ಸುಕೃತಿ
ಸುಕೃತಿ
ಅಕಾರದಿಂದ ಆಕೃತಿ,
ಉಕಾರದಿಂದ ಪ್ರಕೃತಿ,
ಮಕಾರದಿಂದ ಸಂಸ್ಕೃತಿ,
ಓಂ ಕಾರದಿಂದ ಸುಕೃತಿ.//ಪ//
ಹುಟ್ಟು ಬಟ್ಟೆ ಪ್ರಕೃತಿ,
ಉಟ್ಟ ಬಟ್ಟೆ ಸಂಸ್ಕೃತಿ,
ಕೆಟ್ಟ ಬಟ್ಟೆ ವಿಕೃತಿ,
ಹೊಟ್ಟೆ-ಬಟ್ಟೆ ಎರಡು ಸುಕೃತಿ.//೧//.
ಮಾತು ನಮ್ಮ ಪ್ರಕೃತಿ,
ಭಾಷೆ ಮಾತ ಸಂಸ್ಕೃತಿ,
ಗೀತೆ ಭಾಷೆಗಾಕೃತಿ,
ಬುದ್ಧಿ ಭಾವನೆಗಳು ಸುಕೃತಿ.//೨//.
ಪ್ರೇಮದಲ್ಲಿ ಪ್ರಕೃತಿ,
ಕಾಮವಿದಕೆ ವಿಕೃತಿ,
ಧರ್ಮ ನಮ್ಮ ಸಂಸ್ಕೃತಿ,
ಸತ್ಕರ್ಮದಿಂದ ಸುಕೃತಿ.//೩//.
ಸೃಷ್ಟಿ ಪ್ರಳಯ ಪ್ರಕೃತಿ,
ಯುದ್ಧ ನಮ್ಮ ವಿಕೃತಿ,
ಶಾಂತಿಗಾಗಿ ಸಂಸ್ಕೃತಿ,
ಭಕ್ತಿ ಜ್ಞಾನ ದಿಂದ ಸುಕೃತಿ.//೪//.
ದೇಹ ನಮ್ಮ ಪ್ರಕೃತಿ,
ದ್ಯೇಯವಿದರ ಸಂಸ್ಕೃತಿ,
ದುರಾಚಾರ ವಿಕೃತಿ,
ದೈವಶಕ್ತಿಯಿಂದ ಸುಕೃತಿ.//೫//.
ಜನನ-ಮರಣ ಪ್ರಕೃತಿ,
ಧ್ಯಾನ-ಮನನ ಸಂಸ್ಕೃತಿ,
ಹರಿಯು ನಮಗೆ ಆಕೃತಿ,
ಅವನ ಮಿಲನ ದಿಂದ ಸುಕೃತಿ.//೬//.
-:ಅಹೋರಾತ್ರ.