" ಸಿನೆಮಾ" (ಕಥೆ)......ಭಾಗ 5

Submitted by H A Patil on Fri, 12/14/2012 - 12:15
ಚಿತ್ರ

                  
    
          ಆಗ ಮಾದೇವನಿಗೆ  ಎಲ್ಲವೂ ಒಂದೊಂದಾಗಿ ಸ್ಪಷ್ಟವಾಗ ತೊಡಗಿದವು.  ಆ ಕಾಲದ ಘಟನೆಗಳೆಲ್ಲ ಆತನ  ಮನದಾಳದಲ್ಲಿ ಇನ್ನೂ ಹಚ್ಚು ಹಸುರಾಗಿವೆ. 1958 - 59 ರ ದಿನಮಾನಗಳವು. ಮೂರನೆ ತರಗತಿಯಲ್ಲಿ ಒಟ್ಟು ಮೂವತ್ತು ವಿದ್ಯಾರ್ಥಿಗಳಿದ್ದರು. ಆ ಪೈಕಿ ಈ ಮೂವರು ವಯಸ್ಸಿಗೆ ಮೀರಿ ಬೆಳೆದವರಲ್ಲದೆ ಅವರ ವಿಚಾರ ಮಾತುಕತೆಗಳು ಉಳಿದವರಲ್ಲಿ ಮುಜುಗರವುಂಟು ಮಾಡುತ್ತಿದ್ದವು. ಆದರೆ ಅವರನ್ನು ಎದುರಿಸುವ ಸಾಮರ್ಥ್ಯ ಅವರಾರಿಗೂ ಇರಲಿಲ್ಲ. ಅವರಲ್ಲಿ ಇಬ್ಬರು ಟೇಲರಿಂಗ್ ವೃತ್ತಿಕೆಲಸವರ ಮನೆಗಳ ಹುಡುಗರಾಗಿದ್ದರೆ ಇನ್ನೊಬ್ಬ ಅನುಕೂಲಸ್ಥ ಮನೆತನದ ವ್ಯಾಪಾರ ಮತ್ತು ವ್ಯವಸಾಯ ಎರಡೂ ಇದ್ದ ಮನೆಯವನಾಗಿದ್ದ. ಇವರೆಲ್ಲರೂ ಊರಲ್ಲಿ ಮತ್ತು ಶಾಲೆಯಲ್ಲಿ ಹದ್ದು ಮೀರಿದ ಹುಡುಗರೆಂದು ಹೆಸರು ಪಡೆದಿದ್ದರು. ಅವರು ವಿದ್ಯಾಭ್ಯಾಸ ವೊಂದರ ವಿಷಯವನ್ನು ಬಿಟ್ಟು ಎಲ್ಲ ವಿಷಯಗಳನ್ನೂ ಮಾತನಾಡುತ್ತಿದ್ದರು. ಪೋಲಿ ವಿಷಯಗಳೆಂದರೆ ಅವರಿಗೆ ಅಚ್ಚು ಮೆಚ್ಚು. ಅವರು ತಮ್ಮ ಮಾತುಕತೆಗಳಲ್ಲಿ ಹುಬ್ಬಳ್ಳಿಯ ಆಕರ್ಷಣೆ ಕುರಿತು ಮತ್ತು ಯಾರ್ಯಾರು ಹುಬ್ಬಳ್ಳಿಗೆ ಯಾವಾಗ ಹೋಗಿ ಬಂದರು, ಅಲ್ಲಿ ಏನೇನು ಮಾಡಿದರು ಅವರು ಹೋದ ಹೋಟೆಲು, ತಿಂದ ತಿಂಡಿಗಳು, ನೋಡಿದ ಸಿನೆಮಾ ನಾಟಕಗಳು, ಅದಕ್ಕಾಗಿ ಹಣ ಸಂಗ್ರಹಿಸಿದ ರೀತಿಗಳನ್ನು ಆಕರ್ಷಕವಾಗಿ ಉಳಿದವರೆಲ್ಲ ಬೆರಗುಗೊಳ್ಳುವಂತೆ ವಿವರಿಸುತ್ತಿದ್ದರು. ಗ್ರಾಮದಲ್ಲಿ ಇವರು ಉಡಾಳರು ಮತ್ತು ದಾರಿ ತಪ್ಪಿದ ಹುಡುಗರು ಎಂದು ಹೆಸರುವಾಸಿ ಯಾಗಿದ್ದರು. ಇವರು ಆಗಾಗ ಗ್ರಾಮದ ಹಲವರ ಅನೈತಿಕ ಸಂಭಂಧಗಳ ಕುರಿತು ಅವುಗಳು ನಿಜವೋ ಸುಳ್ಳೊ ಆದರೆ ರೋಚಕವಾಗಿ ತಮ್ಮ ತಮ್ಮೊಳಗೆ ಚರ್ಚಿಸಿ ಆನಂದಿಸುತ್ತಿದ್ದರು. ಸಿನೆಮಾ ನಾಟಕ ಹೋಟೆಲ್ ತಿಂಡಿಗಳು ನಮಗೆ ಆಕರ್ಷಕವಾಗಿ ಕಂಡು ಬಂದರೆ ಈ ಅನೈತಿಕ ಸಂಬಂಧಗಳ ಸುದ್ದಿ, ಕದ್ದು ಕಳ್ಳ ಭಟ್ಟಿ ಕುಡಿದು ರಾತ್ರಿ ವೇಳೆ ಯಾರಿಗೂ ಗೊತ್ತಾಗದಂತೆ ಮನೆ ಸೇರುತ್ತಿದ್ದ ವಿಷಯಗಳು, ಅಣ್ಣ ತಮ್ಮರ ಗಲಾಟೆಗಳು ನಮ್ಮಲ್ಲಿ ಆತಂಕವನ್ನು ಹುಟ್ಟಿಸುತ್ತಿದ್ದವು. ಉಳಿದ ಕೆಲವು ಹುಡುಗರಿಗೆ ಇವರು ಇವನ್ನೆಲ್ಲ ಏಕೆ ಚರ್ಚಿಸುತ್ತಾರೆ ಎನಿಸುತ್ತಿತ್ತು.
                                       ***
                                                                           
     ಹುಬ್ಬಳ್ಳಿ ಉತ್ತರ ಕರ್ನಾಟಕದ ಒಂದು ಪ್ರಮುಖ ವಾಣಿಜ್ಯ ನಗರಿ ಅಲ್ಲದೆ ಅದೊಂದು ಮಾಯಾ ನಗರಿ ಕೂಡ. 1956 ರಿಂದ 1962 ಅವರ ಪ್ರಾಥಮಿಕ ಶಾಲಾ ದಿನಗಳು. ಗ್ರಾ,ಮೀಣ ಪರಿಸರದಲ್ಲಿ ಬದುಕುತ್ತಿದ್ದ ಅವರಿಗೆ ಹುಬ್ಬಳ್ಳಿ ಒಂದು ಆಕರ್ಷಕ ನಗರ ಪ್ರದೇಶ. ಹುಬ್ಬಳ್ಳಿಗೆ ಹೋಗಿ ಬಂದೆವು ಎಂದು ಯಾರಾದರೂ ಅದರಲ್ಲಿಯೂ ಅವರ ಸಮ ವಯಸ್ಕರು ಹೇಳುವಾಗ ಅದರಲ್ಲಿ ಒಂದು ಗತ್ತು ಮತ್ತು ಒಂದು ರೀತಿಯ ಸಂತೃಪ್ತ ಭಾವ ಅವರ ಮಾತುಗಳಿಂದ ಹೊರ ಹೊಮ್ಮುತ್ತಿತ್ತು. ಉಳಿದವರೆಲ್ಲ ಅವರನ್ನು ಕಣ್ಣು ಬಾಯಿ ಬಿಟ್ಟು ಕೊಂಡು ಏನೋ ಒಂದು ಅದ್ಭುತವನ್ನು ಸಾಧಿಸಿ ಬಂದವರನ್ನು ನೋಡುವ ಹಾಗೆ ನೋಡುತ್ತಿದ್ದರು. ಅವರು ವರ್ಣಿಸುತ್ತಿದ್ದ ಅಲ್ಲಿಯ ರೈಲು ನಿಲ್ದಾಣ, ಬಸ್ ಸ್ಟ್ಯಾಂಡ್, ದೇವಸ್ಥಾನಗಳು, ಸಿದ್ಧಾರೂಢಮಠ, ಮೂರುಸಾವಿರಮಠ, ಮುನಸಿಪಾಲಟಿ, ಭಾರತ ಮಿಲ್ ಅದರ ಭೋಂಗಾ, ಅಲ್ಲಿಯ ರಸ್ತೆಗಳಲ್ಲಿ ಸಂಚರಿಸುವ ಟಾಂಗಾಗಳು, ಮೋಟಾರುಗಳು, ಅಲ್ಲಿಯ ಸಿನೆಮಾ ಟಾಕೀಸುಗಳು ಅಲ್ಲಿ ತಾವು ನೋಡಿ ಬಂದ ಸಿನೆಮಾಗಳು ಮತ್ತು ನಾಟಕ ಕಂಪನಿಗಳ ಬಗ್ಗೆ ಮತನಾಡುತ್ತಿದ್ದರೆ ಹಳ್ಳಿಯ ಗಮಾರ ರಾಗಿದ್ದ ಉಳಿದವರೆಲ್ಲ ತೆರೆದ ಕಿವಿಗಳಾಗಿ ಕೇಳುತ್ತಿದ್ದರು. ಅವರ ಮಾತುಗಳು ನಮ್ಮಲ್ಲಿ ಬೆರಗನ್ನು ಮೂಡಿಸುತ್ತಿದ್ದವು. ಅದೊಂದು ಕಿನ್ನರ ಲೋಕವೆಂಬ ಕಲ್ಪನೆ ಎಲ್ಲರಲ್ಲಿ ಮೂಡುತ್ತಿತ್ತು.


     ಈ ಹುಬ್ಬಳ್ಳಿ ಒಂದು ಆಸಕ್ತಪೂರ್ಣ ಕುತೂಹಲ ಹುಟ್ಟಿಸುವ ನಗರ ಪ್ರದೇಶ ಎನ್ನುವುದರ ಜೊತೆಗೆ ಭಯ ಹುಟ್ಟಿಸುವ ದುಷ್ಟ ನಗರವಾಗಿಯೂ ಅನೇಕರಲ್ಲಿ ಆತಂಕವನ್ನೂ ಹುಟ್ಟಿಸುತ್ತಿತ್ತು. ದೂರ್ವಾಪುರದಿಂದ ಅಲ್ಲಿಗೆ ಉದ್ಯೋಗ ವರಸಿ ಹೋಗಿ ಉದ್ಧಾರವಾದವರು ಇದ್ದರೆ, ಅದರ ಆಕರ್ಷಣೆಗೆ ಒಳಗಾಗಿ ಚೈನಿ ಜೀವನಕ್ಕೆ ದಾಸರಾಗಿ ಹಾಳಾಗು ತ್ತಿದ್ದವರೂ ಇದ್ದರು. ಕೆಲವು ಅನುಕೂಲಸ್ಥ ವ್ಯಾಪಾರಸ್ಥರ ಮಕ್ಕಳು ಅಂಗಡಿಯ ಗಲ್ಲಾ ಪೆಟ್ಟಿಗೆಗಳಿಂದ ಮತ್ತು ವ್ಯವಸಾಯಗಾರರ ಮಕ್ಕಳು ಅವರ ಮನೆಯಲ್ಲಿ ಸಂಗ್ರಹಿಸಿದ ಧಾನ್ಯಗಳನ್ನು ಕದ್ದು ಮಾರಿ ಹುಬ್ಬಳ್ಳಿಗೆ ಹೋಗಿ ಹೋಟೆಲುಗಳಿಗೆ ಹೋಗುವ ಮತ್ತು ಸಿನೆಮಾ ನಾಟಕಗಳನ್ನು ನೋಡಿ ಬರುವ ಹವ್ಯಾಸ ಬೆಳೆಸಿ ಕೊಂಡಿದ್ದರು. ಅವರು ತಾವು ಯಾರಿಗೂ ಗೊತ್ತಾಗದಂತೆ ಹೋಗಿ ಬಂದಿದ್ದೇವೆ ಎಂದು ಪರಿಭಾವಿಸುತ್ತಿದ್ದರೂ, ಅದು ಇಡಿ ಊರಿಗೆ ಹೇಗೋ ಗೊತ್ತಾಗಿ ಬಿಟ್ಟಿರುತ್ತಿತ್ತು. ಇದು ಕ್ರಮೇಣ ಅವರ ಮನೆಗಳಲ್ಲಿಯೂ ಗೊತ್ತಾಗಿರುತ್ತಿತ್ತು, ಅವರುಗಳನ್ನು ಹಾದಿಬಿಟ್ಟ ಹುಡುಗರು ಎಂದು ಅವರ ಪೋಷಕರು ಮತ್ತು ಗ್ರಾಮಸ್ಥರು ಬರುತ್ತಿದ್ದರು. ಇದು ಅವರ ಪೋಷಕರಿಗೆ ನುಂಗಲಾರದ ತ್ತುತ್ತಾಗಿ ಪರಿಣಮಿಸುತ್ತಿತ್ತು. ಗ್ರಾಮದಲ್ಲಿ ಆಗುವ ಒಂದು ಸಂಚಲನವೂ ಜನರ ಹದ್ದಿನ ಕಣ್ಣಿನಿಂದ ತಪ್ಪಿಸಿ ಕೊಳ್ಳಲಾಗುತ್ತಿರಲಿಲ್ಲ, ಗ್ರಾಮಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಬಂಧ ಅಷ್ಟು ಮಜಬೂತಾಗಿರುತ್ತಿತ್ತು.


          ಅದು 1960 ನೇ ಇಸವಿ ಹುಬ್ಬಳ್ಳಿಯ ಚಂದ್ರಕಲಾ ಟಾಕೀಸ್ ನಲ್ಲಿ ಬಿ.ಆರ್.ಛೋಪ್ರಾ ನಿರ್ಮಾಣ ಸಂಸ್ಥೆಯ ' ಧೂಲ್ ಕಾ ಫೂಲ್ ' ಚಿತ್ರ ತೆರೆಗೆ ಬಂದಿತ್ತು. ಎಲ್ಲೆಡೆಯಂತೆ ಅಲ್ಲೂ ಸಹ ಆ ಚಿತ್ರ ಶತದಿನೋತ್ಸವ ಆಚರಿಸಿ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿತ್ತು. ನಮ್ಮ ಗ್ರಾಮದ ಯುವ ಸಮೂಹದಲ್ಲಿ ಅದು ಒಂದು ವಿಶೇಷ ಸಂಚಲನ ಮಾಡಿದ್ದು ಸುಳ್ಳಾಗಿರಲಿಲ್ಲ. ಬಹುತೇಕ ಯುವಕರ ಆದ್ಯತೆ ಒಮ್ಮೆ ಹುಬ್ಬಳ್ಳಿಗೆ ಹೋಗಿ ಬರುವುದು ಆಗಿತ್ತು,, ಅಲ್ಲಿಗೆ ಹೋಗಿ ಸಿನೆಮಾ ನೋಡಿ ಬಂದವರು ಅದರ ಬಗ್ಗೆ ಸ್ವಾರಸ್ಯಕರವಾಗಿ ತಮ್ಮ ಆಪ್ತ ವಲಯಗಳಲ್ಲಿ ತಮ್ಮ ತಮ್ಮ ಅನುಭವ ಗಳನ್ನು ಹಂಚಿಕೊಳ್ಳುತ್ತಿದ್ದರು. ಹುಬ್ಬಳ್ಳಿಗೆ ಓದಲು ಹೋದವರು ಮತ್ತು ಕೆಲಸದ ಮೇಲೆ ಹೋದವರು ಆ ಚಿತ್ರವನ್ನು ನೋಡಿ ಬರುವುದು ತಮ್ಮ ಖಾಸಗಿ ವಲಯದಲ್ಲಿ ನಿಜ ಹೇಳುವುದು, ಉಳಿದಂತೆ ಬೇರೆ ಯಾರಾದರೂ ಕೇಳಿದರೆ ತಾವು ಯಾವುದೋ ಕನ್ನಡ ಚಿತ್ರವನ್ನೊ ಬೇರೆ ಯಾವುದೊ ಭಕ್ತಿ ಪ್ರಧಾನ ಚಿತ್ರ ನೋಡಿ ಬಂದಿರುವುದಾಗಿ ಹೇಳುತ್ತಿದ್ದರು. ಗ್ರಾಮದ ಬೇಹುಗಾರರ ಪಡೆ ಈ ವಿಷಯಗಳನ್ನು ಪತ್ತೆ ಮಾಡಿ ಗುಲ್ಲು ಮಾಡುವುದು, ಇದರ ಉದ್ದೇಶ ತಾವಷ್ಟೆ ಅಲ್ಲ ಉಳಿದವರೂ ಆ ಚಿತ್ರ ನೋಡಿ ಬಂದಿದ್ದಾರೆ ಎಂದು ಗ್ರಾಮದಲ್ಲಿ ಬಿಂಬಿಸುವುದು ಅವರ ಉದ್ದೇಶ ವಾಗಿರುತ್ತಿತ್ತು. ಯಾಕೆಂದರೆ ಅದೊಂದು ಕಾಲೇಜಿನಲ್ಲಿ ಓದುವ ಹುಡುಗ ಮತ್ತು ಹುಡುಗಿಯ ಪ್ರೇಮ ಪ್ರಕರಣ ಮತ್ತು ಕೊನೆಗೆ ಹುಡುಗ ತನ್ನ ತಂದೆ ತಾಯಿಗಳು ಆರಿಸಿದ ಹುಡುಗಿಯನ್ನು ಮದುವೆಯಾಗಿ ತಾನು ಪ್ರೇಮಿಸಿದ ಹುಡುಗಿಗೆ ಕೈ ಕೊಡುವುದು, ಗರ್ಭಿಣಿಯಾಗಿದ್ದ ಆಕೆ ಮಗುವನ್ನು ಹೆತ್ತು ಸಮಾಜಕ್ಕೆ ಹೆದರಿ ಮಗುವನ್ನು ಯಾರೂ ಇಲ್ಲದ ಒಂದು ಜಾಗದಲ್ಲಿ ಮಲಗಿಸಿ ಹೋಗುತ್ತಾಳೆ, ಅದನ್ನು ಒಬ್ಬ ಮುಸಲ್ಮಾನ ವ್ಯಕ್ತಿ ತೆಗೆದು ಕೊಂಡು ಹೋಗಿ ಸಾಕುತ್ತಾನೆ, ಆ ಹುಡುಗ ದಾರಿ ತಪ್ಪುತ್ತಾನೆ. ಆ ಪ್ರಕರಣ ಆತನ ತಂದೆ ನ್ಯಾಯಾಧೀಶ ನಾಗಿರುವ ನ್ಯಾಯಾಲಯಲ್ಲಿ ವಿಚಾರಣೆಗೆ ಬರುತ್ತದೆ. ಇದು ಸ್ಥೂಲ ಕಥಾ ಹಂದರ. ಆದರೆ ಆ ಕಾಲದಲ್ಲಿ ಗ್ರಾಮಗಳಲ್ಲಿ ಈ ವೈಚಾರಿಕತೆಯನ್ನು ಒಪ್ಪಲು ಸಿದ್ಧರಿಲ್ಲದ ಜನಕ್ಕೆ ಯುವ ಜನತೆಯ ಈ ಸಿನೆಮಾ ಕುರಿತಾದ ಆಕರ್ಷಣೆ ನುಂಗಲಾರದ ತುತ್ತಾಗಿತ್ತು, ಹೀಗಾಗಿ ಯುವ ಜನತೆ ಗುಟ್ಟಾಗಿ ಆ ಸಿನೆಮಾ ನೋಡಿ ಬಂದು ಸುಳ್ಳು ಹೇಳುತ್ತಿದುದು ಈ ಕಾರಣಕ್ಕೆ, ವ ಜನತೆಯ ಈ ವರ್ತನೆ ಗ್ರಾಮದಲ್ಲಿ ಒಂದು ರೀತಿಯ ದುಗುಡವನ್ನು ಸೃಷ್ಟಿಸಿದ್ದುದು ಸುಳ್ಳಲ್ಲ. ಈ ತಲ್ಲಣದ ಸುದ್ದಿಗಳನ್ನು ರಂಗು ರಂಗಾಗಿ ರೆಕ್ಕೆ ಪುಕ್ಕಗಳನ್ನು ಸೇರಿಸಿ ತಮ್ಮ ತರಗತಿಯ ಮೂವರು ಮನೆಹಾಳರ ರೆಬೆಲ್ ತಂಡ ನಮ್ಮ ತರಗತಿಯಲ್ಲಿ ರಸವತ್ತಾಗಿ ಚರ್ಚಿಸುತ್ತಿದ್ದರು. ಇವರ ಈ ಆಕರ್ಷಕ ಸುದ್ದಿ ಬಿತ್ತನೆಗೆ ನಮ್ಮಲ್ಲಿ ಹಲವರು ಕುತೂಹಲದ ಕಿವಿಗಳಾಗುತ್ತಿದ್ದರು. ನಮಗೂ ಸಹ ಆ ಚಿತ್ರವನ್ನು ಒಮ್ಮೆ ನೋಡ ಬೇಕೆಂಬ ಅದಮ್ಯ ಆಶೆ ಹಲವರಲ್ಲಿ ಉಂಟಾಗಿತ್ತು. ಆದರೆ ಹುಬ್ಬಳ್ಳಿಗೆ ಹೋಗಿ ಆ ಸಿನೆಮಾ ನೋಡುವುದು ಆ ಸಣ್ಣ ವಯಸ್ಸಿನ ಬಾಲಕರಿಗೆ ಅಸಾಧ್ಯ ವಾದುದಾಗಿತ್ತು. ಆದರೆ ಆಶೆ ಮನದಲ್ಲಿಯೆ ಹುಟ್ಟಿ ಅಲ್ಲಿಯೆ ಕಮರಿ ಹೋಗುತ್ತಿತ್ತು. ವಸ್ತು ಸ್ಥಿತಿ ಹೀಗಿದ್ದರೂ ಆ ತರಗತಿಯ ಮೂವರು ಮನೆಹಾಳರ ಪಡೆಯ ಒಬ್ಬ ಸದಸ್ಯ ದೀಪಕ ಒಮ್ಮೆ ಹುಬ್ಬಳ್ಳಿಗೆ ತಮ್ಮ ನೆಂಟರ ಮನೆಗೆ ಹೋದವನು ಆ ಚಿತ್ರವನ್ನು ನೋಡಿ ಬಂದು ರಂಜಕವಾಗಿ ಅದರ ಕಥೆ ಹೇಳಿ, ರಾಗವಾಗಿ ಹಾಡುಗಳನ್ನು ಹಾಡುತ್ತ ಎಲ್ಲರಲ್ಲೂ ಸಹ ಒಮ್ಮೆ ಆ ಚಿತ್ರವನ್ನು ನೋಡ ಬೇಕೆಂಬ ಹಂಬಲಕ್ಕೆ ತಳ್ಳುತ್ತಿದ್ಚ. ಕ್ರಮೇಣ ಆ ಪೋಲಿ ಪಡೆ ಅತಿ ಪೋಲಿಯಾಗಿ ಆ ಚಿತ್ರದ ಹಾಡುಗಳನ್ನು ಹಾಡುತ್ತ ತಮ್ಮದೆ ಮನಸ್ಥಿತಿಯ ಹುಡುಗರನ್ನು ರಂಜಿಸುತ್ತಿದ್ದರು.


     ವಿಷಯ ಈ ರೀತಿ ಇರುತ್ತ ಈ ರೆಬೆಲ್ ಪಡೆ ಸಾಹಸಕ್ಕೆ ಇಳಿದೇ ಬಿಟ್ಟಿತು. ಮುಂದೆ ಕೆಲ ದಿನಗಳ ನಂತರ ಒಂದು ದಿವಸ ಈ ಪಟಾಲಂ ಶಾಲೆಗೆ ಬರಲೆ ಇಲ್ಲ. ಮಧ್ಯಾನ್ಹ ಊಟದ ವಿರಾಮದ ನಂತರ ಪುನಃ ತರಗತಿ ಪ್ರಾರಂಭವಾದಾಗ ಆ ಬಾಲಕರ ಪೋಷಕರು ಶಾಲೆಗೆ ಬಂದು ತಮ್ಮ ಮಕ್ಕಳು ಮಧ್ಯಾನ್ಹ ಬಿಡುವಿನ ವೇಳೆಯಲ್ಲಿ ಮನೆಗೆ ಊಟಕ್ಕೆ ಬಂದಿಲ್ಲವೆಂದು ತರಗತಿಯ ಶಿಕ್ಷಕರಲ್ಲಿ ಬಂದು ವಿಚಾರಿಸಿದರು. ಆಗ ಗುರುಗಳು ನಿಮ್ಮ ಮಕ್ಕಳು ಬೆಳಿಗ್ಗೆಯೆ ಶಾಲೆಗೆ ಬಂದಿಲ್ಲವೆಂದು ಹೇಳಿದರು. ಈ ಸುದ್ದಿ ಊರಲ್ಲಿ ಹಬ್ಬಲು ತಡವಾಗಲಿಲ್ಲ. ಅದೇ ಒಂದು ಚರ್ಚೆಯ ವಿಷಯವಾಯಿತು. ಕಾಣೆಯಾಗಿದ್ದ ಆ ಹುಡುಗರು ಮಾರನೆ ದಿನ ಊರಿಗೆ ಬಂದಾಗ ತಮ್ಮ ತಮ್ಮ ಮನೆಗಳಿಗೆ ಹೋದ ಇವರನ್ನು ಅವರ ಪಾಲಕರು ಹುಣಸೆ ಬರ್ಲಿನಿಂದ ಬಡಿಯುತ್ತ ಶಾಲೆಗೆ ಕರೆ ತಂದರು. ಅವರ ಪೋಷಕರ ಒತ್ತಾಸೆಯ ಮೇರೆಗೆ ನಮ್ಮ ತರಗತಿಯ ಶಿಕ್ಷಕರೂ ಸಹ ತಮ್ಮ ಬೆತ್ತದ ರುಚಿ ತೋರಿಸಿದರು. ಆ ದಿನ ಮಧ್ಯಾನ್ಹ ಅವರನ್ನು ಶಾಲೆಯ ತರಗತಿಯಲ್ಲಿಯೆ ಕೂಡಿ ಹಾಕಿ ಸಾಯಂಕಾಲ ಶಾಲೆ ಬಿಡುವ ಸ್ವಲ್ಪ ಮೊದಲು ಅವರ ಪೋಷಕರ ಸಮಕ್ಷಮ ಶಿಕ್ಷಕರ ವಿಚಾರಣೆ ಪ್ರಾರಂಭವಾಗಿ ಸತ್ಯ ಹೇಳಿದರೆ ಮನೆ ಇಲ್ಲದಿದ್ದರೆ ರಿಮ್ಯಾಂಡ್ ಹೋಮ್ಗೆ ಸೇರಿಸುವುದಾಗಿ ಹೆದರಿಕೆ ಹಾಕಿದರು, ನಿಜಕ್ಕೂ ಹೆದರಿದ ಅವರು ಸತ್ಯವನ್ನು ಬಿಚ್ಚಿಟ್ಟರು, ತಿಳಿದು ಬಂದ ವಿಷಯ ವೇನೆಂದರೆ ಶೆಟ್ಟರ ಹುಡುಗ ಗಲ್ಲಾ ಪೆಟ್ಟಿಗೆಯಿಂದ ಆಗಾಗ ಅವಕಾಶ ಕಾದು ಐದೈದು ರೂಪಾಯಿಗಳನ್ನು ತೆಗೆಯುತ್ತ ಒಟ್ಟಿಗೆ ಇಪ್ಪತ್ತು ರೂಪಾಯಿ ಮಾಡಿಕೊಂಡು ಹುಬ್ಬಳ್ಳಿಗೆ ಹೋಗಿ ಗಣೇಶ ಟಾಕೀಸಿನಲ್ಲಿ ನಡೆಯುತ್ತಿದ್ದ
' ಗೋಕುಲ ಕಾ ಚೋರ್ ' , ಚಂದ್ರಕಲಾದಲ್ಲಿ ನಡೆಯುತ್ತಿದ್ದ ' ಧೂಲ್ ಕಾ ಫೂಲ್ ' ಮತ್ತೂ ಮೋಹನ ಟಾಕೀಸಿ ನಲ್ಲಿ ನಡೆಯುತ್ತಿದ್ದ ' ಮೊಘಲ್ ಏ ಅಝಮ್ ' ಚಿತ್ರಗಳನ್ನು ನೋಡಿಕೊಂಡು, ಬಸ್ ಸ್ಟ್ಯಾಂಡ್ಗೆ ಬಂದಾಗ ಕೊನೆಯ ಬಸ್ ಹೋಗಿಯಾಗಿದ್ದು, ಎಲ್ಲರೂ ಅಲ್ಲಿಯ ವಸಾಂತ ವಿಹಾರದಲ್ಲಿ ದೋಸೆ ತಿಂದು ಬಂಕಾಪುರ ಚೌಕಿಗೆ ಬಂದು ಲಾರಿ ಡ್ರೈವರ ಒಬ್ಬನನ್ನು ಕಾಡಿ ಬೇಡಿ ಬಸ್ ಚಾರ್ಜ ಮೊತ್ತವನ್ನು ಕೊಟ್ಟು ಬೆಳಗಿನ ಊರಿಗೆ ಮರಳಿ ಬಂದ ತಮ್ಮ ಸಾಹಸಗಾಥೆಯನ್ನು ವಿವರಿಸಿದರು. ಇದರಿಂದ ಸಿಟ್ಟಾದ ಅವರ ಪೋಷಕರು ಇಂತಹ ಲಫಂಗರು ಮನೆಗೆ ಬರುವುದೇ ಬೇಡ ಅವರನ್ನು ರಿಮ್ಯಾಂಡ್ ಹೋಮ್ಗೆ ಕಳಿಸಿ ಬಿಡಿ ಎಂದು ಹೇಳಿ ಹೋದರು. ಇದರಿಂದ ನಿಜಕ್ಕೂ ವಿಚಲಿತರಾದ ತ್ರಿಮೂರ್ತಿಗಳು ಅಳಲು ಮೊದಲಿಟ್ಟರು. ಇದೆ ಮೊದಲ ಬಾರಿಗೆ ಅವರು ಹೆದರಿ ಕೊಂಡಿದ್ದನ್ನು ನಾವು ನೋಡಿದ್ದು. ನಂತರ ಆ ಹುಡುಗರ ಓಣಿಯ ಹಿರಿಯರು ಶಾಲೆಗೆ ಬಂದು ಅವರನ್ನು ಮುಂದೆ ಈ ರೀತಿ ಮಡಬಾರದೆಂದು ಗದರಿ ಅವರ ಪೋಷಕರನ್ನು ಕರೆಸಿ ಅವರ ಮನ ಒಲಿಸಿ ಪೋಷಕರೊಟ್ಟಿಗೆ ಅವರವರ ಮನೆ ಗಳಿಗೆ ಕಳಿಸಿ ಕೊಟ್ಟರು. ಅವರ ಪೈಕಿ ಒಬ್ಬನನ್ನು ಅವನ ಊರಿಗೆ ಕಳಿಸಿದರು. ಇನ್ನುಳಿದವರಿಬ್ಬರು ಪ್ರಾಥಮಿಕ ಶಾಲೆ ಮುಗಿಸಿದರಾದರೂ ಹೈಸ್ಕೂಲು ಪೂರ್ತ ಮುಗಿಸದೆ ಒಬ್ಬ ಟೇಲರ್ ಕೆಲಸ ಕಲಿಯಲು ಪೂನಾಕ್ಕೆ ತೆರಳಿದ, ಇನ್ನೊಬ್ಬ ಅದು ಇದು ಕೆಲಸ ಮಾಡುತ್ತ ಜೀವನ ಸಾಗಿಸಿದ, ಆದರೆ ಈಗ ಆ ಮೂವರು ಇಲ್ಲ. ಹೀಗೆ ಆಕರ್ಷಣೆ ಮತ್ತು ವಿಕರ್ಷಣೆ ಗಳನ್ನು ಒಳ ಗೊಂಡಿದ್ದ ಹುಬ್ಬಳ್ಳಿ ಮಾದೇವ ಮತ್ತು ಆತನ ಸಹಪಾಠಿ ಗಳಿಗೆ ಮಾಯಾ ನಗರಿಯಾಗಿ ಕಂಡದ್ದು ಸುಳ್ಳಲ್ಲ. ಆಗ ಮಾದೇವ ತನ್ನೊಳಗೆ ತಾನಿಳಿದ.


                                            
                                                                        ( ಮುಂದುವರಿದುದು ) 

Rating
No votes yet

Comments

ನಿಮ್ಮ ಕತೆ ನಿಜಕ್ಕು ಈ ಕಾಲಮಾನಕ್ಕೆ ಕರೆದೊಯ್ಯುತ್ತದೆ. ನಾನು ಸಿನಿಮಾ ಎ0ಬ‌ ಪದೆ ಮೊದಲು ಕೇಳಿದ್ದೆ 70ರಲ್ಲಿ , ನೀವು ಇನ್ನು ಹಿ0ದಿನ‌ ಕಾಲಕ್ಕೆ ಕರೆದು ಓಯ್ದಿರಿ

ಪಾರ್ಥ ಸಾರಥಿಯವರಿಗೆ ವಂದನೆಗಳು,
ತಮ್ಮ ಪ್ರತಿಕ್ರಿಯೆ ಓದಿದೆ, ನಿಜಕ್ಕೂ ಸಿನೆಮಾ ಯುಗ ಪ್ರಾರಂಭವಾದದ್ದು ಮೂಕಿಗಳ ಕಾಲದಿಂದಲೆ. ನಂತರ 1931 ರಲ್ಲಿ ಮೊದಲ ಟಾಕಿ ಚಿತ್ರ 'ಅಲಂ ಆರಾ' ದ ನಂತರ ಭಾರತೀಯ ಚಿತ್ರರಂಗ ಪಡೆದೆ ವೇಗ ಜನಪ್ರಿಯತೆ ಅಧ್ಭುತವಾದದ್ದು, ಕಥಾನಕದ ಮೆಚ್ಚುಗೆಗೆ ಧನ್ಯವಾದಗಳು.

swara kamath

Sat, 12/15/2012 - 14:21

ಪಾಟೀಲರೆ ನಮಸ್ಕಾರ.
ಕಥೆಯು ಚನ್ನಾಗಿ ಓದಿಸಿಕೋಂಡು ಹೋಗುತ್ತದೆ. ಕಥೆಯಲ್ಲಿ ಹೆಸರಿಸಿದ ಚಿತ್ರಗಳಲ್ಲಿ ಮೊಘಲ್ ಏ ಅಝಾಮ್ನ ಸಂಗಿತ ಹಾಗೂ ಅದರ ಹಾಡುಗಳು ಇಂದಿಗೂ ಕೇಳಲು ತುಂಬಾ ಮುದವೆನಿಸುತ್ತದೆ.
ವಂದನೆಗಳು

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಹೌದು ಆಗಿನ ಚಿತ್ರಗಳೆ ಹಾಗೆ, ಕಥೆ ಸಂಗೀತಗಳು ಉತ್ಕೃಷ್ಟವಾಗಿರುತ್ತಿದ್ದವು, ಆಗಿನ ಚಿತ್ರಗೀತೆಗಳು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವಂತಿವೆ, ಅವುಗಳ ಮಾಧುರ್ಯಕ್ಕೆ ಚ್ಯುತಿಯಿಲ್ಲ, ಮೆಚ್ಚುಗೆಗೆ ಧನ್ಯವಾದಗಳು.