ಸೂರ್ಯ ಶಿಕಾರಿಯ ಶಿಖರಸೂರ್ಯ

ಸೂರ್ಯ ಶಿಕಾರಿಯ ಶಿಖರಸೂರ್ಯ

ಮೇಲ್ನೋಟಕ್ಕೆ ಕಂಬಾರರ ಎಂದಿನ ಜನಪದ ಶೈಲಿಯ ವಿವರಗಳು, ಕಥಾನಕಗಳು, ಉಪಕಥೆಗಳು, ಹಾಡುಗಳು, ಪುರಾಣಗಳು, ಅದ್ಭುತಗಳು, ಪವಾಡಗಳು ಎಲ್ಲವೂ ಇರುವ ಒಂದು ವಿಶಿಷ್ಟ ಹರಹಿನ, ತಿರುವುಗಳ ಕಥಾನಕ `ಶಿಖರಸೂರ್ಯ'. ಆದರೆ ಇಲ್ಲಿನ ಮಿಥಿಕ್ ಜಗತ್ತಿನ ಮೂಲಕ, ಒಂದು ಅದ್ಭುತರಮ್ಯ ಕಥಾನಕದ ಮೂಲಕ ಕಂಬಾರರು ರಾಜಕಾರಣದ ಭ್ರಷ್ಟಮುಖವನ್ನು, ಔದ್ಯಮೀಕರಣದ ದುಷ್ಟಮುಖವನ್ನು, ಸಾಮಾನ್ಯನ ಮಿತಿಯಿಲ್ಲದ ದುರಾಶೆ ತರುವ ದುರಂತವನ್ನು ಚಿತ್ರಿಸುತ್ತಲೇ ಇಂಥ ಚಿತ್ರಣಕ್ಕೆ ಅವರು ಆಯ್ದುಕೊಳ್ಳುವ ಪಾತ್ರಗಳ ಎದುರು ಅವೇ ಪಾತ್ರಗಳ ಪರ್ಯಾಯ ಸಾಧ್ಯತೆಗಳೋ ಎಂಬಂತೆ ಬೇರೆ ಬೇರೆ ಪಾತ್ರಗಳನ್ನು ಸಂಯೋಜಿಸುತ್ತ, ಒಟ್ಟಾರೆಯಾಗಿ ಬದುಕು ಪಡೆಯಬಹುದಾದ ಹಲವು ಆಯಾಮಗಳನ್ನು ನಮ್ಮೆದುರು ಇಡುತ್ತ ಹೋಗುತ್ತಾರೆ. ಎಲ್ಲಿಯೂ ಆಯ್ಕೆಗಳನ್ನು ಹೇರದ, ಯಾವುದೇ ಪಾತ್ರದ ವ್ಯಕ್ತಿತ್ವಕ್ಕೆ ಸರಳವಾದ ಬಣ್ಣ ಲೇಪಿಸದೆ ನೋಡುತ್ತ, ಹಾಗೆ ನೋಡುವುದನ್ನು ನಮಗೆ ಕಲಿಸುತ್ತ ಸಾಗುತ್ತಾರೆ. ಮುನ್ನುಡಿಯಲ್ಲಿ ಕಂಬಾರರು ಈ ಕಾದಂಬರಿಯ ಕಾಲವನ್ನು ಆಧುನಿಕವಲ್ಲದ ಹಿಂದಿನ ಯಾವುದಾದರೂ ಕಾಲಮಾನದಲ್ಲಿ ನಡೆದದ್ದೆಂದು ಭಾವಿಸಬೇಕು ಎಂದು ವಿಧಿಸುತ್ತಾರೆ. ಕಾದಂಬರಿ ಸುರುವಾಗುವುದೇ `ನಾವು ಕನಕಪುರಿಯ ಇತಿಹಾಸಕಾರರು' ಎಂಬ ಸ್ಪಷ್ಟ ನುಡಿಯಿಂದ. ಹಾಗಾಗಿ ಇದು ನಡೆದು ಹೋದುದರ ವಿವರಣೆ. ಕಾದಂಬರಿಯ ಕಥಾನಕ ಸಂದು ಹೋದ ಕಾಲಕ್ಕೆ ಸೇರಿದ್ದು, ಸದ್ಯದ ಕಾದಂಬರಿ ಅದನ್ನು ನಮಗೆ ನಿರೂಪಿಸುತ್ತಿರುವುದರಿಂದ ಇಲ್ಲಿ ಆ ಕ್ಷಣದ `ಆಗುವಿಕೆ'ಯಿಲ್ಲ. ಈಗಾಗಲೇ ಆಗಿಹೋಗಿರುವುದರ ಮೇಲ್ಮಟ್ಟದ ವಿವರಗಳಿವೆ ಅಷ್ಟೆ. ಈ ಕಾರಣಕ್ಕೇ ನಿರೂಪಣೆಯ ಭಾಷೆಯನ್ನು ನಿರ್ಭಾವುಕ ಹಾಗೂ ನಿರ್ಲಿಪ್ತವಾಗಿಸುವ ಕಡೆ ಕಂಬಾರರು ಗಮನಕೊಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೆ ಹಾವೇರಿ ಬಳಿಯ ನಾಗಾವಿಯಲ್ಲಿ ಪ್ರಚಲಿತವಿರುವ ನಾಗಾರ್ಜುನನ ಕುರಿತ ಕಥೆಯ ಎಳೆಯನ್ನೂ ಕಂಬಾರರು ಉಲ್ಲೇಖಿಸುತ್ತಾರೆ. ಕಾದಂಬರಿಯ ಮೂಲ ಮಿತಿಯೇ ಈ ಆಗಿಹೋದದ್ದರ ನಿರೂಪಣೆಯ ಧಾಟಿ ಎನಿಸುತ್ತದೆ. ಕಾದಂಬರಿ ತೊಡಗುವಾಗಲೇ ಅದರ ನಿರೂಪಕರಿಗೆ ಇತಿಹಾಸವಾಗಿಬಿಟ್ಟಿರುವ ಕಥಾನಕದ ಆದಿ ಅಂತ್ಯಗಳು ಗೊತ್ತು. ಗಮ್ಯ ಅರಿತ ಪಯಣ ಇದಾಗಿರುವುದರಿಂದಲೇ ಇದು ಈಗಾಗಲೇ ಗೊತ್ತಿಲ್ಲದ ಯಾವೊಂದರ ಶೋಧವನ್ನೂ ಕೈಗೊಳ್ಳದ ನೀರಸ ಪಯಣ ಕೂಡ ಆಗಿಬಿಡುತ್ತದೆ. ಕಂಬಾರರಂಥವರ ಕಾದಂಬರಿಯಿಂದ ಹೊಸ ಒಳನೋಟಗಳನ್ನು, ಬದುಕಿನ ಅವಗಣಿತ ಮಗ್ಗುಲುಗಳು ಕಾಣಿಸಬಹುದಾದ ಹೊಸ ಸತ್ಯಗಳ ಶೋಧವನ್ನು ನಿರೀಕ್ಷಿಸಿದ್ದವರಿಗೆ ನಾನೂರ ಹನ್ನೆರಡು ಪುಟಗಳ ಈ ಕಾದಂಬರಿ ಕೊಂಚ ನಿರಾಸೆ ಹುಟ್ಟಿಸಿದರೆ ಅಚ್ಚರಿಯಿಲ್ಲ. ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಇಲ್ಲಿ ಮನುಷ್ಯನ ಅಧಿಕಾರದ, ಚಿನ್ನದ, ಪ್ರತಿಷ್ಠೆಯ, ಕೀರ್ತಿಯ ಹಂಬಲದ ಎಲ್ಲ ದುರಾಶೆಗಳಿಗೆ ಬಹುಮುಖ್ಯ ಸಂವಾದಿಯಾಗಿ ನಿಲ್ಲುವ ಶಿವಪುರದ ಜನ, ಅಲ್ಲಿನ ಶಿವಪಾದ, ಅವನಲ್ಲಿ ಸಿಗುವ ವಿದ್ಯೆ, ಅಲ್ಲಿನ ವಿದ್ಯಾದಾನದ ಕ್ರಮ, ಹೊಸ ಶಿವಪಾದನ ಆಯ್ಕೆಯ ಕ್ರಮ, ಮುಖ್ಯವಾಗಿ ಅಲ್ಲಿನ ಜನರ ಜೀವನದೃಷ್ಟಿ, ಅವರ ಬದುಕಿನ ಆದ್ಯತೆಗಳು, ಸಂಗ್ರಹ ನಿರಪೇಕ್ಷತೆ ಇತ್ಯಾದಿಗಳಾಚೆ ಹಣಿಕಿಕ್ಕುವ ಒಂದು ವಿದ್ಯಮಾನ, ಸನಾತನ ಮೌಲ್ಯಗಳು, ಧರ್ಮ ಮತ್ತು ಧಾರ್ಮಿಕತೆ. ಅದು ಶಿವನ ಕುರಿತಾದ ಭಕ್ತಿಯಾಗಿರಲಿ, ಕಣ್ಣೆದುರು ಬದುಕಿ ಸತ್ತ ಜಟ್ಟಿಗನಿಗೆ ಕಟ್ಟುವ ಗುಡಿಗೆ ನಡೆದುಕೊಳ್ಳುವುದಿರಲಿ, ಇವಕ್ಕೆಲ್ಲ ಸಂಬಂಧಿಸಿದಂತೆ ಇರುವ ಕೆಲವು ನಡಾವಳಿಗಳು, ನಂಬುಗೆಗಳಿರಲಿ ಅವು ಪ್ರತಿನಿಧಿಸುವುದು ಏನನ್ನು ಎಂಬ ಬಗ್ಗೆ ಕೊಂಚ ಸ್ಪಷ್ಟವಾಗಿರುವುದು ಅಗತ್ಯ. ಕಂಬಾರರು ಮಾತೃಸಂಸ್ಕೃತಿ ಮತ್ತು ಪಿತೃಸಂಸ್ಕೃತಿಯ ಬಗ್ಗೆ ಕಾದಂಬರಿಯಲ್ಲಿ ಅನೇಕ ಕಡೆ (ಚಕೋರಿಯಲ್ಲೂ ಸೇರಿದಂತೆ) ವಿವರಿಸುತ್ತಾರೆ. ಆದರೂ ಈ ಕಾದಂಬರಿಯನ್ನು ಅಮೆರಿಕೆಯ ಮತ್ತು ಅದರ ಹಿಂದಿರುವ ಅನೇಕ ಪಾಶ್ಚಾತ್ಯ ರಾಷ್ಟ್ರಗಳ ಅತ್ಯುತ್ಸಾಹದ ಜಾಗತೀಕರಣದ ಹಪಹಪಿಕೆಗಳನ್ನು ಮರೆತು ಓದುವುದು ಹೇಗೆ ಅಸಾಧ್ಯವೋ ಹಾಗೆಯೇ ಭಾರತದ ಧಾರ್ಮಿಕ ಮೂಲಭೂತವಾದಿಗಳು ಹಿಂದೂತ್ವದ ಪರಿಕಲ್ಪನೆಯನ್ನೇ ಹಾಳುಗೆಡವಿಟ್ಟಿದ್ದನ್ನೂ ಮರೆತು ಓದಲಾಗುವುದಿಲ್ಲ. ಇವತ್ತು ಇಲ್ಲಿ ಲಭ್ಯವಿರುವ ಧಾರ್ಮಿಕ ಪರಿಕಲ್ಪನೆಯ ಹಿಂದೂತ್ವದಲ್ಲಿ ಧ್ಯಾನಕ್ಕೆ, ಅಂತರಂಗದ ಚಿಂತನ ಮಂಥನಗಳಿಗೆ, ಆತ್ಮಾನುಸಂಧಾನಕ್ಕೆ, ಆತ್ಮೋದ್ಧಾರಕ್ಕೆ ಯಾವುದೇ ಸ್ಥಾನವಿಲ್ಲ. ಈ ಹೊಸ ಹಿಂದೂತ್ವದ ಪರಿಕಲ್ಪನೆಯಲ್ಲಿ ವೇದ, ಉಪನಿಷತ್ತುಗಳಿಗಾಗಲಿ, ಬ್ರಹ್ಮಸೂತ್ರಗಳಿಗಾಗಲೀ, ಭಾರತೀಯ ದರ್ಶನ ಶಾಸ್ತ್ರಕ್ಕಾಗಲೀ ಯಾವುದೇ ಕೆಲಸವಿಲ್ಲ. ತೋರಿಕೆಯ ಆಚರಣೆಗಳು, ಸಾಂಕೇತಿಕವಾಗಿ ಹಣೆಯ ಮೇಲಿನ ಕುಂಕುಮದ ನಾಮ, ಕೇಸರಿ ಬಣ್ಣದ ಉತ್ತರೀಯ, ಪಂಚೆಗಳೇ ಅದು. ಇಂಥವನ್ನು ಸಮವಸ್ತ್ರದಂತೆ ತೊಟ್ಟವರು ನಡೆಸುವ ಎಲ್ಲ ಕಾರ್ಯಕ್ರಮಗಳು, ಉತ್ಸವಗಳಿಂದ ಹಿಡಿದು ಮುಸ್ಲಿಂ ದಮನದವರೆಗೆ ಎಲ್ಲವೂ ಅದು. ಇದನ್ನೇ ದೇಶಭಕ್ತಿಯನ್ನಾಗಿಯೂ, ರಾಜಕೀಯ ಪಕ್ಷನಿಷ್ಠೆಯನ್ನಾಗಿಯೂ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಸಂದರ್ಭ ಬಂದಾಗ ಅಲ್ಲಿ ಯಾವುದೇ ಪ್ರತಿರೋಧವಿರುವುದಿಲ್ಲ ಎಂಬುದು ಕೂಡ ಈ ಹೊಸ ಹಿಂದೂತ್ವದ ಪರಿಕಲ್ಪನೆಯ ಮತ್ತೊಂದು ಪ್ರಮುಖ ಲಕ್ಷಣವಾಗಿದೆ. ಕಂಬಾರರ ಕಾದಂಬರಿಯಲ್ಲಿ ಆಧುನಿಕ ಅನಿಷ್ಟಗಳ ಪರ್ಯಾಯ ಪ್ರತಿಪಾದನೆಯೆಂಬಂತೆ ಬರುವ ಧಾರ್ಮಿಕತೆ, ಸನಾತನತ್ವವನ್ನು ಸ್ವಲ್ಪ ವಿಮರ್ಶಿಸುವ ಅಗತ್ಯ ಇಂಥ ಸಮಕಾಲೀನ ಪರಿಸ್ಥಿತಿ, ಪರಿಸರದಿಂದಾಗಿಯೇ ಹುಟ್ಟಿದ್ದು, ಅನ್ಯಥಾ ಅಲ್ಲ. ಇದನ್ನು ಜಾನಪದ ಅಥವಾ ಇತಿಹಾಸದ ಕಥಾನಕವನ್ನು ಇಂದು ನಮಗೆ ಹೇಳುತ್ತಿರುವಾಗಲೂ ನಮ್ಮ ಸಮಕಾಲೀನ ಕಾದಂಬರಿಕಾರರಾದ ಕಂಬಾರರು ಅರಿಯದವರಲ್ಲ. ಕಂಬಾರರ ಶಿಖರಸೂರ್ಯನಾಗಲೀ, ಮಹಾರಾಣಿಯಾಗಲೀ ದೇವರಲ್ಲಿ ನಂಬುಗೆಯುಳ್ಳವರಲ್ಲ. ಅವರಿಗೆ ಶಿವಪಾದನಲ್ಲೂ ಪ್ರಾಮಾಣಿಕವಾದ ಗೌರವವಿಲ್ಲ. ಅಮ್ಮನಲ್ಲೂ ನಂಬುಗೆಯಿಲ್ಲ. ದೇವಾಲಯದೊಳಗೆ ಅವರು ಕಾಲಿಡುವುದು ಬದುಕಿನ ಕಟ್ಟಕೊನೆಗೆ ಎನ್ನಬಹುದು. ಅದೂ ನಂಬುಗೆಯಿಂದೇನೂ ಅಲ್ಲ. ಅಷ್ಟರಮಟ್ಟಿಗೆ ಅವರನ್ನು ಕಟ್ಟಾ ಎಡಪಂಥೀಯರೆನ್ನಲು ಅಡ್ಡಿಯಿಲ್ಲ. ಅಲ್ಲದೆ ಇಡೀ ಕಾದಂಬರಿಯ ಯಾವುದೇ ಘಟ್ಟದಲ್ಲಿ ರಾಜಕೀಯ ಲಾಭಕ್ಕಾಗಿಯಾಗಲೀ, ವ್ಯಾಪಾರೀ ಲಾಭಕ್ಕಾಗಿಯಾಗಲೀ, ಗಂಡುಹೆಣ್ಣು ಸಂಬಂಧ ಕುದುರಿಸಿ ಅಂಥವೇ ಲಾಭ ಹೊಡೆಯಲಿಕ್ಕಾಗಿಯೇ ಆಗಲೀ ಧರ್ಮದ ಬಳಕೆಯಾಗುವುದೇ ಇಲ್ಲ. ಒಂದೇ ಒಂದು ಅಪವಾದ ಎಂದರೆ ಶಿಖರಸೂರ್ಯ ಯುವರಾಜನನ್ನು ಮರಳಿ ರಾಜ್ಯಕ್ಕೆ ಕರೆತಂದ ಬಳಿಕ ಬೆಟ್ಟದಯ್ಯನಿಗೆ ನಡೆದುಕೊಂಡಂತೆ ತೋರಿಸಿಕೊಳ್ಳುವ ಪ್ರಸಂಗ. ಇದನ್ನು ಕಾದಂಬರಿಯ ಕಥಾನಕದ ದೇಶ-ಕಾಲ ಪರಿಕಲ್ಪನೆಯ ಸಮಕಾಲೀನ ಪ್ರಜ್ಞೆ ಎನ್ನಬೇಕೆ, ಅವಕ್ಕೆಲ್ಲ ಕಾದಂಬರಿಕಾರರಿಗಿರುವ ನಿಷ್ಠೆ ಎನ್ನಬೇಕೆ ಅಥವಾ ಇಂದಿನ ಸಮಕಾಲೀನ ಸಮಾಜದ ಪ್ರತಿಬಿಂಬವಾಗಲು ಕಾದಂಬರಿಗಿರುವ ಪ್ರಮುಖ ತೊಡಕೆನ್ನಬೇಕೆ? ಆಗಲೂ ಇವತ್ತಿನ ತಾತ್ಕಾಲಿಕವೇ ಇರಬಹುದಾದ ವಿಷಮಸ್ಥಿತಿ ಇಂಥ ಅನುಮಾನಗಳಿಗೆ ಕಾರಣವಾಗಿರುವುದರಿಂದ ಇದನ್ನು ನಿರ್ಲಕ್ಷಿಸುವುದು ಕಾದಂಬರಿಯ ಸುದೀರ್ಘ ಬಾಳ್ವೆಯ ಹಿನ್ನೆಲೆಯಲ್ಲಿ ಮತ್ತು ಸ್ವತಂತ್ರ ಕಲಾಕೃತಿಯನ್ನಾಗಿ ಇದನ್ನು ಕಾಣಬೇಕೆಂಬ ನೆಲೆಯಲ್ಲಿ ಸರಿಯಾದೀತೆ? ಈ ಪ್ರಶ್ನೆಗಳಿರುತ್ತ ಕಂಬಾರರ ಶಿವಪುರ ಪ್ರತಿನಿಧಿಸುವ ಪರ್ಯಾಯ (ಕಾದಂಬರಿ ಇದನ್ನು ಒತ್ತುಕೊಟ್ಟು ಹೇಳುತ್ತದೆ ಎಂದೇನೂ ಅನಿಸದಿದ್ದಾಗ್ಯೂ) ಪ್ರಸ್ತುತ ಜಾಗತೀಕರಣ, ವ್ಯಾಪಾರೀಕರಣ ಮತ್ತು ತಾಂತ್ರಿಕ ಅಭಿವೃದ್ಧಿಯ ಅನಿಷ್ಟಗಳಿಗೆ ಉತ್ತರವಾಗಬಲ್ಲದೇ ಎಂಬುದು ಅನುಮಾನಾಸ್ಪದವಾಗಿಯೇ ಉಳಿಯುತ್ತದೆ ಎನ್ನದೆ ವಿಧಿಯಿಲ್ಲ. ಇದಕ್ಕೆ ಬಹುಮುಖ್ಯ ಕಾರಣ, ಇವತ್ತಿನ ಸಮಕಾಲೀನ ಸವಾಲು ಶಿಖರಸೂರ್ಯ ಪ್ರತಿನಿಧಿಸುವ ಒಂದು ವಿಶಿಷ್ಟ ಲಕ್ಷಣವನ್ನೇ ಹೊಂದಿಲ್ಲದಿರುವುದು. ಶಿಖರಸೂರ್ಯ ಅಷ್ಟರಮಟ್ಟಿಗೆ ಖುಲ್ಲಾಂಖುಲ್ಲಾ ಮನುಷ್ಯ. ಅವನ ದ್ವೇಷ, ಸೇಡು, ಅಧಿಕಾರದ ಹಪಹಪಿಕೆ, ಚಿನ್ನದ, ಸಂಪತ್ತಿನ ಸಂಗ್ರಹದ ದುರಾಶೆ, ಕೀರ್ತಿಯ ಹಂಬಲ ಯಾವುದನ್ನೂ ಅವನು ಮುಚ್ಚಿಡುವುದಿಲ್ಲ. ಅವನನ್ನು ಅರ್ಥಮಾಡಿಕೊಳ್ಳುವುದು ಅವನ ಜೊತೆಯವರಿಗೇ ಕಷ್ಟ ಎನಿಸಿದರೂ ಆ ವ್ಯಕ್ತಿತ್ವದ ಮೂಲಸೆಲೆ ತೀರಾ ಅನೂಹ್ಯವಾಗಿ ಉಳಿಯುವಂಥದ್ದಲ್ಲ ಅನಿಸುತ್ತದೆ. ಅರ್ಥಕೌಶಲ ಮತ್ತು ಮಹಾರಾಣಿ ಅದನ್ನು ಸರಿಯಾಗಿಯೇ (ಸ್ವಲ್ಪ ತಡವಾಗಿಯಾದರೂ) ಊಹಿಸಿದ್ದರು ಅನಿಸುತ್ತದೆ. ಆದರೆ ಇವತ್ತು ನಾವು ಎದುರಿಸುತ್ತಿರುವ ಸಮಕಾಲೀನ ಸವಾಲುಗಳು ಇದಕ್ಕಿಂತ ಹೆಚ್ಚು ನಿಗೂಢವೂ ಗುಪ್ತ ಅಜೆಂಡಾಗಳುಳ್ಳದ್ದೂ ಆಗಿ ಎದುರಾಗುತ್ತಿವೆ. ಹೆಚ್ಚು ಹೆಚ್ಚು ಸ್ಪಷ್ಟವಾಗಿ ಅವು ಶಿವಾಪುರದ ಪರಿಸರ ಪ್ರೀತಿಯ ಮುಖಹೊತ್ತು, ಸನಾತನ ಭಕ್ತಿ ಮತ್ತು ಧರ್ಮದ ಮುಖವಾಡ ಹೊತ್ತು ಎದುರಾಗುತ್ತವೆ. ಸಂಗೀತ, ನೃತ್ಯ, ಕಲೆಯ ಮುಸುಕುಹೊತ್ತು ಎದುರಾಗುತ್ತಿವೆ. ದಿನನಿತ್ಯದ ತಿಂಡಿತೀರ್ಥ, ಬಟ್ಟೆಬರೆಯಿಂದ ಹಿಡಿದು ಸರ್ವವ್ಯಾಪಿಯಾಗಿ ಮನುಷ್ಯನ ದೈನಂದಿನವನ್ನು ಇಂಚುಇಂಚಾಗಿ ನುಂಗುತ್ತಿದೆ. ಶಿಖರಸೂರ್ಯನಂತೆ ಅದು ಸರ್ವಾಧಿಕಾರಿಯ ಎಲ್ಲ ಚಹರೆ ಛಾಯೆ ಹೊತ್ತು ಎದುರಾಗುವುದೇ ಇಲ್ಲ ಇವತ್ತು. ಅದೇನಿದ್ದರೂ ಹಿಟ್ಲರನ ಕಾಲಕ್ಕೆ ಮುಗಿದು ಹೋಯಿತೆನ್ನಿಸುತ್ತದೆ. ಇವತ್ತಿನ ಆಧುನಿಕ ಮೂಲಭೂತವಾದಿಗಳ ರೂಪುರೇಷೆಯಲ್ಲಿ ಹಿಟ್ಲರನ ಕುರುಹೇ ಇಲ್ಲ. ಆದರೆ ಇವರಲ್ಲಿ ಅವನ ಕ್ರೌರ್ಯ ಎಷ್ಟೊಂದು ಸಾಚಾ ಎಂಬಂತೆ ಅಡಗಿಕೊಂಡಿದೆ ಎಂದರೆ ಅದನ್ನು ತಿಳಿದೂ ಅದನ್ನು ವಿರೋಧಿಸಿದರೆ ನೀವು ಬಹುಮತದ ವಿರುದ್ಧ ಮಾತನಾಡಿದ ಕಾರಣಕ್ಕೆ ಸಹಜೀವಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಪ್ರಭುತ್ವದ ಶಿಕ್ಷೆಗೆ ಬಲಿಪಶುವಾಗಬೇಕಾಗುತ್ತದೆ. ಆದರೆ ಕಂಬಾರರ ಕಾದಂಬರಿ ಶಿವಾಪುರ ಮತ್ತು ಶೇಷ ಜಗತ್ತಿನ ನಡುವೆ ಕೆಲವು ನಿರ್ದಿಷ್ಟವೂ ನಿಖರವೂ ಆದ ಗೆರೆಗಳನ್ನು ಎಳೆದು ಬಿಡುವುದರಿಂದ ಈ ಸಂಕೀರ್ಣ ವಸ್ತುಸ್ಥಿತಿಗೆ ಕಾದಂಬರಿ ಮುಖಾಮುಖಿಯಾಗುವುದೇ ಇಲ್ಲ. ಮನುಷ್ಯ ತಿನ್ನುವ ಧಾನ್ಯವನ್ನು ಮತ್ತು ಕೃಷಿಯನ್ನು ಅತ್ಯಂತ ಧ್ವನಿಪೂರ್ಣವಾಗಿ ಸಮೀಕರಿಸುವ ಮೇವು ಎರಡನ್ನೂ ಚಿನ್ನವನ್ನಾಗಿಸುವ ವಿದ್ಯೆ ಮನುಷ್ಯನ ದುರಾಸೆ ಯಾವ ಮಟ್ಟಕ್ಕೆ ತಲುಪಬಹುದೆನ್ನುವುದನ್ನು ಹೇಳಲು ಕಂಬಾರರು ಬಳಸಿಕೊಂಡಿರುವುದು ಗಮನಾರ್ಹವಾಗಿದೆ. ಹಾಗೆಯೇ ತಿರುಮಂತ್ರದ ಪರಿಣಾಮವನ್ನು ಸೂಚ್ಯಗೊಳಿಸಿರುವುದು ಕೂಡ ಅಷ್ಟೇ ಚಾಣಾಕ್ಷ ತಂತ್ರವಾಗಿದೆ. ಆದರೆ ಸಾಕಷ್ಟು ಕಾಲದ ನಂತರವೂ ಚಿನ್ನ ಮತ್ತೆ ಧಾನ್ಯವಾಗಿ ಪರಿವರ್ತಿಸಲ್ಪಟ್ಟಾಗಲೂ ಅದು ಉಪಯೋಗಕ್ಕೆ ಬರುವಂತಿರುವುದು ವಿಪರ್ಯಾಸಕರ ಅನಿಸುತ್ತದೆಯಲ್ಲವೆ? ರಣಹದ್ದಾಗಿ ಅನಿರ್ದಿಷ್ಟ ಕಾಲ ಎತ್ತರದ ಪರ್ವತದ ಮೇಲೆ ಜನಜೀವನದಿಂದ ದೂರದಲ್ಲಿದ್ದು ಶಪಿತ ಬದುಕನ್ನು ಅನುಭವಿಸುವುದರಲ್ಲಿರುವ ಸಾಂಕೇತಿಕತೆ ಕೂಡ ವಸ್ತುಸ್ಥಿತಿಯ ಪರಿಣಾಮಗಳೊಂದಿಗೆ ತುಲನಾತ್ಮಕವಾಗಿಯೇ ಇದೆ. ಮನುಷ್ಯನೊಳಗಿನ ರಣಹದ್ದನ್ನು ಬೇರೆ ಯಾವ ರೀತಿಯಲ್ಲಿ ಪರಿಕಲ್ಪಿಸಿದ್ದರೂ ಅದು ಪರಿಣಾಮಕಾರಿಯಾಗುತ್ತಿರಲಿಲ್ಲ ಅನಿಸುತ್ತದೆ. ಕಂಬಾರರು ಶಿಖರಸೂರ್ಯನ ಪಾತ್ರ ನಿರ್ಮಿತಿ ಮತ್ತು ನಿರ್ವಹಣೆಯಲ್ಲಿ ತೋರಿದ ಸಂಯಮ ಗಮನಾರ್ಹವಾಗಿದೆ. ಎಲ್ಲೂ ಕಂಬಾರರು ಶಿಖರಸೂರ್ಯನನ್ನು ಮಿತಿಮೀರಿ ಬೆಳೆಸುವುದಿಲ್ಲ. ಅವನೊಬ್ಬ ಸಾಮಾನ್ಯ ಮನುಷ್ಯನನ್ನು ಪ್ರತಿನಿಧಿಸಲು ಅವಶ್ಯವಾದ ಸಾತತ್ಯವನ್ನು ಉಳಿಸಿಕೊಂಡೇ ವಜ್ರಕಾಯನಾಗಿ, ಸಸ್ಯಹೃದಯ ಅರಿತ ವೈದ್ಯನಾಗಿ, ಅಸಾಧ್ಯ ಸಾಧಿಸುವ ಛಲ ಉಳ್ಳ ಅದ್ಭುತ ಶಕ್ತಿಯಾಗಿ ಮೂಡಿಬಂದಿರುವುದು ಕಂಬಾರರ ಪ್ರತಿಭೆಯ ಅನನ್ಯ ಸಿದ್ಧಿಯೆನ್ನಬೇಕು. ಅವನು ಕದ್ದು ಸಂಗ್ರಹಿಸಿದ ಹಂಡೆಗಟ್ಟಲೆ ಚಿನ್ನ ಸುಲಭವಾಗಿ ಅರ್ಥಕೌಶಲನ ಕೈವಶವಾದಾಗ ಮಿಡುಕದ ಓದುಗನಿರಲಾರ! ಹಾಗೆಯೇ ಮಗಳಿಗೆ ವಿಷವಿಕ್ಕಿದ ಬಗ್ಗೆ ಕ್ಷಣಕಾಲವಾದರೂ ಮಿಡುಕುವ ಕರುಳು ಅವನಲ್ಲೂ ಇತ್ತೆನ್ನುವುದನ್ನು ಕಾಣಿಸದ ನಿಷ್ಕುರುಣಿಯಾಗುವುದಿಲ್ಲ ಕಂಬಾರರು! ಶಿಖರಸೂರ್ಯನಿಗೊಬ್ಬ ಚಂಡೀದಾಸ, ಮತ್ತೊಬ್ಬ ನಾಗಾರ್ಜುನ, ಅರ್ಥಕೌಶಲನಿಗೊಬ್ಬ ಧನಪಾಲ, ಮತ್ತೊಬ್ಬ ಕುರುಮುನಿ, ಮೋಸದಿಂದ ಕೊಲೆಯಾಗುವ ಕನಕಪುರಿಯ ರಾಜನಿಗೊಬ್ಬ ಬಿಳಿಗಿರಿಯ ರಾಜ, ಮತ್ತೊಬ್ಬ ಆದಿತ್ಯಪ್ರಭ ಹೀಗೆ ಇಲ್ಲಿ ನಮಗೆ ಒಂದು ಸ್ತರದ ಬದುಕಿಗೆ ಹಲವು ಜೀವನದೃಷ್ಟಿಗಳು, ಅದರ ಸಂಭವನೀಯತೆಗಳು ಪರಪ್ರೇಕ್ಷ್ಯ ಒದಗಿಸುವಂತೆ ಒದಗಿಬರುತ್ತವೆ. ಮಹಾರಾಣಿ ಮತ್ತು ಅರ್ಥಕೌಶಲನ ಹಾದರದ ಫಲವಾದ ಆದಿತ್ಯಪ್ರಭನ ಕೈಯಿಂದಲೇ ಹತನಾಗುವ ಅರ್ಥಕೌಶಲ ಒಂದೆಡೆಯಾದರೆ ಪತ್ನಿಯ ಹಾದರಕ್ಕೆ ಘೋರ ಶಿಕ್ಷೆ ನೀಡುವ ಬದೆಗ ರಾಜಕುಮಾರನನ್ನೂ ಇರಿದು, ಅಪಹರಿಸಿ ಸೇಡು ತೀರಿಸಿಕೊಳ್ಳಬಲ್ಲ ಕೆಚ್ಚು ತೋರಿಸುತ್ತಾನೆ. ಆದರೆ ಎಲ್ಲ ಹಳ್ಳಿಗರಂತೆ, ಬುಡಕಟ್ಟಿನವರಂತೆ ಅವಕಾಶವಾದಿ ಶಿಖರಸೂರ್ಯನನ್ನು ನಂಬಿ ನಾಶವಾಗುತ್ತಾನೆ. ಇಂಥ ಉಜ್ವಲ ಪ್ರಸಂಗಗಳು ಕಾದಂಬರಿಯ ಉದ್ದಕ್ಕೂ ನಮಗೆ ಎದುರಾಗುತ್ತವೆ, ಬದುಕಿನ ಸಂಕೀರ್ಣ ಪ್ರಸಂಗಗಳೆದುರು ಮನುಷ್ಯನ ತಕ್ಷಣದ ಪ್ರತಿಕ್ರಿಯೆಯ ವಿಭಿನ್ನ ಮಾದರಿಗಳನ್ನು ನೀಡಿ ಕೆಣಕುತ್ತವೆ. ಹಾಗೆಯೇ ಮಹಾರಾಣಿಗೊಬ್ಬ ಬೆಳ್ಳಿ, ಮತ್ತೊಬ್ಬಳು ಗೌರಿ. ವಿಷಕನ್ಯೆಯಾದ ವಿದ್ದ್ಯುಲ್ಲತೆಗೆ ತನ್ನ ಅಕ್ಕ ಸ್ವರ್ಣಲತೆಯ ಕತೆಯ ಹಿನ್ನೆಲೆಯಿದೆ. ಒಂದೆಡೆ ಅವಳಿಗಾಗಿ ತಾನೇ ವಿಷಪುರುಷನಾಗುವ ಶಿಖರಸೂರ್ಯನ ಪ್ರೀತಿ ಸಿಕ್ಕಿದರೂ ಇನ್ನೊಂದೆಡೆ ಅವಳನ್ನು ಛಾಯಾದೇವಿಯ ಅರ್ಥಹೀನ ಪ್ರತಿಭಟನೆ, ಕ್ಷುದ್ರತೆ ಮಣಿಸುತ್ತದೆ. ಕೊನೆಗೆ ತನ್ನ ಪ್ರಿಯಕರ ಶಿಖರಸೂರ್ಯನ ಮಗ ರವಿಕೀರ್ತಿಯ ಸಾವಿಗೆ ಅವಳ ಸೌಂದರ್ಯವೇ, ಅದರೊಂದಿಗೇ ಇರುವ ವಿಷವೇ ಕಾರಣವಾಗುವುದು ಕೌತುಕಮಯವಾಗಿದೆ. ಅದೇ ರೀತಿ ಅತ್ಯಂತ ಚಾಣಕ್ಷತನದಿಂದ ಬದೆಗನನ್ನು, ಅರ್ಥಕೌಶಲನನ್ನು, ಧನಪಾಲನನ್ನು ಶಿಖರಸೂರ್ಯ ಸಮಯ ಸಂದರ್ಭ ನೋಡಿ ನಿವಾರಿಸಿಕೊಳ್ಳುವ ಭಾಗಗಳು ಕಥಾನಕಕ್ಕೆ ಅದ್ಭುತವಾದ ಓಟ, ನೋಟ ಎರಡನ್ನೂ ಒದಗಿಸಿವೆ. ಚಕೋರಿಯಂತೆ ಇಲ್ಲೂ ಶಿಖರಸೂರ್ಯ ಮಾನವ ಪ್ರೀತಿಗೆ ವಿರೋಧಿ. ಅದಕ್ಕೆ ರವಿಕೀರ್ತಿಯಂಥ, ವಸಂತಿಯಂಥ, ಬದೆಗನಂಥ ಕೊನೆಗೆ ವಿದ್ದ್ಯುಲ್ಲತೆಯಂಥ ಜೀವಗಳು ಬಲಿಯಾಗುತ್ತಲೇ ಹೋಗುತ್ತವೆ. ಎದುರಿಸಿ ನಿಲ್ಲಬಹುದಾದ ಗಟ್ಟಿ ಪಾತ್ರಗಳಿಗಾಗಿ ಮತ್ತೆ ಶಿವಪುರದ ಕಡೆಗೇ ನೋಡಬೇಕು. ಅಲ್ಲಿನ ನಿನ್ನಡಿಯನ್ನು ಬಿಟ್ಟರೆ ಉಳಿಯುವ ಪ್ರಧಾನ ಪಾತ್ರ ಗೌರಿಯೇ. ಅವಳ ಹುಟ್ಟಿನಾರಭ್ಯ ಬೆಳವಣಿಗೆ, ಅವಳಲ್ಲಿ ಬಾಲ್ಯದಲ್ಲೇ ಮೂಡುವ ಶಿವಪಾದನ ಕುರಿತ, ಶಿವಪುರದ ಕುರಿತ ಕುತೂಹಲ, ಅವಳ ಕನಸುಗಳು, ಸರಿಸುಮಾರು ಒಂಭತ್ತು ದಿನಗಳ ಶಿವಪುರದ ಪ್ರಯಾಣ, ಹೊಟ್ಟೆಯೊಳಗೆ ವಿಷವನ್ನೂ ಕೂಸನ್ನೂ ಹೊತ್ತು ಅವಳು ನಡೆಯುತ್ತ ನರಳುತ್ತ ಇರುವಾಗಲೇ ಕೇಳುವ ಅರ್ಥಪೂರ್ಣ ಕತೆಗಳು ಇವೆಲ್ಲವೂ ಅತ್ಯಂತ ಸಂತುಲಿತವಾಗಿ ಮೂಡಿಬಂದಿವೆ. ಇವೆಲ್ಲವೂ ಕಾದಂಬರಿಯನ್ನು ಏಕಮುಖ ಬೆಳವಣಿಗೆಯಿಂದ ವಿಮುಖಗೊಳಿಸಿ ಶ್ರೀಮಂತಗೊಳಿಸಿವೆ ಕೂಡ. ದೊಡ್ಡರೋಗ ಬಂದು ಅಕ್ಷರಶಃ ಬರಿದಾಗುವ ಕನಕಪುರಿಯನ್ನು ತನ್ನ ವೈದ್ಯದಿಂದ, ಸೇವೆಯಿಂದ, ಧಾನ್ಯದಿಂದ ಕಾಯುವ, ಚೊಕ್ಕಗೊಳಿಸುವ ಮತ್ತು ಪೊರೆಯುವ ನಿನ್ನಡಿ ಮತ್ತು ಅವನ ಬಳಗ, ಮಾತೃಸಂಸ್ಕೃತಿಯನ್ನು ಎತ್ತಿಹಿಡಿ, ಎಲ್ಲರನ್ನೂ ಪ್ರೀತಿಸು, ಎಲ್ಲ ದೇಶವೂ ನನ್ನದೇ ಎಂದು ತಿಳಿದು ಕಟ್ಟು, ನನ್ನದಲ್ಲ ಎಂದು ಕನಕಪುರಿಯನ್ನಾದರೂ ಕಟ್ಟದೇ ನಿರ್ಲಕ್ಷ್ಯದಿಂದ ಕಾಣಬೇಡ ಎನ್ನುವ ಶಿವಪುರದ, ಶಿವಪಾದನ ತತ್ವಗಳೆಲ್ಲ ಆಶಯಗಳಾಗಿ, ಆದರ್ಶಗಳಾಗಿ ತಲೆದೂಗುವಂತಿರುವಾಗಲೇ ಅಫ್ಘಾನಿಸ್ಥಾನ, ಇರಾಕ್ ಅಕಾರಣ ವಿಧ್ವಂಸಕ್ಕೊಳಗಾಗಿ ಮರುಭೂಮಿಗಳಾಗುವುದನ್ನು, ಅಂತರಿಕ್ಷದ ತುಂಬ ಒಂದು ದೇಶದ ಮೇಲೆ ಇನ್ನೊಂದು ದೇಶ ಕ್ಷಿಪಣಿಗಳನ್ನು ನೆಲೆಗೊಳಿಸಿ ಅಶಾಂತಿಯಿಂದ ಯುದ್ಧಭೀತಿಯಡಿ ಬಾಳುತ್ತಿರುವುದನ್ನು, ಅರವತ್ತು ಎಪ್ಪತ್ತು ವರ್ಷ ಪ್ರಜ್ಞಾಪೂರ್ವಕ ಬಾಳಬಹುದಾದ ಪುಟ್ಟ ಬದುಕನ್ನು ಅನಗತ್ಯ ಅರ್ಥಹೀನ ದ್ವೇಷ, ಸೇಡು, ವಿನಾಶದ ತುಡಿತಗಳಿಗೆ ಸಿಕ್ಕಿ ಬಲಿಗೊಡುತ್ತಿರುವುದನ್ನು ನಿತ್ಯ ಕಾಣುತ್ತ ಚಡಪಡಿಸುತ್ತಿರುವ ಮನುಷ್ಯನಿಗೆ "ಶಿಖರಸೂರ್ಯ" ತಟ್ಟುವುದೆ?

Rating
No votes yet