ಸಿಗಬಹುದೆ?!
ಹಣೆಯ ಗೆರೆಗಳನ್ನಲ್ಲ;
ಅದರ ನಡುವಿನ
(ಹಣೆ)ಬರಹವನ್ನು ತೋರಿಸುವ
ಕನ್ನಡಿಯೊಂದನ್ನು ಹುಡುಕುತ್ತಿದ್ದೇನೆ
ಕಾಗದದ ತುಂಡುಗಳನ್ನಲ್ಲ;
ಪಾಸ್ವರ್ಡ್ ಕೇಳದೆ
ಅಲ್ಪ ಮನಃಶಾಂತಿಯನ್ನುಗುಳುವ
ಯಂತ್ರವೊಂದನ್ನು ಹುಡುಕುತ್ತಿದ್ದೇನೆ
ಮಂದಿರ ಮಸೀದಿಯನ್ನಲ್ಲ;
ಗತವ ನೆನೆದು
ಒಂದಿಷ್ಟು ಕಣ್ಣೀರಿಡಲು
ಸಣ್ಣ ಕೋಣೆಯೊಂದನ್ನು ಹುಡುಕುತ್ತಿದ್ದೇನೆ
ನ್ಯಾಯವನ್ನಲ್ಲ;
ಆಗಿರುವುದು ಅನ್ಯಾಯವೆಂದು
ಒಪ್ಪಿ, ಮನಸಾರೆ ನುಡಿದ
ಸಾಂತ್ವನದ ಮಾತೊಂದನ್ನು ಹುಡುಕುತ್ತಿದ್ದೇನೆ
ಮುದ್ದು ಮುಖವನ್ನಲ್ಲ;
ಬದುಕಿನ ಇತಿ ಮಿತಿಗಳನ್ನರಿತು
ಜೊತೆ ನಡೆಯುವ
ಮೃದು ಮನಸ್ಸೊಂದನ್ನು ಹುಡುಕುತ್ತಿದ್ದೇನೆ
-ಶಫಿ
ಬಹರೈನ್
Rating