ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ!!!
ಗಾನ ಗಾರುಡಿಗನಿಗಾಗಿ ಅತ್ತು ಕನ್ನಡಿಗರಿನ್ನೂ ಕಣ್ಣೊರೆಸಿಕೊಂಡಿಲ್ಲ
ಆಗಲೇ ಸಾಹಸಸಿಂಹನ ನಿಧನದ ವಾರ್ತೆ ಹೀಗೆ ಕಿವಿಗಪ್ಪಳಿಸಿತಲ್ಲ
ಗಾಯಕ ಅಶ್ವತ್ಥರಿಗಿನ್ನೂ ನಾ ಶ್ರದ್ಧಾಂಜಲಿ ಬರೆದು ಮುಗಿಸಲಾಗಿಲ್ಲ
ಅಷ್ಟರಲ್ಲೇ ನನ್ನ ಮೆಚ್ಚಿನ ನಟನ ಬಗ್ಗೆ ನಾ ಬರೆಯಬೇಕಾಗಿ ಬಂತಲ್ಲ
ಅರಿತಿಹೆ ನಾನಿಲ್ಲಿ ಯಾರೂ ಚಿರಂಜೀವಿಗಳಾಗಿ ಇರುವುದು ಅಸಾಧ್ಯ
ಆದರೂ ವಿಷ್ಣುವರ್ಧನರ ಅಕಾಲಿಕ ನಿಧನ ನಂಬಲೆನಗೆ ಕಷ್ಟ ಸಾಧ್ಯ
ವಿಷ್ಣು ಆಗಿಲ್ಲದಿರಬಹುದು ರಾಜಕುಮಾರರ ಮಟ್ಟವನ್ನು ಏರಿದ ನಟ
ಆದರೆ ಈತನ ಸಾವಿನಿಂದ ಆಗಿದೆ ಆ ಸಾವಿಗಿಂತಲೂ ಹೆಚ್ಚಿನ ನಷ್ಟ
ನಿವೃತ್ತರಾದವರು ಸತ್ತರಾಗುವ ನಷ್ಟ ಕುಟುಂಬದ ಆಪ್ತ ಬಂಧುಗಳಿಗೆ
ಸಕ್ರಿಯ ಕಲಾವಿದರ ಅಗಲಿಕೆಯ ನಷ್ಟ ಉದ್ದಿಮೆ ಅಭಿಮಾನಿ ಎಲ್ಲರಿಗೆ
ವಿಷ್ಣುವರ್ಧನರ ಅತ್ಯುತ್ತಮ ಚಿತ್ರ ಇನ್ನು ಮುಂದೆ ಬರಬಹುದಿತ್ತೇನೋ
ಇನ್ನೂ ಹತ್ತಿಪ್ಪತ್ತು ವರುಷ ಅವರು ನಟಿಸುತ್ತಲೇ ಇರಬಹುದಿತ್ತೇನೋ
ಯೌವನದ ಕೆಚ್ಚನ್ನು ಇನ್ನೂ ಜೀವನವಾಗಿರಿಸಿಕೊಂಡಿದ್ದ ಧೀಮಂತ
ನಟನಾ ಕೌಶಲ್ಯದಲ್ಲಿ ಆತ ನಿಜಕ್ಕೂ ಸರಿಸಾಟಿಯಿಲ್ಲದ ಶ್ರೀಮಂತ
ದುರಭ್ಯಾಸ, ರಾಜಕೀಯ, ಗುಮಾನಿಗಳಿಂದ ದೂರ ಇದ್ದ ಮನುಷ್ಯ
ಭೇದ ಭಾವ ಇಲ್ಲದಂತೆ ಕಲಾವಿದರೊಂದಿಗೆ ಬೆರೆಯುತ್ತಿದ್ದ ಮನುಷ್ಯ
ಅಗಲಿದ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ಕರುಣಿಸಲೆನ್ನುವೆ
ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ ಎಂದೆನ್ನುವೆ
- ಆತ್ರಾಡಿ ಸುರೇಶ ಹೆಗ್ಡೆ.
Comments
ಉ: ಸಾಕು ದೇವರೇ ಇನ್ನು ಸದ್ಯಕ್ಕೆ ಯಾರ ಸಾವೂ ಬೇಡ!!!