ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ
ಅಗಾಧ ವಿಶ್ವದ ರಂಗಮಂಚದೊಳು
ಅವನಿರುವುದು ನೇಪಥ್ಯದಲ್ಲಿ ಕಾಣದಂತೆ
ಬರಿಗಣ್ಣಿನ ಹರವಿಗೆ ನಿಲುಕುವುದೆಲ್ಲಾ
ಮಾಯೆ , ಕಾಣದ್ದೆಲ್ಲಾ ನಿಜವಂತೆ
ಇದ್ದರೇನು? ಇರದಿದ್ದರೇನು? ಬದುಕು
ಉರುಳುತ್ತಿದೆ ಕಟ್ಟಿದ ಕಾಲಚಕ್ರಕೆ
ಹಲವು ಸೂತ್ರಗಳು ಬಂಧಿಸಿದೆ
ಸಂಧಿಸಿದ ಪ್ರತಿ ಆತ್ಮವನ್ನು
ನೀ ನಕ್ಕರೆ ಯಾರೊ ನಗುವರು
ಇನ್ಯಾರೋ ಅತ್ತರೆ ನಿನಗೆ ದುಃಖ
ಜೀವರಾಶಿಯಲ್ಲಿ ಎಲ್ಲರೂ ಸಂಬಂಧಿಕರೆ
ಕಾಣದೇ ? ಮನಸಿನ ನೂರು ಮುಖ
ನೋವು, ನಲಿವೆಂಬ ರಸಗಳು
ತುಂಬಿರುವ ಜೀವನ ನಾಟಕದಲ್ಲಿ
ಭಾವದೆಳೆಯು ಕಾಯುತ್ತಿದೆ ಸಾಮರಸ್ಯ
ಎಲ್ಲರನ್ನು ಒಂದು ದಾರದಲ್ಲಿ ಬಂಧಿಸುತ್ತಾ
ಕಡಿಯಲಾಗದ ಕಗ್ಗಂಟಿದು, ಕೆಲವೊಮ್ಮೆ
ಕಟ್ಟಿಹಾಕಿದ ಬೇಡಿ, ಆದರೂ
ತಪ್ಪಿದ ರಸ್ತೆಯಲ್ಲಿ, ಬಿದ್ದ ಬದುಕಿನಲಿ
ಎಬ್ಬಿಸಿ ಮತ್ತೆ ನಡೆಸುವುದು ಸೂತ್ರಧಾರನಂತೆ
Rating
Comments
ಉ: ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ
ಲೌಕಿಕವನ್ನು ಪಾರಮಾರ್ಥಿಕವನ್ನು ಒಂದೆ ಗಂಟಿನೊಳಗೆ ಸೇರಿಸಿ ಹೆಣೆದಂತಿರುವ ವಿಶಿಷ್ಠ ಕವನ. ಈ ಜಗದ ಜೀವರಾಶಿಗಳನೆಲ್ಲಾ ಬಂಧಿಸಿಟ್ಟ ಯಾವುದೊ ಅದೃಶ್ಯ ಬಂಧದ ನೂರಾರು ಸೂತ್ರಗಳತ್ತ ವಿಸ್ಮಯದಿಂದ ನೋಡುತ್ತಲೆ, ಅದನ್ನು ಬಂಧಿಸಿಟ್ಟಿರುವ ಭಾವದೆಳೆಯ ದಾರ ತನ್ನ ಮಾಯಾಜಾಲದಲ್ಲಿ ಎಲ್ಲರನ್ನು, ಎಲ್ಲವನ್ನು ಒಂದಿಲ್ಲೊಂದು ಬಗೆಯ ರಾಗಾಲಾಪದಲ್ಲಿ ಬಂಧಿಸಿಟ್ಟ ಬಗೆಗೆ ನಿರ್ಲಿಪ್ತತೆಯಷ್ಟೆ ನಿಷ್ಠೆಯಿಂದ ನೋಡುತ್ತ, ಲೌಕಿಕದ ಅನಿವಾರ್ಯತೆಗೆ ಹಾಗು ಅಲೌಕಿಕದ ಗಹನತೆಗೆ ಒಂದೆ ಸ್ತರದಲ್ಲೆ ಸಮ ಶರಣಾಗತ ಭಾವ ತೋರುವ ಪರಿ ವಿಸ್ಮಯಕರ ಮತ್ತು ಅಂತ್ಯದಲ್ಲಿನ ಆಶಾವಾದವೂ ಚೇತೋಹಾರಿ. ಲೌಕಿಕಾಲೌಕಿಕದ ಎರಡು ತುದಿಗಳ ನಡುವಿನ ಹೆಣಗಾಟವನ್ನು ಹಿಡಿದಿಡುವಲ್ಲಿ ಜೀವನಾನುಭವದಿಂದ ಸಿದ್ದಿಸಿದ ಪಕ್ವತೆ ನೆರವಾಗಿರುವುದು, ಪ್ರತಿ ಪದಸಾಲುಗಳಲ್ಲಿ ನಿಖರವಾಗಿ ಎದ್ದು ಕಾಣುತ್ತದೆ. ಸೊಗಸಾದ ಕವನ :-)
ಕೆಲ ಮೆಚ್ಚುಗೆಯಾದ ಚಮತ್ಕಾರಿಕ ಸಾಲುಗಳು:
ಬರಿಗಣ್ಣಿನ ಹರವಿಗೆ ನಿಲುಕುವುದೆಲ್ಲಾ
ಮಾಯೆ , ಕಾಣದ್ದೆಲ್ಲಾ ನಿಜವಂತೆ...
.......
ಜೀವರಾಶಿಯಲ್ಲಿ ಎಲ್ಲರೂ ಸಂಬಂಧಿಕರೆ
ಕಾಣದೇ ? ಮನಸಿನ ನೂರು ಮುಖ..
.......
ಭಾವದೆಳೆಯು ಕಾಯುತ್ತಿದೆ ಸಾಮರಸ್ಯ
ಎಲ್ಲರನ್ನು ಒಂದು ದಾರದಲ್ಲಿ ಬಂಧಿಸುತ್ತಾ...
.........
ತಪ್ಪಿದ ರಸ್ತೆಯಲ್ಲಿ, ಬಿದ್ದ ಬದುಕಿನಲಿ
ಎಬ್ಬಿಸಿ ಮತ್ತೆ ನಡೆಸುವುದು ಸೂತ್ರಧಾರನಂತೆ
In reply to ಉ: ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ by nageshamysore
ಉ: ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ
ಕವನದ ನಾಲ್ಕು ಸಾಲಿನಲ್ಲಿ ಅಲೌಕಿಕತೆಯನ್ನು ಲೌಕಿಕದ ಗಂಟಿನಿಂದ ಬಿಡಿಸಿ ಬರೆಯುವುದು ಕಷ್ಟ. ಆದರೆ ಅದಕ್ಕಿಂತಲೂ ಅದನ್ನು ಓದಿ, ಕವಿಯ ಭಾವವನ್ನು ಗ್ರಹಿಸುವುದು ಇನ್ನೂ ಕಷ್ಟ. ನಾಲ್ಕಾರು ಬಾರಿ ಸಹನೆಯಿಂದ ಓದಿ , ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ್ದಕ್ಕೆ ಅನಂತ ಧನ್ಯವಾದಗಳು
ಉ: ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ
ಪಾತ್ರ ಮತ್ತು ಸೂತ್ರದ ಕುರಿತ ನಿಮ್ಮ ಕವನ ಗಮನ ಸೆಳೆಯುವಂತಿದೆ. ಅಭಿನಂದನೆಗಳು, ಮನುಶ್ರೀ ಜೋಯಿಸರೇ.
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
In reply to ಉ: ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ by kavinagaraj
ಉ: ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ
ತುಂಬಾ ಒಳ್ಳೆಯ ಕವನ.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.