ಸಿಪಾಯಿ ದಂಗೆ-II

ಸಿಪಾಯಿ ದಂಗೆ-II

ಬೊಗಳೂರು, ಜ.17- ಪೊಲೀಸ್ ಠಾಣೆ ಧ್ವಂಸ ಮಾಡಿದ ಸುದ್ದಿಯನ್ನು ತಡವಾಗಿ ಸಮರ್ಥಿಸಿಕೊಂಡಿರುವ ಸಂಬಂಧಪಟ್ಟ ಸೈನಿಕರು, ತಮ್ಮ ಪೂರ್ವಜರು ಕೂಡ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. (bogaleragale.blogspot.com)

ತಮ್ಮದು ಸಿಪಾಯಿ ದಂಗೆ-II ಎಂದು ಕರೆದುಕೊಂಡಿದ್ದಾರವರು. ಹಿಂದಿನ ಕಾಲದಲ್ಲಿ ದುರಾಡಳಿತ, ದೌರ್ಜನ್ಯ, ತುಳಿತ ಇತ್ಯಾದಿಗಳ ವಿರುದ್ಧ ನಮ್ಮವರು ಬ್ರಿಟಿಷ್ ಆಡಳಿತದ ವಿರುದ್ಧ ತಿರುಗಿಬಿದ್ದು, 1857ರಲ್ಲಿ ದಂಗೆ ಎದ್ದಿದ್ದರು. ಈಗಿನ ಕಾಲದಲ್ಲಿ ಆಡಳಿತದಲ್ಲಿ ಮಾತ್ರ ಬ್ರಿಟಿಷರ ಬದಲು, ಸ್ವದೇಶೀಯರೇ ಇದ್ದಾರೆ ಹೊರತಾಗಿ ಪರಿಸ್ಥಿತಿ ಮಾತ್ರ ಅದೇ ರೀತಿಯಾಗಿದೆ ಎಂದು ಈ ಸೈನಿಕರು ಬೊಗಳೆ ಬಿಟ್ಟಿದ್ದಾರೆ.

ಥಾಯ್ಲೆಂಡ್, ಪಾಕಿಸ್ತಾನ, ಫಿಜಿ ಮುಂತಾದ ರಾಷ್ಟ್ರಗಳಲ್ಲಿ ಸೇನಾ ದಂಗೆ ಎದ್ದು, ಆ ದೇಶದ ಆಡಳಿತವನ್ನೇ ಸೈನಿಕರು ಕಿತ್ತುಕೊಂಡಿದ್ದಾರೆ. ಆದರೆ ಇಲ್ಲಿ ನಾವು ಕೂಡ ಇದಕ್ಕಾಗಿ ಶತಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಅವರು, ನಾವು ಶಿಸ್ತಿನ ಸಿಪಾಯಿಗಳಾಗಿರುವುದರಿಂದ ಏನು ಮಾಡಿದರೂ ಅದು ಶಿಸ್ತೇ ಆಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಪೊಲೀಸರ ಬಳಿ ಹಳೆಯ ಬ್ರಿಟಿಷರ ಕಾಲದ, ಎತ್ತಲಾಗದಷ್ಟು ಭಾರ ಇರುವ ತುಪಾಕಿಗಳು ಇನ್ನೂ ಇವೆ. ಆದರೆ ನಾವು ದೇಶ ರಕ್ಷಿಸುವವರು. ನಮ್ಮ ಬಳಿ ಅತ್ಯಾಧುನಿಕ ಆಯುಧಗಳಿವೆ. ಅಲ್ಲದೆ ಶತ್ರುಗಳ ಬಂಕರ್‌ಗಳನ್ನು ಧ್ವಂಸ ಮಾಡುವುದು ಹೇಗೆ ಎಂಬುದರ ಕುರಿತು ನಮಗೆ ಉತ್ತಮ ತರಬೇತಿ ಲಭಿಸಿರುವುದರಿಂದ ಪೊಲೀಸ್ ಠಾಣೆ ಧ್ವಂಸವೂ ಸುಲಭವಾಯಿತು ಎಂದವರು ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಸೈನಿಕನನ್ನು ಮಾತನಾಡಿಸಿದಾಗ, ನಮ್ಮ ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್ ಆಗಿರುತ್ತಾರೆ, ಅವರು ಪ್ರತಿದಾಳಿಗೆ ಎಷ್ಟರ ಮಟ್ಟಿಗೆ ಸಜ್ಜಾಗಿದ್ದಾರೆ ಎಂಬುದನ್ನು ಪರೀಕ್ಷಿಸಲು ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡರು.

ಮಗದೊಬ್ಬ ಸೈನಿಕನ ಪ್ರಕಾರ, ಕಳೆದ ಕೆಲವು ಸಮಯದಿಂದ ಶತ್ರುಗಳ ಕಾಟವಿಲ್ಲದೆ, ಯುದ್ಧ ಮಾಡದೆ ನಮ್ಮ ಕೈಗಳೆಲ್ಲಾ ಜಡ್ಡುಗಟ್ಟಿದ್ದವು. ಸಮರ ಕಲೆ ಮರೆತು ಹೋಗಬಾರದು, ಅದಕ್ಕೂ ಅಭ್ಯಾಸ ದೊರೆಯಬೇಕು ಎಂಬ ಕಾರಣಕ್ಕೆ ನಾವು ಪೊಲೀಸ್ ಠಾಣೆಯನ್ನು ಕೇಂದ್ರೀಕರಿಸಿ ತಾಲೀಮು ಮಾಡಿದೆವು! ಎಂದಿದ್ದಾನವನು

Rating
No votes yet