ಸಿಹಿ - ಸವಿ ನೆನಪು

ಸಿಹಿ - ಸವಿ ನೆನಪು


ರುಚಿಯದು ತಿನ್ನಲು
ಗರಿಗರಿ ಬಿಸಿಬಿಸಿ,
ಕುರುಕುರು ಕುರುಕಲು
ಅಮ್ಮನು ಮಾಡಿದ ಕೋಡುಬಳೆ.

ಸಿಹಿಸಿಹಿ ಸವಿಯದು
ಬಿಸಿಲಿಗೆ ತಂಪದು
ಜುಮ್ಮನೆ ಕೊರೆಯುವ
ಬಣ್ಣಬಣ್ಣದ ಐಸ್ಕ್ಯಾಂಡಿ

ಚಪ್ಪಟೆ ತಿನಿಸದು
ಕಟುಕಲು ಸಿಹಿಸಿಹಿ,
ಚಪ್ಪರಿಸುತ ಸವಿಯುವ
ಬೆಲ್ಲದ ಪಾಕದ ಕಡ್ಲೆಮಿಠಾಯಿ

ಬಾಯದು ಬಣ್ಣವು,
ಹತ್ತಿಯ ತಿರುಳದು
ನೆನೆದರೆ ಜೊಲ್ಲದು
ಅಜ್ಜಿ ಕೂದಲು ಬಾಂಬೆ ಮಿಠಾಯಿ.

ಚೆಕ್ಕುಲಿ ಬಿಡೆನು, ಉಂಡೆಯ ಮರೆಯೆನು
ಮೋದಕ ಮುದವು, ಕಡುಬದು ಹದವು,
ಒಬ್ಬಟ್ಟು ತಂಬಿಟ್ಟು, ಎಳ್ಳುಂಡೆ ನಿಪ್ಪಟ್ಟು
ಮುಚ್ಚಿಟ್ಟು ಬಚ್ಚಿಟ್ಟು, ತಿಂದದ್ದೆ ತಿಂದದ್ದು.

ಆಸೆಯ ಕನಸಲಿ ನೆನೆದರೆ ಸೊಗಸು.
ಮನಸಲಿ ಮಂಡಿಗೆ ಮೆದ್ದರೆ ಕನಸು.
ಬರಬಾರದೆ ಮತ್ತದೆ ಕಾಲವು ಎದುರಲಿ
ಸಂತಸ ತುಂಬಿದ್ದ ಬದುಕದು ನಮ್ಮಲಿ





 

Rating
No votes yet

Comments