'' ಸಿನೆಮಾ ''(ಕಥೆ).....ಭಾಗ 11

'' ಸಿನೆಮಾ ''(ಕಥೆ).....ಭಾಗ 11

ಚಿತ್ರ

 


 


 


                        


     ' ಏನು ಹೇಳೊದ್ರಿ ಕನ್ನಡ ಸಾಲಿ ಕಲಿಯೋ ಮುಂದನ ನಾ ಹಾದಿ ಬಿಟ್ಟದ್ದೆ. ಚುಟ್ಟಾ ಸಿಗರೇಟು ಸೇದ್ತಿದ್ದೆ, ಎಲಡಕಿ ಹಾಕ್ತಿದ್ದೆ, ಓದೋದು ಬರ್ಯೋದು ನನಗ ಆಗತಿರಲಿಲ್ಲರಿ, ನಮ್ಮಪ್ಪ ರಾತ್ರಿ ಕುಡದು ಬಂದು ಹೊಡ್ಯೋಂವ, ನಮ್ಮಪ್ಪ ನಮ್ಮಮ್ಮಗೂ ಹೊಡಿತಿದ್ನರಿ. ಮನ್ಯಾಗೂ ಹೊಡತ ಸಾಲ್ಯಾಗೂ ಹೊಡತ ಹಿಂಗಾಗಿ ನನ್ನ ತಲಿಗೆ ವಿದ್ಯಾ ಹತ್ತಲಿಲ್ಲರಿ. ನೀವೆಲ್ಲ ಸರ್ಯಾಗಿನ ಓದ್ತಿದ್ದಿರಿ. ನಿಮ್ಮಂಥ ಓದೋವ್ರ್ನ ನೋಡಿ ನನಗ ಹೊಟ್ಟಿಕಿಚ್ಚು ಆಗ್ತಿತ್ತು, ಆವಾಗ ನಿಮಗೆಲ್ಲ ತೊಂದ್ರಿ ಮಾಡೇನಿ, ಸುಹಾಸಂದೂ ಸಹ ನನ್ನಂಥಾ ಹಣೆಬರಾನ, ಇನ್ನ ಚನವೀರ ಆಳ್ತನದಾಗ ನಮ್ಮೆಲ್ಲರಗಿಂತನೂ ಧಾಂಡಿಗನ ಅವನೂ ಸಹ ಭಾಳ ದುಷ್ಟಾ ಇದ್ದ. ನಾವು ಮನಿಗೆ ಹೋಗೋಮುಂದ ಅವನ ಮನಿಮುಂದನ ಹಾಸಿ ಹೋಗ ಬೇಕಾಗತಿತ್ತು. ಅವರ ಅಂಗಡ್ಯಾಗ ಅವರಪ್ಪ ದೊಡ್ಡಪ್ಪ ಇಲ್ಲದಿದ್ದಾಗ ದಾರ್ಯಾಗ ಹೋಗೋ ಹುಡುಗ್ರನ್ನ ಹೊಡೆಯೋದು ಬೈಯ್ಯೋದು ಮಾಡ್ತಿದ್ದ. ನಮಗೂ ಅಂಜಿಕಿ ಅಗತಿತ್ತು. ಅಂವಗ ತಿರುಗಿ ಹೊಡಿಯೋ ಬೈಯ್ಯೋ ಧೈರ್ಯ ನಮಗಿರಲಿಲ್ಲ. ಹೀಂಗಾಗಿ ಅವನ ಜೊತೆ ಸೇರ್ಕೊಂಡು ಸಭ್ಯ ಹುಡುಗರಿಗೆ ತೊಂದರೆ ಕೊಡೊದು ಹೊಡೆಯೋದನ್ನ ನಾವೂ ಸುರುವು ಮಾಡಿದ್ವಿ. ನಿನಗೂ ಗೊತ್ತಿರಬೇಕು ದೇಶಪಾಂಡೆ ವೆಂಕೋಬರಾಯರ ಮಗ ರಾಮ ಒಂದ್ಸಲ ನಮ್ಮೋಣಿಗೆ ಗಣಪತಿ ನೋಡ್ಲಿಕ್ಕೆ ಬಂದಾಗ ನಾವು ಮೂರೂ ಜನ ಅಂವನ ಸುಖಾ ಸುಮ್ಮನ ಹಿಡ್ಕೊಂಡು ಚುರ್ಚಿಗಿಡಾ ತುಗೊಂಡು ಮಾರಿ ಮುಸಡಿ ನೋಡದ್ಹಾಂಗ ಹೊಡದಿದ್ವಿ. ಹುಷಾರಿಲ್ಲದ್ಹಂಗ ಆಗಿ ಎರಡು ದಿನ ಅಂವಾ ಸಾಲಿಗೆ ಬರಲಿಲ್ಲ, ಮೂರನೆ ದಿನಾ ಅಂವಾ ಸಾಲಿಗೆ ಬಂದಾಗ ಚೆನ್ನಪ್ಪ ಮಸ್ತರು ಅಂವಗ ವಿಚಾರ ಮಾಡಿದಾಗ ಅಂವ ಹುಷಾರಿಲ್ಲ ಅಂದ. ಅವರು ಅಂವಗ ಸುಳ್ಳ ಹೇಳ್ತಿಯಾ ಮಗನ ಎಂದು ಅವನ್ನ ಬೈದು ಹಲ್ಕಟ್ ಮಾತೆಲ್ಲ ಆಡಿ ಭಾಳ ಹೊಡದ್ರೂ ಅಂವಾ ನಾವು ಹೊಡದ ವಿಷಯ ಹೇಳ್ಳಿಲ್ಲ. ಆಗ ನನಗ ಬ್ಯಾಸರಾತು, ಚನವೀರ ಸುಹಾಸ ನಗತಿದ್ರು. ಅಂವಾ ಆ ದಿನದಿಂದ ಸಾಲಿಗೇ ಬರಲಿಲ್ಲ. ಅವರಪ್ಪ ತೀರ್ಕೊಂಡ ಮ್ಯಾಲ ಅವರವ್ವ ಇವನ ಜೋಡಿ ಧಾರವಾಡಕ್ಕ ಹೋಗಿ ಅಡಿಗಿ ನೀರು ಮಾಡಿ ಅವನ್ನ ಬೇಳಸಿದ್ಲು. ಅಂವಾಗೂ ಛೊಲೊತಂಗ ಓದಿ ಈಗ ದೊಡ್ಡ ನೌಕರಿರಿ ಮಾಡ್ಲಿಕ್ಕೆ ಹತ್ಯಾನಂತ. ಆದರ ನಮ್ಮ ಹಣೆಬರ ಎಂಥಾದ್ದು ನೋಡು ನಾವು ಮೂರು ಜನಾನೂ ಸರ್ಯಾಗಿ ಓದ್ಲಿಲ್ಲ. ಸಿನೆಮಾ ಹೋಟಲ್ ತಿಂಡಿ ಷೋಕಿ ಬೇಳಿಸಿಕೊಂಡ್ವಿ, ದುಡ್ಡು ಕದಿಯೋಕ ಸುರುವು ಮಾಡಿದ್ವಿ. ನಮ್ಮ ಸಿನೆಮಾ ಸಾಹಸದ ಕಥಿ ನಿನಗೂ ಗೊತ್ತದ ಅಲ್ಲ, ಸದಾಶಿವ ನನ್ನ ನಿಮಗ ಪರಿಚಯ ಮಾಡ್ಸೋವಾಗ ಹೇಳಿದ್ನಲ್ಲ 'ಗೋಕುಲ ಕಾ ಚೋರ್ ' ಅಂತ.


     ' ಏ ಸದಾಶಿವ ಗೆಳತನದ ಸಲಿಗಿ ಮ್ಯಾಲ ನಿಮಗ ಹಾಂಗ ಅಂದಾನ ನಿಮಗ ಅವಮಾನ ಮಾಡೋ ಉದ್ದೇಶ ಅವಂದಲ್ಲ ' ಎಂದು ಮಾದೇವ ಸದಾಶಿವನ ನಡವಳಿಕೆಯನ್ನು ಸಮಥರ್ಿಸಿ ಕೊಳ್ಳಲು ನೋಡಿದ.


     ' ಅದು ನನಗ ಗೊತ್ತದ ಸದಾಶಿವನ ಅಂತಃಕರಣ ಎಂಥಾದು ಅಂತ ನಿಮಗಿಂತ ಹೆಚ್ಚಾಗಿ ನನಗ ಗೊತ್ತು, ಅವನ ಮ್ಯಾಲ ನನಗ ಸಿಟ್ಟಿಲ್ಲ.. ಆ ಘಟನೆ ಅವಮಾನ ದಿಂದರ ನಾವು ಹೋಗ್ಲಿ ನಾನಾದರೂ ಪಾಠಾ ಕಲಿ ಬೇಕಿತ್ತು. ಮನ್ಯಾಗಿನ ಕಷ್ಟದ ಬದುಕು ನನಗ ಏಣು ಮಾಡ್ಬೇಕು ಅಂತನ ಹೊಳಿಲಿಲ್ಲ. ನೀವೆಲ್ಲ ಕೆಲವರು ಮುಲ್ಕಿ ಕಟ್ಟಿ ಪಾಸಾದ್ರಿ, ನಾವೂ ಹಂಗೂ ಹೀಂಗೂ ಏಳನೆ ಎತ್ತಾ ಪಾಸಮಾಡಿದ್ವಿ. ನಾನು ಹುಬ್ಬಳ್ಳಿಗೆ ಸಂಬಂದಿಕರ ಮನ್ಯಾಗ ಇದ್ದು ಹೈಸ್ಕೂಲ್ಗೆ ಮಣ್ಣು ಹೊತ್ತೆ ಅಷ್ಟ ಸರ್ಯಗಿ ಓದಲ್ಲಿಲ್ಲ, ನನ್ನ ಕಷ್ಟ ಎಲ್ಲ ಮರ್ಯಾಕ ಸಿನೆಮಾ ಹುಚ್ಚು ಬೆಳಸಿಕೊಂಡೆ, ಆ ಸಿನೆಮಾದಾಗ ನಡಿಯೋ ಸುಖ ದುಃಖ ಎಲ್ಲಾ ನನ್ನವ ಅಂತ ಭಾವಿಸಿಕೋತ ಆ ಸಿನೆಮಾ ಲೋಕಾನ ನ್ನ ಪ್ರಪಂಚ ಆಗ್ಹೋತು. ಸಿನೆಮಾ ಖರ್ಚಿಗೆ ರೊಕ್ಕ ಬೇಕಲ್ಲ ಟೇಲರ್ ಒಬ್ಬರನು ಗೊತ್ತಮಾಡ್ಕೊಂಡು ನನಗ ದಿಕ್ಕಿಲ್ಲ ಅಂತ ಹೇಳಿ ಅವರ ಅಂಗಡ್ಯಾಗ ಹೊಲದ ಬಟ್ಟಿಗೆ ಕಾಜೂ ಮಾಡೋದು ಬಿರಡಿ ಹಚ್ಚೋದು ಮಾಡಿ ಅವರು ಕೊಟ್ಟ ದುಡ್ನ ಸಿನೆಮಾ ಷೋಕಿಗೆ ಉಪಯೋಗಿಸ್ಕೋತಿದ್ದೆ. ನಮ್ಮ ನೆಂಟರ ಮನ್ಯಾಗ ಇದು ಗೊತ್ತಾಗಿ ಅವರು ಹೊರಗ ಹಾಕಿದ್ರು. ಅದ ಮಾಡರ್ನ ಟೇಲರ್ ಅಂಗಡಿಯವರು ತಮ್ಮ ಮನ್ಯಾಗ ಒಂದು ಖೋಲಿ ಕೊಟ್ರು, ಅವರ ಮನ್ಯಾಗ ಊಟ ಹಾಕತಿದ್ರು. ಕ್ರಮೇಣ ಹೊಲಿಗಿ ಆ ಮ್ಯಾಲ ಬಟ್ಟಿ ಕತ್ತರಸೋದು ಕಲತೆ. ಮ್ಯಾಟ್ರಿಕ್ ಮುಗಸಲಿಕ್ಕೆ ಆಗ್ಲಿಲ್ಲ. ಶ್ರಮ ಪಟ್ಟು ದುಡಿತಿದ್ದೆ. ಖರ್ಚಿಗೆ ಸಾಕಾಗೋ ಅಷ್ಟು ರೊಕ್ಕ ಸಿಗತಿತ್ತು. ಖರ್ಚು ಮಾಡ್ತಿದ್ದೆ. ಇದು ನಮ್ಮಪ್ಪಗ ಗೊತ್ತಾತು. ಒಂದಿನ ನಮ್ಮ ಅಂಗಡೀಗೆ ಬಂದು ಸಾವ್ಕಾರ ಹತ್ರ ಜಗಳ ಮಾಡ್ದಾ. ಇಷ್ಟು ದಿವಸ ದುಡಿಸಿಕೊಂಡ ರೊಕ್ಕ ಕೊಡ್ರಿ ಅಂದ. ಅವರು ಯಾವ ದುಡ್ಡು ನಾವು ಇಟಕೊಂಡಿಲ್ಲ, ನಿಮ್ಮ ಮಗ್ಗ ವಾರಾ ವಾರಾ ಕೊಟ್ಟೇವಿ ಅಂದರು. ನನ್ನ ಕೇಳಾಕ ಬಂದ ನಾನು ಹಚಾ ಅಂತ ಓಡಿಸಿಬಿಟ್ಟೆ. ನನ್ನ ದುಡಿಮಿ ನನ್ನ ಖಚರ್ು ನಡದಿತ್ತು, ನಾನು ನನ್ನ ಜೀವನಾನ ಆಗಾದರೂ ಸುಧಾರಿಸ್ಕೊ ಬೇಕಾಗಿತ್ತು ಆಗಲಿಲ್ಲ ಏನ್ ಮಾಡೋದು 'ಎಂದು ಯೋಚನೆಯ ಆಳಕ್ಕಿಳಿದ. 


     ' ಮತ್ತ ಮುಂದ ಏನ್ಮಾಡಿದ್ರಿ ' ಎಂದು ಮಾದೇವ ಪ್ರಶ್ನಿಸಿದ.


     ' ಮುಂದೆ ಏನ್ಮಾಡಿದೆ ಅದೂ ಒಂದು ದೊಡ್ಡ ಕತೀನ, ಹೇಳಾಕ ಏನೈತಿ ಬಿಡ್ರಿ ಸಣ್ಣವರ್ದು ಸಣ್ಣ ಕಥೀನ ' ಎಂದು ದೀರ್ಘ ನಿಟ್ಟುಸಿರೆಳೆದ ದೀಪಕ.


     ' ನಿಮಗ ಮುಜುಗರ ಆಗೋದಿಲ್ಲ ಆಂದ್ರ ಹೇಳ್ರಿ, ಯಾರದರ ಹತ್ರ ಹೇಳ್ಕೊಂಡ್ರ ಮನಸು ಹಗರಾಗ್ತದ ' ಎಂದ ಮಾದೇವ.


                                         *                                               *


     ' ಏನ್ ಹೆಳೋದ್ರಿ , ಹೇಳೋ ಅಂಥ ಕಥಿ ನಂದಲ್ಲ ಎಲ್ಲ ಜನ ಸಮಾನ್ಯರಂಥ ಕಥೀನ ನಂದು. ಮುಂದ ಕೆಲವು ದಿವಸ ಆದ ಮ್ಯಾಲ ನಮ್ಮಪ್ಪ ಕೆಲವರ್ನ ಕಳ್ಸೀದ, ಮಾತುಕಥಿ ಸಾರಾಂಶ ಅಷ್ಟ ನಿಮ್ಮಪ್ಪಗ ಅರ್ಧಆಯಷ್ಯ ಕಳೀತು ನೀನ ನಿನ್ನ ಕುಟುಂಬದ ಜವಾಬ್ದಾರಿ ಹೊರಬೇಕು ಅಂತ. ನಾನೂ ಎಂಪ್ಲಾಯಮೆಂಟ್ ಕಛೇರಿಗೆ ನನ್ನ ಹೆಸರು ದಾಖಲೆ ಮಾಡಸಿದೆ, ಅಲ್ಲಿ ವರೆಗೂ ಏನು ಮಾಡೋದು ಹುಬ್ಬಳ್ಳಿ ಒಳಗ ಜೀವನ ಸುರಳಿತ ಸಾಗಿತ್ತು, ಆದರ ಅವ್ವನ ಮಾರಿ ಕಣಮುಂದ ಧುತ್ತಂತ ಬಂದ ನಿಲ್ತಿತ್ತು. ಆಕೀಗೋಸ್ಕರ ನನ್ನ ಸಣ್ಣ ತಮ್ಮನಿಗೋಸ್ಕರ ಊರಿಗೆ ಹೋಗಬೇಕು ಅನಸತಿತ್ತು. ನಮ್ಮ ಟೇಲರಂಗಡಿ ಮಾಲೀಕರಿಗೆ ಹೇಳ್ದೆ, ಅವರೂ ಸಹ ನೀನ ಮನಿಗೆ ದೊಡ್ಡವ ಅಂತಿ, ಹಾಂಗಿದ್ದಮ್ಯಾಲ ಅಪ್ಪ ಅಮ್ಮನ್ನ ನೋಡ್ಕೊಳ್ಳೊ ಜವಾಬ್ದಾರಿ ನಿಂದ ಆಗತದ. ಅಲ್ಲಿಗೆ ಹೋಗಿ ನೀ ಕಲ್ತ ಟೇಲರಿಂಗ ಕೆಲಸ ಮುಂದವರಸು, ಅಂತಾ ಸಂಧರ್ಭ ಬಂದರ ಇಲೊಲಿ ಟೇಲರಿಂಗ ಕೆಲಸ ಅದ ಅದ, ಊರಿಗೆ ವಾಪಸ್ ಹೋಗಿ ಬದುಕು ಕಟ್ಕೊಳ್ಳೊಕ ನೋಡು ಎಂದರು, ಆಗಿನ ಕಾಲಕ್ಕ ಯಾವದಕ್ಕೂ ಇರಲಿ ಅಂತ ಸಾವಿರ ರೂಪಾಯಿ ಕೊಟ್ಟು ಕಳಸೀದ್ರು. ಸೀದಾ ಒಂದಿನ ಊರಿಗೆ ಹೋದೆ ಟೇಲರ್ ಅಂಗಡಿ ಮಾಲಿಕರು ಕೊಟ್ಟ ಸಾವಿರ ರುಪಾಯಿ ನಮ್ಮ ಅಪ್ಪನ ಕೈಯಾಗ ಕೊಟ್ಟೆ, ಇನ್ನು ಕಳ್ಳ ಗಂಟು ಎಷ್ಟು ಇಟಗೋಂಡಿ ತಗಿ ಕಿಸೆದಾಗಿಂದ ಅಂದ. ನನಗ ಶಾಕ್ ಆದಂಗ ಆತು, ನಾ ನಿರ್ವಂಚನೆಯಿಂದ ಅಂಗಡಿ ಮಾಲಿಕರು ಕೊಟ್ಟ ದುದ್ದು ಕೊಟ್ರ ಹುಟ್ಟಿಸಿದ ಅಪ್ಪನ ನಂಬೋದಿಲ್ಲ ಅಂದ್ರ ಹ್ಯಾಂಗ ನನಗ ಭಾಳ ಸಂಕಟಾ ಆತು. ಅಲ್ಲೆ ನಮ್ಮಪ್ಪನ ಡೇಲರಿಂಗ ಮಶಿನದಾಗನ ನಾನೂ ಕೆಲಸಮಾಡಲಿಕ್ಕೆ ಸುರುವು ಮಾಡಿದೆ. ನಮ್ಮಪ್ಪ ತನ್ನ ದೂರದ ಸಂಬಂಧಿಕರ ಮನೆಯಿಂದ ಒಂದು ಹೆಣ್ಣು ತಂದು ಮದುವೆ ಮಾಡಿದ್ರು. ಪಾಪ ಆ ಹುಡುಗಿ ಲಕ್ಷ್ಮೀ ಅಂತ, ಓದು ಬರಹ ಜಾಸ್ತಿ ಆಗದ ಇದ್ರೂ ಮನಿ ಕೆಲಸ ಭಗಸಿ ಛೊಲೋ ಮಾಡತಿದ್ಲು. ನಮ್ಮ ಸಂಸಾರಕ್ಕ ಒಂದು ಗಂಡ ಮಗೂನೂ ಆತು. ತಮ್ಮ ಹೈಸ್ಕೂಲ್ಗೆ ಬಂದಿದ್ದ ನನ್ನಂಗ ಅಂವ ಉಡಾಳ ಅಲ್ಲದಿದ್ರು ಓದು ಅವನ ತಲಿಗೆ ಹತ್ತಲಿಲ್ಲ. ನಾನು ದುಡಿಯೋದು ನಮ್ಮಪ್ಪ ಅದರ ದುಡ್ಡು ನಮ್ಮಪ್ಪ ತುಗೊಳ್ಳೋದು ಮನ್ಯಾಗ ಕುಚೇಲನ ಮನಿ ಪರಿಸ್ಥಿತಿ. ಒಂದಿವಸ ಅಮ್ಮ ಹೇಳಿದ್ಲು ದೀಪೂ ನೀನು ಬ್ಯರೆ ಮನಿ ಮಾಡು ಮಗನ, ನಿಂದೂ ಬೆಳಿಯೋ ಸಂಸಾರ. ನಮ್ಮಪ್ಪ ಕುಡಕೊಂಡು ಬಂದು ನಮ್ಮಮ್ಮನ್ನ ದನಾ ಬಡದಂಗ ಬಡಿತಿದ್ದ, ಕುಡದ ಬಂದ ಅಮಲನ್ಯಾಗ ಬೆಳದ ಮಕ್ಕಳು ಸೊಸಿ ಮತ್ತು ಸಣ್ಣ ಮೊಮ್ಮಗ ಅನದ ಅಟಮ್ಮನ ಜೊತಿ ಅಸಭ್ಯತನದಿಂದ ನಡಕೋತಿದ್ದ, ನಾನು ಉಡಾಳ ಸಿನೆಮಾ ನೋಡೋ ಚಪಲ ಇದ್ದವ ಎಲಡಕಿ ಸಿಗರೇಟಿನ ಚಟ ಇದ್ದಂವ ಆದರೂ ಒಂದು ಸಭ್ಯತೆ ನನ್ನಲ್ಲಿತ್ತು ಅಂತ ನನ್ನ ಅನಸಿಕೆ.


     ಒಂದಿವಸ ಅಮ್ಮನ ಒತ್ತಾಯದ ಮ್ಯಾಲೆ ಬ್ಯಾರೆ ಸಂಸಾರ ಮಾಡಿದೆ. ನಮ್ಮಪ್ಪ ತನ್ನ ರಾಟಿ ಮುಟ್ಟಗೊಡಲಿಲ್ಲ. ಮತ್ತ ಹುಬ್ಬಳ್ಳಿಗೆ ಹೋದೆ ಹಳೆ ಟೇಲರ್ ಅಂಗಡಿ ಮಾಲಿಕರಿಗೆ ನನ್ನ ಕಥಿ ಹೇಳಿದೆ, ಅವರ ಅಂಗಡ್ಯಗಿನ ಹಳೆ ಝೆನಿತ್ ಟೇಲರಿಂಗ ಮಶಿನ್ ಕೊಟ್ರು. ಹೊಲಿಯಾಕ ಅವರ ಬಟ್ಟಿ ಕೊಡತಿದ್ರು ವಾರಕ್ಕೆರಡು ಸಲ ಅಲ್ಲಿಗೆ ಹೋಗಿ ಹೊಲದ ಬಟ್ಟಿ ಕೊಟ್ಟು ಮಜೂರಿ ದುಡ್ಡು ಇಸಕೊಂಡು ಬತರ್ಿದ್ದೆ. ಮತ್ತ ನನ್ನ ಸಿನೆಮಾ ಸಿಗರೇಟು ಹೋಟೇಲು ಅಂತ ಷೋಕಿ ಜೋರಾತು, ಮನಿ ಕಡಿಗೆ ನಿಗಾ ಕಡಿಮಿ ಆತು. ಆದರ ನನ್ನ ಹೆಂಡತಿ ಸಹ ನಮ್ಮವ್ವನ ಅಂಗ ಎಲ್ಲಾನೂ ನುಂಗ್ಯಕೊಂಡು ಹೋಗತಿದ್ದಳು. ಬರ ಬರತಾ ನಾನು ಸಂಸಾರದ ಕಡಿಗೆ ವಿಮುಖ ಆದೆ ಅಂತನ ಅನಬೇಕು. ಕ್ರಮೇಣ ನನ್ನ ಹೆಂಡತಿ ಬದಲಾದ್ಲು, ನನ್ನ ಅಯೋಗ್ಯತನಾನ ಖಂಡಿಸಿದ್ಲು, ನನ್ನಲ್ಲ ರಾಕ್ಷನ ಜಾಗೃತ ಆದ ನನ್ನ ವರ್ತನೇನೂ ನಮ್ಮಪ್ಪನ ರೀತೀನ ಆಗತ ಬಂತು. ನಮ್ಮ ಟೇಲರ್ ಅಂಗಡಿ ಮಾಲಿಕರ ದೂರದ ಸಂಭಂದಿ ಒಬ್ರು ಪೂನಾದಾಗ ಒಂದು ಹೊಸ ಟೇಲರಿಂಗ್ ಅಂಗಡಿ ತಗದ್ರು. ಅವರಿಗೆ ಒಬ್ಬ ಕೆಲಸ ಗೊತ್ತಿರೋ ವಿಶ್ವಾಸಾರ್ಹ ಜನ ಬೇಕಾಗಿತ್ತು, ನಮ್ಮ ಅಂಗಡಿ ಮಾಲಿಕರು ನನ್ನ ಹೆಸರು ಶಿಫಾರಸು ಮಾಡಿದ್ರು, ನಾನು ಪೂನಾಕ್ಕೆ ಹೋದೆ, ಕೆಲಸ ಗೊತ್ತಿತ್ತು, ಹುಬ್ಬಳ್ಳಿಕಿಂತ ದೊಡ್ಡ ಊರು, ಹರೆದ ವಯಸು ಕೆಲಸ ಗೊತ್ತಿತ್ತು, ಖಚರ್ಿಗೆ ರೊಕ್ಕ ಸಿಗತಿತ್ತು, ಹೊಸ ಹೊಸ ರಿಲೀಸ್ ಸಿನೆಮಾ ಆಗ್ತಿದ್ವು. ನನ್ನ ಕುಟುಂಬದ ಸಮಸ್ಯಗಳಿಗೆ ಸಿನೆಮದಾಗ ಪರಿಹಾರ ಹುಡುಕ್ತಿದ್ದೆ, ಆದ್ರ ಸಿನೆಮಾನ ಬ್ಯಾರೆ ಬದುಕ ಬ್ಯಾರೆ ಅನ್ನೋದು ನನಗ ಅರ್ಥ ಆಗಲಿಲ್ಲ ' ಎಂದು ಹೇಳಿ ದೀಪಕ ಒಂದು ನಿಟ್ಟುಸಿರೆಳೆದ.


     ' ಮತ್ತ ಇಲ್ಲೆ ನಿನ್ನ ಹೆಂಡತಿ ಮತ್ತು ಮಗನ ಗತಿ ' ಎಂದ ಮಾದೇವ.


     ' ಎಷ್ಟ ಜಗಳಾಡಿದ್ರೂ ನನ್ನ ಹೆಂಡ್ತಿ ಲಕ್ಷ್ಮೀ ಒಳ್ಳೆ ಹೆಣಮಗಳು, ನಿನ್ನ ಮವ ಕುಡುಕ ಸ್ವಲ್ಪ ದಿವಸ ನಿನ್ನ ತವರ ಮನ್ಯಾಗ ಹೋಗಿ ಇರು ಅಂತ ನಮ್ಮವ್ವ ಅಂದ್ಲಂತ, ಅದಕ ಇಕೀ ನಿಮ್ಮಗನ್ನ ಮದುವೆ ಆಗಿ ಈ ಮನಿ ಹೊಚ್ಚಲಾ ತುಳದೇನಿ ನನ್ನ ಹೆಣಾ ಮಾತ್ರ ಈ ಮನೀ ಇಂದ ಹೊರಗ ಹೋಗೊದು ಅಂದ್ಲಂತ, ನಮ್ಮಪ್ಪ ಕುಡುಕ ಆದ್ರೂ ಸೊಸಿನ್ನ ಮೊಮ್ಮಗನ್ನ ಮನ್ಯಗ ಒಯ್ದು ಇಟಗೊಂಡನಂತ ' ಎಂದು ಹೇಳುತ್ತಿದ್ದ ದೀಪಕನ ಮತನ್ನು ಮಧ್ಯದಲ್ಲೆ ತುಂಡರಿಸಿದ ಮಾದೇವ


     ' ಏನು ಯಾರದೋ ಕಥಿ ಹೆಳಿದ್ಹಂಗ ಹೇಳ್ಳಿಕ್ಕೆ ಹತ್ತಿಯಲ್ಲ ' ಎಂದ.


     ' ಹೌದು ನನ್ನ ಬದುಕು ಸೂತ್ರಕಿತ್ತ ಗಾಳಿಪಟದ್ಹಾಂಗ ಅಗಿತ್ತು ' ಮುಂದಿನದು ಒಂದು ದೊಡ್ಡ ಕಥೀನ ಎಂದ ದೀಪಕ ಕ್ಷಣಕಾಲ ಸುಮ್ಮನಾದ.


                                                                       ( ಮುಂದುವರಿದುದು )
                                            
     '


 
    
    
 
 

Rating
No votes yet