ಸುಳ್ಳೆಂಬ ಸುಳಿ
ನಮ್ಮ ದಿನನಿತ್ಯದ ವ್ಯಾವಹಾರಿಕ ಜೀವನದಲ್ಲಿ ನಾವು ಹಲವರು ಅದೆಷ್ಟೋ ಸುಳ್ಳು ಹೇಳಿಬಿಡುತ್ತೇವೆ. ಸತ್ಯ ಶಾಶ್ವತ, ಸುಳ್ಳು ನಶ್ವರ ಅಂತೆಲ್ಲಾ ಎಲ್ಲರು ತಿಳಿದಿರುತ್ತಾರೆ, ಕೇಳಿರುತ್ತಾರೆ. ಆದರೂ ಅದೇನೊ ನಮ್ಮ ಬಾಯಲ್ಲಿ ಸಮಯಕ್ಕೆ ಸರಿಯಾಗಿ ಸುಳ್ಳು ಬಂದು ಬಿಡುತ್ತದೆ. ಸಮಯೋಚಿತ ಸುಳ್ಳು ಹೇಳುವವನನ್ನು ಕೇಳಿ ನೋಡಿ, ಅವನ ಉತ್ತರ ಹೀಗಿರುತ್ತದೆ - 'ಅಯ್ಯೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ಸಾವಿರ ವರ್ಷ ಆಯಸ್ಸಂತೆ'. ಅಲ್ಲಾ, ಸಾವಿರ ವರ್ಷ ಬದುಕಿದ್ರು, ಹೀಗೆ ಕಾರಣ ಕೊಡುವ ಮನುಷ್ಯ ಬಹುಶಃ ಬರಿ ಸುಳ್ಳನ್ನೆ ಹೇಳುತ್ತಾ ಬದುಕಬಹುದು ಅಲ್ವಾ?!
ಅದನ್ನು ಬದಿಗಿಟ್ಟು ಈಗ ಯೋಚಿಸೋಣ. ಸುಳ್ಳಿನಿಂದ ನಮಗೆ ಪ್ರಯೋಜನ ಆಗುವುದು ನಿಜವೇ? ಹೌದು ತಾತ್ಕಾಲಿಕವಾಗಿ ಪ್ರಯೋಜನ ಆಗುವ ಸಂಭವ ಜಾಸ್ತಿ. ಆದರೆ ಅದು ಒಂದು ಸುಳ್ಳಿನಲ್ಲೇ ಸಮಾಪ್ತಿಯಾಗುವ ಸಮಸ್ಯೆ ಅಲ್ಲದಿದ್ದರೆ? ಓಹ್ ಮತ್ತೊಂದು ಸುಳ್ಳು ಹೇಳಿದರಾಯ್ತು ಎನ್ನುವರು. ಹೀಗೆ ಸುಳ್ಳು ಹೇಳಿ ಹೇಳಿ, ತಮ್ಮ ಕೊರಳಿಗೆ ತಾವೇ ಸುಳ್ಳಿನ ಸರಮಾಲೆ ಸುತ್ತಿಕೊಂಡ ಅವರು ನಂಬುವುದೆ ಕಷ್ಟ ಎನ್ನುವ ಸ್ಥಿತಿ ತಲುಪಿಬಿಡುತ್ತಾರೆ. ಸುಳ್ಳು ಹೇಳಿದ ಮೇಲೆ ನಾವದನ್ನು ಮರೆಯುವಹಾಗಿಲ್ಲ, ನೆನಪಿನಲ್ಲಿ ಇಟ್ಟುಕೊಂಡು ಅದನ್ನು ಮುಂದುವರಿಸದಿದ್ದರೆ, ನಮಗೆ ಅದೊಂದು ದೊಡ್ಡ ತಲೆನೋವಾಗುವುದು ಖಂಡಿತ ಹೌದು.
ಎಳೆಯ ವಯಸ್ಸಿನಲ್ಲಿ, ಸತ್ಯವನ್ನೇ ನುಡಿಯಬೇಕು ಎಂದು ಕಲಿತಿರುತ್ತೇವೆ ಆದರೂ ಅದೇನೊ ದುಷ್ಟ ಬುದ್ಧಿ ಮೈಗೂಡುತ್ತದೆ. ಸತ್ಯ ಒಂದೆರಡು ಬೈಗುಳಗಳನ್ನೊ ಅಥವಾ ಒಂದೆರಡು ನೋವುಗಳನ್ನೊ ತಂದೊಡ್ಡಬಹುದು ಆದರೆ ನಮ್ಮ ಮೇಲಿನ ಗೌರವವನ್ನು ಹೆಚ್ಚಿಸುವುದು ಖಚಿತ. ನಮ್ಮ ಬಗೆಗಿನ ದೃಷ್ಟಿ ಬದಲಿಸುತ್ತದೆ ಸತ್ಯ. ಪುರಾಣ ಕಾಲದಿಂದ ಹಿಡಿದು ಈಗಿನ ವರೆಗೂ ಕೊನೆಯಲ್ಲಿ ಸತ್ಯವೇಗೆಲ್ಲುವುದು ಎಂದು ನೋಡುತ್ತಿದ್ದೇವೆ. ಸುಳ್ಳಿನಿಂದ ಇರುವ ತಾತ್ಕಾಲಿಕ ಲಾಭಗಳಿಗಿಂತ ಸತ್ಯ ಕೊಡುವ ನೆಮ್ಮದಿ, ಸಂತೋಷ ಹೆಚ್ಚು. ಸುಳ್ಳು ಒಂದು ಮಾರಿ, ಸತ್ಯ ಒಳ್ಳೆಯ ಜೀವನಕ್ಕೆ ದಾರಿ. ಸತ್ಯದ ಪ್ರಭಾವ ಹಾಗು ಸತ್ಯದ ಉಪಯೋಗಗಳು ಎಂದೆಂದಿಗೂ ಹೆಚ್ಚು, ಹಲವರ ಜೀವನವೇ ಇದಕ್ಕೆ ಸಾಕ್ಷಿ. ಉದಾ: ಹರಿಶ್ಚಂದ್ರ, ಮಹಾತ್ಮ ಗಾಂಧಿ ಮುಂತಾದವರು.
ಸತ್ಯ ಸಾಗರವಾದರೆ, ಸುಳ್ಳು ಒಂದು ಸುಳಿ. ಸಾಗರವನ್ನು ಈಜಿ ದಾಟಬಹುದು, ಸುಳಿಯಲ್ಲಿ ಸಿಕ್ಕಿ ಹೊರ ಬಂದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇನ್ನಾದರು, ಒಂದು ದೃಢ ನಿರ್ಧಾರ ಮಾಡಬೇಕಿದೆ, ಸತ್ಯದ ನಿರ್ಧಾರ ಮಾಡಬೇಕಿದೆ. ನಮ್ಮನ್ನು ಮೇಲೆತ್ತುವ ಸತ್ಯದ ಸಂಗ ನಾವು ಮಾಡಬೇಕಿದೆ. ನೂತನ ವರ್ಷಕ್ಕೊಂದು ಅತ್ಯುನ್ನತ ನಿರ್ಧಾರ ನಮ್ಮ ಎದುರಿದೆ. ಸ್ವೀಕರಿಸೋಣ, ಸತ್ಯವನ್ನು ಸತ್ಕರಿಸೋಣ. ಸತ್ಯಮೇವ ಜಯತೆ, ನಾನೃತಮ್.....
ಸತ್ಯಮೇವ ಜಯತೆ ಎಂಬ ಹಲವು ನಿದರ್ಶನ ನಾವು ನೋಡಿರುತ್ತೇವೆ, ನೀವು ಕಂಡ ನಿದರ್ಶನ ಇಲ್ಲಿ ಹಂಚಿಕೊಳ್ಳಿ, ಹಲವರಿಗೆ ಅದು ದಾರಿದೀಪವಾಗಬಹುದು... ಸತ್ಯದ ಸಹಾಯಕ್ಕೆ, ನಮ್ಮ ಉದ್ಧಾರಕ್ಕೆ ನಿಮ್ಮ ನಿದರ್ಶನ....