ಸಿರಿಗನ್ನಡ ಹೀಗಿದ್ದರೆ ಚೆನ್ನವೇ ?

ಸಿರಿಗನ್ನಡ ಹೀಗಿದ್ದರೆ ಚೆನ್ನವೇ ?

ಬಿ ಎಂ ಶ್ರೀಯವರು ಕನ್ನಡದಲ್ಲಿರುವ ಒತ್ತಕ್ಷರ ಧೀರ್ಘ ಗಳನ್ನೆಲ್ಲ ತೆಗೆದುಹಾಕಿ ಬಿಡಬೇಕು. ಅಗ ಕನ್ನಡ ತಮಿಳಿನ ಹಾಗೆ ಮುತ್ತು ಜೋಡಿಸಿದಂತೆ ಅಂದವಾಗಿ ಕಾಣುತ್ತದೆ ಎಂದು ’ಸರ್ವಾಂಗಸುಂದರ’ ಕನ್ನಡ ಭಾಷೆಯ ಬಗ್ಗೆ ಇಪ್ಪತ್ತರ ದಶಕದಲ್ಲಿಯೇ ಕನಸು ಕಂಡಿದ್ದರು. ಅಮೇರಿಕನ್ನರು ಉಚ್ಚಾರಣೆಗೆ ತಕ್ಕ ಭಾಷೆ ಇರಲಿ ಎಂದು ತಮಗೆ ಅನುಕೂಲವಾಗುವಂತೆ ಬದಲಿಸಿಕೊಂಡರು. ಕನ್ನಡದಲ್ಲೂ ಎಲ್ಲಾ ವರ್ಗದವರ ಅನುಕೂಲಕ್ಕೆ ತಕ್ಕುದಾದಂತೆ ಸರಳಗನ್ನಡವನ್ನು ಬಳಕೆಗೆ ತರಲು ಶ್ರಮಿಸಲಾಗುತ್ತಿದೆ.

ಶಂಕರ ಭಟ್ಟರ "ಕನ್ನಡ ಬರಹವನ್ನು ಸರಿಪಡಿಸೋಣ" ಪುಸ್ತಕವನ್ನು ಓದುತ್ತಿದ್ದೆ. (ಉಳಿದವನ್ನು ಇನ್ನೂ ನಾನು ಓದಿಲ್ಲ). ಓದುವಾಗ ಕೆಲವು ಪ್ರಶ್ನೆಗಳು ನನಗೆ ತೊಡರಾದವು. ಕನ್ನಡವನ್ನು ಸಾಮಾನ್ಯರಿಗಾಗಿ ಸರಳೀಕರಿಸುವ ಕೈಂಕರ್ಯವನ್ನು ಕೈಗೊಂಡಿರುವ ಸನ್ಮಿತ್ರರು ಅನೇಕರಿದ್ದಾರೆ. ದಯವಿಟ್ಟು ನನ್ನ ಅನುಮಾನಗಳನ್ನು ಪರಿಹರಿಸಿ.

ಹಳ್ಳಿಗಾಡಿನ ಆಡುಭಾಷೆಯಲ್ಲಿ ವಾಕ್ ಶುದ್ಧಿ ಮತ್ತು ವ್ಯಾಕರಣಕ್ಕೆ ಅಂತಹ ಮಹತ್ವ ಬೇಕಿಲ್ಲ. ಇಂತಹ ಕಡೆ ಭಾಷೆಯನ್ನು ತೀಡಲು ಅಥವಾ ಗ್ರಾಂಥಿಕಗೊಳಿಸಲು ಪ್ರಯತ್ನಿಸಿದರೆ ಆ ನೆಲದ ಭಾಷೆಯ ಸೊಗಡು ಹಾಳಾಗಿ ಹೋಗುವ ಅಪಾಯವಿದೆ. ಹಾಗಾಗಿ ’ಅ’ ಮತ್ತು ’ಹ’ ಕಾರಗಳ ಬಳಕೆಯಲ್ಲಿ ಸಂಸ್ಕೃತ ಪದಗಳ ಪದಗಳ ಬಳಕೆಯಲ್ಲಿ ಮಡಿವಂತಿಕೆ ಬೇಡ ಎಂದು ನಾನು ಒಪ್ಪುತ್ತೇನೆ. ಆದರೆ ಸಾರ್ವಜನಿಕ ಬಳಕೆಗೆ ಇದನ್ನು ಅನ್ವಯಿಸುವಾಗ ಇದು ಸಾಧ್ಯವಾಗುವುದು ಹೇಗೆ ಎಂಬ ಕೆಲವು ಪ್ರಯೊಗಿಕವಾದ ತೊಡರುಗಳ ಬಗ್ಗೆ ಅನುಮಾನಗಳು ಎದ್ದವು. ನನಗೆ ಬಂದ ಅನುಮಾನಗಳು ಹೀಗಿವೆ,

೧. ಸಂಸ್ಕೃತದ ಕ್ರಿಯಾಪದಗಳಿಗೆ ’ಇಸು’ ಎಂಬುದನ್ನು ಸೇರಿಸಿ ಉಪಯೋಗಿಸುತ್ತಿದ್ದೇವೆ. ಇದರ ಬದಲಾಗಿ ಕನ್ನಡದ ಪದಗಳನ್ನು ಬಳಸಬೇಕೆಂದು ಶಂಕರಬಟ್ಟರು ಹೇಳುತ್ತಾರೆ. ಇದು ಕ್ರಿಯಾಪದಗಳಿಗೆ ಮಾತ್ರ ಸೀಮಿತವೋ? ವಿವಿಧ ಭಾಷೆಗಳಿಂದ ಅನೇಕ ಪದಗಳು ಕನ್ನಡಕ್ಕೆ ಬಂದಿವೆ ಸಂಸ್ಕೃತದಿಂದ ಬಂಡ ತದ್ಭವಗಳನ್ನು ಬಳಸುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ. ಆದರೆ ಕನ್ನಡದಿಂದ ಮಾಯವಾದ ಅನೇಕ ಪದಗಳಿವೆ. ಈ ಪದಗಳನ್ನು ಮರುಬಳಕೆಗೆ ತರುವ ಪ್ರಯತ್ನವೇನಾದರೂ ನಡೆದಿದೆಯೆ ? (ಮರುಬಳಕೆಗೆ ತಂದರೆ ಒಳ್ಳೆಯದು ಎಂದು ನನ್ನ ಅನಿಸಿಕೆ.)

೨. ಕನ್ನಡ ಬರಹದ (ಲಿಪಿಯ) ಇನ್ನೊಂದು ವಿಶೇಷವೆಂದರೆ ಎಲ್ಲಾ ಭಾಷೆಯ ಎಲ್ಲಾ ರೀತಿಯ ಶಬ್ದಗಳನ್ನು ಬರೆಯುವ ಸಾಮರ್ಥ್ಯ! ಕನ್ನಡದಲ್ಲಿರುವ ಅಕ್ಷರ ವೈವಿಧ್ಯಗಳ ಕಾರಣದಿಂದಲೇ ಇದು ಸಾಧ್ಯವಾಗಿದ್ದು ಎಂದು ನಾನು ಇಷ್ಟು ದಿನ ನಂಬಿದ್ದೆ! ಮಹಾಪ್ರಾಣಗಳನ್ನು ’ಶ”ಷ’ ’ಋ’ ಇತ್ಯಾದಿಗಳನ್ನು ಕಿತ್ತು ಹಾಕಿದರೆ ಈ ವಿಶೇಷತೆಗೆ ಧಕ್ಕೆ ಬರುವು ಸಾಧ್ಯತೆಗಳಿಲ್ಲವೇ ? ತಮಿಳಿನಲ್ಲಿ ’ಕ’ ’ಗ’ ’ಹ’ ’ಚ’ ಉಚ್ಚಾರಕ್ಕೆ ಅಕ್ಷರಗಳಿಲ್ಲ. ಇದು ಅವರ ಭಾಷೆಯ ಬಳಕೆಗೂ ಅಡ್ಡವಾಗಿದೆ. ಉದಾ: ದ್ರಿಶಾ (ತ್ರಿಶಾ), ಜೋದಿಗಾ (ಜೋತಿಕಾ), ಮಗೇಶ್ (ಮಹೇಶ್), ಸಂಡ ಪ್ರಸಂಡ (ಚಂಡ ಪ್ರಚಂಡ) ಇತ್ಯಾದಿ. ಈ ರೀತಿಯ ಅಪಾಯ ಕನ್ನಡಕ್ಕೂ ಆಗುವ ಸಂಭವ ಇದೆಯೇ?

೩. ಉಚ್ಚಾರಶೈಲಿಗೂ ಬರಹದಲ್ಲಿ ಅದರ ಬಳಕೆಗೂ ಸಂಬಂಧ ಇದೆಯೇ ? ಅಂದರೆ ತಮ್ಮ ಭಾಷಾಬಳಕೆಯ ಶೈಲಿಯಲ್ಲಿಯೇ ಲೇಖನದಲ್ಲಿ ಶಬ್ದಗಳನ್ನು ಉಪಯೋಗಿಸಬೇಕೆ? ಈ ಪ್ರಶ್ನೆ ವೇದಿಕೆಯ ಮೇಲೆ ಮಾತಾಡುವುದಕ್ಕೂ ಅನ್ವಯಿಸುತ್ತದೆ. ಏಕೆಂದರೆ ಕೊಳ್ಳೆಗಾದ ಕಡೆ ಮಾತಾಡುವ ವೇಗದ ಕನ್ನಡ ಹಾಗೂ ಶಬ್ದಗಳು ನಮಗೆ ಅರ್ಥವಾಗುವುದಿಲ್ಲ. ನಮ್ಮ ಉತ್ತರ ಕರ್ನಾಟಕದ ಭಾಷೆಯನ್ನು ಮೈಸೂರಿನ ರಾಜಗನ್ನಡದವರು ಅರ್ಥೈಸಿಕೊಳ್ಳಲಾಗದೇ ಒದ್ದಾಡುವುದನು ನಾನೇ ನೋಡಿದ್ದೇನೆ. ಪರಸ್ಪರ ಮಾತಾಡುವಾಗ ವ್ಯತ್ಯಾಸಗಳನ್ನು ಮತ್ತೆ ಮತ್ತೆ ಪರಿಹರಿಸಿಕೊಂಡು ಮಾತಾಡಬಹುದು. ಅದರೆ ವೇದಿಕೆಯ ಮೇಲಿನ ಭಾಷಣಗಳನ್ನು ಕೇಳುವಾಗ ಇದು ಸಾಧ್ಯವಾಗುವುದಿಲ್ಲ. ಗ್ರಾಂಥಿಕವಾಗಿ ಬರೆದರೆ ಸಾಮಾನ್ಯವಾಗಿ ಎಲ್ಲ ವರ್ಗದವರಿಗೂ ಅರ್ಥವಾಗುತ್ತದೆ.

೪. ’ಅ’ ಮತ್ತು ’ಹ’ ಕಾರಗಳ ಉಚ್ಚಾರಣೆಯ ವ್ಯತ್ಯಾಸವನ್ನು ಆಡುಮಾತಿನ ಬಳಕೆಗೆ ಮಾತ್ರ ನಿರ್ಲಕ್ಷ್ಯ ಮಾಡಬೇಕು ಎಂಬುದಾದರೆ ಇದಕ್ಕೆ ನನ್ನ ಒಪ್ಪಿಗೆ ಇದೆ. ಆದರೆ ವೇದಿಕೆಯ ಮೇಲೂ ಬರಹದಲ್ಲೂ ಇದಕ್ಕೆ ಒಪ್ಪಬೇಕು ಎಂದರೆ ಮತ್ತೆ ಪ್ರಶ್ನೆಗಳಿವೆ. (ಸಾಮಾನ್ಯ ಆಡುಮಾತಿನ ಬಳಕೆಗೆ ಮಾತ್ರ ’ಅ ಮತ್ತು ’ಹ’ ಎರಡೂ ಒಂದೇ ಎಂದರೆ ಈ ಪ್ರಶ್ನೆಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ)

’ಹ’ ಕಾರವನ್ನು ’ಅ’ಕಾರವಾಗಿ ಉಚ್ಚರಿಸುವಾಗ ಅಂತಹ ಹೆಚ್ಚಿನ ಆಭಾಸಗಳೇನೂ ಆಗುವುದಿಲ್ಲ. ಆದರೆ ’ಅ’ ಕಾರಗಳನ್ನು ’ಹ’ಕಾರಗಳಾಗಿ ಉಚ್ಚರಿಸಬೇಕಾದಾಗ ನಾನು ಕೆಲವು ಆಭಾಸಗಳನ್ನು ಗುರ್ತಿಸಿದ್ದೇನೆ.

ಉದಾ: ಹೆಲ್ಲರಿಗೂ ಹಾದರದ ಸ್ವಾಗತ (ಎಲ್ಲರಿಗೂ ಆದರದ ಸ್ವಾಗತ), ಹಕ್ಕಿಯು ಹಕ್ಕಿಯನ್ನು ತಿಂದಿತು (ಹಕ್ಕಿಯು ಅಕ್ಕಿಯನ್ನು ತಿಂದಿತು), ಸಂಸದೆ ತೇಜಸ್ವಿನಿ ನಿರೂಪಕಿಯಾಗಿದ್ದಾಗ ಕೇಳುತ್ತಿದ್ದರು " ಹಿದರ ಹರ್ತ ಹೇನು?"(ಇದರ ಅರ್ಥ ಏನು?) , ನಮಗೆ ಹೇನಾಗಿದೆ (ನಮಗೆ ಏನಾಗಿದೆ?). ಪರಸ್ಪರ ಮಾತುಕತೆಗೆ ಸರಿ ಎನ್ನಬಹುದು ಆದರೆ ಪುಸ್ತಕದಲ್ಲಿ ಓದುವಾಗ "ಹಿದರ ಹರ್ತ ಯೇಳಿರಿ" ಎಂದು ವಾಕ್ಯ ಬಂದು ಬಿಟ್ಟರೆ ಅದು ನಮಗೆ ತಿಳಿಯುವುದು ಹೇಗೆ ? ಕರವೇ ಅಧ್ಯಕ್ಷ ನಾರಾಯಣಾಗೌಡರು ಸ್ಪಷ್ಟವಾಗಿ ’ಅ’ ಕಾರಕ್ಕೆ ’ಹ’ಕಾರವನ್ನೂ ’ಹ’ಕಾರಕ್ಕೆ ’ಅ’ ಕಾರವನ್ನೂ ಬಳಸುತ್ತಾರೆ.

ಅವರ ಪ್ರಕಾರ ಆಡುವುದಾದರೆ(ಹಾ?)

ಹೀ ಬಾನು ಹೀ ಚುಕ್ಕಿ ಹೀ ವೂವು ಹೀ ಅಕ್ಕಿ

ತೇಲಿ ಸಾಗುವ ಮುಗಿಲು ಅರುಶ ಹುಕ್ಕಿ

ಯಾರು ಹಿಟ್ಟರು ಹಿವನು ಯೀಗೆ ಹಿಲ್ಲಿ !

ವೇದಿಕೆಯ ಮೇಲಿದ್ದಾಗ ಈ ರೀತಿ ಹಾಡಿದರೆ ನಮ್ಮ ಕಿವಿಗಳನ್ನು ಈ ಉಚ್ಚಾರಣೆಗೆ ಹೊಂದಿಸಿಕೊಳ್ಳಬೇಕೆ? ಮಾತುಗಳಾದರೂ ಅಷ್ಟೆ ’ಹಾದರದ ಸ್ವಾಗತ’ ’ನನ್ನೊಡನೆ ಯೇಳಿರಿ’, ’ಹೆಳ್ಳು ಬೆಲ್ಲ’ ಇತ್ಯಾದಿ. ಇದಕ್ಕೆ ಪರಿಹಾರ ಏನು?

ನಮ್ಮ ಉತ್ತರ ಕರ್ನಾಟಕದಲ್ಲಿ ’ಅ’ ಮತ್ತು ’ಹ’ ಕಾರಗಳನ್ನು ಸರಿಯಾಗಿ ಉಚ್ಚಾರ ಮಾಡುತ್ತಾರೆ.(ಎಲ್ಲಾ ಜಾತಿಯವರು, ಬಹುತೇಕ ಎಲ್ಲಾ ಜಿಲ್ಲೆಯವರು). ಅವರೂ ಇಂತಹ ಉಚ್ಚಾರಣೆಗಳಿಗೆ ಹೊಂದಿಕೊಳ್ಳಬೇಕೆ ? ಅವರೂ ಕನ್ನಡಿಗರಾದ್ದರಿಂದ ’ಮೈಸೂರು ಮಂಡ್ಯದವರಿಗಾಗಿ’ ಭಾಷೆಯ ಬಳಕೆಯನ್ನು ಬದಲಿಸಿ ಎಂದು ಅವರಿಗೇ ಹೇಳುವುದು ಸರಿಯಲ್ಲ ಎನಿಸುತ್ತದೆ. ಅಲ್ಲಿ ’ಸ’ ಮತ್ತು ’ಶ’ವನ್ನು ಏಕರೂಪವಾಗಿ ಉಚ್ಚರಿಸುತ್ತಾರೆ ಉದಾ: ಶಗಣಿ(ಸಗಣಿ), ಶೀಮಾ(ಸೀಮಾ), ಶಿಟ್ಟು(ಸಿಟ್ಟು). ಈ ಉಚ್ಚಾರಣೆಯನ್ನು ಪರಿಗಣಿಸಿದರೆ ಮಂಡ್ಯದ ಕಡೆಯವರು ’ಸ’ ಮತ್ತು ’ಶ’ ದ ನಡುವಿನ ವ್ಯತ್ಯಾಸವನ್ನು ತ್ಯಾಗ ಮಾಡಬೇಕಾಗುತ್ತದೆ.

೫ ಸಜಾತೀಯ ಒತ್ತಕ್ಷರಗಳು ಕನ್ನಡದವು(ಉದಾ: ಅಕ್ಕ, ಮಕ್ಕಳು, ಕಳ್ಳ) ವಿಜಾತಿಯ ಒತ್ತಕ್ಷರಗಳು ಸಂಸ್ಕೃತದಿಂದ ಎರವಲು ಪಡೆದವುಗಳು ಎಂದು ವ್ಯಾಕರಣದಲ್ಲಿ ಓದಿದ ನೆನಪು. ಸಂಸ್ಕೃತದ ಬಳಕೆಗಾಗಿ ಮಾತ್ರ ಬೇಕಾಗುವ ಮಹಾಪ್ರಾಣಗಳು, ಋ, ಷ ಗಳನ್ನೆಲ್ಲಾ ಕಿತ್ತು ಹಾಕುವ ಪ್ರಸ್ತಾಪ ಇರುವಾಗ ವಿಜಾತಿಯ ಸಂಯುಕ್ತಾಕ್ಷರಗಳನ್ನು ಕಿತ್ತು ಹಾಕುವ ಪ್ರಸ್ತಾಪ ಇದೆಯೆ ?

೬. ನಾವು ಲೇಖನದಲ್ಲಿ ಬಳಸುವ ಲೇಖ ಚಿಹ್ನೆಗಳು ಇಂಗ್ಲೀಶ್‍ನಿಂದ ಬಂದದ್ದು (ಉದಾ: , . ! ? ). ಮೂಲ ಕನ್ನಡದಲ್ಲಿ (ಎಲ್ಲಾ ಭಾರತೀಯ ಭಾಷೆಗಳಲ್ಲಿ ಇವು ಇಲ್ಲ). ನಾವು ಈಗ ಕನ್ನಡವನ್ನು ಓದುವ accent ಈ ಚಿಹ್ನೆಗಳ ಮೇಲೆಯೇ ಅವಲಂಬಿಸಿರುತ್ತದೆ. ಈ ಚಿಹ್ನೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಶಂಕರ ಭಟ್ಟರ ಹೊತ್ತಗೆ ಓದಿದ ನಂತರ ಅಚ್ಚ ಕನ್ನಡದಲ್ಲಿ ಬರೆಯಬೇಕೆಂದು ಸಾಧ್ಯಂತವಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ ಸಂಸ್ಕೃತದ ಪದಗಳು ನುಸುಳಿಯೇ ನುಸುಳುತ್ತವೆ. ನನ್ನ ಮೇಲಿನ ಬರಹದಲ್ಲೂ ಸಂಸ್ಕೃತ ಶಬ್ದಗಳೇ ಹೆಚ್ಚು. ಪೂರ್ತಿಯಾಗಿ ಕನ್ನಡದಲ್ಲಿ ಬರೆಯಲು ಒಂದು ದಿನ ಸಾಧ್ಯವಾಗುತ್ತದೇನೊ ನೋಡಬೇಕು! ಸರಳಗನ್ನಡವನ್ನು ಅಳವಡಿಸುವ ಕೈಂಕರ್ಯದಲ್ಲಿ ತೊಡಗಿರುವ ಯಾರಾದರೂ ದಯವಿಟ್ಟು ನನ್ನ ಅನುಮಾನಗಳನ್ನು ಪರಿಹರಿಸಿ.

Rating
No votes yet

Comments