ಸಾಗರದ ಪ್ರವಾಸ : ಸಿಗಂದೂರು ಹಾಗು ಕೊಲ್ಲೂರು
ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು
ಮೊದಲ ದಿನ ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ .
ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ.
ಮುಂದುವರೆಯುವುದು.......
ಸಿಗಂದೂರು:
ಸಾಗರದಿಂದ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಸ್ಥಳ. ಅಲ್ಲಿನ ಸಿಂಗದೂರೇಶ್ವರಿ ಅಥವ ಚೌಡೇಶ್ವರಿಯ ಹೆಸರು ಸಾಕಷ್ಟು ಪ್ರಸಿದ್ದ. ಸಿಗಂದೂರು ಶರಾವತಿ ನದಿಗೆ ಕಟ್ಟಿರುವ ಲಿಂಗನಮಕ್ಕಿ ಡ್ಯಾಮಿನ ಹಿನ್ನೀರಿನಲ್ಲಿ ನಡುವೆ ಇರುವ ಒಂದು ನಡುಗೆಡ್ಡೆಯಂತಹ ಹಳ್ಳಿ. ನಮ್ಮ ಸ್ವಂತವಾಹನಗಳಲ್ಲಿ ಹೋದರೆ, ನೀರಿನ ಆಚೆ ವಾಹನ ನಿಲ್ಲಿಸಿ, ಲಾಂಚ್ ನಲ್ಲಿ ಮತ್ತೊಂದು ಬದಿ ಕಲಸವಲ್ಲಿ ಎಂಬಲ್ಲಿಗೆ ಹೋಗಿ , ಬಸ್ ಅಥವ ವ್ಯಾನ್ ಹತ್ತಿ ಪುನಃ ದೇವಾಲಯದವರೆಗೂ ಸುಮಾರು ಐದು ಕಿ.ಮಿ. ಹೋಗಬೇಕು. ಆದರೆ ಅಲ್ಲಿಯದೆ ಸ್ಥಳೀಯ ವಾಹನಗಳಾದರೆ ಲಾಂಚನಲ್ಲಿ ವಾಹನವನ್ನೆ ಹಾಕಿ ಹೋಗಬಹುದು !! .
ಹೌದು ಕಾರ್ ಗಳೇಕೆ ಪೂರ್ಣ ಬಸ್ ಅನ್ನೆ ಲಾಂಚ್ (ಫೆರ್ರಿ)ಗೆ ಏರಿಸಿ. ಮತ್ತೊಂದು ಬದಿ ತಲುಪಿ ಬಸನ್ನು ಇಳಿಸಿ ಮುಂದೆ ಹೋಗುತ್ತಾರೆ. ಅತ್ಯಂತ ಆಕರ್ಷಕ ಜಾಗ. ನಾವು ಹೋದ ವಾಹನವನ್ನೆ ಅನಾಮತ್ ಲಾಂಚ್ಗೆ ಏರಿಸಿ ನಾವು ಹತ್ತಿ ನೀರನ್ನು ದಾಟುವುದು ಹೊಸ ಅನುಭವ. ಅಲ್ಲಿಯವರಿಗೆ ಅದು ಸರ್ವೇಸಾಧಾರಣ ಅನ್ನುವಂತೆ ಇರುತ್ತಾರೆ.
ದೇವಾಲಯದಲ್ಲೂ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಯಾವುದೆ ನೂಕು ನುಗ್ಗಲು ಆಗದಂತೆ ಸಣ್ಣ ಗುಂಪು ಗುಂಪುಗಳನ್ನಾಗಿ ಮಾಡಿ ಹಂತ ಹಂತವಾಗಿ ಕಳಿಸುತ್ತಾರೆ. ಸಿಗಂದೂರಿಗೆ ಭೂತಸ್ಥಾನದ ರಕ್ಷಣೆಯಿದ್ದು ಭೂತದ ಕಟ್ಟೆಯ ವೀರಭದ್ರ ಸಿಗಂದೂರಿಗೆ ರಕ್ಷಕನಾಗಿರುವನು. ಅಲ್ಲದೆ ಅಲ್ಲಿ ಹಲವು ಜಮೀನಿಗೆ ಸಂಬಂದಿಸಿದ ನ್ಯಾಯವನ್ನು ಮಾಡಲಾಗುವುದು ಅನ್ನುತ್ತಾರೆ. ಅಲ್ಲಿ ಕೊಡುವ ಸಿಗಂದೂರಿನ ಶ್ರೀದೇವಿಯ ರಕ್ಷಣೆ ಇದೆ ಎನ್ನುವ ಭೋರ್ಡನ್ನು ತಮ್ಮ ಜಮೀನಿನಲ್ಲಿ ಇಟ್ಟರೆ ವಿವಾದಗಳು ಪರಿಹಾರವಾಗುವುದು ಎನ್ನುವರು. ದುಗ್ಗಜ್ಜ ಮತ್ತು ಶೇಷಪ್ಪ ಎನ್ನುವರಿಂದ ಮೂರುನೂರು ವರ್ಷಗಳ ಹಿಂದೆ ಸ್ಥಾಪಿತವಾಗಿದೆಯಂತೆ. ಅಲ್ಲಿಯೆ ಇಳಿದುಕೊಳ್ಳಲು ವ್ಯವಸ್ಥೆ ಇದ್ದರೂ ಹೆಚ್ಚಾಗಿ ಬರುವರೆಲ್ಲ ಸಾಗರದ ಮೂಲಕ ಅಥವ ಕೊಲ್ಲೂರು, ಸಿದ್ದಾಪುರ ಮೂಲಕ ಬಂದು ಹೋಗುವರು. ಸಾಗರದಿಂದ ಸಿಗಂದೂರಿಗೆ ಸಾಕಷ್ಟು ಬಸ್ ವ್ಯವಸ್ಥೆ ಇದೆ.
ನಾವು ಸಹ ಸಿಗಂದೂರಿನ ಚೌಡೇಶ್ವರಿಯ ದರ್ಶನ ಪಡೆದು ಅಲ್ಲಿಂದ ಮುಂದುವರೆದೆವು ಕೊಲ್ಲೂರು ಕಡೆಗೆ.
ಸಿಗಂದೂರಿಗೆ ಹೋಗುವಾಗಿನ ಫೆರ್ರಿಯ ಒಂದು ವೀಡಿಯೋ : http://www.youtube.com/watch?v=zN4CvSJ3qhk&feature=youtu.be
ಕೊಲ್ಲೂರು :
ಕೊಲ್ಲೂರಿನ ಮೂಕಾಂಭಿಕೆಯ ಹೆಸರು ಕರ್ನಾಟಕದಲ್ಲಿ ಕೇಳದವರು ಯಾರು ಇಲ್ಲ. ಶಿವರಾಮಕಾರಂತರ ಮೂಕಜ್ಜಿಯ ಕನಸು ಓದುವಾಗ ಆಗಾಗ್ಯೆ ಬರುವ ಹೆಸರು ಕೊಲ್ಲೂರ ಮೂಕಾಂಭಿಕೆ. ದಟ್ಟಕಾನನದ ನಡುವೆ ಇದ್ದ ದೇವಾಲಯ ಅದು. ಒಂದು ಕಾಲದಲ್ಲಿ ಹುಲಿಯಂತಹ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದ ಸ್ಥಳ. ಈಗಲೂ ಕಾನದ ಗಿರಿ ಕಂದರಗಳ ನಡುವೆಯೆ ದಾರಿ ಸವೆಸಬೇಕು ಕೊಲ್ಲೂರು ಸೇರಲು.
ಸಿಗಂದೂರಿನಿಂದ ಸುಮಾರು ಐವತ್ತು ಕಿ.ಮಿ. ದೂರ ಪ್ರಯಾಣಿಸಿ ಕೊಲ್ಲೂರು ಸೇರುವಾಗ ಊಟದ ಸಮಯ. ಕ್ಯೂನಲ್ಲಿ ನಿಂತು ದೇವರ ದರ್ಶನ ಪಡೆದು ಆಯಿತು. ಪಕ್ಕದಲ್ಲಿ ಹೋಮನಡೆದಿದ್ದ ಆವರಣದಲ್ಲಿದ್ದ ಉದ್ದನೆಯ ಕೊಠಡಿಯಲ್ಲಿ ಊಟಹಾಕುತ್ತಿದ್ದರು. ಸಾಲು ಸಾಲು ಹೋಮಕುಂಡಗಳ, ಪ್ರಜ್ವಲಿಸುವ ಬೆಂಕಿಯ ನಡುವೆ, ಮಂಟಪದಲ್ಲಿ ಕುಳಿತು ಊಟಮಾಡಿದೆವು. ಮಕ್ಕಳಿಗೆಲ್ಲ ಹೊಸ ಅನುಭವ. ಅವರಿಗೆಲ್ಲ ಹೋಟೆಲಿನಲ್ಲಿ ತಿಂದು ಗೊತ್ತೆ ಹೊರತು ಈ ರೀತಿ ಊಟ ಹೊಸದೆ.
ಕೊಲ್ಲೂರು ಸಾಕಷ್ಟು ಭಕ್ತರು ಸೇರುವ ಜಾಗ. ದೇವಾಲಯದಲ್ಲಿ ವಿವಿದ ಸೇವೆಗಳು ನಡೆಯುತ್ತಲೇ ಇರುತ್ತವೆ. ಮಕ್ಕಳಿಗೆ ಬೆಳೆಯುತ್ತಿರುವಾಗಲು ಎರಡು ಮೂರು ವರುಷ ತುಂಬಿದಾಗಲು ಕೆಲವೊಮ್ಮೆ ಮಾತು ಬರೆದೆ ಹೋದಾಗ, ಕೊಲ್ಲೂರಿನ ಮೂಕಾಂಬಿಕೆಯನ್ನು ಬಂದು ಸೇವಿಸುವರು.
ಕೊಲ್ಲೂರಿಗೆ ಬೆಂಗಳೂರಿನಿಂದಲೂ ಸಾಕಷ್ಟು ನೇರ ಬಸ್ ಸೌಕರ್ಯವೂ ಇದೆ. ನೇರ ಸುಮಾರು ನಾಲಕ್ಕು ನೂರು ಕಿ.ಮಿಗಳಾಗುತ್ತವೆ.
ಹೊರಗೆ ಸಾಲು ಸಾಲು ಅಂಗಡಿಗಳು ಎಲ್ಲವನ್ನು ದಾಟಿ ಮತ್ತೆ ಹೊರಟೆವು
... ಮುಂದೆ ಮುರ್ಡೇಶ್ವರದ ಕಡೆಗೆ
ಚಿತ್ರ 1 , 2, 3 ಸಿಗಂದೂರು, 4 ಸಿಗಂದೂರು ಕೊಲ್ಲೂರು ಮಾರ್ಗ
Comments
ಉ: ಸಾಗರದ ಪ್ರವಾಸ : ಸಿಗಂದೂರು ಹಾಗು ಕೊಲ್ಲೂರು
ಪಾರ್ಥರೆ, ತಮ್ಮೊಂದಿಗೆ ನಮ್ಮನ್ನೂ ಪ್ರವಾಸ ಕರಕೊಂಡು ಹೋಗುತ್ತಿರುವಿರಿ. ಸಿಗಂದೂರಿನ ಬಗ್ಗೆ ವಿವರ ಹಾಗೂ ಯೂಟ್ಯೂಬ್ನಲ್ಲಿ ತಾವು ತೆಗೆದ ವಿಡಿಯೋ ತುಣುಕಿಗೆ ಧನ್ಯವಾದಗಳು. ಕೊಲ್ಲೂರಿಗೆ ಎರಡು ವರ್ಷ ಮೊದಲು ಒಮ್ಮೆ ಹೋಗಿದ್ದೆ. ಒಳಗೆ ಕಾಲಿಡಲು ಸಾಧ್ಯವಿಲ್ಲದಷ್ಟು ರಶ್ ಇತ್ತು! ಇನ್ನು ಮುಂದೆ ಕೊಲ್ಲೂರಿಗೆ ಹೊರಡುವುದಿದ್ದರೆ ಕ್ಯಾಲೆಂಡರಿನಲ್ಲಿ ಆದಿನ ಯಾವುದೇ ವಿಶೇಷವಿರದಿರಬೇಕು ಎಂದು ಆಲೋಚಿಸಿ, ಹೊರಗಿಂದಲೇ ನಮಸ್ಕರಿಸಿ ಹಿಂದೆ ಬರುತ್ತಲಿದ್ದೆ. ಆಗ ನನ್ನನ್ನು ಕರಕೊಂಡು ಬಂದಿದ್ದ ಬಸ್ನ ಕಂಡಕ್ಟರ್ ಎದುರು ಸಿಕ್ಕಿ, ತನ್ನ ಪರಿಚಯದ ಭಟ್ಟರಿಗೆ ಹೇಳಿ ಸುಲಭ ದರ್ಶನಕ್ಕೆ ಅನುವು ಮಾಡಿದ. ಊಟವೂ ಮಾಡಿ ಬಂದೆ!
ಉ: ಸಾಗರದ ಪ್ರವಾಸ : ಸಿಗಂದೂರು ಹಾಗು ಕೊಲ್ಲೂರು
ಪಾರ್ಥ ಸಾರಥಿಯವರಿಗೆ ವಂದನೆಗಳು,
ತಮ್ಮ ಸಿಗಂದೂರು ಮತ್ತು ಕೊಲ್ಲೂರು ಪಯಣ ನನಗೆ ಸಂತಸ ನೀಡಿದೆ, ತಾವು ಕೊಟ್ಟ ಚಿತ್ರಗಳು ಮತ್ತು ಚಿಕ್ಕ ಹಾಗೂ ಚೊಕ್ಕ ನಿರೂಪಣೆ ನಾವೆ ಪಯಣ ಮಾಡಿದ ಖುಷಿ ನೀಡಿತು. ನಾನು 1988 ರಿಂದ 1993 ಅಗಷ್ಟ್ ವರೆಗೆ ವೃತ್ತಿ ಸಂಬಂಧವಾಗಿ ಅನೇಕ ಬಾರಿ ಆ ವ್ಯಾಪ್ತಿಯಲ್ಲಿ ಅಡ್ಡಾಡಿದ್ದೇನೆ, ಆದರೆ ನಾನು ಅ ಮಾರ್ಗವಾಗಿಯೆ ಹೋಗುತ್ತಿದ್ದೆ ಆದರೆ ಸಿಗಂದೂರನ್ನು ನೋಡಲಾಗಿರಲಿಲ್ಲ, ಆದರೆ ನಿವೃತ್ತಿಯ ನಂತರ ನನ್ನ ಸ್ನೇಹಿಉತನ ಜೊತೆ ಎರಡು ಸಲ ಹೋಗಿ ಬಂದಿದ್ದೇನೆ, ಬಹಳ ಸುಂದರ ಆದರೆ ಅಷ್ಟೆ ಮನಕೆ ಮುದ ಕೊಡುವ ತಾಣ. ಅಲ್ಲಿನ ಲಾಂಚ್ ವ್ಯವಸ್ಥೆ ಆ ವ್ಯಾಪ್ತಿಯ ಕರೂರು ಸೀಮೆಯ ಜನ ಸಾಮಾನ್ಯರಿಗಾಗಿ ಮಾಡಿದಂತಹುದು, ಆದರೆ ಇಂದು ಸಿಗಂದೂರು ಒಂದು ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಮಾರ್ಪಟ್ಟು ಆ ವ್ಯಾಪ್ತಿಯ ಜನರು ಓಡಾಡಲು ಅನೇಕ ಸಲ ತೊಂದರೆಯಾಗಿದೆ, ಲವಲವಿಕೆಯ ಬರಹ ತಮ್ಮದು ಧನ್ಯವಾದಗಳು.