ಸಿಟಿಯಲಿ , ಧರೆಗೆ ಉರುಳುವ ಮರಗಳ ಕಂಡು ಬರೆದಿದ್ದು

ಸಿಟಿಯಲಿ , ಧರೆಗೆ ಉರುಳುವ ಮರಗಳ ಕಂಡು ಬರೆದಿದ್ದು

ಚುಮು ಚುಮು ಚಳಿಯಲಿ, ಜುಮ್ಮೆನ್ನಿಸುವ ಮಂಜಿನ ಮುಸುಕನ್ನು ಸೀಳಿ ಬರುತ್ತಿರುವ ಸೂರ್ಯನ ಕಿರಣವನ್ನು ಬೆನ್ನತ್ತಿ ಹೊರಟಿದ್ದೇ. ದೂರದಲ್ಲಿ ಎಲ್ಲೋ ಉಗಿಬಂಡಿಯ ಸದ್ದು ಕೇಳ್ತಾಯಿತ್ತು.ಮೆಲ್ಲಗೆ ನಡಿಯುತ್ತಾ ರೈಲು ನಿಲ್ದಾಣದೊಳಗೆ ಬಂದೆ.ಆಗ ಸದ್ದು ಮಾಡಿದ್ದ ಉಗಿಬಂಡಿ ನಿಲ್ದಾಣಕ್ಕೆ ವಿದಾಯ ಹೇಳ್ತಾಯಿತ್ತು. ಟಿಕೇಟ್ ಕೊಡ್ತಾಯಿದ್ದ ಮಂಜು ಇನ್ನು ಹುಡುಗ. "ಏನ್ ಸರ್, ಇವತ್ತು  ಬೇಗನೇ ಬಂದಿದೀರಿ " ಅಂದ.

"ಇಲ್ಲಪ್ಪ ನಿದ್ದೆ ಬರಲಿಲ್ಲ ಅದ್ಕೆ ಬಂದೆ"  ಅನ್ನುತ್ತಾ ಹಾಗೆ ಮೆಟ್ಟಿಲುಗಳನ್ನು ಹತ್ತಿ ಪ್ಲಾಟ್ ಪಾರ್ಮ್ನ ಮೂಲೆಯಲ್ಲಿ ಇದ್ದ ಆಸನವನ್ನ ಅಲಂಕರಿಸಿದೆ.
 
ಒಮ್ಮಿಂದೊಮ್ಮೆಗೆ ಸುಂಯ್ ಅಂತ ಗಾಳಿ ಬೀಸ್ತು. ಮೈಯಲ್ಲಿ ಕೊಂಚ ನಡುಕ. ಕಾಫಿ ಕುಡಿಬೇಕಿತ್ತು,ಆದರೆ ಕಾಫಿ ಶ್ಯಾಮ ಇನ್ನು ಬಂದಿರಲಿಲ್ಲ. ಅವನು ಬರೋ ಸಮಯ ಆಗಿರಲಿಲ್ಲ. ಸುತ್ತಲು ಹರಡಿರುವ ಸುಂದರ ಕಾಡು,ಅಲ್ಲೆ ಎಲ್ಲೋ ಇರೊ ಜಲಪಾತದ ಸದ್ದು, ಆ ಕಡೆಯಿಂದ ಬರ್ತಾಯಿರೋ ಹಕ್ಕಿಗಳ ಚಿಲಿಪಿಲಿ, ತನ್ನ ಮಕ್ಕಳನ್ನು ಎದ್ದೇಳಿಸಲು ಹಾಡುತ್ತಿರುವ ಹಕ್ಕಿಯಹಾಡು, ದಟ್ಟ ಕಾನನದ ಹಸಿರನ್ನು ಚೀರಲು ಹೆಣಗುತ್ತಿರುವ ಸೂರ್ಯ, ಮಳೆಯನ್ನು ಸುರಿಸಲು ಸಜ್ಜಾಗುತ್ತಿರುವ ಮೋಡಗಳು, ಅವುಗಳನ್ನು ತಡೆಗಟ್ಟಲು ಎದೆಸೆಟಿಸಿ ನಿಂತಿರುವ ಪರ್ವತರಾಜ, ಗಾಳಿಯೊಡನೆ ಹಾರಿಬರುತ್ತಿರುವ ವಸುಧೆಯ ಘಮ, ಅಬ್ಬಾ  ಎಂತಹ ಸಹಜ ಸೌಂದರ್ಯ ಈ ಪ್ರಕೃತಿದು! ಕುವೆಂಪು ವಿರಚಿತ "ಮಲೆಗಳಲ್ಲಿ ಮದುಮಗಳು" ಎಂಬ ಶೀರ್ಷಿಕೆ ಎಷ್ಟು ಸಮಂಜಸ.  ಪ್ರತಿ ದಿನ ಮದುವಣಗಿತ್ತಿ ಹಾಗೆ ಸಿಂಗರಿಸಿ ಕೊಂಡು ಕೂರುವ ಧರಿತ್ರಿಗೆ ಮನದಲ್ಲಿ ಒಂದು ನಮಸ್ಕಾರ ಹಾಕಿದೆ.
ಕಾಫಿ ಶ್ಯಾಮ ಬಂದಾಯ್ತು.  
"ಏನ್ ಸರ್ ಬೇಗ ಬಂದಿದೀರಿ" 
 ಹೂಂ ಶ್ಯಾಮ ನಿದ್ದೇನೆ ಬರಲಿಲ್ಲ ಅದಕ್ಕೆ ಬಂದೆ"
"ಯಾಕೆ ಸರ್, ಮಗನ ಮನೆಗೆ ಹೋಗಬೇಕು ಅಂತ ನಿದ್ದೆ ಬರಲಿಲ್ವ ನಿಮಗೆ" ನಗುತ್ತ ಹೇಳಿದ ಕಾಫಿ ಕೊಡುತ್ತ .
 
ನಾನು ಸುಮ್ಮನೆ ಕಾಫಿ ಹೀರಿದೆ. ಆಗ ಸ್ಟೇಷನ್ ಮಾಸ್ಟರ್ ಚಂಗಪ್ಪ ಬಂದ್ರು. ಅವರು ಕೊಡಗಿನವರು. ಇಲ್ಲಿ ಮಲೆನಾಡಿಗೆ ಬಂದು ಬಹಳನೇ ವರ್ಷವಾಗಿದೆ. ಅವರಿಗೂ ಕಾಫಿ ಕೊಡುತ್ತ ಶ್ಯಾಮ  ಹೇಳಿದ  " ಸರಾ , ನಮ್ಮ ಮೇಷ್ಟ್ರಿಗೆ ಮಗನ ಮನೆಗೆ ಹೋಗೋಕೆ ಇಷ್ಟಯಿಲ್ಲ ಅನ್ಸುತ್ತೆ".
 
ನನ್ನ ಕಡೆಗೆ ನೋಡಿದ ಚಂಗಪ್ಪರಿಗೆ ಸಿಕ್ಕಿದ್ದು ಸಪ್ಪೆ ಮೊರೆಯ ನಗು. ಹೌದು ಎಂಬಂತಿತ್ತು ಅದರ ಅರ್ಥ. " ನನ್ನ ಮಗ ವಿದೇಶದಲ್ಲಿ ಸೆಟಲ್ ಆಗಿದಾನೆ. ಆತ ಮೈನಸ್ ಅಂಡ್ ಮಿನರಲ್ಸ್ ಇಂಜಿನಿಯರ್‌ . ಸೈಂಟಿಸ್ಟ್ ಆಗಿ ಕೆಲ್ಸ ಮಾಡ್ತಾಯಿದಾನೆ.  ನಾನು ಮೇಷ್ಟ್ರು ಕೆಲಸ  ಮಾಡಿ ಆತನ್ನ  ಓದಿಸಿದ್ದೆ . ಬಹಳ ಕಷ್ಟಪಟ್ಟು ಈ ಲೇವಲ್ಗೆ ಬಂದಿದಾನೆ. ನನ್ನ ಹೆಂಡತಿ ಊರೀನ ಹುಡುಗಿಯನ್ನು ಮದುವೆ ಮಾಡಿತ್ತು ಅವನಿಗೆ. ಅವ್ಳು ಡಿಗ್ರಿ ಓದಿದ್ಳು. ಅಲ್ಲಿ ಹೋಗಿ ಏನೇನೋ ಓದಿ ಇವತ್ತು ಲೆಕ್ಚರರ್ ಆಗಿದಾಳೆ.ಅವರಿಗೆ ಇಬ್ಬರು ಮಕ್ಕಳು, ಒಂದು ಗಂಡು, ಒಂದು ಹೆಣ್ಣು.    ಅಮೇರಿಕಾದಲ್ಲಿ ಅವರಿಗೆ  ಅದೇನೋ ಗ್ರೀನ್ ಕಾರ್ಡ್  ಸಿಕ್ಕಿದೆ ಅಂತೆ. ಅದು ಸಿಕ್ಕಿದರೆ ಅಲ್ಲಿ ನಾಗರಿಕರು ಆಗ್ತಾರಂತೆ. ಇದೆಲ್ಲಾ ತಿಳಕ್ಳೊ ಗೋಜಿಗೆ ಹೋಗಿರಲಿಲ್ಲ". ಹೀಗೆ  ಹೇಳುತ್ತಾ ನಾನು ಚಂಗಪ್ಪ ಮತ್ತು ಶ್ಯಾಮನ ಕಡೆಗೆ ನೋಡಿದೆ. ಅವರು ಇದನ್ನ ಕನಿಷ್ಥಾ ಅಂದ್ರು 500 ಸಲ ಕೇಳಿರಬೇಕು.ಅವರ ಮುಖದಲ್ಲಿ ನಿರಂಬ್ಳ ಭಾವ ಇತ್ತು. ಶ್ಯಾಮನಿಗೆ ಮತ್ತೊಂದು ಕಾಫಿ ಕೊಡಲು ಹೇಳಿದೆ. 
ಒಮ್ಮೆ ಹಾಗೆ ದೊಡ್ಡ ಉಸಿರು ತೊಗೊಂಡು " ಹೌದು ನಾವು  ಇವತ್ತು ಹೋಗ್ತಾಯಿದೀವಿ . ನನ್ನ ಮಗ , ಸೊಸೆ ಮತ್ತು  ಮೊಮಕ್ಕಳು ಇನ್ನು ಮಲಗಿದ್ದಾರೆ. ಅವರು ಎದ್ದರೆ ಇಲ್ಲಿಗೆ ಬ್ರೋಕ್ ಅಗಲ್ಲ  ಅಂತ ಬೇಗ  ಬಂದೆ. ನನ್ ಹೆಂಡತಿ ಎದ್ದಿದ್ಳು. ಅವಳಿಗೆ  ಅಲ್ಲಿಗೆ ಹೋಗೋಕೆ ತುಂಬಾನೆ ಇಷ್ಟ ಆದರೆ ನನಗೆ ಇಷ್ಟಯಿಲ್ಲ. ಅಲ್ಲಿ ನಮಗೆ ವೀಸಾ ಅಂತ ಏನೋ ಕೊಡ್ತಾರಂತೆ . ನಾವು ಅಲ್ಲಿ ಒಂದು ವರ್ಷದವರೆಗೂ ಇರಬಹುದಂತೆ.  ಹೇಗೆ ಹೋಗೋದು ಅಂತ ನೋವು ಅಷ್ಟೆ"  ಹೀಗೆ ಹೇಳ್ತಾ ಕಾಫಿ ಶ್ಯಾಮನಿಗೆ ದುಡ್ಡು ಕೊಟ್ಟು ಅಲ್ಲಿಂದ ಹೊರಟೆ. ಅವರು ಏನೋ ಹೇಳಬೇಕು ಅಂತ ಇದ್ರು ಕೇಳಿಸಿಕೋಳ್ಳೊ ವ್ಯವಧಾನ ಇರಲಿಲ್ಲ ನನಗೆ. ಅಷ್ಟರಲ್ಲಿ ಉಗಿಬಂಡಿ ಬರೋ ಸದ್ದಾಯ್ತು. ಅವರು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆದ್ರು.
 
ನಾವು ಹೊರಟಿದ್ದ ಆ ದಿನದ ನೆನಪೆಲ್ಲಾ ಹಸಿರಾಗಿ ಕಾಡಿತ್ತು. ನಾವು ಹಿಂದಿನ ದಿನ ರಾತ್ರಿ ಅಮೆರಿಕಾದಿಂದ ವಾಪಸ್ ಬಂದಿದ್ದು. ನಾವು ನಮ್ಮ ಮನೆ ಮತ್ತು ಊರು ಬಿಟ್ಟು ಅವತ್ತಿಗೆ ಸರಿಯಾಗಿ ಒಂದು ವರ್ಷ , ಎರಡು ತಿಂಗಳು, ಒಂಬತ್ತು ದಿನಗಳು ಆಗಿತ್ತು.ನಮ್ಮಲ್ಲಿ ಗೊತ್ತಿಲ್ಲದೆನೇ ಬಹಳಷ್ಟು ಬದಲಾವಣೆ ಆಗಿದೆ. ಮನೆ ನೋಡಿಕೋಳ್ತಾಯಿದ್ದ ನಮ್ಮ  ಅಣ್ಣನ ಮಗ ಕೇಶವ, ಮನೆನ ಚೆನ್ನಾಗಿ ಇಟ್ಟಿದ್ರು ಕೂಡ ನನಗೆ ಏನೋ ಕೊರತೆ ಇದೆ ಅನ್ಸ್ತಾಯಿತ್ತು, ನನ್ನ ಹೆಂಡತಿ ಆಗಲೇ ಅಡಿಗೆ ಮನೆ ಅಲಂಕರಿಸಿದ್ಲು. ವಿದೇಶದಿಂದ  ತಂದಿದ್ದ  ಕೆಲವೊಂದು ಐಷಾರಾಮಿ  ಅಡಿಗೆಮನೆ ಪರಿಕರಗಳನ್ನ ಹೇಗೆ ಬಳಸಬೇಕು ಅಂತ ಕೇಶವನ ಹೆಂಡತಿಗೆ ಹೇಳ್ತಾಯಿದ್ಳು. ಅವಳ ಮಾತಲ್ಲಿ ಇಂಗ್ಲೀಷ ಪದಗಳು ರಾರಾಜಿಸುತ್ತಿದ್ದನ್ನು ನಾನು ಗಮನಿಸಿದೆ. ಒಮ್ಮೆ ನಕ್ಕು, ಅಮೇರಿಕದಿಂದ ತಂದಿದ್ದ ವಾಕಿಂಗ್‌ ಶ್ಯೂಸ್ ಮತ್ತೆ ಗೌನನ್ನು ಧರಿಸಿ ರೇಲ್ವೇ ನಿಲ್ದಾಣದ ಕಡೆಗೆ ಹೊರಟೆ.ಅರೆ ನಿಲ್ದಾಣದ ರೋಡ್ ಡಾಂಬರಿಕರಣವಾಗಿದೆ. ಅಲ್ಲಿ ಇದ್ದ ಗಿಡ-ಗಂಟಿಗಳನೆಲ್ಲ ಸ್ವಚ್ಛ ಮಾಡಿ  ಒಳ್ಳೆ ರಸ್ತೆ ಮಾಡಿದಾರೆ . ಒಮ್ಮೆ    ಸಖೆದಾಶ್ಚರ್ಯದ ನಗು ಬೀರಿ ಮುಂದೆ ಹೋರಟೆ.ನಿಲ್ದಾಣದ ಗೋಡೆಗಳೆಲ್ಲಾ ಮಾಯವಾಗಿ ಅಲ್ಲಿ ಬೃಹದಾಕರದ ವಿನೂತನ ಮಾದರಿಯ ಕಾಂಕ್ರೀಟ್ ಗೋಡೆಗಳು ತಲೆಯೆತ್ತಿದ್ದವು. ನವೀನ ರೀತಿಯ ವಿನ್ಯಾಸದ ಹೊರಾಂಗಣ ಚೆನ್ನಾಗಿತ್ತು. ಕೊಂಚ ಹೆದರಿಕೆಯಿಂದಾನೆ  ಒಳಗಡೆ ಹೋದ ನನಗೆ ಏನೋ ಅನ್ಸ್ತು. ಟಿಕೇಟ್ ಕೌಂಟರ್ ಕಡೆಗೆ ಹೋಗಿ ಮಂಜುನ ನೋಡೋಣ ಅಂತ ನಿಂತೆ. ಆದರೆ ಅಲ್ಲಿ ಬೇರೆ ಯಾರೊ ಇದ್ರು "ಮಂಜು ಇಲ್ವ ಅಂದೆ". ಮಂಜುಜಿ ಕಾ ಟ್ರಾನ್ಸ್ ಫರ್ ಹೊಗಯಾ" ಅಂತ ಉತ್ತರ ಬಂತು.  ಸರಿ ಐದು ರೂಪಾಯಿ ಕೊಟ್ಟು ಪ್ಲಾಟ್ ಫಾರ್ಮ್ ಟಿಕೇಟ್ ತಗೊಂಡೆ. ಟಿಕೇಟ್ ಮೇಲೆ Valid for Two hours ಅಂತ ಪ್ರೀಂಟ್ ಆಗಿತ್ತು. ಅದನ್ನ ಜೇಬಿಗೆ ಸೇರಿಸಿ ಮೇಟ್ಲು ಹತ್ತಿ ಮೇಲೆ ಬಂದೆ. ಅರೆ, ಸ್ಥಬ್ಧವಾಗಿ ನಿಂತು ಬಿಟ್ಟೆ. ನಮ್ಮ "ಕೊಳಲೂರಿ" ನ ಸ್ಟೇಷನ್ ಅದ್ಭುತವಾಗಿತ್ತು.  ಪ್ಲಾಟ್ ಫಾರ್ಮ್ ಗೆಲ್ಲ ಗ್ರಾನೈಟ್ ಹಾಕಿ ಗೋಡೆಗಳಿಗೆ ಜಾಹಿರಾತುಗಳನ್ನ ಹಾಕಿದ್ದರು. ಟಿ.ವಿ. ಮತ್ತೆ ಎಲೆಕ್ಟ್ರಾನಿಕ್ ಕೋಚ್ ಗೈಡ್ ರಾರಾಜಿಸುತ್ತಿದ್ದವು. ಪ್ಲಾಟ್ ಫಾರ್ಮ್ ನಲ್ಲಿ ಬುಕ್ ಶಟಲ್, ಕ್ಯಾಂಟೀನ್, ಹಣ್ಣಿನಂಗಡಿ ಎಲ್ಲಾ ಆಗಿತ್ತು. ಹುಬ್ಬೆರಿಸಿ ನಾನು ಒಂದು ಬೆಂಚಿನ ಕಡೆಗೆ ಹೊರಟೆ. ಇನ್ನು ಕಾಫಿ ಶ್ಯಾಮ್ ಬರುವ ಟೈಮ್‌ ಆಗಿರಲಿಲ್ಲ, ಅಥವ ಅವ್ನು ಇದಾನೋ ಇಲ್ಲವೋ ಅದು ಗೊತ್ತಿಲ್ಲ. ಚುಮು ಚುಮು ಚಳಿಯ ಲಕ್ಷಣ ಇರಲಿಲ್ಲ,  ಹಕ್ಕಿಗಳ ಗಾನ-ಸುಧೆ ಕೇಳಿಸಲಿಲ್ಲ, ನಡುಕ ಬರುವಂತಹ ಅನುಭವೇನು ಆಗಲಿಲ್ಲ. ದೂರದಲ್ಲಿರೋ ಜಲಪಾತದ ಸದ್ದು ಆಲಿಸಿದರೂ ಕೇಳಿಸಲಿಲ್ಲ. ಮೋಡಗಳ ಸುಳಿವಿರಲಿಲ್ಲ, ಅಂದು ಎದೆ ಸೆಟಿಸಿ ನಿಂತಿದ್ದ ಪರ್ವತರಾಜನ ಅಸ್ತಿತ್ವಯಿರಲಿಲ್ಲ. ಅಂದು ಹೆಣಗುತ್ತಿದ್ದ ಸೂರ್ಯನಿಂದು ಬರಿದಾಗಿದ್ದ ಧರೆಯನ್ನ ಆವರಿಸಿದ್ದ. ನನಗೆ ಒಮ್ಮೆಲೆ ಆಶ್ಚರ್ಯ, ನಾನು ಬಂದಿರೋದು " ಕೊಳಲೂರಿ"ನ ನಿಲ್ದಾಣಕ್ಕ ಎಂಬ ಅನುಮಾನ. ಅಂಥ ಭವ್ಯ ಸೌಂದರ್ಯದಿಂದ ನನಗೆ ಅಮೆರಿಕಾಗೆ ಬಿಳ್ಕೋಟ್ಟ  ಕೊಳಲೂರಿ"ನ ನಿಲ್ದಾಣ ಇದೇನಾ?, ಈಗ ಇಂಥಹ ಸ್ವಾಗತ ನೀಡುತ್ತಿದೇಯಾ? ಆಗಲೇ ಎಲ್ಲಿಂದಲೊ ಬಾಂಬ್‌ ಸಿಡಿದ ಅನುಭವ ಆಯಿತು. ಬೆದರಿದೆ. " ಸರ್, ಅದು ಬ್ಲಾಸ್ಟಿಂಗ್ ಮಾಡ್ತಾಯಿದಾರೆ" ಅನ್ನುತ್ತ ಶ್ಯಾಮ ಕಾಫಿ ತಂದ. ಆತನ ಠೀವಿ ಬದಲಾಗಿದ್ದ ಗಮನಿಸಿದೆ. ಆತ ಈಗ ಸ್ಟೇಶಾನ್-ಕ್ಯಾಂಟೀನ್ ಮಾಲೀಕ. ನನ್ನನ್ನ ನೋಡಿ ಅವನೆ ಕಾಫಿ ತಂದಿದಾನೆ. 
 
" ಏನಿದು ಶ್ಯಾಮ , ಹೀಗೆಲ್ಲಾ ಆಗಿದೆ, ಎಲ್ಲಿ ನಮ್ಮ ಮದುಮಗಳು", ಕಾಫಿ ಹೀರುತ್ತ ಕೇಳಿದೆ.
"ಎಲ್ಲಿಯ ಮದುಮಗಳು ಸರ್, ಮದುಮಗಳ ಮೇಲಿರುವ ಬಂಗಾರನ ಸರ್ಕಾರ ಮಾರಿದರೆ. ಈ ಕಾಡಲ್ಲಿ ಮೈನ್ಸ್ ಇದೆಯಂತೆ. ಒಳ್ಳೆ ಕ್ವಾಲಿಟಿದು ಅಂತೆ. ಅದರಿಂದ ಬಂಗಾರ ತಯಾರಿಸುತ್ತಾರಂತೆ. ಯಾವುದೋ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅವರು ಅದೆನೆಲ್ಲಾ ಸಾಗಿಸೋಕೆ ನಮ್ಮ ಸ್ಟೇಷನ್‌ ಈ ರೀತಿ ಮಾಡಿರೋದು. ಈಗ ಎಲ್ಲಿ ನೋಡಿದ್ರು ದುಡ್ಡಿನ ದರ್ಬಾರು " ಕೂಳಲೂರ"ಲ್ಲಿ". ಒಮ್ಮೆಲೆ ಕುಸಿದು ಬೀಳೊ ಅನುಭವವಾಯಿತು. ಅಡಗಿರುವ ಬಂಗಾರವನ್ನ ಬಗಿತಾಯಿದ್ದಾರಲ್ಲ , ಛೆ! . ಮನಸಿಗೆ ಬಹಳ ನೋವಾಯ್ತು. ಆಗಲೇ ಮೊಬೈಲ್‌ ಗೆ ಒಂದು ಕಾಲ್ ಬಂತು. ಮಗ ಅಮೇರಿಕದಿಂದ ಕಾಲ್ ಮಾಡಿದ್ದ .
" ಅಪ್ಪ ಹೇಗಿದೆ ಕೂಳಲೂರು ಈಗ"
" ಎಲ್ಲಾ ಹಾಳಾಗಿ ಹೋಗಿದೆ. ಇಲ್ಲಿ ಈಗ ಏನೂ ಇಲ್ಲ. ಇಲ್ಲಿ ಭೂಮಿ ಬೆತ್ತಲಾಗಿದಾಳೆ. ನನಗೆ ಬಹಳ ನೋವಾಗ್ತಾಯಿದೆ".
" ಯಾಕೆ"
"ಬೆಟ್ಟ-ಗುಡ್ಡಗಳನ್ನ ಬಳಿದು ಬರಿದಾಗಿಸಿದ್ದಾರೆ. ಹಸಿರನ್ನು ಬೆಂಗಾಡು ಮಾಡಿದಾರೆ ರಾಕ್ಷಸರು"
" ಅಯ್ಯೋ ಅಪ್ಪ, ಅದು ಹಾಗಲ್ಲ. ನಿಮ್ಮನ ಕರ್ಕೋಂಡು ಹೋಗೋಕೆ ಊರಿಗೆ ಬಂದಾಗ, ನಾನು ಮತ್ತು ಸುಮೇಧ ಕಾಡಲ್ಲಿ ವಾಕಿಂಗ್‌ ಹೋಗಿದ್ವಿ. ಆಗ ಸಿಕ್ಕ ಒಂದು ಕಲ್ಲನ್ನು ತಂದು ರೀಸರ್ಚು ಮಾಡಿದಾಗ ಅದರಲ್ಲಿ ಗೋಲ್ಡ್ ಕನ್ಟೆಂಟ್ಸ್ ಇರೋದು ಗೊತಾಯ್ತು. ಅದ್ನ ನನ್ನ ಕಂಪನಿಗೆ ತಿಳಿಸಿದೆ. ನಮ್ಮ ಕಂಪನಿಯವರು ಸರ್ಕಾರನ ಕಾನ್ಟ್ಯಾಕ್ಟ್ ಮಾಡಿ , ಅದರ ಗುತ್ತಿಗೆಯನ್ನ ಪಡೆದು ಕೊಂಡಿದ್ದಾರೆ. ನನಗೆ ಪ್ರಮೋಷನ್, ಮತ್ತೆ ಮನೆ ಅದ್ಕೆ ಕೊಟ್ಟಿದ್ದು ಕಂಪನಿಯವರು.ಈಗ ನಾನು ಇಂಡಿಯಾಗೆ ಬರ್ತಾಯಿದಿನಿ. ನನಗೆ ಅಲ್ಲಿಗೆ ಟ್ರಾನ್ಸಫರ್ ಆಗಿದೆ. ನಮ್ಮ ಹಳ್ಳಿಯ ಸುತ್ತಮುತ್ತ ಇರೊ ಭೂಮಿ ಮೇಲೆ ರೀಸರ್ಚ್ ಮಾಡಿ, ಅದರಲ್ಲಿ ಇರುವ ಮಿನರಲ್ ಕನ್ಟೆಂಟ್ಸ್ ಬಗ್ಗೆ ಮಾಹಿತಿ ರವಾನೆ ಮಾಡಬೇಕು".
 
ಅಡಿಯಲ್ಲಿ ಇರುವ ಭೂಮಿ ಸರಿದಂಗೆ ಆಯ್ತು. ಸುಧಾರಿಸಿಕೊಂಡು " ನೀನು ಮತ್ತೆಂದು ನನ್ನ ಹಳ್ಳಿಗೆ ಬರಬೇಡ. ನಿಜವಾದ ಬಂಗರ್ವಾ ಮರೆತು, ಸಿಂಗರಿಸುವ ಬಂಗಾರದ ಬೆನ್ಹತ್ತಿದಿಯಾ. ಬರಬೇಡ ನನ್ನ ಭೂಮಿ ತಾಯಿ ಮಡಿಲಿಗೆ. ಸಾಕಿದ್ದ ತಾಯಿ ಒಡಲನ್ನು ಬಗೆದೆಲ್ಲೊ. ನೀನು ಪಾಪಿ" ಎಂದು ಫೋನ್‌ ಕಟ್ ಮಾಡಿದೆ.
 
" ತಾತ ನೀನು ಹೇಳಿದ್ದ ಆ ಗುಡ್ಡ-ಬೆಟ್ಟಗಳು ಅಷ್ಟು ಸುಂದರವಾಗಿದಯಾ? ಅಲ್ಲಿ ನದಿಗಳು ಬಳುಕುತ್ತ ಹೋಗುತ್ತಾ? ಅಲ್ಲಿ ಸೂರ್ಯನ ಕಿರಣಗಳು ಭೂಮಿನ ಸ್ಪರ್ಶಿಸಲ್ವ? ಹಕ್ಕಿಯ ಹಾಡು-ದುಂಬಿಯ ಗುನುಗು ಎಲ್ಲ ಕೇಳಬಹುದಾ? ಎಷ್ಟು ಸುಂದರವಾಗಿರುತ್ತೆ ಅಲ್ವಾ. ನಾವು ಅಂತಹುದನ್ನು ನೋಡಿಯೇ ಇಲ್ಲ. ನಾನು ಬಂದಾಗ ತೋರಿಸಿ ತಾತ" , ಆ ಮುಗ್ಧ ಮನಸ್ಸುಗಳು ನಾನು ಕೊಳಲೂರಿನ ಬಗ್ಗೆ ಹೇಳಿದಾಗ ವ್ಯಕ್ತ ಪಡಿಸಿದ ರೀತಿ ಇದು. ಆ ಪುಟ್ಟ ಮನಸುಗಳಲ್ಲಿ ಕಟ್ಟಿಕೊಂಡ ಆ ದಿವ್ಯ ಕನಸನ್ನು ನಾ ಹೇಗೆ ನನಸಾಗಿಸಲೀ...?
Rating
No votes yet

Comments