"ಸಿನೆಮಾ " (ಕಥೆ)- ಭಾಗ 13
' ಏ ಹಾಂಗೇನೂ ಇಲ್ಲ ಅಂವ ಒಳ್ಳೆ ಮನಸ್ಯಾನ, ಆದರ ನನ್ನ ಕುಡುತದ ಹವ್ಯಾಸ ನನ್ನ ಹೆಂಡತಿ ನಿರ್ಮಲಾಗ ಮದ್ವಿ ಆದ ಮ್ಯಾಲ ಗೊತ್ತಾಗ್ತ ಬಂತು. ಮದಲ ಇದೆಲ್ಲ ಅವರ ಕುಟುಂಬದವರಿಗೆ ಗೊತ್ತಾಗಿರಲಿಲ್ಲ, ಮನ್ಯಾಗ ಊಟ ತಿಂಡಿ ಮಾಡಿ ಅಂಗಡ್ಯಾಗ ಹೋಗಿ ಮೊಕ್ಕೊತಿದ್ದೆ, ಹೀಗಾಗಿ ನನ್ನ ದೌರ್ಬಲ್ಯಗಳ ಪರಿಚಯ ಅವರಿಗ್ಯಾರಿಗೂ ಆಗಿರಲಿಲ್ಲ. ಮದ್ವಿ ನಂತರ ನನ್ನ ವಾಸ್ತವ್ಯ ಯಾವಾಗ ನನ್ನ ಹೆಂಡತಿ ಮನಿಗೆ ಬದಲಾತೋ ಆವಾಗ ನನ್ನ ಕುಡುಕತನ, ಸಿನೆಮಾದ ಷೋಕಿ ಎಲ್ಲ ಗೊತ್ತಾಗ್ತಾ ಬಂದವು. ಮೊದಲ ಮೊದಲ ಒಬ್ಬವನ ಸಿನೆಮಕ್ಕ ಹೋಗತಿದ್ದೆ ಈಗ ಹೆಂಡತಿ ಜತಿಗೆ ಹೋಗೊ ಪ್ರಸಂಗ ಬಂತು. ಆದರೆ ನನ್ನ ಸಮಸ್ಯೆ ಬೇರೆನ ಇತ್ತು. ನನಗ ಇಷ್ಟ ಆದರ ಒಂದೊಂದು ಸಿನೆಮಾ ಅನೇಕ ಸಲ ನೋಡ್ತಿದ್ದೆ.. ಇದು ನನ್ನ ಹೆಂಡತಿ ತಕರಾರಿಗೆ ಕಾರಣ ಆತು. ಮಕ್ಕಳು ದೊಡ್ಡವ್ರಾಗ್ತಾ ಬಂದರು. ನನ್ನ ಮೈದ್ನಂದ್ರಿಗೆ ಮದುವೆ ಅತು. ಕೇಶವನ ಹೆಂಡತಿ ತನ್ನ ಗಂಡನ ಜೋಡಿ ರತ್ನಾಗಿರಿಗೆ ಹೋದ್ರ, ಮಾಧವನ ಹೆಂಡ್ತಿ ತನ್ನ ಗಂಡನ ಮನಿಗೆ ಬಂದ್ಲು. ನನ್ನ ಮಕ್ಕಳೂ ದೊಡ್ಡವರಾಗ್ತಾ ಬಂದ್ರು, ನನ್ನ ದುಡಿತದ ಬಹುಪಾಲು ಹಣ ನನ್ನ ಕುಡುತ, ಸಿನೆಮಾ, ಸಿಗರೇಟು, ಎಲಡಕಿ ಚಟಕ್ಕ ಹೋಗ್ತಿತ್ತು. ಸುಮಿತ್ರಾ ಏನೂ ಕೆಟ್ಟ ಹೆಣಮಗಳಲ್ಲ. ನನ್ನ ವರ್ತನೆಯಿಂದ ಅವಳಿಗೂ ಮನ್ಯಾಗ ಅವಮಾನ ಅನಸ್ತಿತ್ತು. ಅದಕ್ಕ ಬೇರೆ ಮನಿ ಮಾಡೋಣ ಅಂತ ವರಾತಗ ತಗದ್ಲು. ಆಗ ನನಗ ದಿಕ್ಕ ತೋಚದ್ಹಾಂಗ ಆತು. ಏನೇನೋ ಸಬೂಬು ಹೇಳ್ಳಿಕ್ಕೆ ಸುರು ಮಾಡ್ದೆ. ಇಷ್ಟರಾಗ ಆಗಲೆ ನನ್ನ ಅತ್ತಿ ಮಾವ ತೀರಿಕೊಂಡ್ರು. ನನ್ನ ಹೆಂಡತಿ ತಮ್ಮ ಮಾಧವ ಭಾಳ ಬದ್ಲಾಗಿದ್ದ. ಅವಗ ಅಕ್ಕನ ಮ್ಯಾಲ ಮಮತೆ ಏನೋ ಇತ್ತು, ಆದರೆ ನನ್ನ ದೌರ್ಬಲ್ಯಗಳ ಕುರಿತು ಅವನಿಗೆ ಅಸಹನೆ ಇತ್ತು. ಆತನ ಹೆಂಡತಿ ನನಗೇನೂ ಹೇಳದೆ ಹೋದರೂ ನನ್ನ ಬಗ್ಗೆ ಆಕೆಗೆ ಒಂದು ರೀತಿಯ ಉದಾಸೀನ ಭಾವ ಇದ್ದದ್ದು ಸುಳ್ಳಲ್ಲ. ಆದರೂ ಅವರಿಬ್ರೂ ನನ್ನ ಕುಟುಂಬಾನ ಹೊರಗ ಹಾಕಲಿಲ್ಲ. ಆದ್ರ ನನ್ನ ಹೆಂಡತಿ ಅವಮಾನದ ಭಾರದಿಂದ ಕುಗ್ಗಿ ಹೋಗಿದ್ಲು. ಕುಡಿತ ನನ್ನ ಹಾಳ ಮಾಡಿತ್ತು. ಕುಡಿದಾಗ ಅಸಭ್ಯವಾಗಿ ಅಷ್ಟೆ ಅಸಹ್ಯವಾಗಿ ವರ್ತಿಸುತ್ತಿದ್ದೆ. ಕೂಗುವುದು, ಬೈಯುವುದು ಮತ್ತು ನಿಂತ ನಿಂತಲ್ಲೆ ಮೂತ್ರ ವಿಸರ್ಜನೆ ಮಾಡೋದು ಮಾಡುತ್ತಿದ್ದೆ, ಈ ಕಾರಣದಿಂದಾಗಿ ಸಂಬಂಧಿಕರಿರಲಿ ಹೆಂಡತಿ ಮಕ್ಕಳ ತಿರಸ್ಕಾರಕ್ಕೂ ಕಾರಣಾದೆ. ನನ್ನ ಈ ಅಸಭ್ಯ ವರ್ತನೆಯಿಂದ ನೊಂದ ನನ್ನ ಭಾವ ಮೈದುನ ಮಾಧವ ಕುಡಿತದ ಚಟ ಬಿಡಿಸುವ ಕೇಂದ್ರವೊಂದಕ್ಕೆ ಒಯ್ದು ಸೇರಿಸಿದ. ಅಲ್ಲಿಯ ಸ್ಥಿತಿ ಇನ್ನೂ ನರಕ ಅಲ್ಲಿ ಬೈಯುವುದು ಹೊಡೆಯುವದು ಮಾಡುತ್ತಿದ್ದರು. ಮಾಧವ ಅಲ್ಲಿಗೆ ಆಗಾಗ ದುಡ್ಡು ಮಾತ್ರ ಕಳಸ್ತಿದ್ದ. ನನ್ನ ನೋಡಾ ಒಮ್ಮೆಯೂ ಸಹ ನನ್ನ ಹೆಂಡತಿ ಮಕ್ಕಳಾದಿಯಾಗಿ ಯಾರೂ ಬರಲಿಲ್ಲ. ಅವರೆಲ್ಲ ನನ್ನ ಮರೆತು ಬಿಟ್ಟಿದ್ದರು ಅಂತ ಕಾಣಸ್ತದ. ಕ್ರಮೇಣ ಕುಡಿತದ ಚಟದಿಂದ ವಿಮುಕ್ತ ಆದೆ. ಈ ಬಗ್ಗೆ ಆಶ್ರಮದವರು ನನ್ನ ಮೈದುನನಿಗೆ ಬರೆದು ತಿಳಿಸಿದರೂ ಯಾರೂ ನನ್ನ ಕರಕೊಂಡು ಹೋಗಾಕ ಬರಲಿಲ್ಲ. ನನ್ನ ಮನದಿಂದ ಪೂನಾ ಆಗಲೆ ಮರೆಯಾಗಿತ್ತು, ಹಾಗೆಯೆ ಹೆಂಡತಿ ಸುಮಿತ್ರ ಮತ್ತು ಮಕ್ಕಳೂ ಸಹ.
ಮತ್ತೆ ಅನ್ನ ಬಟ್ಟೆ ಆಶ್ರಯಗಳಿಗಾಗಿ ದುಡಿಬೇಕಿತ್ತು. ಹೊಳ್ಳಿ ಹುಬ್ಬಳ್ಳಿಗೆ ಪಯಣ ಬಂದೆ. ನನಗೆ ಟೇಲರಿಂಗ್ ವೃತ್ತಿ ಬಿಟ್ಟು ಬೇರೇನೂ ಗೊತ್ತಿರಲಿಲ್ಲ.. ದೂವರ್ಪುರಕ್ಕೆ ಹೋಗಲು ಮನಸಿರಲಿಲ್ಲ, ಯಾವ ಮುಖ ಇಟ್ಟುಕೊಂಡು ಹೋಗಲಿ ಎನ್ನುವುದು ಪ್ರಶ್ನೆಯಾಗಿತ್ತು. ಕತ್ತಿ ತಪ್ಪಿದರೆ ಹಾಳುಗೋಡೆ ಅನ್ನೊಹಾಂಗ ಮತ್ತೆ ಮಾಡರ್ನ ಟೇಲರ್ಸ ರವರಲ್ಲಿಗೆ ಹೋದೆ. ಮಾಲಿಕ ರಾಜಾರಾಮ ಮತ್ತು ಅವರ ಹೆಂಡತಿ ಕೆಲ ವರ್ಷಗಳ ಹಿಂದೆ ತೀರಿ ಕೊಂಡಿದ್ದರು. ಅವರ ಮಗ ಹರಿರಾಮ ನನಗೆ ಕೆಲಸ ಕೊಟ್ಟರು. ನನಗೆ ಬರುತ್ತಿದ್ದ ಸಂಬಳದಲ್ಲಿ ಅರಾಮವಾಗಿ ಜೀವನ ನಡಿತ್ತಿತ್ತು. ಕುಡಿತಾನ ಪೂರಾ ಬಿಟ್ಟ ಬಿಟ್ಟಿದ್ದೆ, ಆರೋಗ್ಯ ಸುಧಾರಿಸ್ತ್ತಾ ಬಂತು. ಆದರೆ ಸಿನೆಮಾ ಸಿಗರೇಟು ಹವ್ಯಾಸಗಳು ಮತ್ತ ಪ್ರಾರಂಭ ಆದವು.
' ಇಷ್ಟೆಲ್ಲ ಆದರೂ ಆ ಹವ್ಯಾಸಗಳನ್ನು ಬಿಡಲು ಆಗಲಿಲ್ಲವೆ ? ' ಎಂದು ಮಾದೇವನಿಂದ ಪ್ರಶ್ನೆ ತೂರಿಬಂತು
' ಹೌದು ನೀವನ್ನೋದು ನಿಜ, ಅವುಗಳ ವ್ಯಾಮೋಹದಿಂದ ಕಳಚಿಕೊಳ್ಳೋದು ನನ್ನಿಂದ ಆಗಲೆ ಇಲ್ಲ, ಅವೆರಡನ್ನು ಬಿಟ್ಟರೆ ನನಗೆ ಯಾವ ಬದುಕಿತ್ತು ? ನಾನು ನನ್ನ ತೆವಲುಗಳಿಗಾಗಿ ಮಾತ್ರ ಬದುಕಿಬಿಟ್ಟೆ ಅಂತ ಕಾಣ್ತದ.
' ಮೊದಲ ಹೆಂಡತಿ, ಆಕೆಯ ಮಗ ನಿನ್ನ ತಂದೆ ತಾಯಿ ಮತ್ತು ತಮ್ಮ ನಿನ್ನ ನೆನಪಿಗೆ ಬರಲಿಲ್ಲವೆ ? ' ಎಂದು ಮಾದೇವ ಕೇಳಿದ.
' ಅಪ್ಪ ಅಮ್ಮ ತಮ್ಮ ನನ್ನ ಹೆಂಡತಿ ಲಕ್ಷ್ಮೀ ಎಲ್ಲರೂ ತೀರಿ ಕೊಂಡಿದ್ದರು. ನನ್ನ ತಮ್ಮನ ಹೆಂಡತಿ ಸರಸ್ವತಿ ಮಾತ್ರ ಬದುಕಿದ್ಲು, ಆಕೆಯೆ ನನ್ನ ಮಗ ಸಂದೀಪನನ್ನು ಸಾಕಿ ಸಲುಹಿ ದೊಡ್ಡವನನ್ನಾಗಿ ಮಾಡ್ಯಾಳ ಅಂತ ತಿಳಿತು, ಈಗ ಅವನ ಮದುವಿ ಆಗಿದ್ದು ಇರೋ ಅಲ್ಪ ಸ್ವಲ್ಪ ಜಮೀನು ಜೊತೆ ಟೇಲರಿಂಗ ಕೆಲಸ ಮಾಡಿಕೊಂಡು ಇದ್ದಾನ ಅಂತ ನಂತರ ತಿಳದು ಬಂತು. ಮುಂದೆ ಕೆಲವು ದಿವಸ ಆದ ಮ್ಯಾಲ ನಾನು ಹುಬ್ಬಳ್ಳಿಗೆ ಬಂದಿರುವ ವಿಷಯ ಅವನ ತಿಳಕೊಂಡು ಒಂದಿನ ಬಂದು ನನ್ನ ಊರಿಗೆ ಬಾ ಅಂತೆ ಕರದ, ಯಾವ ಮುಖ ಇಟ್ಟುಕೊಂಡು ಹೊಗಲಿ ನಾ ನಿರಾಕರಿಸಿದೆ. ಕೆಲ ದಿನ ಬಿಟ್ಟು ತನ್ನ ಹೆಂಡತಿ ಮಗ ಜೋಡಿ ಬಂದು ಕರದ, ನನ್ನ ಸೊಸೆಯೂ ಬಾ ಅಂತ ಒತ್ತಾಯ ಮಾಡಿದ್ಲು, ನಿಮ್ಮ ಬಗ್ಗೆ ನಮಗೆ ಯಾವ್ದ ಬ್ಯಾಸ್ರ ಇಲ್ಲ್ಲ, ನೀವು ಮನೆಯ ಹಿರಿಯ ಸದಸ್ಯರಾಗಿ ನಮ್ಮೊಟ್ಟಿಗೆ ಇದ್ದರಾತು ಅಂದ್ಲು. ಕಣ್ಣೀರು ಕಾಣಿಸಿ ಕೊಂಡ್ವು, ಜೀವನದಾಗ ಮೊದ್ಲೆ ಸಲ ಭಾವುಕ ಆಗಿದ್ದೆ. ಏನು ಮಾಡೋದಿತ್ತ್ತು ನನ್ನ ಬಹುಪಾಲು ಬದುಕು ನಿರರ್ಥಕ ಆಗಿ ಕಳದು ಹೋಗಿತ್ತು. ಇನ್ನುಳಿದ ಬದುಕನ್ನಾದ್ರೂ ಅರ್ಥಪೂರ್ಣ ಆಗಿ ಕಳಿ ಬೇಕು ಅನ್ನೋ ನಿರ್ಧಾರದಿಂದ ದೂರ್ವಾಪುರಕ್ಕೆ ಬಂದೆ. ಸುಮಾರು ಹತ್ತು ವರ್ಷ ಆದವು. ತಮ್ಮನ ಹೆಂಡತಿ ಈಗ ಎರಡು ವರ್ಷದ ಹಿಂದ ನೆಲ ಹಿಡದು ತೀರಿ ಕೊಂಡ್ಲು. ನನ್ನ ಮಗ ಸೊಸೆ ಇಬ್ಬರೂ ಅವಳ್ನ ಭಾಳ ಚೆನ್ನಾಗಿ ನೋಡಿ ಕೊಂಡ್ರು. ಮೊಮ್ಮಗ ಸಂದೀಪ ಮೂರನೆ ಕ್ಲಾಸಿನ್ಯಾಗ ಓದ್ಲಿಕ್ಕೆ ಹತ್ಯಾನ, ನಿನ್ನಂಗ ಅವನೂ ಶ್ಯಾಣಾ ಅದಾನ. ತನ್ನ ಕ್ಲಾಸಿನ್ಯಾಗ ಒಂದನೆ ನಂಬರ್ ಅದಾನ, ಮೇಲಾಗಿ ಸಭ್ಯ ಅದಾಮ ನನ್ಹಾಂಗ ಉಡಾಳ ಅಲ್ಲ, ಅದು ನನಗ ಆನಂದ ತಂದ ಸಂಗತಿ ' ಅಂದ.
' ಮತ್ತೆ ನೀನು ಪೂನಾಕ್ಕೆ ಹೋಗಲಿಲ್ಲವೆ, ನಿನ್ನ ಹೆಂಡತಿ ಸುಮಿತ್ರ ಮತ್ತು ಮಕ್ಕಳು ರಾಜೀವ, ಸಂಜೀವ ಏನು ಮಾಡುತ್ತಿದ್ದಾರೆ.'? ಎಂದು ಮಾದೇವ ಕುತೂಹಲದಿಂದ ಪ್ರಶ್ನಿಸಿದ.
' ಮಗ ರಾಜೀವ ಒಬ್ಬ ಸಾಫ್ಟ್ವೇರ್ ಎಂಜನೀಯರ ಜರ್ಮನ್ಯಾಗ ಅದಾನಂತ, ಇನ್ನೊಬ್ಬ ಮಗ ಸಂಜೀವ ಬೆಂಗಳೂರಿನ ಟಾಟಾ ಸೈನ್ಸ್ ಇನಸ್ಟಿಟ್ಯೂಟ್ನಲ್ಲಿ ಒಳ್ಳೆ ಕೆಲಸದಾಗ ಅದಾನ. ಇಬ್ಬರಿಗೂ ಮದುವಿ ಆಗೈತಿ, ತಮ್ಮ ಸೋದರಮಾವಂದಿರ ಮಕ್ಕಳ್ನ ಮದುವಿ ಆಗ್ಯಾರ.. ಇನ್ನು ಹೆಂಡ್ತಿ ಸುಮಿತ್ರ ಬೆಂಗಳೂರು, ಜರ್ಮನಿ, ಪೂನಾ ಅಂತ ಮಕ್ಕಳ ಮನೆಗಳಿಗೆ ಅಡ್ಡಾಡಿಕೊಂಡು ಇರಭೊದು. . '
' ಏನೇ ಆಗಲಿ ಸುಮಿತ್ರ ನಿನ್ನನ್ನು ಕಡೆಗಣಿಸ ಬಾರದಿತ್ತು..! ' ಎಂದ ಮಾದೇವ.
' ನನಗೆ ಆ ಭಾವನೆಯೆ ಬಂದಿಲ್ಲ ಮಾದೇವ ಅವರೆ, ಯಾಕಂದರೆ ಅವಳಿಗೆ ನಾನು ಅವಮಾನವಲ್ಲದೆ ಬೇರೇನು ಸುಖ ಸಂತೋಷ ಕೊಟ್ಟೆ? ಅವಳ ಕುರಿತು ನನಗೆ ಅಸಮಾಧಾನ ಇಲ್ಲ. ಅವರೆಲ್ಲರ್ನೂ ನಾ ಮರತು ಬಿಟ್ಟೇನಿ ' ಎಂದ ದೀಪಕ.
' ನೀವು ಮರೆತಿರಬಹುದು ಆದರೆ ಹೆಂಡತಿಯಾಗಿ ಅವರ ಕರ್ತವ್ಯ ? ' ಎಂದ ಮಾದೇವ.
' ಹೆಂಡತಿಯ ಕರ್ತವ್ಯ ಕೇಳೊ ಮೊದ್ಲ ಗಂಡನಾಗಿ ನಾ ಏನು ಕರ್ತವ್ಯ ಮಾಡ್ದೆ ಅನ್ನೊ ಪ್ರಶ್ನೆ ನನ್ನ ಮುಖಕ್ಕ ಬಂದು ರಪ್ಪಂತ ಹೊಡೀತದ ಅದಕ್ಕೇನಂತ್ಹೇಳಿ ಉತ್ತರಾ ಕೊಡೋದು.? ' ದೀಪಕ ಮಾರುತ್ತರಿಸಿದ.
' ಏನ ಆಗಲಿ ಬಹಳ ವರ್ಷಗಳ ನಡಸಿಕೊಂಡು ಬಂದ ಅನುರೂಪದ ದಾಂಪತ್ಯ, ಅದಕ್ಕಾದ ಎರಡು ಮಕ್ಕಳು ಈ ಸಂಬಂಧಗಳ ಕುರಿತು ಅವರು ಯೋಚನೆ ಮಾಡಬೇಕಿತ್ತು, ಇದು ನೀವು ಸುಧಾರಣಾ ಆದ ಮೇಲೆ ಅದರೂ ಅವರು ಪರ್ಯಾಲೋಚಿಸಬೇಕಿತ್ತು' ಎಂದ ಮಾದೇವ.
' ಅನುರೂಪದ ದಾಂಪತ್ಯ ಅನ್ನೋ ಪದಾ ನೀವು ಬಳಕೆ ಮಾಡಿದ್ರಿ, ಆ ಅನ್ಯೋನ್ಯತೆ ಎರಡು ಮಕ್ಕಳು ಆಗೋ ವರೆಗೆ ಇತ್ತು, ಯಾವಾಗ ನನ್ನ ದುಶ್ಚಟಗಳು ಆಕೆಯ ಗಮನಕ್ಕೆ ಬಂದ್ವೋ ಯಾವಾಗ ನಾ ಸುಧಾರಣೆ ಆಗಲಿಲ್ಲವೊ ನಮ್ಮ ದಾಂಪತ್ಯ ಹಳಸಿ ಹೋತು, ಇನ್ನ ಮಕ್ಕಳಾಗೋ ವಿಷಯಕ್ಕೂ ಅನ್ಯೋನ್ಯತೆಗೂ ಯಾವುದೇ ಸಂಬಂಧ ಇಲ್ಲ, ಅನ್ಯೊನ್ಯತೆ ಇಲ್ಲದನೂ ಮಕ್ಕಳಾಗತಾವ ' ಎಂದ ದೀಪಕ.
' ನಿಮ್ಮ ಮೊದಲ ಹೆಂಡತಿ ಮಗ ಏನು ಅವನ ಹೆಸರು ಅವನೂ ಏನೂ ಕೇಳಲಿಲ್ಲವಾ ' ಎಂಬ ಮರುಪ್ರಶ್ನೆ ಮಾದೇವನಿಂದ ತೂರಿ ಬಂತು.
' ಮದ್ಲ ಹೆಂಡತಿ ಮಗನ ಹೆಸರು ಸಂತೋಷ ಅಂತ, ಅವನ ಹೆಂಡ್ತಿ ಪಾರ್ವತಿ, ಮೊಮ್ಮಗ ಸಂದೀಪ ಇವರು ಯಾರೂ ನನ್ನ ಪೂನಾದ ಬದುಕಿನ ಬಗ್ಗೆ ಒಮ್ಮೆಯೂ ಕೇಳಿಲ್ಲ, ಆದರೆ ಅವರಿಗೆ ಪ್ರತಿ ವಿವರ ಸಹ ಗೊತ್ತು ಅಂತ ನನಗ ಅನಸ್ತದ, ಅದೂ ಅಲ್ಲದ ನನಗ ಇಲ್ಲಿವರ್ಗೂ ಸಹ ಏನೂ ಅಂದಿಲ್ಲ, ನಾನ ಹುಬ್ಬಳ್ಳಿ ಮಾಡರ್ನ ಟೇಲರ್ನವರ ಅಂಗಡಿಯಿಂದ ವಾರಕ್ಕೊಮ್ಮೆ ಹೊಲಿಗಿ ಗುತಿಗಿ ತುಗೊಂಡು ಬರ್ತೇನಿ ಪ್ರತಿ ಆಯಿತ್ವಾರ ಹೊಲಿಗಿ ಕಂಪಲೀಟ್ ಮುಗಿಸಿ ಹೊಸ ಆರ್ಡರ ತರತೇನಿ, ನನ್ನ ಹೊಲಿಗಿ ಮಜೂರಿ ಸಂತೊಷಗ ಕೊಡಾಕ ಭಾಳ ಸಲ ಪ್ರಯತ್ನ ಮಾಡ್ದೆ
ಆದ್ರ ಅಂವ ಬೇಡ ಅಂದ, ಸೊಸಿಗೆ ಕೊಡಾಕ ಹೋದೆ ಅಕೀನೂ ಬ್ಯಾಡ ಅಂದ್ಲು. ಈಗ ಪ್ರತಿ ತಿಂಗಳ ಐನೂರು ರೂಪಾಯಿ ಮೊಮ್ಮಗ ಸಂದೀಪನ ಹೆಸರ್ಲೆ ಆರ್ಡಿ ಮಾಡಸೇನಿ, ಹಂಗ ಅವನ ಹೆಸರ್ಗೆ ಒಂದು ಇನ್ಸೂರನ್ಸ್ ಮಾಡಿಸೇನಿ. ಜೀವನದಾಗ ಮದ್ಲ ಬಾರಿಗೆ ಲೆಖ್ಖಾಚಾರದ ಬದುಕು ಬದಕಲಿಕ್ಕೆ ಹತ್ತೇನಿ, ಅದು ನನಗ ಒಂಥರಾ ಜವಾಬ್ದಾರಿ ಹೊರಿಸೇದ. ಇದ ನನಗ ಹೊಲಿಗಿ ಕೆಲಸ ಮಾಡ್ಲಿಕ್ಕೆ ಪ್ರೇರಣಾ ಅಗೇದ. ವಯಸ್ಸಾದ ಮ್ಯಾಲ ಜವಾಬ್ದಾರಿ ಬದುಕು ನಡಸ್ಲಿಕ್ಕೆ ಹತ್ತೇನಿ ' ಎಂದು ದೀಪಕ ಭಾವುಕನಾಗಿ ನುಡಿದ.
' ಹಾಗಾದ್ರ ನೀವು ಈಗ ಎಲ್ಲ ಹಳೆ ಅಭ್ಯಾಸ ಬಿಟ್ಟು ಹೊಸ ಮನುಷ್ಯರಾಗೇರಿ ' ಎಂದು ಮಾದೇವ ಮೆಚ್ಚುಗೆ ಸೂಚಿಸಿದ.
' ಇಲ್ಲ ಕುಡತ ಒಂದನ್ನ ಪೂರಾ ಬಿಟ್ಚ ಬಿಟ್ಟೇನಿ, ಎಲಡಿಕೆ ನನ್ನ ಸೊಸೀನ ತರಿಸಿ ಕೊಡ್ತಾಳ, ಆದರೆ ಆವಾಗಾವಾಗ ಹೋಟಲು ಮತ್ತು ಸಿನೆಮಾ ಹವ್ಯಾಸ ಬಿಟ್ಟಿಲ್ಲ ನೋಡ್ರಿ ' ಅಂತ ಮನಸ ಬಿಚ್ಚಿ ಮಾತಾಡಿದ.
' ಇಷ್ಟು ವಯಸ್ಸಾದ್ರೂ ನಿಮ್ಮ ಸಿನೆಮಾ ಹೋಟಲ್ ಚಟಾ ಮಾತ್ರ ಬಿಡಲಿಕ್ಕೆ ಆಗಲಿಲ್ಲ ಹಂಗರ ' ಅಂದ ಮಾದೇವ.
' ಇಲ್ಲ ಮಾದೇವ ಅವ್ರೆ ಮದ್ಲಿನಷ್ಟು ಈಗ ಇಲ್ಲ ಒಳ್ಳೆದ ಸಿನೆಮಾ ಅಂತ ವಿಮರ್ಶಾ ಬಂದ ಚಿತ್ರಗಳ್ನ ಮಾತ್ರ ನೋಡತೇನಿ. ಪ್ರತಿವಾರ ಹುಬ್ಬಳ್ಳಿಗೆ ಹೋದಾಗ ಎಲ್ಲ ಕೆಲಸಾ ಮುಗಿಸಿ ಸಿನೆಮಾ ನೋಡ್ಕೊಂಡು ಹೋಟಲ್ಗೆ ಹೋಗಿ ಬರೋದು ಮಾತ್ರ ತಪ್ಪಿಸಿಲ್ಲ ನೋಡ್ರಿ ' ಹರ್ಷಚಿತ್ತದಿಂದ ದೀಪಕ ಉತ್ತರಿಸಿದ.
' ಮನ್ಯಾಗ ಯಾರೂ ಏನೂ ಅನ್ನೊದಿಲ್ವಾ ?'ಎಂದು ಮಾದೇವ ಕುತೂಹಲ ತೋರಿದ..
' ಇಲ್ಲ.! ಟಿವಿ ಓಳಗ ಯಾವದರ ಹಳೆ ಸಿನೆಮಾ ಬಂದ್ರ ಅವರ ನೋಡು ಅಂತ ಹಾಕಿ ಕೊಡ್ತಾರ, ಆದ್ರ ಹಳೆ ಸಿನೆಮಾ ನೋಡ್ಲಿಕ್ಕೆ ಸಿಗೋದುಲ್ಲ ಅಂತ ನೋಡ್ತೀನಿ, ಆದರೆ ನಾ ಹೊಸ ಸಿನ್ಮಾ ಹುಬ್ಬಳ್ಳಿ ಥೇಟರ್ನ್ಯಾಗ ನೋಡೋದು. ನಮಗೆಲ್ಲ ಟಿವಿ ಓಳಗ ಸಿನೆಮಾ ನೋಡೀದ್ರ ನೋಡಿದ್ಹಂಗ ಆಗೋದುಲ್ಲ, ದೊಡ್ಡ ಸ್ಕ್ರೀನ್ ಮುಂದ ಕುತಗೊಂಡು ಶೇಂಗಾ ತಿನ್ಕೊತ ನೋಡೊ ಮಜಾನ ಬ್ಯಾರೆ ಇರತದ ' ಎಂದು ದೀಪಕ ಉತ್ಸಾಹಿತನಾದ.
' ಹಂಗರ ಥೇಟರನ್ಯಾಗ ಇತ್ತಿತ್ತಲಾಗ ಯಾವ ಸಿನೆಮಾ ನೋಡಿದ್ರಿ ?' ಎಂದು ಮಾದೇವನಿಂದ ಕುತೂಹಲದ ಪ್ರಶ್ನೆ ಹೊರ ಬಂತು.
ಮತ್ತಷ್ಟು ಉತ್ಸಾಹಿತನಾಗಿ ದೀಪಕ ತಾನು ಕಳೆದ ವಾರ ಯಶ್ ಛೋಪ್ರಾನ ' ಏಕ ಥಾ ಟೈಗರ್ ' ಚಿತ್ರ ನೋಡಿರುವುದಾಗಿಯೂ ಅದು ಬಹಳ ಚೆನ್ನಾಗಿದೆ ಎಂದೂ, ಸಲ್ಮಾನ, ಶಾರುಖ್ ಮತ್ತು ಅಮೀರಖಾನ್, ಅಜಯ ದೇವಗನ್ ಮತ್ತು ಅಕ್ಷಯ ಕುಮಾರ ತನ್ನ ಪ್ರೀತಿಯ ನಟರೆಂದೂ, ರಾಣಿ ಮುಖರ್ಜಿ, ಮಾಧುರಿ ಮತ್ತು ಐಶ್ವರ್ಯ ತನ್ನ ನೆಚ್ಚಿನ ಅತ್ಯುತ್ತಮ ನಟಿಯರೆಂದೂ ಬಹಳ ಖುಷಿಯಿಂದ ಮಾತನಾಡಿದ. ಇಬ್ಬರೂ ಮೌನವಾಗಿ ಅಗಸ್ತ್ಯ ತಪೋವನದ ದಾರಿಗುಂಟ ಹೆಜ್ಜೆ ಹಾಕುತ್ತ ನಡೆದರು. ಸೂರ್ಯ ಪಶ್ಮಿಮದಂಚಿಗೆ ತನ್ನ ಪಯಣ ಬೆಳೆಸಿದ್ದ. ಸುಂದರ ಸಂಜೆಯ ಆಕಾಶದ ಕೆಂಬಣ್ಣದ ಹಿನ್ನೆಲೆಯ ಭಿತ್ತಿಯಲ್ಲಿ ಬೆಳ್ಳಕ್ಕಿ ಹಾಗೂ ಗಿಳಿಗಳ ಹಿಂಡುಗಳು ಕೆಂಬಣ್ಣದ ವರ್ಣ ಪ್ರಭೆಯಲ್ಲಿ ವಿಶಾಲ ಬಯಲಲ್ಲಿ ಮೆರುಗು ಪಡೆದು ನಿಂತಿದ್ದ ಶ್ವೇತ ವರ್ಣದ ಮಸೀದಿ ಆಕಾರದ ಕಟ್ಟಡ, ಮನೆಗಳಿಗೆ ಮರಳುತ್ತಿದ್ದ ಜಂಗಳಿ ದನಗಳ ಹಿಂಡುಗಳು ವಾತಾವರಣಕ್ಕೆ ಒಂದು ರೀತಿಯ ಕಳೆ ಬಂದಿತ್ತು. ದೀಪಕನನ್ನು ಒಮ್ಮೆ ದಿಟ್ಟಿಸಿ ನೋಡಿ ಯೋಚನೆಗೆ ಜಾರಿದ.
( ಮುಂದುವರಿಯುವುದು)