" ಸಿನೆಮಾ"...(.ಕಥೆ)
ಯಾಕೆಂದರೆ ನಾವು ಶೇಂಗಾವನ್ನು ಆಯ್ದು ಕೋರುಪಾಲು ಕೊಡುತ್ತಿದ್ದುದರ ಆಧಾರದ ಮೇಲೆ ನಮ್ಮ ವಿತ್ತ ಸಂಗ್ರಹದ ಒಟ್ಟು ಮೊತ್ತ, ಅದರಲ್ಲಿ ಹಲ್ಲುಪುಡಿ ಮತ್ತು ಸಬಕಾರ ಮುಂತಾದ ಅವಶ್ಯಕ ಬಾಬು ಗಳಿಗೆ ಖರ್ಚಾದ ಮುಂದೆ ಖರ್ಚಾಗ ಬಹುದಾದ ಒಟ್ಟು ಮೊತ್ತವನ್ನು ಊಹಿಸಿ ನಮ್ಮ ಹಣಕಾಸಿನ ಸ್ಥಿತಿಗತಿಯ ಸ್ಥೂಲ ಚಿತ್ರಣ ಅವರಿಗೆ ಸಿಕ್ಕಿ ಬಿಟ್ಟಿರುತ್ತಿತ್ತು. ನಾವು ಮುಂದಿನ ತರಗತಿಗಳಿಗೆ ಹೋದಾಗ ಪಠ್ಯ ಪುಸ್ತಕ , ನೋಟ್ ಬುಕ್, ಪೆನ್ನು ಮತ್ತು ಪೆನ್ಸಿಲ್ಗಳ ಖರೀದಿ ವೇಳೆ ಪೋಷಕರು ತಮ್ಮ ಆರ್ಥಿಕ ಸ್ಥಿತಿಯ ದುಸ್ಥಿತಿಯ ಚಿತ್ರಣ ನೀಡಿ ಅವುಗಳನ್ನು ಖರೀದಿಸು ವಾಗ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದರು, ಅವರದು ಅಪ್ಪಟ ಎಮೋಶನಲ್ ಬ್ಲ್ಯಾಕ್ಮೇಲ್ ತಂತ್ರ ವಾಗಿರುತ್ತಿತ್ತು. ಆಗ ನಮಗೆ ಇದು ಅರ್ಥವಾಗುತ್ತಿರಲಿಲ್ಲ. ಆಗ ಅನಿವಾರ್ಯವಾಗಿ ವಿಷಾದ ಭಾವದಿಂದ ನಾವು ಕೂಡಿಟ್ಟ ಹಣವನ್ನು ಅನಿವಾರ್ಯವಾಗಿ ವಿಷಾದ ಭಾವದಿಂದ ನಮ್ಮ ಶಿಕ್ಷಣದ ಅವಶ್ಯಕತೆ ಗಳಿಗಾಗಿ ಖರ್ಚು ಮಾಡುತ್ತಿದ್ದೆವು. ಈ ಎಲ್ಲ ಕಂಟಕಗಳ ಮಧ್ಯೆಯೂ ಒಂದೋ ಎರಡೋ ರೂಪಾಯಿಗಳು ಮಿಕ್ಕಿ ಉಳಿದರೆ ಅದೇ ದೊಡ್ಡದು. ಇದೂ ಸಹ ಅವರಿಗೆ ಗೊತ್ತಿರುತ್ತಿತ್ತು ಆದರೂ ನಿರ್ವಾಹವಿಲ್ಲದೆ ಇಂತಹ ಪರಿಸ್ಥಿತಿಗೆ ಒಲ್ಲದ ಮನಸ್ಥಿತಿ ಯಿಂದ ಹೊಂದಿ ಕೊಳ್ಳುತ್ತಿದ್ದರು ಯಾಕೆಂದರೆ ಮುಂದಿನ ವರ್ಷ ನೆಲದಾಳದಲ್ಲಿಯ ಶೇಂಗಾ ಹೆಕ್ಕಲು ಜನ ಬೇಕಲ್ಲವೆ? ಈ ನೆಲದಾಳದಲ್ಲಿಯ ಶೇಂಗಾ ಹೆಕ್ಕುವುದು ಅಷ್ಟು ಸುಲಭಧ ಕೆಲಸ ವಾಗಿರುತ್ತಿರಲಿಲ್ಲ. ಶೇಂಗಾವನ್ನು ಹರಗಿ ಪೈರು ತೆಗೆದಾದ ಮೇಲೆ ನೆಲದಲ್ಲಿ ಉಳಿದ ಶೇಂಗಾವನ್ನು ಆರಿಸಿಸಿ ಮತ್ತೆ ಹರಗಿ ಮತ್ತೆ ಆರಿಸಿಸಿ ಈ ರೀತಿ ಹಲವು ಸಲ ಮಾಡಿ ಇನ್ನು ಶೇಂಗಾ ಆರಿಸಿಸುವ ಕೆಲಸ ಲಾಭದಾಯಕವಲ್ಲ ಎಂಬುದು ಅವರಿಗೆ ಮನವರಿಕೆ ಯಾದಾಗ ಕೊನೆಯ ಹಂತದ ಆರಿಸುವಿಕೆ ನಮಗೆ ಬರುತ್ತಿತ್ತು. ಶೇಂಗಾ ಆರಿಸುವ ಪ್ರಾರಂಭದ ಉತ್ಸಾಹದ ಭರದಲ್ಲಿ ಮೊದಲ ದಿನ ಶೇಂಗಾ ಆರಿಸುವಾಗ ಗಟ್ಟಿ ನೆಲದಾಳದಲ್ಲಿ ಎಲ್ಲಿಯಾದರೂ ಶೇಂಗಾ ಕಾಯಿಗಳು ಗೋಚರಿಸಿದರೆ ಅಲ್ಲಿ ಜಾಸ್ತಿ ಕಾಯಿಗಳು ಇವೆ ಎಂದು ನಮ್ಮ ಬೆರಳುಗಳಿಂದ ಕೆದರುತ್ತಿದ್ದೆವು ಅದರ ಪರಿಣಾಮ ನಮಗೆ ಎರಡನೆ ದಿನ ಗೊತ್ತಾಗುತ್ತಿತ್ತು. ಬೆರಳಿನ ಉಗುರು ಕಣ್ಣುಗಳಲ್ಲಿ ನೋವು ಕಾಣಿಸಿ ಕೊಳ್ಳುತ್ತಿತ್ತು. ಆದರೂ ನಮ್ಮ ಹಣಕಾಸಿನ ಮೂಲವಾದ ಆ ನೆಲದಾಳದ ಶೇಂಗಾಗಳು ನಮ್ಮನ್ನು ಆಕರ್ಷಿಸುತ್ತಿದ್ದವು. ಹೀಗಾಗಿ ನಾವು ಮಾರನೆ ದಿನ ಹೊಲಕ್ಕೆ ಹೋದೊಡನೆ ಎರೆಮಣ್ಣಿನಾಳದಲ್ಲಿ ಹುದುಗಿದ .ನಮ್ಮ ಸ್ವಂತ ಖರ್ಚಿನ ಅರ್ಥ ವ್ಯವಸ್ಥೆಯ ಮೂಲಗಳಾದ ಆ ಶೇಂಗಾ ಕಾಯಿಗಳ ಆರಿಸುವಿಕೆ ಮತ್ತೆ ಯಥಾ ಪ್ರಕಾರ ಪ್ರಾರಂಭವಾಗುತ್ತಿತ್ತು. ಆದರೆ ಬೆರಳುಗಳು ನೋವು ಕೊಡಲು ಪ್ರಾರಂಭಿಸುತ್ತಿದ್ದವು. ಆದರೂ ನಾವುಗಳು ಸೋಲದೆ ಗಟ್ಟಿಯಾದ ಸುಮಾರು ಒಂದಡಿ ಉದ್ದದ ಒಂದು ಕಡೆಗೆ ಮೊನಚಾಗಿರುವ ಕಟ್ಟಿಗೆಯ ತುಂಡನ್ನು ಆರಿಸಿ ಅದನ್ನು ಶೇಂಗಾ ಕಾಯಿಗಳ ಗಣಿಗಳ ಅಗೆತಕ್ಕೆ ಉಪಯೋಗಿಸಿ ಯಶಸ್ವಿಯಾಗುತ್ತಿದ್ದೆವು. ಬಯಲು ಸೀಮೆಯ ಪ್ರಖರ ಬಿಸಿಲು ಜೊತೆಗೆ ನೀರಿನ ಆಶ್ರಯಗಳು ಇರುತ್ತಿರಲಿಲ್ಲ. ಇದ್ದರೂ ದನಕರುಗಳ ಶೆಗಣಿ ಮತ್ತು ಮೂತ್ರದ ವಾಸನೆಯಿಂದ ಕೂಡಿರುತ್ತಿದ್ದವು. ಅದೇ ನೀರನ್ನು ಕುಡಿಯಬೇಕು, ಇಲ್ಲದಿದ್ದರೆ ಮನೆಯಿಂದ ತತ್ರಾಣಿಯಲ್ಲಿ ನೀರನ್ನು ಒಯ್ದು ಆ ಸೀಮಿತ ನೀರಿನ ಸಂಪನ್ಮೂಲವನ್ನೆ ಮಿತವಾಗಿ ಬಳಸಿಕೊಳ್ಳ ಬೇಕಿತ್ತು. ಸದಸ್ಯರ ಸಂಖ್ಯೆ ಜಾಸ್ತಿಯಾದಷ್ಟೂ ನೀರಿನ ರೇಶನ್ ಖೋತಾ ಆಗುತ್ತಿತ್ತು.
ಆದರೆ ಆ ಕರಿಯ ನೆಲದ ಪ್ರಖರ ಬಿಸಿಲಿನ ಪರಿಸರದಲ್ಲಿಯೂ ಮೇಲೆ ಪಸರಿಸಿದ ಶುಭ್ರ ನೀಲಾಕಾಶದ ಹಿನ್ನೆಲೆಯಲ್ಲಿ ಅಲ್ಲಲ್ಲಿ ತೇಲುತ್ತ ಹೋಗುತ್ತಿರುತ್ತಿದ್ದ ಬಿಳಿ ಮೋಡಗಳ ಹಿಂಡು, ಹಾರಾಡುತ್ತಿದ್ದ ಪಕ್ಷಿ ಸಂಕುಲಗಳು, ಆಗಾಗ ಬೀಸಿ ಬರುತ್ತಿದ್ದ ತಂಗಾಳಿ ನಾವು ಒಂದು ರಮ್ಯ ಪರಿಸರದಲ್ಲಿ ಇದ್ದಂತಹ ಅನುಭವ ನಮಗಾಗುತ್ತಿತ್ತು. ಹೀಗಾಗಿಯೆ ಮನೆಯ ಹಿರಿಯರೆಂಬ ಎಲ್ಲ ತೆರಿಗೆದಾರರ ಕಣ್ತಪ್ಪಿಸಿ ಜತನದಿಂದ ಕಾಯ್ದಿರಿಸಿದ್ದ ಒಂದೆರಡು ರೂಪಾಯಿಗಳಿಗೆ ಬರುವ ಹೊಸ ವರ್ಷದಲ್ಲಿ ಆದಷ್ಟು ಹೆಚ್ಚು ಮೊತ್ತ ಸೇರಿಸಿ ಒಟ್ಟಾಗಿಸಲು ಹೆಣಗಾಡುತ್ತ ಆ ಸಂಪತ್ತನ್ನು ಕಾಯ್ದು ಕೊಳ್ಳುತ್ತ ಸಿನೆಮಾ ವೀಕ್ಷಣೆಗೆ ದೊರಕುವ ಅವಕಾಶಗಳಿಗಾಗಿ ಕಾಯ್ದು ನಮ್ಮ ಆಶೆಯನ್ನು ಈಡೇರಿಸಿ ಕೊಳ್ಳುತ್ತಿದ್ದೆವು. ಆದರೆ ಆ ಅವಕಾಶಗಳು ಅಷ್ಟು ಸುಲಭವಾಗಿ ದಕ್ಕುತ್ತಿರಲಿಲ್ಲ. ಅಂತಹ ಅವಕಾಶವೊಂದು ದೊರೆತರೆ ಅದೊಂದು ತರಹ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಲು ಅವಕಾಶ ಗಿಟ್ಟಿಸಿ ಕೊಂಡಂತಹ ಸಾರ್ಥಕ ಅನುಭವ. ಹಿರಿಯರ ಹದ್ದಿನ ಕಣ್ಣು ತಪ್ಪಿಸಿ ಇಂತಹ ಅವಕಾಶಗಳನ್ನು ಹೊಂದಲು ಚತುರ ಬುದ್ಧಿ ಶಕ್ತಿ ಉಪಯೋಗಿಸ ಬೇಕಾಗುತ್ತಿತ್ತು. ಅವಕಾಶಗಳ ಸದ್ಬಳಕೆಯ ರೀತಿಗಳು ಗೊತ್ತಿರ ಬೇಕಿತ್ತು. ಇವೆಲ್ಲವುಗಳಿಗೆ ಮಿಗಿಲಾಗಿ ಈ ರಹಸ್ಯಗಳು ಎಲ್ಲಿಯೂ ಯಾರಿಗೂ ಗೊತ್ತಾಗಬಾರದು ಎಂಬ ಅಲಿಖಿತ ಒಪ್ಪಂದ ಸಹ ಸಹ ಮನಸ್ಕ ಸ್ನೇಹಿತ ರಲ್ಲಿರುತ್ತಿತ್ತು. ಈಗಿನ ಪಾಲಕ ರಲ್ಲಿರುವಷ್ಟು ಉದಾರತನ ಆಗಿನ ಕಾಲದ ಪಾಲಕರಲ್ಲಿರಲಿಲ್ಲವೆಂದೇ ಹೇಳಬೇಕು. ಇದು ಪ್ರಮುಖವಾಗಿ ಗಮನಿಸ ಬೇಕಾದ ಅಂಶ.
*
ಇಷ್ಟೆಲ್ಲ ಅಡೆತಡೆಗಳ ಮಧ್ಯೆಯೂ ಗುಡಿಕೇರಿ ಹೈಸ್ಕೂಲ್ ನಲ್ಲಿ ಡ್ರಾಯಿಂಗ್ನ ಎಲಿಮೆಂಟರಿ ಪರೀಕ್ಷೆಗೆ ಕಟ್ಟಿದ್ದೆವು. ಆದರೆ ಪರೀಕ್ಷಾ ಕೇಂದ್ರ ಲಕ್ಷ್ಮೀಪುರದಲ್ಲಿತ್ತು. ಆ ಪರೀಕ್ಷೆಗೆ ಒಟ್ಟು ಆರು ಪೇಪರುಗಳಿದ್ದು ದಿನಕ್ಕೆರಡರಂತೆ ಮೂರು ದಿನಗಳು ಹಾಗೂ ಅಲ್ಲಿಗೆ ಹೋಗಲು ಒಂದು ದಿನ ಮತ್ತು ಪರೀಕ್ಷೆಯ ನಂತರ ಒಂದು ದಿನದ ಒಟ್ಟು ನಾಲ್ಕೈದು ದಿನಗಳ ವಾಸ್ತವ್ಯವನ್ನು ನಾವು ಲಕ್ಷ್ಮೀಪುರದಲ್ಲಿ ಮಾಡಬೇಕಿತ್ತು. ಈ ಪರೀಕ್ಷಾ ದಿನಗಳಲ್ಲಿ ದೊರೆವ ಸಿನೆಮಾ ನೋಡುವ ಅವಕಾಶಗಳನ್ನು ಅವರವರ ಆರ್ಥಿಕ ಅನುಕೂಲಕ್ಕನುಗುಣವಾಗಿ ಹೊಂದಿಸಿಕೊಂಡು ಸುದುಪಯೋಗ ಪಡಿಸಿಕೊಳ್ಳುವುದು ಆಗಿನ ಹೆಚ್ಚಿನ ಪರೀಕ್ಷಾರ್ಥಿಗಳ ಹಿಡನ್ ಅಜೆಂಡಾ ಆಗಿರುತ್ತಿತ್ತು. ಅಂತಹ ಪರೀಕ್ಷಾರ್ಥಿಗಳ ಪೈಕಿ ನಾನೂ ಒಬ್ಬನಾಗಿದ್ದು ಪರೀಕ್ಷೆಗೆ ಬರೆದು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದೆ. ಆ ಪರೀಕ್ಷಾ ದಿನಗಳ ಸಾಯಂಕಾಲದ ಸಮಯವನ್ನು ಸದ್ಬಳಕೆ ಮಾಡಿಕೊಂಡು ಜೊತೆಗೆ ತಂದಿದ್ದ ಸ್ವಯಾರ್ಜಿತ ಹಣದ ಇಡುಗಂಟನ್ನು ಖರ್ಚುಮಾಡಿ ಆ ಕಾಲದ ಜನಪ್ರಿಯ ನಟ ಭಗವಾನ ಅಭಿನಯದ ' ಜಾದೂಯಿ ಶತರಂಜಿ ', ದಿಲೀಪ ಕುಮಾರ, ಮೀನಾಕುಮಾರಿ ಮತ್ತು ಪ್ರಾಣ ಆಭಿನಯದ ' ಆಜಾದ ', ಹಾಗೂ ಬಲರಾಜ ಸಹಾನಿ ಮತ್ತು ನರ್ಗೀಸ್ ಅಭಿನಯದ ' ಲಾಜವಂತಿ ' ಎಂಬ ಹಿಂದಿ ಚಿತ್ರಗಳನ್ನು ನೋಡಿ ಆನಂದಿಸಿದ್ದೆವು. ಮರುವರ್ಷ ಸಹ ಇಂಟರ ಮೀಡಿಯಟ್ ಪರೀಕ್ಷೆಗೆ ಕಟ್ಟಿ ಆವಾಗಲೂ ಸಹ ರಾಜಕುಮಾರ, ಉದಯಕುಮಾರ, ಲೀಲಾವತಿ ಅಭಿನಯದ ' ವೀರ ಕೇಸರಿ ' ಚಿತ್ರಗಳನ್ನು ನೋಡಿ ನಾವೆಲ್ಲರೂ ನಮ್ಮ ದೀರ್ಘ ಕಾಲದ ಮನದಾಶೆಯನ್ನು ಈಡೇರಿಸಿಕೊಂಡ ಹೆಮ್ಮೆ ನಮ್ಮದಾಗಿತ್ತು. ಗತಿಸಿಹೋದ ಹಿರಿಯರ ಅದರಲ್ಲೂ ವಿಶೇಷವಾಗಿ ಈಗಿರುವ ಸ್ನೇಹಿತರಲ್ಲಿ ನಮ್ಮ ಗುಟ್ಟು ರಟ್ಟು ಮಾಡಿದ ಬಗ್ಗೆ ಕ್ಷಮೆ ಕೋರುವೆ. ಇನ್ನೊಂದು ಸಿನೆಮಾ ನೋಡಲು ಸಿಕ್ಕ ಅವಕಾಶದ ಸದ್ಬಳಕೆಯನ್ನು ಮಾಡಿಕೊಂಡ ಪ್ರಸಂಗವನ್ನು ವಿವರಿಸದೆ ಹೋದರೆ ಈ ಸಿನೆಮಾ ವೀಕ್ಷಣೆಯ ಯಶೋಗಾಥೆ ಪೂರ್ಣವಾಗುವುದಿಲ್ಲ.
1962 ರಲ್ಲಿ ನೇಫಾ ಗಡಿಯಲ್ಲಿ ಚೈನಾ ಮಾಡಿದ ವಿಶ್ವಾಸ ದ್ರೋಹದ ಯುದ್ಧದ ಕಹಿ ನೆನಪು ಆರುವ ಮುನ್ನವೆ1965 ರಲ್ಲಿ ನಮ್ಮ ನೆರೆಯ ದೇಶ ಪಾಕಿಸ್ತಾನ ಪಶ್ಚಿಮದ ನಮ್ಮ ಗಡಿ ಪ್ರದೇಶಗಳಾದ ರಾಜಸ್ಥಾನ ಮತ್ತು ಗುಜರಾತ ಗಳಲ್ಲಿ ಆಕ್ರಮಿಸಿ ಯುದ್ಧ ಪ್ರಾರಂಭಿಸಿತು. ಇನ್ನೂ ಪೂರ್ಣ ಪ್ರಮಾಣದ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರದ ಮತ್ತು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸದೆ ಇದ್ದು ಅಮೇರಿಕದ ಸಹಾಯ ಹಸ್ತದೆಡೆ ಕಣ್ಣಿಟ್ಟು ಕುಳಿತಿದ್ದಂತಹ ಕಾಲಮಾನ ನೆಹರೂ ಗತಿಸಿ ಹೋಗಿದ್ದರು. ಆದರೂ ಬಹುತೇಕ ರಾಜಕಾರಣಿಗಳಲ್ಲಿ ದೇಶ ಪ್ರೇಮ ವಿತ್ತು. ದೇಶದ ಬಗ್ಗೆ ಜನ ಸಾಮಾನ್ಯರ ಬಗೆಗೆ ಕಳಕಳಿಯಿತ್ತು. ಜನತೆ ಸಹ ಜನನಾಯಕರನ್ನು ತಮ್ಮ ಐಕಾನ ಗಳೆಂದು ಪರಿಗಣಿಸಿದ್ದಂತಹ ದಿನಮಾನಗಳು. ಆ ಘೋಷಣೆಯಾದ' ಜೈ ಜವಾನ ಜೈ ಕಿಸಾನ ' ದೇಶವ್ಯಾಪಿಯಾಗಿ ಹರಡಿದ್ದು. ಯುದ್ಧ ಮುಗಿದು ಶಾಂತಿ ಸ್ಥಾಪನೆಯಾಗುವ ವರೆಗೆ ಪ್ರತಿ ಸೋಮವಾರ ರಾತ್ರಿ ಊಟ ಬಿಟ್ಟು ನಾಯಕರ ಹೇಳಿಕೆಗೆ ಇಡೀ ದೇಶವೇ ಸ್ಪಂದಿಸಿತ್ತು. ಅದನ್ನು ಈಗ ಹೇಳಲು ಹೆಮ್ಮೆ ಎನಿಸುತ್ತದೆ. ಇಂತಹ ಸೂಕ್ಷ್ಮ ಸಂಧರ್ಭ ವೊಂದರಲ್ಲಿಯೆ ನಮ್ಮ ಸಿನೆಮಾ ವೀಕ್ಷಣೆಯ ಯೋಜನೆ ಯಶಸ್ವಿಯಾದದ್ದು. ಆ ಸಿನೆಮಾವೀಕ್ಷಣೆಯ ಹಣವನ್ನು ನಮ್ಮ ನಮ್ಮ ಮನೆಗಳ ಹಿರಿಯರಿಂದಲೆ ವಸೂಲಿ ಮಾಡಿದ್ದು ನಮ್ಮೆಲ್ಲರ ಕಾರ್ಯ ತಂತ್ರದ ಹೆಚ್ಚುಗಾರಿಕೆ ಎಂದು ಹೇಳಬಲ್ಲೆ. ಅದು ಒಂದು ಆತ್ಮ ವಂಚನೆ ಎಂದು ಅಂತರಾತ್ಮ ಚುಚ್ಚುತ್ತಿದ್ದರೂ ಇದಕ್ಕೆ ಕಾರಣರಾರು? ಆ ಹಿರಿಯ ತಲೆಮಾರಿನ ಗೊಡ್ಡು ಸಂಪ್ರದಾಯ ವಾದಿಗಳು ಎಂದು ಅಂತರಾತ್ಮಕ್ಕೆ ವಿವರಿಸಿ ಮುಂದುವರಿದು ಸಿನೆಮಾ ವೀಕ್ಷಿಸಿದ್ದು. ಗಾಂಧೀಜಿ ಯಂತಹ ಗಾಂಧೀಜಿಯೆ ತನ್ನ ಜೀವನದಲ್ಲಿ ಸುಳ್ಳು ಹೇಳಿದ್ದನ್ನು ಒಪ್ಪಿ ಕೊಂಡಿರುವಾಗ ನಾವೂ ಸಹ ಅನಿವಾರ್ಯ ಸಂಧರ್ಭದಲ್ಲಿ ಸುಳ್ಳು ಹೇಳಿ ಅವಕಾಶ ಗಿಟ್ಟಿಸಿಕೊಂಡರೆ ಅದು ತಪ್ಪಲ್ಲ ಎಂದು ನಮಗೆ ನಾವೆ ಸಮಾಧಾನ ಪಟ್ಟುಕೊಂಡು ಯಶಸ್ವಿಯಾದದ್ದು ಒಂದು ರೋಚಕ ಸಾಧನೆ.
ಆಗ ನಾವು ಹೈಸ್ಕೂಲ್ ಓದುತ್ತಿದ್ದ ಗುಡಿಕೆರೆಯಲ್ಲಿ ರಾಜಶ್ರೀ ಟೂರಿಂಗ ಟಾಕೀಸ್ ಬಂದಿತ್ತು. ಅಲ್ಲಿ ಕನ್ನಡ ಚಿತ್ರಗಳು ತಮ್ಮ ತಮ್ಮ ಗುಣಮಟ್ಟ ಮತ್ತು ಸ್ಟಾರ್ ಕಾಸ್ಟ್ಗಳ ಆಧಾರದಲ್ಲಿ ಒಂದು ಇಲ್ಲವೆ ಎರಡು ವಾರ ಪ್ರದರ್ಶನ ಕಾಣುತ್ತಿದ್ದವು. ಆದರೆ ಹಿಂದಿ ಚಿತ್ರಗಳ ತಾರಾಗಣ ಚಿತ್ರಗಳ ಗುಣಮಟ್ಟ ಎಷ್ಟೇ ಮೇಲ್ದರ್ಜೆಯವಾಗಿದ್ದರೂ ಅವುಗಳ ಪ್ರದರ್ಶನ ಅವಧಿ ಮೂರು ನಾಲ್ಕು ದಿನಗಳನ್ನು ದಾಟುತ್ತಿರಲಿಲ್ಲ. ಆಗ ರಾಷ್ಟ್ರೀಯ ರಕ್ಷಣಾ ನಿಧಿಗೆ ನಮ್ಮ ಹೈಸ್ಕೂಲ್ ನಿಂದ ಹಣ ಸಂಗ್ರಹಿಸುವ ಅಂಗವಾಗಿ ಆ ಟಾಕೀಸ್ನ ಮಾಲಿಕರು ರಿಯಾಯ್ತಿ ದರದಲ್ಲಿ 'ಹಕೀಕತ್' ಎಂಬ ಹಿಂದಿ ಸಿನೆಮಾ ಪ್ರದರ್ಶನವನ್ನು ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲು ಒಪ್ಪಿದರು. ಮುಂದೆ ಬರಲಿರುವ ಆ ಶುಭ ಸಂಧರ್ಭಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ಇದಕ್ಕೆ ನಮ್ಮ ನಮ್ಮ ಮನೆಗಳ ಹಿರಿಯರುಗಳು ಒಪ್ಪದೆ ಇರಲು ಸಾಧ್ಯವಿಲ್ಲವೆಂಬ ನಮ್ಮ ನಿರೀಕ್ಷೆ ಹುಸಿಯಾಯಿತು. ನೆಲಕ್ಕೆ 40 ಪೈಸೆ, ಬೆಂಚಿಗೆ 50 ಪೈಸೆ ಮತ್ತು ಖುರ್ಚಿಗೆ 75 ಪೈಸೆಗಳನ್ನು ನಿಗದಿ ಪಡಿಸಿದ್ದರು. ಖುರ್ಚಿ ಬೇಂಚಗಳು ನಮ್ಮ ಆದ್ಯತೆಗಳಾಗಿರಲಿಲ್ಲ, ಮೇಲಾಗಿ ಅಷ್ಟು ಹಣವನ್ನು ಮನೆಯಲ್ಲಿ ಕೊಡುವುದು ಅಸಂಭವವಾಗಿತ್ತು. .ಮೇಲಾಗಿ ಶಿಕ್ಷಕ ವೃಂದದೊಂದಿಗೆ ಸರಿ ಸಮಾನರಾಗಿ ಕುಳಿತು ಕೊಳ್ಳಲು ಮನ ಒಪ್ಪದುದು ಪ್ರಮುಖ ಅಂಶವಾಗಿತ್ತು. ಹೀಗಾಗಿ ಈ ಬೆಂಚು ಖುರ್ಚಿಗಳ ಸಹವಾಸವೆ ಬೇಡ ಎಂದು ನಮ್ಮ ಆದರ್ಶ ಪುರುಷ ಗಾಂಧಿಯನ್ನು ನೆನಪಿಸಿಕೊಂಡು ಗಾಂಧಿ ಸೀಟು ಎಂದು ಜನಜನಿತವಾಗಿದ್ದ ನೆಲಕ್ಕೆ ಹೋಗೋಣವೆಂದು ನಿರ್ಧರಿಸಿದೆವು. ಆ ದಿನ ರೈಲಿನಿಂದಿಳಿದು ಮನೆಗೆ ಹೋದ ತಕ್ಷಣವೆ ರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಏರ್ಪಡಿಸಿರುವ ಸಿನೆಮಾ ಪ್ರದರ್ಶನದ ಕುರಿತು ಹೇಳಿದೆವು. ಆದರೆ ಇದಕ್ಕೆ ನಮ್ಮ ನಮ್ಮ ಮನೆಗಳ ಹಿರಿಯ ತಲೆಗಳಿಂದ ಬಂದ ಪ್ರತಿಕ್ರಿಯೆ ನೀರಸವಾಗಿತ್ತು. ಇನ್ನೂ ಐದಾರು ದಿವಸಗಳ ಸಮಯವಿದೆ, ಅದೂ ಅಲ್ಲದೆ ಅವರು ನಮ್ಮ ಮುಂದೆ ಇಟ್ಟ ಪ್ರಮುಖ ಪ್ರಶ್ನೆ 'ಯಾವ ಸಿನೆಮಾ ತೋರಿಸುತ್ತಾರಂತೆ' ಎಂಬುದಾಗಿತ್ತು. 'ಹಕೀಕತ್' ಸಿನೆಮಾ ಎಂದು ನಾವೆಲ್ಲ ಹೇಳಿದ್ದರೆ, ನಮ್ಮ ಸಹಪಾಠಿ ಶಿವಣ್ಣ ಆ ದಿನ ನಡೆಯುತ್ತಿದ್ದ ದೇವ ಆನಂದ, ನೂತನ ಅಭಿನಯದ 'ತೆರೆ ಘರಕೆ ಸಾಮನೆ' ಚಿತ್ರದ ಹೆಸರು ಹೇಳಿ ಒಂದು ಎಡವಟ್ಟು ಮಾಡಿ ಬಿಟ್ಟಿದ್ದ. ನಮ್ಮ ನಮ್ಮ ಹಿರಿಯರ ಒಕ್ಕೂಟದ ಕಟ್ಟೆ ಮೀಟಿಂಗ್ಗಳಲ್ಲಿ ಈ ವಿಷಯ ಬಹಳ ಗಂಭೀರವಾದ ಚರ್ಚೆಗೆ ಬಂದು ನಿಜಕ್ಕೂ ಆ ದಿನ ಪ್ರದರ್ಶನಗೊಳ್ಳುವ ಚಿತ್ರ ಯಾವುದು ಎಂದು ಆ ಹಿರಿಯ ತಲೆಗಳು ತಕರಾರು ಎತ್ತಿದವು. ನಾವು ರಕ್ಷಣಾ ನಿಧಿಯ ಹಣ ಕೇಳಲು ಹೋದರೆ, ನೀವು ನೋಡಿದರೆ 'ಹಕೀಕತ್' ಎಂಬ ದೇಶ ಭಕ್ತಿಯ ಸಿನೆಮಾ ಎನ್ನುತ್ತೀರಿ, ಆ ಶಿವಣ್ಣ ನೋಡಿದರೆ ಬೇರೆ ಯಾವುದೋ ಸಿನೆಮಾದ ಹೆಸರು ಹೇಳುತ್ತಾನೆ, ನಿಮ್ಮಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ರಕ್ಷಣಾ ನಿಧಿಯಹಣ 40 ಪೈಸೆಯನ್ನು ಒಯ್ದು ಕೊಟ್ಟು ಬಿಡಿ, ಆದರೆ ಆ ಸುಟ್ಟು ಸುಡುಗಾಡು ಸಿನೆಮಾ ನೋಡುವುದು ಬೇಡ ಎಂಬುದು ಎಂಬುದು ಅವರುಗಳ ಅಭಿಪ್ರಾಯ ವಾಗಿತ್ತು. ಅದೂ ಅಲ್ಲದೆ ಅವರುಗಳು ಇನ್ನೂ ಒಂದು ವಿಷಯವನ್ನು ಮುಂದೆ ಮುಂದೆ ಮಾಡಿದ್ದರು. ರಕ್ಷಣಾನಿಧಿಗೆ ಹಣ ಎನ್ನುತ್ತೀರಿ ಅದಕ್ಕೆ ನಮ್ಮ ಸ್ವಂತ ದುಡಿಮೆಯ ಹಣ ಕೊಟ್ಟರೆ ಒಳ್ಳೆಯದು ಎಂದು ನಯವಾಗಿ ನಮ್ಮ ನಮ್ಮ 'ಗುಪ್ತಧನಕ್ಕೆ' ಸಂಚಕಾರ ತರಲು ಹುನ್ನಾರ ಮಾಡಿದ್ದರು. ರಕ್ಷಣಾ ನಿಧಿಗೆ ಹಣ ಕೊಡುವುದಾದರೆ ಅವರೆ ಕೊಡಲಿ ಇಲ್ಲದಿದ್ದರೆ ಇಲ್ಲ. ಹೈಸ್ಕೂಲ್ನಲ್ಲಿ ಮತ್ತು ಊರಲ್ಲಿ ಅವರ ಮಾನ ಹೋಗುತ್ತದೆ ಎಂದು ನಾವೆಲ್ಲ ಗಟ್ಟಿ ನಿಲುವು ತಳೆದೆವು. ಈ ಎಲ್ಲ ಸಮಸ್ಯೆಗೆ ಕಾರಣನಾದ ಶಿವಣ್ಣನನ್ನು ಎಲ್ಲರೂ ಬೈದು ಖಂಡಿಸಿದವರೆ. ಅನಾಯಾಸವಾಗಿ ಒದಗಿಬಂದ ಸಿನೆಮಾ ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ನಮ್ಮ ಸಹಪಾಠಿ ಸ್ನೇಹಿತರೆಲ್ಲ ವಿಚಾರ ವಿನಿಮಯ ಮಾಡಿ ಶಿವಣ್ಣನ ತಂದೆಗೆ ರಕ್ಷಣಾ ನಿಧಿ ಸಂಗ್ರಹಣೆಗೆ ಏರ್ಪಡಿಸಿರುವ ಸಿನೆಮಾ 'ಹಕೀಕತ್' ಎಂದು ನಂಬಿಸಿ ಹೇಳಬೇಕೆಂದು ಶಿವಣ್ಣನ ಪಕ್ಕದ ಕೇರಿಯ ಹುಡುಗರಿಗೆ ಹೇಳಿದರು. ಅವರ ಮಾತಿಗೆ ಶಿವಣ್ಣ ತಂದೆ ಒಪ್ಪದೆ ನಿಮ್ಮನ್ನು ನಂಬಲಾಗು ವುದಿಲ್ಲ ಎಂದಸು ಮುಖಕ್ಕೆ ಹೊಡೆದಂತೆ ಹೇಳಿ 'ನೀವು ಕದ್ದು ಸಿಗರೇಟು ಸೇದಲು ಪ್ರಯತ್ನಿಸಿದವರು, ನಿಮ್ಮಂತಹ ಫಟಿಂಗರನ್ನು ನಂಬಲಾಗದು ಎಂದು ನಕಾರಾತರ್ಮಕ ಧೋರಣೆ ತಳೆದರು. ಮಾರನೆ ದಿನ ನಾವು ಗಾಡಿಯಲ್ಲಿ ಪಯಣಿಸುವಾಗ ಅವರು ನಮಗೆ ನಡೆದ ವಿಷಯ ತಿಳಿಸಿ ಶಿವಣ್ಣನ ತಂದೆಯನ್ನು ಬೈದರು, ಶಿವಣ್ಣ ಅವರ ಮೇಲೆ ಸಿಟ್ಟಾದ. ಎಲ್ಲ ಸೇರಿ ಆ ಮೂವರನ್ನೂ ಸಮಾಧಾನ ಪಡಿಸಿದೆವು. ಮತ್ತೆ ಮರಳಿ ಸಾಯಂಕಾಲ ರೈಲಿನಲ್ಲಿ ಬರುವಾಗ ಸಭೆ ಸೇರಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಅಸಹಕಾರ ಧೋರಣೆ ತಳೆಯಬೇಕು ಎಂದು ತೀರ್ಮಾನಿಸಿದೆವು. ಅದರಂತೆ ಕಾರ್ಯ ಪ್ರವೃತ್ತರಾದೆವು ಕೂಡ. ಹೋಂ ವರ್ಕನ್ನು ಬಿಡುವಿನ ಅವಧಿಯಲ್ಲಿ ಹೈಸ್ಕೂಲ್ ನಲ್ಲಿಯೆ ಮಾಡಿ ಮನೆಯಲ್ಲಿ ಓದಿನ ಬಗ್ಗೆ ಉದಾಸೀನತೆ ತೋರಿದೆವು. ಓದು ಮತ್ತು ಊಟ ತಿಂಡಿಗಳಲ್ಲಿನ ಅನ್ಯ ಮನಸ್ಕತೆಗಳ ನೇರ ಪರಿಣಾಮ ವಾದದ್ದು ಹಿರಿಯ ಹೆಣ್ಣು ಜೀವಗಳ ಮೇಲೆ, ಅವರು ತಮ್ಮ ತಮ್ಮ ಹುಡುಗರ ಪರವಾಗಿ ರಾಯಭಾರಿಕೆಗೆ ತೊಡಗಿ 'ಎಲ್ಲ ಹುಡುಗರೂ ಹೋಗುತ್ತಾರೆ ಇವರೂ ಹೋಗಿ ಬರಲಿ. ಒಂದು ಸಿನೆಮಾ ನೋಡುವುದರಿಂದ ಯಾರೇನೂ ಹಾಳಾಗಿ ಹೋಗುವುದಿಲ್ಲ ಎಂದು ವಾದಕ್ಕೆ ನಿಂತರು. ಅದಕ್ಕೆ ಹಿರಿಯರ ಉತ್ತರ ಸಿದ್ಧವಾಗಿರುತ್ತಿತ್ತು, ಹುಬ್ಬಳ್ಳಿಗೆ ಹೋಗಿ ಕದ್ದು ಸಿನೆಮಾ ನೋಡಿ ಬರುವವರ ಪ್ರವರವನ್ನೆ ಅವರು ಬಿಚ್ಚಿಡುತ್ತಿದ್ದರು. ಇಂತಹ ತಕರಾರಿಗೆ ಅವರು ಬಗ್ಗದೆ ಅವರು ಅನುಕೂಲವಂತರ ಮಕ್ಕಳು ಅವರೊಂದಿಗೆ ನಮ್ಮ ಮಕ್ಕಳ ಹೋಲಿಕೆ ಬೇಡ ಎಂದು ಹಟಕ್ಕೆ
ಬಿದ್ದರು.
( ಮುಂದುವರಿದುದು )
*
Comments
ಸಂಪದರಿಗೆ ನಮಸ್ಕಾರಗಳು,
ಸಂಪದರಿಗೆ ನಮಸ್ಕಾರಗಳು,
ಈ ಲೇಖನದ ತಲೆಬರಹದಲ್ಲಿ ಭಾಗ 7 ಎಂಬ ಅಂಶ ಕಣ್ತಪ್ಪಿನಿಂದ ಬಿಟ್ಟು ಹೋಗಿದೆ. ಇದು ಭಾಗ 6 ರ ಮುಂದುವರೆದ ಭಾಗ.
ವಂದನೆಗಳು
In reply to ಸಂಪದರಿಗೆ ನಮಸ್ಕಾರಗಳು, by H A Patil
ಹಿರಿಯರೇ
ಹಿರಿಯರೇ
ಸಿನೆಮ ಕಥೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ..
ಬರಹದಲ್ಲಿನ ಹಲವು ಪ್ರಸಂಗಗಳು-ಸನ್ನಿವೇಶಗಳು-ನಿಮ್ಮ ಬಾಲ್ಯ-ತಾರುಣ್ಯದ ದಿನಗಳ -
ಮತ್ತು ಅಂದಿನ ಭಾರತದ ಸಾಮಾಜಿಕ -ಸ್ವಾತಂತ್ರ್ಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತಿದೆ..
ಸಂಪದದಲ್ಲಿ ಅದೆಸ್ಟು ಬರಹಗಳ ಮಧ್ಯೆ ನಿಮ್ಮದು ಆಪ್ತವಾದ -ವಿಶೇಷ ಬರಹ ಎಂದು ಖಚಿತವಾಗಿ ಹೇಳಬಲ್ಲೆ..
ಮುಂದಿನ ಭಾಗಗಳ ನಿರೀಕ್ಷೆಯಲ್ಲಿ..
ಶುಭವಾಗಲಿ..
\|/
In reply to ಹಿರಿಯರೇ by venkatb83
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಕಥಾನಕದ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.