" ಸಿನೆಮಾ "(ಕಥೆ)- ಭಾಗ 10
ಮನೆಯಲ್ಲಿ ಮಗ ವ್ಯವಸಾಯ ವೃತ್ತಿಗೆ ಬರಲಿ ಇಲ್ಲ ಯಾವುದಾದರೂ ಕೆಲಸ ನೋಡಿಕೊಳ್ಳಲಿ ಎಂಬುದು ಮಾದೇವನ ತಂದೆಯ ಅಭೀಕ್ಷೆ. ಆದರೆ ನಾನೂ ಕಾಲೇಜಿಗೆ ಹೋಗಲಿ ಎಂಬುದು ಕುಟುಂಬದ ಉಳಿದವರ ಆಶಯ. ಒಂದು ದಿನ ಬೆಳಿಗ್ಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ಓದುತ್ತಿರುವಾಗ ಅದರಲ್ಲಿಯ ಒಂದು ಸುದ್ದಿ ಮಾದೇವನ ಗಮನ ಸೆಳೆಯಿತು. ಅದರಲ್ಲಿ ಮಿಲಿಟರಿ ಭರ್ತಿ ಎಂಬ ಸುದ್ದಿ ಈತನ ಕಣ್ಸೆಳೆಯಿತು. ಒಂದು ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ಹೋದ. ಈತ ದೈಹಿಕ ಧಾರ್ಡ್ಯತೆ ಓಟ ಜಿಗಿತಗಳಲ್ಲಿ ಪಾಸಾದ ಈತನ ಮೆಟ್ರಿಕ್ಯುಲೇಶನ್ ಸರ್ಟಿಫಿಕೆಟ್ ಗಳನ್ನು ಪರಿಶೀಲಿಸಿದ ಅಧಿಕಾರಿಗಳು ಒಂದು ದಿನಾಂಕವನ್ನು ನೀಡಿ ಆ ದಿನ ಬೆಳಗಾವಿಗೆ ಬರಲು ತಿಳಿಸಿದರು. ಆದರೆ ಮನೆಯಲ್ಲಿ ಹೇಳದೆ ಹೋಗುವುದು ಸರಿಯಲ್ಲ, ಖರ್ಚಿಗೆ ರೊಕ್ಕ ಬೇಕು ಎಂಬುದನ್ನೆಲ್ಲ ಆಲೋಚಿಸಿ ಅಲ್ಲಿಂದ ಬಂದವನು ತನ್ನ ತಂದೆಗೆ ವಿಷಯ ತಿಳಿಸಿದ. ಅವರಿಗೆ ಮಾದೇವನ ಈ ಕೋರಿಕೆ ಸಮ್ಮತವಿರಲಿಲ್ಲ. ಮನೆಯ ಉಳಿದ ಸದಸ್ಯರದು ಆಕ್ಷೇಪಣೆ. ನನ್ನ ಈ ನಡೆ ಮನೆಯಲ್ಲಿ ಒಂದು ರೀತಿಯ ತಲ್ಲಣವನ್ನೆ ಸೃಷ್ಟಿಸಿತು. ಮಿಲಿಟರಿಗೆ ಸೇರಿದವರು ಎಲ್ಲರೂ ಸಾಯುತ್ತಾರೆ ಎನ್ನುವುದು ಅವರ ವಿಪರೀತ ಕಲ್ಪನೆ. ಕಳೆದ ವರ್ಷ ರೈಲು ಹತ್ತುವಾಗ ಕಾಲುಜಾರಿ ಬಿದ್ದು ಅಂಗಡಿ ಗೂಳಪ್ಪನ ಮಗ ವೀರಭದ್ರ ಸಾಯಲಿಲ್ಲವೆ! ಸಾವು ಯಾವಾಗಲೂ ಬರಬಹುದು. ಇದನ್ನೆಲ್ಲ ಅವರಿಗೆ ವಿವರಿಸಿ ಹೇಳುವವರಾರು. ಒಂದು ರೀತಿಯ ಸಂದಿಗ್ಧತೆ ಆತನನ್ನು ಕಾಡಲು ಪ್ರಾರಂಭಿಸಿತು.
ಆಗಲೆ ಜೂನ್ ತಿಂಗಳು ಕಾಲಿಟ್ಟಿತ್ತು. ಮುಂಗಾರು ಹಂಗಾಮು ಪ್ರಾರಂಭವಾಗಿ ಎಲ್ಲರು ಹವೀಜ ಅಲಸಂದಿ ಹೆಸರುಕಾಳುಗಳ ಬಿತ್ತನೆಗೆ ತೊಡಗಿದ್ದರು. ಕ್ರಮೇಣ ಮಾದೇವ ಹೊಲ ಮನೆಯ ಬದುಕಿಗೆ ಹೊಂದಿ ಕೊಳ್ಳಲು ಪ್ರಯತ್ನಪಟ್ಟ. ಒಂದು ದಿನ ಆತನ ತಂದೆ ನೀನು ಬಿಎ ಕಾಲೇಜಿಗೆ ಹೋಗು ಎಂದರು. ಆತ ಹುಬ್ಬಳ್ಳಿಯ ಕಾಡ ಸಿದ್ಧೇಶ್ವರ ಕಾಲೇಜಿಗೆ ಸೇರಲು ಅನುಮತಿಸಿದರು. ಒಂದು ದಿನ ಆತ ಅಲ್ಲಿಗೆ ಹೋಗಿ ಪಿಯೂಸಿಗೆ ಸೇರಿದ. ಮತ್ತೆ ಆತ ತನ್ನೂರಿನಿಂದ ಹುಬ್ಬಳ್ಳಿಗೆ ದಿನ ನಿತ್ಯ ಪ್ರಯಾಣ ಪ್ರಾರಂಭವಾಯಿತು. ಆಂಗ್ಲ ಮಾಧ್ಯಮದ ಓದು ಮೊದ ಮೊದಲು ಕಷ್ಟವಾದರೂ ಕ್ರಮೇಣ ಶ್ರಮವಹಿಸಿ ಆ ಭಾಷೆ ಕಲಿತ. ಆ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಆದರೂ ಬಂದ ಅಂಕಗಳು ಆತನಿಗೆ ತೃಪ್ತಿ ನೀಡಲಿಲ್ಲ. ಬಿಎ ಗೆ ಪ್ರವೇಶ ಪಡೆದ, ಇನ್ನಷ್ಟು ಶ್ರದ್ಧೆಯಿಂದ ಕಲಿತ ಇಂಗ್ಲೀಷನ್ನು ಪ್ರಧಾನ ವಿಷಯವನ್ನಾಗಿ ಆರಿಸಿಕೊಂಡು ಅಂತಿಮ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮನಾಗಿ ಉತ್ತೀರ್ಣನಾದ. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಸೇರಿ ಇಂಗ್ಲೀಷ್ ನಲ್ಲಿ ಎಂಎ ಮುಗಿಸಿದ. ನಂತರದಲ್ಲಿ ಹೊರ ವಿದ್ಯಾರ್ಥಿಯಾಗಿ ಕನ್ನಡದಲ್ಲಿಯೂ ಎಂಎ ಪದವಿ ಪಡೆದ. ನಂತರದಲ್ಲಿ ವೃತ್ತಿ ಕಾರಣವಾಗಿ ಶಾಲಾ ಮಾಸ್ತರಿಕೆಗೆ ಸೇರಿಕೊಂಡು ಮುಖ್ಯೋಪಾಧ್ಯಾಯನಾಗಿ ಭಡ್ತಿ ಹೊಂದಿ ನಿವೃತ್ತನಾಗಿ ಹಲಸಿನ ಕೊಪ್ಪ ಗ್ರಾಮದಲ್ಲಿ ನೆಲೆ ನಿಂತ. ಊರಲ್ಲಿಯ ಜಮೀನನ್ನು ತಮ್ಮ ನೋಡಿಕೊಂಡ. ಆತನ ಬದುಕಿಗೆ ಆಗುವಷ್ಟು ಭೂಮಿ ಅದಾಗಿದ್ದು ಮಾದೇವ ಅದಕ್ಕೆ ಆಶೆ ಪಡಲಿಲ್ಲ, ಹೀಗಾಗಿ ಆತನ ಸ್ವಂತ ಊರಿನ ಸಂಪರ್ಕ ಸಹ ಕಡಿದು ಹೋಗಿತ್ತು. ತನ್ನ ಯೋಚನಾ ಸರಣಿಯಲ್ಲಿ ಮುಳುಗಿದ್ದ ಮಾದೇವನನ್ನು ತಿವಿದು ಎಚ್ಚರಿಸಿದ.
' ಏನು ಹಗಲ ಹೊತ್ನ್ಯಾಗ ನಿದ್ದಿ ಮಾಡಲಿಕ್ಕೆ ಹತ್ತಿ ಏನು ? ' ಎಂದು ಸದಾಶಿವ ಮಾದೇವನನ್ನು ಎಚ್ಚರಿಸಿದ. ಟೇಬಲ್ ಮೇಲೆ ಮಾಣಿ ಹಬೆಯಾಡುತ್ತಿದ್ದ ಬಿಸಿ ಬಿಸಿ ಉಪ್ಪಿಟ್ಟನ್ನು ತಂದಿರಿಸಿದ.
' ಈಗಷ್ಟ ಮನ್ಯಾಗ ಗಡದ್ದಾಗಿನ ತಿಂಡಿ ಮಾಡ್ಕೊಂಡು ಬಂದಿದ್ವಿ ಬರೆ ಅರ್ಧ ಚಾ ಅಗಿದ್ರ ಸಾಕಾಗಿತ್ತು ' ಎಂದು ಮಾದೇವ ತಿಂಡಿ ತಿನ್ನಲು ಹಿಂಜರಿಕೆ ತೋರಿದ.
ಇದನ್ನು ಕಂಡ ದೀಪಕ ' ಅದೇನು ಸ್ವಲ್ಪ ಅದ ತಿನ್ರಿ ' ಅಂದ.
' ಏ ದೀಪ್ಯಾ ಅಂವಗ್ಯಾಕ ರೀ ಹಚ್ಚಿ ಮಾತಾಡ್ತೀಯೋ ಅಂವಾನೂ ನಿನ್ನ ಜೋಡಿ ಓದ್ಯಂವ ಅಲ್ಲನು ' ಎಂದ ಮಾದೇವ.
' ಏ ಅದ್ಯಾಂಗ ಆಗ್ತದಪಾ ಸದಾ ಆಗಿನ ಮಾತ ಬ್ಯಾರೆ ಈಗಿನ ಮಾತ ಬ್ಯಾರೆ, ಅವರು ಜೀವನದಾಗ ಭಾಳ ಮುಂದ ಹೋಗ್ಯಾರ ನಾವು ಹಿಂದನ ಉಳದು ಬಿಟ್ವಿ, ಪುಸ್ತಕಾ ಬ್ಯಾರೆ ಬರದಾರ ಅಂತಿ, ಆಗಿನ್ಹಂಗ ಸಲಿಗಿ ತುಗೊಂಡು ಮಾತಾಡ್ಲಿಕ್ಕೆ ಹಿಂಜರಿಕಿ ಅನಸ್ತದ ' ಎಂದ ದೀಪಕ.
' ಪುಸ್ತಕ ಬರದ ಮಾತ್ರಕ್ಕ ಯಾರೂ ದೊಡ್ಡೋರಾಗೋದಿಲ್ಲ, ನಾನೂ ಹೊಟ್ಟೆಪಾಡಿಗೆ ಎಲ್ಲಿಗೋ ಹೋಗಿ ಜೀವನಾ ಕಂಡಕೊಂಡೆ, ನಾ ಒಂದ ಕೆಲಸ ಮಾಡಿದ್ರ ನೀವು ಇನ್ನೊಂದ ಕೆಲಸಾ ಮಾಡಿದ್ರಿ, ಎಲ್ಲಾರ ಕೆಲಸದಾಗೂ ಇರೋ ಹಂಗ ನಂದೂ ಸ್ವಾರ್ಥ ಪರಾರ್ಥ ಎರಡೂ ಇರೋ ಕೆಲಸ. ಸಾಹಿತ್ಯ ಓದಿದ್ದೆ ಬರಿಬೇಕು ಅಂತ ಒಳ ತುಡಿತ ಇತ್ತು ಬರದೆ ಅಷ್ಟೆ ಅದರಾಗೇನೂ ಹೆಚ್ಚಗಾರಿಕೆ ಇಲ್ಲ, ' ಎಂದ ಮಾದೇವ.
' ಭಾಳ ಚಂದ ಮಾತಾಡ್ತೀರಿ ಬಿಡ್ರಿ ನಮ್ಮ ಜೀವನದಾಗೂ ನಿಮ್ಮಂಥವ್ರು ಸಿಕ್ಕಿದ್ರ ನಾವೂ ಬದಲಾಗ್ತಿದ್ವೇನೋ ಏನೋ ' ಎಂದ ದೀಪಕ.
' ಅದೆಲ್ಲ ಭ್ರಮೆ ಯಾರಿಂದ ಯಾರೂ ಬದ್ಲಾಗೋದಿಲ್ಲ, ನಮ್ಮ ಬದಲಾವಣೆ ನಾವ ಮಾಡಿಕೊಬೇಕು ' ಎಂದ ಮಾದೇವ. ಅಷ್ಟರಲ್ಲಿ ಮಾಣಿ ಕೆಟಿ ಚಹಾ ತಂದು ಟೇಬಲ್ ಮ್ಯಾಲೆ ಇಟ್ಟ. ಮೂವರು ಚಹ ಕುಡಿದರು ಮಾಣಿ ತಂದಿಟ್ಟ ಬಿಲ್ಲನ್ನು ಮಾದೇವ ಎತ್ತಿಕೊಳ್ಳಲು ಹೋದ,
ಅದಕ್ಕೆ ಆಸ್ಪದ ಕೊಡದೆ ದೀಪಕ ' ನೀವು ನಮ್ಮ ಗೆಸ್ಟ್ ಅದೀರಿ ಅದ್ಯ್ಹಾಂಗ ಆಗ್ತದ್ರಿ ' ಎಂದು ಬಲವಂತವಾಗಿ ಬಿಲ್ ಎತಿಗೊಂಡು ಗಲ್ಲೆ ಪೆಟಿಗಿ ಮ್ಯಾಲ ಕುಂತ ಸಾವ್ಕಾರಗ ಕೊಟ್ಟು ಹೊರಗೆ ಬಂದು ಗೂಡಂಗಡಿ ಒಳಗ ಮೂರು ಐಟಿಸಿ ಕಿಂಗ್ ಸಿಗರೇಟು ತುಗೊಂಡ ಮಾದೇವಗ ಕೊಡ್ಲಿಕ್ಕೆ ಹೋದ.
ಅದಕ್ಕೆ ಮಾದೇವ 'ನನಗ ಸಿಗರೇಟು ಎಲಡಕಿ ಗುಟಕಾ ಯಾವ ಚಟಾನೂ ಇಲ್ಲ, ನೀವು ಬೇಕಾದ್ರ ಸೇದ್ರಿ ನನ್ನ ತಕರಾರಿಲ್ಲ' ಎಂದ.
' ನಿನ್ನ ತಕರಾರು ಯಾಕೋ ಊದಬತ್ತಿ ಸೇವಾ ಆಗಬೇಕು ಆಗ್ತದ ನಿನ್ಯಾರು ಕೇಳ್ತಾರ ' ಎಂದ ಸದಾಶಿವ.
' ಸದಾ ನೀ ಯಾವಾಗ ಈ ಸಿಗರೇಟು ಸೇದೋದು ಕಲ್ತಿ ' ಎಂದು ಮಾದೇವ ಹಾಸ್ಯ ಮಾಡಿದ.
' ಅಂವ ನನ್ನಂಗೇನೂ ಸಿಗರೇಟಿನ ಹುಳ ಅಲ್ಲ ಅಪರೂಪಕ್ಕ ಯಾರಾದ್ರೂ ಗೆಳ್ಯಾರು ಸಿಕ್ರ ಸೇದ್ತಾನ, ನಮ್ಮಂಗ ಸಿಗರೇಟು ಒಂದ್ ಚಟಾ ಅಲ್ಲ ಅವನಿಗೆ ' ಎಂದ ದೀಪಕ. ಮಾದೇವನಿಗೆ ಬಲವಂತವಾಗಿ ಒಂದ ಬಾಳೆ ಹಣ್ಣು ತಗದು ಕೊಟ್ಟ. ಸಿಪ್ಪೆ ಸುಲಿದು ಅದನ್ನು ಬಾಯ್ಗಿಡುತ್ತಿದ್ದಂತೆ ಹಸುವೊಂದು ಬಂದು ನಿಂತಿತು. ಅದಕ್ಕೆ ಸಿಪ್ಪೆಯನ್ನು ಎಸೆದ ಅದನ್ನು ಹಸು ತಿನ್ನುತ್ತ ಮುಂದೆ ಹೋಯಿತು.
' ಸಿಗರೇಟು ಸೇದುತ್ತ ಮುನ್ನಡೆದ ದೀಪಕ ಮಾದೇವಣ್ಣ ಸಂಜಿಮುಂದ ನಾಕಾದ ಕಡಿಗೆ ಬರ್ರಿ ಅರಾಮಾಗಿ ಮತಾಡೋಣಂತ ' ಎನ್ನುತ್ತ ಕೈಬೀಸಿ ದೀಪಕ ಮುನ್ನಡೆದ. ಆಗಲೆ ಮಧ್ಯಾನ್ಹ ಎರಡು ಗಂಟೆಯಾಗುತ್ತ ಬಂದಿತ್ತು.
' ಬಾರಪಾ ಮಾದೇವ ಮನಿಗ್ಹೋಗೋಣ, ಲಗೂನ ಹೊಗ್ಲಿಲ್ಲಾಂದ್ರ ನಮ್ಮಾಕಿ ಸಿಟ್ಟಾಗ್ತಾಳ ' ಎಂದ ಸದಾಶಿವ. ಇಬ್ಬರೂ ನಿಧಾನವಾಗಿ ಅದು ಇದು ಮಾತನಾಡುತ್ತ ಮನೆ ಸೇರಿದರು.
ಮಧ್ಯಾನ್ಹದ ಊಟ ಮಾಡಿ ನಿದ್ರಿಸಿದ ಸದಾಶಿವ ಮತ್ತು ಮಾದೇವ ಸಾಯಂಕಾಲ ನಾಲ್ಕು ಗಂಟೆಗೆ ಎದ್ದು ಚಹ ಕುಡಿದು ಮತ್ತೆ ಊರ ಫಿರ್ತಿಗೆ ತೆರಳಿದರು. ಮಾದೇವ ಸದಾಶಿವನ ಪ್ರತಿಯೊಂದು ವಿವರಣೆಯನ್ನೂ ಕೇಳುತ್ತ ಗ್ರಾಮದ ಪರಿಸರವನ್ನು ಕಣ್ತುಂಬಿ ಕೊಳ್ಳುತ್ತ ಸಾಗಿದ. ಆತನಿಗೆ ತನ್ನ ಬಾಲ್ಯದ ದೂರ್ವಾಪುರ ಎಲ್ಲೊ ಕಳೆದು ಹೋಗಿದೆ, ಈಗಿನ ದುರ್ವಾಪುರ ಸಹ ಹಣದ ಹಿಂದೆ ಬಿದ್ದಿದೆ, ಪ್ರತಿಯೊಬ್ಬನೂ ಪರಸ್ವತ್ತಿನ ಆಕ್ರಮಣಕ್ಕೆ ಮುಂದಾಗಿ ದ್ದಾನೆ ಅದು ಸರ್ಕಾರದ್ದೆ ಇರಲಿ ದುರ್ಬಲರದೆ ಇರಲಿ. ಮೊದಲೆಲ್ಲ ರಸ್ತೆಯಿಂದ ದೂರದಲ್ಲಿದ್ದ ಮನೆಗಳು ರಸ್ತೆಗಳ ಚರಂಡಿ ಅಂಚಿನ ವರೆಗೆ ತಮ್ಮ ಮನೆಗಳ ಮುಂಗಟ್ಟುಗಳನ್ನು ವಿಸ್ತರಿಸಿದ್ದಾರೆ. ಹೀಗಾಗಿ ನೋಡುಗರ ಕಣ್ಣಿಗೆ ರಸ್ತೆಗಳು ಕಿರಿದಾಗಿ ಕಾಣಿಸುತ್ತಿವೆ. ಕುಡಿಯುವ ನೀರಿನ ಹೊಂಡದ ದಂಡೆಯ ಮೇಲಿನ ವೆಂಕಟೇಶ್ವರ ದೇವಸ್ಥಾನ ದುಸ್ಥಿತಿಗೆ ತಲುಪಿದೆ. ಅದರ ಪಕ್ಕದ ತೋಟ ಬಡಾವಣೆಯಾಗಿ ಮಾರ್ಪಟ್ಟಿದೆ. ಕಾಲ ಮುಂದೆ ಸಾಗಿದೆ ನಾನೇ ಹಿಂದುಳಿದಿರುವೆನೆ ಎನ್ನುವ ಜಿಜ್ಞಾಸೆ ಮಾದೇವನನ್ನು ಕಾಡಿತು. ಹಾಗೆಯೆ ರಾಜ್ಯ ಹೆದ್ದಾರಿಗೆ ಬಂದ ಅವರು ನಾಕಾದ ಕಡೆಗೆ ಸಾಗಿದರು. ನಾಕಾದ ಮುಂದಿನ ಫೂಲ್ ಕಟ್ಟೆಯ ಮೇಲೆ ದೀಪಕ ಕುಳಿತಿದ್ದ.
ಆತನನ್ನು ಗಮನಿಸಿದ ಸದಾಶಿವ ' ಮಾದೇವ ನೋಡು ನಿನ್ನ ಗೆಳ್ಯಾ ಅಲ್ಲೆ ಫೂಲ್ ಕಟ್ಟಿ ಮ್ಯಾಗ ಕುಂತಾನ ನೋಡು ' ಎಂದ.
ಆತನನ್ನು ಗಮನಿಸಿದ ಮಾದೇವ ಕುಳಿತಲ್ಲಿಗೆ ಹೋಗಿ ' ನಮಸ್ಕಾರ ದೀಪಕ ಅವರೆ ಬಂದು ಬಹಳ ಹೊತ್ತಾಯಿತಾ ' ಎಂದು ಮಾತಿಗೆ ಪೀಠಿಕೆ ಹಾಕಿದ.
' ಮಾದೇವ ಇಲ್ಲೆ ಸ್ವಲ್ಪ ಕೆಲಸ ಅದ ನಾನು ಬಸ್ ಸ್ಟ್ಯಾಂಡ್ ಹತ್ರ ಹೋಗಿ ಬರ್ತೇನಿ ' ಎಂದ ಸದಾಶಿವ., ಮಾದೇವ ಫೂಲ್ ಕಟ್ಟೆಯ ಹತ್ತಿರ ಹೋಗಿ ದೀಪಕನ ಪಕ್ಕದಲ್ಲಿ ಕುಳಿತ. ಸ್ವಲ್ಪ ಹೊತ್ತು ಅವರಿಬ್ಬರ ಮಧ್ಯೆ ಮೌನ ಆವರಿಸಿತು. ಮೌನ ಅಸಹನೀಯ ಎನಿಸುತ್ತಿತ್ತು. ಅದರಿಂದ ಹೊರ ಬರುವ ಮಾರ್ಗವಾಗಿ ಮಾದೇವ
' ದೀಪಕ ಹೇಗಿದ್ದೀರಿ ? ಶಾಲಾ ದಿನಗಳಲ್ಲಿ ಸ್ವಲ್ಪ ಕೀಟಲೆ ಸ್ವಭಾವದವ ರೆನಿಸಿದರೂ ಜೀವನಮುಖಿ ಯಾಗಿದ್ದಿರಿ, ಈಗ ನೋಡಿದರೆ ಜೀವನದಲ್ಲಿ ಬಹಳ ನೊಂದವರಂತೆ ಕಾಣುತ್ತೀರಿ ' ಎಂದು ಮಾತಿಗೆ ಪೀಠಿಕೆ ಹಾಕಿದ.
' ಏನು ಹೇಳೊದ್ರಿ ಕನ್ನಡ ಸಾಲಿ ಕಲಿಯೋ ಮುಂದನ ನಾ ಹಾದಿ ಬಿಟ್ಟದ್ದೆ. ಚುಟ್ಟಾ ಸಿಗರೇಟು ಸೇದ್ತಿದ್ದೆ, ಎಲಡಕಿ ಹಾಕ್ತಿದ್ದೆ, ಓದೋದು ಬರ್ಯೋದು ನನಗ ಆಗತಿರಲಿಲ್ಲರಿ, ನಮ್ಮಪ್ಪ ರಾತ್ರಿ ಕುಡದು ಬಂದು ಹೊಡ್ಯೋಂವ, ನಮ್ಮಪ್ಪ ನಮ್ಮಮ್ಮಗೂ ಹೊಡಿತಿದ್ನರಿ. ಮನ್ಯಾಗೂ ಹೊಡತ ಸಾಲ್ಯಾಗೂ ಹೊಡತ ಹಿಂಗಾಗಿ ನನ್ನ ತಲಿಗೆ ವಿದ್ಯಾ ಹತ್ತಲಿಲ್ಲರಿ. ನೀವೆಲ್ಲ ಸರ್ಯಾಗಿನ ಓದ್ತಿದ್ದಿರಿ. ನಿಮ್ಮಂಥ ಓದೋವ್ರ್ನ ನೋಡಿ ನನಗ ಹೊಟ್ಟಿಕಿಚ್ಚು ಆಗ್ತಿತ್ತು, ಆವಾಗ ನಿಮಗೆಲ್ಲ ತೊಂದ್ರಿ ಮಾಡೇನಿ, ಸುಹಾಸಂದೂ ಸಹ ನನ್ನಂಥಾ ಹಣೆಬರಾನ, ಇನ್ನ ಚನವೀರ ಆಳ್ತನದಾಗ ನಮ್ಮೆಲ್ಲರಗಿಂತನೂ ಧಾಂಡಿಗನ ಅವನೂ ಸಹ ಭಾಳ ದುಷ್ಟಾ ಇದ್ದ. ನಾವು ಮನಿಗೆ ಹೋಗೋಮುಂದ ಅವನ ಮನಿಮುಂದನ ಹಾಸಿ ಹೋಗ ಬೇಕಾಗತಿತ್ತು. ಅವರ ಅಂಗಡ್ಯಾಗ ಅವರಪ್ಪ ದೊಡ್ಡಪ್ಪ ಇಲ್ಲದಿದ್ದಾಗ ದಾರ್ಯಾಗ ಹೋಗೋ ಹುಡುಗ್ರನ್ನ ಹೊಡೆಯೋದು ಬೈಯ್ಯೋದು ಮಾಡ್ತಿದ್ದ. ನಮಗೂ ಅಂಜಿಕಿ ಅಗತಿತ್ತು. ಅಂವಗ ತಿರುಗಿ ಹೊಡಿಯೋ ಬೈಯ್ಯೋ ಧೈರ್ಯ ನಮಗಿರಲಿಲ್ಲ. ಹೀಂಗಾಗಿ ಅವನ ಜೊತೆ ಸೇರ್ಕೊಂಡು ಸಭ್ಯ ಹುಡುಗರಿಗೆ ತೊಂದರೆ ಕೊಡೊದು ಹೊಡೆಯೋದನ್ನ ನಾವೂ ಸುರುವು ಮಾಡಿದ್ವಿ. ನಿನಗೂ ಗೊತ್ತಿರಬೇಕು ದೇಶಪಾಂಡೆ ವೆಂಕೋಬರಾಯರ ಮಗ ರಾಮ ಒಂದ್ಸಲ ನಮ್ಮೋಣಿಗೆ ಗಣಪತಿ ನೋಡ್ಲಿಕ್ಕೆ ಬಂದಾಗ ನಾವು ಮೂರೂ ಜನ ಅಂವನ ಸುಖಾ ಸುಮ್ಮನ ಹಿಡ್ಕೊಂಡು ಚುರ್ಚಿಗಿಡಾ ತುಗೊಂಡು ಮಾರಿ ಮುಸಡಿ ನೋಡದ್ಹಾಂಗ ಹೊಡದಿದ್ವಿ. ಹುಷಾರಿಲ್ಲದ್ಹಂಗ ಆಗಿ ಎರಡು ದಿನ ಅಂವಾ ಸಾಲಿಗೆ ಬರಲಿಲ್ಲ, ಮೂರನೆ ದಿನಾ ಅಂವಾ ಸಾಲಿಗೆ ಬಂದಾಗ ಚೆನ್ನಪ್ಪ ಮಸ್ತರು ಅಂವಗ ವಿಚಾರ ಮಾಡಿದಾಗ ಅಂವ ಹುಷಾರಿಲ್ಲ ಅಂದ. ಅವರು ಅಂವಗ ಸುಳ್ಳ ಹೇಳ್ತಿಯಾ ಮಗನ ಎಂದು ಅವನ್ನ ಬೈದು ಹಲ್ಕಟ್ ಮಾತೆಲ್ಲ ಆಡಿ ಭಾಳ ಹೊಡದ್ರೂ ಅಂವಾ ನಾವು ಹೊಡದ ವಿಷಯ ಹೇಳ್ಳಿಲ್ಲ. ಆಗ ನನಗ ಬ್ಯಾಸರಾತು, ಚನವೀರ ಸುಹಾಸ ನಗತಿದ್ರು. ಅಂವಾ ಆ ದಿನದಿಂದ ಸಾಲಿಗೇ ಬರಲಿಲ್ಲ. ಅವರಪ್ಪ ತೀರ್ಕೊಂಡ ಮ್ಯಾಲ ಅವರವ್ವ ಇವನ ಜೋಡಿ ಧಾರವಾಡಕ್ಕ ಹೋಗಿ ಅಡಿಗಿ ನೀರು ಮಾಡಿ ಅವನ್ನ ಬೇಳಸಿದ್ಲು. ಅಂವಾಗೂ ಛೊಲೊತಂಗ ಓದಿ ಈಗ ದೊಡ್ಡ ನೌಕರಿರಿ ಮಾಡ್ಲಿಕ್ಕೆ ಹತ್ಯಾನಂತ. ಆದರ ನಮ್ಮ ಹಣೆಬರ ಎಂಥಾದ್ದು ನೋಡು ನಾವು ಮೂರು ಜನಾನೂ ಸರ್ಯಾಗಿ ಓದ್ಲಿಲ್ಲ. ಸಿನೆಮಾ ಹೋಟಲ್ ತಿಂಡಿ ಷೋಕಿ ಬೇಳಿಸಿಕೊಂಡ್ವಿ, ದುಡ್ಡು ಕದಿಯೋಕ ಸುರುವು ಮಾಡಿದ್ವಿ. ನಮ್ಮ ಸಿನೆಮಾ ಸಾಹಸದ ಕಥಿ ನಿನಗೂ ಗೊತ್ತದ ಅಲ್ಲ, ಸದಾಶಿವ ನನ್ನ ನಿಮಗ ಪರಿಚಯ ಮಾಡ್ಸೋವಾಗ ಹೇಳಿದ್ನಲ್ಲ 'ಗೋಕುಲ ಕಾ ಚೋರ್ ' ಅಂತ.
( ಮುಂದುವರಿದುದು )