ಸೂಕ್ಷ್ಮ ಶರೀರದ ರೂಪಕ
ನಮ್ಮದೇಹದಲ್ಲೊಂದು
ಎರಡು ತಲೆಯ ಹಾವಿದೆ,
ಎರಡು ಕಡೆಯು ಹೆಡೆಯಿದೆ,
ಹೆಡೆಗಳಲ್ಲಿ ವಿಷವಿದೆ.
ಎಲ್ಲಿದೆ? ಹೇಗಿದೆ?
ತಿಳಿಯಬೇಕಾಗಿದೆ.
ಇಂದ್ರೀಯಗಳ ಕೊರೆದು ಕೊರೆದು ಹುತ್ತ ಮಾಡಿಕೊಂಡಿದೆ,
ವಿಷಯಗಳನು ನುಂಗಿ ನುಂಗಿ ವಿಷವಬೆಳೆಸಿಕೊಂಡಿದೆ,
ಪ್ರೀತಿ ಕ್ಷಮಾ ಕರುಣೆಗಳನು ಮೂಟೆಕಟ್ಟಿ ಕುಳಿತಿದೆ,
ಎಷ್ಟುಸಲ ಸುಟ್ಟರೂ ಮತ್ತೆ ಹುಟ್ಟಿ ಬರುತಿದೆ.
ಏನಿದು? ಯಾಕಿದು?
ಅರಿಯಬೇಕಾಗಿದೆ.
ರೋಷವೆಂಬ ವೇಷ ತೊಟ್ಟು,
ದ್ವೇಷವೆಂಬ ವಿಷದಿಂದ,
ನಾಶಮಾಡೊ ಪಾಶವೀಯ
ನೋವು ಕೊಡುವ ಹಾವಿದು.
ಕಣ್ಣೆಲ್ಲ ಕಾಮವಾಗಿ,
ಕ್ರೋಧ ಕೋರೆಹಲ್ಲುಗಳ,
ಲೋಭವೆಂಬ ನಾಲಿಗೆಯಾ
ಬುಸುಗುಟ್ಟುವ ಹಾವಿದು.
ಮತ್ಸರದಾ ವಿಷವ ಹೊತ್ತು,
ಮದದಹೆಡೆಯ ಮೇಲೆತ್ತಿ,
ಮೋಹದಿಂದ ನರ್ತಿಸುವಾ
ಆರು ಗುಣದ ಹಾವಿದು.
ಕೊಲ್ಲುವ ಬಗೆ, ಗೆಲ್ಲುವ ಬಗೆ,
ಕಲಿಯಬೇಕಾಗಿದೆ.
ಹರಿಯ ಅರಿಯ ಉರಗವಿದನು ಅರಿಯದೇ ಬೆಳೆಸಿದೆವು,
ಹರಿ ಭಕ್ತಿಯ ಶಕ್ತಿಯಿಂದ ಅರಿವೈರಿಯ ವದಿಸಲೆಂದು,
ವಿಷಯಗಳನು ದೂರಸರಿಸಿ ವಿಷದಿಂದ ಮುಕ್ತರಾಗಿ,
ಇಂದ್ರೀಯಗಳ ಬಾಯ್ಮುಚ್ಚಿ ಉಸಿರುಕಟ್ಟಿ ಕೊಲ್ಲಬೇಕು,
ಉಂಡಮನೆಗೆ ಎರಡು ಬಗೆವ, ಎರಡು ತಲೆಯ ಈ ಹಾವನು.
ಅಹೋರಾತ್ರ.