ಸಾಮಾನ್ಯ ಮನುಷ್ಯ

ಸಾಮಾನ್ಯ ಮನುಷ್ಯ

ದೊಡ್ಡ ದೊಡ್ಡ ಟ್ರೈನುಗಳಲ್ಲಿ ಸಣ್ಣ ಸಣ್ಣ ಕನಸುಗಳನ್ನು
ಹೊತ್ತುಕೊಂಡು ತಿರುಗುತ್ತಿದ್ದ ನನಗೆ ಈಗ ಅಂಥ ಕನಸುಗಳಿಲ್ಲ
ನಾಳಿನ ಕನಸುಗಳನ್ನು ಎದೆಯೊಳಗೆ ಅದುಮಿ
ನೋವಿನ ನಗೆಯನ್ನು ನಗುವ ನನಗೆ ಈಗ ಕನಸುಗಳಿಲ್ಲ

ಯಾವಾಗ ಎಲ್ಲಿ ಬಾಂಬು ಸಿಡಿಯುತ್ತದೋ ಎಂಬ
ಹೆದರಿಕೆಯಿಂದ ಬಸ್ಸು ಹತ್ತಲು ಈಗೀಗ ಹೆದರುತ್ತೇನೆ
ರೈಲು ನಿಲ್ದಾಣಗಳಲ್ಲಿ ಎಲ್ಲಿ ಬಂದೂಕುಗಳು ಗುಂಡು
ಉಗುಳುತ್ತವೋ ಎಂದು ಭಯ ಪಡುತ್ತೇನೆ

ನಿನ್ನೆ ಕಂಡಿದ್ದ ಕನಸುಗಳಲ್ಲಿ ಎಷ್ಟನ್ನೋ 'ಆಗದು'
ಎಂದು ಕೊಂದು ಹಾಕಿದ್ದೇನೆ
ಕೆಲವನ್ನು ಅಳಿದುಳಿದ ನಿರೀಕ್ಷೆಯಿಂದ ಎದೆಯ
ಜೈಲಿನಲ್ಲಿ ಕಾರವಸಕ್ಕಿರಿಸಿ ಜೀವಾವಧಿ ನೀಡಿದ್ದೇನೆ

ಮೊದ ಮೊದಲು ನಂಬಿದ್ದ ನನಸುಗಳೇ
ಕನಸುಗಳಾಗುತ್ತಿರುವ ಈ ವರ್ತಮಾನದಲ್ಲಿ ನನಗೀಗ ಕನಸುಗಳಿಲ್ಲ
ನನಗೆ ಭಯವಿರುವುದು ನನ್ನ ಪಕ್ಕದಲ್ಲಿ ನನ್ನೊಡನೆ
ಇರುವ ನನ್ನವರಿಂದ, ಬೋಟಿನಲ್ಲಿ ಬಂದವರಿಂದಲ್ಲ

ಮರುಕಳಿಸದ ಭೂತದಲ್ಲಿ ನನ್ನವರು ಇಟ್ಟು ಹೋದ
ಬಾಂಬು ನನ್ನಮ್ಮನ ಎದೆಯಲ್ಲೇ ಸಿಡಿದಿದೆ
ನಾನೇನು ಮಾಡಲಿ, ಅತಿ ಸಾಮಾನ್ಯರಲ್ಲಿ ಸಾಮಾನ್ಯನಾಗಿರುವ
ನಾನು ಐದು ವರ್ಷಕ್ಕೊಮ್ಮೆ ಮಾತ್ರ ಗುರುತಿಸಲ್ಪಡುತ್ತೇನೆ

Rating
No votes yet

Comments