" ಸುವರ್ಣ ಕರ್ನಾಟಕದ ಕನಸು "
ಹಾಳು ಹಂಪಿ ಎಲ್ಲಿ ನೋಡಿದರಲ್ಲಿ
ಕಲ್ಲು ಬಂಡೆಗಳು ಭಗ್ನ ಶಿಲ್ಪಗಳು
ದೇಗುಲಗಳ ಶಿಥಿಲ ಅವಶೇಷಗಳು
ವಿಜಯ ನಗರ ಸಾಮ್ರಾಜ್ಯದ
ಗತ ವೈಭವದ ಪಳಿಯುಳಿಕೆಗಳು
ನಿಟ್ಟುಸಿರಿಡುತಿದೆ ಸಾಮ್ರಾಜ್ಯವೊಂದರ
ಅವನತಿ ಕಂಡು
ಆಯತಾಕಾರದ ವಿಶಾಲ ಪುಷ್ಕರಣಿ
ನಾಲ್ದೆಶೆಗೂ ಶಿಥಿಲ ಶಿಲಾ ಮೆಟ್ಟಿಲುಗಳು
ಹಸಿರುಗಟ್ಟಿ ಮಲೆತ ನೀರು
ಹಬ್ಬಿದೆ ತಾವರೆ ಬಳ್ಳಿಗಳ ಜಾಲ
ಮಧ್ಯೆ ನಿಂತಿದೆ ನಾಲ್ಗಂಬಗಳ ಗೋಪುರ
ಕಾಲನ ಹೊಡೆತಕೆ ಹಣ್ಣಾಗಿ
ಯಾವ ದೇವ ದೇವಿಯರು
ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಡುತ್ತಿದ್ದರೋ
ಯಾವ ಮತಾಂಧನಿಗೆ ಬಲಿಯಾದರೋ!
ಸುತ್ತೆಲ್ಲ ಹಸಿರು ಹುಲ್ಲಿನ ಹಾಸು ಪಚ್ಚೆ ಹಸುರಿನ
ರತ್ನಗಂಬಳಿಯ ನೆಲವಾಸು
ನಿಶ್ಯಬ್ದ ಪವನ ನಿಶ್ಚಲ ಜಲರಾಶಿ
ಪ್ರತಿಫಲನ ಗೊಳ್ಳುತಿವೆ ಗೋಪುರ ಶಿಥಿಲ
ಮೆಟ್ಟಿಲುಗಳು ಮರ ಗಿಡ ಕಲ್ಲು ಬಂಡೆಗಳು
ಶುಭ್ರ ನೀಲ ದಿಗಂತ ನೋಟಕೆ ಅಚ್ಚರಿ
ಯಾವುದು ಮೂಲ ಬಿಂಬವಾವುದೋ ?
ಪಡುವಣದಂಚು ಅಸ್ತಮಿಪ ಸೂರ್ಯ
ಮೆಲ್ಲ ಮೆಲ್ಲಗೆ ಪವನ ಸಂಚಲನ
ಉತ್ತುಂಗ ಶಿಲಾ ಶಿಖರಗಳು
ಸಾಗಿದೆ ಕಲ್ಲು ಬಂಡೆ ತುಂಬಿದ ದಾರಿ
ಯಾವುದೋ ಒಂದು 'ಅಮತ್ರ್ಯ ಲೋಕಕೆ'
ಬೀಸುವ ತಂಗಾಳಿ ದೇಹಕೆ ಕಚಗುಳಿ
ಮೆಲ್ಲಗೆ ಕಿವಿಯಲುಸುರುವ ಗತ ಪ್ರೇತಾತ್ಮರು
ಅರ್ಥವಾಗದ ಭಾಷೆ ಏನೋ ವಿಷಾದ
ಉಸಿರುತಿರಬಹುದೆ ಹಂಪೆಯ ಗತ ವೈಭವ ?
ಮುತ್ತು ರತ್ನಗಳನು ಬೀದಿ ಬದಿಯಲಿ
ಬಳ್ಳದಿಂದ ಮಾರಿದ ಸಂಗೀತ ನೃತ್ಯ
ಕಲಾ ವೈಭವ ಉತ್ತುಂಗಕ್ಕೇರಿದ
ಅಗಣಿತ ಗುಡಿ ಗೋಪುರಗಳ ಉತ್ಕೃಷ್ಟ
ಶಿಲ್ಪಕಲೆ ಮೆರೆದ ಹೆಮ್ಮೆಯ ಕನ್ನಾಡು
ದಕ್ಷಿಣದ ಗಂಗೆ ತುಂಗಭದ್ರೆ
ಮಾಲ್ಯವಂತ ಕಿಷ್ಕಿಂದೆ ಪರ್ವತ ಶ್ರೇಣಿ
ಹಂಪೆಯ ವಿರುಪಾಕ್ಷ ಗುರು ವಿದ್ಯಾರಣ್ಯ
ಹಕ್ಕ ಬುಕ್ಕ ಸಂಸ್ಥಾಪಿತ ಸಾರ್ವಭೌಮ
ಶ್ರೀಕೃಷ್ಣ ದೇವರಾಯನಾಳಿದ
ಸುವರ್ಣ ವೈಭವ ಕಾಲ ಗಜ ತುರಗ
ಪದಾತಿ ದಳಗಳ ಸುಭದ್ರ ನಾಡು
ಶತಮಾನಗಳ ಕಾಲ ಆಳಿದಗ್ಗಳಿಕೆಯ
ರೋಮ್ಗೂ ಮಿಗಿಲಾದ ವಿಶಾಲ
ಸಾಮ್ರಾಜ್ಯವೊಂದರ ' ಸಾಮಗಾನ '
ಕಲೆ ಸಾಹಿತ್ಯ ಸಂಗೀತ ಕ್ರೀಡೆ
ಆದ್ಯಾತ್ಮ ಚಿಂತನೆ ಮೇರು ಮುಟ್ಟಿದ ಕಾಲ
ಉನ್ನತ ಶೀಖರದ ಪಂಪಾ ವಿರುಪಾಕ್ಷ
ಇಕ್ಕೆಲದ ವಿಶಾಲ ರಾಜಬೀದಿಗಳು
ಮಾರುಕಟ್ಟೆಯ ಫೌಳಿಗಳ ಶಿಲಾವಶೇಷಗಳು
ಕಮಲಮಹಲು ಹಯಶಾಲೆ ಗಜಶಾಲೆ
ಮಹಾನವಮಿ ದಿಬ್ಬ ದರ್ಬಾರ್ ಹಾಲ್
ಸೂಕ್ಷ್ಮ ಕಲಾ ಕೆತ್ತನೆಯ ವಿಜಯ ವಿಠ್ಠಲನ
ಕಲ್ಲಿನ ತೇರು ಹೇಮ ಕೂಟಾದ್ರಿ
ಕುಸುರಿ ಕೆಲಸದ ' ತುಲಾಭಾರದ '
ಬೃಹತ್ ಶಿಲಾ ಕಂಭಗಳು ಇಲ್ಲಿ ಕಲ್ಲು
ಕಲ್ಲುಗಳೂ ಕಥೆ ಹೇಳುತ್ತವೆ ಸುಳಿವ
ಗಾಳಿಯೂ ಹಾಡುತ್ತದೆ ಶೋಕ ಗೀತೆ
ತುಂಗಭದ್ರಾ ತಟದ ಪುರಂದರ ಮಂಟಪ
ಲಕ್ಷ್ಮೀ ಸಹಿತ ಇದ್ದ ಉಗ್ರ ನರಸಿಂಹ
ಕಡಲೆ ಕಾಳು ಸಾಸಿವೆ ಕಾಳು ಗಣಪರು
ಬಡವಿ ಲಿಂಗ ಬೃಹತ್ ನಂದಿ ಅದರ ಮುಂದಿನ
ಚಾಮರಸ ಬೀದಿ ಸುವರ್ಣ ಯುಗದ
ಸಂಭ್ರಮದ ಸುಭಿಕ್ಷ ಕಾಲ
ದೈವ ಮುನಿಯಿತೊ ವೈಭವದ ಸಾಮ್ರಾಜ್ಯದ
ಆಯುಷ್ಯ ಮುಗಿಯಿತೊ ನುಗ್ಗಿದ ಕಾಲ
ವಿನಾಶಕಾರಿ ರೂಪದಲಿ ಆಯಿತು
ರಕ್ಕಸಗಿ ತಂಗಡಗಿ ಭೀಕರ ಭಿಭತ್ಸ ನೆತ್ತರದ
ಹೊಳೆದ ಹರಿದ ರಣರಂಗ ಮರೆಯಲಾಗದ
ಬೆಚ್ಚಿ ಬೀಳಿಸಿದ ಕದನ ಸೈನ್ಯದಲಿ ಒಳ ಪಿತೂರಿ
ಕಂಗೆಟ್ಟ ಸೈನ್ಯ ಪಲಾಯನ ದೊರೆ ರಾಮರಾಯನ
ಶಿರಚ್ಛೇದ ನುಗ್ಗಿತು ಸುಲ್ತಾನರ ಸೈನ್ಯ ಹಂಪೆಗೆ
ಮೆರೆಯಿತು ಅಟ್ಟಹಾಸ ಚರ ಸಂಪತ್ತಿನ ಲೂಟಿ
ಸ್ಥಿರ ಸಂಪತ್ತಿನ ನಾಶ ನಡೆಸಿತು ಅತ್ಯಾಚಾರ
ಅನಾಚಾರ ಎಡಬಿಡದೆ ನಡೆದ ಲೂಟಿ
ಅನೇಕ ದಿನಗಳ ಕಾಲ
ಅಳೆದುಳಿದ ಹರಿದು ಹಂಚಿ ಹೋದ ಸೈನ್ಯ
ಕ್ಷಾತ್ರತೇಜ ಮೆರೆದು ಹೋರಾಡ ಬೇಕಿದ್ದ
ದೊರೆಯಿರಲಿಲ್ಲ ನಾಯಕತ್ವವಿಲ್ಲದ ಸೈನ್ಯ
ವಿರೋಧಿ ಸೈನ್ಯಕ್ಕೆ ಬಲಿ ನಾವು
ಆಯಷ್ಯ ಮುಗಿದು ಸತ್ತವರಲ್ಲ ಅಧರ್ಮ
ಯುದ್ಧದಲಿ ಅನ್ಯಾಯವಾಗಿ
ಅಕಾಲಿಕವಾಗಿ ಮರಣ ಹೊಂದಿದವರು !
ಆಗಾಗ ಬರುತ್ತಿರುತ್ತೇವೆ ಹಾಳು ಹಂಪೆಗೆ
ಪಿಶಾಚ ಲೋಕದಿಂದ ಮನ ಬಂದಲ್ಲಿ
ಸುಳಿಯುತ್ತೇವೆ ಗತಕಾಲ ನೆನಪಿಸಿ ಕೊಳ್ಳುತ್ತೇವೆ
ನಾವು ಹುಟ್ಟಿ ಬಾಳಿ ಬದುಕಿದ್ದ ' ಜನ್ಮಭೂಮಿ '
ಕ್ಷಾತ್ರತೇಜ ಮೆರೆದ ನೆಲ ಸಗ್ಗಕೂ ಮಿಗಿಲಾದ
ನಾಡು ಮನದುಂಬಿಕೊಂಡು ಮರಳುತ್ತೇವೆ
' ಪ್ರೇತಾತ್ಮ ಲೋಕಕೆ ' ಭಾರದ ನಿಟ್ಟುಸಿರು ಹೊತ್ತು
ಅದೇ ಹಾಳು ಹಂಪೆ ನಿರ್ವೀರ್ಯ ಜನ
ಮುಕ್ತಿ ಕಾಣದ ನತದೃಷ್ಟರು ನಾವು
ಮರೆಯ ಬಲ್ಲೆವೆ ' ಅಖಂಡ ಕರ್ನಾಟಕದ ವೈಭವ '
ಮತ್ತೆ ಬಂದು ನೋಡಿದರೆ ಏನಿದೆ ಇಲ್ಲಿ ?
ಜಾತಿ ಬಣ್ಣ ಧರ್ಮಗಳ ಹೆಸರಲ್ಲಿ ಜಗಳ
ಯಾರಿಗೂ ಬೇಕಿಲ್ಲ ಕನ್ನಡದ ಉದ್ಧಾರ !
ಆದರೂ ಏನೋ ಕನಸು ಏನೋ ನಿರೀಕ್ಷೆ
ಗುರುವರೇಣ್ಯ ವಿದ್ಯಾರಣ್ಯ ಹಕ್ಕ ಬುಕ್ಕ
ಶ್ರೀಕೃಷ್ಣ ದೇವರಾಯರು ಮತ್ತೆ ಜನಿಸಿ
ಪಂಪಾಪತಿಯ ಹಂಪೆಗೆ ಮರುಜೀವ ತರುವರೆಂದು
ವಿಜಯ ನಗರ ಸಾಮ್ರಾಜ್ಯ ಮರು ಸ್ಥಾಪಿಸುವರೆಂದು
ಕನ್ನಡ ನಾಡನು ಒಗ್ಗೂಡಿಸಿ ಕೀರ್ತಿ ಪತಾಕೆ
ಹಾರಿಸುವರೆಂದು ಗತ ಪ್ರೇತಾತ್ಮರಿಗೆ
ಮುಕ್ತಿ ಕರುಣಿಸುವರೆಂದು ಇದು ಹಗಲುಗನಸಲ್ಲವೆ?
ಇರಬಹುದು ಆದರೂ
ನಾವು ಕನ್ನಡಿಗರು ಆಶಾವಾದಿಗಳಲ್ಲವೆ ?
ಹನುಮಂತ ಅನಂತ ಪಾಟೀಲ
ರಿಪ್ಪನಪೇಟೆ
Comments
ಹಂಪಿ, ಪಾಟೀಲರು ಕಂಡಂತೆ
ಪಾಟೀಲರಿಗೆ ನಮಸ್ಕಾರಗಳು. ತಮ್ಮ ಈ ಸುಂದರವಾದ ಕವನ ಓದುತ್ತಿದ್ದಂತೆ ನಮ್ಮನ್ನು ಗತಕಾಲದಲ್ಲಿ ವೈಭವದಿಂದ ನಳಿನಳಿಸುತ್ತಿದ್ದ ಹಂಪೆಗೆ ಕರೆದೊಯ್ಯುತ್ತದೆ. ಇಡಿ ಹಂಪೆಯ ಚರಿತ್ರೆಯನ್ನು ಮನ ಕರಗುವಂತೆ ವರ್ಣಿಸಿದ್ದೀರಿ.ನಿಮ್ಮ ಕವಿತೆಗಳಲ್ಲಿ ಇದು ಸಹ ಒಂದು ಶ್ರೇಷ್ಟ
ಕವಿತೆಯಾಗಿ ಮೆರೆಯಲಿ............ವಂದನೆಗಳು.
In reply to ಹಂಪಿ, ಪಾಟೀಲರು ಕಂಡಂತೆ by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
' ಸುವರ್ಣ ಕರ್ನಾಟಕದ ಕನಸು ' ಕುರಿತಂತೆ ತಾವು ಬರೆದ ಪ್ರತಿಕ್ರಿಯೆಯನ್ನು ಓದಿದೆ, ಹಂಪಿ ನನ್ನ ಪಾಲಿಗೆ ಗತಕಾಲದ ವಿಜಯ ನಗರ ಸಾಮ್ರಾಜ್ಯದ ಪಳೆಯಿಳಿಕೆಯಲ್ಲ, ಅದು ನನಗೆ ಜೀವನೋಲ್ಲಾಸ ಉಕ್ಕಿಸುವ ಒದು ಜಾಗೃತ ತಾಣ ಹೀಗಾಗಿ ಈ ಕವನ ಸಂಪದಿಗರೆಲ್ಲರ ಮುಂದೆ ಇಟ್ಟಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು
@ಹಿರಿಯರೇ ಕಟು ....ಸತ್ಯ ದರ್ಷನ
"ದೈವ ಮುನಿಯಿತೊ ವೈಭವದ ಸಾಮ್ರಾಜ್ಯದ
ಆಯುಷ್ಯ ಮುಗಿಯಿತೊ ನುಗ್ಗಿದ ಕಾಲ
ವಿನಾಶಕಾರಿ ರೂಪದಲಿ ಆಯಿತು
ರಕ್ಕಸಗಿ ತಂಗಡಗಿ ಭೀಕರ ಭಿಭತ್ಸ ನೆತ್ತರದ
ಹೊಳೆದ ಹರಿದ ರಣರಂಗ ಮರೆಯಲಾಗದ
ಬೆಚ್ಚಿ ಬೀಳಿಸಿದ ಕದನ ಸೈನ್ಯದಲಿ ಒಳ ಪಿತೂರಿ
ಕಂಗೆಟ್ಟ ಸೈನ್ಯ ಪಲಾಯನ ದೊರೆ ರಾಮರಾಯನ
ಶಿರಚ್ಛೇದ ನುಗ್ಗಿತು ಸುಲ್ತಾನರ ಸೈನ್ಯ ಹಂಪೆಗೆ
ಮೆರೆಯಿತು ಅಟ್ಟಹಾಸ ಚರ ಸಂಪತ್ತಿನ ಲೂಟಿ
ಸ್ಥಿರ ಸಂಪತ್ತಿನ ನಾಶ ನಡೆಸಿತು ಅತ್ಯಾಚಾರ
ಅನಾಚಾರ ಎಡಬಿಡದೆ ನಡೆದ ಲೂಟಿ
ಅನೇಕ ದಿನಗಳ ಕಾಲ"
"ಆಗಾಗ ಬರುತ್ತಿರುತ್ತೇವೆ ಹಾಳು ಹಂಪೆಗೆ
ಪಿಶಾಚ ಲೋಕದಿಂದ ಮನ ಬಂದಲ್ಲಿ
ಸುಳಿಯುತ್ತೇವೆ ಗತಕಾಲ ನೆನಪಿಸಿ ಕೊಳ್ಳುತ್ತೇವೆ
ನಾವು ಹುಟ್ಟಿ ಬಾಳಿ ಬದುಕಿದ್ದ ' ಜನ್ಮಭೂಮಿ '
ಕ್ಷಾತ್ರತೇಜ ಮೆರೆದ ನೆಲ ಸಗ್ಗಕೂ ಮಿಗಿಲಾದ
ನಾಡು ಮನದುಂಬಿಕೊಂಡು ಮರಳುತ್ತೇವೆ
' ಪ್ರೇತಾತ್ಮ ಲೋಕಕೆ ' ಭಾರದ ನಿಟ್ಟುಸಿರು ಹೊತ್ತು
ಅದೇ ಹಾಳು ಹಂಪೆ ನಿರ್ವೀರ್ಯ ಜನ
ಮುಕ್ತಿ ಕಾಣದ ನತದೃಷ್ಟರು ನಾವು
ಮರೆಯ ಬಲ್ಲೆವೆ ' ಅಖಂಡ ಕರ್ನಾಟಕದ ವೈಭವ '
ಮತ್ತೆ ಬಂದು ನೋಡಿದರೆ ಏನಿದೆ ಇಲ್ಲಿ ?
ಜಾತಿ ಬಣ್ಣ ಧರ್ಮಗಳ ಹೆಸರಲ್ಲಿ ಜಗಳ
ಯಾರಿಗೂ ಬೇಕಿಲ್ಲ ಕನ್ನಡದ ಉದ್ಧಾರ !
ಆದರೂ ಏನೋ ಕನಸು ಏನೋ ನಿರೀಕ್ಷೆ
ಗುರುವರೇಣ್ಯ ವಿದ್ಯಾರಣ್ಯ ಹಕ್ಕ ಬುಕ್ಕ
ಶ್ರೀಕೃಷ್ಣ ದೇವರಾಯರು ಮತ್ತೆ ಜನಿಸಿ
ಪಂಪಾಪತಿಯ ಹಂಪೆಗೆ ಮರುಜೀವ ತರುವರೆಂದು
ವಿಜಯ ನಗರ ಸಾಮ್ರಾಜ್ಯ ಮರು ಸ್ಥಾಪಿಸುವರೆಂದು
ಕನ್ನಡ ನಾಡನು ಒಗ್ಗೂಡಿಸಿ ಕೀರ್ತಿ ಪತಾಕೆ
ಹಾರಿಸುವರೆಂದು ಗತ ಪ್ರೇತಾತ್ಮರಿಗೆ
ಮುಕ್ತಿ ಕರುಣಿಸುವರೆಂದು ಇದು ಹಗಲುಗನಸಲ್ಲವೆ?
ಇರಬಹುದು ಆದರೂ
ನಾವು ಕನ್ನಡಿಗರು ಆಶಾವಾದಿಗಳಲ್ಲವೆ ?
"
ಹಿರಿಯರೇ ಈ ದಿನಗಳಲ್ಲಿ ಓದಿದ ಅತ್ಯುತ್ತಮ ಸಕಾಲಿಕ ಬರಹ....
ಬರಹ ಓದಿ ನೀವ್ ಬರೆದ ಷೈಲಿ ನೋಡಿ ಖ್ಸುಷಿಯಾದೆ ಜೊತೆಗೆ ಕಟು ಸತ್ಯ ದರ್ಷನವಾಗಿ ಮನ ಮುದುಡಿತು...
ಆ ಹ0ಪೆ ನಮಗೆ ಹತ್ತಿರವೇ...
ಬಹು ಹಿ0ದೆ ಶ್ಹಾಲ ಪ್ರವಾಸದಲ್ಲಿ ಅಲ್ಲಿಗೆ ಹೋಗಿದ್ದೆ...
ಬಹು ದಿನಗಳ ಸಮಯ ತೆಗೆದುಕೊ0ಡರೂ ಸಖತ್ ಬರಹ ಬರೆದಿರುವಿರಿ..
ಅಪಾರವಾಗಿ ಮೆರೆದು ಕೀರ್ತಿ ಗಳಿಸಿದ ರಾಜ್ಯದ ರಾಜಧಾನಿ ಯ ಇ0ದಿನ ದುಸ್ತಿತಿಗೆ ನಾವೇ ಹೊಣೆ...ಅನ್ನಿಸುತಿದೆ..
ಅದನ್ನು ಮರಳಿ ತರಲು ಆಗದೇ ಇದೀತು....ಆದರೆ ಅಳಿದುಳಿದುದನ್ನ ರಕ್ಷಿಸಬೆಡವೇ.
ಬರಹ ಚ್ಹಿ0ತಿಸುವ ಹಾಗೆ ಮಾಡಿತು..
ಒಳಿತಾಗಲಿ..
ನನ್ನಿ
\|/
In reply to @ಹಿರಿಯರೇ ಕಟು ....ಸತ್ಯ ದರ್ಷನ by venkatb83
ವೆಂಕಟೇಶ ರವರಿಗೆ ವಂಧನೆಗಳು
ವೆಂಕಟೇಶ ರವರಿಗೆ ವಂಧನೆಗಳು
" ಸುವರ್ಣ ಕರ್ನಾಟಕದ ಕನಸು " ಕುರಿತು ತಾವು ಬರೆದ ಧೀರ್ಘವಾದ ಮೆಚ್ಚುಗೆ ಭರಿತ ಪ್ರತಿಕ್ರಿಯೆ ಓದಿದೆ,ಏನೇಂದು ಉತ್ತರಿಸಲಿ ನಿಜ ಹೇಳ ಬೇಕೆಂದರೆ ನಿಮ್ಮ ಮೆಚ್ಚುಗೆ ಸಂತಸ ತಂದಿದೆ. ಹಂಪಿಯ ಕುರಿತ ದಾಖಲೆಗೆ ಸೀಮಿತ ವ್ಯಾಪ್ತಿ ಸಾಕಾಗುವುದಿಲ್ಲ, ಹೀಗಾಗಿ ಕವನ ಧೀರ್ಘವಾಯಿತು. ಹಂಪಿ ನನಗೆ ಪ್ರಿಯವಾದ ತಾಣ. ಹಂಪಿಯ ಒಂದು ಭೇಟಿ ನನ್ನನ್ನು ಇನ್ನೂ ಹತ್ತು ವರ್ಷ ನನ್ನನ್ನು ಚಿಕ್ಕವನ ನ್ನಾಗಿಸುತ್ತದೆ. ಧನ್ಯವಾದಗಳು.
ಹಾಳು ಹಂಪೆ ಹಾಗೆಂದವರಾರು?
ಹಂಪೆ ನನಗೂ ಇಷ್ಟ. ಹಳೇ ನೆನಪು. ಹಂಪೆ ತೋರಿಸುತ್ತಿದ್ದ ಗೈಡ್, ಯಾರೋ ಹಾಳು ಹಂಪೆ ಅಂದಾಗ ಕೋಪದಿಂದ ಹೇಳಿದ್ದ. ಈಗಲೂ ಆಗಿನ ವೈಭವ ಕಣ್ಣಿಗೆ ಕಾಣುವುದು..ತೆರೆದ ಕಣ್ಣಿನಿಂದ ನೋಡಿದರೆ.
ಮೊನ್ನೆಯ ನೀಲಂ ಬಿರುಗಾಳಿಗೂ ಅಳಿದುಳಿದ ಹಂಪೆಯ ವೈಭವ ಕಣ್ಣುಕುಕ್ಕಿತು ಕಾಣುತ್ತದೆ - http://mobiletoi.timesofindia.com/mobile.aspx?article=yes&pageid=10§id=edid=&edlabel=TOIBG&mydateHid=03-11-2012&pubname=Times+of+India+-+Bangalore&edname=&articleid=Ar01005
&publabel=TOI
>>>...ಮೆರೆಯಿತು ಅಟ್ಟಹಾಸ ಚರ ಸಂಪತ್ತಿನ ಲೂಟಿ
ಸ್ಥಿರ ಸಂಪತ್ತಿನ ನಾಶ ನಡೆಸಿತು...
ಈಗಲೂ ಹಂಪೆಯ ಲೂಟಿ ಮುಂದುವರೆದಿದೆ-
http://newindianexpress.com/states/karnataka/article1240157.ece
http://newindianexpress.com/nation/article1239121.ece
-ಗಣೇಶ.
In reply to ಹಾಳು ಹಂಪೆ ಹಾಗೆಂದವರಾರು? by ಗಣೇಶ
ಗಣೇಶ ರವರಿಗೆ ವಂದನೆಗಳು
ಗಣೇಶ ರವರಿಗೆ ವಂದನೆಗಳು
" ಹಂಪೆಯ " ಕವನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಾವು ಹಂಪೆಯ ಕುರಿತು ಕೊಟ್ಟ ಲಿಂಕ್ ಗಳನ್ನು ನೋಡಿದೆ, ತಾವಂದಂತೆ ಈಗಲೂ ಹಂಪೆಯ ವಿನಾಶ ನಡೆಯುತ್ತಿದೆ, ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಪಾಟೀಲರೆ
ಸುವರ್ಣ ಕಾಲಗಳು ಕೊನೆಯಾದವು, ಹ0ಪೆ ಹಾಳು ಹ0ಪೆಯಾಯಿತು, ಒಳ್ಳೆಯದೆಲ್ಲ ಬೇಗ ಮರೆಯಾಯಿತು,
ಆದರು ಅರವತ್ತು ವರುಶ್ಹ ಕಳೆದರು, ಕಾದರು
ಈ ಪ್ರಜಾ ಸಾಮ್ರಾಜ್ಯದ ದೊರೆಗಳ ಕಾಲ ಮುಗಿಯುತ್ತಿಲ್ಲ.
ಆಗೆಲ್ಲ ಹೊರಗಿನಿ0ದ ಯಾರೊ ಮಲ್ಲಿಕಾಪರನೊ, ಘಜನಿಯಿ ದ0ಡೆತ್ತಿ ಬ0ದು ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದು, ಪ್ರಜೆಗಳನ್ನು ದೋಚುತ್ತಿದ್ದರು. ಈಗ ಕಾಲ ಬದಲಾಗಿದೆ ಆಳುವ ಅರಸರೆ ದೇಶವನ್ನು ದೋಚುತ್ತಿದ್ದಾರೆ. ದರೋಡೆಕೋರರೆ ದೇಶವನ್ನು ಆಳುತ್ತಿರುವರು, ಆದರು ಈ ಸಾಮ್ರಾಜ್ಯಕ್ಕೆ ಅದೇನೊ ಕೊನೆಗಾಲ ಬರುತ್ತಿಲ್ಲ
In reply to ಪಾಟೀಲರೆ by partha1059
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಪಾರ್ಥ ಸಾರಥಿ ಯವರಿಗೆ ವಂದನೆಗಳು
" ಸುವರ್ಣ ಕರ್ನಾಟಕದ ಕನಸು " ಕವನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ,ತಮ್ಮ ಅಭಿಪ್ರಾಯ ಸರಿ ಈಗಿನ ಜನ ನಾಯಕರೂ ಮಲ್ಲಿಕಾಫರ್ ಮತ್ತು ಘಜನಿ ಮೊಹಮ್ಮದ್ ನ ಮನಸ್ಥಿತಿಯವರೆ, ಈ ಮನಿಸ್ಥಿತಿಗೆ ಕೊನೆ ಹೇಳಬೇಕು ಎನ್ನುವುದು ಕೂಡ ನನ್ನ ಅಭಿಪ್ರಾಯ, ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ, ಧನ್ಯವಾದಗಳು
ಸುವರ್ಣ ಕರ್ನಾಟಕದ ಕನಸು
ಹೆಚ್ ಎ ಪಾಟೀಲರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಸುವರ್ಣ ಕರ್ನಾಟಕ ಕನಸು ಉತ್ತಮ ನೀಳ್ಗವನ. ಹಂಪೆಯ ಸುತ್ತಲೆಲ್ಲ ಮನಸಾ ಸುತ್ತುತ್ತ, ದೂರ ಅಂದಿನ ದಿನಗಳಿಗೆ ಮುಖಚಾಚುತ್ತ, ಅದರ ಅಂದಿನ ಕಂಪನ್ನು ಆಸ್ವಾದಿಸುತ್ತ, ಹೆಜ್ಜೆ ಹೆಜ್ಜೆಗಳಲ್ಲಿ ಆದ ಲೂಟಿ ಅನಾಚಾರಗಳನ್ನು ಅನಾವರಗೊಳಿಸುತ್ತ, ಸಾಗುವ ಪರಿ ಅದ್ಭುತ. ಆ ಪ್ರೇತಾತ್ಮಗಳು ನಮ್ಮ ರೂಪದಲ್ಲಿಯೇ ಅಲ್ಲಿ ಸುತ್ತುವ ಕಾವ್ಯಮಯ ಚಿಂತನೆ. ಆಗಾಗೊಮ್ಮೆ ಕನ್ನಡ ದ ಈ ನೆಲಕೆ ಬಂದು ಇಂದಿನ ಮನಸುಗಳ ಅಧೋಗತಿಗೆ ಕೊರಗಿ ಜೀವನೋತ್ಸಾಹ ಪಡೆಯುವ ಕವಿ ಮನಕ್ಕೆ ಏನೆನ್ನೋಣ. ಪ್ರೇತಾತ್ಮಗಳಲ್ಲಿ ಇರುವ ಮನುಷ್ಯತ್ವ ಮನುಷ್ಯರಲ್ಲಿ ಇಲ್ಲವಾಯಿತೇ. ಕವನದಲ್ಲಿ ಒಳ್ಳೆಯ ಕಾವ್ಯಮಯ ಉಪಮೆಗಳು ತುಂಬ ಹಿಡಿಸಿದವು, ಉದಾ: ಪ್ರತಿಫಲನ ಗೊಳ್ಳುತಿವೆ ಗೋಪುರ ಶಿಥಿಲ
ಮೆಟ್ಟಿಲುಗಳು ಮರ ಗಿಡ ಕಲ್ಲು ಬಂಡೆಗಳು
ಶುಭ್ರ ನೀಲ ದಿಗಂತ ನೋಟಕೆ ಅಚ್ಚರಿ
ಯಾವುದು ಮೂಲ ಬಿಂಬವಾವುದೋ ?
ಹಂಪೆಯ ಇಂದಿನ ಚಿತ್ರಗಳನ್ನು ನೀಡುತ್ತ ಅದಕ್ಕೂ ಹೆಚ್ಚು ಗತಕಾಲದ ವೈಭವದೊಂದಿಗೆ ಅಂದಿನ ಶ್ರೀಸಾಮಾನ್ಯ ಮನಸ್ಸುಗಳನ್ನೂ ಕಣ್ಣಾರೆ ನೋಡಿದಂತಾಯಿತು. ಬಹು ಕಾಲ ನೆನಪಿನಲ್ಲುಳಿಯುವ ಕವನ. ಧನ್ಯವಾದಗಳು.
In reply to ಸುವರ್ಣ ಕರ್ನಾಟಕದ ಕನಸು by lpitnal@gmail.com
ಲಕ್ಷ್ಮೀಕಾಂತ ಇಟ್ನಾಳ ರವರಿಗೆಡ
ಲಕ್ಷ್ಮೀಕಾಂತ ಇಟ್ನಾಳ ರವರಿಗೆಡ ವಂದನೆಗಳು
ನೀವು ಈ ಕವನಕ್ಕೆಬರೆದ ಪ್ರತಿಕ್ರಿಯೆಯನ್ನು ನಿನ್ನೆಯೆ ನೋಡಿದೆ, ನಿಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ಬರೆಯಲು ಎರಡು ಸಲ ಪ್ರಯತ್ನಸಿದೆ ಆದರೆ ಆಗಲಿಲ್ಲ. ಕವನವನ್ನು ಸಿಕ್ಕಾಪಟ್ಟೆ ಹೊಗಳಿ ಬಿಟ್ಟಿದ್ದೀರಿ, ಆದರೂ ಕವನವನ್ನು ಅದರ ಒಳಹೊಕ್ಕು ನೋಡಿದ ಪರಿ, ಗ್ರಹಿಸಿದ ರೀತಿ ಗಳೋಇಗೆ ಎರಡು ಮಾತಿಲ್ಲ. ಕವನಕ್ಕಿಂತ ನಿಮ್ಮ ಪ್ರತಿಕ್ರಿಯೆಯೆ ಚೆನ್ನಾಗಿದೆ, ನಿಮ್ಮಂತಹವರ ಪ್ರೋತ್ಸಾಹ ನಮ್ಮಂತಹವರಿಗೆ ಸಾವಿರ ಆನೆಗಳ ಬಲವಿದ್ದಂತೆ, ಕವನ ಎಲ್ಲಿ ಓದುಗರಿಗೆ ಬೋರು ಹೊಡಸೆಸುತ್ತದೆಯೊ ಎನಿಸಿತ್ತು, ನಿಮ್ಮ ಪ್ರತಿಕ್ರಿಯೆ ಅದನ್ನು ದೂರ ಮಾಡಿದೆ, ಧನ್ಯವಾದಗಳು.