ಸಿ. ಎಸ್. ಎಲ್. ಸಿ. (CSLC) ಗೆ ಕೆಲವು ಪ್ರಶ್ನೆಗಳು

ಸಿ. ಎಸ್. ಎಲ್. ಸಿ. (CSLC) ಗೆ ಕೆಲವು ಪ್ರಶ್ನೆಗಳು

ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಸಿ.ಎಸ್.ಎಲ್.ಸಿ. ಎಂಬ ವಿಭಾಗದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಪಾಸ್ಚಾತ್ಯ ದೃಷ್ಟಿಯ ಹೊರತಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸುತ್ತಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆಯಷ್ಟೆ. ಈ ಪ್ರಯತ್ನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾದುದು, ಅಷ್ಟೇ ಅಲ್ಲ, ಅವರ ಅಧ್ಯಯನದಲ್ಲಿ ನಾವೂ ಪಾಲ್ಗೊಳ್ಳುವುದು (ಅನಧಿಕೃತವಾಗಿ :) ) ಅವಶ್ಯ ಎಂದು ನನ್ನ ಅನಿಸಿಕೆ. ಆ ನಿಟ್ಟಿನಲ್ಲಿ ಈ ಬರಹ.

 

ಸಿ.ಎಸ್.ಎಲ್.ಸಿ. ಯ ಈ ವರೆಗಿನ ಸಂಶೋಧನೆ ನನಗೆ ಅರಿವಾದಂತೆ ಅದರ ಸಾರ ಇಂತಿದೆ :

 

೧. ಭಾರತ ಭಿನ್ನ ಸಂಸ್ಕೃತಿಗಳನ್ನು ಒಳಗೊಂಡೂ ಒಂದು ಸಂಸ್ಕೃತಿ ಇನ್ನೊಂದನ್ನು ಗೌರವಿಸುವ ಮಹಾಸಂಸ್ಕೃತಿ (ಈ ಶಬ್ದ ನಾನೇ ಬಳಸಿರುವುದು) ಹೊಂದಿದ ಸಮಾಜ

೨. ಹಿಂದುತ್ವವಾದಿಗಳು ಭಾರತದ ವಿಭಿನ್ನ ಸಂಸ್ಕೃತಿಗಳನ್ನು ಅಳಿಸಿ ಏಕ ಸಂಸ್ಕೃತಿ ತರುವ ಐಡಿಯಾಲಜಿಯನ್ನು ಹೊಂದಿದ್ದಾರೆ

೩. ಹಿಂದುತ್ವವಾದಿಗಳನ್ನು ವಿರೋಧಿಸುವ ಸೆಕ್ಯುಲರ್ವಾದಿಗಳೂ ಕೂಡ ಅವರಿಗರಿವಿಲ್ಲದಂತೆಯೇ ಏಕ ಸಂಸ್ಕೃತಿಯ (ಯುರೋಪಿನ) ಹಿನ್ನೆಲೆಯಿಂದ ವಾದಿಸುತ್ತಾರೆ

೪. ಗೋಹತ್ಯೆ ವಿಷಯದಲ್ಲಿ ಹಿಂದುತ್ವವಾದಿಗಳು ಎಲ್ಲಾ ಹಿಂದೂಗಳೂ ಗೋಮಾಂಸ ತಿನ್ನಬಾರದೆಂಬ ಏಕ ಸಂಸ್ಕೃತಿ ತರಲು ಬಯಸಿದರೆ, ಗೋ ಹತ್ಯೆ ಬೆಂಬಲಿಸುವವರು ಗೋಹತ್ಯೆ ತಿನ್ನುವುದು ಸರಿ ಎಂದು ಸಮರ್ಥಿಸಿಕೊಳ್ಳಲು ಮತ್ತದೇ ಧರ್ಮಗ್ರಂಥಗಳ (ಏಕ ಸಂಸ್ಕೃತಿ) ಮೊರೆ ಹೋಗುತ್ತಾರೆ

೫. ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಗಳು ಸ್ವಭಾವತಹ ಏಕಸಂಸ್ಕೃತಿಯವು

೬. ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಗಳ ಸ್ವಭಾವನ್ನು ಅರ್ಥಮಾಡಿಕೊಳ್ಳದ ಕಾರಣ ಭಾರತದಲ್ಲಿ ಕೋಮು ಸಮಸ್ಯೆಗಳು ಉದ್ಭವಿಸುತ್ತಿವೆ

೭. ಅದೇ ರೀತಿ ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಗಳಿಗೆ ಇಲ್ಲಿನ ಬಹುಸಂಸ್ಕೃತಿ ಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ

೮. ಹಿಂದುತ್ವವಾದಿಗಳು ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಗಳನ್ನು ಟೀಕಿಸುತ್ತಾರೆಯೇ ಹೊರತು ಅವರನ್ನು ಸೈಧ್ಧಾಂತಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಲ್ಲ

೯. ಹಿಂದುತ್ವ ವಿರೋಧಿಗಳೂ ಕೂಡ  ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿಗಳು ಟೀಕೆಗೆ ಅತೀತವೆಂದೂ ಅವನ್ನು ಟಿಕಿಸುವುದು ಬ್ರಾಹ್ಮಣಶಾಹಿಯ ಪುನರುಥ್ಥಾನದ ಪ್ರಯತ್ನವೆಂದೂ ಬಿಂಬಿಸಿವೆ

೧೦. ಈ ಮೇಲಿನ ಎರಡು ಅತಿಗಳನ್ನು ಮೀರಿ ಸಂಸ್ಕೃತಿ ಅಧ್ಯಯನ ನಡೆಸುವುದೇ ಸಿ.ಎಸ್.ಎಲ್.ಸಿ. ಯ ಉದ್ದೇಶ.

 

ಮೊದಲನೆಯದಾಗಿ ನನ್ನ ಬಗ್ಗೆ ಒಂದು ಸ್ಪಷ್ಟೀಕರಣ. ನಾನು ಹಿಂದುತ್ವ ಹಿನ್ನೆಲೆಯಿಂದ ಬಂದವನು. ಆದ್ದರಿಂದ ಮೇಲ್ಕಾಣಿಸಿದ ಎರಡನೇ ಅಂಶವನ್ನು ಒಪ್ಪುವುದಿಲ್ಲ ಹಾಗೂ ಅದು ಹಿಂದುತ್ವದ ತಪ್ಪು ಕಲ್ಪನೆ ಎಂದು ಹೇಳುತ್ತೇನೆ. ಆದರೆ ಅದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ಈ ಲೇಖನದ ಮಟ್ಟಿಗೆ ಮೇಲ್ಕಾಣಿಸಿದ ಎರಡನೇ ಅಂಶ ಸರಿ ಎಂದೇ ಇಟ್ಟುಕೊಳ್ಳೋಣ.

 

ಈಗ, ಲೇಖನದ ಉದ್ದೇಶಕ್ಕಾಗಿ ಕೆಳಗಿನ ಸಮೀಕರಣಗಳನ್ನು ಊಹಿಸಿಕೊಳ್ಳೋಣ :

 

ಭ = ವಿವಿಧ ಸಂಸ್ಕೃತಿಗಳನ್ನು ಗೌರವಿಸುವ ಭಾರತದ ಮಹಾಸಂಸ್ಕೃತಿ

ಹ = ಹಿಂದುತ್ವವಾದಿಗಳ ವಾದ - ಭಾರತೀಯರೆಲ್ಲ ಹಿಂದೂ (ಏಕ ಸಂಸ್ಕೃತಿ) ಎಂಬುದಾಗಿ

ಸ = ಸೆಕ್ಯುಲರ್ ವಾದ - ಹೊರಗಿನ ಸಂಸ್ಕೃತಿಗಳನ್ನು ಟೀಕಿಸುವುದು ಬ್ರಾಹ್ಮಣಶಾಹಿಯ ಲಕ್ಷಣ ಎಂಬ ವಾದ

ಅ = ಇತರ ಸಂಸ್ಕೃತಿಗಳ ಬಗ್ಗೆ ಅಸಹಿಷ್ಣುತೆ ಹೊಂದಿರುವ ಸಂಸ್ಕೃತಿಗಳು - ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ

 

ಇಂತಿದ್ದಲ್ಲಿ, ಸಿ.ಎಸ್.ಎಲ್.ಸಿ. ಗೆ ನನ್ನ ಪ್ರಶ್ನೆ ಏನೆಂದರೆ, ಮೇಲಿನ ನಾಲ್ಕು  (ಭ, ಹ, ಸ, ಅ) ಸಂಗತಿಗಳಲ್ಲಿ (ಸಿಧ್ಧಾಂತ ಎನ್ನುವ ಪದಪ್ರಯೋಗ ಈ ಸನ್ನಿವೇಶದಲ್ಲಿ ಸರಿಕಾಣದ ಕಾರಣ ಅವುಗಳನ್ನು "ಸಂಗತಿ" ಎನ್ನುತ್ತಿರುವೆ) ಯಾವುದನ್ನು ನಾವು ಬೆಂಬಲಿಸಬೇಕು ಹಾಗೂ ಹೇಗೆ?

 

ಪ್ರಶ್ನೆಯನ್ನು ಇನ್ನೂ ಸ್ವಲ್ಪ ಬಿಡಿಸಿ ಕೇಳುವುದಾದರೆ :

೧. ಭ ವನ್ನು ಬೆಂಬಲಿಸುವುದು ಅಥವಾ ಪ್ರೋತ್ಸಾಹಿಸುವುದು ಸರಿಯೇ? ಹಾಗೆ ಮಾಡಿದಲ್ಲಿ ಅದೂ ಕೂಡ ಐಡಿಯಾಲಜಿಯೊಂದನ್ನು (ಭ) ಪ್ರೋತ್ಸಾಹಿಸಿದಂತೆ ಆಗಲಾರದೇ? 

೨. ಭ ವನ್ನು ಬೆಂಬಲಿಸುವುದು ಬೇಡ ಎಂದಾದಲ್ಲಿ ಪ್ರಸ್ತುತ ಧಾರ್ಮಿಕ ಸಮಸ್ಯೆಗಳನ್ನೂ, ಕೋಮು ದಳ್ಳುರಿಗಳನ್ನೂ ಬೆಂಬಲಿಸಿದಂತಾಗುವುದಿಲ್ಲವೇ? ಹಾಗೆಯೇ ಭಾರತ ಎಂಬ ದೇಶದ ಮೂಲ ತತ್ವಗಳನ್ನೇ (Idea of India) ಬಲಿಕೊಟ್ಟಂತಾಗುವುದಿಲ್ಲವೇ?

೩. ಭ, ಹ, ಸ ಮತ್ತು ಅ ಗಳ ಹೊರತಾಗಿ ಬೇರೆ ರೀತಿ ಯೋಚನಾ ವಿಧಾನ ಅಥವಾ ಇನ್ನೇನಾದರೂ ಬಗೆ/ಸಂಗತಿ/ವಾದ - ಸಮಾಜವನ್ನು ಸಹಜವಾಗಿ, ಆರೋಗ್ಯವಾಗಿ ಹಾಗೂ ಸಧೃಢವಾಗಿ ಇರಿಸುವಂಥದ್ದು - ಇದೆಯೇ?

 

ಭ ವನ್ನು ಬೆಂಬಲಿಸುವುದು ಅಥವಾ ಪ್ರೋತ್ಸಾಹಿಸುವುದು ಸರಿ ಎಂದಾದಲ್ಲಿ :

೪. ಭ ವನ್ನು ಅ ಒಪ್ಪುವುದು ಸಾಧ್ಯವೇ? ಸಾಧ್ಯ ಎಂದಾದಲ್ಲಿ ಅದು ಹೇಗೆ ಸಾಧ್ಯ? ಅಸಾಧ್ಯ ಎಂದಾದಲ್ಲಿ ಅ ಭ ದ ಅಸ್ತಿತ್ವಕ್ಕೇ ಉರುಳಲ್ಲವೇ?

೫. ಅ ಮತ್ತು ಭ ಒಂದೇ ದೇಶದಲ್ಲಿ (ಸಮಾಜದಲ್ಲಿ) ಜೊತೆಯಾಗಿ ಇರಲು ಸಾಧ್ಯವೇ? (ಅವುಗಳ ಮೂಲ ಅರ್ಥದ ಪ್ರಕಾರ ಅಸಾಧ್ಯ)

೬. ಭ ವನ್ನು ಪ್ರೋತ್ಸಾಹಿಸುವುದು ಸರಿ ಎಂದಾದರೆ ಹ ದ ತಪ್ಪೇನು? ಅದೂ (ಹ) ಕೂಡ "ಎಲ್ಲ ಸಂಸ್ಕೃತಿಗಳನ್ನು ಗೌರವಿಸುವ ಸಂಸ್ಕೃತಿಯೊಂದನ್ನು" (ಸಂಸ್ಕೃತಿಯೊಂದನ್ನು ಎನ್ನುವಲ್ಲಿ "ಒಂದನ್ನು" ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ) ಪ್ರತಿಪದಿಸುತ್ತದೆಯಲ್ಲವೇ?

೭. ಬ್ರಾಹ್ಮಣತೆಯ ಬಗ್ಗೆ ಅಸಹಿಷ್ಣುತೆ ಹೊಂದಿರುವ ಸ, ಆ ಅಸಹಿಷ್ಣುತೆಯಿಂದಾಗಿ ಅ ಗುಂಪಿಗೆ ಸೇರುವುದಿಲ್ಲವೇ?

೮. ಭ ವನ್ನು ಒಪ್ಪುವುದು ಅ ಕ್ಕೆ ಅಸಾಧ್ಯ ಎಂದಾದಲ್ಲಿ Two Nation Theory ಸರಿ ಎಂದಾಯಿತಲ್ಲವೇ?

೯. ಭ ವನ್ನು ಒಪ್ಪುವುದು ಅ ಕ್ಕೆ ಸಾಧ್ಯ ಎಂದಾದಲ್ಲಿ ಈ ದೇಶದಲ್ಲಿ ಕೋಮು ಸಂಘರ್ಷಗಳು (ಅದೂ ಅ ಗಳ ಜೊತೆ ಮಾತ್ರ) ಏಕೆ ಇವೆ?

೧೦. ಅ ವನ್ನು ಒಪ್ಪುವುದು ಭ ಕ್ಕೆ ಸಾಧ್ಯವೇ? ಸಾಧ್ಯವಾದಲ್ಲಿ ಹೇಗೆ? ಒಪ್ಪಿದಲ್ಲಿ ಭ ದ ಅರ್ಥವೇ ಅನರ್ಥವಾಗುವುದಿಲ್ಲವೇ?

 

ಈ ಪ್ರಶ್ನೆಗಳಿಗೆ ಸಿ.ಎಸ್.ಎಲ್.ಸಿ. ಯ ಉತ್ತರಗಳೇನಿರುತ್ತವೆ ಎಂಬ ಕುತೂಹಲ ಇದೆ. ಅವರ ಅಧ್ಯಯನ ಪೂರ್ಣಗೊಂಡಿಲ್ಲ, ಹಾಗೂ ಈ ಪ್ರಶ್ನೆಗಳನ್ನು ಕೇಳಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದಾದಲ್ಲಿ ಅದಕ್ಕಾಗಿ ಕಾಯಲು ಯಾವುದೇ ಸಮಸ್ಯೆಯಿಲ್ಲ ನನಗೆ. ಆದರೆ ಇವುಗಳನ್ನು ಹಾಗೂ ಇತರ ಪ್ರಶ್ನೆಗಳಿದ್ದಲ್ಲಿ ಅವನ್ನೂ ತಮ್ಮ ಅಧ್ಯಯನದಲ್ಲಿ ಸೇರಿಸಿಕೊಂಡು ಅವಕ್ಕೆ ಸೂಕ್ತ ಉತ್ತರಗಳನ್ನು ಹುಡುಕುತ್ತಾರೆ ಅಂದುಕೊಂಡಿದ್ದೇನೆ. ಕೇವಲ ಹ ಮತ್ತು ಸ ಬಣಗಳ ವಾದಗಳೆರಡೂ ತಪ್ಪು ಎಂದು ಹೇಳುವುದರಲ್ಲಿ ಅವರ ಅಧ್ಯಯನ ಮುಗಿಯುವುದಿಲ್ಲ, ಬದಲಾಗಿ ಇವೆರಡಕ್ಕೆ ಪರ್ಯಾಯ ಯೋಚನಾ ವಿಧಾನವೊಂದನ್ನು ಹುಟ್ಟುಹಾಕಲಿ ಈ ಅಧ್ಯಯನ ಎಂಬುದಾಗಿ ನನ್ನ ಆಶಯ.

 

ಹಾಗೆಯೇ ಇತರ ಸಂಪದಿಗರು ಸಿ.ಎಸ್.ಎಲ್.ಸಿ. ಗೆ  ಏನಾದರೂ ಪ್ರಶ್ನೆ ಕೇಳುವುದಿದ್ದಲ್ಲಿ ಇಲ್ಲಿ ಕೇಳಬಹುದು (ಬೇರೆ ಕಡೆ ಕೇಳಬಾರದು ಅಂತ ಅಲ್ಲ :) ). 

 

Rating
No votes yet

Comments