ಸಾಹಿತ್ಯ ಮೇಳ
ರವಿವಾರ, ಬೆಳಗಾಗುತ್ತಿದ್ದಂತೆ ಸ್ನೇಹಿತರೊಬ್ಬರ ಫೋನು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯವರು ನಡೆಸುತ್ತಿರುವ ಪುಟ್ಟ 'ಬುಕ್ ಶೋ'ಗೆ ಹೋಗುವುದೆಂದು ಹಿಂದಿನ ದಿನ ಮಾತನಾಡಿಕೊಂಡಿದ್ದೆವು. ಹಾಗೆಯೇ ನನ್ನ ಸ್ನೇಹಿತರಿಗೆ 'ಉಬುಂಟು' ಲಿನಕ್ಸ್ ನಲ್ಲಿರುವ ಕನ್ನಡ ಸಪೋರ್ಟ್ ತೋರಿಸುವುದಾಗಿ ಸ್ಕೆಚ್ ಹಾಕಿದ್ದೆ. ನಿಶಾಚರನ ನಿದ್ದೆಗೆ ಕತ್ತರಿ ಬಿದ್ದಿತು. :)
ಸರಿ, ಅಷ್ಟೇನೂ ಟ್ರಾಫಿಕ್ ಇರಲಿಕ್ಕಿಲ್ಲವೆಂದೆಣೆಸಿ ಬೈಕೇರಿ ಚಾಮರಾಜಪೇಟೆಯ ಕಡೆಗೆ ಪ್ರಯಾಣ ಬೆಳೆಸಿದೆ. ಆದರೆ ವಿಚಿತ್ರವೆಂಬಂತೆ ಭಾನುವಾರದಂದೂ ಸಾಕಷ್ಟು ಟ್ರಾಫಿಕ್ ಇದ್ದೇ ಇತ್ತು. ಗೊತ್ತಿದ್ದ ಎಲ್ಲಾ ಶಾರ್ಟ್ ಕಟ್ ಗಳನ್ನ ಬಳಿಸಿ ಬಸವನಗುಡಿ ಹಾದು ಕನ್ನಡ ಸಾಹಿತ್ಯ ಪರಿಷತ್ತಿಗೆ ರವಾನೆಯಾದದ್ದಾಯಿತು. ಅಪ್ಪ ಅಮ್ಮ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರಿಂದ 'ಎಸ್ ಎಲ್ ವಿ'ಯಲ್ಲೇ ಅಲ್ಲಿಗೆ ಬಂದಿದ್ದ ಸ್ನೇಹಿತರೊಡನೆ ತಿಂಡಿ. ಮಾಮೂಲಿನಂತೆ ಹೋಟೆಲ್ ಗಳಲ್ಲಿ ಅಲ್ಲಿ ಸಿಗುವ (ಅಥವಾ ಬಂದವರ ಬಾಯಲ್ಲಿ ನೀರೂರಿಸಬೇಕೆಂದೇ ಸೇರಿಸಿರುವ) ತಿಂಡಿ ತೀರ್ಥಗಳ ಫೋಟೊಗಳು ರಾರಾಜಿಸಿದರೆ, 'ಎಸ್ ಎಲ್ ವಿ'ಯಲ್ಲಿ ರಾಜರತ್ನಂ, ಕುವೆಂಪು, ಬೇಂದ್ರೆ, ಮತ್ತಿತರ ಸಾಹಿತಿಗಳ ಫೋಟೊಗಳು! :) ಎಸ್ ಎಲ್ ವಿಯವರ ಕನ್ನಡಾಭಿಮಾನದ ಬಗ್ಗೆ ಸ್ನೇಹಿತರೊಡನೆ ಪ್ರಾರಂಭವಾದ ಮಾತು ಪುಸ್ತಕಗಳವರೆಗೆ ಬಂದಿತು.
ಪುಸ್ತಕಗಳನ್ನು ನೋಡಲು ಹೋಗುವಷ್ಟರಲ್ಲಿ ಪುಸ್ತಕಗಳನ್ನಿಟ್ಟಿದ್ದ ಮಳಿಗೆ ಬಿಕೋ ಎನ್ನುತ್ತಿತ್ತು. ನನ್ನ ಸ್ನೇಹಿತರು ಮುಂಚೆಯೇ ಅಲ್ಲಿ ತಲುಪಿದ್ದರಿಂದ ಸುಮಾರು ಪುಸ್ತಕಗಳನ್ನು ಅವರು ಆಗಲೇ ತೆಗೆದಿರಿಸಿಕೊಂಡಿದ್ದರು. ಮೊದಲಿಗೆ 'ಇಲ್ಲೇನಿರಬಹುದಪ್ಪಾ, ತೀರಾ ನೀರಸವಾಗಿ ಕಾಣುತ್ತಿದೆ' ಎಂದು ಆಲೋಚಿಸಿ ಒಳಗೆ ನಡೆದೆ. ಆದರೆ ನನ್ನ ಫರ್ಸ್ಟ್ ಇಂಪ್ರೆಶ್ಶನ್ ಸುಳ್ಳಾಗಿತ್ತು. ಒಳ ಹೊಕ್ಕಿ ನೋಡಿದರೆ ಎಲ್ಲಾ ಭಾಷೆಗಳ ಪುಸ್ತಕಗಳನ್ನಿಟ್ಟಿದ್ದರು (ಕೇಂದ್ರ ಸಾಹಿತ್ಯ ಆಕಾಡೆಮಿಯಲ್ಲವೆ?). ಕನ್ನಡ, ಇಂಗ್ಲಿಷ್ ಪುಸ್ತಕಗಳ ವಿಭಾಗಗಳತ್ತ ಕಣ್ಣು ಹಾಯಿಸಿ ಸಂಸ್ಕೃತ ವಿಭಾಗವನ್ನು ನೋಡಿ ಬರುವ ಹೊತ್ತಿಗೆ ಒ ಎಲ್ ನಾಗಭೂಷಣ ಸ್ವಾಮಿಯವರ "Rocks of Hampi", ದೀನಾನಾಥ ತ್ರಿಪಾಠಿ ಯವರ "ಮಧುಸೂದನಸರಸ್ವತೀಚರಿತಮ್", ಹಾಗೂ "ಭಾರತೀಯ ಸಾಹಿತ್ಯ ನಿರ್ಮಾಪಕರು" ಸಿರೀಸ್ ನಲ್ಲಿ ಹೊರಬಂದಿರುವ "ದೇವುಡು", "ಕೃಷ್ಣದೇವರಾಯ", "ತ್ಯಾಗರಾಜ", "ಕುಮಾರವ್ಯಾಸ", "ಆನಂದವರ್ಧನ" ನನ್ನ ಕೈ ಸೇರಿದ್ದವು. ಎಲ್ಲ ಪುಸ್ತಕಗಳೂ ಸೇರಿ ಆದದ್ದು ೧೨೦ ರೂ ಅಷ್ಟೆ!
ಜೊತೆಗೆ ಬಂದಿದ್ದ ಸ್ನೇಹಿತರನ್ನು ಪುಸಲಾಯಿಸಿ, ಕೆಲಸವಿದೆಯೆಂದರೂ ಬಿಡದೆ ನನ್ನೊಡನೆ ಮನೆಗೆ ಕರೆದುಕೊಂಡು ಬಂದು ಉಬುಂಟುವಿನಲ್ಲಿ ಕನ್ನಡ ಬಳಕೆಗಿರುವ ಸೌಲಭ್ಯಗಳನ್ನು ತೋರಿಸಿದೆ. ಸ್ನೇಹಿತರು ಆಶ್ಚರ್ಯದಿಂದ ಬೀಗಿದರು. ಇನ್ನು ಸಂಪದ, ಕನ್ನಡ ವಿಕಿಪೀಡಿಯ ತೋರಿಸುತ್ತಲೇ ಮಾತುಕತೆಯಲ್ಲಿ ಮಧ್ಯಾಹ್ನವಾಗಿ ಹೋಯ್ತು. ಸಂಜೆ ಕ್ರಿಕೆಟ್ ನೋಡಿ, "ಪರ್ವಾಗಿಲ್ಲ, ಸೋಲಿನ ದವಡೆಗೆ ಸಿಕ್ಕು ಕೊನೆಗೂ ಹಾಗೂ ಹೀಗೂ ಗೆಲುವು ಸಾಧಿಸಿದರಲ್ಲ, ನಮ್ಮ ಭಾರತ ತಂಡದವರು" ಎಂದು ನಿಟ್ಟುಸಿರು ಬಿಟ್ಟು "ದೇವುಡು"ರವರ ಬಗ್ಗೆ ಇರುವ ಪುಸ್ತಕ ಕೈಯಲ್ಲಿ ಹಿಡಿದವನು, ಈ ಮೂಲಕ ಸಂಪದದ ನನ್ನ ಬ್ಲಾಗ್ ಅಪ್ಡೇಟ್ ಮಾಡುತ್ತಿರುವೆನು. "ದೇವುಡು"ರವರ ಬಗ್ಗೆ ನಾನು ಓದಿದ್ದು, ಹಾಗೂ ಈವರೆಗೆ ತಿಳಿದಿರುವುದರ ಬಗ್ಗೆ ಇನ್ನೊಮ್ಮೆ ಬರೆಯುವೆ. ನನ್ನ ಬ್ಲಾಗ್ ಚೆಕ್ ಮಾಡುತ್ತಲಿರಿ ;)
- ಹೆಚ್. ಪಿ.
Rating