ಸಿಡಿ ಮದ್ದು

4.57143

ಆಗ ಬಹುಶಃ ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ದೀಪಾವಳಿ ಹತ್ತಿರ ಬಂತೆಂದರೆ ಕ್ಲಾಸಿನ ಹುಡುಗರಲ್ಲೆಲ್ಲ ಪಟಾಕಿಯದೇ ಮಾತು. ಪಾಠ ನಡೆಯುತ್ತಿರುವ ಹೊತ್ತೂ ಗುಸುಗುಸು ಎಂದು ಅದನ್ನೇ ಮಾತನಾಡುತ್ತಿದ್ದರು. ಕಳೆದ ವರ್ಷ ಯಾವ ರೀತಿ ಪಟಾಕಿ ಹೊಡೆದಿದ್ದೆವು, ಈ ವರ್ಷ ಹೊಸ ರೀತಿಯ ‍ಪಟಾಕಿ ಯಾವುದು ಬರಲಿದೆ ಎಂಬುದರ ಬಗ್ಗೆ ‍ಆಳವಾದ ಚರ್ಚೆ ನಡೆಯುತ್ತಿತ್ತು. ‍‍ದೀಪಾವಳಿ ಇನ್ನೂ ಹದಿನೈದು ದಿನಗಳಿರುವಂತೆಯೇ ಪ್ರಾರಂಭವಾಗುತ್ತಿದ್ದ ಈ ಚರ್ಚೆ ಪಟಾಕಿ ಬಗ್ಗೆ ಅಷ್ಟೇನೂ ಒಲವಿಲ್ಲದ ಹುಡುಗರಿಗೂ ದೀಪಾವಳಿಯ ದಿನ ಪಟಾಕಿ ಸಿಡಿಸುವ ಕಾತುರ ಮೂಡಿಸುತ್ತಿತ್ತು.

‍ಆ ವರುಷ ಅಪ್ಪನ ಆಫೀಸಿನಲ್ಲಿ ಎಲ್ಲರೂ ಸೇರಿ ಶಿವಕಾಸಿಯಿಂದ ಪಟಾಕಿ ತರಿಸುವುದೆಂದು ಚಂದಾ ವಸೂಲಿ ಮಾಡಿದ್ದರಂತೆ. ಪ್ರತಿ ವರ್ಷ ಹೀಗೆಯೇ ಹಣ ಒಟ್ಟುಗೂಡಿಸಿ ಪಟಾಕಿ ತರಿಸುತ್ತಿದ್ದರಂತೆ. ಆದರೆ ಅದು ಶಿವಕಾಸಿಯದ್ದೋ ಅಥವ ಇಲ್ಲೇ ಕೊಯಂಬತ್ತೂರಿನದ್ದೋ ಯಾರಿಗೂ ಗೊತ್ತಿರಲಿಲ್ಲ. ಗೊತ್ತಿದ್ದದ್ದು ಇಷ್ಟು - ಪಟಾಕಿ ಒಟ್ಟಾಗಿ ಕೊಂಡಲ್ಲಿ ಕಡಿಮೆ ಬೆಲೆಗೆ 'ಗಿಫ್ಟ್ ಪ್ಯಾಕ್' ರೂಪದಲ್ಲಿ ಸಿಗುತ್ತದೆಂಬುದು. ಅಪ್ಪನ ಆಫೀಸಿನಲ್ಲಿ ಕೆಲಸಮಾಡುತ್ತಿದ್ದ ಎಲ್ಲ ಅಪ್ಪ ಅಮ್ಮಂದಿರು ಪಟಾಕಿ ಬೇಕು ಎಂಬ ಮಕ್ಕಳ ಹಠಕ್ಕೆ ಇದೊಂದು ಸುಲಭದ ದಾರಿ ಕಂಡುಕೊಂಡಿದ್ದರು. ಸುಮಾರು ಇನ್ನೂರು ರೂಪಾಯಿಗಳಿಗೆಲ್ಲ ಒಂದು ಬಾಕ್ಸ್ ತುಂಬ ಪಟಾಕಿ ಸಿಗುತ್ತಿತ್ತು. ಬಾಕ್ಸೊಂದರಲ್ಲಿ ಎಲ್ಲ ರೀತಿಯ ಪಟಾಕಿಗಳನ್ನೂ ಒಂದಿಷ್ಟು ತುಂಬಿ ಕಳುಹಿಸುತ್ತಿದ್ದರು. ಸುರ್ ಸುರ್ ಬತ್ತಿ, ಆನೆ ಪಟಾಕಿಯಿಂದ ಹಿಡಿದು ರಾಕೆಟ್, ಲಕ್ಷ್ಮಿಯ ಚಿತ್ರವಿರುವ ಲಕ್ಷ್ಮೀ ಪಟಾಕಿ, ಹಸಿರು ನಿಶಾನೆಯಿದ್ದು ವಿಪರೀತ ಸದ್ದು ಮಾಡುವ ಹೈಡ್ರೋಜನ್ ಬಾಂಬ್ ವರೆಗೂ ಎಲ್ಲ ಇರುತ್ತಿದ್ದವು. ಇಂಥದ್ದೊಂದು ಬಾಕ್ಸ್ ಚಂದಾ ಹಣ ಕಟ್ಟಿದ್ದ ಅಪ್ಪನಿಗೂ ಬಂದಿತ್ತು.


ದೀಪಾವಳಿಯ ಹಿಂದಿನ ದಿನ ಅಪ್ಪ ಆಫೀಸಿನಿಂದ ಊಟಕ್ಕೆ ಬರುವಾಗ ಪಟಾಕಿ ತುಂಬಿದ ಈ 'ಗಿಫ್ಟ್ ಬಾಕ್ಸ್' ತರುತ್ತಾರೆಂಬ ಸುದ್ದಿಯಿಂದ ಮನೆಯಲ್ಲಿ ಒಂದು ರೀತಿಯ ಸಂಭ್ರಮ ನಮಗೆ. ಶಾಲೆಗೆ ಮಧ್ಯಾಹ್ನ ಯಾವುದೂ ಒಳ್ಳೆಯ ಪೀರಿಯಡ್ ಇಲ್ಲ ಎಂದು ಚಕ್ಕರ್ ಹೊಡೆದು ಊಟದ ನಂತರ ಮನೆಯಲ್ಲೇ ಉಳಿದುಬಿಟ್ಟಿದ್ದೆ. ಅಣ್ಣ ಕೂಡ ಕಾಲೇಜಿಗೆ ಚಕ್ಕರ್ ಹೊಡೆದು ಮನೆಯಲ್ಲಿದ್ದ. ಅಷ್ಟೊಂದು ಪಟಾಕಿ ಹುಚ್ಚಿರದ ಅಕ್ಕನಿಗೂ ಪಟಾಕಿ ಬಾಕ್ಸಿನಲ್ಲಿ ಏನೆಲ್ಲ ಇರುತ್ತದೆ ಎಂಬ ಕುತೂಹಲ. ಅವಳೂ ಕಾಲೇಜಿನಿಂದ ಮನೆಗೆ ಬೇಗ ಬಂದಿದ್ದಳು. ಆಗ ಅಪ್ಪನ ಬಳಿ ಇರುತ್ತಿದ್ದುದು ಒಂದು ಬಜಾಜ್ ಸ್ಕೂಟರ್. ಸ್ಕೂಟರಿನಲ್ಲಿ ಕಾಲಿಡುವ ಜಾಗದ ಬಳಿ ಬ್ರೇಕ್ ಇರುತ್ತಿತ್ತು. ಅಲ್ಲಿ ಸಾಮಾನು ಅಥವ ಡಬ್ಬ ಇಟ್ಟುಕೊಂಡರೆ ಬ್ರೇಕ್ ಒತ್ತಲು ತ್ರಾಸ ಆಗುತ್ತಿತ್ತು. ಹೀಗಿದ್ದರೂ ಅದು ಹೇಗೋ ಸರ್ಕಸ್ ಮಾಡಿಕೊಂಡು ಪಟಾಕಿ ತುಂಬಿದ ಬಾಕ್ಸ್ ಅಲ್ಲೇ ಕಾಲಿಡುವಲ್ಲಿ ಸ್ಕೂಟರಿನಲ್ಲಿ ತುರುಕಿಕೊಂಡು ಮನೆಗೆ ತಂದೇ ಬಿಟ್ಟರು ಅಪ್ಪ. ಮನೆಗೆ ಬರುತ್ತಲೇ ಅಮ್ಮ ಅಪ್ಪನ ಬರುವಿಕೆಯ ಸಮಯ ಆಗಲೇ ಗೇಟ್ ತೆಗೆದು ಒಳಹೋಗಿರುತ್ತಿದ್ದರು. ಗೇಟ್ ತೆಗೆದಿಟ್ಟಿದ್ದರೆ ಸ್ಕೂಟರನ್ನು ನೇರ ಒಳಗೇ ತಂದು ನೆರಳಿನಲ್ಲಿ ನಿಲ್ಲಿಸಿ ಒಳಬರುತ್ತಿದ್ದರು ನಮ್ಮ ತಂದೆ. ಆ ದಿನ ಕೂಡ ನೇರ ಬುರ್ರೆಂದು ಒಳಗೇ ಸ್ಕೂಟರ್ ಓಡಿಸಿಕೊಂಡು ಬಂದು ಹೊರಗಿನಿಂದಲೇ ಪಟಾಕಿ ಬಾಕ್ಸ್ ಇಳಿಸಿಕೊಳ್ಳಲು ಅಮ್ಮನನ್ನು ಕೂಗಿ ಕರೆದರು. ಆದರೆ ಹೊರಗೋಡಿ ಬಂದದ್ದು ನಾವು ಮೂರು ಜನ! ಅಮ್ಮ ಒಲೆಯ ಮೇಲೆ ಏನೋ ಇಟ್ಟಿದ್ದೇನೆಂದು ಒಳಗಿನಿಂದ ಕೂಗಿದ್ದೂ ನಮಗೆ ಹೇಳಿಮಾಡಿಸಿದಂತಾಯಿತು. ಕೂಡಲೆ ನಾ ಮುಂದು ತಾ ಮುಂದು ಎಂದು ಬಾಕ್ಸ್ ತೆಗೆದುಕೊಳ್ಳಲು ಸ್ಕೂಟರ್ ಬಳಿ ಹೋದೆವು. ಅಣ್ಣನ ಕಂಡರೆ ಅಪ್ಪನಿಗೆ ಯಾವಾಗಲೂ ಒಂದಷ್ಟು ಹೆಚ್ಚಿನ ಪ್ರೀತಿ. ಅಪ್ಪ ಅವನಿಗೆ ಬಾಕ್ಸ್ ಇಳಿಸಿಕೊಟ್ಟರು. ಅವನೋ ಬಾಕ್ಸ್ ಸಿಕ್ಕಿದ್ದೇ ತಡ ತೆಗೆದುಕೊಂಡು ನೇರ ಮನೆಯೊಳಗೆ ದೌಡಾಯಿಸಿ ಪ್ಯಾಕೆಟ್ ಒಡೆದೇ ಬಿಟ್ಟ. ಮುಂದಿನ ಒಂದು ತಾಸು ನಾವು ಊಟ ಕೂಡ ಮರೆತು ಏನೆಲ್ಲ ಪಟಾಕಿ ಇದೆಯೆಂಬುದನ್ನೇ ಚರ್ಚೆ ಮಾಡುತ್ತ ಕಳೆದಿದ್ದೆವು! ಮತ್ತೆ ಮತ್ತೆ ಊಟಕ್ಕೆ ಕರೆಯಲು ಬರುತ್ತಿದ್ದ ಅಮ್ಮನಿಗಂತೂ ರೋಸಿಹೋಗಿತ್ತು - ಊಟ ಮುಗಿಯದ ಹೊರತು ಅವರು ಪಾತ್ರೆ ತೊಳೆದು ಮಧ್ಯಾಹ್ನದ ಕೆಲಸ ಮುಗಿಯುವಂತಿಲ್ಲ! ಪಟಾಕಿ ಮಾತು ಬೇಜಾರಾಗಿ ಅಕ್ಕ ಹೊರಟುಹೋದ ಮೇಲೆ ನಾವಿಬ್ಬರೂ ಅಣ್ಣತಮ್ಮಂದಿರಲ್ಲಿ ಯಾವ ಪಟಾಕಿ ಯಾರು ಹೊಡೆಯಬೇಕೆಂಬ ಮಾತು ಶುರುವಾಯಿತು. ಅಣ್ಣ ನನಗೆ "ಈ ಪಟಾಕಿಗಳನ್ನೆಲ್ಲ ಹೊಡೆಯಲು ನೀನಿನ್ನೂ ತುಂಬ ಸಣ್ಣವನು"ಎಂಬ ಕಾರಣ ಕೊಟ್ಟು "ಢಂ" ಎಂದು ಸಿಡಿಯುವ ಪಟಾಕಿ ಬಾಂಬುಗಳನ್ನೆಲ್ಲ ತಾನು ತೆಗೆದಿಟ್ಟುಕೊಂಡು ಸುರ್ ಸುರ್ ಬತ್ತಿ, ಹೂ ಕುಂಡ ಮತ್ತು 'ಬಿಜಿಲೀ' ಪಟಾಕಿಯನ್ನು ಒಂದು ಕಡೆ ಸರಿಸಿಟ್ಟು "ಇಷ್ಟು ಪಟಾಕಿ ನಿನಗೆ" ಎಂದುಬಿಟ್ಟ. ವಾರಗಳಿಂದಲೇ ಶಾಲೆಯಲ್ಲಿ ಹುಡುಗರು ಮಾತನಾಡುವುದನ್ನು ಕೇಳುತ್ತು ಇವೆಲ್ಲ ಪಟಾಕಿಗಳು ಹೇಗೆ ಸಿಡಿದಾವು ಎಂಬ ಕುತೂಹಲದಲ್ಲಿದ್ದ ನನಗೆ ಇದನ್ನೆಲ್ಲ ಸಿಡಿಸಲು ನನಗೆ ಅವಕಾಶ ಸಿಗದು ಎಂದು ಕೇಳಿ ಆಕ್ಷಣವೇ ನಿರಾಶೆಯಾಯಿತು. ಅಣ್ಣನ ಲೆಕ್ಕಕ್ಕೆ ನಾನು ಒಪ್ಪಲೇ ಇಲ್ಲ. ಮಾತು ಜೋರಾಗಿ ಜಗಳವೇ ಶುರುವಾಗಿಬಿಟ್ಟಿತು. ಮೊದಲೇ ಕೆಲಸ ಮುಗಿದಿಲ್ಲವೆಂಬ ತವಕದಲ್ಲಿದ್ದ ಅಮ್ಮನಿಗೆ ನಮ್ಮಿಬ್ಬರನ್ನು ಸುಧಾರಿಸುವುದೂ ಕಷ್ಟವಾಗಿಬಿಟ್ಟಿತು. ಅಪ್ಪ ಸಾಯಂಕಾಲ ಮನೆಗೆ ಬರುತ್ತಲೇ ಅಮ್ಮ ಎಲ್ಲವನ್ನೂ ಅಪ್ಪನಿಗೆ ಹೇಳಿಬಿಟ್ಟರು. ಮಧ್ಯಾಹ್ನದ ಊಟವೂ ಮಾಡಿಲ್ಲದ ನಮ್ಮಿಬ್ಬರಿಗೂ ಒಂದೊಂದು ಹೊಡೆತ ಸಿಕ್ಕಿತು! "ನಿಮಗ್ಯಾರಿಗೂ ಇದು ಬೇಡ" ಎಂದು ಪಟಾಕಿ ಬಾಕ್ಸನ್ನು ತೆಗೆದುಕೊಂಡು ಹೋಗಿ ಅಪ್ಪ ನೇರ ಅಟ್ಟದ ಮೇಲಿಟ್ಟರು!
ಮಾರನೆಯ ದಿನ ಎಲ್ಲವೂ ತಣ್ಣಗಾಗಿ ಕೊನೆಗೆ ಇಬ್ಬರೂ ಪಟಾಕಿ ಸಿಡಿಸಲು ಶುರು ಮಾಡಿದೆವು. ಜಗಳವೇ ಬೇಡವೆಂದು ಅಪ್ಪ ಇಬ್ಬರಿಗೂ ಒಂದೊಂದು ಎಂಬಂತೆ ಮತ್ತೊಂದು ಪಟಾಕಿಯ ಗಿಫ್ಟ್ ಬಾಕ್ಸ್ ತೆಗೆದುಕೊಂಡು ಬಂದಿದ್ದರು. ಈಗ ಇಬ್ಬರೂ ಎಷ್ಟು ಪಟಾಕಿ ಸಿಡಿಸಿದರೂ ಖಾಲಿಯೇ ಆಗವಲ್ಲದು! ಸಿಡಿಸಿದ ಪಟಾಕಿಯಲ್ಲೂ ಹಲವು ಟುಸ್ಸೆಂದದ್ದರ ಕಾರಣ ನಮ್ಮ ಸಂಭ್ರಮವೂ ಟುಸ್ಸೆಂದಿತ್ತು. ಯಾವುದಕ್ಕಾಗಿ ಜಗಳಾಡಿದೆವು? ಎಂದು ಅನಿಸತೊಡಗಿತ್ತು! ಸಂಜೆಯಾದಂತೆ ಅಮ್ಮ ಹಚ್ಚಿಟ್ಟ ದೀಪಗಳೇ ಹೆಚ್ಚು ಸಂಭ್ರಮ ತರುವಂತಿತ್ತು. ಪಟಾಕಿ ಸಿಡಿಸಿದ ಗುರುತಾಗಿ ಗೇಟಿನ ಎದುರು ರಾಶಿ ರಾಶಿ ಪೇಪರ್ರು, ಅಲ್ಲಲ್ಲಿ ಚದುರಿದ್ದ ಸಿಡಿಮದ್ದು ಗಲೀಜು ತುಂಬಿಸಿತ್ತು. ಪಟಾಕಿಯ ವಾಸನೆ ರಾತ್ರಿಯೆಲ್ಲ ಮನೆಯೊಳಗೂ ತುಂಬಿಕೊಂಡಿತ್ತು. ಅಣ್ಣ ತಾನು ಸಿಡಿಸದೇ ಉಳಿಸಿಟ್ಟ ಪಟಾಕಿಯನ್ನು ತುಳಸೀ ಪೂಜೆಗೆಂದು ತೆಗೆದಿಟ್ಟುಕೊಂಡ. ಆಗಲೇ ಟುಸ್ಸೆನ್ನುತ್ತಿರುವ ಸಿಡಿಮದ್ದು ತುಳಸೀ ಪೂಜೆಯವರೆಗೂ ಇರಲಾರದು ಎಂದು ಅಕ್ಕ ನಾನು ಸಿಡಿಸದೇ ಉಳಿಸಿದ ಪಟಾಕಿಯನ್ನು ಅಲ್ಲೇ ಪಟಾಕಿ ಕೇಳಿಕೊಂಡು ಬರುತ್ತಿದ್ದ ಮಕ್ಕಳಿಗೆ ಕೊಟ್ಟುಬಿಟ್ಟಳು. ಆ ರಾತ್ರಿ ಕೈಯಲ್ಲ ಪಟಾಕಿ ವಾಸನೆ, ಉಗುರುಗಳಲ್ಲೆಲ್ಲ ಸಿಡಿಮದ್ದು. ಇನ್ನು ಎರಡು ಮೂರು ದಿನ ಪಟಾಕಿ ವಾಸನೆ ಉಗುರುಗಳಿಂದ ಹೋಗಿರಲಿಲ್ಲ. ರಜೆ ಮುಗಿದ ನಂತರ ಕ್ಲಾಸಿಗೆ ವಾಪಸ್ ಬಂದು ಪಟಾಕಿ ಸಿಡಿಸಿದ್ದರ ಬಗ್ಗೆ ಹೇಳಿಕೊಳ್ಳುತ್ತಿದ್ದ ಗೆಳೆಯರ ಮಾತುಕತೆಯಲ್ಲಿ ಪಾಲ್ಗೊಳ್ಳಲು ಅದ್ಯಾಕೊ ಮನಸ್ಸಾಗಿರಲಿಲ್ಲ. ಕೆಲವರಂತೂ ಇದ್ದದ್ದು ಇಲ್ಲದ್ದು ಎಲ್ಲವನ್ನೂ ಸೇರಿ ಪಟಾಕಿ ಸಿಡಿಸಿದ್ದರ ಕುರಿತು ಹೇಳಿಕೊಳ್ಳುತ್ತಿದ್ದ ವೈಖರಿ ಸ್ವಾರಸ್ಯಕರವಾಗಿರುತ್ತಿದ್ದು ಅದನ್ನು ಕೇಳುವುದಷ್ಟೇ ನಿಜವಾಗಲೂ ‍ಖುಷಿ ಕೊಡುತ್ತಿದ್ದುದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.