ಸುಟ್ಫು ಹಾಕಿದೆ ಜಾತಕ ‍‍‍‍‍: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

ಸುಟ್ಫು ಹಾಕಿದೆ ಜಾತಕ ‍‍‍‍‍: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

ಸುಟ್ಟು ಹಾಕಿದೆ ಜಾತಕ

ನಾನು ರಜಾದಿನಗಳನ್ನು ಕಳೆಯಲು ಭದ್ರಾವತಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪಕ್ಕದ ಮನೆಯಲ್ಲಿದ್ದ ಒಬ್ಬರು ಕೈಯ ರೇಖೆಗಳನ್ನು ನೋಡಿ ಭವಿಷ್ಯ ಹೇಳುತ್ತಿದ್ದರು. ಭೂತಕಾಲಕ್ಕಿಂತ ಭವಿಷ್ಯದ ಬಗ್ಗೆ ಮನುಷ್ಯನಿಗೆ ಆಸಕ್ತಿ. ನನಗೂ ಭವಿಷ್ಯ ತಿಳಿಯುವ ತವಕ. ಅವರನ್ನು ಕಾಡಿಸಿ ಪೀಡಿಸಿ ನನ್ನ ಭವಿಷ್ಯವನ್ನು ಕೇಳಿದೆ. ನಿನಗೆ ವಿದ್ಯೆ ಹತ್ತುವುದಿಲ್ಲವೆಂದು ಅವರು ಭವಿಷ್ಯ ನುಡಿದರು. ಓದುವುದರಲ್ಲಿ ಹಿಂದಿದ್ದ ನನಗೆ ಅವರ ಭವಿಷ್ಯ ನಿಜವಾಗಬಹುದೇನೋ ಎಂಬ ಭಯ ಕಾಡತೊಡಗಿತು.

ಆಗ ನಾನು ೯ನೇ ತರಗತಿ ಓದುತ್ತಿದ್ದೆ. ಶಾಲೆಯಲ್ಲಿ ಕೊನೆಯ ಬೆಂಚಲ್ಲಿ ಕೂತು ಗುಂಡ ಮಾಸ್ತರ ಬೋಳು ತಲೆಗೆ ರಾಕೇಟ್ ಬಿಡುತ್ತಿದ್ದ ನನಗೆ ವಿಜ್ಞಾನವಂತೂ ಅರ್ಥವೇ ಆಗುತ್ತಿರಲಿಲ್ಲ. ಒಂದು ಬಾರಿ ರಾಕೇಟ್ ಹಾರಿಸಬೇಕಾದರೆ ಮಾಸ್ತರರ ಕೈಯಲ್ಲಿ ಸಿಕ್ಕಿ ಹಾಕಿಕೊಂಡು ಶಾಲೆಯಿಂದ ಹೊರಹಾಕಿ, ತಾಯಿಯನ್ನು ಕರೆದುಕೊಂಡು ಬರುವಂತೆ ಅಜ್ಞಾಪಿಸಿದರು. ನಾನು ಶಾಲೆಗೆ ಹೋಗದಿರುವುದನ್ನು ಗಮನಿಸಿದ ತಾಯಿ ವಿಷಯ ತಿಳಿದು, ಮುಖ್ಯೋಪಾಧ್ಯಾಯರ ಬಳಿ ಕ್ಷಮೆ ಕೇಳಿಸಿ ಇನ್ನು ಮುಂದೆ ನನ್ನ ಮಗ ಈ ರೀತಿ ಮಾಡುವುದಿಲ್ಲವೆಂಬ ಭರವಸೆಯನ್ನು ನೀಡಿದ್ದರು. ಹೇಗೋ ಅಧ್ಯಾಪಕರ ಕೃಪೆಯಿಂದ ಮುಂದಕ್ಕೆ ತಳ್ಳಲ್ಪಡುತ್ತಿದ್ದ ನನ್ನ ಬಗ್ಗೆ ಜ್ಯೋತಿಷಿ ಹೇಳಿದ್ದು ಸರಿಯಾಗಿದೆ ಎಂದು ಭಯವಾಗತೊಡಗಿತು.

ಬಡತನದ ಕೂಪದಿಂದ ಹೊರಬರಲು ಶಿಕ್ಷಣವೊಂದೇ ದಾರಿಯೆನ್ನಿಸತೊಡಗಿತು. ಎಸ್.ಎಸ್.ಎಲ್.ಸಿ.ಗೆ ಮುಂದಿನ ಬೆಂಚಿಗೆ ಬಂದು ಚೆನ್ನಾಗಿ ಓದತೊಡಗಿದೆ. ಜ್ಯೋತಿಷಿಯ ಮಾತನ್ನು ಸುಳ್ಳಾಗಿಸಬೇಕೆಂಬ ಹಟ ನನ್ನನ್ನು ಓದಿಸುವಂತೆ ಮಾಡಿತು. ಫಲಿತಾಂಶ ಬಂದಾಗ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ನೋಡಿ ಸಂತೋಷ. ಮಾಸ್ತರಿಗೆ ಆಶ್ಚರ್ಯ.

ಮನೆಗೆ ಹೋಗಿ ಮೊದಲು ಮಾಡಿದ ಕೆಲಸವೆಂದರೆ ತಮ್ಮಂದಿರೊಂದಿಗೆ ಸೇರಿ ಬೀಗದ ಕೈಯನ್ನು ಕದ್ದು ಕಪಾಟಿನಲ್ಲಿದ್ದ ನಮ್ಮ ಜಾತಕಗಳನ್ನು ತೆಗೆದುಕೊಂಡೆವು. ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತುಂಬಿ, ಎರಡು ಇಟ್ಟಿಗೆ ಮೇಲಿಟ್ಟು ಜಾತಕಗಳನ್ನು ಸುಟ್ಟು ನೀರು ಬಿಸಿ ಮಾಡಿ ಮೂರೂ ಜನ ಕುಡಿದೆವು. ಅಂದಿನಿಂದ ಭವಿಷ್ಯ ಹೇಳುವುದು ಸುಳ್ಳೆಂಬ ತೀರ್ಮಾನಕ್ಕೆ ನಾನು ಬಂದೆ.

ಮುಂದಿನ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನನ್ನ ಕತೆಯನ್ನು ಉದಾಹರಣೆಯಾಗಿ ಹೇಳಿ ನೀವು ಅದೇ ರೀತಿ ಎಸ್.ಎಸ್.ಎಲ್.ಸಿ.ಯಲ್ಲಿ ಓದಿ ಮುಂದೆ ಬರಬೇಕೆಂದು ಗುಂಡ ಮಾಸ್ತರು ಹೇಳುತ್ತಿದ್ದರು. ಜ್ಯೋತಿಷಿಗೆ ವಂದನೆ ಸಲ್ಲಿಸೋಣವೇ?

ಮುಂದೆ ಭವಿಷ್ಯ ವಾಚನ ಪೊಳ್ಳು ಎಂಬುದಕ್ಕೆ ಪೂರಕವಾದ ಹಲವಾರು ಮಾಹಿತಿಗಳು ಸಿಕ್ಕಿದವು. ಜಾತಕದ ನವಗ್ರಹಗಳಲ್ಲಿ ಬರುವ ರವಿ ಒಂದು ಗ್ರಹವೇ ಅಲ್ಲ, ನಕ್ಷತ್ರ. ಚಂದ್ರ ಒಂದು ಉಪಗ್ರಹ. ರಾಹು-ಕೇತು ಗ್ರಹಗಳಿಗೆ ಅಸ್ತಿತ್ವವೇ ಇಲ್ಲ. ಸುಳ್ಳಿನ ಮೇಲೆ ನಿಂತ ಜಾತಕ ಸತ್ಯವನ್ನು ತಿಳಿಸುವುದಾದರೂ ಹೇಗೆ? ಭಾರತೀಯ ಸಂಜಾತ ಚಂದ್ರಶೇಕರ್ ಸೇರಿದಂತೆ ಜಗತ್ತಿನ ೧೭ ನೋಬೇಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಜಾತಕ ವೈಜ್ಞಾನಿಕ ಆಧಾರವಿಲ್ಲವೆಂದು ಸಹಿ ಹಾಕಿದ್ದಾರೆ.

ಚುನಾವಣೆಯ ಸಮಯದಲ್ಲಿ ಒಬ್ಬೊಬ್ಬರು ಒಂದೊಂದು ತರಹ ಭವಿಷ್ಯ ನುಡಿಯುವುದು ಹಾಸ್ಯಾಸ್ಪದವಾಗಿರುತ್ತದೆ. ಹೋದ ಲೋಕಸಭೆ ಚುನಾವಣೆಯಲ್ಲಿ ಯಾರೂ ಮನಮೋಹನ ಸಿಂಗ್ ಪ್ರಧಾನಿಯಾಗುತ್ತಾರೆಂದು ಹೇಳದೇ ಇರುವುದಕ್ಕೆ ಕ್ರಾಂಗೆಸ್ ಪಕ್ಷವೇ ಕಾರಣ. ಅವರು ಮೊದಲೇ ತಿಳಿಸದೇ ಈ ರೀತಿ ಜ್ಯೋತಿಷ್ಯಿಗಳನ್ನು ಸಂಕಟಕ್ಕೆ ಗುರಿಮಾಡಬಾರದಿತ್ತು, ಅಲ್ಲವೇ? ಜಿ.ಟಿ. ನಾರಾಯಣ ರಾವ್ ಹೇಳುತ್ತಿದ್ದ ಮಾತು ಜ್ಞಾಪಕಕ್ಕೆ ಬರುತ್ತದೆ. "Astronomy (ಖಗೋಳಶಾಸ್ತ್ರ)ಯ ಹಾದರಕ್ಕೆ ಹುಟ್ಟಿದ್ದೇ Astrology (ಜ್ಯೋತಿಷ್ಯ)."

Rating
No votes yet

Comments