗಿರಬೇಕಾದ ಮೇಲ್ಮನೆ, ಹಲವು ಬಾರಿ ಆ ಮನೆಯಿಂದ ತನ್ನ ರದ್ದತಿಯ ಒತ್ತಾಯವನ್ನು ಎದುರಿಸಬೇಕಾದ ದುಃಸ್ಥಿತಿಗೆ ಈಡಾಗಿದೆ! ಹಾಗಾಗಿಯೇ ಮೊನ್ನೆಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ವಿಧಾನಸಭಾಧ್ಯಕ್ಷರು ತಮ್ಮ ಭಾಷಣಗಳಲ್ಲಿ ಈ ಸದನದ ಘನತೆಯನ್ನು ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿ ಕೆಲವು ಸಲಹೆಗಳನ್ನು ನೀಡಿದ್ದು! ವಿವಿಧ ಕ್ಷೇತ್ರಗಳ ಬುದ್ಧಿಜೀವಿಗಳ ಸದನವಾಗಿರಬೇಕಾದ ಪರಿಷತ್ತಿನ ಇಂದಿನ ಅವನತಿ ನಮ್ಮ ಬುದ್ಧಿಜೀವಿಗಳ ಸಾರ್ವತ್ರಿಕ ಅವನತಿಯ ಪ್ರತೀಕವೂ ಆಗಿದ್ದರೆ ಆಶ್ಚರ್ಯವಿಲ್ಲ.
ಉದಾಹರಣೆಗೆ, ಮೊನ್ನೆ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ್ದ ಭೈರಪ್ಪನವರ ಕಾದಂಬರಿಯನ್ನಾಧರಿಸಿದ 'ನಾಯಿ ನೆರಳು' ಸಿನೆಮಾ ನೋಡಿ ಗಾಬರಿಯಾದೆ! ಪುನರ್ಜನ್ಮದಲ್ಲಿನ ನಂಬಿಕೆ ಬಗ್ಗೆ ನಾನಿಲ್ಲಿ ಮಾತಾಡುತ್ತಿಲ್ಲ. ಅದನ್ನೊಪ್ಪಿಕೊಂಡು ನೋಡಿದರೂ, ಈ ಚಿತ್ರ ಅಸಂಬದ್ಧವಾಗಿದೆ. ತಲೆ ಬೋಳಿಸಿ ಮನೆಯಲ್ಲಿಟ್ಟುಕೊಂಡ - ಬೆಳೆದ ಮಗಳೊಬ್ಬಳ ತಾಯಿಯೂ ಆದ - ವಿಧವೆ ಸೊಸೆಯನ್ನು, ತನ್ನ ಮಗನೇ ಪುರ್ನಜನ್ಮ ಪಡೆದು ಬಂದವನೆಂದು ಹೇಳಲಾದ ಎಳೆವಯಸ್ಸಿನ ಯುವಕನೊಬ್ಬನಿಗೆ ಸಂತೋಷವಾಗಲೆಂದು ಬಣ್ಣದ ಸೀರೆ ಹಾಗೂ ಚಿನ್ನದ ಆಭರಣಗಳನ್ನು ತೊಟ್ಟುಕೊಳ್ಳುವಂತೆ ಒತ್ತಾಯಿಸುವ ಅತ್ತೆಗೆ; ಈ ಒತ್ತಾಯದ ಫಲವಾಗಿಯೇ ಅವಳು ಅವನೊಂದಿಗೆ ಮರು ದಾಂಪತ್ಯ ಆರಂಭಿಸಿದಾಗಷ್ಟೇ ಅದರ ಅಶ್ಲೀಲತೆ ಕಾಣತೊಡಗುತ್ತದೆ! ಶಾಸ್ತ್ರಾಚಾರ ಸಂಪನ್ನನಾದ ಮಾವ ಇದೆಲ್ಲವನ್ನೂ ಸಹಾನುಭೂತಿಯಿಂದ ನೋಡುತ್ತಿರುತ್ತಾನೆ ಮಾತ್ರವಲ್ಲ; ಮೊಮ್ಮಗಳ ಒತ್ತಾಯಕ್ಕೆ ಮಣಿದು, ಪುನರ್ಜನ್ಮಿತ ಮಗನನ್ನು ಮನೆಯಲ್ಲಿಟ್ಟುಕೊಂಡೇ ಆ ಮಗನ ಶ್ರಾದ್ಧವನ್ನೂ ಮಾಡುತ್ತಾನೆ! ಹಾಗಾದರೆ, ಶ್ರಾದ್ಧ ಮಾಡುವುದು ಆತ್ಮಕ್ಕೋ, ದೇಹಕ್ಕೋ? ಆದರೆ, ಇದಾವುದರ ಬಗೆಗೂ ತಲೆ ಕೆಡಿಸಕೊಳ್ಳದೇ ಹೋದ ಜಾತಿ ಸಮಾಜ, ಮರು ದಾಂಪತ್ಯ ಬಸುರಿಗೆ ಕಾರಣವಾದದ್ದು ಗೊತ್ತಾದೊಡನೆ, ಶಾಸ್ತ್ರದ ಚರ್ಚೆ ಶುರು ಮಾಡುತ್ತದೆ. ಇದರ ಆಧಾರದ ಮೇಲೆ ಕಟ್ಟಲ್ಪಡುವ ಹುಡುಗಾಟವೆನ್ನಿಸುವ ನಾಟಕೀಯತೆಯೊಂದಿಗೆ ಕೋರ್ಟು - ಕಛೇರಿ ಎಂದೆಲ್ಲಾ ಅಸಂಬದ್ಧವಾಗಿ ಬೆಳೆಯುವ ಈ ಚಲನಚಿತ್ರ ಸಹಜವಾಗಿಯೇ ಅಸಂಬದ್ಧ ಕೊನೆ ಕಾಣುತ್ತದೆ.
ಇದು ಗಿರೀಶ್ ಕಾಸರವಳ್ಳಿಯವರ ಇತ್ತೀಚಿವ ಕಲಾ ಕೌಶಲ್ಯ! ತಮ್ಮ ಘನ ಗಂಭೀರ ಹಾಗೂ ಸಂಸ್ಕೃತಿ ಸಂಪನ್ನ ನಿಧಾನ ಗತಿ ಶೈಲಿಯ ಮೂಲಕ ವಸ್ತುವೊಂದರ ತಾಂತ್ರಿಕ ಹಾಗೂ ತಾತ್ವಿಕ ಅಸಂಬದ್ಧತೆಗಳನ್ನೆಲ್ಲ ಮುಚ್ಚಿ ಹಾಕಿಬಿಡಬಹುದು ಎಂದೇನಾದರೂ ಕಾಸರವಳ್ಳಿಯವರು ನಂಬಿದ್ದರೆ, ಅದು ಕಲಾವಿದ ತನಗೆ ತಾನೇ ಮಾಡಿಕೊಳ್ಳಬಹುದಾದ ದ್ರೋಹವಷ್ಟೆ. ಇದನ್ನು ಬಹುಶಃ ಅವರು ತಿಳಿಯದವರೇನಲ್ಲ. ಆದರೆ ಗಿರೀಶ್ ತಮ್ಮ ಮಾಧ್ಯಮ ಕೌಶಲ್ಯ ಪ್ರದರ್ಶಿಸಿಲು ಏನೋ ಒಂದು ಸರಕು ಮತ್ತು ಒಂದು ಹಣಕಾಸಿನ ಮೂಲ ಸಿಕ್ಕರೆ ಸಾಕು ಎನ್ನುವಂತಹ ನೈತಿಕ ದುರವಸ್ಥೆ ತಲುಪಿದ್ದರೆ, ಅದು ಅವರ ಸೃಷ್ಟಿಶೀಲತೆಯ ಸಾವಷ್ಟೆ. ಹಿಂದೆ ಇವರ 'ಘಟಶ್ರಾದ್ಧ' ನೋಡಿ ಬಹುವಾಗಿ ಮೆಚ್ಚಿದ್ದ ನಾನು, ಇತ್ತೀಚೆಗೆ ಇದೇ ಕಥೆಯನ್ನಾಧರಿಸಿದ ಹಿಂದಿ ಚಲನಚಿತ್ರ 'ದೀಕ್ಷಾ'(?) ನೋಡಿ, ನನಗೆ ನಾನೇ ಮೋಸ ಹೋದ ಪರಿ ನೆನೆಸಿಕೊಂಡು ನಾಚಿಕೆಯಾಯಿತು. ಕೂಡಲೇ ವೈದಿಕರ ಶಾಸ್ತ್ರಾಚಾರಗಳ ಹುಸಿ ಸಾಂಕೇತಿಕತೆಯ ಬೌದ್ಧಿಕ ಉರುಳಿನ ಬಗ್ಗೆ ತೇಜಸ್ವಿ ನೀಡಿದ್ದ ಎಚ್ಚರಿಕೆಯ ಮಾತು ನೆನಪಾಗಿ, ಮೈ ಜುಮ್ಮೆಂದಿತು!
ಅಂದಹಾಗೆ: ರಾಷ್ತ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್, ಮಾಯಾವತಿಯವರ ಪಕ್ಷದ ಮತಗಳನ್ನು ಪಡೆಯಲು ಅವರ ವಿರುದ್ಧದ ತಾಜ್ ಭ್ರಷ್ಟಾಚಾರದ ಮೊಕದ್ದಮೆ ವಿಚಾರಣೆಗೆ ರಾಜ್ಯಪಾಲರ ಒಪ್ಪಿಗೆ ದೊರಕದಂತೆ ನೋಡಿಕೊಂಡಂತೆ, ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಅವರ ಅಕ್ರಮ ಆಸ್ತಿ ಸಂಪಾದನೆಯ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳುವ ಆಶ್ವಾಸನೆಯನ್ನೇನಾದರೂ ನೀಡಿದೆಯೋ ಕಾದು ನೋಡಬೇಕಾಗಿದೆ!
-ಡಿ.ಎಸ್.ನಾಗಭೂಷಣ
Comments
ಉ: ಸಾಂಸ್ಕೃತಿಕ ನಾಯಕತ್ವ ಕಳೆದುಕೊಂಡಿರುವ ಕರ್ನಾಟಕ