" ಸಿನೆಮಾ "(ಕಥೆ)- ಭಾಗ 14
ಬಾಲ್ಯದಲ್ಲಿ ತುಂಟನಾಗಿದ್ದ ಪರ ಪೀಡಕನಾಗಿದ್ದ ದೀಪಕ ತನ್ನ ಸೂತ್ರಕಿತ್ತ ಗಾಳಿಪಟದಂತಹ ಗತ ಬದುಕಿನಲ್ಲಿ ನೊಂದು ಬೆಂದು ಆತ ಹೊರಬಂದ ಬಗೆ ಒಂದು ರೀತಿಯ ಅಚ್ಚರಿಯನ್ನು ಮೂಡಿಸಿತ್ತು. ತನ್ನ ಗತ ಜೀವನದ ಬಗೆಗೆ ಆತನಿಗೆ ಪಶ್ಚಾತಾಪ ವಾಗಿದೆಯಾದರೂ ಹೆಂಡತಿಯರಾದ ತೀರಿಹೋದ ಲಕ್ಷ್ಮೀ, ಬದುಕಿರುವ ಸುಮಿತ್ರ ಮತ್ತು ಅಕೆಯ ಮಕ್ಕಳು ಸಂಬಂಧಿಕರು ಯಾರ ಬಗೆಗೂ ಆತನಿಗೆ ತೀವ್ರ ವ್ಯಾಮೋಹವಾಗಲಿ ಇಲ್ಲ ದ್ವೇಷ ತಿರಸ್ಕಾರಗಳಾಗಲಿ ಇಲ್ಲ. ಆದರೆ ಆತನಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಿರುವ ಮೊದಲ ಹೆಂಡತಿಯ ಮಗ ಸೊಸೆ ಮತ್ತು ಮೊಮ್ಮಗನ ಬಗ್ಗೆ ವ್ಯಾಮೋಹ ಉಂಟಾಗಿದೆ, ಅವರೆಲ್ಲ ಆತನ ಪೂರ್ವಾಶ್ರಮದ ವಿಫಲ ಜೀವನದ ಬಗ್ಗೆ ಏನೂ ಕೇಳಿ ಹಳೆಯ ಗಾಯಗಳನ್ನು ಕೆದಕುತ್ತಿಲ್ಲ, ಮೇಲಾಗಿ ಕೌಟುಂಬಿಕ ಜವಾಬ್ದಾರಿಗಳನ್ನು ಆತನ ಮೇಲೆ ಹೇರುತ್ತಿಲ್ಲ. ಇತ್ತಿಚಿನ ಪೀಳಿಗೆಯವರಾದ ಆತನ ಮಗ ಮೊಮ್ಮಗರಿಗೆ ಸಿನೆಮಾ ಹವ್ಯಾಸವಿಲ್ಲ. ಇಷ್ಟು ವಯಸ್ಸಾದರೂ ಸಿನೆಮಾ ಹವ್ಯಾಸದಿಂದ ಆತ ಮುಕ್ತನಾಗಿಲ್ಲ. ಆತನ ಮೊಮ್ಮಗನದು ಬರಿ ಓದಿನ ಪ್ರಪಂಚವಾದರೆ ಮಗನದು ಕೌಟುಂಬಿಕ ಜವಾಬ್ದಾರಿಯ ವಿಷಯದ ಜಗತ್ತು. ಆದರೆ ಇದ್ಯಾವ ವಿಷಯಗಳ ಬಗ್ಗೆ ಆತನಿಗೆ ಚಿಂತೆಯಿಲ್ಲ. ತನ್ನ ದುಡಿಮೆಯ ಅಲ್ಪಭಾಗವನ್ನು ಮೊಮ್ಮಗ ಸಂದೀಪನ ಶ್ರೇಯೋಭಿವೃದ್ಧಿಗಾಗಿ ವ್ಯಯಿಸುತ್ತಿರುವುದನ್ನು ಬಿಟ್ಟರೆ ಇನ್ನೂ ತನ್ನ ವ್ಯಸನಗಳಿಂದ ಮುಕ್ತಿ ಪಡೆಯದ ದೀಪಕ ತನ್ನ ಕಲ್ಪನಾ ಜಗತ್ತಿನಲ್ಲಿ ವಿಹರಿಸುತ್ತಿದ್ಧಾನೆ ಎನಿಸುತ್ತದೆ, ಇನ್ನೂ ಸಿನೆಮಾ ವೈಮೋಹದಿಂದ ಮುಕ್ತನಾಗಿಲ್ಲ. ದೇವಾನಂದ, ದಿಲೀಪಕುಮಾರ, ರಾಜಕಪೂರ, ರಾಜೇಂದ್ರ ಕುಮಾರ, ಮಾಲಾಸಿನ್ಹ,, ವೈಜಯಂತಿ ಮಾಲಾ, ಸಾಧನಾ ರವರ ಬದಲಿ ಜಾಗಕ್ಕೆ ಸಲ್ಮಾನ, ಶಾರಖ್, ಆಮೀರ್, ಅಜಯ್ ದೇವಗನ್, ಅಕ್ಷಯ ಕುಮರ್, ಮಾಧುರಿ, ಐಶ್ವರ್ಯ ಮತ್ತು ಕತ್ರಿನಾ ಮುಂತಾದವರು ಬಂದು ಕುಳಿತಿದ್ದಾರೆ. ಐವತ್ತು ವರ್ಷಗಳ ದೀರ್ಘಕಾಲ ಸಂದಿದ್ದರೂ ಆತನ ಸಿನೆಮಾ ದಾಹ ಇನ್ನೂ ತಣಿದಿಲ್ಲ. ಆತನೊಡನೆ ನನ್ನನ್ನು ಹೋಲಿಸಿ ಕೊಂಡರೆ ನನ್ನ ಸಿನೆಮಾ ಜಗತ್ತು ದಿಲೀಪ, ದೇವ, ರಾಜ್, ರಾಜೇಂದ್ರ ಸ್ವಲ್ಪ ಮಟ್ಟಿಗೆ ರಾಜೇಶ ಖನ್ನಾನ್ನು ಬಿಟ್ಟರೆ ಯಾವ ನಟರೂ ನನ್ನನ್ನು ಅಷ್ಟು ತಟ್ಟಲಿಲ್ಲ. ಮುಗ್ಧ ಬಾಲ್ಯದ ಕಾಲದಲ್ಲಿ ಆಕರ್ಷಿಸಿದ್ದ ಸಿನೆಮಾ ಆಕರ್ಷಣೆ ಹದಿ ಹರೆಯದ ವಯಸ್ಸಿಗೆ ಬಂದಂತೆ ಉಳಿಯಲಿಲ್ಲ. ಥಿಯೇಟರಿನಲ್ಲಿ ಸಿನೆಮಾ ನೋಡದೆ ದಶಕಗಳೆ ಸಂದಿವೆ. ಅಂತಹದರಲ್ಲಿ ಈ ದೀಪಕ ತನ್ನ ಜಮಾನಾದಿಂದ ಹಿಡಿದು ಮೂರನೇ ತಲೆಮಾರಿನ ನಟ ನಟಿಯರ ಜಮಾನಾದ ವರೆಗೂ ಆಕರ್ಷಣೆ ಉಳಿಸಿಕೊಂಡು ಬಂದಿದ್ದಾನೆಂದರೆ ಆತ ನನಗೆ ಒಂದು ರೀತಿಯಲ್ಲಿ ವಿಚಿತ್ರವಾಗಿ ಕಾಣುತ್ತಾನೆ.
ದೀಪಕನಂತಹ ವಯೋಬೇಧವಿಲ್ಲದ ಸಹಸ್ರ ಸಹಸ್ರ ಸಿನೆಮಾ ವೀಕ್ಷಕರು ಇಂದು ಸಹ ಇದ್ದಾರೆ. ಅವರಲ್ಲಿ ಅನೇಕರಿಗೆ ಉಳಿಯಲೊಂದು ಸರಿಯಾದ ಸೂರೂ ಇಲ್ಲ. ರಟ್ಟೆಯನ್ನು ನಂಬಿಯೆ ಹೊಟ್ಟೆ ನಡೆಯಬೇಕು. ಅಂತಹ ದುಡಿಮೆಯಲ್ಲ್ಲಿಯೆ ಹಣ ಹೊಂಚಿ ಸಿನೇಮಾ ವೀಕ್ಷಿಸಿ ಸಂಭ್ರಮಿಸುವ ಅನೇಕ ಶ್ರಮಿಕ ವರ್ಗದ ಜನ ಇಂದೂ ಇದ್ದಾರೆ. ಅವರೆ ನಟರನ್ನು ಸ್ಟಾರ್ಗಳನ್ನಾಗಿ ಮಾಡುವವರು. ಈ ಜನ ಯಾಕಾಗಿ ಇಷ್ಟು ಸಿನೆಮಾ ಹುಚ್ಚು ಬೆಳೆಸಿ ಕೊಂಡು ಬಂದಿರುತ್ತಾರೆ ಎಂದರೆ ತಮ್ಮ ನಿಜ ಜೀವನದಲ್ಲಿ ಪಡೆಯದ ಸುಖ, ವಾಸ್ತವ ಜಗತ್ತಿನಲ್ಲಿ ಪರಿಹರಿಸಲಾಗದ ಸಮಸ್ಯಗಳಿಗೆ ಮೂರು ಗಂಟೆಯ ಕಾಲಾವಧಿಯಲ್ಲಿ ಹೀರೋ ಪರಿಹರಿಸಿ ಕೊಂಡಿರುತ್ತಾನೆ. ಪ್ರೇಕ್ಷಕ ತನ್ನನ್ನೆ ತಾನು ಹೀರೋನಲ್ಲಿ ಪರಕಾಯ ಪ್ರವೇಶ ಮಾಡಿ ನಿಜ ಜೀವನದಲ್ಲಿ ಕಾಣದುದನ್ನು, ಅನುಭವಿಸದುದನ್ನು ಚಿತ್ರ ಮುಖೇನ ಅನುಭವಿಸಿ ಒಂದು ರೀತಿಯ ಹುಸಿ ತೃಪ್ತಿ ಭಾವನೆ ಪಡುತ್ತಾನೆ. ಕ್ರಮೇಣ ಸಿನೆಮಾ ಬೇರೆ ವಾಸ್ತವ ಬೇರೆ ಎಂದು ಅರಿಯಲಾಗದವರು ದೀಪಕನಂತೆ ತನ್ನ ಹುಸಿ ಕಲ್ಪನಾಲೋಕದಲ್ಲಿ ಮುಳುಗಿ ಬಾಳಿ ಬಿಡುತ್ತಾರೆ. ಹೀಗಾಗಿ ಆಂತಹವರು ಸಿನೆಮಾ ನಟ ನಟಿಯರನ್ನು ಆರಾಧಿಸುತ್ತಾರೆ. ಸಿನೆಮಾದಲ್ಲಿ ಬರುವ ಸಂತಸದ ಕ್ಷಣಗಳನ್ನು ಕಂಡು ಆನಂದ ವ್ಯಕ್ತ ಪಡಿಸುತ್ತಾರೆ. ಅವರು ಕಷ್ಟ ಪಡುವ ಸನ್ನಿವೇಶಗಳಲ್ಲಿ ಇವರೂ ಸಹ ದುಃಖಿಸುತ್ತಾರೆ. ಅವರೂ ಸಹ ತಮ್ಮ ಸೋದರ ಸೋದರಿಯರೋ ಬಂದುಗಳೋ ಸ್ನೆಹಿತರೋ ಎನ್ನುವಷ್ಟು ಅವರೊಂದಿಗೆ ತಾದಾತ್ಮ್ಯ ಹೊಂದಿರು ತ್ತಾರೆ. ಹೀಗಾಗಿ ಯುವ ಪೀಳಿಗೆಗೆ ಸಿನೆಮಾ ಒಂದು ಆಕರ್ಷಕಲೋಕ. ಸಿನೆಮಾ ಸುದ್ದಿಗಳು ಯಾವುದೇ ಪತ್ರಿಕೆಗಳಲ್ಲಿ ಬಂದರೆ ಕುತೂಹಲಿಗಳಾಗಿ ಓದುತ್ತಾರೆ. ತಮ್ಮ ನೆಚ್ಚಿನ ನಟ ನಟಿಯರ ಬಗೆಗೆ ಗಾಸಿಪ್ಗಳು ಬಂದರೆ ದುಃಖಿಸುತ್ತಾರೆ, ಯಾರಾದರೂ ಕೀಳಾಗಿ ಮಾತನಾಡಿದರೆ ಜಗಳಕ್ಕೆ ಬೀಳುತ್ತಾರೆ. ಇದೆಲ್ಲ ಅಭಿಮಾನದ ಕಾರಣದಿಂದಾಗಿ ಆಗುವಂತ ಹುದು. ಯಾಕೆಂದರೆ ನಟ ನಟಿಯರನ್ನು ತಮ್ಮ ಕುಟುಂಬದ ಅಕ್ಕ ತಂಗಿಯರೋ ಅಣ್ಣ ತಮ್ಮಂದಿರೋ ಎಂಬ
ರೀತಿಯಲ್ಲಿ ತಮ್ಮ ಮನದಲ್ಲಿ ಸ್ಥಾಪಿಸಿ ಕೊಂಡಿರುತ್ತಾರೆ ಎಂದು ಕಾಣುತ್ತದೆ ಅದಕ್ಕಾಗಿ ಈ ರೀತಿಯ ಕುರುಡು ಅಭಿಮಾನವನ್ನು ಸಿನೆಮಾ ಅಭಿಮಾನಿಗಳು ಹೊಂದಿರುತ್ತಾರೆ. ಅಂತಹ ವರ್ಗಕ್ಕೆ ಸೇರುವವನಾಗಿರಬಹುದೆ ಈ ನನ್ನ ಬಾಲ್ಯ ಸ್ನೇಹಿತ ದೀಪಕ ? ಎಂದು ಮಾದೇವ ಯೋಚನೆಗೆ ತೊಡಗಿದ.
' ಮಾದೇವ ಅವ್ರ ಏನ್ ಯೋಚನೆ ಮಾಡಾಕ್ಹತ್ತೀರಿ ' ಎಂದ ದೀಪಕ.
' ಎನಿಲ್ಲ ನಿಮ್ಮ ಬಗ್ಗೇನ ಯೋಚನಾ ಮಾಡ್ತಾ ಇದೀನಿ ' ಎಂದ ಮಾದೇವ.
' ನನ್ನ ಬಗ್ಗೆ ಯೋಚನೆ ಮಾಡೋ ಅಂಥಾದ್ದು ಏನದರೀ ' ಎಂದು ಕುತೂಹಲಭರಿತನಾಗಿ ಕೇಳಿದ ದೀಪಕ.
' ಇಷ್ಟು ವರ್ಷ ವಯಸ್ಸಾದರೂ ಸಣ್ಣ ವಯಸ್ಸಿನಾಗಿನ್ಹಾಂಗ ಇನ್ನೂ ಸಿನೆಮಾ ಅಂದ್ರ ಉತ್ಸಾಹಿತರಾಗ್ತೀರಿ ಏನಿದರ ರಹಸ್ಯ ಅಂತ ಯೋಚನೆ ಮಾಡತಿದ್ದೆ ' ಎಂದು ಮಾದೇವ ಉತ್ತರಿಸಿದ.
' ಅದರೊಳಗ ರಹಸ್ಯ ಏನದರೀ ನನಗ ಸಿನೆಮಾ ಖುಷಿ ಕೊಡ್ತದ ಅದಕ್ಕ ನೋಡ್ತೀನಿ ಅಷ್ಟ ' ಎಂದು ನಿರ್ವಿಕಾರ ಭಾವದಿಂದ ದೀಪಕ ನುಡಿದ. ಮತ್ತೆ ಮಾದೇವ ಸಿನೆಮಾ ಆಕರ್ಷಣೆ ಕುರಿತಾದ ತನ್ನ ಗತಕಾಲದ ನೆನಪುಗಳಿಗೆ ಜಾರಿದ.
ಈ ಸಿನೆಮಾ ಆಕರ್ಷಣೆ ಯೊಂದಿಗೆ ನಮ್ಮ ವಿದ್ಯಾಭ್ಯಾಸ ಮುಂದುವರೆದಿತ್ತು. ಆ ದಿನಗಳಲ್ಲಿ ಥಿಯೆಟರ್ಗಳಲ್ಲಿ ಸಿನೆಮಾಗಳ ವಿವಿಧ ಸನ್ನಿವೇಶಗಳನ್ನು ನಿರೂಪಿಸುವ ಪೋಸ್ಟರ್ ಗಳನ್ನು ಲಗತ್ತಿಸಿರುತ್ತಿದ್ದರು. ಸಿನೆಮಾ ನೋಡಲಾಗ ದವರು ಆ ಪೋಸ್ಟರುಗಳನ್ನು ನೋಡಿಯೆ ತಮ್ಮ ಸಿನೆಮಾ ತೃಷೆಯನ್ನು ತೀರಿಸಿ ಕೊಳ್ಳ ಬೇಕಿತ್ತು. ಯಾಕೆಂದರೆ ಇವೆಲ್ಲ ಕುಟುಂಬದ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತಿದ್ದವು. ಅನುಕೂಲವಂತರ ಮಕ್ಕಳಿಗೆ ಇದೊದು ಸಮಸ್ಯೆ ಆಗಿರಲಿಲ್ಲ. ಆದರೂ ಕೆಳ ಮಧ್ಯಮ ವರ್ಗದ ಮತ್ತು ಬಡತನದ ರೇಖೆಯ ಮತ್ತು ಕೆಳಗಿನ ವರ್ಗದ ಮಕ್ಕಳೇನಾ ದರೂ ಸಿನೆಮಾ ನೋಡುವ ಸಮಯದಲ್ಲಿ ಊರ ಜನರ ದೃಷ್ಟಿಗೆ ಬಿದ್ದರೋ ಅವರ ಕತೆ ಮುಗಿಯಿತೆಂದೆ ಅರ್ಥ. ಇದರ ಅರ್ಥ ಇಷ್ಟೆ ಸಿನೆಮಾ ಷೋಕಿ ಬೆಳೆಸಿ ಕೊಂಡವ ಜೀವನದಲ್ಲಿ ಮುಂದೆ ಬರುವವನಲ್ಲ, ಆತ ಹಾದಿ ತಪ್ಪಿದವ ನೆಂದೆ ಗ್ರಾಮಸ್ತರು ತಿಳಿಯುತ್ತಿದ್ದರು. ಯುವ ಮನದ ಕುತೂಹಲಗಳು ಆಶೆಗಳು ಕಂದಾಚಾರದ ಹಳೆಯ ತಲೆಗಳಿಗೆ ಅರ್ಥವಾಗುತ್ತಿರಲಿಲ್ಲ, ಇವೆಲ್ಲ ಗ್ರಾಮದ ಒಳಸುಳಿಗಳ ಮಧ್ಯೆ ಯುವ ಜನತೆ ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಓದು ಮತ್ತು ಮನರಂಜನೆಯ ಸಿನೆಮಾ ನೋಡುವಿಕೆಗಳನ್ನು ಬ್ಯಾಲನ್ಸ್ ಮಾಡಿಕೊಳ್ಳಬೇಕಿತ್ತು, ಆದರೂ ಒಮ್ಮೊಮ್ಮೆ ಅನಿರೀಕ್ಷಿತವಾಗಿ ಗ್ರಾಮಸ್ತರ ಕೈಗೆ ಸಿಕ್ಕಿ ಹಾಕಿಕೊಂಡು ಅನೇಕ ದಿನಗಳ ಕಾಲ ಅವರ ಸಂಶಯದ ದೃಷ್ಟಿಗೆ ಗುರಿ ಯಾಗ ಬೇಕಾಗುತ್ತಿತ್ತು. ಹಳ್ಳಿಗೆ ಹೊಂದಿಕೊಳ್ಳಲಾಗದ ಮತ್ತು ಬಿಡಲಾಗದ ಆತಂಕಕ್ಕೆ ಒಳಗಾಗ ಬೇಕಾಗುತ್ತಿತ್ತು. ಇಂತಹ ಎಲ್ಲ ಅಡೆತಡೆಗಳನ್ನು ನೀಗಿಕೊಂಡು ಸಿನೆಮಾ ಹವ್ಯಾಸವನ್ನು ನೋಡುವ ಆಸಕ್ತಿಯನ್ನು ಉಳಿಸಿಕೊಂಡು ಬಂದ ದೀಪಕ ಮಾದೇವನ ಕಣ್ಣಿಗೆ ಒಂದು ಅಚ್ಚರಿಯಾಗಿ ಕಾಣತೊಡಗಿದ.
ಅಷ್ಟರಲ್ಲಿ ಇವರನ್ನನುಸರಿಸಿ ಬಂದ ಸದಾಶಿವ ' ಏನಿಬ್ಬರೂ ಹಂಗ ಹೊಂಟ ಬಿಟ್ಟೀರಿ ' ಎಂದು ಅವರನ್ನು ಮಾತಿಗೆಳೆದ.
' ಏನೋ ಅದು ಇದೂ ಮಾತಾಡ್ತಾ ಬಹಳ ದೂರ ಬಂದೆವೆಂದು ಕಾಣುತ್ತದೆ ' ಎಂದ ಮಾದೇವ ತನ್ನ ನಡಿಗೆಗೆ ತಡೆ ಹಾಕಿದ. ಅವನನ್ನುಸರಿಸಿ ದೀಪಕನೂ ನಿಂತ. ಎಲ್ಲರೂ ತಿರುಗಿ ಊರ ಕಡೆಗೆ ಹೊರಟರು. ಅಲ್ಲಿ ಮೌನ ನೆಲಸಿತ್ತು. ಅವರವರ ಮನಗಳಲ್ಲಿ ವಿಚಾರ ಮಂಥನ ಸಾಗಿದ್ದಿರಬಹುದು. ಹುಣ್ಣಿಮೆಯ ಸಮೀಪದ ದಿನಗಳವು. ಚಂದ್ರ ಆಕಾಶದಲ್ಲಿ ಮೇಲೇರುತ್ತಿದ್ದ. ಪ್ರಕೃತಿ ವಿಶ್ರಾಂತಿಗೆ ಜಾರಿತ್ತು. ನೀಲ ಗಗನದಲ್ಲಿ ತೆಳುವಾದ ಬಿಳಿ ಮೋಡಗಳು ನಿಧಾನ ಗತಿಯಲ್ಲಿ ಸಾಗಿದ್ದವು. ಅವುಗಳ ಹಿನ್ನೆಲೆಯಲ್ಲಿ ತಾರೆಗಳು ಮಿನುಗುತ್ತಿದ್ದವು. ರಾಮ ಭವನದ ಸಮೀಪ ಬಂದ ನಂತರ ದೀಪಕ, ಮಾದೇವ ಮತ್ತು ಸದಾಶಿವ ರವರಿಗೆ ಮಾರನೆದಿನ ಸಿಕ್ಕುವುದಾಗಿ ತಿಳಿಸಿ ಅವರಿಗೆ ವಿದಾಯ ಹೇಳಿ ತನ್ನ ಮನೆಯ ಕಡೆಗೆ ಸಾಗಿದ. ಆತ ಹೋದ ದಿಕ್ಕನ್ನೆ ಗಮನಿಸುತ್ತ ಮಾದೇವ ನಿಂತುಕೊಂಡ.
'ಮನೆ ಕಡೆಗೆ ಹೋಗೋಣ ಬಾ ' ಎಂದು ಸದಾಶಿವ ಮಾದೇವನನ್ನು ಕರೆದ. ಇಬ್ಬರೂ ಮನೆ ಸೇರಿದಾಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಕೈಕಾಲು ಮುಖ ತೊಳೆದುಕೊಂಡು ಊಟ ಮುಗಿಸಿ ಮಲಗಿ ನಿದ್ರೆಗೆ ಜಾರಿದರು.
ಮಾರನೇ ದಿನ ಬೆಳಿಗ್ಗೆ ಮಾದೇವ ಮತ್ತು ಸದಾಶಿವ ತಮ್ಮ ದೈನಂದಿನ ಕೆಲಸ ಕಾರ್ಯ ಮುಗಿಸಿ ಗ್ರಾಮ ಪಂಚಾಯತಿ ಕಛೇರಿಯೆಡೆಗೆ ತೆರಳಿದರು. ಅಲ್ಲಿ ಎಲ್ಲ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಲುಗಟ್ಟಿ ಪ್ರಭಾತ ಫೇರಿಗೆ ಸಜ್ಜಾಗಿ ಉತ್ಸಾಹದಿಂದ ನಿಂತಿದ್ದರು. ಅನೇಕ ಛದ್ಮ ವೇಷಧಾರಿಗಳು ಅಲ್ಲಿದ್ದರು. ಕನ್ನಡದ ವೀರರಮಣಿಯರು ಮತ್ತು ಹೋರಾಟಗಾರರ ಪ್ರತಿ ರೂಪಗಳು ಮೈದಳೆದು ನಿಂತಿದ್ದವು. ಮಾನ್ಯ ಮಂತ್ರಿಗಳು ಕನ್ನಡ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನು ಆ ಜಯಘೋಷ ಮೊಳಗಿಸುತ್ತ ಪ್ರಭಾತಫೇರಿ ಪ್ರಮುಖ ರಸ್ತೆಗಳ ಗುಂಟ ಸಾಗಿ ಕಾರ್ಯಕ್ರಮ ನಡೆಯಲಿರುವ ಅಗಸ್ತ್ಯ ತಪೋವನಕ್ಕೆ ಬರಬೇಕೆಂದರೆ ಸುಮಾರು ಮೂರು ಗಂಟೆಗಳ ಕಾಲ ತಗಲುತ್ತದೆ. ನಾವು ಮುಂದೆ ಹೋಗೋಣ ಎಂದು ಸದಾಶಿವ ಸೂಚನೆ ಕೊಟ್ಟ. ಅದನ್ನು ಮಾದೇವ ಒಪ್ಪಿ ಅವನೊಟ್ಟಿಗೆ ನಡೆದ. ಮುಂದೆ ಹಾಗೆಯೆ ಅವರ ಜೊತೆ ದೀಪಕ ಸೇರಿಕೊಂಡ. ಎಲ್ಲರೂ ಮುಂದೆ ನಡೆಯುತ್ತ ಸಾಗಿದರು. ಅಷ್ಟರಲ್ಲಿ ಕಾರ್ಯಕ್ರಮದ ಆಯೋಜಕರ ಕಾರು ಬಂದು ನಿಂತಿತು. ಅವರೆಲ್ಲ ಅದನ್ನೇರಿ ತಪೋವನದ ಕಡೆಗೆ ನಡೆದರು. ತಪೋವನದ ಹೊರಭಾಗದಲ್ಲಿ ಇಳಿದ ಸದಾಶಿವ ನಾವು ಇಲ್ಲಿಂದ ನಡೆದು ಬರುತ್ತೇವೆ ನೀವು ನಡೆಯಿರಿ ಎಂದ. ಅವನನ್ನುಸರಿಸಿ ಮಾದೇವ ಮತ್ತು ದೀಪಕ ಇಳಿದರು. ಕಾರು ಮುಂದೆ ಸಾಗಿತು.
( ಮುಂದುವರಿಯುವುದು)
Comments
ಪಾಟೀಲರಿಗೆ ನಮಸ್ಕಾರಗಳು
ಪಾಟೀಲರಿಗೆ ನಮಸ್ಕಾರಗಳು
ಅಂತೂ ಕಥೆಯಲ್ಲಿ ಬರುವ ಪಾತ್ರಧಾರಿ ದೀಪಕನಿಗೆ ತನ್ನ ಸಿನೆಮಾ ನೋಡುವ ಗೀಳಿನಿಂದ ಹೊರಬರಲಾರದೆ ವ್ಯರ್ಥ ಜೀವನ ನಡೆಸುವ ಅವನ ಬಗ್ಗೆ ಅನುಕಂಪ ಮೂಡುತ್ತದೆ. ಮುಂದಿನ ಹಾಗೂ ಕಡೆಯ ಭಾಗದ ನಿರೀಕ್ಷಯಲ್ಲಿ. .......ವಂದನೆಗಳು
In reply to ಪಾಟೀಲರಿಗೆ ನಮಸ್ಕಾರಗಳು by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಸಿನೆಮಾ ಗೀಳಿನವರ ಪ್ರತಿನಿಧಿಯಾಗಿ ಇಲ್ಲಿ ದೀಪಕನ ಪಾತ್ರ ಬಂದಿದೆ, ಜೀವನದ ಸಂಧ್ಯಾ ಕಾಲದೆಡೆಗೆ ಆತ ಸಾಗಿದ್ದಾನೆ, ಈ ಇಳಿ ವಯಸ್ಸಿನಲ್ಲಿ ಅಂತಹ ವ್ಯಸನಿಗಳಿಂದ ಬದಲಾಗುವಿಕೆ ಸಾಧ್ಯವಿಲ್ಲ. ಇದು ದೀಪಕನ ದುರಂತ ಕಥೆ ಎಂದು ಮಾತ್ರ ಹೇಳಬಲ್ಲೆ. ಮುಂದಿನ ಬಾಗದಲ್ಲಿ ಈ ಕಥೆ ಅಂತ್ಯ ಕಾಣಲಿದೆ. ಸಹನೆಯಿಂದ ಓದಿಕೊಂಡು ಬಂದಿದ್ದಿರಿ ಧನ್ಯವಾದಗಳು.