ಸಿಟ್ಟು
"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ!
ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?"
ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ
ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !
ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ ಪದ್ಯ-73):
ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್
ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ |
ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ
ರಮಣಪದವೀ ಸಾರಂಗಾಕ್ಷ್ಯಾ ನಿರಂತರಮೀಕ್ಷಿತಾ ||
-ಹಂಸಾನಂದಿ
ಕೊ: ನಾಯಕಿ ಗೆಳತಿಯೊಡನೆ ಮಾತಾಡುತ್ತ, ತನ್ನಿಂದ ವಿಮುಖನಾದ ಪ್ರಿಯಕರನನ್ನು ತಾನು ಲೆಕ್ಕಿಸುವುದಿಲ್ಲವೆಂದು ಬರಿ ಮಾತಿನಲ್ಲಿ ಸಿಟ್ಟು ತೋರುತ್ತಿದ್ದರೂ , ಅವಳ ಜಿಂಕೆಕಣ್ಣಿನ ನೋಟ ಅವನು ಹೋದ ಹಾದಿಯನ್ನೇ ನೋಡುತ್ತಿವೆಯೆಂಬುದು ಇದರ ಭಾವ. ಜಿಂಕೆಕಣ್ಣಿನವಳ ಸಿಟ್ಟನ್ನು ಬಣ್ಣಿಸಲು ಜಿಂಕೆಯದೇ ಹೆಸರಿನ "ಹರಿಣೀ" ವೃತ್ತವನ್ನು ಕವಿ ಬಳಸಿದ್ದಾನೆ.
ಕೊ.ಕೊ: ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಛಂದಸ್ಸಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಇದೇ ಪದ್ಯವನ್ನು ಬೇರೊಂದು ರೀತಿಯಲ್ಲಿ, ಛಂದೋಬಂಧವಿಲ್ಲದೇ "ಚಿಗರೆಗಣ್ಣವಳ ಸಿಟ್ಟು" ಎಂಬ ಹೆಸರಿನಲ್ಲಿ ಅನುವಾದಿಸಿದ್ದೆ. ಅದನ್ನು ನೀವು ಈ ಕೊಂಡಿಯಲ್ಲಿ ಓದಬಹುದು. http://hamsanada.blogspot.com/2012/02/blog-post_13.html
ಕೊ,ಕೊ.ಕೊ: ಈ ಚಿತ್ರ ರಾಗ ಕಾಮೋದ ದ ರಾಗಮಾಲಾ ಚಿತ್ರ,, ಬ್ರೂಕ್ಲಿನ್ ಸಂಗ್ರಹಾಲಯದಲ್ಲಿದೆ - Picture: Ragmala painting depicting Raga Kamod at Brooklyn Museum of Art (http://www.brooklynmuseum.org/
Comments
ಉ: ಸಿಟ್ಟು
ಸುಂದರ, ಅನುವಾದವೂ, ಪೂರಕ ಮಾಹಿತಿಗಳೂ!!