ಸಿಕ್ಸ್ಟಿ, ನೈಂಟಿಯ ’ಕಿಕ್’ ಮೀರಿದ ಸಂಪಾದನೆಯನ್ನು ಸಮಾಜ ಸೇವೆಯ ಮೋಜು ಎನ್ನುತ್ತೇವೆ!
(೧೧೬) ಆರಡಿ ಎಂಬುದೊಂದು ಅಳತೆ. ಕೆಲವರು ಗರ್ವದಿಂದ ಆ ಅಳತೆ ಮೀರಿದಾಗ ಅಂತಹವರನ್ನು ’ಲಂಬೂ’ ಎನ್ನುತ್ತೇವೆ. ಮೊರಡಿಯೊ ಒಂದಳತೆ. ಕೆಲವರು ಅದಕ್ಕೆ ಗೌರವ ನೀಡಿ, ಅದಕ್ಕೆ ತಲೆಬಾಗಿದರೆ ಅಂತಹವರನ್ನು ’ಕುಬ್ಜ’ ಎನ್ನುತ್ತೇವೆ!
(೧೧೭) ಮುವತ್ತು, ಅರವತ್ತು ಎಂಬುದು ಕೇವಲ ಸಂಖ್ಯೆಯಲ್ಲ. ಅದನ್ನು ಮೀರಿದರೆ ದಂಡ ಗ್ಯಾರಂಟಿ--ರಸ್ತೆಯ ’ಮೇಲೆ’. ಸಿಕ್ಸ್ಟಿ, ನೈಂಟಿ ಎಂಬುದೂ ಕೇವಲ ಸಂಖ್ಯೆಗಳಲ್ಲ, ಅದನ್ನು ಮೀರಿದರೆ ಕಿಕ್ ಗ್ಯಾರಂಟಿ--ದೇಹದ ’ಒಳಗೆ’.
(೧೧೮) ಬದುಕಿನ ಅನಿಶ್ಚಿತತೆಯ ಬಗ್ಗೆ ನಾನು ಬಹಳ ನಿಶ್ಚಿಂತನಾಗಿದ್ದೇನೆ. "ನಾವೇಕೆ ಬದುಕುತ್ತೇವೆ?" ಎಂಬ ಅತ್ಯಂತ ಜಾಣ ಪ್ರಶ್ನೆಗೆ ಎಂತಹ ದಡ್ಡ ಉತ್ತರವೂ ಸಹ--ಅದು ಆಸ್ಥಾ ಛಾನಲ್ ಆಗಿದ್ದರೂ ಸರಿಯೇ, ಪ್ರಸ್ತುತವಾಗುತ್ತದೆ. ಏಕೆಂದರೆ "ತಮಾಷೆಗಾಗಿ" ಎಂಬುದೂ ಸಹ ಗಂಭೀರ ಉತ್ತರವೇ ಹೌದು!
(೧೧೯) ದುಡಿಯಲಿಕ್ಕಾಗಿ ನಾವು ಶ್ರಮಿಸುತ್ತೇವೆ. ಸಂಪಾದನೆಯ ಉದ್ದೇಶವನ್ನು ಒಳಗೊಳ್ಳದ ಶ್ರಮವನ್ನು ’ಸಮಾಜ ಸೇವೆ’ ಎನ್ನುತ್ತೇವೆ.
(೧೨೦) ಮೋಜು ಎಂಬುದು ನಿಜದಲ್ಲಿ ಅದರ ಪರಿಕಲ್ಪನೆಯಲ್ಲಿದೆ. ಅದು ನಿಜವಾಗಲೂ ಉಂಟಾದಾಗ ಅಷ್ಟೇನೂ ಮೋಜಿನದಾಗಿರುವುದಿಲ್ಲ!